ಪುಟಗಳು

ಭಾನುವಾರ, ಜನವರಿ 15, 2023

ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ

ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ


             ಜಗತ್ತು ಕಂಡ ಕ್ರೂರ ಮತಾಂಧರಲ್ಲಿ ಒಬ್ಬ ಟಿಪ್ಪು. ಅವನೇ ಬರೆದ ಪತ್ರಗಳು, ಸಾಲು ಸಾಲು ದಾಖಲೆಗಳು, ಇಂದಿಗೂ ಉಳಿದಿರುವ ನಾಶದ, ಅತಿಕ್ರಮದ ಅವಶೇಷಗಳು ಅವನು ನಡೆಸಿದ ಹಿಂದೂಗಳ ಮಾರಣಾಧ್ವರ, ಮತಾಂತರ, ಅತ್ಯಾಚಾರ; ದೇಗುಲ, ಮನೆ, ಆಸ್ತಿ-ಪಾಸ್ತಿ, ಅರ್ಥ ವ್ಯವಸ್ಥೆಗಳ ನಾಶ; ಭಾಷೆಯ ಕಗ್ಗೊಲೆಗಳು ಅವನ ಮತಾಂಧತೆ, ಬರ್ಬರತೆ, ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಒಂದು ಸಮುದಾಯಕ್ಕೆ ದೀಪಾವಳಿಯನ್ನೇ ನರಕಸದೃಶವನ್ನಾಗಿಸಿ ಪ್ರತೀ ವರ್ಷ ಆ ಸಮಯಕ್ಕೆ ಶ್ರಾದ್ಧ ಆಚರಿಸುವಂತೆ ಮಾಡಿ ಆ ಸಮುದಾಯದ ಅನವರತ ದೀಪಾವಳಿಯ ಸಂಭ್ರಮವನ್ನೇ ಕಿತ್ತುಕೊಂಡಾತನ ನೆನಪೂ ಈ ದೀಪಾವಳಿಯ ಸಮಯದಲ್ಲಿ ಮಾಡಬಾರದು. ಆದರೆ ಕೆಲವರಿಗೆ ಆತ ತನ್ನ ಕೊನೆಗಾಲದಲ್ಲಿ ಕೆಲ ದೇವಾಲಯಗಳಿಗೆ ನೀಡಿದ ದಾನ, ಮರಾಠರದ್ದು ಎನ್ನಲಾದ ದಾಳಿಯ ಸಮಯದಲ್ಲಿ ಶೃಂಗೇರಿಗೆ ನೀಡಿದ ಸಹಾಯ ಇವೆಲ್ಲಾ ಆತ ಮತಾಂಧನಾಗಿಯೇ ಸದಾಕಾಲ ಇದ್ದದ್ದು ಹೌದೇ ಎನ್ನುವ ಸಂಶಯ ಮೂಡಲೂ ಕಾರಣವಾಗಿದೆ. ಅದಕ್ಕಾಗಿ ಒಂದಷ್ಟು ಇತಿಹಾಸದ ಕೆದಕುವಿಕೆ ಅನಿವಾರ್ಯವಾಗಿದೆ. ಟಿಪ್ಪುವನ್ನು ಆತ ಮುಸ್ಲಿಂ ಎನ್ನುವ ಕಾರಣಕ್ಕೆ ವೈಭವೀಕರಿಸುವ ಹಾಗೂ ಅವನು ಕೊನೆಗಾಲದಲ್ಲಿ ತನ್ನ ಹಾಗೂ ತನ್ನ ಮಕ್ಕಳ ಜೀವ ಉಳಿಸಿಕೊಳ್ಳುವ ಸಲುವಾಗಿ ಮಾಡಿದ ಕೆಲವೇ ಕೆಲವು ಪುಣ್ಯಕಾರ್ಯಗಳನ್ನು ಬಳಸಿ ಅವನ ಕ್ರೌರ್ಯವನ್ನು ಮುಚ್ಚಿಡಲು ಪ್ರಯತ್ನಿಸುವ ಮುಸ್ಲಿಮರ ಹಾಗೂ ಜಾತ್ಯಾತೀತವಾದಿಗಳ ಕಣ್ಣು ತೆರೆಸಲು ಸಾಧ್ಯವೇ ಇಲ್ಲ. ನಿಜೇತಿಹಾಸವನ್ನು ಒಪ್ಪುವ ಸಹೃದಯಿಗಳ ಸಂಶಯವನ್ನು ನಿವಾರಿಸುವುದಂತೂ ಸರ್ವಮಾನ್ಯ.

          ನಿಜಕ್ಕೂ 1791ರ ಏಪ್ರಿಲ್ನ ಆ ದಿನಗಳಲ್ಲಿ ಶೃಂಗೇರಿಯಲ್ಲಿ ಏನು ನಡೆಯಿತು? ಇದಕ್ಕಾಗಿ ಸ್ವಲ್ಪ ಆಗಿನ ರಾಜಕೀಯ ಸನ್ನಿವೇಶವನ್ನೂ ಅವಲೋಕಿಸಬೇಕಾಗುತ್ತದೆ. ನಾನಾ ಫಡ್ನವೀಸನು ಮಹದಾಜಿ ಸಿಂಧಿಯಾಗೆ 1784ರ ಸೆಪ್ಟೆಂಬರ್ 5ರಂದು ಬರೆದ ಪತ್ರ ಹಾಗೂ ಅದರ ಬಳಿಕ ನಡೆದ ಘಟನೆಗಳು ಆಗಿನ ಬದಲಾದ ರಾಜಕೀಯ ಸನ್ನಿವೇಶವನ್ನು ಹೊರಗೆಡಹುತ್ತದೆ. ಅದರಲ್ಲಿರುವ ಒಕ್ಕಣೆ ಹೀಗಿದೆ :- "ಟಿಪ್ಪುವಿನ ನಡೆಗಳು ಸರಿಯಾಗಿಲ್ಲ. ಅವನು ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಇತ್ತೀಚೆಗೆ ನೂರ್ ಮುಹಮ್ಮದನಿಗೆ ಬರೆದ ಪತ್ರದಲ್ಲಿ ಟಿಪ್ಪು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50,000 ಹಿಂದೂಗಳನ್ನು ತಾನು ಇಸ್ಲಾಂಗೆ ಮತಾಂತರಿಸಿದ ಘನಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ಈ ಹಿಂದೆ ಯಾವುದೇ ಪದಿಶಾಹ್ ಅಥವಾ ವಜೀರ್ ಮಾಡಲಾಗದ ಕಾರ್ಯ ತನ್ನಿಂದ ಅಲ್ಲಾಹನ ಕೃಪೆಯಿಂದ ಸಾಧ್ಯವಾಗಿದೆ, ಇಡೀ ಹಳ್ಳಿಗಳನ್ನೇ ತಾನು ಮತಾಂತರಿಸಿದೆ ಎಂದು ಬೀಗಿದ್ದಾನೆ."

