ಪುಟಗಳು

ಸೋಮವಾರ, ಮಾರ್ಚ್ 21, 2016

ಪ್ರತ್ಯೇಕತೆಯ ವಿಷ ಬೀಜ… ವಿವಿಗಳಲ್ಲೇ ಅದಕ್ಕೆ ಜಾಗ

ಪ್ರತ್ಯೇಕತೆಯ ವಿಷ ಬೀಜ… ವಿವಿಗಳಲ್ಲೇ ಅದಕ್ಕೆ ಜಾಗ 


                    ಇಲ್ಲಿನ ಅನ್ನ ತಿಂದು ಈ ದೇಶದ ವಿರುದ್ಧವೇ ಮಸಲತ್ತು ಮಾಡುವ ಪರಿಪಾಠ ಇಂದು ನಿನ್ನೆಯದಲ್ಲ. ಎಂದು ಯಾರು ಇಲ್ಲಿಗೆ ಆಕ್ರಮಕರಾಗಿ ಬಂದು ಕೊನೆಗೆ ಇಲ್ಲೇ ನೆಲೆ ಊರಿದರೋ ಅಂದಿನಿಂದಲೇ ಈ ಪ್ರತ್ಯೇಕತಾ ಮನೋಭಾವ ಚಾಲ್ತಿಯಲ್ಲಿದೆ. ಎಲ್ಲವೂ ತಮ್ಮದ್ದು, ತಮಗಾಗಿ ಇರುವಂತಹದ್ದು, ತಾವು ಮಾತ್ರ ಶ್ರೇಷ್ಠ, ಉಳಿದವರೆಲ್ಲರೂ ಕಾಫಿರರು ಎನ್ನುವ ಅವರ ಮನೋಭಾವವೇ ಉಳಿದವರ ಮೇಲೆ ಆಕ್ರಮಣ ಮಾಡಿ ಅವರದ್ದನ್ನು ವಶಪಡಿಸಿಕೊಳ್ಳಲು, ಸಾಧ್ಯವಾಗದಿದ್ದಾಗ ಕುತಂತ್ರದಿಂದ ಇಂಚಿಂಚಾಗಿ ತಮ್ಮದಾಗಿಸಿಕೊಳ್ಳಲು ಕಾರಣ. ಇಂತಹ ಕುತಂತ್ರಕ್ಕೆ ಇಲ್ಲಿರುವ ಕೆಲ ಮಂದಮತಿಗಳು, ವೈಚಾರಿಕ ವ್ಯಭಿಚಾರಿಗಳು, ಮೂರ್ಖರೂ ಬಲಿಯಾಗಿ ದೇಶದ ಭದ್ರತೆಗೆ ಮಾರಕವಾಗಿರುವುದು ದೊಡ್ಡ ದುರಂತ. ಇಂದು ಪ್ರಪಂಚದ ಶಾಂತಿ ಕದಡುತ್ತಿರುವುದು ಜಿಹಾದ್ ಎನ್ನುವ ಮೂರಕ್ಷರದ ಅಫೀಮು. ತಮ್ಮವರದಲ್ಲದವರೆಲ್ಲರೂ ಕಾಫಿರರು, ಅವರನ್ನು ಹೇಗಾದರೂ ಮತಾಂತರಿಸಿ ಇಲ್ಲವೇ ತರಿದು ಹಾಕಿ ಎನ್ನುವ ಈ ನಶೆ ಸಾಮ್ರಾಜ್ಯ ಕಟ್ಟಲೂ ನೆರವಾಯಿತು. ಅದು ಖಡ್ಗವನ್ನು ಮಾತ್ರ ನೆಚ್ಚಿಕೊಂಡಿರಲಿಲ್ಲ. ಖಡ್ಗದ ಬಲದಿಂದ ಕೆಲಸವಾಗದಿದ್ದಾಗ ಉಳಿದ ದಾರಿಗಳ ಬಗ್ಗೆಯೂ ಅದರ ಗಮನ ಹರಿಯಿತು. ತಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಜಗತ್ತನ್ನು "ದಾರ್ ಉಲ್ ಇಸ್ಲಾಂ" ಆಗಿಸುವ ಇವರ ಹುಚ್ಚಿನ ಫಲವಾಗಿ ಜಿಹಾದ್ ಬಹುರೂಪಗಳಲ್ಲಿ ನಡೆಯಿತು. ಲವ್-ರೇಪ್-ಸೆಕ್ಸ್ ಜಿಹಾದ್, ರಾಜಕೀಯ-ಭೂಮಿ-ವ್ಯಾಪಾರಿಕ ಜಿಹಾದ್ ಇವ್ಯಾವುವೂ ನಡೆಯದಿದ್ದಾಗ ವೈಚಾರಿಕ ಜಿಹಾದ್! ಇವಕ್ಕೆ ದೇಶವೆಂದರೆ ಅರ್ಥ ಗೊತ್ತಿಲ್ಲದ, ಅಭಿಮಾನವಿಲ್ಲದ, ಭಾರತವನ್ನು ದೇಶವೆಂದೇ ಪರಿಗಣಿಸದ ಎಡವಟ್ಟು ಚಿಂತಕರ ಬೆಂಬಲ ಬೇರೆ!


                   ಸರ್ ಸೈಯ್ಯದ್ ಮೊಹಮದ್ ಖಾನನಿಂದ ಆಧುನಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ನೀಡುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ "ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ"! ಇದಕ್ಕಾಗಿ ದತ್ತಿ-ದೇಣಿಗೆಗಳನ್ನು ನೀಡಿದ್ದು ಹಿಂದೂ ರಾಜರುಗಳೇ! ಅದಕ್ಕಾಗಿ ಅವರನ್ನು ಪ್ರೇರೇಪಿಸಿದ್ದು ಈ ಮಣ್ಣಿನ ಸಹಜ ಸಹಿಷ್ಣುತೆಯ ಭೋಳೇ ಸ್ವಭಾವ. 1874ರಲ್ಲಿ ಅಲಿಗಢದಲ್ಲಿ ಒಂದು ಶಾಲೆಯಾಗಿ ಆರಂಭಗೊಂಡ ಇದು ನಾಲ್ಕೇ ವರ್ಷಗಳಲ್ಲಿ ಕಾಲೇಜಿನ ಸ್ಥಾನಮಾನ ಪಡೆಯಿತು. "ಹಿಂದೂ ಮುಸ್ಲಿಮರಿಬ್ಬರೂ ನನ್ನೆರಡು ಕಣ್ಣುಗಳಿದ್ದಂತೆ" ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ  ಸೈಯ್ಯದ್ ಮಹಮ್ಮದ್ ಖಾನನ ಕುಟಿಲತೆ ಕೆಲವೇ ಸಮಯದಲ್ಲಿ ಬಯಲಾಯಿತು. ಎಷ್ಟಾದರೂ ತನ್ನ ಮತದ ಮೇಲಿರುವ ನಿಷ್ಠೆಯನ್ನಾತ ಬಿಟ್ಟುಕೊಟ್ಟಾನೆಯೇ? ತಮ್ಮನ್ನು ತಾವು ಇತಿಹಾಸಕಾರರು ಎಂದು ಕರೆದುಕೊಂಡವರಿಂದ ಉದಾರವಾದಿ ಎಂದು ಹೊಗಳಲ್ಪಟ್ಟ ಈ ಖಾನನಿಗೆ 1885ರಲ್ಲಿ ಸ್ಥಾಪಿಸಲ್ಪಟ್ಟ "ಸೆಕ್ಯುಲರ್ ಕಾಂಗ್ರೆಸ್" ಹಿಂದೂ ಸಂಘಟನೆಯಾಗಿ ಕಂಡಿತು. ಆತ ಮುಸ್ಲಿಮರ ಸಂಘಟನೆಗೆ ತೊಡಗಿದ. 1898ರಲ್ಲಿ ಸಾಯುವ ಮೊದಲು ಮುಸ್ಲಿಂ ಲೀಗಿನ ಸ್ಥಾಪನೆಗೆ ಬುನಾದಿ ಹಾಕಿದ್ದನಾತ. ಇದರ ಫಲವೇ 1906ರಲ್ಲಿ ಮುಸ್ಲಿಂ ಲೀಗಿನ ಸ್ಥಾಪನೆ. ಅದಕ್ಕೆ ಬೀಜಾರೋಪವಾದದ್ದು ಈ ಮೊಹಮ್ಮದ್ ಆಂಗ್ಲೋ ಓರಿಯಂಟಲ್ ಕಾಲೇಜಿನಲ್ಲೇ! ಪ್ರತ್ಯೇಕತಾವಾದದ ಮನೋಭಾವದಿಂದಾಗಿಯೇ ಹುಟ್ಟಿದ್ದ ಅದು ಪ್ರತ್ಯೇಕತೆಯನ್ನು ಒಡಲಲ್ಲಿಟ್ಟುಕೊಂಡೇ ಬೆಳೆಯಿತು. ಬ್ರಿಟಿಷರ ಕುಟಿಲ ಕಾರ್ಯಕ್ರಮ "ವಂಗ ಭಂಗ"ವನ್ನು ಬೆಂಬಲಿಸಿತು ಮುಸ್ಲಿಂ ಲೀಗ್. ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿತು. 1920ರಲ್ಲಿ ಇದೇ ವಿವಿ ಅಲಿಗಢ ಮುಸ್ಲಿಂ ವಿವಿಯಾಗಿ ಬದಲಾಯಿತು. ಬ್ರಿಟಿಷರು ಈ ವಿವಿಗೆ ಕಂದಾಯಮುಕ್ತ ಭೂಮಿಯನ್ನು ನೀಡಿದ್ದರು. ಪ್ರತ್ಯೇಕ ಇಸ್ಲಾಂ ರಾಷ್ಟ್ರ ರಚನೆಗೆ ಬಲತಂದುಕೊಟ್ಟಿದ್ದು ಇದೇ ಅಲಿಗಢ ವಿವಿ. ಆಧುನಿಕ ಶಿಕ್ಷಣದ ಮುಖವಾಡ ಹೊತ್ತಿದ್ದ ವಿಶ್ವವಿದ್ಯಾಲಯ ಮೂಲಭೂತವಾದಿಗಳ ಅರಮನೆಯಾಯಿತು. ಇದರಿಂದ ಬೇಸತ್ತ ಕೆಲ ಸೌಮ್ಯ ಹಾಗೂ ಸುಧಾರಣಾವಾದಿ ಮುಸ್ಲಿಮರು ಇದರಿಂದ ಹೊರಬಂದು ಜಾಮಿಯಾ ಮಿಲಿಯಾ ಎಂಬ ವಿವಿಯೊಂದನ್ನು ಹುಟ್ಟುಹಾಕಿದರೆಂದರೆ ಅಲಿಘಢ ವಿವಿಯ ಭಾರತ ವಿರೋಧಿ ಚಟುವಟಿಕೆ ಯಾವ ಪರಿಯದ್ದಿರಬಹುದು? ಪ್ರತ್ಯೇಕತಾವಾದದ ಕನಸುಬಿತ್ತಿದ್ದ ಅಲಿಗಢ ಭಾರತದ ವಿಭಜನೆಗೂ ಕಾರಣವಾಯಿತು. ಸ್ವಾತಂತ್ರ್ಯೋತ್ತರದಲ್ಲಿ ಜಾಮಿಯಾ ಮಿಲಿಯಾವೂ ದೇಶದ್ರೋಹಿಗಳ ಗೂಡಾಗಿರುವುದು ಮುಸ್ಲಿಮರೆಂದಿಗೂ ಬದಲಾಗುವುದಿಲ್ಲ ಎಂದು ಮತ್ತೆ ಮತ್ತೆ ಗೋಚರವಾಗುವ, ಹಾಗೂ ಇದನ್ನು ಕಂಡೂ ನಿದ್ರಿಸುತ್ತಿರುವ ಹಿಂದೂಗಳ ಎದುರಿಗಿರುವ ಘೋರ ಸತ್ಯ!


