ಪುಟಗಳು

ಮಂಗಳವಾರ, ಜೂನ್ 15, 2021

ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ

 ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ



ನವದ್ವೀಪ; ತಕ್ಷಶಿಲೆ, ನಳಂದಾ, ಉಜ್ಜಯಿನಿಗಳಂತೆ ವಿದ್ಯೆಗೆ ಅಧಿರಾಜನಾಗಿ ಮೆರೆದ ಸ್ಥಳ. ಉಳಿದೆಲ್ಲವೂ ಪರಕೀಯರ ದಾಳಿಗೆ ತುತ್ತಾಗಿ ನಾಶವಾಗಿ ಹೋದರೆ ಬಂಗಾಳದ ನವದ್ವೀಪ ಮಾತ್ರ ಅಂತಹಾ ದಾಳಿಗಳಿಗೆ ತುತ್ತಾಗಿಯೂ ತನ್ನ ಕನಿಷ್ಟ ವೈಭವನ್ನಾದರೂ ಹೊತ್ತುಕೊಂಡು ಉಳಿಯಿತು. ತೀರಾ ಇತ್ತೀಚಿನವರೆಗೂ ಅಲ್ಲಿ ವಿದ್ವತ್ ಸಮ್ಮೇಳನಗಳು ನಡೆಯುತ್ತಿದ್ದವು. ಅವುಗಳಲ್ಲಿ ದೇಶದ ವಿವಿಧ ಪ್ರದೇಶಗಳ ವಿದ್ವಾಂಸರುಗಳು ಭಾಗವಹಿಸುತ್ತಿದ್ದರು. ಆದರೆ ದಕ್ಷಿಣದಿಂದ ಭಾಗವಹಿಸುವವರ ಸಂಖ್ಯೆ ಇಳಿಮುಖವಾಗಿ ಕೊನೆಗೆ ಶೂನ್ಯವಾಗಿತ್ತು. ಅಲ್ಲಿ ಸ್ಪರ್ದಿಗಳನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಲಾಗುತ್ತಿತ್ತು. ಚರ್ಚಾಕೂಟಗಳನ್ನು ನಡೆಸಲಾಗುತ್ತಿತ್ತು. ವಿಜೇತರಾದವರಿಗೆ ಸರಸ್ವತಿಯು ಸ್ಥಿತವಾದ ನವದ್ವೀಪ ವಿದ್ಯಾಪೀಠದಿಂದ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿತ್ತು. ಹಾಗಂತ ಎಲ್ಲರಿಗೂ ಅಲ್ಲಿ ಅವಕಾಶ ಸುಲಭವಾಗಿ ಸಿಗುತ್ತಿರಲಿಲ್ಲ. ಹೆಸರಾಂತ ವಿದ್ವಾಂಸರಿಗಷ್ಟೇ ಅಲ್ಲಿ ಸ್ಪರ್ದೆಗೆ ಅವಕಾಶ ದೊರಕುತ್ತಿತ್ತು. ಕ್ರಮೇಣ ಅದು ಈಗಾಗಲೇ ಪ್ರಶಸ್ತಿ ಪಡೆದಿರುವ, ಪ್ರಸಿದ್ಧರೂ, ಹಿರಿಯರೂ ಆದವರಿಗಷ್ಟೇ ಪ್ರವೇಶ ಸಿಗುವ ಹಂತಕ್ಕೆ ತಲುಪಿತು. ಆದಾಗ್ಯೂ ಕಲಾರಸಿಕರಿಗೆ, ಸಾಮಾನ್ಯರಿಗೆ ವೀಕ್ಷಣೆಗೆ ಅವಕಾಶ ಅಲ್ಲಿ ಇದ್ದೇ ಇರುತ್ತಿತ್ತು.


ವಿದ್ವಾಂಸರ ವಿದ್ವತ್ತಿನ ಪರೀಕ್ಷೆಯ "ಹರಿ ಸಭಾ" ಪ್ರಸಿದ್ಧ ಆಶುಕವಿ ಅಂಬಿಕಾದತ್ತರು ವೇದಘೋಷದೊಂದಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಆರಂಭವಾಯಿತು. ಘನ ಅಧ್ಯಕ್ಷರ ಉಪಸ್ಥಿತಿಯಿಂದಾಗಿ ಮೌನವಾಗಿದ್ದ ಆ ಸಭೆಯಲ್ಲಿ ಸಿತಿಕಂಠ ವಾಚಸ್ಪತಿಗಳೊಂದಿಗೆ ಬಂದಿದ್ದ ಯುವಕನೋರ್ವ ಅವರ ಬಳಿ ಅಧ್ಯಕ್ಷರನ್ನು ಕುರಿತು "ಈ ಮಹನೀಯರು ಯಾರು?" ಎಂದು ಕೇಳಿದ್ದು ಮೌನವಾಗಿದ್ದ ಸಭೆಯಲ್ಲಿ ಸ್ಪಷ್ಟವಾಗಿ ಎಲ್ಲರಿಗೂ ಕೇಳಿತು. ಅಧ್ಯಕ್ಷರು ಅದನ್ನು ಹಾಸ್ಯಾಸ್ಪದವಾಗಿ ಕಂಡು "ಸತ್ವರ ಕವಿತಾ ಸವಿತಾ ಗೌಡೋಹಂ ಕಶ್ಚಿದಂಬಿಕಾದತ್ತಃ - ನಾನು ಗೌಡ ದೇಶದ ಅಂಬಿಕಾದತ್ತ, ಆಶುಕವಿಗಳಲ್ಲಿ ಸೂರ್ಯ ಸಮಾನನು" ಎಂದು ಪದ್ಯವನ್ನು ಸಂಪೂರ್ಣ ಮಾಡದೆ ಉತ್ತರಿಸಿದರು. ತಕ್ಷಣ ಆ ಯುವಕ "ಗಣಪತಿರಿತಿ ಕವಿಕುಲಪತಿರಿತಿ ದಕ್ಷೋ ದಾಕ್ಷಿಣೋತ್ಯೋಹಮ್ - ನಾನು ಕವಿಕುಲಕ್ಕೆ ನಾಯಕನು, ಕಾವ್ಯರಚನೆಯಲ್ಲಿ ದಕ್ಷನು. ನಾನು ದಕ್ಷಿಣಾಪಥದ ಗಣಪತಿ" ಎಂದು ಉತ್ತರಿಸಿದನು. ಮಾತ್ರವಲ್ಲ "ಭವಾನ್ ದತ್ತಃ ಅಹಂತ್ವೌರಸಃ- ತಾವು ಅಂಬಿಕೆಯ ಮಾನಸಪುತ್ರರು, ನಾನಾದರೋ ಔರಸಪುತ್ರನು" ಎಂದು ಆ ಚಿಕ್ಕ ವಯಸ್ಸಿನ ಯುವಕನು ಉತ್ತರಿಸಲಾಗಿ ಸಭೆಯು ದಿಘ್ಭ್ರಮೆಗೊಂಡಿತಲ್ಲದೆ, ಕೆಲವರಂತೂ ಈ ಹುಡುಗನದ್ದು ಉದ್ಧಟತನವೆಂದೇ ಬಗೆದರು. ಯುವಕನ ದೈರ್ಯ ಪ್ರತಿಭೆಯ ಅರಿವಾಗಿ ಅಧ್ಯಕ್ಷರು ಆತನನ್ನೇ ಪರೀಕ್ಷಿಸಲು ತೊಡಗಿದರು.  ಕ್ಲಿಷ್ಟಕರ ಸಮಸ್ಯೆಗಳೆಲ್ಲವನ್ನೂ ತನ್ನ ಚತುರತೆಯಿಂದ ಬಿಡಿಸಿದ, ರಘುವಂಶ, ಕಾವ್ಯಪ್ರಕಾಶಗಳಲ್ಲಿನ ಶ್ಲೋಕಗಳಿಗೆ ಅರ್ಥ, ವಿರುದ್ಧಾರ್ಥ ಹಾಗೂ ಸಮನ್ವಯತೆಗಳನ್ನು ಸಾಧಿಸಿದ, ಅಂಬಿಕಾದತ್ತರಂಥ ಮಹಾನ್ ವಿದ್ವಾಂಸರ ಕಾವ್ಯಗಳಲ್ಲಿನ ತಪ್ಪುಗಳನ್ನು ಗುರುತಿಸಿ ಧೈರ್ಯದಿಂದ ಎತ್ತಿಹಿಡಿದ, ಅಪಿ, ಹಿ, ಚ ಪದಗಳನ್ನು ಬಳಸದೇ ಮಹಾಭಾರತದ ಪ್ರತಿಯೊಂದು ಅಧ್ಯಾಯಕ್ಕೂ ಒಂದೊಂದು ಶ್ಲೋಕಗಳನ್ನು ರಚಿಸುವ ಪರೀಕ್ಷೆಯಲ್ಲೂ ತೇರ್ಗಡೆಯಾದ ಆ ಯುವಕನಿಗೆ ವಿದ್ವಾಂಸರೆಲ್ಲರೂ ಸೇರಿ ಕಾವ್ಯಕಂಠ ಎಂಬ ಬಿರುದು ನೀಡಿ ಗೌರವಿಸಿದರು. ಅಂದಿನಿಂದ ಸೂರ್ಯಗಣಪತಿಯ ಹೆಸರು ಕಾವ್ಯಕಂಠ ಗಣಪತಿಮುನಿಯೆಂದೇ ಪ್ರಸಿದ್ಧವಾಯಿತು. ಈ ಪ್ರಕರಣವೇ ಒಂದು ದೀರ್ಘ ಕಥನವೋ, ಚಿತ್ರಕಥೆಯನ್ನು ಬರೆಯುವಷ್ಟು ಸ್ವಾರಸ್ಯವಾಗಿರುವುದು ಸಂಸ್ಕೃತ ಕಾವ್ಯಗಳ ಹಿರಿಮೆಯನ್ನೂ, ಕವಿಗಳ ಫ್ರೌಢಿಮೆಯನ್ನು, ಕಾವ್ಯಕಂಠ ಹೆಸರಿನ ಗರಿಮೆಯನ್ನು ಶ್ರುತಪಡಿಸುತ್ತದೆ.