            ಈ ಪತ್ರ ಮರಾಠರು ಹಿಂದೂ ವಿರೋಧಿ ಮತಾಂಧ ಟಿಪ್ಪುವಿನಿಂದ ದೂರ ಸರಿಯುತ್ತಿರುವುದರ ದ್ಯೋತಕವಾಗಿದೆ. ದಶಕದ ಹಿಂದೆ ಹೈದರನ ಜೊತೆ ಮೈತ್ರಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ್ದ ಮರಾಠರು ಹಿಂದೂಗಳ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯಗಳಿಂದ ಕ್ರೋಧಗೊಂಡು ಟಿಪ್ಪುವಿನಿಂದ ದೂರ ಸರಿದರು. ಅಂತಹಾ ಮರಾಠರು ಸನಾತನ ಸಂಸ್ಕೃತಿಯನ್ನು ಉಳಿಸಲು ಧರೆಗವತರಿಸಿದ್ದ ದಿವ್ಯತೇಜ ಶಂಕರರು ಸ್ಥಾಪಿಸಿದ್ದ, ಶಂಕರರ ತತ್ತ್ವವನ್ನು ಅನವರತ ಪಾಲಿಸುತ್ತಿದ್ದ ಪೀಠವೊಂದರ ಮೇಲೆ ಆಕ್ರಮಣ ಮಾಡಲು, ದೇವರ ವಿಗ್ರಹ ಚಲನೆ ಮಾಡಲು ಸಾಧ್ಯವೇ? ಅದರಲ್ಲೂ ಮತಾಂಧ ಆಕ್ರಮಣಕಾರ ದುಶ್ಶಕ್ತಿಗಳ ದುರಾಡಳಿತದ ನಡುವಿನಿಂದ ಜೈ ಭವಾನಿ ಎಂದು ಘರ್ಜಿಸಿ ಎದ್ದು ಸುತ್ತಲಿದ್ದ ಮತಾಂಧ ಶಕ್ತಿಗಳ ಎದೆಗೆ ಒದ್ದು ಗೆದ್ದು ಸ್ಥಾಪಿಸಿದ್ದ ಶಿವಛತ್ರಪತಿಯ ಹಿಂದೂಪದಶಾಹಿ ತಾನು ಜಗದ್ಗುರು ಪೀಠವೆಂದು ಪೂಜಿಸುತ್ತಿದ್ದ ಹಿಂದೂಧರ್ಮಪೀಠವೊಂದಕ್ಕೆ ಅನ್ಯಾಯ ಮಾಡಲು ಸಾಧ್ಯವೇ? ಟಿಪ್ಪುವಿನ ಹಿಂದೂ ವಿರೋಧಿ ನೀತಿ ಟಿಪ್ಪುವನ್ನು ಸದೆಬಡಿಯುವ ಸಲುವಾಗಿ ಮರಾಠರು ಬ್ರಿಟಿಷರ ಜೊತೆಗೂ ಸೇರುವಂತೆ ಮಾಡಿತು. ಈ ಮೈತ್ರಿಯನ್ನು ರೂಪಿಸುವಲ್ಲಿ ಪುಣೆಯ ಇಂಗ್ಲಿಷ್ ನಿವಾಸಿ ಚಾರ್ಲ್ಸ್ ಡಬ್ಲ್ಯೂ ಮಾಲೆಟ್ ನ ಪಾತ್ರ ಪ್ರಮುಖವಾದದ್ದು. ಶನಿವಾರ ವಾಡಾ ದರ್ಬಾರ್‌ನ ಪ್ರಸಿದ್ಧ ಥಾಮಸ್ ಡೇನಿಯಲ್-ಜೇಮ್ಸ್ ವೇಲ್ಸ್ ವರ್ಣಚಿತ್ರವು ಮಾಲೆಟ್ ಮರಾಠರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ತೋರಿಸುತ್ತದೆ. ಆದರೆ ಈ ಪ್ರಕರಣವನ್ನಿಟ್ಟುಕೊಂಡು ಮರಾಠರು ಬ್ರಿಟಿಷರ ಪರ ಎನ್ನಲಾಗದು. ಅದು ಹಿಂದೂ ವಿರೋಧಿ ಮತಾಂಧ ಟಿಪ್ಪುವನ್ನು ಕೊನೆಗಾಣಿಸಲು ಮರಾಠರು ಮಾಡಿಕೊಂಡ ತಾತ್ಕಾಲಿಕ ಸಂಧಿಯಷ್ಟೇ. ಶತ್ರುವನ್ನು ನಿವಾರಿಸಲು ಅವನ ಶತ್ರುವಿನೊಡನೆ ಮಿತ್ರನಾಗುವ ಕೂಟ ನೀತಿ.

            1790-1792ರ ಟಿಪ್ಪು ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಮರಾಠಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದವಾಡಕರ್ ಅವರ ಸೈನ್ಯಕ್ಕೆ ಸೇರಿದ ತಂಡವೊಂದು ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಲೂಟಿಗೈದು ಅಪವಿತ್ರಗೊಳಿಸಿತು. ಈ ದಾಳಿಯ ಕಳಂಕವು ಇಂದಿಗೂ ಉಳಿದುಕೊಂಡಿದೆ ಮತ್ತು ಮರಾಠರು ಹಾಗೂ ದಾಳಿ ಮಾಡಿದ ತಂಡದ ನಾಯಕತ್ವವನ್ನು ಹೊಂದಿದ್ದ ಪರಶುರಾಮ್ ಭಾವು ಪಟವರ್ಧನ್ ಅವರನ್ನು ಈ ದಾಳಿಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಆದರೆ 1791ರ ಮರಾಠಾ ಪತ್ರಗಳು ಭಾಷೆಯ ಪರಿಚಯವಿಲ್ಲದ ಅನೇಕ ವ್ಯಾಖ್ಯಾನಕಾರರನ್ನು ದಾರಿ ತಪ್ಪಿಸಿವೆ ಮತ್ತು ಈ ಅಸಹ್ಯಕರ ಪ್ರಸಂಗದ ಮೇಲೆ ವಿಭಿನ್ನ ಬೆಳಕನ್ನು ಚೆಲ್ಲುತ್ತವೆ.

             1774ರಿಂದ, ಆಂಗ್ಲರೊಂದಿಗಿನ ಒಂಬತ್ತು ವರ್ಷಗಳ ಯುದ್ಧದಲ್ಲಿ ಮತ್ತು ನಂತರ, ಮರಾಠರ ವಶದಲ್ಲಿದ್ದ ಕೃಷ್ಣ ಹಾಗೂ ತುಂಗಭದ್ರಾ ನದಿಗಳ ನಡುವಿನ ಪ್ರದೇಶ ಹೈದರ್ ಅಲಿ ಮತ್ತು ಟಿಪ್ಪುವಿನ ಪಾಲಾಯಿತು. ಟಿಪ್ಪು ಮರಾಠರೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗಲೇ ಮರಾಠಾ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದ. ಮಾತ್ರವಲ್ಲ 1784-85ರಲ್ಲಿ ನರಗುಂದದ ಮುಖ್ಯಸ್ಥ ವ್ಯಂಕಟ್ ರಾವ್ ಭಾವೆ ಮತ್ತು ಅವರ ದಿವಾನ ಕಲೋಪಂತ್ ಪೇಠೆ ಅವರನ್ನು ಬಂಧಿಸಿ ಸರಪಳಿಯಲ್ಲಿ ಬಿಗಿದು ಮೆರವಣಿಗೆ ಮಾಡಿದ. ಪೇಠೆ ಟಿಪ್ಪುವಿನ ಸೆರೆಮನೆಯಲ್ಲಿ ಸಾವನ್ನಪ್ಪಿದರು. ಅದೇ ವರ್ಷ ತನ್ನ ಏಜೆಂಟ್ ನೂರ್ ಮುಹಮ್ಮದನಿಗೆ "ಕೇವಲ ಒಂದೇ ದಿನದಲ್ಲಿ ಮಹಿಳೆಯರು ಸೇರಿದಂತೆ ಐವತ್ತು ಸಾವಿರ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ್ದೇನೆ. ಧಾರವಾಡ ವಶವಾಯಿತು. ಅನೇಕ ಸುಂದರ ಮಹಿಳೆಯರನ್ನು ಮುಸ್ಲಿಂ ಜನಾನಗಳಿಗೆ ಕರೆದೊಯ್ಯಲಾಯಿತು." ಎಂದು ಹೆಮ್ಮೆಯಿಂದ ಪತ್ರ ಬರೆಯುತ್ತಾನೆ.

           ಟಿಪ್ಪುವಿನ ಆಕ್ರಮಣದ ಸುದ್ದಿ ಕೇಳಿ ಪುಣೆಯಲ್ಲಿ ಅಸಮಧಾನ ಭುಗಿಲೆದ್ದಿತು. ಕೆರಳಿದ ನಾನಾ ಫಡ್ನವೀಸ, ಪರಶುರಾಮ್ ಭಾವು ಜೊತೆಗೆ ಸೇರುವಂತೆ ಹೋಳ್ಕರರನ್ನು ವಿನಂತಿಸಿ 1786ರಲ್ಲಿ ಟಿಪ್ಪು ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿ ಬಾದಾಮಿ ಕೋಟೆಯನ್ನು ವಶಪಡಿಸಿಕೊಂಡರು. ನಾನಾ ಪುಣೆಗೆ ಹಿಂದಿರುಗಿದ ನಂತರ, ತುಕೋಜಿ ಹೋಳ್ಕರ್ ಮತ್ತು ಪರಶುರಾಮ್ ಭಾವು ಒಪ್ಪಂದವೊಂದಕ್ಕೆ ಟಿಪ್ಪುವಿನ ಸಹಿ ಹಾಕಿಸಿಕೊಂಡರು. ಅದರಂತೆ ಟಿಪ್ಪು 48 ಲಕ್ಷ ರೂಪಾಯಿಗಳ ಗೌರವಧನವನ್ನು ನೀಡಬೇಕಾಯಿತು. ಜೊತೆಗೆ ಕೈದಿಗಳನ್ನೂ ವಿನಿಮಯ ಮಾಡಿಕೊಳ್ಳಬೇಕಾಯಿತು.