                 ಮುಸ್ಲಿಂ ಲೀಗ್ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮತಭ್ರಾಂತ ಸಹೋದರರಾದ ಮಹಮ್ಮದ್ ಹಾಗೂ ಶೌಕತ್ ಓದಿದ್ದು ಅಲಿಗಢದಲ್ಲಿಯೇ! 1913ರಲ್ಲಿ ಕಾನ್ಪುರದಲ್ಲಿ ರಸ್ತೆಗಾಗಿ ಮಸೀದಿಯ ಭಾಗವೊಂದನ್ನು ಒಡೆದಾಗ ಇಂಗ್ಲೆಂಡಿಗೇ ಹೋಗಿ ಇದರ ವಿರುದ್ಧ ಹೋರಾಡಿ ಬ್ರಿಟಿಷರೇ ಮತ್ತೆ ಆ ಮಸೀದಿಯನ್ನು ಕಟ್ಟಿಕೊಡುವಂತೆ ಮಾಡಿದ ಮಹಾಮತಾಂಧ ಛಲಗಾರ ಈ ಮಹಮ್ಮದ್ ಅಲಿ! ಅಪಾರ ಶ್ರೀಮಂತ ಮನೆತನದಿಂದ ಬಂದಿದ್ದ ಇವರಿಬ್ಬರೂ ಕೋಲ್ಕತಾದಿಂದ ದೆಹಲಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿ ಮುಸ್ಲಿಂ ವಿಚಾರಧಾರೆಯನ್ನು ಬಿತ್ತುವ ಸಲುವಾಗಿ "ಹಮ್ ದರ್ದ್" ಎನ್ನುವ ಉರ್ದು ಪತ್ರಿಕೆಯನ್ನು ಪ್ರಾರಂಬಿಸಿದರು. 1914ರಲ್ಲಿ ಬಾಲ್ಕನ್-ತುರ್ಕಿ ಯುದ್ಧ ನಡೆದಾಗ ತುರ್ಕಿಯನ್ನು ಬೆಂಬಲಿಸಿ ಲೇಖನಗಳನ್ನೂ ಬರೆದರು. ಶಿಕ್ಷಣ-ರಾಜಕೀಯ-ಅಂತಾರಾಷ್ಟ್ರೀಯ ಸಂಗತಿಗಳೆಲ್ಲದರಲ್ಲೂ ಮುಸ್ಲಿಂ ಹಿತಾಸಕ್ತಿಯನ್ನೇ ಮುಂದುಮಾಡುತ್ತಿದ್ದ ಈ ಸಹೋದರರು ಮೊಹಮ್ಮದನ್ ಆಂಗ್ಲೋ ವಿವಿಗಾಗಿ ಹಣಸಂಗ್ರಹಕ್ಕೆ ತೊಡಗಿದರು. ಹೀಗೆ ಆಂಗ್ಲೋ ವಿವಿ ಅಲಿಗಢವಾಗಿ ಬದಲಾಯಿತು. ಆ ಸಂದರ್ಭದಲ್ಲೇ ಖಲೀಫನ ಅಧಿಕಾರ ನಿರಾತಂಕವಾಗಿ ಮುಂದುವರಿಯಬೇಕೆಂದು ಆಗ್ರಹಿಸಲು ಖಿಲಾಫತ್ ಚಳುವಳಿ ಶುರುವಾಗಿತ್ತು. ಈ ಅಲಿ ಸಹೋದರರು ಅದನ್ನು ಭಾರತದಲ್ಲೂ ಹುಟ್ಟುಹಾಕಿದರು. ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಸ್ವಯಂಘೋಷಿತ ನಾಯಕ ಗಾಂಧಿ ಈ ಖಿಲಾಫತ್ ಚಳುವಳಿಗೆ ಬೆಂಬಲ ನೀಡಿದರು. ಖಿಲಾಫತ್ತಿನ ವ್ಯಸನದಿಂದಾಗಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳು ಭೀಕರ ಅತ್ಯಾಚಾರಕ್ಕೊಳಗಾದರು. ವಿಪರ್ಯಾಸವೆಂದರೆ ಗಾಂಧಿ ಅಂತಹ ವೇಳೆಯಲ್ಲೂ ಖಿಲಾಫತ್ತಿಗಾಗಿ ಹಿಂದೂಗಳಿಂದಲೇ ಧನಸಂಗ್ರಹಕ್ಕೆ ತೊಡಗಿ ಇಂತಹವನಿಂದ ಇಷ್ಟು ದುಡ್ಡು ಬಂತೆಂಬ ಪಟ್ಟಿ ಮಾಡುವುದರಲ್ಲಿ ವ್ಯಸ್ತರಾಗಿ ಹೋಗಿದ್ದರು. ಕೋಪ ಬ್ರಿಟಿಷರ ಮೇಲೆ, ಚಳುವಳಿ ಬ್ರಿಟಿಷರ ವಿರುದ್ಧ, ಬಲಿಯಾದದ್ದು ಹಿಂದೂಗಳು! ಬ್ರಿಟಿಷರು ಖಿಲಾಫತ್ತಿಗೆ ಕವಡೆ ಕಿಮ್ಮತ್ತು ಕೊಡದಿದ್ದರೂ ಅಲಿ ಸಹೋದರ ರಿಗೆ ಈ ಗಾಂಧಿ ಹಾಗೂ ಅವರ ಚೇಲಾಗಳನ್ನು ಹೇಗೆ ತಮ್ಮ ಹಿತಕ್ಕೆ ಸಹಕಾರಿಯಾಗುವಂತೆ ಬಳಸಿಕೊಳ್ಳಬಹುದೆಂಬುದರ ದಾರಿ ಗೋಚರಿಸಿತ್ತು.


