ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ
"ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ....."ಶತಶತಮಾನಗಳು ಉರುಳಿದವು. ನಗರಗಳು ಕಾಡುಗಳಾದವು, ಅರಣ್ಯ ಬಟಾ ಬಯಲಾಯಿತು, ಪಟ್ಟಣಗಳೇ ಸ್ಮಶಾನವಾದವು; ನದಿಗಳು ತಮ್ಮ ಪಾತ್ರವನ್ನೇ ಬದಲಿಸಿದವು. ರಾಜವಂಶಗಳು ಅನೇಕ ಅಳಿದವು. ಕಟ್ಟಿದವರು ಅಳಿದರು, ಕೆಡವಿದವರೂ ಅಳಿದರು. ರಕ್ಷಕನೂ ಇತಿಹಾಸದ ಪುಟದಲ್ಲಿ ಸೇರಿ ಹೋದ. ಆಕ್ರಮಿಸಿದವನೂ ಮಣ್ಣಾಗಿ ಹೋದ. ನಾವು ಬೇರೆ ಎಂದವರೂ ಸೇರಬೇಕಾಯ್ತು. ನಮ್ಮನ್ನು ಸೇರಿದಿರಾದರೆ ಪುಣ್ಯ ಎಂದವರಿಗೂ ಇದೇ ಸ್ವರ್ಗವಾಯಿತು. ತಮ್ಮ ಗುಂಪಿಗೆ ಸೇರಿಕೊಳ್ಳ ಬಯಸಿದವರ ಖಡ್ಗವೂ ಮೊನಚು ಕಳೆದುಕೊಂಡಿತು. ವಿಶ್ವದ ಎಲ್ಲೆಡೆಯಿಂದ ಜನ ಇಲ್ಲಿ ಬಂದರು. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ಬಂದದ್ದೆಲ್ಲವೂ ಒಂದೋ ಸೇರಿ ಹೋಯಿತು ಅಥವಾ ಸೋತು ಸುಣ್ಣವಾಯಿತು. ಆದರೆ ಈ ವೇದ ಘೋಷ ಇನ್ನೂ ಅನುದಿನವೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಸೂರ್ಯನ ಅಂತರಂಗದಲ್ಲಿ ನಿರಂತರ ಮೊಳಗುತ್ತಿರುವ ಓಂಕಾರದಂತೆ ಮೊಳಗುತ್ತಲೇ ಇದೆ.
ಎಂತೆಂತಹಾ ನಾಗರಿಕತೆಗಳೆಲ್ಲಾ ಅಳಿದು ಹೋದವು. ಕ್ಷಿಪ್ರವಾಗಿ ಬೆಳೆದು ಜಗತ್ತಿನ ಕಣ್ಣುಕೋರೈಸಿ ತಾರೆಯೆಂದು ಹೊಗಳಿಸಿಕೊಂಡ ಗ್ರೀಕರು ಉಲ್ಕೆಯಂತೆ ಉರಿದು ನಾಶವಾದರು. ಐಗುಪ್ತ, ಚಾಂಡಿಯನ್ನುಗಳೆಲ್ಲಾ ಹೇಳ ಹೆಸರಿಲ್ಲದಂತೆ ಮಾಯವಾದವು. ಆದರೆ ಈ ಪ್ರಾಚೀನ ಸಂಸ್ಕೃತಿ ಅಗಾಧ ಆಕ್ರಮಣ, ನೈಸರ್ಗಿಕ ವೈಪರೀತ್ಯ, ಬದುಕು-ಬವಣೆಗಳ ನಡುವೆಯೂ ನಿತ್ಯನೂತನವಾಗಿ ಸೂರ್ಯನಂತೆ ಬೆಳಗುತ್ತಾ ನಿಂತಿದೆ. ಏನು ಕಾರಣ? ಹಾಗೆ ಬೆಳಗುತ್ತಲೇ ಇರಬೇಕಾದರೆ ಶೃದ್ಧೆ ಇರಬೇಕು. ಆ ಶೃದ್ಧೆಯನ್ನಿರಿಸಬೇಕಾದ ಕೇಂದ್ರವೂ ಬೇಕು. ಅಂತಹಾ ಕೇಂದ್ರ ಯಾವುದಿತ್ತು? ಅದು ಕರ್ಮಕಾಂಡವನ್ನು ಪ್ರಶ್ನಿಸಿ ಎದ್ದಿದ್ದ ಬುದ್ಧನನ್ನು, ಇನ್ನೇನು ಸಂಪೂರ್ಣ ಹಿಂದೂಧರ್ಮವನ್ನೇ ಆಪೋಷಣ ತೆಗೆದುಕೊಳ್ಳುತ್ತೇನೆ ಎಂದು ಹೊರಟಿದ್ದ ಬೌದ್ಧ ಮತವನ್ನೂ ತನ್ನೊಳಗೆ ಅರಗಿಸಿಕೊಂಡುಬಿಟ್ಟಿತು. ಜೈನ, ಅಜೀವಿಕ, ಚಾರ್ವಾಕಗಳೂ ಅದರಲ್ಲಿ ಸೇರಿ ಹೋದವು. ಇಲ್ಲಿನವರ ನಿಷ್ಠೆ ಇಲ್ಲಿನ ಮಣ್ಣಿಗಿದೆ. ಬೆವರು ಹರಿಸಿದ ಈ ಮಣ್ಣಿನಲ್ಲಿ ನಮ್ಮ ಜೀವನ ಬೆರೆತು ಹೋಗಿದೆ. ಹಾಗಾಗಿಯೇ ಇಲ್ಲಿ ಹುಟ್ಟಿ ಬೆಳೆದು ಇಲ್ಲಿಗೇ ನಿಷ್ಠವಾಗಿದ್ದವೆಲ್ಲಾ ಇಲ್ಲೇ ಕಲೆತು ಹೋದವು. ಇನ್ನೇನು ಹಾನಿ ಮಾಡುತ್ತದೋ ಎನ್ನುವಂತಿದ್ದವುಗಳನ್ನು ಸರಿ ದಾರಿಗೆ ತರಲು ಕಾಲಕಾಲಕ್ಕೆ ಮಹಾಪುರುಷರೇ ಅವತರಿಸಿ ಬಂದರು. ಶುಭ ಕರೋತಿ ಇತಿ ಶಂಕರಃ ಎಂಬಂತೆ ಚತುರ್ ದಿಕ್ಕುಗಳಲ್ಲಿ ಪ್ರಹರಿಗಳಂತೆ ಚತುರಾಮ್ನಾಯ ಪೀಠಗಳು ಎದ್ದು ನಿಂತವು. ನಿರಂತರ ಹರಿದು ಬಂದಿರುವ ಆ ಅವಿಚ್ಛಿನ್ನ ಪರಂಪರೆ ದೇಶವನ್ನು ಈ ದೇಶ, ಇದರ ಸಂಸ್ಕೃತಿಯನ್ನು ಮೌನವಾಗಿಯೇ, ಯಾವುದೇ ಪ್ರಚಾರವಿಲ್ಲದೆ ಕಾಪಾಡಿತು.
ಕಾಲಕಾಲಕ್ಕೆ ಸನಾತನ ಧರ್ಮದ ಸ್ವರೂಪ ಬದಲಾಗಿರಬಹುದು. ಆದರೆ ಅದರ ಆತ್ಮ ಬದಲಾಗಲಿಲ್ಲ. ಪ್ರಾಚೀನ ಆದರ್ಶ ಹಾಗೂ ಜೀವನ ದೃಷ್ಟಿಯೂ ಬದಲಾಗಲಿಲ್ಲ. ಅದರ ಸಾಧನಗಳಷ್ಟೇ ಬದಲಾದವು. ಗಾರ್ಹ್ಯಸೂತ್ರದ ಸ್ಥಾನವನ್ನು ಸ್ಮೃತಿಗಳು ತೆಗೆದುಕೊಂಡರೆ, ಯಜ್ಞಯಾಗಾದಿಗಳ ಸ್ಥಾನವನ್ನು ಮಂದಿರಗಳು, ಪೂಜೆ ಅರ್ಚನೆಗಳು ತುಂಬಿದವು. ಈ ಕಾಲಘಟ್ಟದಲ್ಲಿ ಸ್ಥಾಪಿಸಲ್ಪಟ್ಟ ತೀರ್ಥಕ್ಷೇತ್ರಗಳು ಆಸೇತುಹಿಮಾಚಲಾದ್ಯಂತ ಭಾರತವಿಡೀ ನಮ್ಮದೇ, ಇಲ್ಲಿನವರೆಲ್ಲಾ ನನ್ನವರೇ ಎಂಬಾ ಭಾವನೆಯನ್ನು ಮತ್ತೆ ಮೂಡಿಸಿದವು. ದೇಶದ ಕಣಕಣದ ಪವಿತ್ರತೆಯ ಗುಣಗಾನ ಭಾರತ-ಪುರಾಣಗಳಲ್ಲೂ ಮೂಡಿಬಂತು. ಈ ದಾರದ ಎಲ್ಲಾ ಎಳೆಗಳನ್ನು ಪೋಣಿಸಿದ ಆಚಾರ್ಯ ಶಂಕರರು ನಾಲ್ಕು ದಿಕ್ಕುಗಳಲ್ಲಿ ಎಲ್ಲಾ ಸಂಪ್ರದಾಯದವರೂ ಅನುಸರಿಸುವ ತೀರ್ಥಕ್ಷೇತ್ರಗಳಲ್ಲಿ ಕೇಂದ್ರ ಸ್ಥಾನವನ್ನು ಸ್ಥಾಪಿಸಿದರು. ಆ ಶೃದ್ಧಾಕೇಂದ್ರವಾದರೂ ಜನರಿಗೆ ಹತ್ತಿರವಾದದ್ದೇಕೆ? ಜೀವನ ನಶ್ವರವೆಂದು ಅರಿತು ಹೊರಟವನನ್ನು ಅದ್ವೈತ ಆಕರ್ಷಿಸುವುದು ಸರಿ. ಆದರೆ ಜೀವನದ ಜಂಜಾಟದಿಂದ ಹೊರಬರಲಾಗದೆ ಹೊರಳಾಡುವವನು ಮರುಳಾದ ಪರಿ ಎಂತು? ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ. ಜನರ ಶ್ರದ್ಧೆಯನ್ನು ನಾಶಪಡಿಸಲಿಲ್ಲ. ಅದರ ಕೇಂದ್ರವನ್ನಷ್ಟೇ ಬದಲಾಯಿಸಿದರು. ಯಾವ ದೇವರನ್ನು ಪೂಜಿಸಿದರೂ ಅದು ಅನಂತ ಜ್ಞಾನಸ್ವರೂಪಿಯ ಪೂಜೆಯೇ. ಚೇತನ-ಅಚೇತನಗಳಲ್ಲಿ ವ್ಯಾಪಿಸಿರುವುದು ಅದೇ. ಈ ಎಲ್ಲಾ ಉಪಾಸನಾ ವಿಧಾನಗಳ ಹಿಂದಿರುವುದು ಹಿಂದೂ ಹೃದಯದ ಪ್ರೇರಣೆಯೇ! ಎಲ್ಲಾ ಪೂಜಾಪದ್ದತಿಗಳ ಹಿಂದೆ ಪರಮಾತ್ಮನ ಬಗೆಗಿರುವುದು ಒಂದೇ ವಿಧವಾದ ಕೃತಜ್ಞತಾ ಭಾವನೆ. ನಮ್ಮ ಸನಾತನ ವೈದಿಕ ಪರಂಪರೆಯನ್ನು ರಕ್ಷಿಸುವ ಅಭಿಲಾಷೆ ನಮ್ಮ ರಾಷ್ಟ್ರೀಯ ಜೀವನವನ್ನು ಸ್ವಾಧೀನದಲ್ಲಿಟ್ಟುಕೊಂಡು, ಅಭಿವೃದ್ಧಿಯ ಅತ್ಯುನ್ನತ ಸ್ಥಿತಿ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆ ಒಂದೆಡೆ ಸೂರ್ಯೋಪಾಸನೆಯ ರೂಪ ಪಡೆದರೆ ಇನ್ನೊಂದೆಡೆ ಗಣಪತಿಯ ಮೃತ್ತಿಕಾ ಮೂರ್ತಿಯನ್ನು ಪೂಜಿಸಿತು. ದೇಶವನ್ನು ಸುತ್ತುವರಿವಂತೆ ಐವತ್ತೊಂದು ಶಕ್ತಿ ಪೀಠಗಳನ್ನು ನಿರ್ಮಿಸಿದಂತೆಯೇ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಆರ್ಯಾವರ್ತಕ್ಕೆ ಪ್ರದಕ್ಷಿಣೆ ಹಾಕಿತು. ವಾಲ್ಮೀಕಿಯ ಆದಿಕಾವ್ಯ ಆದರ್ಶಪುರುಷನೊಬ್ಬನನ್ನು ದೇವನಾಗಿಸಿದರೆ ಭಾರತ-ಭಾಗವತಗಳ ನೀತಿ ಪ್ರತಿಯೊಂದು ಪೀಳಿಗೆಗೆ ಕೃಷ್ಣನಂತಹ ವ್ಯಕ್ತಿಯ ಅವಶ್ಯಕತೆಯನ್ನು ಸಾರಿ ಹೇಳಿತು. ಒಂದು ಕಡೆ ಯೋಗದ ಭಂಗಿಯೇ ದರ್ಶನವಿತ್ತರೆ ಮಗದೊಂದೆಡೆ ಕ್ರೂರತೆಯನ್ನೇ ಶಿರಚ್ಛೇದಿಸಿದ ಕಾಪಾಲಿಕರನ್ನು ಕೃತಕೃತ್ಯಗೊಳಿಸಿತು. ಸರಸ್ವತಿಯ ಸೇವೆಗೈವ ಶಾಸ್ತ್ರಕೋವಿದರನ್ನು ಸೃಷ್ಟಿಸಿದ ಉಪಾಸನೆಯೇ ಶಸ್ತ್ರ ಹಿಡಿದು ಶತ್ರುಗಳನ್ನು ಸದೆಬಡಿವ ಯೋಧರಿಗೆ ಜನ್ಮಕೊಟ್ಟಿತು. ಈ ಎಲ್ಲಾ ಆರಾಧನೆಯ ಹಿಂದಿರುವುದು ಅದೇ ಸಹಸ್ರಾನನ, ಸಹಸ್ರಾಕ್ಷ, ಸಹಸ್ರಪಾದಗಳಿರುವ ರಾಷ್ಟ್ರಪುರುಷನೇ! ತಮ್ಮದಾದ ಯಾವುದೊಂದನ್ನೂ ತ್ಯಜಿಸದೆ ಶ್ರೇಷ್ಠವಸ್ತುವೊಂದು ಜನರಿಗೆ ಸಿಕ್ಕಂತಾಯ್ತು; ತಮ್ಮ ಆರಾಧನೆಯ ಹಿಂದಿನ ಶ್ರೇಷ್ಠ ತತ್ತ್ವವೊಂದರ ಅರಿವಾಯಿತು. ಜೀವನದ ಅಗಾಧತೆ, ಧ್ಯೇಯದ ಶ್ರೇಷ್ಠತೆಯೊಂದಿಗೆ ಆಚರಣೆ ಹಾಗೂ ದೇಶದ ಗರಿಮೆಯೊಂದಿಗೆ ಅವರ ಸಂಬಂಧವನ್ನು ಬೆಸೆಯಿತು. ಹೀಗಾಗಿಯೇ ತಮ್ಮ ದೇವ-ದೇವಿಯರೇ, ಪೂಜಾಕ್ರಮಗಳೇ ಶ್ರೇಷ್ಠ ಎಂದೇ ಪರಿಗಣಿಸುತ್ತಿದ್ದವರೆಲ್ಲಾ ಶಂಕರರನ್ನು ಭೇಟಿಯಾದ ಮಾತ್ರಕ್ಕೆ ತಮ್ಮ ಸಂಕುಚಿತತೆಯ ಪರಿಧಿಯನ್ನು ಕಿತ್ತೆಸೆದು ಬಿಟ್ಟರು. ವಿರೋಧ ಭಾವನೆಗಳನ್ನು ಹೊತ್ತು ಬಂದವರೆಲ್ಲಾ ಶಂಕರರ ಅನುಯಾಯಿಗಳಾಗಿ ಬದಲಾದರು. ಶಂಕರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸಿದವರೆಲ್ಲಾ ಅವರ ಉದಾತ್ತತೆಯನ್ನು ಕಂಡು ನಾಚಿ ಮರಳಿದರು. ಹೀಗೆ ಶಂಕರರು ಕೆಳಗಿನ ಸೋಪಾನದಲ್ಲೇ ಕೊಳೆಯುತ್ತಿದ್ದ ಇಡೀ ಸಮುದಾಯವನ್ನು ಮೇಲಕ್ಕೆತ್ತಿದರು. ಸಂಕುಚಿತ ಧ್ಯೇಯದೊಂದಿಗೆ ನೀರ ಹೊಂಡದಲ್ಲಿ ಕೊಳೆಯುತ್ತಿದ್ದ ಪ್ರವಾಸಿಗನನ್ನು ವಿಶಾಲ ರಾಷ್ಟ್ರಗಂಗೆಯಲ್ಲಿ ಮಿಂದೇಳುವ ಯಾತ್ರಿಕನನ್ನಾಗಿಸಿದರು! ದೇವ-ದೇವಿಯರೆಂಬ ಚಿಕ್ಕಪಾತ್ರೆಗಳಲ್ಲಿ ತುಂಬಲಾಗದೆ ಉಕ್ಕಿ ಇತರರ ಬಗ್ಗೆ ಟೀಕೆಯಲ್ಲೇ ಕಾಲವ್ಯರ್ಥ ಮಾಡುತ್ತಿದ್ದ ಹಿಂದೂ ಹೃದಯದ ಅಗಾಧ ಶ್ರದ್ಧೆ ವಿಶಾಲವಾದ ಏಕತ್ವದ ಅದ್ವೈತ ಸಾಗರದಲ್ಲಿ ಸ್ಥಾನ ಪಡೆಯಿತು.