           1786ರಲ್ಲಿ ಸಹಾಯಕ್ಕಾಗಿ ನಾನಾ ಮಾಡಿದ ಕೋರಿಕೆಯನ್ನು ಇಂಗ್ಲೀಷರು ಸ್ವೀಕರಿಸಲಿಲ್ಲವಾದರೂ, 1790ರಲ್ಲಿ  ಟಿಪ್ಪು ವಿರುದ್ಧ ಮರಾಠರ ಸಹಾಯವನ್ನು ಪಡೆಯಲು ತಾವೇ ಆಸಕ್ತಿ ವಹಿಸಿದರು. ಆ ಸಮಯದಲ್ಲಿ ಒಂದು ಸಂಘಟಿತ ಕಾರ್ಯತಂತ್ರವನ್ನು ಜಾರಿಗೆ ತರಲಾಯಿತು. ಲಾರ್ಡ್ ಕಾರ್ನ್‌ವಾಲಿಸ್ ಟಿಪ್ಪುವಿನ ವಿರುದ್ಧ ಕಣಕ್ಕಿಳಿದು ಚೆನ್ನೈ ತಲುಪಿದ. ಮರಾಠರು ಹರಿ ಪಂತ್ ಫಡ್ಕೆ ಅವರ ನೇತೃತ್ವದಲ್ಲಿ ಪುಣೆಯನ್ನು ತೊರೆದರು. ನಂತರ ಪಟವರ್ಧನ್ ಸಹೋದರರ(ಪರಶುರಾಮ ಭಾವು ಮತ್ತು ರಘುನಾಥ ರಾವ್ ‘ದಾದಾ’) ನೇತೃತ್ವದಲ್ಲಿ ಮತ್ತೊಂದು ಸೈನ್ಯವು ಬಂದಿತು. ಪಟವರ್ಧನರು ಟಿಪ್ಪುವಿನ ಆಕ್ರಮಣವನ್ನು ಎದುರಿಸುತ್ತಾ ಈ ಯುದ್ಧಗಳಲ್ಲಿ ತಮ್ಮ ಕುಟುಂಬದ ಅನೇಕರನ್ನು ಕಳೆದುಕೊಂಡರು. ಶ್ರೀರಂಗಪಟ್ಟಣದ ಕಡೆಗೆ ಮುಖ ಮಾಡಿದ್ದ ಕಾರ್ನ್‌ವಾಲಿಸನ ಜೊತೆ ಸೇರುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದ ಪರಶುರಾಮ್ ಭಾವು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ತಾವು ಹಿಂದಿನ ದಶಕದಲ್ಲಿ ಕಳೆದುಕೊಂಡ ಪ್ರದೇಶವನ್ನು ಮರಳಿ ಗೆಲ್ಲಲು ಹೆಚ್ಚಿನ ಆದ್ಯತೆನೀಡುವುದು ಸರಿಯೆಂದು ಆತನಿಗೆ ಅನ್ನಿಸಿತು. ಅದರಂತೆಯೇ ಮುಂದುವರಿದ ಆತ ತಿಂಗಳುಗಳ ಮುತ್ತಿಗೆಯ ಬಳಿಕ 1791ರ ಏಪ್ರಿಲ್ 6 ರಂದು ಧಾರವಾಡದ ಕೋಟೆಯನ್ನು ವಶಪಡಿಸಿಕೊಂಡು ತುಂಗಭದ್ರಾವನ್ನು ದಾಟಿ ಹರಿಹರದಲ್ಲಿ ರಘುನಾಥ ರಾವ್ ಅವರನ್ನು ಸೇರಿದ. ರಘುನಾಥ ರಾವ್ ನಂತರ ದಕ್ಷಿಣಕ್ಕೆ ಮಾಯಕೊಂಡ ಮತ್ತು ಚೆಂಗಿರಿ ಕೋಟೆಯನ್ನು ವಶಪಡಿಸಿಕೊಂಡರು.

             ಈ ಸಮಯದಲ್ಲಿ ನೀಲಕಂಠ ಅಪ್ಪಾ (ರಘುನಾಥ ರಾವ್ ದಾದಾ ಅವರ ತಂದೆ) ಮೀರಜ್‌ನಲ್ಲಿರುವ ಬಾಳಾಸಾಹೇಬರಿಗೆ ಬರೆದ ಪತ್ರವು ಶೃಂಗೇರಿ ಮಠದ ಮೇಲೆ ನಡೆದ ದಾಳಿಯ ಮೊದಲ ಸೂಚನೆಯನ್ನು ನೀಡುತ್ತದೆ. ಪತ್ರದಲ್ಲಿ ಹೀಗಿದೆ - "ದಾದಾಸಾಹೇಬರ ಸೈನ್ಯದ ಲಮಾಣರು ಮತ್ತು ಪಿಂಡಾರಿಗಳು ಹೋಗಿ ಶೃಂಗೇರಿ ಮಠದಿಂದ ಆನೆ ಸೇರಿದಂತೆ ಲಕ್ಷಗಟ್ಟಲೆ ಧನವನ್ನು ಲೂಟಿ ಮಾಡಿದರು. ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದಾದಾಗೆ ನಾನು ಪತ್ರ ಬರೆದಿದ್ದೇನೆ." ಇದರ ನಂತರ ಏಪ್ರಿಲ್ ಮಧ್ಯಭಾಗದಲ್ಲಿ ಬರೆದ ಮತ್ತೊಂದು ಪತ್ರವು ಈ ರೀತಿಯಿದೆ; "ಲೂಟಿಕೋರರನ್ನು ಬಂಧಿಸಿ ಮಠಕ್ಕೆ ಸೇರಿದ ಜಂಬೂರಾ(?) ಮತ್ತು ಆನೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಹತ್ತು ಅಥವಾ ಇಪ್ಪತ್ತು ಅಪರಾಧಿಗಳನ್ನು ಬಂಧಿಸಲಾಯಿತು. ಆಗ ದಾದಾಸಾಹೇಬರು ತಮ್ಮ ಆಳುಗಳಾದ್ದರಿಂದ ಅವರ ವಿರುದ್ಧ ತಾನು ಕ್ರಮ ಕೈಗೊಳ್ಳುವುದಾಗಿ ಬರೆದರು. ಬಳಿಕ ಅಪರಾಧಿಗಳನ್ನು ಮತ್ತು ಆನೆಯನ್ನು ಅವರ ಬಳಿಗೆ ಕಳುಹಿಸಲಾಯಿತು. ಮೇ 14 ರಂದು, ರಘುನಾಥ ರಾವ್ ಅವರ ಮಗ ತ್ರಯಂಬಕ್ ರಾವ್ ಅವರು ಮೀರಜ್‌ನಲ್ಲಿರುವ ತಮ್ಮ ಚಿಕ್ಕಪ್ಪನಿಗೆ ಹೀಗೆ ಬರೆದರು, "ಸೇನೆ ತುಂಗಾ ನದಿಯನ್ನು ದಾಟುವ ಮೊದಲೇ, ಲಮಾಣಿ ಮತ್ತು ಪಿಂಡಾರಿಗಳು ಶಿವಮೊಗ್ಗವನ್ನು ತಲುಪಿದ್ದರು. ಅವರು ಹೋಗಿ ಶೃಂಗೇರಿಯಲ್ಲಿದ್ದ ಸ್ವಾಮಿಗಳ ಮಠವನ್ನು ಲೂಟಿ ಮಾಡಿದರು. ಸ್ವಾಮಿಗಳ ದಂಡ, ಕಮಂಡಲಗಳನ್ನು ಕೂಡಾ ದೋಚಿದರು. ಏನೂ ಉಳಿಯಲಿಲ್ಲ. ಮಹಿಳೆಯರ ಮೇಲೆ ಹಲ್ಲೆ (ಮತ್ತು ಅತ್ಯಾಚಾರ) ಮಾಡಲಾಯಿತು. ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಮಿಗಳ ವಿಗ್ರಹ, ಲಿಂಗ ಇತ್ಯಾದಿಗಳನ್ನು ಲೂಟಿ ಮಾಡಲಾಗಿದೆ. ಆನೆಯ ಲಾಯವನ್ನು ಲಮಾಣಿಗಳು ಖಾಲಿ ಮಾಡಿ ತಂದರು. ಸ್ವಾಮಿಗಳು ಧ್ಯಾನದಲ್ಲಿದ್ದು ಐದು ದಿನಗಳಿಂದಲೂ ಉಪವಾಸದಿಂದಿದ್ದು ಪ್ರಾಣತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆ."

