ಪುಟಗಳು

ಗುರುವಾರ, ಮೇ 18, 2023

ಮೌಲ್ಯಗಳ ಅವಸಾನ ಮತಾಂಧತೆಗೆ ಸೋಪಾನ

 


ಮೌಲ್ಯಗಳ ಅವಸಾನ ಮತಾಂಧತೆಗೆ ಸೋಪಾನ


ಜನವರಿ ಮಧ್ಯಭಾಗದಲ್ಲಿ ಮಧ್ಯಪ್ರದೇಶವು ಅನಿರೀಕ್ಷಿತ ಮತೀಯ ಘರ್ಷಣೆಗೆ ಸಾಕ್ಷಿಯಾಯಿತು. ಪಂಜಾಬಿನ ನಿಹಾಂಗ್(ನೀಲಿ ನಿಲುವಂಗಿಯ, ಖಡ್ಗ, ಈಟಿ ಹಿಡಿದ, ಪೇಟ ಧರಿಸಿದ ಸಿಖ್ ಪಡೆ)ಗಳು ಸಿಂಧಿ ಟಿಕಾನೋ, ಮನೆಗಳಿಗೆ ನುಗ್ಗಿ ಸಿಖ್ಖರ "ರಿಹತ್ ಮರ್ಯಾದಾ"(ಸಿಖ್‍ ಜೀವನಪದ್ದತಿಯ ನಿಯಮ & ಸಂಪ್ರದಾಯಗಳು)ಕ್ಕೆ ವಿರುದ್ಧವಾಗಿ "ಗುರುಗ್ರಂಥ ಸಾಹಿಬ್" ಅನ್ನು ಇಡುವುದರ ಕುರಿತು ಗದ್ದಲವೆಬ್ಬಿಸಿದರು. ಸಮಸ್ಯೆಯ ಪರಿಹಾರಕ್ಕಾಗಿ ಇಂದೋರ್ ಸಿಂಗ್ ಸಭಾ ಮಧ್ಯಪ್ರವೇಶಿಕೆಯ ಪ್ರಯತ್ನವೂ ವಿಫಲವಾಯಿತು. ಈ ಘಟನೆಯಿಂದ ನೊಂದ ಸಿಂಧಿಗಳು ಸಂತ ಸಮಾಜದ ನಿರ್ದೇಶನದೊಂದಿಗೆ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಲು ತಮ್ಮೊಳಗೇ ನಿರ್ಧರಿಸಿದರು. ಜೊತೆಗೆ ಶ್ರೀಮದ್ಭಗವದ್ಗೀತೆ ಹಾಗೂ ರಾಮಾಯಣದ ಪ್ರತಿಗಳನ್ನು ಇಂದೋರ್‌ನಲ್ಲಿರುವ ಟಿಕಾನೋದಲ್ಲಿ ಇಡಬೇಕೆಂದು ನಿರ್ಧರಿಸಿದರು. ಅಕಾಲ್ ತಖ್ತ್ ಮತ್ತು ಸಿಂಧಿ ಸಮುದಾಯದ ಪ್ರತಿನಿಧಿಗಳ ನಡುವೆ ಈ ವಿಷಯದ ಬಗ್ಗೆ ಸಭೆ ನಡೆಯಿತಾದರೂ ಅಜ್ಮೀರ್, ರಾಜಸ್ಥಾನಗಳಲ್ಲಿನ ಸಿಂಧಿಗಳೂ ಕೂಡಾ ಇದಕ್ಕೆ ದನಿಗೂಡಿಸಿ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಿದರು. 