ನೃಸಿಂಹ ಶಾಸ್ತ್ರಿಗಳು ಕಾಶಿ ವಿಶ್ವೇಶ್ವರನ ಮಂದಿರದ ಬಳಿ ದುಮ್ಟಿ ಗಣಪತಿ ಮೂರ್ತಿಯನ್ನೇ ತದೇಕಚಿತ್ತರಾಗಿ ನೋಡುತ್ತಾ ನವಾಕ್ಷರ ಗಣಪತಿ ಮಂತ್ರವನ್ನು ಜಪಿಸುತ್ತಿದ್ದಾಗ ವಿಗ್ರಹದಿಂದ ಮಗುವೊಂದು ಅಂಬೆಗಾಲಿಕ್ಕಿ ಅವರ ತೊಡೆಯೇರಿ ಕುಳಿತಂತೆ ಭಾಸವಾದ ಸಮಯಕ್ಕೇ ಸರಿಯಾಗಿ ಅತ್ತ ಆಂಧ್ರದ ಕಲುವರೈನಲ್ಲಿ ಅವರ ಪತ್ನಿಯು ದಿವ್ಯ ಶಿಶುವೊಂದಕ್ಕೆ ಜನ್ಮವಿತ್ತರು. ಅರಸವಲ್ಲಿ ಸೂರ್ಯ ನಾರಾಯಣ ಹಾಗೂ ಗಣಪತಿಯ ಅನುಗ್ರಹದಿಂದ ಜನಿಸಿದ ಶಿಶುವಿಗೆ ಸೂರ್ಯಗಣಪತಿ ಎಂದೇ ನಾಮಕರಣ ಮಾಡಲಾಯಿತು. ಆರು ವರ್ಷಗಳವರೆಗೂ ಅಮ್ಮಾ ಎಂದೂ ಕರೆಯದ,ಆಟ-ಪಾಠ, ಆಹಾರಗಳ ಕಡೆಗೆ ಆಸಕ್ತಿ ಇರದ ಆ ಮಗು ಸದಾ ಒಂದೆಡೆ ಕಣ್ಮುಚ್ಚಿ ಕುಳಿತಿರುತ್ತಿತ್ತು. ಕಾರಣವಿಲ್ಲದೆಯೇ ಶರೀರ ಬಿಸಿಯೇರುತ್ತಿತ್ತು, ಪ್ರಜ್ಞೆ ತಪ್ಪುತ್ತಿತ್ತು. ಯಾವ ರೋಗ ಲಕ್ಷಣಗಳೂ ಇರದ ಕಾರಣ ನರಶುದ್ಧೀಕರಣ ಚಿಕಿತ್ಸೆ ಮಾಡಲು ಆಲೋಚಿಸಿದರು. ಒಂದು ಅರಶಿನ ಕೊಂಬನ್ನು ಚೆನ್ನಾಗಿ ಕಾಯಿಸಿ ಅಮೃತನಾಡಿಯ ಜಾಗದಲ್ಲಿ ಇಟ್ಟರು. ಮೊದಲ ಬಾರಿಗೆ ಮಗುವು ಅಮ್ಮಾ ಎಂದು ಚೀರಿತು. ಬಳಿಕ ಸುಂದರವಾದ ಕಾವ್ಯಾತ್ಮಕ ಮಾತುಗಳು ಮಗುವಿನ ಬಾಯಿಂದ ಬರಲು ಆರಂಭವಾಯಿತು. ಗಣಪತಿಯ ನಾಲಗೆಯಲ್ಲಿ ಸರಸ್ವತಿಯು ನಾಟ್ಯವಾಡತೊಡಗಿದಳು. ಉಳಿದವರು ಹೇಳಿದಂತೆ ಮಗುವಿಗೆ ಮೂರ್ಛೆ ರೋಗವಾಗಿದ್ದಲ್ಲಿ ತನ್ನ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲ ಎಂದು ಶಾಸ್ತ್ರಿಗಳು ಭಾವಿಸಿದರು. ಆದರೆ ಉತ್ತರೋತ್ತರ ಭಗವಾನ್ ರಮಣ ಮಹರ್ಷಿಗಳ ದರ್ಶನ ಪಡೆದ ಬಳಿಕ ತನ್ನ ಚಿಕಿತ್ಸೆಯು ತಪ್ಪು ಹಾಗೂ ಅಪಾಯಕಾರಿಯಾಗಿತ್ತೆಂಬುದು ಅವರಿಗೆ ಅರಿವಾಯಿತು. ವಾಸ್ತವದಲ್ಲಿ ಯೋಗಸ್ಥಿತಿಯಲ್ಲಿ ಮುಂದುವರೆಯುತ್ತಿದ್ದ ತನ್ನ ಮಗನಿಗೆ ಅವರು ಅಡ್ಡಿಪಡಿಸಿದ್ದರು!