ಹೌದು. ಇವತ್ತಿಗೂ ಭಾರತವನ್ನು ಏಕಸೂತ್ರದಲ್ಲಿ ಬೆಸೆದಿರುವುದು ಇಂತಹ ಶೃದ್ಧಾ ಕೇಂದ್ರಗಳೇ. ಹಿಮಾಲಯದ ಗಿರಿಶಿಖರದಲ್ಲಿ ಮೊಳಗುವ ವೇದ ಘೋಷವೇ ರಾಮೇಶ್ವರದ ದೇಗುಲದೊಳಗೂ ಮೊಳಗುತ್ತದೆ. ಅಲ್ಲಿನ ಶಿವಲಿಂಗಕ್ಕೂ ಇಲ್ಲಿನದಕ್ಕೂ ಒಂದೇ ತೆರನಾದ ಅಭಿಷೇಕ! ಇಲ್ಲಿನ ಕಲೆ ಶಿಲ್ಪಗಳಲ್ಲೂ ಏಕಾತ್ಮತೆಯ ಸೂತ್ರವಿದೆ. ಆಸೇತು ಹಿಮಾಚಲದವರೆಗೂ ಎಲ್ಲಾ ದೇವರ ಮೂರ್ತಿಗಳೂ ಒಂದೇ ಸಂಸ್ಥೆಯಿಂದ ಮಾಡಿದ ರೀತಿ ಪಡಿಮೂಡಿವೆ. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ! ನಾಲ್ದೆಸೆಗಳಲ್ಲಿರುವ ಶಂಕರಪೀಠಗಳು ದೇಶದ ನಾಲ್ಕೂ ಮೂಲೆಗಳಿಗೆ ಕರೆದೊಯ್ದರೆ, ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿದ್ದಾನೆ. ಹಿಂಗುಲಾತದಿಂದ ಕಾಮಾಕ್ಷಿಯವರೆಗೆ, ಜ್ವಾಲಾಮುಖಿಯಿಂದ ಕುಮಾರಿ ಕ್ಷೇತ್ರದವರೆಗೆ ಹರಡಿರುವ 51 ಶಕ್ತಿಪೀಠಗಳು, ದ್ವಾದಶ ಗಾಣಪತ್ಯ ಕ್ಷೇತ್ರಗಳು, ಅಸಂಖ್ಯ ವೈಷ್ಣವ ಕ್ಷೇತ್ರಗಳು ರಾಷ್ಟ್ರಶಕ್ತಿಯನ್ನು ಉದ್ದೀಪಿಸುತ್ತಾ ನಿಂತಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ದೇಶೀಯರನ್ನು ಬೆಸೆದು ಇಟ್ಟಿರುವುದು ಇಂತಹಾ ಶೃದ್ಧಾ ಕೇಂದ್ರಗಳೇ ಹೊರತು ಯಾವ ರಾಜಕೀಯ ಆಟಾಟೋಪವೂ ಅಲ್ಲ, ಸೆಕ್ಯುಲರ್ ಬುದ್ಧಿಯೂ ಅಲ್ಲ. ಉದಾಹರಣೆಗೆ ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ. ಕೋಟ್ಯಾಂತರ ಜನ ಅಲ್ಲಿ ಸೇರುತ್ತಾರೆ. ಯಾವ ರಾಜಕೀಯ ಪಕ್ಷವೂ ಅವರನ್ನು ಹಣ ಕೊಟ್ಟು ಕರೆತರುವುದಿಲ್ಲ. ಯಾವ ರಾಜಕೀಯ ಪಕ್ಷದ ರ್ಯಾಲಿಗೂ ಅವರು ಹೋಗುವುದಲ್ಲ. ಯಾವ ಸಿನಿಮಾ ನಟನನ್ನು ನೋಡಲೂ ಅವರು ಹೋಗುವುದಲ್ಲ. ಅದೊಂದು ರೀತಿ ಅರಿವಿನ ಕರೆ. ಅದೊಂದು ರೀತಿ ರಾಷ್ಟ್ರೀಯ ಸಮ್ಮೇಳನವೇ ಸರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