ಸಿಂಧಿಗಳ ಈ ನಿರ್ಧಾರ ಕೇವಲ ಒಂದು ವಾರದಿಂದ ನಿಹಾಂಗ್'ಗಳು ಎಬ್ಬಿಸಿದ ಗದ್ದಲದಿಂದ ಉಂಟಾದುದಲ್ಲ. ಕೆಲವು ಸಿಖ್ ಮತಾಂಧರು ನಿಯಮಿತವಾಗಿ ಸಿಂಧಿ ದೇವಾಲಯಗಳಿಗೆ ಪ್ರವೇಶಿಸಿ ಅವರ ಸಂಪ್ರದಾಯಗಳನ್ನು ನಿಂದಿಸುತ್ತಾ, ಕತ್ತಿಗಳನ್ನು ಝಳಪಿಸುತ್ತಾ ಅವರನ್ನು 'ಪಾಖಂಡಿ'ಗಳೆಂದು ಕರೆಯುತ್ತಿದ್ದುದನ್ನು ಕಂಡು ಸಿಂಧಿ ಸಮುದಾಯ ರೋಸಿ ಹೋಗಿತ್ತು. ಅದರಲ್ಲೂ ಕಿರುಕುಳ ನೀಡಿದ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ನಿಹಾಂಗ್'ಗಳ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮಕೈಗೊಳ್ಳಲಿಲ್ಲ. ಯಾರ ಬೆಂಬಲದಿಂದ ಸಿಂಧಿ ಸಮಾಜಕ್ಕೆ ಸಹಾಯವಾಗಬಹುದಿತ್ತೋ, ಅಂತಹಾ ಸಿಂಧಿ ಸಮುದಾಯಕ್ಕೆ ಸೇರಿದ ಇಂದೋರ್‌ನ ಸಂಸದ ಶಂಕರ್ ಲಾಲ್ವಾನಿಯ ಪತ್ತೆಯೇ ಇರಲಿಲ್ಲ!


ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(SGPC)ಯಂತೂ ನಿಹಾಂಗ್'ಗಳ ಮತಾಂಧ ಕೃತ್ಯವನ್ನು ಬೆಂಬಲಿಸುವುದಿಲ್ಲವೆಂಬ ಹೇಳಿಕೆ ನೀಡುತ್ತಲೇ ತನ್ನ ಕಾರ್ಯಸೂಚಿಯನ್ನು ಸಾಧಿಸಲು ಯತ್ನಿಸುತ್ತಲೇ ಇದೆ. ಇಲ್ಲವಾದಲ್ಲಿ ಹಿಂದೂ ಸಂಪ್ರದಾಯವನ್ನು ಅನುಸರಿಸುವ ಸಿಂಧಿಗಳನ್ನು "ಸೆಹಜ್‌ಧಾರಿ ಸಿಖ್‌ಗಳು" ಎಂದದು ಕರೆಯುತ್ತಿರಲಿಲ್ಲ. ಎಸ್.ಜಿ.ಪಿ.ಸಿಯ ಆಶಯದಂತೆ ಜುಲೇಲಾಲ್ ಜಿ ಮತ್ತು ಇತರ ದೇವತೆಗಳ ವಿಗ್ರಹಗಳನ್ನು ತೆಗೆದುಹಾಕಿ ತಮ್ಮ ದೇವಾಲಯಗಳನ್ನು ಗುರುದ್ವಾರಗಳಾಗಿ "ಪರಿವರ್ತಿಸಲು" ಭಾರತಾದ್ಯಂತ ಸಿಂಧಿಗಳು ನಿರಾಕರಿಸಿದ್ದಂತೂ ಎಸ್.ಜಿ.ಪಿ.ಸಿಗೆ ಮತ್ತಷ್ಟು ಮುಜುಗರವನ್ನು ಉಂಟುಮಾಡಿತು. ಅದರ ಇತ್ತೀಚಿನ ಹೇಳಿಕೆಯಲ್ಲಿ, ಎಸ್.ಜಿ.ಪಿ.ಸಿಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ, ನಿಹಾಂಗ್ ಗುಂಪುಗಳ ಕ್ರಮಗಳಿಂದ ತಮ್ಮ ಸಮಿತಿಯನ್ನು ದೂರವಿರಿಸಿಕೊಂಡರು. ಆದರೆ ರೆಹತ್ ಮರ್ಯಾದಾ ಅತ್ಯಗತ್ಯವಾಗಿದ್ದರೂ, "ಸೆಹಜ್‌ಧಾರಿ" ಸಿಖ್ಖರನ್ನು ಒಗ್ಗೂಡಿಸಬೇಕಾಗಿದೆ ಮತ್ತು ಸಿಖ್ ನಂಬಿಕೆಯಿಂದ ಅವರನ್ನು ದೂರ ತಳ್ಳಬಾರದು ಎನ್ನುತ್ತಾ ಬೆಣ್ಣೆಯಲ್ಲಿ ಕೂದಲೆಳೆದಂತೆ ತಮ್ಮ ಉದ್ದೇಶವನ್ನೂ ಸ್ಪಷ್ಟಪಡಿಸಿದರು!


