ಪುಟಗಳು

ಭಾನುವಾರ, ಜನವರಿ 15, 2023

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ 


         ಆಗಷ್ಟೇ ನಾನು ಪ್ರೌಢಶಾಲೆಯಿಂದ ಹೊರಬಂದಿದ್ದೆ. ಪರೀಕ್ಷೆಗಳೂ ಮುಗಿದಿದ್ದವು. ರೈಲ್ವೇ ಪ್ಯಾಕೇಜ್ ಟಿಕೇಟಿನಲ್ಲಿ ದಕ್ಷಿಣ ಭಾರತವನ್ನು ಸುತ್ತುತ್ತಿದ್ದೆ. ಒಂದು ದಿನ ರೈಲು ಹಳ್ಳಿಯೊಂದರ ಹತ್ತಿರ ಇನ್ನೇನು ನಿಲ್ಲುತ್ತದೆ ಎನ್ನುವ ವೇಗದಲ್ಲಿ ಚಲಿಸುತ್ತಿದ್ದಾಗ ನಾನಿದ್ದ ಬೋಗಿಯ ಹೆಚ್ಚಿನ ಜನರು ಅತೀವ ಭಕ್ತಿ ಭಾವಗಳಿಂದ ರೈಲಿನ ಕಿಟಕಿಯ ಹೊರಗೆ ಮುಖ ಮಾಡಿ ತಲೆಬಾಗಿ ನಮಸ್ಕರಿಸತೊಡಗಿದರು. ಅಲ್ಲೊಂದು ಭವ್ಯವಾದ ಆಲಯವಿತ್ತು. ಜನರ ನಡುವಿನ ಸಂಭಾಷಣೆಯಿಂದ ಅದು ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಾಲಯವೆಂದು ತಿಳಿಯಿತು. 

         ಅಲ್ಲಿಂದ ಮುಂದೆ ನನ್ನ ಸಹಪ್ರಯಾಣಿಕರ ಮಾತು ರಮಣ ಮಹರ್ಷಿಗಳತ್ತ ತಿರುಗಿತು. "ಮಹರ್ಷಿ" ಎನ್ನುವ ಪದ ನನ್ನ ಮನಸ್ಸನ್ನು ಹಿಡಿದಿಟ್ಟು ಪ್ರಾಚೀನ ಕಾಲದಲ್ಲಿ ಅರಣ್ಯವಾಸಿಗಳಾಗಿ ತಪೋನಿರತರಾಗಿ ಅನೇಕ ಅಲೌಕಿಕ ಸಾಧನೆಗೈದ ದೈವೀಸ್ವರೂಪೀ ಋಷಿ ಮುನಿಗಳನ್ನು ನೆನಪಿಸಿತು. ಅಲ್ಲದೇ ಮನಸ್ಸಿನ ಆ ಚಿಂತನಾ ಲಹರಿಯು ಆ ಸಮಯದಲ್ಲಿ ನಾಸ್ತಿಕನಾಗಿದ್ದರೂ ನನ್ನನ್ನು ಮಹರ್ಷಿಗಳ ಆಶ್ರಮದತ್ತ ಎಳೆದೊಯ್ಯಿತು. 
    