                 ಸಯ್ಯದ್ ಅಹಮದ್ ಖಾನ್ ಹಾಗೂ ಮಹಮ್ಮದ್ ಇಕ್ಬಾಲರ ಪ್ರತ್ಯಕ್ಷ ಪರೋಕ್ಷ ಪಾತ್ರದಿಂದ ಮುಸಲ್ಮಾನರಲ್ಲಿದ್ದ ಕೋಮುಪ್ರಜ್ಞೆ ಮತ್ತಷ್ಟು ಹೆಚ್ಚಾಯಿತು. ಅಲಿಗಢ ವಿವಿ ಪ್ರತ್ಯೇಕ ಸ್ವತಂತ್ರ ದೇಶವೊಂದನ್ನು ಪಡೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಮುಸ್ಲಿಮರಲ್ಲಿ ಬಿತ್ತಿತು. ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ&ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ವಿದ್ಯಾರ್ಥಿ ಶಕ್ತಿಯನ್ನು ಭಾರತ ವಿರೋಧಿ ಕಾರ್ಯಕ್ಕೆ ಬಳಸಿಕೊಂಡ ಜಿನ್ನಾ 'ನಮಗೆ ನಮ್ಮದೇ ಆದ ಜೀವನ ವಿಧಾನವಿದೆ. ಭಾರತ ಸ್ವತಂತ್ರವಾದರೆ ಅದು ಹಿಂದು ಸಂಸ್ಕೃತಿಯ ರಾಷ್ಟ್ರವಾಗುತ್ತದೆ. ಎಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ಇರುವರೋ ಅಲ್ಲೆಲ್ಲಾ ಅವರು ಭಾರತದಿಂದ ಪ್ರತ್ಯೇಕವಾಗಬೇಕಿದೆ. ನಿಮ್ಮ ಗುರಿ ಏನಿದ್ದರೂ ಪಾಕಿಸ್ತಾನದ ನಿರ್ಮಾಣ. ಬದುಕುವುದಾದರೂ ಸಾಯುವುದಾದರೂ ಈ ಗುರಿಯ ಈಡೇರಿಕೆಗಾಗಿ ಎನ್ನುವ ಧ್ಯೇಯವಿರಲಿ' ಎನ್ನುತ್ತಾ ಕರಾಳ ದಿನದ ಆಚರಣೆಗೆ ಕರೆ ನೀಡಿದ. 1946ರ ಆಗಸ್ಟ್ 16ರಂದು ನಡೆದ ನೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಸ್ವತಂತ್ರ ಪಾಕಿಸ್ತಾನದ ಬ್ರೈನ್ ವಾಶ್ ಮಾಡಿಸಿಕೊಂಡ ವಿದ್ಯಾರ್ಥಿಗಳೇ. ಅವರು ದೂರದ ವಾಯವ್ಯ ಪ್ರಾಂತ್ಯಗಳಲ್ಲಿ ನಡೆದ ಹಿಂದು-ಸಿಕ್ಖರ ಮಾರಣಹೋಮದಲ್ಲೂ ಭಾಗವಹಿಸಿದ್ದರು. ಇವರಲ್ಲಿ ಅಂದಿನ ಅಲಿಗಢ ವಿವಿಯ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹೀಗೆ ಪಾಕಿಸ್ತಾನ ನಿರ್ಮಾಣ ಚಳವಳಿಯ ಬೌದ್ಧಿಕ ಕೇಂದ್ರವಾಗಿ ಅಲಿಗಢ ವಿವಿ ಕೆಲಸ ಮಾಡಿತು. ಪ್ರತ್ಯೇಕತೆಯ ಭಾವದಿಂದ ಆರಂಭವಾಗಿ ಪ್ರತ್ಯೇಕತೆಯ ವಿಷ ಬೀಜವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತಿ ಬೆಳೆಸುವ ವಿದ್ಯಾಲಯವೊಂದು ಹೇಗೆ ದೇಶ ಒಡೆಯಲು ಕಾರಣವಾಗಬಹುದು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಅಲಿಗಢ ವಿವಿ! ವಿಪರ್ಯಾಸವೆಂದರೆ ದೇಶವಿಭಜನೆಗೆ ಕಾರಣನಾದ ಮಹಮ್ಮದ್ ಇಕ್ಬಾಲ್ ಹೆಸರಲ್ಲಿ ಇಂದಿಗೂ ಪ್ರತಿವರ್ಷ ಉರ್ದು ಕವಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ!