ಸಿಂಧಿಗಳು ಮೂಲತಃ ಉದಾಸೀ ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಹಿಂದೂ ಪಂಗಡ. ಉದಾಸೀ ಎಂಬುದು ಉತ್ತರ ಭಾರತದ ಕಡೆ ಕಂಡುಬರುತ್ತಿದ್ದ ಹಿಂದೂ ಸಾಧುಗಳ ಒಂದು ಗುಂಪು. ಹದಿನೆಂಟನೇ ಶತಮಾನದ ವೇಳೆಗೆ ಉದಾಸೀಗಳು ಸಿಖ್ ಪವಿತ್ರಸ್ಥಳಗಳ ಮೇಲ್ವಿಚಾರಣೆಗಳನ್ನು ನೋಡಿಕೊಳ್ಳುತ್ತಾ ಸಿಖ್ ತತ್ವಗಳನ್ನು ನಿರ್ಧರಿಸುವ ಹಾಗೂ ಪ್ರಚಾರ ಮಾಡುವ ಮಹತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಆದಾಗ್ಯೂ ಅವರ ಮೂಲಸಂಪ್ರದಾಯ ಸಮುದಾಯದಲ್ಲಿ ಉಳಿದು ಬಂತು. ಅದೇ ಸಂಪ್ರದಾಯವನ್ನು ಅನುಸರಿಸುವ ಸಿಂಧಿಗಳ ಮೂಲವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಂದಿಗೂ ನೋಡಬಹುದು. ಶಿಕಾರ್ಪುರದ ಖತ್ವಾರಿ ದರ್ಬಾರ್ ಹಾಗೂ ಸುಕ್ಕೂರಿನಲ್ಲಿ ಸಿಂಧೂ ನದಿಯ ಮಧ್ಯದಲ್ಲಿರುವ ಸಾದ್ ಬೆಲೋ ನದಿ ದ್ವೀಪದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಕಾಣಬಹುದು. ಹೀಗಿದ್ದಾಗ್ಯೂ ಎಸ್.ಜಿ.ಪಿ.ಸಿ ಇವರನ್ನು 'ಸೆಹಜ್‌ಧಾರಿ ಸಿಖ್‌ಗಳು' ಎಂದು ಕರೆಯಲು ಏನು ಕಾರಣ? ಇದು ಅರ್ಥವಾಗಬೇಕಾದರೆ ನಾವು ಎಸ್.ಜಿ.ಪಿ.ಸಿಯ ರಚನೆಯ ಹಿಂದಿನ ಉದ್ದೇಶವನ್ನು ಅರಿಯಬೇಕು.


ಸಿಖ್ ಮತವನ್ನು ಹಿಂದೂ ಧರ್ಮದ ಯಾವುದೇ 'ಕುರುಹುಗಳಿಂದ' ಬೇರ್ಪಡಿಸುವ ದಶಕಗಳ ಪ್ರಯತ್ನದ ಫಲಿತಾಂಶವೇ ಎಸ್.ಜಿ.ಪಿ.ಸಿಯ ರಚನೆ! ವ್ಯಕ್ತಿಯೊಬ್ಬ ಮತವೊಂದನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸೆಹಜ್ದಾರಿ ಸಿಖ್ಖರ ವ್ಯಾಖ್ಯಾನವನ್ನು ಮೊದಲ ಬಾರಿಗೆ ಮೂಲ ಕಾಯಿದೆ(1925ರ ಕಾಯಿದೆ)ಗೆ ಸೇರಿಸಿದ್ದು 1944 ರಲ್ಲಿ, ಬ್ರಿಟಿಷ್ ಆಳ್ವಿಕೆಯಲ್ಲಿ. ಸಿಖ್  ಕುಟುಂಬಕ್ಕೆ ಸೇರದ, ಸಿಖ್ ಚಿಹ್ನೆಗಳನ್ನು ಧರಿಸದ ಆದರೆ ಗುರು ಗ್ರಂಥ ಸಾಹಿಬ್ ಹಾಗೂ ಸಿಖ್ ಗುರುಗಳಲ್ಲಿ ನಂಬಿಕೆ ಇರುವ ವ್ಯಕ್ತಿಯನ್ನು ಸೆಹಜ್ದಾರಿ ಎಂದು ಪರಿಚಯಿಸಿದ ಈ ಕಾಯಿದೆ ಸಿಖ್ ಆಡಳಿತ ಮಂಡಳಿಗಳ ಚುನಾವಣೆಗಳಲ್ಲಿ ಮತದಾನಕ್ಕೆ ಆತನಿಗೆ ಅವಕಾಶ ಕಲ್ಪಿಸಿತ್ತು. ಆದರೆ 2016ರಲ್ಲಿ ಕೇಂದ್ರ ಸರ್ಕಾರವು ಸಿಖ್ ಗುರುದ್ವಾರಗಳ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು ಸಿಂಧಿಗಳಿಗೆ ದುರಂತವಾಗಿ ಪರಿಣಮಿಸಿತು. ಇದರಿಂದಾಗಿ ಕಾಯಿದೆಯ ಅನ್ವಯದ ಪ್ರದೇಶಗಳಲ್ಲಿ(ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಚಂಡೀಗಢ) ಗುರುದ್ವಾರ ಆಡಳಿತ ಸಮಿತಿಯ ಚುನಾವಣೆಗಳಲ್ಲಿ ಸೆಹಜ್ಧಾರಿ ಸಿಖ್ಖರು ಮತ ಚಲಾಯಿಸುವಂತಿಲ್ಲ. ಈ ತಿದ್ದುಪಡಿಯು ಸುಮಾರು 70 ಲಕ್ಷ ಸದಸ್ಯರನ್ನು ಮತ ಚಲಾಯಿಸದಂತೆ ತಡೆಯಿತು.


ಎಸ್.ಜಿ.ಪಿ.ಸಿಯು ಸಿಖ್ ಯಾರು ಎಂಬುದನ್ನು ವ್ಯಾಖ್ಯಾನಿಸಲು, ಸಿಖ್ ರೆಹತ್ ಮರ್ಯಾದಾದಲ್ಲಿನ ಮಾರ್ಗಸೂಚಿಗಳನ್ನೇ ಅನುಸರಿಸುತ್ತದೆ. ಅದರ ಪ್ರಕಾರ ಯಾವುದೇ ವ್ಯಕ್ತಿ ಈ ಕೆಳಗಿನವುಗಳಲ್ಲಿ ನಂಬಿಕೆಯಿಟ್ಟಿದ್ದರೆ ಆತ ಸಿಖ್.


1. ಒಂದು ಅಮರ ಜೀವಿ.


2. ಗುರು ನಾನಕರಿಂದ ಗುರು ಗೋವಿಂದ ಸಿಂಗ್‌ವರೆಗಿನ ಹತ್ತು ಗುರುಗಳು.


3. ಗುರುಗ್ರಂಥ ಸಾಹಿಬ್.


4. ಹತ್ತು ಗುರುಗಳ ವಚನ ಹಾಗೂ ಬೋಧನೆಗಳು.


5. ಹತ್ತನೇ ಗುರುವಿನಿಂದ ನೀಡಲ್ಪಟ್ಟ ದೀಕ್ಷಾ ನಿಯಮಗಳು, ಮತ್ತು ಬೇರೆ ಯಾವುದೇ ಮತಕ್ಕೆ ನಿಷ್ಠೆ ಹೊಂದಿಲ್ಲದದಿರುವುದು.


"ಸೆಹಜ್ ಧಾರಿ" ಪದದ ಆರಂಭಿಕ ಉಲ್ಲೇಖ ಸಿಗುವುದು ಖಾಲ್ಸಾ ದಿವಾನ್‌ನ ಆದೇಶದ ಮೇರೆಗೆ 1907ರಲ್ಲಿ ಅಂಗೀಕರಿಸಿದ ಆನಂದ್ ವಿವಾಹ ಕಾಯಿದೆ(ಸಿಖ್ ವಿವಾಹ ಕಾಯಿದೆ)ಯಲ್ಲಿ. ಈ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ಪಂಜಾಬ್ ಶಾಸನ ಸಭೆಯಲ್ಲಿ ವಿಶೇಷವಾಗಿ 'ಸಿಖ್' ವ್ಯಾಖ್ಯಾನದ ಮೇಲೆ ಬಲವಾದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಸೆಹಜ್‌ಧಾರಿಗಳು, ಕೇಶಧಾರಿಗಳು ಮತ್ತು ಯಾರೆಲ್ಲಾ ಶ್ರೀ ಗುರುಗ್ರಂಥ ಸಾಹಿಬ್‌ನ ಬೋಧನೆಗಳನ್ನು ನಂಬುತ್ತಾರೋ ಅವರೆಲ್ಲರನ್ನೂ ಸಿಖ್ ಮತದಲ್ಲಿ ಈ ಮಸೂದೆಯು ಸೇರಿಸುತ್ತದೆ ಎಂದು ಸರ್ಕಾರವು ಬಲವಂತವಾಗಿ ಸದನದಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕಾಯಿತು. ಈ ಕಾಯಿದೆಯ ಅನುಷ್ಠಾನಕ್ಕೆ ನಿಜವಾಗಿ ಸಿಖ್ ಹಾಗೂ ಬ್ರಿಟಿಷರ ನಡುವಿನ ಸಂಬಂಧವೇ ಮುಖ್ಯವಾಗಿತ್ತು. ಬ್ರಿಟಿಷರಿಗೆ ಎರಡು ಕಾರಣಕ್ಕೆ ಇದರ ಅಗತ್ಯವಿತ್ತು. ಒಂದು ತನ್ನ ಸಮರ ಜನಾಂಗದ ಸಿದ್ಧಾಂತವನ್ನು ಶಾಶ್ವತಗೊಳಿಸಲು ಮತ್ತು ಸಿಖ್ಖರ ನಿರ್ದಿಷ್ಟ ಜಾತಿಗಳಿಂದಷ್ಟೇ ಸೈನ್ಯಕ್ಕೆ ನೇಮಕಗೊಳಿಸಿಕೊಳ್ಳಲು; ಇನ್ನೊಂದು ಸುಧಾರಣೆಯ ರೂಪದಲ್ಲಿ ಸಿಖ್ಖರಿಗೆ ಚುನಾವಣೆಗಳಲ್ಲಿ ಕೋಮು ಆಧಾರಿತ ಪ್ರಾತಿನಿಧ್ಯ ಕೊಡುವ ರೂಪದಲ್ಲಿ ಮಹಾಯುದ್ಧದ ಬಳಿಕವಷ್ಟೇ ಬೆಳಕಿಗೆ ಬಂತು; ಇದನ್ನು ಮುನ್ನಡೆಸಿದ್ದು ಖಾಲ್ಸಾ ದಿವಾನ್ ಮತ್ತು ಎಸ್.ಜಿ.ಪಿ.ಸಿ. ಹೀಗೆ ತಮ್ಮ ಒಡೆದಾಳುವ ಕುಟಿಲ ಬಾಣದ ಮೂಲಕ ಬ್ರಿಟಿಷರು ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆದಿದ್ದರು.


ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.


ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಈಗ ಎಸ್.ಜಿ.ಪಿ.ಸಿಯಂತಹಾ ಸಂಸ್ಥೆಗಳಿಂದಾಗಿ ಸಾಮಾನ್ಯ ಸಿಖ್ಖರಲ್ಲೂ ಈ ಮತಾಂಧತೆ ಬೆಳೆಯುವಂತಾಗಿದೆ.