         ಆಶ್ರಮ ತಲುಪಿದಾಗ ಮಹರ್ಷಿಗಳು ಚಾವಡಿಯಲ್ಲಿರುವರೆಂದೂ ಯಾರು ಬೇಕಾದರೂ ಅವರನ್ನು ಭೇಟಿಯಾಗಲು ಮುಕ್ತರು ಎನ್ನುವ ಮಾಹಿತಿ ಸಿಕ್ಕಿತು. ನಾನು ಒಳಹೊಕ್ಕುತ್ತಿದ್ದಂತೆ ಕಂಡಿದ್ದು ಸೊಂಟಕ್ಕೊಂದು ವಸ್ತ್ರ ಸುತ್ತಿಕೊಂಡು ದಿಂಬಿಗೆ ಒರಗಿ ಕೂತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು. ನಾನು ಅಲ್ಲೇ ಮಂಚದ ಕೆಳಗೆ ಅವರ ಸನಿಹಕ್ಕೆ ಕೂತೆ. ಮಹರ್ಷಿಗಳು ತಕ್ಷಣ ಕಣ್ಣು ತೆರೆದು ನನ್ನ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದರು. ನಾನು ಅವರ ಕಣ್ಣುಗಳನ್ನು ದಿಟ್ಟಿಸಿದೆ. ಮಹರ್ಷಿಗಳು ಆ ಕ್ಷಣದಲ್ಲಿ ನನ್ನ "ಒಳಗಿನ" ಎಲ್ಲವನ್ನೂ :- ನನ್ನ ಗಾಢವಿಲ್ಲದ ಚಿಂತನೆಗಳು, ಗೊಂದಲಗಳು, ಅಪನಂಬಿಕೆಗಳು, ಅಪೂರ್ಣತೆ ಹಾಗೂ ಭಯ ಎಲ್ಲವನ್ನೂ ಬಗೆದು ನೋಡಿದರೆಂಬ ಭಾವನೆ ನನಗುಂಟಾಯಿತು. ಆ ಕ್ಷಣದಲ್ಲಿ ನನಗೆ ಏನಾಯಿತು ಎನ್ನುವುದನ್ನು ವರ್ಣಿಸಲು ನಾನು ಅಸಮರ್ಥ. ನಾನು ತೆರೆದಿಟ್ಟಂತೆ, ಪವಿತ್ರಗೊಂಡಂತೆ, ಸ್ವಸ್ಥನಾದಂತೆ, ಖಾಲಿಯಾದಂತೆ ನನಗನಿಸಿತು. ಸುಂಟರಗಾಳಿಯಂತಹಾ ಸಂದೇಹಗಳು, ನನ್ನ ನಾಸ್ತಿಕತೆ ಕರಗಿ ಹೋದಂತೆ, ನನ್ನ ಸಂದೇಹವಾದವು ಪ್ರಶ್ನೆಗಳು, ಅಚ್ಚರಿ ಹಾಗೂ ಹುಡುಕಾಟದ ಪ್ರವಾಹವಾಗಿ ಬದಲಾಯಿತು. ನನ್ನದೇ ಕಾರಣಗಳು ನನಗೆ ಧೈರ್ಯವನ್ನು ಕೊಟ್ಟವು ಹಾಗೂ ನಾನು ನನಗೇ ಹೇಳಿಕೊಂಡೆ - "ಇವೆಲ್ಲವೂ ಆಕರ್ಷಣೆ ಹಾಗೂ ನನ್ನದೇ ಮೂರ್ಖತನ". ಹೀಗೆ ಹೇಳುತ್ತಾ ನಾನು ಅಲ್ಲಿಂದ ಎದ್ದು ಹೊರಟೆ. 