ಎಂಟನೇ ವರ್ಷದಲ್ಲೇ ಅಮರಕೋಶ, ಬಾಲರಾಮಾಯಣ, ಶಿವಸಹಸ್ರಗಳನ್ನು ಕರತಲಾಮಲಕ ಮಾಡಿಕೊಂಡ ಗಣಪತಿ ಒಂಬತ್ತನೇ ವಯಸ್ಸಿಗೆ ತಂದೆಯಿಂದ ಜ್ಯೋತಿಷ್ಯವನ್ನು ಕಲಿತು ವಿಶೇಷ ಪಂಚಾಂಗವನ್ನೂ ತಯಾರಿಸಿದ. ಭವಿಷ್ಯವನ್ನು ಕರಾರುವಕ್ಕಾಗಿ ಹೇಳುತ್ತಿದ್ದ ಕಾರಣ ಆತನ ಖ್ಯಾತಿ ಎಲ್ಲೆಡೆ ಹಬ್ಬಿತು. ಇಸ್ಪೀಟು, ಚದುರಂಗ, ಈಜುವುದರಲ್ಲಿ ಎಲ್ಲರನ್ನೂ ಬಾಲಕ ಮೀರಿಸಿದ್ದ. ಇಸ್ಪೀಟಿನ ಎಲೆಗಳನ್ನೆಲ್ಲಾ ರಹಸ್ಯವಾಗಿ ಹಂಚಿದ ನಂತರ ಬೇರೆ ಆಟಗಾರರ ಬಳಿ ಯಾವ ಎಲೆಗಳಿವೆ ಎನ್ನುವುದನ್ನು ನಿಖರವಾಗಿ ಹೇಳುತ್ತಿದ್ದ. ಹತ್ತು ವರ್ಷಗಳಾಗುವುದರೊಳಗೇ ವ್ಯಾಕರಣ, ತರ್ಕ, ನ್ಯಾಯಶಾಸ್ತ್ರಗಳಲ್ಲಿ ಪರಿಣತನಾಗಿ ಸಂಸ್ಕೃತದಲ್ಲಿ ಪದ್ಯರಚನೆಗೂ ತೊಡಗಿದ. ಗುರುಗಳು ಸವಾಲು ಹಾಕಿದಾಗ ಮೂವತ್ತನಾಲ್ಕೇ ನಿಮಿಷಗಳಲ್ಲಿ ಕೌರವ-ಪಾಂಡವ ಜನನ ವೃತ್ತಾಂತವನ್ನು ಮೂವತ್ತನಾಲ್ಕು ಸಂಸ್ಕೃತ ಶ್ಲೋಕಗಳಲ್ಲಿ ರಚಿಸಿದ. ಸುಕನ್ಯಾ ಚರಿತಮ್ ಎಂಬ ಖಂಡಕಾವ್ಯವನ್ನು ತಂದೆಯ ಪ್ರೀತ್ಯರ್ಥವಾಗಿ ರಚಿಸಿದ. ಗರ್ಭಿಣಿಯಾಗಿದ್ದ ತಾಯಿ ತನ್ನ ಅತಿಯಾದ ಸುಸ್ತು, ನಿಶ್ಶಕ್ತಿಯಿಂದ ಬೆದರಿ, ಗಣಪತಿಯನ್ನು ಕರೆದು ಈ ದಿನ ಹೆರಿಗೆಗೆ ಪ್ರಶಸ್ತವೇ ಎಂದು ಕೇಳಿದಾಗ ತಾಯಿಯ ಆತಂಕವನ್ನು ಅರಿಯದ ಗಣಪತಿ "ಈ ದಿನ ಹೆರಿಗೆಯಾದರೆ ಅವಳಿ ಮಕ್ಕಳಾಗುವುದು ಹಾಗೂ ತಾಯಿ ಮತ್ತು ಮಕ್ಕಳು ಉಳಿಯುವುದಿಲ್ಲ" ಎಂದುಬಿಟ್ಟ. ಮನೆಯವರು ಬೈದರು. ಅದರಂತೆಯೇ ಆದಾಗ ಬಂದವರೆಲ್ಲಾ ಬೈದುಬಿಟ್ಟರು. ಗಣಪತಿಯಾದರೋ ಅವಾವುದರ ಪರಿವೆಯಿಲ್ಲದೆ ತನ್ನ ತಾಯಿಯ ಶರೀರದಿಂದ ಹೊರಹೋದ ವಸ್ತು ಯಾವುದು? ನಶ್ವರವಾದ ಈ ಜೀವನದ ಉದ್ದೇಶವೇನು" ಎನ್ನುವುದರ ಹುಡುಕಾಟದಲ್ಲಿ ತೊಡಗಿದ್ದ.


