ಪುಟಗಳು

ಗುರುವಾರ, ಮಾರ್ಚ್ 31, 2016

ಸತ್ಯಂ ಶಿವಂ ಸುಂದರಂ

ಸತ್ಯಂ ಶಿವಂ ಸುಂದರಂ

          "ಶಂ ಕರೋತಿ ಇತಿ ಶಂಕರಃ"
ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಎನ್ನುವ ಶಬ್ಧ "ವಶ್" ಶಬ್ಧದಿಂದ ವರ್ಣ ವ್ಯತ್ಯಾಸವಾಗಿ ರೂಪುಗೊಂಡಿದೆ. ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷನೂ ಹೌದು(ಮಹಾಕಾಲೇಶ್ವರ). ಗಂಗಾಧರನ ಇನ್ನೊಂದು ಹೆಸರು ಸ್ತೇನಪತಿ. ಸ್ತೇನ ಎಂದರೆ ಕಳ್ಳ. ಹಿಂದೆ ಕಳ್ಳರು ಊರ ಹೊರಗಿನ ಶಿವಾಲಯಗಳಲ್ಲಿ ಅಡಗಿಕೊಳ್ಳುತ್ತಿದ್ದರು. ತಪ್ಪುಕಾಣಿಕೆಯಾಗಿ ನೀಡುತ್ತಿದ್ದರು. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.

         ಹರಿಹರರಲ್ಲಿ ಭೇದವಿಲ್ಲ ಎನ್ನುವುದಕ್ಕೆ ಒಂದು ನಿದರ್ಶನ ಮಧುರೈಯ ಮೀನಾಕ್ಷಿ ಸುಂದರೇಶ ದೇವಾಲಯ. ಅಲ್ಲಿ ವಿಷ್ಣು ತನ್ನ ಸಹೋದರಿ ಶಕ್ತಿಯನ್ನು ಶಿವನಿಗೆ ಧಾರೆಯೆರೆದು ಕೊಡುವ ದೃಶ್ಯ ಸುಮನೋಹರ. ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎಲ್ಲವೂ ಬ್ರಹ್ಮವೇ! ಅನವರತವೂ ಪರಮಾತ್ಮ ಸ್ವರೂಪದಲ್ಲಿರುವವರು ಈ ಮೂವರೇ ಎನ್ನುವುದು ಅಪ್ಪಯ್ಯ ದೀಕ್ಷಿತರ ಉಕ್ತಿ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ. ಅವನು ರಮಣನಾಗಿ ಮೌನದಿಂದಲೇ ಜಗವ ಬೆಳಗಿದ. ಅವನು ಅರುಣಾಚಲ.

"ಆಪಾತಾಳ ನಭಸ್ಥಲಾಂತ ಭುವನ ಬ್ರಹ್ಮಾಂಡ ಮಾವಿಸ್ಫುರತ್ ಜ್ಯೋತಿಃ
ಸ್ಫಾಟಿಕ ಲಿಂಗ ಮೌಳಿ ವಿಲಸತ್ಪೂರ್ಣೇಂದು ವಾನ್ತಾಮೃತೈಃ|
ಅಸ್ತೋಕಾಪ್ಲುತಮೇಕ ಮೀಶಮನಿಶಂ ರುದ್ರಾನುವಾಕಾನ್ ಜಪನ್
ಧ್ಯಾಯೇ ದೀಪ್ಸಿತ ಸಿದ್ಧಯೇ ಧ್ರುವಪದ ವಿಪ್ರೋಭಿಷಿಂಚೇಚ್ಛೀವಂ||"