         ಆದರೆ ಹೀಗೆ ಮಹರ್ಷಿಗಳಿದ್ದ ಚಾವಡಿಯಿಂದ ಎದ್ದು ಹೋದ ಹುಡುಗ ಹತ್ತು ನಿಮಿಷದ ಹಿಂದೆ ಚಾವಡಿಗೆ ಪ್ರವೇಶವಾಗುವ ತನಕ ಇದ್ದ ಹುಡುಗಂತಿರಲಿಲ್ಲ. ನನ್ನ ಕಾಲೇಜು ದಿನಗಳ ಬಳಿಕ, ನನ್ನ ರಾಜಕಾರಣದ ಕೆಲಸಗಳ ಬಳಿಕ ಹಾಗೂ ಉತ್ತರಕಾಶಿಯಲ್ಲಿ ನನ್ನ ಗುರುಗಳ ಪಾದದಡಿಯಲ್ಲಿ ತಪೋವನದಲ್ಲಿ ಹಲವು ವರ್ಷಗಳು ಕಳೆದ ಬಳಿಕ ನನಗೆ ಅರಿವಾದದ್ದೇನೆಂದರೆ ಗಂಗೆಯ ತಟದಲ್ಲಿ ನಾನು ಗಳಿಸಿದ್ದು ಹಲವು ವರ್ಷಗಳ ಹಿಂದೆ ನನಗೆ ಆ ಬಿರುಬೇಸಗೆಯ ದಿನದಂದು ತಿರುವಣ್ಣಾಮಲೈಯ ಆ ಮುನಿಪೋತ್ತಮ ಕರುಣಿಸಿದ್ದೇ ಆಗಿತ್ತು ಎಂಬುದು. ಶ್ರೀರಮಣರು ತರ್ಕದ ವಿಚಾರವಲ್ಲ; ಅವರೊಂದು ಅನುಭವ; ಅವರೊಂದು ಮೇರು ಪ್ರಜ್ಞೆ. ಅವರು ಆತ್ಯಂತಿಕ ಸತ್ಯ ಮತ್ತು ಜಗತ್ತಿನ ಎಲ್ಲಾ ಆಧ್ಯಾತ್ಮಿಕ ಗ್ರಂಥಗಳ ಸಾರ. ಭವಬಂಧನವನ್ನು ಪರಿಪೂರ್ಣವಾಗಿ ಕಳಕೊಂಡ ಓರ್ವ ಗುರು ಹೇಗಿರುತ್ತಾನೆ ಎಂಬುದರ ಪ್ರತ್ಯಕ್ಷ ದ್ಯೋತಕ ಅವರು. ಬಂಧನಗಳನ್ನು ಕಳೆದುಕೊಂಡ ಸ್ಥಿತಿಯಲ್ಲೂ ಅವರು ಜೀವಿಸಿದ್ದು ಅನಂತದ ಸೌಂದರ್ಯ ಮತ್ತು ಪಾವಿತ್ರ್ಯತೆಯಂತೆ. - ಇದು ಚಿನ್ಮಯ ಮಿಷನ್ನಿನ ಅಧ್ವರ್ಯು ಸ್ವಾಮಿ ಚಿನ್ಮಯಾನಂದರು ವರ್ಣಿಸಿದ ಅವರ ಅನುಭವ. 

         ಈ ಅನುಭವ ಇಂದು ನಿನ್ನೆಯದಲ್ಲ; ಚಿನ್ಮಯಾನಂದರದ್ದು ಮಾತ್ರವಲ್ಲ. ಸನಕ ಸನಂದಾದಿಗಳು ದಕ್ಷಿಣಾಮೂರ್ತಿಯ ಪದಕಮಲದಡಿಯಲ್ಲಿ ಪಡೆದುದು ಇದೇ ಅನುಭವ. ಯುಗಯುಗಗಳ ಬ್ರಹ್ಮರ್ಷಿಗಳ ಸಾನಿಧ್ಯದಲ್ಲಿ ಭಕ್ತರು ಪಡೆದದ್ದೂ ಇದೇ ಅನುಭವ. ಜಗದ್ಗುರು ಆದಿಶಂಕರಾಚಾರ್ಯರು ಅಖಂಡ ಭಾರತಕ್ಕೆ ಕೊಟ್ಟುದುದು ಇದೇ ಅನುಭವ. ಸ್ವಾಮಿ ಅಣ್ಣಪ್ಪಯ್ಯರು, ಶ್ರೀ ಸದಾಶಿವ ಬ್ರಹ್ಮೇಂದ್ರರು, ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು, ಶ್ರೀಧರ ಸ್ವಾಮಿಗಳಾದಿಯಾಗಿ ಎಲ್ಲಾ ಅವಧೂತರು ಪಾಮರರಿಗೆ ಕರುಣಿಸಿದ್ದು ಇದೇ ಅನುಭವ. ಮತ್ತದು ಇಂದಿಗೂ ಪ್ರವಹಿಸುತ್ತಿರುವುದು. ಮತ್ತು ಈ ಅನುಭವವನ್ನು ಪಡೆದುಕೊಳ್ಳಲು ಇರುವ ಸರಿಯಾದ ಮಾರ್ಗವೇ ಸನಾತನ ಧರ್ಮದ ಪಾಲನೆ. ಹಾಗೂ ಅಂತಹಾ ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ. ಹಾಗೆ ಅನುಸರಿಸುವ ಕಾರಣಕ್ಕೇ ಇಲ್ಲಿ ವೇದಗಳೆಂಬ ಅತ್ಯುನ್ನತ ಸಾಹಿತ್ಯ ಸ್ಫುರಿಸಿತು. ಉಪನಿಷತ್ತುಗಳ ಧಾರೆಗಳು ಧುಮ್ಮಿಕ್ಕಿದವು. 