           ವಸ್ತುಶಃ ಕೊನೆಯಲ್ಲಿ ಸ್ವಾಮಿಗಳು ಪ್ರಾಣ ತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆಂದು ಹೇಳಿದುದು ಸತ್ಯವಾಗಿರಲಿಲ್ಲ. ಪತ್ರವು ಹೀಗೆ ಮುಂದುವರೆಯುತ್ತದೆ, "ತಂದೆಯವರಿಗೆ ಈ ಲೂಟಿಯ ಬಗ್ಗೆ ತಿಳಿದಾಗ, ಅವರು ಲಮಾಣರನ್ನು ಬಂಧಿಸಲು ಅಶ್ವಸೈನ್ಯವನ್ನು ಕಳುಹಿಸಿದರು. ಆನೆಯನ್ನು ವಶಕ್ಕೆ ಪಡೆಯಲಾಯಿತು. ಕಳವು ಮಾಡಿದ ಉಳಿದ ವಸ್ತುಗಳು ಪತ್ತೆಯಾಗಿಲ್ಲ." ಈ ವಿಷಯವು ಉಲ್ಬಣಗೊಳ್ಳುತ್ತಲೇ ಹೋಯಿತು. ಪುಣೆಯಲ್ಲಿರುವ ನಾನಾ ಫಡ್ನವೀಸ್ ಅವರ ಕಿವಿಗೂ ತಲುಪಿತು. ಡಿಸೆಂಬರ್ 1791ರಲ್ಲಿ ಅವರ ಗುಮಾಸ್ತರಿಂದ ಒಂದು ಪತ್ರವು ರಘುನಾಥ ರಾವ್ ಅವರಿಗೆ ತಲುಪಿತು. ಪತ್ರದಲ್ಲಿ ಹೀಗಿದೆ :- ಲಮಾಣರು ಮತ್ತು ಲೂಟಿಕೋರರು ಶೃಂಗೇರಿ ಮಠವನ್ನು ಲೂಟಿ ಮಾಡಿದ ಸುದ್ದಿ ನ್ಯಾಯಾಲಯಕ್ಕೆ ತಲುಪಿದೆ. ಎಲ್ಲಾ ವಿವರಗಳನ್ನು ಕಲೆಹಾಕಬೇಕು. "ಲೂಟಿಕೋರರು ನಾಲ್ಕೂ ದಿಕ್ಕಿನಿಂದ ಬಂದವರು. ನೀವು ಕ್ರಮ ಕೈಗೊಂಡಿದ್ದೀರಿ ಮತ್ತು ಇತರರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಬರೆದಿದ್ದೀರಿ. "ಸ್ವಾಮಿಗಳ ಮಠ ಲೂಟಿಯಾಗಿದೆ, ಹೀಗಾಗಿ ಸ್ವಾಮಿಗಳು ಉಪವಾಸ ಮಾಡುತ್ತಿದ್ದಾರೆ. ಸ್ವಾಮಿಗಳ ಅಸಮಾಧಾನ ಒಳ್ಳೆಯದಲ್ಲ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ವಾಮಿಗಳಿಗೆ ಪರಿಹಾರ ನೀಡಬೇಕು ಮತ್ತು ಅವರ ತೃಪ್ತಿ, ಸಂತೋಷವನ್ನು ಕೋರಬೇಕು" ಎಂದು ನಾನಾ ಉತ್ತರಿಸಿದ್ದಾರೆ.