ವಿಶ್ವದ ಪಾತಾಳದಿಂದ ಆಕಾಶದವರೆಗೂ ಬೆಳಗುತ್ತಿರುವ ಸ್ಫಟಿಕಲಿಂಗಕ್ಕೆ ಅಭಿಷೇಕ ಮಾಡಬೇಕು. ಸ್ಫಟಿಕ ಲಿಂಗಕ್ಕೆ ತನ್ನದೇ ಆದ ಬಣ್ಣವಿಲ್ಲ. ಅದರ ಮೇಲಿಟ್ಟ ಯಾವುದೇ ವಸ್ತುವಿನ ಬಣ್ಣವನ್ನಾದರೂ ಅದು ಪ್ರತಿಫಲಿಸುತ್ತದೆ. ಹಸಿರು ಬಿಲ್ವಪತ್ರೆಯನ್ನು ಅದರ ಮೇಲಿಟ್ಟರೆ ಲಿಂಗವು ಹಸಿರಾಗಿ ಕಾಣುತ್ತದೆ. ಕೆಂಪು ಹೂವನ್ನಿಟ್ಟರೆ ಲಿಂಗವು ಕೆಂಪಾಗಿ ಕಾಣುತ್ತದೆ. ಜ್ಞಾನವು ಪರಿಶುದ್ಧವಾಗಿರುವಂತೆ ಸ್ಫಟಿಕ ಲಿಂಗವೂ ಪರಿಶುದ್ಧವಾಗಿರುತ್ತದೆ. ತನ್ನಷ್ಟಕ್ಕೆ ತಾನೇ ಅದು ಬದಲಾಗುವುದಿಲ್ಲ. ಬ್ರಹ್ಮವು ಅವ್ಯಯವಾದರೂ ಅದು ನಮ್ಮ ಮನೋಧರ್ಮಕ್ಕೆ ಅನುಗುಣವಾಗಿ ತೋರಿಬರುತ್ತದೆನ್ನುವ ಸತ್ಯಕ್ಕೆ ದೃಷ್ಟಾಂತ ಸ್ಫಟಿಕ ಲಿಂಗ! ಅದು ಏನನ್ನೂ ಮುಚ್ಚಿಡುವುದಿಲ್ಲ. ಅದು ಸಂಪೂರ್ಣವಾಗಿ ಪರಿಶುದ್ಧ ಮತ್ತು ದೋಷರಹಿತ. ಪರಬ್ರಹ್ಮದ ನಿರ್ಗುಣಕ್ಕೆ ಅದು ದೃಷ್ಟಾಂತ.

ಶಿವನು ಮೂರ್ತರೂಪದಲ್ಲಿ ಚಂದ್ರಮೌಳಿಯೂ ಹೌದು ಗಂಗಾಧರನೂ ಕೂಡಾ. ಆತ ತನ್ನ ಶಿರಸ್ಸಿನಲ್ಲಿರುವ ಕಮಲದ ಚಂದ್ರಮಂಡಲದಲ್ಲಿನ ಪ್ರಭೆಯ ಮೇಲೆ ಧ್ಯಾನಿಸುತ್ತಾನೆ. ಆ ಚಂದ್ರಬಿಂಬದಿಂದ ಗಂಗೆ ಹರಿದುಬರುತ್ತದೆ. ಆಗ ಆತ ಪರಮಾನಂದವನ್ನು ಹೊಂದುತ್ತಾನೆ. ವಿಶ್ವರೂಪಿಯಾದ ಜ್ಯೋತಿರ್ಲಿಂಗವೇ ತಣ್ಣಗಾದರೆ ವಿಶ್ವವೇ ತಂಪಾಗುತ್ತದೆ. ರುದ್ರಾಭಿಷೇಕ ಮಾಡಲು ಇದೇ ಕಾರಣ. ಒಳ್ಳೆಯದು ಕೆಟ್ಟದ್ದು ಎಲ್ಲವೂ ಶಿವಸ್ವರೂಪವೇ. ಇಡೀ ವಿಶ್ವವೇ ಶಿವಲಿಂಗವಾಗಿದೆ. ಲಿಂಗವು ಅಂಡಾಕಾರವಾಗಿದೆ. ಅದಕ್ಕೆ ಆದಿ-ಅಂತ್ಯಗಳಿಲ್ಲ. ವಿಶ್ವವು "ಆವಿಸ್ಫುರತ್", ಲಿಂಗವೂ! ಶಿವನು ಜ್ಯೋತಿರ್ಲಿಂಗವಾಗಿ ಅನಂತ ಬ್ರಹ್ಮಾಂಡವನ್ನು ವ್ಯಾಪಿಸುವ ರಾತ್ರಿಯೇ ಶಿವರಾತ್ರಿ. ಶಂಭುವು ಜ್ಯೋತಿಸ್ವರೂಪನಾಗಿ ನಿಂತಾಗ ವಿಷ್ಣು ವರಾಹ ರೂಪ ತಾಳಿ ಶಿವನ ಪದತಲದ ದರ್ಶನಕ್ಕೆ ಹೊರಟ. ಬ್ರಹ್ಮ ಹಂಸವಾಗಿ ಹಾರುತ್ತಾ ಶಿವನ ಶಿರ ಅರಸುತ್ತಾ ಹೊರಟ. ಎರಡೂ ಕಾಣಲಿಲ್ಲ. ಆದರೆ ತಿರುಗಿಬಂದ ಹಂಸ ತಾನು ಕಂಡೆನೆಂದು ಸುಳ್ಳು ಹೇಳಿತು. ಹಾಗಾಗಿಯೇ ಬ್ರಹ್ಮನಿಗೆ ಪ್ರತ್ಯೇಕ ಪೂಜೆಯಿಲ್ಲ. ಪರಿವಾರದ ಒಂದು ಭಾಗವಾಗಿ ಮಾತ್ರ ಅವನು ಪೂಜಿಸಲ್ಪಡುತ್ತಾನೆ. ಆದಿ ಅಂತ್ಯವಿಲ್ಲದ ಪರಮೇಶ್ವರನ ಈ ಸ್ವರೂಪವೇ ಶಿವದೇಗುಲಗಳಲ್ಲಿರುವ ಲಿಂಗೋದ್ಭವ ಮೂರ್ತಿ. ಅದರ ಕೆಳಗೆ ವರಾಹ ಮೂರ್ತಿಯೂ ಮೇಲೆ ಹಂಸಮೂರ್ತಿಯೂ ಇರುತ್ತದೆ.

