ಪುಟಗಳು

ಶನಿವಾರ, ಆಗಸ್ಟ್ 20, 2022

ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು

 ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು


ಖಗೋಳ ಶಾಸ್ತ್ರಕ್ಕೆ ಪ್ರಾಚೀನ ಭಾರತದ ಕೊಡುಗೆ ಅಪಾರ. ಪ್ರಸಕ್ತ ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಗಮನಿಸಿದರೆ ಪ್ರಾಚೀನ ಭಾರತದಲ್ಲಿ ಮೂರು ಮಹತ್ತಾದ ಖಗೋಳ ವೀಕ್ಷಣಾಲಯಗಳಿದ್ದವು. ಮೆಹರೂಲಿ, ಉಜ್ಜಯಿನಿ ಹಾಗೂ ಮಹೋದಯಪುರಂಗಳಲ್ಲಿ ಈ ವೀಕ್ಷಣಾಲಯಗಳು ಸ್ಥಿತವಾಗಿದ್ದವು. ಮೆಹರೂಲಿಯಲ್ಲಿ ವರಾಹಮಿಹಿರ ವಿನ್ಯಾಸಗೊಳಿಸಿದ, ಶಕಪುರುಷ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ವೀಕ್ಷಣಾಲಯವಿತ್ತು. ಉಜ್ಜಯಿನಿಯ ವೀಕ್ಷಣಾಲಯವೂ ಬಹುಷಃ ವಿಕ್ರಮಾದಿತ್ಯನಿಂದಲೇ ನಿರ್ಮಿಸಲ್ಪಟ್ಟಿತ್ತು. ಉಜ್ಜಯಿನಿಯಲ್ಲಿ ಹಲವು ಬುದ್ಧಿವಂತ ತಲೆಗಳು ಒಟ್ಟುಗೂಡಿದ್ದವು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ೧ & ೨, ವಟೇಶ್ವರ ಮುಂತಾದ ಘಟಾನುಘಟಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಮಹೋದಯಪುರಂನಲ್ಲಿನ ವೀಕ್ಷಣಾಲಯವನ್ನು ಶಂಕರನಾರಾಯಣ ಎನ್ನುವ ವಿದ್ವಾಂಸ (~ ಸಾ.ಶ. 860) ವಿನ್ಯಾಸಗೊಳಿಸಿದ. ಹಲವು ಪರಿಚಿತ ವೀಕ್ಷಣಾ ಉಪಕರಣಗಳು ಇಲ್ಲಿದ್ದವು. ಆದರೆ ಈ ವೀಕ್ಷಣಾಲಯದ ಒಂದು ಇಟ್ಟಿಗೆಯೂ ಈಗ ಉಳಿದಿಲ್ಲ.


ಜ್ಯೋತಿಷ್ಯ ಮತ್ತು ಕಾಲಗಣನೆಗೆ ಅವಂತಿಯ ಕೊಡುಗೆ ಅನನ್ಯ. ಶಕಕರ್ತ ವಿಕ್ರಮಾದಿತ್ಯನ ಆಡಳಿತಕ್ಕೂ ಇದು ಒಳಪಟ್ಟಿತ್ತು. ಪ್ರಾಚೀನ ಮಾಲವವೇ ಅವಂತೀ. ಅದರ ಒಂದು ಭಾಗ ಉಜ್ಜಯಿನಿಯಾದರೆ ಇನ್ನೊಂದು ಮಾಹಿಷ್ಮತಿಯಾಗಿತ್ತು.ಜಗದ್ಗುರು ಶ್ರೀ ಶಂಕರಾಚಾರ್ಯರ ವೇದಾಂತ ಸಂವಾದ ನಡೆದುದು ಈ ಮಾಲವದಲ್ಲೇ. ಮಾಲವ ಜ್ಯೋತಿಷಿ ಹಾಗೂ ಖಗೋಳ ವಿಜ್ಣಾನಿಗಳ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು. ಉಜ್ಜಯಿನಿಯಲ್ಲಿದ್ದ ಖಗೋಳ ವೀಕ್ಷಣಾಲಯವೂ ಅದಕ್ಕೆ ಕಾರಣ. ಬಹುಷಃ ವಿಕ್ರಮಾದಿತ್ಯನೇ ಇದನ್ನು ಸ್ಥಾಪಿಸಿರಬಹುದು. ಸೂರ್ಯಕೇಂದ್ರಿತ ಅವಧಿಗಳಿಗೆ ತ್ರಿಕೋನಮಿತಿಯ ಕೋಷ್ಟಕಗಳಿಂದ ಹಿಡಿದು ಅಕ್ಷಾಂಶ ಮತ್ತು ರೇಖಾಂಶ ನಿರ್ಣಯದ ತತ್ವಗಳವರೆಗೆ ಎಲ್ಲವೂ ಇಲ್ಲಿಂದ ಬಂದವು. ಶೂನ್ಯ ಡಿಗ್ರಿ ಮಧ್ಯರೇಖೆ ಹಾದು ಹೋಗುವುದೇ ಇಲ್ಲಿ. ಉಜ್ಜಯಿನಿ ಮಹಾಕಾಲನ ನೆಲೆ ಆಗಲೂ ಕಾರಣವೇ ಅದು. ಸೃಷ್ಟಿಯ ಆರಂಭದಲ್ಲೇ ಈ ನಗರವಿತ್ತು (ಸ್ಕಂದಪುರಾಣ ಉಜ್ಜಯಿನಿಯನ್ನು ಪ್ರತಿಕಲ್ಪ ಎಂಬುದಾಗಿ ಹೆಸರಿಸಿದೆ.) ಎನ್ನುವ ಪ್ರತೀತಿಗೂ ಅದೇ ಕಾರಣ. ಅಂತಹಾ ಮಧ್ಯಬಿಂದುವಿನಲ್ಲಿ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದ್ದೂ ಪ್ರಾಚೀನ ಭಾರತೀಯರ ಅಪ್ರತಿಮ ಖಗೋಳ ಜ್ಣಾನಕ್ಕೆ ಸಾಕ್ಷಿ.


ಉಜ್ಜಯಿನಿಯ ವಿಕ್ಷಣಾಲಯದಿಂದ ಹೊರಬಿದ್ದ ಅದ್ವಿತೀಯ ಸಂಶೋಧನೆಗಳಿಂದ ಭಾರತೀಯ ಕೃಷಿ ಮತ್ತು ವ್ಯಾಪಾರಗಳು ನಿಖರವಾದ ಸಂಚರಣೆ ಹಾಗೂ ದಿನಸೂಚಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದವು. ಅರಬ್ಬರು ಹಾಗೂ ಯೂರೋಪಿಯನ್ನರು ಇಲ್ಲಿಂದಲೇ ಖಗೋಳ ವಿಜ್ಞಾನದ ತಂತ್ರಗಳನ್ನು ಪಡೆದರು.  ಭೋಜರಾಜನ ತರುವಾಯ ಉಜ್ಜಯಿನಿ ದುರ್ಬಲವಾಯಿತು. ದೆಹಲಿಯನ್ನು ಆಳುತ್ತಿದ್ದ ಇಲ್ತಮಿಶ್ ಉಜ್ಜಯಿನಿಯ ಮೇಲೆ ದಾಳಿ ಮಾಡಿ ಮಹಾಕಾಲನ ಮಂದಿರವನ್ನೂ , ಖಗೋಳ ವೀಕ್ಷಣಾಲಯವನ್ನೂ ನಾಶ ಮಾಡಿ ಚಿನ್ನದ ಮಹಾಕಾಲನ ಮೂರ್ತಿಯನ್ನು ದೆಹಲಿಗೆ ಹೊತ್ತೊಯ್ಯುತ್ತಾನೆ. ಉಜ್ಜಯಿನಿಯನ್ನು ಲೂಟಿಗೈದು ಮಹಾಕಾಲನ ದೇವಾಲಯದ ಸ್ಥಳದಲ್ಲೇ ಮಸೀದಿಯನ್ನೂ ನಿರ್ಮಿಸುತ್ತಾನೆ. ಶಕಪುರುಷ ವಿಕ್ರಮನ ದೊಡ್ಡದಾದ ಕಂಚಿನ ಪ್ರತಿಮೆಯೊಂದನ್ನು ಈ ವೀಕ್ಷಣಾಲಯದಲ್ಲಿ ಖಗೋಳ ಶಾಸ್ತ್ರಜ್ಞರು ಬಳಸಿದ್ದರು. ಇಲ್ತಮಿಶ್ ಅವಮಾನಿಸಲೆಂದೇ ಅದನ್ನು ದೆಹಲಿಗೆ ಕೊಂಡೊಯ್ದು ಒಡೆದು ಹಾಕಿದ. ಅಬು ಉಮ್ರ್‌ನ ತಬ್ಕತ್-ಇ-ನಾಸಿರಿ ಇಲ್ತುಮಿಶ್‌ನಿಂದ ಉಜ್ಜಯಿನಿಯ ನಾಶವನ್ನು ದಾಖಲಿಸಿದೆ. ಜಲಾಲುದ್ದೀನ್ ಫಿರೋಜ್ ಶಾ ಖಿಲ್ಜಿ ಎರಡೆರಡು ಬಾರಿ ದಾಳಿ ಮಾಡಿ ಅಳಿದುಳಿದ ದೇವಾಲಯಗಳನ್ನು ನಾಶಮಾಡಿ ನಗರವನ್ನು ನರಕ ಸದೃಶಗೊಳಿಸುತ್ತಾನೆ. ಬಳಿಕ ಹಲವು ಮುಸ್ಲಿಮ್ ರಾಜರುಗಳ ಆಡಳಿತವನ್ನು ಕಂಡ ಉಜ್ಜಯಿನಿ ನಲುಗಿ ಹೋಯಿತು.