                    ಇವತ್ತು ಭಾರತದಲ್ಲಿ ಎಲ್ಲೇ ಬಾಂಬ್ ಸಿಡಿಯಲಿ, ಅದರ ಕೊಂಡಿ ಒಂದೋ ಅಲಿಗಢಕ್ಕಿರುತ್ತದೆ ಅಥವಾ ಭಟ್ಕಳಕ್ಕೆ ಇದ್ದೇ ಇರುತ್ತದೆ. 80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಕೋಮುಗಲಭೆಗೆ ಕಾರಣವಾದದ್ದು ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ "ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ಸ್ ಆಫ್ ಇಂಡಿಯಾ"(ಸಿಮಿ) ಎಂಬ ದೇಶದ್ರೋಹಿ ಸಂಘಟನೆ. 1977ರಲ್ಲಿ ಮಹಮ್ಮದ್ ಸಿದ್ದಿಕಿಯಿಂದ ಆರಂಭಗೊಂಡ ಇದು ಅಲಿಗಢದ್ದೇ ಪಿಂಡ! ಸಿಮಿಯ ಕಾರ್ಯಕರ್ತರಲ್ಲಿ ಅನೇಕರು ಅಲಿಗಢದ "ವಿದ್ಯೆ" ಪಡೆದವರೇ! ಆದರೆ ರಾಷ್ಟ್ರವಿರೋಧಿ ಕಾರ್ಯದಲ್ಲಿ ತೊಡಗಿದ್ದ ಸಿಮಿಯನ್ನು ನಿಷೇಧಿಸಬೇಕಾದರೆ ಕೇಂದ್ರದಲ್ಲಿ ಭಾಜಪಾ ಸರಕಾರವೇ ಬರಬೇಕಾಯಿತು. ಆದರೇನು? 1956ರಲ್ಲಿ ಜಮಾತೆ ಇಸ್ಲಾಮಿ ಹಿಂದ್ ಎಂಬ ವಿದ್ಯಾರ್ಥಿ ಸಂಘಟನೆ ಬೆಳೆದು ಸಿಮಿಯಾಗಿ ನಲವತ್ತೈದು ವರ್ಷಗಳಲ್ಲಿ ದೇಶದಲ್ಲಿ ಕೋಮುಗಲಭೆ-ಭಯೋತ್ಪಾದನೆಗಳ ಸರಣಿಯನ್ನೇ ಹುಟ್ಟುಹಾಕಿ ದೇಶದ ನಾಲ್ಕೂ ದಿಕ್ಕುಗಳಲ್ಲಿ(ಕಾಶ್ಮೀರ, ಬಂಗಾಳ, ಕೇರಳ, ಮಹಾರಾಷ್ಟ್ರ) ತನ್ನ ನೆಲೆ ಭದ್ರಪಡಿಸಿಕೊಂಡಿತ್ತು. ಮುಂದೆ ಬೇರೆ ಬೇರೆ ಹೆಸರುಗಳಿಂದ ರಕ್ತಬೀಜನಂತೆ ಹುಟ್ಟಿ ದೇಶದಾದ್ಯಂತ ಭಯೋತ್ಪಾದನೆಯನ್ನು ಸೃಷ್ಟಿ ಮಾಡುತ್ತಲೇ ಇದೆ!


                 ಇದೇ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿ 2005ರಲ್ಲಿ ವಿವಿಯಲ್ಲಿ ಅರ್ಹತೆಯನ್ನು ಪರಿಗಣಿಸದೇ ಮುಸ್ಲಿಮರಿಗೆ 50% ಮೀಸಲಾತಿ ಒದಗಿಸಬೇಕೆಂದು ಹಕ್ಕೊತ್ತಾಯ ಮಂಡಿಸಿತು. ಅದಕ್ಕೆ ಆಗಿನ ಕೇಂದ್ರ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಜೈ ಅಂದುಬಿಟ್ಟರು. ವಿಪರ್ಯಾಸವೆಂದರೆ ಅಂತಹ ವಿವಿಯಲ್ಲಿ ವಿದ್ಯಾರ್ಥಿನಿಯರಿಗೆ ಗ್ರಂಥಾಲಯ ಪ್ರವೇಶ ದೊರಕಿಸಿಕೊಡಲು ಉಚ್ಛ ನ್ಯಾಯಾಲಯ ಮಧ್ಯೆ ಬರಬೇಕಾಯಿತು. ವಿದ್ಯಾರ್ಥಿಗಳಲ್ಲಿ ಸದಾ ಪ್ರತ್ಯೇಕತಾವಾದದ ವಿಷ ಬೀಜ ಬಿತ್ತುವ ಈ ವಿವಿಗೆ ಐದು ಆಫ್ ಕ್ಯಾಂಪಸುಗಳನ್ನು ಹಿಂದೆ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಮಂಜೂರು ಮಾಡಿತ್ತು. 75% ಮುಸ್ಲಿಮರೇ ತುಂಬಿರುವ, ಸಿಮಿಯ ಅಡಗುದಾಣ ಮಲಪ್ಪುರಂನಲ್ಲಿನ ಆಫ್ ಕ್ಯಾಂಪಸ್ಸಿಗೆ ಕೇರಳ ಸರಕಾರ 300 ಎಕರೆ ಜಾಗವನ್ನೊದಗಿಸಿದೆ. ಇಷ್ಟಾದ ಮೇಲೂ ಕೇರಳ ಮುಖ್ಯಮಂತ್ರಿ ಈ ವಿವಿಗೆ ನಿಧಿ ಒದಗಿಸಬೇಕೆಂದು ಬೇಡುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರನ್ನು ಸ್ವತಃ ಭೇಟಿಯಾಗಿ ಮುಖಕ್ಕೆ ಉಗಿಸಿಕೊಂಡು ಬಂದಿದ್ದಾರೆ! ಅತ್ತ ಕೇಂದ್ರ ದೇಶದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತಿರುವ ಈ ವಿವಿಯ ಅಲ್ಪಸಂಖ್ಯಾತ ದರ್ಜೆಯನ್ನು ತೆಗೆದುಹಾಕುವ ಕ್ರಮದ ಕುರಿತು ಚಿಂತಿಸುತ್ತಿದೆ. ಆ ಪ್ರಕರಣ ಸರ್ವೋಚ್ಛನ್ಯಾಯಾಲಯದ ಅಂಗಳದಲ್ಲಿದೆ.