              ಮೂರ್ತಿಶಾಸ್ತ್ರದ ಪ್ರಕಾರ ಮಾನವನಿರ್ಮಿತ ಶಿವಲಿಂಗದ ರುದ್ರಭಾಗದ ಮೇಲೆ ಬ್ರಹ್ಮಸೂತ್ರಗಳೆಂಬ ರೇಖೆಗಳಿರಬೇಕು. ದೈವಿಕ ಮತ್ತು ಆರ್ಷಕ ಲಿಂಗಗಳಲ್ಲಿ ಇಂತಹ ರೇಖೆಗಳಿರುವುದಿಲ್ಲ. ಮೇದಿನಿಕೋಶದಲ್ಲಿ ಲಿಂಗವೆಂದರೆ
"ಲಿಂಗಂ ಚಿಹ್ನೇನುಮಾನೆ ಚ ಸಾಂಖ್ಯೋಕ್ತಪ್ರಕೃತಾಮಪಿ|
ಶಿವಮೂರ್ತಿ ವಿಶೇಷೇ ಚ ಮೆಹನೇಪಿ ನಪುಂಸಕಮ್||" ಎನ್ನಲಾಗಿದೆ

          ಸೌರಾಷ್ಟ್ರದ ಸೋಮನಾಥ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜೈನಿಯ ಮಹಾಕಾಲ, ಮಾಂಧಾತದ ಓಂಕಾರೇಶ್ವರ, ಕೇದಾರನಾಥ, ಭೀಮಾಶಂಕರ, ಕಾಶಿ ವಿಶ್ವನಾಥ, ನಾಸಿಕದ ತ್ರೈಂಬಕೇಶ್ವರ, ವೈದ್ಯನಾಥ, ದಾರುಕಾವನದ ನಾಗೇಶ್ವರ, ರಾಮೇಶ್ವರ, ವೇರುಳದ ಘೃಷ್ಮೇಶ್ವರ ಹೀಗೆ ಹನ್ನೆರಡು ಜ್ಯೋತಿರ್ಲಿಂಗಗಳು. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಹಾಗೂ ಪಂಚ ಮಹಾಭೂತಗಳು ಈ ಹನ್ನೆರಡು ತತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ. ಹಾಗೆಯೇ ಇವು ಶಿವಲಿಂಗದ ಹನ್ನೆರಡು ಖಂಡಗಳನ್ನು, ದ್ವಾದಶಾದಿತ್ಯರನ್ನು, ಸುಪ್ತಾವಸ್ಥೆಯಲ್ಲಿರುವ ಜ್ವಾಲಾಮುಖಿಯ ಉದ್ರೇಕಸ್ಥಾನಗಳನ್ನು, ಬ್ರಹ್ಮ ಅಥವಾ ಆತ್ಮಲಿಂಗವನ್ನು ಸಂಕೇತಿಸುತ್ತವೆ. ಜ್ಯೋತಿರ್ಲಿಂಗಗಳು ದಕ್ಷಿಣಾಭಿಮುಖವಾಗಿರುತ್ತವೆ. ಅಂದರೆ ಪಾಣಿಪೀಠದ ಹರಿನಾಳ ದಕ್ಷಿಣದಿಕ್ಕಿಗಿರುತ್ತದೆ. ಪಾಣಿಪೀಠವನ್ನು ಸುವರ್ಣಶಂಖಿನೀ ಎಂದೂ ಕರೆಯಲಾಗುತ್ತಿತ್ತು. ವೀರ್ಯಾಣು ಮತ್ತು ಸುವರ್ಣ ಕಾಂತಿಮಯ ಅಧಃಶಾಯಿ ಹಾಗೂ ಜನ್ಮಕ್ಕೆ ಬರುವ ನವಜಾತ ಶಿಶುಗಳು ಪಾಣಿಪೀಠದಂತೆಯೇ ಕಾಣಿಸುತ್ತವೆ. ಪಾಣಿ ಪೀಠ ಭಗದ ಪ್ರತೀಕ. ಲಿಂಗದ ಪ್ರತೀಕ ಶಿವಲಿಂಗ. ಶಿವಲಿಂಗದಲ್ಲಿ ಸೃಜನ ಮತ್ತು ಪಾವಿತ್ರ್ಯ ಒಟ್ಟಿಗಿದ್ದರೂ ಜಗದ ಉತ್ಪತ್ತಿ ಶಿವನ ಸಂಕಲ್ಪದಿಂದಾಯಿತು. ಶಿವ ಪಾರ್ವತಿಯರು ಜಗದ ಮಾತಾಪಿತರಾಗಿರುವುದು ಹೀಗೆ. ಪಿಂಡ ರೂಪದಲ್ಲಿರುವ ಶಿವಲಿಂಗ ಇಂಧನ ಶಕ್ತಿಯ ಪ್ರತೀಕ. ಅಣುಸ್ಥಾವರಗಳ ಆಕಾರವೂ ಶಿವಲಿಂಗದಂತಿರುತ್ತದೆ. ನರ್ಮದಾ ನದಿಯಲ್ಲಿ ವಿಶಿಷ್ಟಾಕಾರದ ಬೆಣಚು ಕಲ್ಲುಗಳಿವೆ. ಇವು ಬಾಣಲಿಂಗಗಳು. ಬಾಣಾಸುರ ಪೂಜೆಗಾಗಿ ಇವುಗಳನ್ನು ನಿರ್ಮಿಸಿ ನರ್ಮದಾ ತೀರದ ಬೆಟ್ಟದಲ್ಲಿ ವಿಸರ್ಜನೆ ಮಾಡಿದ್ದ. ಬಾಣಲಿಂಗ ಅಚ್ಛಿದ್ರ ಕಲ್ಲು. ಬೇಗನೆ ಸವೆಯುವುದಿಲ್ಲ, ಭಾರವಾಗಿರುತ್ತವೆ. ಗಂಗೆ ಯಮುನೆಗಳಲ್ಲೂ ಸಿಗುತ್ತವೆ. ಪಾದರಸವನ್ನು ಘನೀಭವಿಸಿ ಶಿವಲಿಂಗವನ್ನು ತಯಾರಿಸಲಾಗುತ್ತದೆ. ಘನೀಕೃತಗೊಳಿಸುವ ಮೊದಲು 16 ರೀತಿಯ ಪ್ರಕ್ರಿಯೆಗಳಿಂದ ಅದನ್ನು ದೋಷರಹಿತವನ್ನಾಗಿಸಲಾಗುತ್ತದೆ. ಪಾದರಸವನ್ನು ಘನೀಭವಿಸುವ 24 ವಿಧಾನಗಳಿವೆ. ಪಾದರಸದ ಶಿವಲಿಂಗದಲ್ಲಿ 12 ಜ್ಯೋತಿರ್ಲಿಂಗಗಳ ಶಕ್ತಿಯಿರುತ್ತದೆ. ಪಾದರಸದಿಂದ ತಯಾರಿಸಿದ ಸೋಮನಾಥನ ಲಿಂಗವು ನೆಲದಿಂದ 5ಮೀ ಎತ್ತರದಲ್ಲಿ ಯಾವುದೇ ಆಧಾರವಿಲ್ಲದೆ ತೇಲಾಡುತ್ತಿತ್ತು. ಶರ್ವ, ಭವ, ರುದ್ರ, ಉಗ್ರ, ಭೀಮ, ಪಶುಪತಿ, ಮಹಾದೇವ, ಈಶಾನ ಇವು ಕ್ರಮವಾಗಿ ಪೃಥ್ವಿ, ಜಲ, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಜೀವಾತ್ಮ ತತ್ವಗಳ ಪ್ರತೀಕಗಳು. ಶಿವಕಾಂಚಿ-ಪೃಥ್ವಿ, ಜಂಬುನಾಥ-ಜಲ, ಅರುಣಾಚಲಮ್-ತೇಜ, ಕಾಳಹಸ್ತಿ-ವಾಯು, ಚಿದಂಬರಮ್-ಆಕಾಶ ಇವು ಪಂಚಮಹಾಭೂತ ಶಿವಲಿಂಗಗಳು.