ಹಾಡುತ್ತಿದ್ದ ಕೋಗಿಲೆ ಮೂಕವಾಗಿತ್ತು. ತಂದೆ, ಗುರುಗಳು ಯಾರೇ ಮಾತಾಡಿದರೂ ಮೌನವೇ ಅವರ ಉತ್ತರವಾಗಿತ್ತು. ತಂದೆಯು ಕೆಲವು ವರುಷಗಳ ಬಳಿಕ ಅನುನಯಿಸಿ ಕೇಳಿದಾಗಲೂ ತಂದೆಯ ಸಂಕಟ ಅರ್ಥವಾದರೂ ಮೌನವನ್ನು ಮುರಿಯಲು ಅವರು ಇಚ್ಛೆ ಪಡಲಿಲ್ಲ. ತಂದೆಯು ಕಟುವಾಗಿ "ಮೌನವು ಋಷಿಗಳ ಚರ್ಯೆ. ಅವರು ಅನುಸರಿಸುವ ಮೌನವು ತಪಸ್ಸು. ನೀನು ಅವರಂತಲ್ಲ. ಪ್ರಾಪಂಚಿಕ ಜೀವನದಲ್ಲಿದ್ದು ಈ ರೀತಿ ವರ್ತಿಸುವುದು ಬುದ್ಧಿವಂತರ ಲಕ್ಷಣವಲ್ಲ" ಎಂದಾಗ ತಪಸ್ಸು ಎಂಬ ಪದವು ಅವರ ಹೃದಯದೊಳಗಿಳಿಯಿತು. ಸತ್ಯವನ್ನರಸಲು ಇದೇ ಮಾರ್ಗವೆಂದು ಅರಿತು ಕೂಡಲೇ "ತಂದೆಯೇ, ನಾನು ತಪಸ್ಸನ್ನಾಚರಿಸಬೇಕು, ಆಶೀರ್ವದಿಸಿ" ಎಂದರು. ಮಗನ ತುಮುಲವನ್ನು ಅರ್ಥವಿಸಿಕೊಂಡ ಶಾಸ್ತ್ರಿಗಳು ಮೊದಲು ವಿದ್ಯೆಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಬಳಿಕ ತಪಸ್ಸನ್ನಾಚರಿಸಲು ತಿಳಿ ಹೇಳಿದರು. ಗಣಪತಿ ಮುನಿಗಳ ಈ ಬಯಕೆಗೆ ಕಾರಣವು ಅವರ ಉಮಾಸಹಸ್ರದ ಒಂದು ಶ್ಲೋಕದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ ಅವರು ಉಮೆಯಲ್ಲಿ ಹೇಳುತ್ತಾರೆ..."ಮಾಹೇಶ್ವರಿ, ಮೊದಲು ನನಗೆ ಹೃದಯ ವಿದ್ಯೆ ತಿಳಿದಿತ್ತು. ಮನಸ್ಸಿನಲ್ಲಿ ಅದ್ಭುತ ಶಕ್ತಿಯಿತ್ತು. ಮಾತಿನಲ್ಲಿ ಮಹತ್ತರ ಭಾಗ್ಯವಿತ್ತು. ನಾನು ಭುವಿಗಿಳಿದಂತೆ ಅವೆಲ್ಲವೂ ನನ್ನಿಂದ ಜಾರಿ ಹೋಯಿತು!"


ಹದಿನೈದನೇ ವರ್ಷಕ್ಕೇ ಸಂಸ್ಕೃತದ ಐದು ಮಹಾಕಾವ್ಯಗಳ ಅಧ್ಯಯನವನ್ನು ಮುಗಿಸಿದ ಗಣಪತಿ ಚಂಪೂ ರಾಮಾಯಣ, ಕುವಲಯಾನಂದ, ಪ್ರತಾಪ ರುದ್ರೀಯಮ್ ಅಂತಹಾ ಕಾವ್ಯಗಳನ್ನೂ ಅಭ್ಯಸಿಸಿದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಸಮ್ಮೇಳನವೊಂದರಲ್ಲಿ ಗಾಂಧಿಯವರನ್ನು ಭೇಟಿಯಾಗಿ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ರಾಷ್ಟ್ರದ ಐಕ್ಯತೆಗೆ ಅಪಾರ ಶಕ್ತಿಯನ್ನು ತುಂಬುವುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಗಾಂಧಿ ಕೆಲವೇ ಕೆಲವು ಜನಗಳಿಗೆ ಸಂಸ್ಕೃತ ಜ್ಞಾನವಿರುವುದೆಂದು ಆ ಸಲಹೆಯನ್ನು ತಳ್ಳಿ ಹಾಕಿದರು. ಛಲ ಬಿಡದ ಗಣಪತಿ ಸಂಸ್ಕೃತವನ್ನು ಸುಲಭವಾಗಿ ಕಲಿಯುವ, ಕಲಿಸುವ ಸಲುವಾಗಿ "ಲಾಲಿ ಭಾಷಾ"  ಎಂಬ ಪುಸ್ತಕವನ್ನು ಮಾಡಿ ಕಾಂಗ್ರೆಸ್ ವರಿಷ್ಠರ ಮುಂದೆ ಇಟ್ಟರು. ಯಥಾ ಪ್ರಕಾರ ಅದಕ್ಕೂ ನಿರ್ಲಕ್ಷ್ಯವೇ ಗತಿಯಾಯಿತು.


ಛಿನ್ನಾಂ ಭಿನ್ನಾಂ ಸುತರಾಂ ಸನ್ನಾಮನ್ನಾಭಾವಾದಭಿತಃ ಖಿನ್ನಾಂ |

ಏತಾಂ ಪಾತುಂ ಭರತಕ್ಷೋಣೀಂ ಜಾಯೇ ಜಿಷ್ನೋಃ ಕುರು ಮಾಂ ಶಕ್ತಃ ||

ಬ್ರಿಟಿಷರ ಒಡೆದಾಳುವ ನೀತಿಯಿಂದಾಗಿ ಛಿನ್ನವೂ, ಭಿನ್ನವೂ ಆಗಿ ದೈಹಿಕ, ಮಾನಸಿಕ ಶಕ್ತಿ, ಕುಶಾಗ್ರಮತಿತ್ವಗಳಿಲ್ಲದೆ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿಯನ್ನು ನೀಡು. ಕಾವ್ಯಕಂಠ ಗಣಪತಿ ಮುನಿಗಳ "ಉಮಾಸಹಸ್ರಮ್"ನಲ್ಲಿರುವ ಒಂದು ಶ್ಲೋಕ ಇದು. ಮಾತೃಭೂಮಿಯ ಬಗ್ಗೆ ಅಪಾರವಾದ ಭಕ್ತಿ, ಕಾಳಜಿ ಮತ್ತು ಹೆಮ್ಮೆಯನ್ನಿರಿಸಿಕೊಂಡ ಆಧುನಿಕ ಕಾಲದ ತಪಸ್ವಿಯೊಬ್ಬನಿಂದ ಹೊರಹೊಮ್ಮಿದ ಭಾವಾವೇಶ ಇದು. ಕೇವಲ ವಾಕ್ಯಾರ್ಥವನ್ನು ಗಮನಿಸಿದರೆ ಛಿನ್ನಭಿನ್ನವಾಗಿ ಆಹಾರದ ಕೊರತೆಯಿಂದ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿ ನೀಡು ಎನ್ನುವ ಅರ್ಥವನ್ನು ಇದು ಹೊರಹೊಮ್ಮಿಸುತ್ತದೆ. ಉಮೆಗೂ ತನ್ನ ಭಕ್ತನನ್ನು ಕೀಟಲೆ ಮಾಡುವ ಮನಸ್ಸಾಗಿರಬೇಕು. ಈ ಶ್ಲೋಕವನ್ನು ರಮಣ ಮಹರ್ಷಿಗಳ ಮುಂದೆ ಪ್ರಸ್ತುತ ಪಡಿಸುತ್ತಿರುವಂತೆಯೇ ಗಣಪತಿ ಮುನಿಗಳಿಗೆ ತೀವ್ರ ಹಸಿವುಂಟಾಯಿತು. ಆದರೆ ಎಚ್ಚಮ್ಮಾಳ್ ಆಗಷ್ಟೇ ಅಕ್ಕಿ ಬೇಳೆ ಬೇಯಲು ಹಾಕಿ ಒಲೆ ಹೊತ್ತಿಸಿದ್ದಳು. ಆಗ ಅವಳಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಗಣಪತಿ ಮುನಿಗಳಿಗೆ ತೀವ್ರ ಹಸಿವೆಯಾಗಿದೆಯೆಂದು ಕೂಡಲೇ ಊಟ ನೀಡಬೇಕೆಂದು ಸೂಚಿಸಿದಳು. ಎಚ್ಚಮ್ಮಾಳ್ ಬೇಯಲು ಇನ್ನೂ ಸಮಯವಿದೆಯೆಂದು ಹೇಳಿದರೆ ಆ ಮಹಿಳೆ ಪಾತ್ರೆಯ ಮುಚ್ಚಳವನ್ನು ತೆರೆದು ನೋಡುವಂತೆ ಹೇಳಿದಳು. ನೋಡಿದರೆ ಎಚ್ಚಮ್ಮಾಳಿಗೆ ಆಶ್ಚರ್ಯ ಕಾದಿತ್ತು. ಆಹಾರ ಆಗಲೇ ಬೆಂದಿತ್ತು. ನಡೆದ ಘಟನೆಯನ್ನು ಎಚ್ಚಮ್ಮಾಳ್ ಗಣಪತಿ ಮುನಿಗಳಿಗೆ ವಿವರಿಸಿದಾಗ ಉಮೆಯ ಅನುಗ್ರಹದ ಪ್ರಾಪ್ತಿಗೆ ಆತ ಬಹು ಸಂತಸಭರಿತರಾದರು. ಇಂತಹಾ ಹಲವು ಪವಾಡಗಳು ಗಣಪತಿ ಮುನಿಗಳ ಬದುಕಿನಲ್ಲಿ ಈಗಾಗಲೇ ನಡೆದುದ್ದರಿಂದ ಅವರಿಗೆ ಅದರಿಂದ ಆಶ್ಚರ್ಯವೇನೂ ಆಗದಿದ್ದರೂ ತಾಯಿಯ ಕರುಣೆಯಿಂದಾಗಿ ಅವರ ಕೊರಳ ಸೆರೆ ಉಬ್ಬಿತು.