         ಇವತ್ತು ಹಿಂದೂ ಶಬ್ಧ ಹಿಂದೆ ಇರಲಿಲ್ಲ; ಪರ್ಷಿಯನ್ನರ ಕೊಡುಗೆ; ಅರಬ್ಬರ ಕೊಡುಗೆ; ಅವಾಚ್ಯ ಶಬ್ಧ ಎಂದೆಲ್ಲಾ ಊಳಿಡುವವರು ಇದನ್ನು ಗಮನಿಸಬೇಕು. ಬರಿಯ ಶಬ್ಧಾರ್ಥಗಳು, ಶಬ್ಧೋತ್ಪತ್ತಿಗಳು ಯಾವುದೇ ಜನಾಂಗವನ್ನು ವರ್ಣಿಸಲಾರವು. ಜನಾಂಗವೊಂದನ್ನು ವರ್ಣಿಸುವುದು ಅದು ಪಾಲಿಸುವ ಧರ್ಮವನ್ನು ಆಧರಿಸಿ. ಇಲ್ಲಿ ಧರ್ಮವೆಂದರೆ ಮತವಲ್ಲ.
 
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ | 
 ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ || 
ಋಗ್ವೇದ ೧-೧೬೪-೨೭ || 

 ಈ ಮಂತ್ರದ ಸಾರಾಂಶ ರೂಪೀ ಸೂತ್ರವೇ ಆದ್ಯಕ್ಷರ ಸಂಯೋಗದಿಂದ ಉಂಟಾಗುವ “ಹಿಂದು” ಎಂಬ ಶಬ್ದ. ಮೂಲ ಪ್ರಕೃತಿಯನ್ನು ಆಧರಿಸಿದ, ಆದರಿಸಿದ ಜೀವನಕ್ರಮವನ್ನು ಅಳವಡಿಸಿಕೊಂಡು, ಉತ್ತಮ ವಿಚಾರಧಾರೆಯೊಂದಿಗೆ ನಿತ್ಯ ನಿರಂತರ ವರ್ಧಿಸುತ್ತಾ ಮಾತೄ ಸ್ವರೂಪವೆಲ್ಲವನ್ನೂ ಗೌರವಿಸುತ್ತಾ ವೇದ ಹೇಳಿದ ಅನಂತತೆಯೆಡೆಗೆ ಸಾಗುವವನೇ ಹಿಂದೂ. ಬಳಿಕ ಹಿಂದೂ ಪದಕ್ಕೆ ಪುರಾಣಗಳು ವ್ಯಕ್ತಿಗಳು ಆಧ್ಯಾತ್ಮಿಕವಾಗಿ, ಭೌಗೋಳಿಕವಾಗಿ, ಕಾಲದ ದೃಷ್ಟಿಯಿಂದ, ಜನಾಂಗದ ಉಳಿವಿನ ದೃಷ್ಟಿಯಿಂದ ತಮ್ಮದೇ ವ್ಯಾಖ್ಯೆಯನ್ನು ನೀಡುತ್ತಾ ಬಂದರು. ದಾಶರಾಜ್ಞ ಯುದ್ಧದ ಬಳಿಕ ಇಲ್ಲಿಂದ ವಲಸೆ ಹೋದವರ ಬಾಯಲ್ಲಿ ಸಿಂಧೂ ಎಂಬುದು ಅಪಭ್ರಂಶವಾಗಿ ಹಿಂದೂ ಆಯಿತು. ಸಪ್ತಸಿಂಧುವೆನಿಸಿದ ಈ ರಾಷ್ಟ್ರ ಜರತೂಷ್ಟ್ರರ ಪವಿತ್ರಗ್ರಂಥ ಜೆಂದ್ ಅವೆಸ್ಥಾದಲ್ಲಿ ಹಪ್ತಹಿಂದೂ ಆಯಿತು. ಮತ್ತದೇ ಸಾರ್ವತ್ರಿಕವಾಯಿತು. ಆ ರೀತಿಯಲ್ಲೂ ಮೂಲ ಹೆಸರೇ ಉಳಿಯಿತು. ಪರ್ಷಿಯನ್ನರು, ಗ್ರೀಕರು, ಅರ್ಮೇನಿಯರ ಗ್ರಂಥಗಳಲ್ಲಿ ಹಿಂದೂ ಪದ ಕಾಣಸಿಗುತ್ತದೆ. 