ದೈತ್ಯರ ಸಂಹಾರ ಮಾಡುವಾಗ ಕಾಳಿ ಬಿರುಗಾಳಿಯಾದಳು. ಅವಳನ್ನು ಶಾಂತಗೈಯ್ಯಲು ಶಿವನು ಶವದಂತೆ ಬಿದ್ದುಕೊಂಡನು. ಶಿವನ ಶವದ ಸ್ಪರ್ಶವಾದೊಡನೆ ಕಾಳಿ ಶಾಂತವಾದಳು. ಶಿವನು ಆದಿಯೋಗಿಯೂ ಹೌದು, ಮಹಾಯೋಗಿಯೂ! ಶಿವನ ಡಮರುವಿನ ನಾದದಿಂದ ಐವತ್ತೆರಡು ಬೀಜಮಂತ್ರಗಳು ನಿರ್ಮಾಣವಾಗಿ ವಿಶ್ವದ ಉತ್ಪತ್ತಿಗೆ ಕಾರಣವಾದವು. ಡಮರುವಿನ ನಾದದಿಂದ 52 ಅಕ್ಷರಗಳ ಮೂಲಧ್ವನಿ ಹಾಗೂ ಹದಿನಾಲ್ಕು ಮಾಹೇಶ್ವರ ಸೂತ್ರಗಳ ರೂಪದಲ್ಲಿ ವರ್ಣಮಾಲೆಯ ನಿರ್ಮಾಣವಾಯಿತು.  ವಿಶ್ವದ ಪ್ರತಿಯೊಂದು ಕಾರ್ಯಕ್ಕೂ ಕಾರಣ ಶಿವನ ತಾಂಡವವೇ! ಅವನು ನಟರಾಜ. ಶಿವತ್ವವೆಂದರೆ ಆತ್ಮತತ್ವ. ಅದೇ ಪರಮಶಿವ. ಅವನು ಎಲ್ಲವನ್ನೂ ವ್ಯಾಪಿಸಿಕೊಂಡಿದ್ದಾನೆ. ವಿಶ್ವವು ಆತನ ಸ್ಫುರಣ. ಜಗತ್ತಿನ ಪ್ರತಿಯೊಂದೂ ಪರಮಶಿವನ ಪ್ರತಿಬಿಂಬ. ಬಿಂಬವಿಲ್ಲದೆ ಪ್ರತಿಬಿಂಬ ಇರುವುದೆಂದರೆ ಹೀಗೆ! ಅದು ಮಾಯೆ. ಅದು ಶಿವನು ಸ್ವೇಚ್ಛೆಯಿಂದ ಧರಿಸಿದ ರೂಪ. ಅಂತೆಯೇ ಅವನು ಜ್ಞಾನಕಾರಕ! ವೈಚಿತ್ರ್ಯವೆಂದರೆ ಇದೇ. ಸೃಷ್ಟಿ-ಲಯ, ಶಾಂತ-ರೌದ್ರ, ಶೀತಲ-ಭಸ್ಮಿಸುವ ತೇಜ, ಸಾತ್ವಿಕತೆ-ತಾಮಸಿಕತೆ ಹಾಗೂ ಮಾಯೆ-ಜ್ಞಾನ ಎಲ್ಲಾ ಪರಸ್ಪರ ವೈರುಧ್ಯಗಳು ಶಿವನಲ್ಲಿವೆ. ಜಗವೇ ಶಿವ ಅಥವಾ ಶಿವನೇ ಬ್ರಹ್ಮ!