ಉ ಎಂದರೆ ಶಿವ. ಮ ಎಂದರೆ ಶಿವನ ಸೀಮಿತ ಶಕ್ತಿ. ದೇವಿಯು ಪ್ರಪಂಚವನ್ನೇ ಸೃಷ್ಟಿಸುವ ಶಿವನ ಸೀಮಿತ ಶಕ್ತಿ. ಇದು ಉಮಾ ಪದಕ್ಕೆ ಮುನಿಗಳ ವಿವರಣೆ. ಇಪ್ಪತ್ತು ದಿನಗಳಲ್ಲೇ ಉಮಾ ಸಹಸ್ರಮ್ ಅನ್ನು ಪೂರ್ತಿಗೊಳಿಸಲು ಗಣಪತಿ ಮುನಿಗಳು ಸಂಕಲ್ಪಿಸಿದ್ದರು. ಶಿವನಿಗೂ, ಸುಬ್ರಹ್ಮಣ್ಯನಿಗೂ ಪ್ರಿಯವಾದ ಕಾರ್ತಿಕ ಮಾಸದ ಷಷ್ಠಿ ತಿಥಿಯಂದು ಗುಹಾವತಾರಿ ಭಗವಾನ್ ರಮಣ ಮಹರ್ಷಿಗಳ ಸಮ್ಮುಖದಲ್ಲಿ ಅವರು ಕೃತಿ ರಚನೆಯನ್ನು ಆರಂಭಿಸಿದ್ದರು. ಹತ್ತು ದಿನ ಸತತವಾಗಿ ಬರೆದ ಪರಿಣಾಮ ಅವರ ಹೆಬ್ಬೆಟ್ಟು ಊದಿಕೊಂಡಿತು. ಹತ್ತೊಂಬನೇ ದಿನಕ್ಕೆ ಹೆಬ್ಬೆಟ್ಟು ಅತಿಯಾಗಿ ಊದಿಕೊಂಡು ಬರೆಯುವುದೇ ದುಸ್ತರವಾಯಿತು. ಅಲ್ಲದೇ ಮುನ್ನೂರು ಶ್ಲೋಕಗಳು ಇನ್ನೂ ಬಾಕಿ ಉಳಿದಿದ್ದವು. ಆ ರಾತ್ರಿ ತಿರುವಣ್ಣಾಮಲೈನ ವೈದ್ಯ ಪುಣ್ಯಕೋಟಿಯ ಕನಸ್ಸಿನಲ್ಲಿ ಬ್ರಾಹ್ಮಣನೊಬ್ಬ ಕಾಣಿಸಿಕೊಂಡು "ಅರುಣಗಿರಿಯಲ್ಲಿರುವ ಮುನೀಶ್ವರನೊಬ್ಬನಿಗೆ ಹೆಬ್ಬೆಟ್ಟು ಊದಿಕೊಂಡಿದೆ. ಆತನಿಗೆ ಅಲ್ಲಿ ಹೋಗಿ ಚಿಕಿತ್ಸೆ ನೀಡು" ಎಂದಂತಾಯಿತು. ಬೆಳಗಿನ ಝಾವವೇ ಆತ ಗಣಪತಿ ಮುನಿಗಳಿಗೆ ಚಿಕಿತ್ಸೆ ಮಾಡಿದ. ಆದರೂ ಬರೆಯುವುದು ಅಸಾಧ್ಯವಾದ್ದರಿಂದ, ಮುನಿಗಳು ಸಂಪೂರ್ಣ ನಿಃಶಕ್ತರಾಗಿದ್ದುದರಿಂದ ತಮ್ಮ ಐದು ಮಂದಿ ಶಿಷ್ಯರಿಗೆ ಕ್ರಮವಾಗಿ ವಿವಿಧ ಛಂದಸ್ಸಿನಿಂದ ಕೂಡಿದ ಬೇರೆ ಬೇರೆ ಶ್ಲೋಕಗಳನ್ನು ಹೇಳುತ್ತಾ ಬರೆಯಿಸಿದರು. ಭಗವಾನ್ ರಮಣರು ಸಮಾಧಿ ಸ್ಥಿತಿಯಲ್ಲಿದ್ದರು. ಅವರ ಪಾದದಡಿಯಲ್ಲಿ ಕಾವ್ಯಕಂಠ ಗಣಪತಿ ಮುನಿಗಳು ಕುಳಿತು ಶಿಷ್ಯರಿಗೆ ಉಮಾಸಹಸ್ರಮ್ ನ ಕಡೆಯ ಮುನ್ನೂರು ಶ್ಲೋಕಗಳನ್ನು ಹೇಳಿ ಬರೆಯಿಸುತ್ತಿದ್ದರು. ಆಹಾ... ಈ ದೃಶ್ಯವನ್ನೊಮ್ಮೆ ಕಣ್ಣ ಮುಂದೆ ಬರಿಸಿಕೊಳ್ಳಬೇಕು. ವಿವಿಧ ಛಂದಸ್ಸಿನ ಐದು ಶ್ಲೋಕಗಳು ಏಕಕಾಲದಲ್ಲಿ ಹೊರಬರುತ್ತಿದ್ದವು. ಎಲ್ಲಾ ಶ್ಲೋಕಗಳನ್ನು ಬರೆದು ಮುಗಿಸಿದ ತಕ್ಷಣ ಶಿಷ್ಯರು ದೀರ್ಘ ನಿಟ್ಟುಸಿರನ್ನು ಬಿಟ್ಟು ಗಣಪತಿ ಮುನಿಗಳತ್ತ ನೋಡಿದರೆ ಆತ ಅರೆ ಎಚ್ಚರ ಸ್ಥಿತಿಯಲ್ಲಿದ್ದರು. ಐದು ನಿಮಿಷದ ಬಳಿಕ ಸಮಾಧಿ ಸ್ಥಿತಿಯಿಂದ ಹೊರಬಂದ ಭಗವಾನ್ ರಮಣ ಮಹರ್ಷಿಗಳು "ನಾಯನಾ, ನಾನು ಹೇಳಿದ್ದೆಲ್ಲವನ್ನೂ ಬರೆದುಕೊಂಡೆಯಾ?" ಎಂದರು. ಎಚ್ಚೆತ್ತ ಗಣಪತಿ ಮುನಿಗಳು ಭಾವಗದ್ಗಿತರಾಗಿ ತಮ್ಮೆರಡೂ ಕೈಗಳಿಂದ ಭಗವಾನರ ಪಾದಗಳನ್ನು ಮುಟ್ಟಿ "ಹೌದು ಭಗವನ್, ನೀವು ಹೇಳಿದ್ದೆಲ್ಲವನ್ನೂ ಪಡೆದುಕೊಂಡೆ" ಎಂದರು! ಹೌದು, ಈ ಘಟನೆಗೆ ಪೂರಕವಾಗಿ ತಾವು ಉಮಾಸಹಸ್ರಮ್ ಅನ್ನು ಹೇಗೆ ರಚಿಸಿದೆ ಎಂದು ವಿವರಿಸುವಾಗ ಗಣಪತಿ ಮುನಿಗಳು, ರಮಣ ಮಹರ್ಷಿಗಳು ನೀಡಿದ ಸಂಕ್ಷಿಪ್ತ ಪದಗಳ ಸಹಾಯದಿಂದ ರಚಿಸಿರುವೆ ಎಂದಿದ್ದಾರೆ. ಗುರುವಿನ, ಮೌನದ ಉಪದೇಶದ, ತಪಸ್ಸಿನ, ತೀವ್ರತರವಾದ ಭಕ್ತಿ, ಉದ್ದೇಶ ಹಾಗೂ ಶ್ರದ್ಧೆಯ ಮಹತ್ವ ಇದು. 