           ಮರಾಠಾ ಸೇನೆಯಲ್ಲಿನ ಪಿಂಡಾರಿಗಳು ಮತ್ತು ಟಿಪ್ಪುವಿನ ಸೇನೆಯಲ್ಲಿನ ಬೇಯ್ಡ್(Bayed) ಪಡೆಗಳು ಅನಿಯಮಿತ, ಅರೆಕಾಲಿಕ ಪಡೆಗಳು. ಯುದ್ಧದ ಬಳಿಕದ ಮಾಪಿಂಗ್ ಅಪ್ ಕಾರ್ಯಾಚರಣೆಗಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಅವರಿಗೆ ಸಂಬಳವಿರಲಿಲ್ಲ. ಯುದ್ಧದ ಬಳಿಕ ಲೂಟಿಯಿಂದ ಸಿಕ್ಕಿದ್ದಷ್ಟೇ ಅವರ ಪಾಲಿಗೆ.  ಗವರ್ನರ್ ಜನರಲ್, 24 ಏಪ್ರಿಲ್ 1792 ರಂದು ಲಾರ್ಡ್ ಕಾರ್ನ್‌ವಾಲಿಸ್ ಪರವಾಗಿ ಬರೆದ ಪತ್ರದಲ್ಲಿ-
"ಟಿಪ್ಪುವಿನ ಬೇಯ್ಡ್ ಪಡೆ ಮತ್ತು ಮರಾಠ ಸೈನ್ಯದ ಪಿಂಡಾರಿ ಪಡೆಗಳನ್ನು ಯಾವುದೇ ತಪಾಸಣೆ ಅಥವಾ ನಿಯಂತ್ರಣವಿಲ್ಲದೆ ಬಳಸಿಕೊಳ್ಳಲಾಗಿದ್ದ ಅನಿಯಮಿತ ಮತ್ತು ಘೋರ ವ್ಯವಸ್ಥೆಯ ಕಡೆಗೆ ಆತ ಗಮನ ಹರಿಸಲಿಲ್ಲ. ಆ ಪಡೆಗಳ ಸ್ವಭಾವದಿಂದಲಾಗಿ ಯಾವುದೇ ರಾಜ್ಯದಲ್ಲಿ ಸೈನ್ಯವು ಸಾಗಿದಾಗ ಅಲ್ಲಿನ ಅಧಿಕಾರಿಗಳಿಗೆ ವಿವರಣೆ ನೀಡಬೇಕಾದ ಸಂದರ್ಭ ಒದಗುತ್ತಿತ್ತು. ಇವೆಲ್ಲಾ ತಾತ್ಕಾಲಿಕವಾದ ಅನಾನುಕೂಲತೆಗಳೆಂದು ಪರಿಗಣಿಸಲಾಗುತ್ತದೆ ಎನ್ನುವ ವಿಶ್ವಾಸವನ್ನು ಆತ ಹೊಂದಿದ್ದ."

            ಪಿಂಡಾರಿಗಳು 17ರಿಂದ 19ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಉಪಖಂಡದಲ್ಲಿದ್ದ ಮುಸ್ಲಿಮ್ ಮತಾವಲಂಬಿಗಳಾದ ಅಕ್ರಮ ಸೇನಾ ಲೂಟಿಕೋರರು ಮತ್ತು ಅನ್ವೇಷಕರು. ಪಿಂಡ ಎನ್ನುವ ಮದ್ಯವನ್ನು ಸೇವಿಸುತ್ತಿದ್ದ ಇವರು ಆರಂಭದಲ್ಲಿ ಮೊಘಲ್ ಸೇನೆಯ ಜೊತೆಗಿದ್ದರು. ಬಳಿಕ ಮರಾಠಾ ಸೇನೆಗೆ ಸಹಾಯಕರಾಗಿದ್ದರು. ಅಂತಿಮವಾಗಿ ಸ್ವತಂತ್ರವಾಗಿದ್ದ ಇವರು ೧೮೧೭-೧೮ರ ಪಿಂಡಾರಿ ಯುದ್ಧದಲ್ಲಿ ನಾಶವಾದರು. ಪಿಂಡಾರಿಗಳು ವೇತನರಹಿತರಾಗಿದ್ದರು ಮತ್ತು ಯುದ್ಧದಲ್ಲಿ ಲೂಟಿಮಾಡಿದ ವಸ್ತುಗಳೇ ಅವರ ಸಂಪೂರ್ಣ ವೇತನವಾಗಿತ್ತು. ಇವರು ಕುದುರೆ ಸವಾರರು, ಪದಾತಿ ದಳಗಳಾಗಿದ್ದು, ಭಾಗಶಃ ಶಸ್ತ್ರಸಜ್ಜಿತರಾಗಿರುತ್ತಿದ್ದರು. ತಾವು ಜೊತೆಗೂಡಿದ್ದ ಸೇನೆಗೆ ಲಾಭವಾಗಲು ಅವ್ಯವಸ್ಥೆ ಸೃಷ್ಟಿಸುವುದು ಮತ್ತು ಶತ್ರು ಸ್ಥಾನಗಳ ಬಗ್ಗೆ ಸುದ್ದಿ ಒದಗಿಸುವ ಕೆಲಸ ಇವರದಾಗಿತ್ತು. ಆದರೆ ತಮಗಿದ್ದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಮಿತ್ರಸೇನೆಗಳಿಗೆ ಹಾನಿ, ಅವಮಾನ ಮಾಡಿದ್ದೂ ಉಂಟು. ಶೃಂಗೇರಿ ಪ್ರಕರಣವೂ ಅದರಲ್ಲೊಂದು.