                 ಕಳೆದ ಶತಮಾನದ ಆದಿ ಭಾಗದಲ್ಲಿ ಅಲಿಗಢ ವಿವಿಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಮುಂದೆ ಮೂರು ಎಕರೆಗಿಂತಲೂ ಹೆಚ್ಚು ಜಾಗವನ್ನು ದೇಣಿಗೆಯಾಗಿ ನೀಡಿದ್ದ. ಆದರೆ ಕಳೆದ ವರ್ಷ ಆತನ ಜನ್ಮದಿನಾಚರಣೆಯನ್ನು ಆಚರಿಸಲೇ ಈ ವಿದ್ಯಾಲಯ ನಿರಾಕರಿಸಿತು. ತಮ್ಮಲ್ಲೇ ವಿದ್ಯಾಭ್ಯಾಸ ಮಾಡಿದ್ದ, ವಿದ್ಯಾಲಯಕ್ಕೆ ದೇಣಿಗೆ ನೀಡಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ್ದವನ ಜನ್ಮದಿನವನ್ನು ಆಚರಿಸಲು ಯಾವುದೇ ವಿದ್ಯಾಲಯವಾದರೂ ಹೆಮ್ಮೆ ಪಡಬೇಕು. ಅಂತಹ ದೇಶಭಕ್ತನಿಗೆ ಆತ "ಹಿಂದೂ" ಎನ್ನುವ ಒಂದೇ ಕಾರಣಕ್ಕೆ ಅವಮಾನ ಮಾಡುವ ಇಂತಹ ವಿದ್ಯಾಲಯಗಳು ಸಮಾಜಕ್ಕೆ ಎಂತಹ ವಿದ್ಯಾರ್ಥಿಗಳನ್ನು ರೂಪಿಸಿಕೊಡಬಹುದು? ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ತಮ್ಮದೇ ವಿದ್ಯಾಲಯದ ಹಳೇ ವಿದ್ಯಾರ್ಥಿಯ ಜನ್ಮದಿನವನ್ನು ಆಚರಿಸದ ಈ ವಿದ್ಯಾಲಯ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಟ್ಟೀತೇ?


                     ಅಲಿಗಢ ತಾನು ಹುಟ್ಟಿದಂದಿನಿಂದ ಪ್ರತ್ಯೇಕತೆಯ ವಿಷ ಬೀಜವನ್ನು ಬಿತ್ತುತ್ತಲೇ ಇದೆ. ಇದಕ್ಕಾಗಿ ಅಲಿಗಢ ಸೃಷ್ಟಿಸಿದ ಭಯೋತ್ಪಾದನಾ ದಾಳಿಗಳೇನು ಕಡಿಮೆಯೇ? 2008ರ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯ್ಯದನ ಚಿಕ್ಕಪ್ಪ ಓದಿದ್ದು ಈ ವಿವಿಯಲ್ಲೇ. ಮೊದಲೇ ಮತಾಂಧವಾಗಿದ್ದ ಆತನ ಕುಟುಂಬ ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು. ವಿಭಜನೆಯಾದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೂ ಈ ಕುಟುಂಬದ ಭಾರತ ದ್ವೇಷ ಆರಿರಲಿಲ್ಲ. ಅದು ಹಫೀಜ್ ರೂಪದಲ್ಲಿ ಭಾರತದ ಮೇಲೆರಗಿತು. ಹೀಗೆ ಅಖಂಡ ಭಾರತವನ್ನು ತ್ರಿಖಂಡವನ್ನಾಗಿಸಿದ ಖ್ಯಾತಿ ಅಲಿಗಢ ಮುಸ್ಲಿಂ ವಿವಿಯದ್ದು. ಉಗ್ರರನ್ನು ತಯಾರಿಸುವ ಜಾಗ ಎಂಬ ತನ್ನ ಬಿರುದನ್ನು ಅಲಿಗಢ ಮತ್ತೆ ಮತ್ತೆ ಜಗತ್ತಿಗೆ ಪ್ರಚುರಪಡಿಸುತ್ತಲೇ ಇದೆ. ಉಪನ್ಯಾಸಕರ ಮೇಲೆ ಹಲ್ಲೆ, ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಕುಲಪತಿಗಳಿಗೆ ಘೇರಾವ್, ಉಪನ್ಯಾಸಕರ ನಡುವೆ ಘರ್ಷಣೆ, ಹಣದ ದುರುಪಯೋಗ, ಕುಲಪತಿಗಳ ಬದಲಾವಣೆ, ಕೊಲೆ, ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ಇವೆಲ್ಲಾ ಅಲಿಗಢ ವಿವಿಯ ದಿನಚರಿಯ ಭಾಗಗಳು! ಜೆ.ಎನ್.ಯು, ಜಾಧವಪುರ ವಿವಿಗಳು ಇದರ ಕೂಸುಗಳು ಅಷ್ಟೇ!


                   "ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' " ಎನ್ನುವ ಘೋಷಣೆ ಕೇವಲ ಜೆ.ಎನ್.ಯುನಲ್ಲಿ ಮಾತ್ರ ಮೊಳಗಿದ್ದಲ್ಲ. ರಾಷ್ಟ್ರದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಯಾಕುಬ್ ಮೆಮನ್, ಅಫ್ಜಲ್ಗುರು ಮುಂತಾದ ದೇಶದ್ರೋಹಿಗಳನ್ನು ಗಲ್ಲಿಗೇರಿಸಿದ ದಿನದ ವಾರ್ಷಿಕ ಆಚರಣೆ ಮಾಡಿ ಅವರಿಗೆ ಸಂತಾಪ ವ್ಯಕ್ತಪಡಿಸಲಾಗುತ್ತದೆ. 1969ರಲ್ಲಿ ಪ್ರಾರಂಭವಾದ ಜೆ.ಎನ್.ಯುನ ನಿಯಮಾವಳಿ, ನೇಮಕಾತಿಗಳನ್ನು ನಿರ್ಧರಿಸಿದವರು ಕಮ್ಯುನಿಸ್ಟ್ ಚಿಂತಕರು. ಪ್ರಕಾಶ್ ಕಾರಟರದ್ದು ಇದರಲ್ಲಿ ಪ್ರಮುಖ ಪಾತ್ರ. ಹೀಗಾಗಿ ಇಲ್ಲಿ ಎಡವಿಚಾರಧಾರೆಗೆ ಹೆಚ್ಚಿನ ಪ್ರಾಧಾನ್ಯತೆ! ನೆಹರೂ ತನ್ನ ಕಮ್ಯೂನಿಸ್ಟ್ ವಿಚಾರದೆಡೆಗಿನ ಒಲವಿನಿಂದ ಈ ದೇಶದ ಸಂವಿಧಾನವನ್ನೇ ಬದಲಾಯಿಸಿದರೆ ಕಮ್ಯೂನಿಷ್ಟರು ಆಯಕಟ್ಟಿನ ಸ್ಥಾನದಲ್ಲಿ ಕೂತು ದೇಶದ ಸಂಸ್ಕೃತಿಯನ್ನೇ ಹತ್ಯೆಗೈದರು.