ಒಮ್ಮೆ ತಿರುವತ್ತಿಯೂರಿನ ತ್ರಿಪುರಸುಂದರಿ ದೇವಾಲಯದ ಪ್ರಾಂಗಣದ ಮೂಲೆಯಲ್ಲಿದ್ದ ಗಣಪತಿಯ  ಸಣ್ಣ ದೇಗುಲದ ಮಾನಸೋಲ್ಲಾಸ ವಾತಾವರಣವನ್ನು ನೋಡಿದ ಗಣಪತಿ ಮುನಿಗಳು ಆ ದೇಗುಲದೊಳಗೆ ಪ್ರವೇಶಿಸಿದರು. ಪ್ರವೇಶಿಸಿದಂತೆಯೇ ಅಂತರ್ಮುಖಿಗಳಾದರು.  ಅಲ್ಲಿ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಅವರು ಧ್ಯಾನದಲ್ಲಿ ಮುಳುಗಿದ್ದು ಬರೋಬ್ಬರಿ ಹದಿನಾರು ದಿನ! ಶಕ್ತಿ ಸ್ರೋತ ಮೇಲ್ಮುಖವಾಗಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆ ಯಾವುದೋ ತಡೆಯುಂಟಾಗಿ ಅವರ ಬೆನ್ನಿನಲ್ಲಿ ವಿಪರೀತ ನೋವು ಕಾಣಿಸಿಕೊಂಡು ಅಂಗಾತ ಮಲಗಬೇಕಾಯಿತು. "ಸ್ಕಂದಾಗ್ರಜನೇ, ಮೂಲಾಧಾರದಲ್ಲಿನ ನಿನ್ನ ನಾಟ್ಯವನ್ನು ಸ್ವಲ್ಪ ನಿಧಾನಿಸು" ಎಂದು ಪ್ರಾರ್ಥಿಸಿದರು. ಕೂಡಲೇ ಯಾರೋ ಅವರನ್ನು ಸ್ಪರ್ಶಿಸಿದಂತಾಗಿ ಬೆನ್ನು ನೋವು ಮಾಯವಾಯಿತು. ನಾಯನರು ಕಣ್ತೆರೆದು ನೋಡಿದರೆ ಅಲ್ಲಿ ಭಗವಾನ್ ರಮಣ ಮಹರ್ಷಿಗಳು ನಿಂತಿದ್ದರು. ಗಣಪತಿ ಮುನಿಗಳು ಆನಂದಭಾಷ್ಪಭರಿತರಾಗಿ ಭಗವಾನರ ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದರು. ಅರುಣಾಚಲವನ್ನು ಬಿಟ್ಟು ತೆರಳದ ವಿರೂಪಾಕ್ಷ ಗುಹೆಯಲ್ಲಿ ಸದಾ ಆತ್ಮಾನಂದದಲ್ಲಿ ಮುಳುಗಿದ್ದ ರಮಣರು ತಿರುವತ್ತಿಯೂರಿನಲ್ಲಿ ಕಂಡದ್ದು ಹೇಗೆ? ಮುಂದೆ ಅಕ್ಟೋಬರ್ 17, 1929ರಂದು ನಾಯನರು ಅರುಣಾಚಲಕ್ಕೆ ಬಂದಾಗ ರಮಣರ ಬಳಿ ಈ ವಿಷಯವನ್ನು ಪ್ರಸ್ಥಾಪಿಸಿದಾಗ "ತಾನು ಸಿದ್ಧರ ರೀತಿ ಗಣಪತಿ ಮಂದಿರಕ್ಕೆ ಪಯಣಿಸಿದ" ಆ ಘಟನೆಯನ್ನು ಖಚಿತಪಡಿಸಿದರು!