            1791ರಲ್ಲಿ, ಮೂರು ಮಿತ್ರಪಕ್ಷಗಳು ಶ್ರೀರಂಗಪಟ್ಟಣದತ್ತ ಧಾವಿಸಿದಾಗ, ಟಿಪ್ಪುವಿನ ವಕೀಲ ಅಪಾಜಿ ರಾಮ್ ಮರಾಠರನ್ನು ತೃಪ್ತಿಗೊಳಿಸಲು ಬಯಸಿದ. "ಟಿಪ್ಪು ಕಂಚಿಯಲ್ಲಿದ್ದಾನೆ ಮತ್ತು ಅವಮಾನಕರವಾದ ಮಾತುಕತೆಗಳು ನಡೆಯುತ್ತಿದೆ. ಆತ ಪ್ರಜೆಗಳಿಗೆ ಕಿರುಕುಳ ನೀಡುತ್ತಿಲ್ಲ. ಕಾರ್ನ್‌ವಾಲಿಸ್ ಚೆನ್ನೈನಲ್ಲಿದ್ದಾನೆ ಮತ್ತು ಎರಡೂ ಕಡೆಯಿಂದ ಯುದ್ಧದ ಸಿದ್ಧತೆಗಳು ನಡೆಯುತ್ತಿವೆ. ಹೈದರ್ ಅಲಿ ತನ್ನ ಆಳ್ವಿಕೆಯು ಶುರುವಾದಾಗ ಆರಂಭಿಸಿದ್ದ ಕಂಚಿ ದೇವಾಲಯದ ಗೋಪುರದ ಕೆಲಸವನ್ನು ಪೂರ್ಣಗೊಳಿಸಲು ಟಿಪ್ಪು ಈಗ ಆದೇಶಿಸಿದ್ದಾನೆ. ತಾನೇ ನಿಲ್ಲಿಸಿದ್ದ ರಥೋತ್ಸವಕ್ಕೂ ಅನುಮತಿ ನೀಡಿದ್ದಾನೆ. ಕಂಚಿಯಲ್ಲಿ ವಾರ್ಷಿಕ ಉತ್ಸವದ ಸುಡುಮದ್ದು ಪ್ರದರ್ಶನದಲ್ಲೂ ಭಾಗವಹಿಸಿದ್ದಾನೆ" ಎಂದು ಮರಾಠ ಗುಪ್ತಚರರು ವರದಿ ಮಾಡಿದರು. ಹಿಂದೂ ದೇವತೆಗಳನ್ನು ತೃಪ್ತಿಪಡಿಸಲು ಪ್ರಾಯಶ್ಚಿತ್ತ ಪೂಜೆಗಳನ್ನು ಶ್ರೀರಂಗಪಟ್ಟಣಂನಲ್ಲಿ ಮಾಡಲು ಟಿಪ್ಪು ಬ್ರಾಹ್ಮಣರಿಗೆ ಆಜ್ಞಾಪಿಸಿದ. ಅದೇ ಸಮಯದಲ್ಲಿ ಹರಿಪಂತ್ ಫಡ್ಕೆ "ಟಿಪ್ಪುವಿನ ಆದೇಶದ ಮೇರೆಗೆ ರಂಗಸ್ವಾಮಿ ಮತ್ತು ಶಿವಾಲಯಗಳಲ್ಲಿ ಬ್ರಾಹ್ಮಣರು  ಪ್ರಾಯಶ್ಚಿತ್ತಾದಿ ಪೂಜಾಕಾರ್ಯಕ್ರಮಗಳನ್ನು ಕೈಗೊಂಡರು. ಒಬ್ಬರು ನೀರಿನಲ್ಲಿ ಕುಳಿತು, ನಲವತ್ತು ಬ್ರಾಹ್ಮಣರು ಇನ್ನೊಂದು ರೀತಿಯ ಜಪವನ್ನು ಮಾಡುತ್ತಿದ್ದಾರೆ. ಆತ ಶೃಂಗೇರಿ ಸ್ವಾಮಿಗಳನ್ನು ಅಲ್ಲಿಗೆ ಕರೆದೊಯ್ದಿದ್ದಾನೆ. ಶ್ರೀಗಳು ಉಪವಾಸದಲ್ಲಿದ್ದಾರೆ. ತಾನು ಎಲ್ಲವನ್ನೂ ಸರಿಪಡಿಸುತ್ತೇನೆ, ನೀವು ನಿಶ್ಚಿಂತರಾಗಿರಿ ಎಂದು ಅವರನ್ನು ಟಿಪ್ಪು ವಿನಂತಿಸುತ್ತಿದ್ದಾನೆ. ಗುರುಗಳಿಗೆ ಚಿನ್ನದ ವಿಗ್ರಹಗಳನ್ನೂ ಮತ್ತು ಬ್ರಾಹ್ಮಣಾರ್ಥಕ್ಕಾಗಿ ನಲವತ್ತು ಸಾವಿರ ರೂಪಾಯಿಗಳನ್ನು ಆತ ಕೊಟ್ಟಿದ್ದಾನೆ" ಎಂದು ಪತ್ರ ಬರೆದ. ಮತ್ತೊಂದು ಪತ್ರ, ‘ಅಪಾಜಿ ರಾಮ್ ಒಪ್ಪಂದಕ್ಕಾಗಿ ಮನವಿ ಮಾಡುತ್ತಿದ್ದಾರೆ’ ಎಂದು ಹೇಳುತ್ತದೆ. ಮಿತ್ರಪಡೆಗಳು ಅಂತಿಮವಾಗಿ ಫೆಬ್ರವರಿ 1792ರಲ್ಲಿ ಶ್ರೀರಂಗಪಟ್ಟಣವನ್ನು ಸುತ್ತುವರೆದವು. ಕಾರ್ನ್‌ವಾಲಿಸ್ ಟಿಪ್ಪುವಿನ ಬಲವನ್ನೆಲ್ಲಾ ನಾಶಮಾಡಲು ಉತ್ಸುಕನಾಗಿದ್ದ. ಆದರೆ ನಿಜಾಮ ಮತ್ತು ಮರಾಠಾ ಕಮಾಂಡರ್ ಹರಿ ಪಂತ್ ಟಿಪ್ಪುವನ್ನು ಬಂಧಿಯಾಗಿಸಲು ಮಾತ್ರ ಬಯಸಿದ್ದರು. ಆದಾಗ್ಯೂ ಟಿಪ್ಪು ಉಗ್ರವಾಗಿ ಹೋರಾಡಿದ. ಅಂತಹ ಯುದ್ಧಕ್ಕಾಗಿ ಹರಿ ಪಂತ್ ಆಂಗ್ಲರು ಮತ್ತು ಟಿಪ್ಪು ಇಬ್ಬರನ್ನೂ ಹೊಗಳಿದ್ದಾನೆ. "ಇಂಗ್ಲಿಷರು ಹೋರಾಡಿ ದಣಿದಿದ್ದರು, ಆದ್ದರಿಂದ ಒಪ್ಪಂದವೊಂದಕ್ಕೆ ಒಪ್ಪಿಕೊಳ್ಳಬೇಕಾಯಿತು" ಎಂದು ಹರಿ ಪಂತ್ ಹೇಳಿದ್ದಾನೆ. ಬಿದನೂರು ಮತ್ತು ತುಂಗಭದ್ರೆಯ ಉತ್ತರದ ಸಂಪೂರ್ಣ ಪ್ರದೇಶವನ್ನು ವಶಪಡಿಸಿಕೊಂಡ ನಂತರ ಪರಶುರಾಮ ಭಾವು, ಟಿಪ್ಪುವಿನ ಮಕ್ಕಳನ್ನು ಕಾರ್ನ್‌ವಾಲಿಸ್‌ಗೆ ಒತ್ತೆಯಾಳಾಗಿ ಕಳುಹಿಸಿದ ದಿನದಂದು ಶ್ರೀರಂಗಪಟ್ಟಣವನ್ನು ತಲುಪಿದ.