ಆದಾಗ್ಯೂ ಎಸ್.ಜಿ.ಪಿ.ಸಿಯ ರಚನೆಯಲ್ಲಿ ಅಕಾಲಿದಳ ಯಶಸ್ವಿಯಾದ ಬಳಿಕ "ನಿಜವಾದ ಸಿಖ್ಖರು" ಮಾತ್ರ ಸಿಖ್ಖರನ್ನು ನಿಯಂತ್ರಿಸಬೇಕೆಂಬ ಭಾವನೆ ಮೊಳೆದು ಸಮುದಾಯ ವಿಭಜನೆಯತ್ತ ಹೊರಳಿತು. 2003ರಲ್ಲಿ ಶಿರೋಮಣಿ ಅಕಾಲಿದಳ ಕೇಂದ್ರ ಗೃಹ ಸಚಿವಾಲಯದ ಮೇಲೆ ಪ್ರಭಾವ ಬೀರಿ ಸೆಹಜ್ ಧಾರಿಗಳನ್ನು ಹೊರಗಿಡಲು ಯತ್ನಿಸಿತಾದರೂ ನ್ಯಾಯಾಲಯದಲ್ಲಿ ಅದರ ಆಟ ನಡೆಯಲಿಲ್ಲ. ಇದೇ ಎಸ್.ಜಿ.ಪಿ.ಸಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಉತ್ಕರ್ಷದ ಅವಧಿಯಲ್ಲಿ ನಿರಂಕಾರಿ ಸಂತ ಮಿಷನ್ ಅನುಯಾಯಿಗಳು ಸಿಖ್ಖರಲ್ಲ ಎಂದು ಘೋಷಿಸಿತ್ತು! ನಾಮಧಾರಿಗಳ ಪದ್ದತಿಯನ್ನು ಉಗ್ರಗಾಮಿಗಳು ಆಗಾಗ್ಗೆ ಕೆಣಕುವುದರಿಂದ ಎಸ್.ಜಿ.ಪಿ.ಸಿ ವ್ಯವಹಾರಗಳು ಸದಾ ಗೊಂದಲಮಯವೇ. ಆದರೆ 2016ರ ಕಾಯಿದೆಯ ತಿದ್ದುಪಡಿಯ ಬಳಿಕ ಅಕಾಲಿದಳ ಎಸ್.ಜಿ.ಪಿ.ಸಿಯ ಮೇಲಿನ ತನ್ನ ನಿಯಂತ್ರಣವನ್ನು ಭದ್ರಪಡಿಸಲು ಯತ್ನಿಸಿ ಯಶಸ್ವಿಯೂ ಆಯಿತು.

2011ರ ಜನಗಣತಿಯು ಪಂಜಾಬ್‌ನಲ್ಲಿ 14 ಮಿಲಿಯನ್ ಸಿಖ್ಖರ ಅಂಕಿಅಂಶವನ್ನು ನೀಡಿದರೆ, ಎಸ್.ಜಿ.ಪಿ.ಸಿ ಕೇವಲ 5.5 ಮಿಲಿಯನ್ ಜನರು ಕೇಶಧಾರಿ ಅಥವಾ "ನೈಜ" ಸಿಖ್ಖರು ಎಂದಿತು. ಈ ವಿಷಯದಲ್ಲಿ ಈಗಿನ ಎಸ್.ಜಿ.ಪಿ.ಸಿಯ ಅಧ್ಯಕ್ಷ ಇನ್ನೂ ಮುಂದಕ್ಕೆ ಹೋಗಿ "ಎಸ್.ಜಿ.ಪಿ.ಸಿ ತನ್ನ ಚುನಾವಣೆಗಳಿಂದ ಸೆಹಜ್‌ಧಾರಿ ಮತ್ತು ಪತಿತ ಸಿಖ್ಖರನ್ನು ಹೊರಗಿಟ್ಟರೂ, ಅವರಿಂದ ದೇಣಿಗೆಯನ್ನು ಪಡೆಯಲು ತುಂಬಾ ಸಂತೋಷವಾಗುತ್ತದೆ" ಎಂದಿದ್ದರು. ಅದೇ ಎಸ್.ಜಿ.ಪಿ.ಸಿ ಇಂದು ಸೆಹಜಧಾರಿಗಳ ನಂಬಿಕೆಗಳನ್ನು ಗೌರವಿಸುವಂತೆ ಕೇಳುತ್ತಿದೆ. ಆದರೆ ಅದನ್ನು ಮೊದಲು ಎಸ್.ಜಿ.ಪಿ.ಸಿಯೇ ಮಾಡಬೇಕಲ್ಲವೇ?