"ವಿದ್ಯಾ ಸಂಸ್ಥೆಗಳು ಜ್ಞಾನಪ್ರಸಾರದ ಕೇಂದ್ರವಾಗಿರಬೇಕೆ ಹೊರತು ಮತ ಪ್ರಸಾರದ ಕೇಂದ್ರಗಳಲ್ಲ" ಎನ್ನುತ್ತಾ ಮತಾಂತರಿಗಳ ವಿರುದ್ಧ ತೊಡೆತಟ್ಟಿದ ಗಣಪತಿ ಮುನಿಗಳು ಸನಾತನ ಸಂಸ್ಕೃತಿ ಹಾಗೂ ವೇದಗಳ ಬಗೆಗೆ ಭಾಷಣಗಳನ್ನು ಆರಂಭಿಸಿದರು. ವೆಲ್ಲೂರಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ತಮಗೆ ನೀಡಿದ್ದ ಗೌರವಯುತ ತೆಲುಗು ಪಂಡಿತ ಹುದ್ದೆಯು ಅವರನ್ನು ಈ ನಿಟ್ಟಿನಲ್ಲಿ ಮತ್ತಷ್ಟು ಗಟ್ಟಿಗೊಳಿಸಿತು. ತಮ್ಮನ್ನು ಮತಾಂತರಗೊಳಿಸಬಂದವರಿಗೆ "ನಮ್ಮದು ಋಷಿಮುನಿಗಳಿಂದ ಪ್ರಣೀತವಾದ ಜ್ಞಾನದ ಭಂಡಾರವೇ ಉಳ್ಳ ಅದ್ಭುತ ಸಂಸ್ಕೃತಿ. ಈ ದೇಶಕ್ಕೆ ಬಂದ ನೀವು ನಿಮ್ಮದಕ್ಕಿಂತಲೂ ವಿಕಸಿತವಾದ ಈ ಸಂಸ್ಕೃತಿಯನ್ನು ಯಾಕೆ ಸ್ವೀಕರಿಸಬಾರದು?" ಎಂದು ಸವಾಲೆಸೆದರು. ಭಾರತೀಯತೆಯ ಪ್ರಸಾರಕ್ಕಾಗಿ ಇಂದ್ರಸೇನಾ ಎನ್ನುವ ಲಿಂಗ, ಜಾತಿ, ವರ್ಣ ಭೇದವಿಲ್ಲದ, ನಿಃಸ್ವಾರ್ಥ ಸೇವೆಯೇ ಪ್ರಮುಖವಾಗುಳ್ಳ ಸಂಘಟನೆಯನ್ನು ಆರಂಭಿಸಿದರು. "ಇಂದ್ರೋ ವಿಶ್ವಸ್ಯ ರಾಜತಿ" ಎನ್ನುವುದು ಅದರ ಶಪಥ ಮಂತ್ರವಾಗಿತ್ತು. "ಉಮಾಮ್ ವಂದೇ ಮಾತರಂ" ಎಂಬುದು ಅವರ ಘೋಷವಾಕ್ಯವಾಗಿತ್ತು. ದೈವೀ ಸಹಾಯವಿಲ್ಲದೆ, ಆಧ್ಯಾತ್ಮಿಕ ಸ್ವಾತಂತ್ರ್ಯ ಹೊಂದದೇ ಬರಿಯ ರಾಜಕೀಯ ಸ್ವಾತಂತ್ರ್ಯ ಗಳಿಸಿದಲ್ಲಿ ಅದು ಅಸ್ಥಿರ ಸ್ವಾತಂತ್ರ್ಯವೆಂದು ಗಣಪತಿ ಮುನಿಗಳು ಪದೇಪದೇ ಹೇಳುತ್ತಿದ್ದರು. ಮದ್ರಾಸ್, ಚಿತ್ತೂರು ಪ್ರಾಂತ್ಯಗಳಲ್ಲಿ ಈ ಸಂಘಟನೆಯ ಅನೇಕ ಶಾಖೆಗಳು ಹುಟ್ಟಿಕೊಂಡವು. ಸಹಜವಾಗಿ ಬ್ರಿಟಿಷರ ಕಣ್ಣು ಕೆಂಪಾಗತೊಡಗಿತು.


ಕುಂಡಲಿನಿಯು ಜಾಗೃತವಾಗಿ ಮೇಲ್ಮುಖವಾಗಿ ಶಕ್ತಿಯು ಹರಿಯುವುದಕ್ಕೆ ರೇಣುಕ ಎನ್ನಲಾಗುತ್ತದೆ. ಕಾರ್ತವೀರ್ಯನ ಸಂಹಾರ ಎಂದರೆ ಅಹಂಗೆ ಕಾರಣವಾದ ಮನಸ್ಸಿನ ಸಂಹಾರ. ರೇಣುಕೆಯ ಶಿರಚ್ಛೇದನವೇ ನಾಡೀಭೇದನ. ರೇಣುಕೆಯ ತಲೆಯನ್ನು ಕತ್ತರಿಸುವಾಗ ಅವಳಿಂದ ಬೋಧನಾರೂಪವಾಗಿ ಹೊರಬಂದ ಮಂತ್ರದಲ್ಲಿದ್ದದ್ದು  20 ಅಕ್ಷರಗಳು.  ( ರಾಯಸ್ಕಾಮೋ ವಜ್ರಹಸ್ತಂ ಸುದಕ್ಷಿಣಂ ಪುತ್ರೋ ನ ಪಿತರಂ ಹುವೇ । -  ಋ 7; ಸೂ- 32) . ರೇಣುಕೆಯು 20  ಬಾರಿ ತನ್ನ ಎದೆಯನ್ನು ಹೊಡೆದುಕೊಂಡಳೆಂಬ ಪುರಾಣ ಕಥೆಗೆ ಮೂಲ ಇದು. ಈ ಮಂತ್ರವನ್ನು ಸ್ವೀಕರಿಸಿದವ ಪರಶುರಾಮ. ಆತ 20 ಬಾರಿ ಪ್ರಪಂಚ ಗೆದ್ದ ಕಥೆಗೂ ಮೂಲ ಇದು. ಉಪನಿಷತ್ತಿನಲ್ಲಿ ಜ್ಯೋತಿರವಿದ್ಯಾಪದ್ದತಿ ಎಂದು ಉಲ್ಲೇಖಿಸಲ್ಪಟ್ಟಿರುವ ಈ ವಿದ್ಯೆಯನ್ನು ಕಾವ್ಯಕಂಠ_ಗಣಪತಿ_ಮುನಿ ಗಳು ಸ್ವತಃ ಅನುಭವಕ್ಕೆ ತಂದುಕೊಂಡಿದ್ದರು. ನಾಯನರ "ಸಾಂಗ್ ಆಫ್ ರೇಣುಕಾ" ಇಂದ್ರಸೇನಾನಿಗಳ ರಕ್ಷಣಾಮಂತ್ರವಾಯಿತು. ದೇಶವನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸುವಂತೆ ರಚಿಸಿದ್ದ ಶ್ಲೋಕಗಳಿಂದ ತುಂಬಿದ್ದ ಉಮಾಸಹಸ್ರಮ್ ಇಂದ್ರಸೇನಾದ ಸದಸ್ಯರಿಗೆ ನಿತ್ಯಸ್ತೋತ್ರವಾಯಿತು. ಬ್ರಿಟಿಷರ ಪರವಾಗಿದ್ದವರು ಸರಕಾರಕ್ಕೆ ಗಣಪತಿ ಮುನಿಗಳ ಸಂಘಟನಾತ್ಮಕ ಹೋರಾಟದ ಬಗ್ಗೆ ಕಿವಿಚುಚ್ಚತೊಡಗಿದರು. ಸರಕಾರವು ನಾಯನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆಗಳಲ್ಲಿ ಪ್ರಕಟಿಸಿತು. ಗವರ್ನರ್ ಉಮಾಸಹಸ್ರಮ್ ಅನ್ನು ಮುಟ್ಟುಗೋಲು ಹಾಕಿ ಪುಸ್ತಕ ಸಮೇತ ನಾಯನರನ್ನು ಬಂಧಿಸುವಂತೆ ಫರ್ಮಾನು ಹೊರಡಿಸಿದರು. ಆದರೆ ಉಮೆಯ ಕೃಪೆಯಿಂದ ನಾಯನರ ಎದುರೇ ಇದ್ದ ದಪ್ಪಕ್ಷರಗಳ ಪುಸ್ತಕ ಪೊಲೀಸರು ಶೋಧನೆಗೆ ಬಂದಾಗ ಅವರ ಕಣ್ಣಿಗೆ ಬೀಳಲಿಲ್ಲ! ಪೊಲೀಸರು ಸಂಧಿಗ್ಧರಾಗಿ ಪುಸ್ತಕವಿಲ್ಲದೆ ಬಂಧಿಸಲು ಹೆದರಿ ಮತ್ತೊಮ್ಮೆ ಬರುವುದಾಗಿ ತಿಳಿಸಿ ತೆರಳಿದರು. ನಾಯನರ ಶಿಷ್ಯರು ಬ್ರಿಟಿಷರ ಕಿರಿಕಿರಿ ತಪ್ಪಿಸಲು ಪುಸ್ತಕವನ್ನು ಪಂಬದಿಚ್ಚನ್ ಪರೈ ಬೆಟ್ಟದ ತಳದಲ್ಲಿನ ಕುಂಡಲಿನಿ ನದಿಯ ತಟದಲ್ಲಿ ಹೂತು ಹಾಕಿದರು. ಆ ರಾತ್ರಿಯೇ ಧಾರಾಕಾರ ಮಳೆ ಸುರಿದು ಕುಂಡಲಿನಿಯು ಉಕ್ಕಿ ಹರಿದು ಪುಸ್ತಕವು ಕೊಚ್ಚಿ ಹೋಯಿತು. ಅಲ್ಲಲ್ಲಾ ಅದು ದೇಶೀಯರೊಂದಿಗೆ ಐಕ್ಯವಾಗಿ ಸ್ವಾತಂತ್ರ್ಯದ ಕಹಳೆಯನ್ನೂದಲು ಶಕ್ತಿಸ್ತ್ರೋತವಾಯಿತು.