            ಶೃಂಗೇರಿಯ ಪ್ರಸಂಗ ಮರಾಠರ ಪಾಲಿಗೆ ರಾಜನೀತಿಯೂ ಆಗಿರಲಿಲ್ಲ, ಯುದ್ಧ ಯೋಜನೆಯೂ ಆಗಿರಲಿಲ್ಲ. ನಿಜವಾದ ಯುದ್ಧದಲ್ಲಿ ಭಾಗವಹಿಸದ ಪರಭಕ್ಷಕ ಪಡೆಗಳಾದ ಪಿಂಡಾರಿಗಳು ಮತ್ತು ಲಮಾಣರಿಂದ ಇದು ನಡೆದುಹೋಯಿತು. ಮರಾಠರು ಹಿಂದೂಗಳಾಗಿದ್ದು ಬ್ರಾಹ್ಮಣ ನಾಯಕರ ನೇತೃತ್ವವಿದ್ದ ಕಾರಣ ಅವರು ಹಾನಿಮಾಡುವ ಭಯವಿಲ್ಲದಿದ್ದುದರಿಂದ ಶೃಂಗೇರಿ ಮಠವು ಈ ಪ್ರದೇಶದ ಎಲ್ಲಾ ಶ್ರೀಮಂತರಿಗೆ ಸುರಕ್ಷಿತ ಭಂಡಾರವಾಗಿ ಕಾಣುತ್ತಿತ್ತು ಎಂದು ಬೃಹತ್ ಸಂಖ್ಯೆಯಲ್ಲಿ ಐತಿಹಾಸಿಕ ಪತ್ರಗಳನ್ನು ಸಂಗ್ರಹಿಸಿರುವ ಇತಿಹಾಸಕಾರ ವಿವಿ ಖರೆ ಬರೆಯುತ್ತಾರೆ. ಮರಾಠರ ನಿಯಮಿತ ಸ್ಥಾಯೀ ಪಡೆಗಳು ಮಠದ ಮೇಲೆ ದಾಳಿ ಮಾಡದಿದ್ದರೂ, 'ಯಾವುದೇ ತಪಾಸಣೆ ಅಥವಾ ನಿಯಂತ್ರಣ'ದೊಂದಿಗೆ ಕಾರ್ಯನಿರ್ವಹಿಸದ ಪಿಂಡಾರಿಗಳು ಮಠದ ಮೇಲೆ ದಾಳಿ ಮಾಡಿದರು. ಮರಾಠಾ ಆಡಳಿತವು ಈ ಕೃತ್ಯದ ಬಗ್ಗೆ ದುಃಖಿತವಾಗಿತ್ತು ಮತ್ತು ಸುಮಾರು ಒಂದು ವರ್ಷದ ಬಳಿಕವೂ ಸ್ವಾಮಿಗಳಿಗೆ ಪರಿಹಾರ ಒದಗಿಸಿ ಸಮಾಧಾನಪಡಿಸಲು ಪ್ರಯತ್ನಗಳು ನಡೆಯುತ್ತಿದ್ದವು. ಇಂದಿಗೂ ಪೇಶ್ವೆಗಳ ಮನೆತನ ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಈ ತಪ್ಪಿನ ಪ್ರಾಯಶ್ಚಿತ್ತಾದಿ ಕ್ರಮಗಳನ್ನು ಮಾಡಿಸುತ್ತಿದೆ ಎಂಬ ಮಾಹಿತಿ ಇದೆ(ಅಧಿಕೃತವಲ್ಲ). 1791 ರಲ್ಲಿ, ಸುತ್ತಲಿಂದ ದಾಳಿ ಆರಂಭವಾಗಿ ತಾನು ಇನ್ನೇನು ಜೀವ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಹುಟ್ಟಿದಾಗ ಟಿಪ್ಪು, ದೇವಾಲಯಗಳು ಹಾಗೂ ಬ್ರಾಹ್ಮಣರ ಕಡೆಗಿನ ತನ್ನ ನಿಲುವನ್ನು ಬದಲಾಯಿಸಿದ. ಮರಾಠಾ ಪತ್ರ ಬರೆದವರು ಟಿಪ್ಪುವಿನ ಹೊಸ ನೀತಿಗಳ ಬಗೆಗೂ ಟೀಕೆ ಮಾಡಿದ್ದಾರೆ, ಏಕೆಂದರೆ ಅವುಗಳು ಅವನ ಲಕ್ಷಣವಾಗಿರಲೇ ಇಲ್ಲ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬೆದರಿ ಆತ ಇಂದಿನ ರಾಜಕಾರಣಿಗಳಂತೆ ದೇವಾಲಯ ಸುತ್ತುವ ಕೆಲಸಕ್ಕಿಳಿದಿದ್ದ. ಕಂಚಿ ಮತ್ತು ಶೃಂಗೇರಿ ಪ್ರಕರಣಗಳು ಅದರದ್ದೇ ಅಧ್ಯಾಯಗಳಷ್ಟೆ. ಹಾಗಾಗಿ ಈ ಪ್ರಕರಣಗಳನ್ನಿಟ್ಟುಕೊಂಡು ಟಿಪ್ಪುವನ್ನು ಹಿಂದೂ ಹಿತರಕ್ಷಕ ಅನ್ನುವಂತೆಯೂ ಇಲ್ಲ; ಅವು ಆತ ಹಿಂದೆ ಹಿಂದೂಗಳ, ಹಿಂದೂ ದೇವಾಲಯಗಳ ಮೇಲೆ ಎಸಗಿದ್ದ ಘನಘೋರ ಅತ್ಯಾಚಾರವನ್ನು ಮರೆಸುವುದೂ ಇಲ್ಲ. ಜೊತೆಗೆ ಈ ಪ್ರಕರಣವನ್ನಿಟ್ಟುಕೊಂಡು  ಮರಾಠರನ್ನು ಖಂಡಿಸಲೂ ಸಾಧ್ಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