     ಹಿಮಾಲಯ ಸಮಾರಭ್ಯಂ ಯಾವದಿಂದು ಸರೋವರಂ 
ತಮ್ ದೇವನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ|| 

 ಹಿಮಾಲಯದಿಂದ ಆರಂಭಿಸಿ ಸಾಗರದವರೆಗೆ ವಿಶಾಲವಾಗಿ ಹರಡಿಕೊಂಡಿರುವ ಭೂಭಾಗವನ್ನೇ ಹಿಂದೂಸ್ಥಾನವೆಂತಲೂ, ಇಲ್ಲಿರುವ ಜನರೇ ಹಿಂದೂಗಳೆಂತಲೂ ನಾವು ಪುರಾಣ ಕಾಲದಲ್ಲಿ ಒಪ್ಪಿಕೊಂಡಿದ್ದೆವು. ಅಷ್ಟೇ ಅಲ್ಲ, ಹಿಂದೂ ಪದಕ್ಕೆ ಲಕ್ಷಣವನ್ನು ವಿವರಿಸುತ್ತಾ, 
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ದೃಢಾಶ್ರಯಃ 
ಗೋಭಕ್ತಃ ಭಾರತ ಗುರುಃ ಹಿಂದುಃ ಹಿಂಸ ನ ದೂಷಕಃ|| 
ಎಂದು ಹೇಳಲಾಗಿದೆ. ಓಂಕಾರವನ್ನು ಮೂಲಮಂತ್ರವೆಂದು ಭಾವಿಸುವವನೂ, ಪುನರ್ಜನ್ಮವನ್ನು ದೃಢವಾಗಿ ನಂಬುವವನೂ, ಭಾರತವನ್ನು ಗುರುವೆಂದು ಒಪ್ಪಿಕೊಂಡವನೂ, ಗೋಭಕ್ತನೂ ಆದ ಅಹಿಂಸಾ ನಿಷ್ಠನೇ ಹಿಂದೂ ಎಂದಿದೆ. ಮೇರುತಂತ್ರವು, 
ಹೀನಂ ಚ ದೂಷಯಂತ್ಯೇವ ಹಿಂದುರಿತ್ಯುಚ್ಚತೇ 
- ದುಷ್ಟರನ್ನು ಶಿಕ್ಷಿಸುವವ ಹಿಂದೂ ಎಂದಿದೆ. ಇದೆಲ್ಲವನ್ನು ಗಮನಿಸಿ‌ಯೇ ವೀರ ಸಾವರ್ಕರ್ 
ಆಸಿಂಧು ಸಿಂಧು ಪರ್ಯಂತಾ ಯಸ್ಯ ಭಾರತ ಭೂಮಿಕಾ 
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮೃತಃ|| 
- ಭಾರತವನ್ನು ತನ್ನ ಪಿತೃಭೂಮಿಯೆಂದು ಪುಣ್ಯಭೂಮಿಯೆಂದು ಭಾವಿಸುವ ಸಿಂಧೂವಿನಿಂದ ರತ್ನಾಕರದವರೆಗೆ ಹರಡಿರುವಾತನೇ ಹಿಂದೂ ಎಂಬ ವ್ಯಾಖ್ಯೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