"ರುತಂ ರಾತಿ ಇತಿ ರುದ್ರಃ"
ದುಃಖವನ್ನು ನಾಶ ಮಾಡುವವನೇ ರುದ್ರ. ರುತ ಎಂದರೆ ತತ್ಪ್ರತಿಪಾದ್ಯ ಆತ್ಮವಿದ್ಯೆ. ಅದನ್ನು ಉಪಾಸಕರಿಗೆ ಕರುಣಿಸುವವನೇ ರುದ್ರ. ಶೈವಾಗಮದಲ್ಲಿ ಭೈರವನ ಅರವತ್ನಾಲ್ಕು ವಿಧಗಳನ್ನು ಹೆಸರಿಸಲಾಗಿದೆ. ಒಂದು ವರ್ಗಕ್ಕೆ ಎಂಟು ಭೈರವರಂತೆ ಎಂಟು ವರ್ಗಗಳು.
"ಪ್ರಯೋಗ ಮುದ್ಧತಂ ಸ್ಮೃತ್ವಾ ಸ್ವಪ್ರಯುಕ್ತಂ ತತೋ ಹರಃ|
ತಂಡುನಾಂ ಸ್ವಗಣಾಗ್ರಣ್ಯಾ ಭರತಾಯ ನ್ಯದೀದಿಶತ್||
ಲಾಸ್ಯಮಸ್ಯಾಗ್ರತಃ ಪ್ರೀತ್ಯಾ ಪಾರ್ವತ್ಯಾ ಸಮದೀದಿಶತ್|
ಬುದ್ ದ್ವಾಥ ತಾಂಡವಂ ತಂಡೋರ್ಮರ್ತೇಭ್ಯೋ ಮನಯೋವದನ್||" (ಸಂಗೀತ ರತ್ನಾಕರ)
ಶಿವನು ತಾನು ಮಾಡಿದ ನೃತ್ಯವನ್ನು ತನ್ನ ಗಣ ಪ್ರಮುಖ ತಂಡುವಿನ ಮುಖಾಂತರ ಹಾಗೂ ಲಾಸ್ಯ ಎಂಬ ನೃತ್ಯವನ್ನು ಪಾರ್ವತಿಯ ಮುಖಾಂತರ ಭರತಮುನಿಗೆ ಮಾಡಿ ತೋರಿಸಿದ. ತಾಂಡವದಲ್ಲಿ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು?

             ತಾಂಡವದ ಝೇಂಕಾರವೇ ಎಲ್ಲಾ ವಿಶ್ವ ಕ್ರಿಯೆಗಳಿಗೆ ಕಾರಣ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು. ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ. ಶಿವನ ಈ ನೃತ್ಯ ರೂಪಕವು  ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