ಹೇಗೆ ಬ್ರಿಟಿಷರು ಹಿಂದೂಗಳನ್ನು ಒಡೆದಾಳಿದರೋ ಅದೇ ಕೆಲಸವನ್ನು ಇಂದಿನ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಮಾಡುತ್ತಿದ್ದಾರೆ. ಆದರೆ ಅದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಯಾದ ರಾಷ್ಟ್ರ ವಿಭಜನೆ ಅವರ ಗಮನಕ್ಕೆ ಬರುತ್ತಿಲ್ಲ. ಪ್ರಸ್ತುತ ವಿವಾದದಲ್ಲೇ ಎರಡು ಸಮಸ್ಯೆಗಳಿವೆ. ಒಂದು ಕೆಲವೇ ಕೆಲವು ಮತಾಂಧ ಸಿಖ್ಖರ ಮತೀಯವಾದದಿಂದಾಗಿ ಸಿಖ್ ಪರಂಪರೆಯನ್ನು ಗೌರವಿಸುತ್ತಿದ್ದ ಸಿಂಧಿ ಸಮುದಾಯ ಅವರಿಂದ ದೂರ ಸರಿಯುತ್ತಿರುವುದು. ಇನ್ನೊಂದು, ಸಿಖ್ ಪರಂಪರೆ, ವರ್ತಮಾನಗಳಿಂದ ಹಿಂದೂವಾಗಿರುವುದೆಲ್ಲವನ್ನೂ ತ್ಯಜಿಸುವ ಕಾರಣದಿಂದ ಸಿಖ್ ಸಮುದಾಯವೊಂದು ಸೆಮೆಟಿಕ್ ಮತಗಳಂತೆ ಆಗಿ ರಾಷ್ಟ್ರಘಾತುಕವಾಗುವುದು.


ಸಿಖ್ ಮತವು ಹಿಂದೂಗಳಲ್ಲಿ ಕ್ಷಯವಾಗುತ್ತಿದ್ದ ಶೌರ್ಯವನ್ನು ಮತ್ತೆ ಎಬ್ಬಿಸಲು ಶುರುವಾದ ಒಂದು ಧಾರೆ. ಸಿಖ್ ಸಮುದಾಯವು ಹಿಂದೂಗಳಿಂದ ಬೇರೆಯಾದುದೆಂದು ಹಿಂದೂಗಳಿಗೆ ಇಷ್ಟರವರೆಗೆ ಅನಿಸಿಲ್ಲ. ಹಾಗಾಗಿಯೇ ಉದಾಸಿಗಳು, ಸಿಂಧಿಗಳ ಸಹಿತ ಅನೇಕರು ಗುರುಗ್ರಂಥಸಾಹಿಬವನ್ನು ತಮ್ಮ ಮನೆಗಳಲ್ಲಿ, ದೇಗುಲಗಳಲ್ಲಿರಿಸಿ ಪೂಜಿಸಿದ್ದು. ಹಿಂದೂಗಳು ಔರಂಗಜೇಬನ ಉಪಟಳದಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಂಡಾಗ ಔರಂಗಜೇಬನಿಂದ ಬಗೆಬಗೆಯ ಚಿತ್ರಹಿಂಸೆಗೊಳಗಾಗಿ ಹಿಂದೂಗಳಿಗೋಸ್ಕರ ಬಲಿದಾನ ನೀಡಿದ ಗುರು ತೇಜ್ ಬಹಾದ್ದೂರರನ್ನು, ಅವರ ಶಿಷ್ಯರಾದ ಭಾಯಿ ಮತಿದಾಸ, ಭಾಯಿ ದಯಾಳರನ್ನು ಯಾವ ಹಿಂದೂ ಮರೆತಾನು? ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು "ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು" ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಭಗತ್ ಸಿಂಗನ ಅಜ್ಜ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ್ದ. ಸಿಖ್ ಪಂಥದಿಂದ ಹಿಂದೂ ಅಂಶಗಳನ್ನು ಎತ್ತಿ ಒಗೆದಾಗ ಅಲ್ಲೊಂದು ಇಸ್ಲಾಮ್ ಅಥವಾ ಕ್ರೈಸ್ತದ ಪಡಿಯಚ್ಚು ಉಳಿಯಬಹುದಷ್ಟೇ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