ಮುಂದೆ 1725ರಲ್ಲಿ ರಾಜಾ ಜಯಸಿಂಹ ಇಲ್ಲಿನ ಖಗೋಳ ವೀಕ್ಷಾಣಾಲಯವನ್ನು ಪುನರುಜ್ಜೀವನಗೊಳಿಸಿದ. ಖಗೋಳ ಶಾಸ್ತ್ರಕ್ಕೆ ಈತನ ಕೊಡುಗೆ ಅನನ್ಯ. ಖಗೋಲಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಜಯಸಿಂಹ ಪಂಚಾಂಗ ಪರಿಷ್ಕರಣೆ, ಗ್ರಹಗಳ ಚಲನಾಧ್ಯಯನ, ಆಕಾಶಕಾಯಗಳ ವೀಕ್ಷಣೆಯನ್ನು ಚೆನ್ನಾಗಿ ಬಲ್ಲವನಾಗಿದ್ದುದು ಮಾತ್ರವಲ್ಲದೆ ಅವುಗಳ ಕಲಿಕೆಗೆ ಪ್ರೋತ್ಸಾಹವನ್ನೂ ಕೊಟ್ಟಿದ್ದ. ಯೂಕ್ಲಿಡ್‌ನ‌ ಜ್ಯಾಮಿತಿಯ ಗ್ರಂಥ, ಟಾಲೆಮಿಯ ರಸಶಾಸ್ತ್ರಗ್ರಂಥ, ಜಾನ್‌ ನೇಪಿಯರ್‌ನ ಕೃತಿಗಳನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅವನಿಗೆ ಪ್ರಿಯವಾದ ಹವ್ಯಾಸಗಳಾಗಿದ್ದವು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ಸ್ವತಃ ತಯಾರಿಸುತ್ತಿದ್ದ. ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಜಂತರ್ ಮಂತರ್ ಬಯಲು ಖಗೋಳವೀಕ್ಷಣಾಲಯದಲ್ಲಿರುವ ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ ಸೂರ್ಯಯಂತ್ರವನ್ನು ನಿರ್ಮಿಸಿದವ ಜಯಸಿಂಹನೇ. ಕಲ್ಲು, ಇಟ್ಟಿಗೆ ಸುಣ್ಣಗಾರೆ, ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆ ಎಂಥವರನ್ನೂ ಬೆರಗಾಗಿಸುತ್ತದೆ. ದೆಹಲಿಯ ಜಂತರ್ ಮಂತರ್, ಮಥುರಾ, ಉಜ್ಜಯಿನಿ, ವಾರಾಣಸಿಗಳಲ್ಲಿ ಖಗೋಲ ವೀಕ್ಷಣಾಲಯಗಳನ್ನು ತಾನೇ ರೂಪಿಸಿ ನಿರ್ಮಿಸಿದ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಯಾರೇ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಗಳ ಕುರಿತು ಅಧ್ಯಯನ ನಡೆಸಬಹುದಿತ್ತು. ದೇಶ-ವಿದೇಶಗಳ ವಿದ್ವಾಂಸರನ್ನು ಕರೆಸಿ ಗೋಷ್ಠಿ ನಡೆಸುತ್ತಿದ್ದ. ಮಧ್ಯ ಏಷ್ಯಾ ಮತ್ತು ಯೂರೋಪುಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಗಳನ್ನು, ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದಲ್ಲದೆ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ. ಅರಬ್ ಹಾಗೂ ಐರೋಪ್ಯ ಖಗೋಲಶಾಸ್ತ್ರಾಧ್ಯಯನಕ್ಕೆ ಭಾರತೀಯ ಜ್ಯೋತಿರ್ವಿದ್ಯೆಯನ್ನು ಬೆಸೆದುದು ಅವನ ಬಹುದೊಡ್ಡ ಸಾಧನೆ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮ ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಜನಸಾಮಾನ್ಯರಿಗೆಂದೇ ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಉದಯವಾಗುವ ಹಾಗೂ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.


ಜಂತರ್ ಎಂದರೆ ಯಂತ್ರ, ಮಂತರ್ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ, ನಾರೀ ವಲಯ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್ ಯಂತ್ರ, ಧ್ರುವದರ್ಶಿಕೆ ಪಟ್ಟಿಕೆ, ಷಷ್ಠಾಂಶ ಯಂತ್ರ, ಛಾಯಾಯಂತ್ರ, ದಕ್ಷಿಣಾವೃತ್ತಿ ಯಂತ್ರ ಮುಂತಾಗಿ ಹಲವು ವಿವಿಧ ಉಪಕರಣಗಳು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲಿದ್ದವು. ಜಯಪ್ರಕಾಶ ಯಂತ್ರದಲ್ಲಿ ನಿಮ್ನ ಅರ್ಧವೃತ್ತಾಕಾರದ ಭಾಗಗಳೆರಡು ಸರದಿಯಲ್ಲಿ ಗಂಟೆಗೊಂದರಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸ್ಥಳೀಯ ಕಾಲವನ್ನು, ಸೂರ್ಯನ ಸ್ಥಾನ, ಸಂಕ್ರಾಂತಿ ವೃತ್ತ ಮತ್ತು ಇಲ್ಲಿ ಗುರುತು ಹಾಕಿರುವ ರಾಶಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಸಹಾಯದಿಂದ ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎನ್ನುವುದನ್ನು ತಿಳಿಯಬಹುದು. ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್ 22 ಹಾಗೂ ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ ನೇರವಾಗಿ ಬೀಳುವ ಹಾಗೂ ಮಾರ್ಚ್ 21 ಮತ್ತು ಸೆಪ್ಟೆಂಬರ್ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವ ಕಾಲಗಣನೆಯನ್ನು ತೋರಿಸುತ್ತದೆ. ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿಂದ ಕೂಡಿದುದೇ ಮಿಶ್ರಯಂತ್ರ. ವಿರಾಟ್ ಸಾಮ್ರಾಟ್ ಯಂತ್ರ ದೃಕ್ಸಿದ್ಧಿ ಕಾಲವನ್ನು ಸೂಚಿಸುತ್ತದೆ. ಇದು ಕೇವಲ ಎರಡು ಸೆಕೆಂಡ್ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲವನ್ನು ತೋರಿಸುತ್ತದೆ. ಇದರಲ್ಲಿರುವ ಷಷ್ಠಾಂಶವೆಂಬ ವೃತ್ತಖಂಡಾಕೃತಿಯ ಮೇಲೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ಸೂಚಿಸುತ್ತದೆ. ದುಂಡನೆಯ ಕಂಬವೊಂದು ದಿಗಂಶವನ್ನು, ಛಾಯಾ ಯಂತ್ರ ಕಾಲವನ್ನೂ ತೋರಿಸುತ್ತವೆ. ಈ ಯಂತ್ರದಿಂದ ಸೂರ್ಯನ ಘಂಟಾವೃತ್ತಾಂಶವನ್ನು ತಿಳಿಯಬಹುದು. ಧ್ರುವ ನಕ್ಷತ್ರವನ್ನು ನೋಡಲು ಇರುವ ಧ್ರುವದರ್ಶಿಕೆ ಪಟ್ಟಿಕೆಯಿಂದ ಹನ್ನೆರಡು ರಾಶಿಗಳ ಸ್ಥಾನ ಹಾಗೂ ಸಮಭಾಜಕ ವೃತ್ತದಿಂದ ಸೂರ್ಯ ಯಾವ ದಿಕ್ಕಿನಲ್ಲಿ, ಯಾವ ಕೋನದಲ್ಲಿರುವನೆಂದೂ ತಿಳಿಯಬಹುದು. ರಾಮಯಂತ್ರ ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಸೂಚಿಸುತ್ತದೆ. ಉಜ್ಜಯಿನಿ ಮೊದಲಿನಿಂದಲೂ ಖಗೋಳಶಾಸ್ತ್ರ ಕೇಂದ್ರವಾಗಿಯೇ ಇತಿಹಾಸ ಪ್ರಸಿದ್ಧ. ಅಲ್ಲಿ ಜಯಸಿಂಹ ನಿರ್ಮಿಸಿದ್ದ ವೀಕ್ಷಣಾಲಯ ಬಹುತೇಕ ಶಿಥಿಲವಾಗಿದೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯವೂ ಈಗ ಸಂಪೂರ್ಣವಾಗಿ ನಾಶವಾಗಿದೆ.


ಭಾಸ್ಕರ ಉಜ್ಜಯಿನಿಯ ವೀಕ್ಷಣಾಲಯದ ಮುಖ್ಯಸ್ಥನಾಗಿದ್ದ. ಆತ ಕಾಲವಾದದ್ದು ಸಾ.ಶ. 1185ರಲ್ಲಿ. ಸಾ.ಶ. 1233ರಲ್ಲಿ ತುರ್ಕರು ಉಜ್ಜಯಿನಿಯನ್ನು ನಾಶಪಡಿಸಿದರು. ನಮ್ಮ ಅದೃಷ್ಟಕ್ಕೆ ಭಾಸ್ಕರ ಆ ಮೊದಲೇ ಇದ್ದ ಕಾರಣ ಆತ ಹಾಕಿದ ತಳಪಾಯದಿಂದ ಮಾಧವ ಕಲನಶಾಸ್ತ್ರ(ಕ್ಯಾಲ್ಕುಲಸ್)ವನ್ನು ಅಭಿವೃದ್ಧಿಪಡಿಸುವಂತಾಯಿತು. ಆರ್ಯಭಟೀಯ ಗಣಿತೀಯ ಶಾಲೆಯು ತ್ರಿಕೋನಮಿತಿಯ ಕೋಷ್ಟಕಗಳನ್ನು ಬಳಸುತ್ತಿತ್ತು. ಆರ್ಯಭಟನ ಸೈನ್-ವ್ಯತ್ಯಾಸ ಕೋಷ್ಟಕವು 1 ನೇ ನಿಮಿಷದವರೆಗೆ ನಿಖರವಾಗಿತ್ತು. ವಟೇಶ್ವರ (ಸಾ.ಶ. 904) ಇದರ ನಿಖರತೆಯನ್ನು 2ನೇ ನಿಮಿಷಕ್ಕೆ ತಳ್ಳಿದ. ಬಳಿಕ ಇದು ಮುಂದುವರೆದದ್ದು ಕೇರಳದಲ್ಲಿ. ಆರ್ಯಭಟನ ಅತ್ಯಂತ ಉತ್ಕಟ ಅನುಯಾಯಿಗಳು ಕೇರಳದಲ್ಲಿದ್ದರು. ಅಲ್ಲಿ ಅನೇಕ ವ್ಯಾಖ್ಯಾನಗಳನ್ನು ರಚಿಸಲಾಯಿತು. ಆದರೆ ಹೆಚ್ಚಿನ ಆರಂಭಿಕ ಕೇರಳದ ಗಣಿತಜ್ಞರ ಕೃತಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಳೆದುಹೋಗಿವೆ.

             ಹರಿದತ್ತ (ಸಾ.ಶ.683), ಗೋವಿಂದಸ್ವಾಮಿ (ಸಾ.ಶ.830CE), ಶಂಕರನಾರಾಯಣ (ಸಾ.ಶ.869CE), ಜಯದೇವ (ಸಾ.ಶ.950CE), ಉದಯದಿವಾಕರ (ಸಾ.ಶ.1073CE) ಇವರಲ್ಲಿ ಪ್ರಮುಖರು. ಮಹೋದಯಪುರಂನಿಂದ ಆಳುತ್ತಿದ್ದ ಕೇರಳದ ಚೇರ ಚಕ್ರವರ್ತಿಯಾದ ಸ್ಥಾಣು ರವಿ ಕುಲಶೇಖರ (ಸಾ.ಶ.844-883)ನಿಗೆ ಸೇವೆ ಸಲ್ಲಿಸುತ್ತಿದ್ದ ಗೋವಿಂದಸ್ವಾಮಿ 3ನೇ ನಿಮಿಷಕ್ಕೆ ಸೈನ್-ವ್ಯತ್ಯಾಸ ಕೋಷ್ಟಕವನ್ನು ಸುಧಾರಿಸಲು ಪ್ರಯತ್ನಿಸಿದ. ಆತನ ದೂರದ ಉತ್ತರಾಧಿಕಾರಿ ಮಾಧವ ಇದನ್ನು ಸಾಧಿಸಿದ. ಆತ  ಇಂದು ನ್ಯೂಟನ್-ಗಾಸ್ ಇಂಟರ್ಪೋಲೇಷನ್ (2 ನೇ ಕ್ರಮ) ಎಂದು ಕರೆಯಲ್ಪಡುವುದನ್ನು ಕಂಡುಹಿಡಿದ. ಗೋವಿಂದಸ್ವಾಮಿಯ ಶಿಷ್ಯನೇ ಶಂಕರನಾರಾಯಣ. ಈ ದಾರ್ಶನಿಕ ವ್ಯಕ್ತಿ ಮಹೋದಯಪುರಂನಲ್ಲಿ ದಕ್ಷಿಣ ಭಾರತದ ಮೊದಲ ಭವ್ಯವಾದ ವೀಕ್ಷಣಾಲಯವನ್ನು ನಿರ್ಮಿಸಿದ. 'ರವಿವರ್ಮ ಯಂತ್ರ ವಲಯ' ಎಂದು ಕರೆಯಲ್ಪಡುವ ಇದು ಅದ್ಭುತವಾಗಿತ್ತು, ಅತ್ಯುತ್ತಮವಾದ ಉಪಕರಣಗಳೊಂದಿಗೆ (ರಾಶಿ ಚಕ್ರ, ಜಲೇಸ ಸೂತ್ರ, ಗೋಲಯಂತ್ರ ಇತ್ಯಾದಿ) ಸಂಪೂರ್ಣವಾಗಿ ಸುಸಜ್ಜಿತವಾಗಿತ್ತು. ಶಂಕರನಾರಾಯಣ ಸಮಯ ಪಾಲನೆ/ಸೂಚನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಯಂತ್ರವಲಯದಿಂದ ಸೂಚಿಸಿದಂತೆ ಪ್ರತಿ ಘಟಿಕ (24 ನಿಮಿಷಗಳು) ಅಥವಾ ಅರ್ಧ ಮುಹೂರ್ತವನ್ನು ಹಾದುಹೋಗುವಾಗ, ಸರಿಯಾದ ಸಮಯವನ್ನು ಸಾರ್ವಜನಿಕರಿಗೆ ತಿಳಿಸಲು ಮಹೋದಯಪುರಂನಾದ್ಯಂತ ಗಂಟೆಗಳನ್ನು(ಕೂಟು) ಬಾರಿಸಲು ಸೈನಿಕರಿಗೆ ತರಬೇತಿ ನೀಡಲಾಗಿತ್ತು.


ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. 


ದೇವಾಲಯಗಳ ಸಮುಚ್ಚಯದ ಮಧ್ಯದಲ್ಲಿ ಈ ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗಿತ್ತು. ಸೂರ್ಯನು ಭೂಮಧ್ಯರೇಖೆಯಲ್ಲಿ ಬರುವ ದಿನ ಹಗಲು ಮತ್ತು ರಾತ್ರಿ ಸಮಾನವಾಗಿರುತ್ತವೆ. ಆ ದಿನ ಮಧ್ಯಾಹ್ನ ೧೨ ಗಂಟೆ ೨೫ ನಿಮಿಷಕ್ಕೆ ಕರಾರುವಕ್ಕಾಗಿ ಈ ಸ್ತಂಭದ ನೆರಳು ಭೂಮಿಯ ಮೇಲೆ ಬಿದ್ದಾಗ ಸ್ತಂಭದ ೧೦೮ ಅಡಿ ಉದ್ದದ ನೆರಳು ಬೀಳುತ್ತದೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಗಳು ಹಾಗೂ ೨೭ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರಕ್ಕೆ ನಾಲ್ಕು ಪಾದಗಳಿದ್ದು, ಒಂದೊಂದು ರಾಶಿಚಕ್ರದಲ್ಲಿ ಎರಡೂ ಕಾಲು ನಕ್ಷತ್ರಗಳಿರುವಂತೆ ವಿಭಾಗಿಸಲಾಗಿದೆ. ಅಂದರೆ ೨೭X೪=೧೦೮ ನಕ್ಷತ್ರ ಪಾದಗಳು. ಮೆಹರೂಲಿಯ ಮೇರು ಸ್ತಂಭದಲ್ಲಿ ೨೭ ದೀಪಸ್ತಂಭಗಳಿವೆ. ಸ್ತಂಭಗಳ ಸುತ್ತಲೂ ನಕ್ಷತ್ರ ವೀಕ್ಷಣೆಗಾಗಿ ೨೭ ಭವನಗಳಿದ್ದವು. ಇವುಗಳನ್ನು ತಾನೇ ಸ್ವತಃ ನಾಶಮಾಡಿದುದಾಗಿ ಕುತುಬುದ್ದೀನ್ ಐಬಕ್ ಕುವ್ವತ್-ಉಲ್-ಇಸ್ಲಾಮ್ ಮಸೀದಿಯ ಪೂರ್ವ ದ್ವಾರದ ಶಿಲಾಶಾಸನದಲ್ಲಿ ಹೇಳಿಕೊಂಡಿದ್ದಾನೆ. ಈ ಮನಾರ್'ಗೆ ಹನ್ನೆರಡು ಮುಖಗಳಿವೆ. ಅವು ಹನ್ನೆರಡು ರಾಶಿ ಚಕ್ರಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲಿರುವ ಏಳು ಮಹಡಿಗಳು ಏಳು ವಿಧದ ಸ್ವರ್ಗಗಳನ್ನು ಸೂಚಿಸುತ್ತವೆ. ಮನಾರ್ ತನ್ನ ಹಿಂದಿರುವ ನೀರಿನಲ್ಲಿ ನಕ್ಷತ್ರಗಳ ಆಧಾರದಲ್ಲಿ ನೆರಳನ್ನು ಬೀಳಿಸುತ್ತಿತ್ತು. ಆಗಸವನ್ನು ನಿರಂತರ ನೋಡುತ್ತಾ ಕಣ್ಣುಗಳಿಗೆ ಹಾನಿಯಾಗದಿರಲೆಂದು ಸುತ್ತಲೂ ಈ ಕೊಳಗಳ ನಿರ್ಮಾಣವಾಗಿತ್ತು. ಅಂದರೆ 27 ಮಂದಿರಗಳ ಮೇಲೆ ನಕ್ಷತ್ರಗಳ ಆಧಾರದಲ್ಲಿ ಕಿರಣಗಳು ಹಾದು ಹೋಗುತ್ತಿದ್ದವು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