                    ಜೆ.ಎನ್.ಯುನಲ್ಲಿ ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಹೀಗೆ ಒಟ್ಟು ಎಲ್ಲಾ ಶುಲ್ಕಗಳು ಸೇರಿ ವರ್ಷಕ್ಕೆ 400 ರೂ. ಕೂಡಾ ದಾಟುವುದಿಲ್ಲ. ಪಿಹೆಚ್ ಡಿ, ಎಂಫಿಲ್ ಮತ್ತು ಪ್ರೀ ಪಿಹೆಚ್ ಡಿ ವಿದ್ಯಾರ್ಥಿಗಳ ಭೋದನಾ ಶುಲ್ಕ ವಾರ್ಷಿಕ 240 ರೂಗಳು, ಅವರ ಕ್ರೀಡಾ ಶುಲ್ಕ 14 ರೂ, ಲಿಟರರಿ ಮತ್ತು ಕಲ್ಚರಲ್ ಶುಲ್ಕ 16 ರೂ. ಎಲ್ಲಾ ಶುಲ್ಕಗಳನ್ನು ಒಟ್ಟು ಸೇರಿಸಿದರೂ ವಾರ್ಷಿಕವಾಗಿ 500 ರೂ. ದಾಟುವುದಿಲ್ಲ. ಅಲ್ಲದೆ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಅಂದರೆ ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈ ಸಬ್ಸಿಡಿ, ಈ ಅನುದಾನ ಎಲ್ಲಾ ನಮ್ಮ ನಿಮ್ಮೆಲ್ಲರ ತೆರಿಗೆ ಹಣ. ಇಷ್ಟೆಲ್ಲವನ್ನೂ ಪಡೆದುಕೊಳ್ಳುವ ಜೆ ಎನ್ ಯು ನ ಕೆಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಿ ನೀಡುತ್ತಿರುವುದು ಲಾಲ್ ಸಲಾಂ ಘೋಷಣೆ, ಇಂಡಿಯಾ ಗೋ ಬ್ಯಾಕ್ ಘೋಷಣೆ, ಭಾರತ ವಿರೋಧಿ ಚಟುವಟಿಕೆ! ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ. ಏಪ್ರಿಲ್, 2000ದಲ್ಲಿ ಇದೇ ವಿವಿ ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್ ಎಂಬ ಇಬ್ಬರು ಪಾಕಿಸ್ತಾನದ ಕವಿಗಳನ್ನು  ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಇಬ್ಬರು ಸೇನಾಧಿಕಾರಿಗಳೂ ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದ ಬಿಸಿ ಆರುತ್ತಿದ್ದ ದಿನಗಳವು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬ ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರಿಬ್ಬರು ಅಲ್ಲಿಂದ ಬಚಾವಾಗಿ ಬಂದರು. ಇಲ್ಲದಿದ್ದರೆ ಭಾರತದಲ್ಲಿರುವ ಪಾಕಿ ಪ್ರಿಯರಿಂದ ಭಾರತದ ರಕ್ಷಣೆ ಮಾಡಿದವರ ಕೊಲೆಯಾಗುತ್ತಿತ್ತು. 2010ರಲ್ಲಿ ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ 300 ಜನ ನಕ್ಸಲರ ತಂಡ ನೆಲಬಾಂಬು ಉಡಾಯಿಸಿ 76 ಪೋಲಿಸರ ಹತ್ಯೆಗೈದಿದ್ದರು. ಆಗ ಇದೇ ವಿವಿಯಲ್ಲಿ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'!


                 ತಮ್ಮ ಕ್ರೌರ್ಯಕ್ಕೆ ಬೌದ್ಧಿಕ ಭದ್ರತೆಯನ್ನು ಒದಗಿಸಿಕೊಳ್ಳುವುದಕ್ಕಾಗಿ ಮಾವೋವಾದಿಗಳು, ಜಿಹಾದಿಗಳು, ಮಿಷನರಿಗಳು ಕಂಡುಕೊಂಡ ದಾರಿಯೇ ಭಾರತದ ಶಿಕ್ಷಣ ಕ್ಷೇತ್ರ. ಸ್ವಾತಂತ್ರ್ಯದ ಕಾಲದಿಂದಲೂ ಈ ದೇಶದ ಶಿಕ್ಷಣ ಎಡಪಂಥಿಯರ ಕೈಯಲ್ಲೇ ಇತ್ತು. ಸ್ವತಃ ನೆಹರೂ ಈ ಪಂಥದ ಆರಾಧಕರಾಗಿದ್ದರಿಂದ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಕ್ಷೇತ್ರಗಳಲ್ಲೆಲ್ಲಾ ಅವರುಗಳೇ ತುಂಬಿಕೊಂಡರು. ಮೆಕಾಲೆ ಪ್ರಣೀತ ಶಿಕ್ಷಣವನ್ನೇ ಮತ್ತೊಮ್ಮೆ ಉರು ಹೊಡಿಸಲು ಇವರು ಸಿದ್ಧರಾಗಿ ನಿಂತರು. ನಾವು ಕಟ್ಟಿದ ತೆರಿಗೆಯಿಂದ ಬೆಳೆದು ನಮ್ಮ ಮೇಲೇ ಎರಗುವ ಗೋಮುಖವ್ಯಾಘ್ರಗಳನ್ನು ಬೆಳೆಸಿದರು. ಜೆ.ಎನ್.ಯು ಬಂದು ಸೇರಿಕೊಂಡ, ಈಗಲೂ ಪ್ರೊಫೆಸರ್ ಎಮೆರಿಟಾ ಗೌರವ ಪಡೆದು ಇಲ್ಲಿಯೇ ತಳವೂರಿರುವ ರೋಮಿಲಾ ಥಾಪರ್ ಎಡಚರ ಪಾಲಿಗೆ ಶ್ರೇಷ್ಠ ಇತಿಹಾಸ ಲೇಖಕಿ. ಆಕೆಯ ಇತಿಹಾಸ ಕೃತಿಗಳಲ್ಲಿರುವುದು ಭಾರತ ವಿರೋಧಿ ಧೋರಣೆ, ಮಾರ್ಕ್ಸ್ ಚಿಂತನೆಯೇ! ಆಕೆಯ ಇತಿಹಾಸ ಪುಸ್ತಕಗಳನ್ನು ಆಧರಿಸಿ ಇವತ್ತಿಗೂ ಪಠ್ಯಪುಸ್ತಕಗಳನ್ನು ರಚಿಸಲಾಗುತ್ತದೆ, ತರಗತಿಗಳಲ್ಲಿ ಬೋಧಿಸಲಾಗುತ್ತದೆ. ಅದರಿಂದಾಗಿಯೇ ಜಗತ್ತೆಲ್ಲಾ ಧಿಕ್ಕರಿಸಿದ ಮೇಲೂ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಭಾರತದಲ್ಲಿ ಮೆರೆದಾಡುತ್ತಿದೆ. ಈಕೆಯಂಥವರು ತುಂಬಿದ ನಂಜನ್ನುಂಡು ಬೆಳೆಯುವ ವಿದ್ಯಾರ್ಥಿಗಳು ವ್ಯವಸ್ಥೆಯ ಭಾಗವಾದಾಗ ವಿಷ ಎಲ್ಲೆಡೆ ಹರಡಿಕೊಳ್ಳುತ್ತದೆ. ಪತ್ರಿಕೆ-ಸಿನಿಮಾ-ಸಾಹಿತ್ಯ-ದೃಶ್ಯ ಮಾಧ್ಯಮಗಳಲ್ಲಿ ಇವರದ್ದೇ ಕಾರುಬಾರು.


                 ದೇಶ ವಿರೋಧಿ ಕೃತ್ಯಗಳನ್ನು ಎಸಗಿದಾಗ ಅದರ ಪರವಾಗಿ ವಾದಿಸಲು ಎಡಪಂಥದ ಚಿಂತಕರ ಪಟಾಲಂ ಸಿದ್ಧವಾಗಿಯೇ ಇರುತ್ತದೆ. ಅವರ ನಾಜೂಕಿನ ಆಂಗ್ಲಭಾಷೆಯ ಮಾತಿನ ಚಾತುರ್ಯವನ್ನು ಅಂತಹುದೇ ಶಿಕ್ಷಣ ಪಡೆದ ನಮ್ಮ ಸಾಮಾನ್ಯ ದೇಶವಾಸಿಗಳು ಕೇಳಿದೊಡನೆ ಮರುಳಾಗಿ ಸತ್ಯವೆಂದೇ ನಂಬಿ ಬಿಡುತ್ತಾರೆ. ವೈಚಾರಿಕ ಮತಾಂತರವೆಂದರೆ ಇದೇ. ಈಗ ಜೆ.ಎನ್.ಯು, ಜಾಧವಪುರಗಳಲ್ಲಿ ಆಗುತ್ತಿರುವುದು ಅದೇ! ಸ್ವತಂತ್ರ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಉಗ್ರ ಅಫ್ಜಲ್ ಕುರಿತು ಸಹಾನುಭೂತಿ ಹಾಗೂ ಅವನ ಭಾರತವಿರೋಧಿ ನಿಲುವನ್ನು ಸಮರ್ಥಿಸುವ ವಿದ್ಯಾರ್ಥಿಗಳು ಈ ವಿವಿಗಳಲ್ಲಿದ್ದಾರೆ. ಹಾಗೆಯೇ ಅವರ ವರ್ತನೆಯನ್ನು ಗಂಭೀರವಾಗಿ ಸ್ವೀಕರಿಸಿ ಅದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದೊಳಗೇ ಇರುವ 'ಬಂಡಾಯ' ಎಂದು ವ್ಯಾಖ್ಯಾನಿಸುವ ಅಧ್ಯಾಪಕರೂ ಅಲ್ಲೇ ಇದ್ದಾರೆ.  ಎಲ್ಲೆಲ್ಲಾ ಮುಸಲ್ಮಾನರು ಜಾಸ್ತಿ ಇದ್ದಾರೋ ಅಲ್ಲೆಲ್ಲಾ ಪಾಕಿಸ್ತಾನಗಳು ಜನ್ಮ ತಳೆಯಬೇಕೆಂಬ ಜಿನ್ನಾ ಕನಸು ಪೂರ್ಣವಾಗಿ ಕೊನೆ ಉಸಿರು ಎಳೆದಿಲ್ಲ ಎನ್ನುವುದಕ್ಕೆ ಹೈದರಾಬಾದ್ ಕೇಂದ್ರೀಯ ವಿವಿ, ಜೆಎನ್ಯು, ಜಾಧವಪುರ ವಿವಿಯೊಳಗೆ ಭಾರತದ ಅಖಂಡತೆ , ಸಾರ್ವಭೌಮತೆಯ ವಿರುದ್ಧ ಬೇಯುತ್ತಿರುವ ಅಡುಗೆಯೇ ಸಾಕ್ಷಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