ನಾಯನರು ಮಹಾನ್ ತಪಸ್ವಿಗಳು. ಒಮ್ಮೆ ತಪಸ್ಸಿಗೆ ಕುಳಿತರೆಂದರೆ ಹದಿನೈದು-ಇಪ್ಪತ್ತು ದಿನಕ್ಕಿಂತಲೂ ಹೆಚ್ಚು ಅದು ಮುಂದುವರಿಯುತ್ತಿತ್ತು. ವಿರೂಪಾಕ್ಷ ಗುಹೆಯಲ್ಲಿದ್ದಾಗ ಛಿನ್ನಮಸ್ತ ಶಕ್ತಿಯಿಂದ ಕಪಾಲಭೇದನವಾಗಿ ಬಳಿಕ ರಮಣಮಹರ್ಷಿಗಳು ಅವರ ತಲೆಗೆ ಹರಳೆಣ್ಣೆ ತಿಕ್ಕಿ ತಂಪಾಗಿಸಿ, ಮರದ ಚಪ್ಪಲಿಯನ್ನು ಕೊಟ್ಟು ಸದಾ ಧರಿಸುವಂತೆ ಸೂಚಿಸಬೇಕಾಯಿತು. ಅವರ ಶಿಷ್ಯರಲ್ಲೂ ಈ ತಪಃ ಪ್ರವೃತ್ತಿ ಮಂದುವರೆಯಿತು. ಗೋಕರ್ಣದಲ್ಲಿ ನಾಯನರ ಶಿಷ್ಯನಾಗಿ ಗುರು ಸೇವೆ ಮಾಡಿದ ಗಣೇಶಭಟ್ಟನು ಮುಂದೆ ವೇದ ದ್ರಷ್ಟಾರನಾಗಿ, ಗುರು ನಾಯನರಿಂದಲೇ ಬ್ರಹ್ಮರ್ಷಿ ಎಂದು ಕರೆಯಿಸಿಕೊಂಡು ದೈವರಾತನಾಗಿ ಪ್ರಸಿದ್ಧನಾದನು. ಪಾದೈವೀಡುವಿನಲ್ಲಿ ಈ ಗುರುಶಿಷ್ಯರಿಬ್ಬರೂ ತಪವನ್ನಾಚರಿಸುತ್ತಿದ್ದಾಗ ದೈವರಾತನು ಸಮಾಧಿಸ್ಥಿತಿಯನ್ನು ತಲುಪಿ ಅಸ್ಪಷ್ಟವಾಗಿ ಏನೋ ಹೇಳಲಾರಂಭಿಸಿದನು. ಮೊದಲ ದಿನ ನಾಯನರು ಅದನ್ನು ನಿರ್ಲಕ್ಷಿಸಿದರು. ಎರಡನೇ ದಿನ ಅವರು ಆ ಶಬ್ಧಗಳನ್ನು ಕೇಳಿ ಆಶ್ಚರ್ಯಚಕಿತರಾದರು. ಅವು ವೇದ ಮಂತ್ರಗಳಾಗಿದ್ದವು. ಅಪ್ರಯತ್ನವಾಗಿ ದೈವರಾತನಿಂದ ಹೊರಬರುತ್ತಿದ್ದವು. ನಾಯನರು ಅವುಗಳನ್ನು ಬರೆದಿಟ್ಟುಕೊಂಡು ಛಂದೋದರ್ಶನಮ್ ಎನ್ನುವ ಹೆಸರಿಟ್ಟರು. ಉಮಾ ಸಹಸ್ರಮ್, ಶ್ರೀರಮಣಚತ್ವಾರಿಂಶತ್, ಶ್ರೀ ರಮಣ ಗೀತ, ಋಗ್ವೇದ ಭಾಷ್ಯ, ಇಂದ್ರಾಣಿಸಪ್ತಶತಿ, ಸದ್ದರ್ಶನಮ್ ಸಹಿತ ನೂರ ಹದಿನೈದಕ್ಕೂ ಹೆಚ್ಚು ಕೃತಿಕಾವ್ಯಗಳ ಬರವಣಿಗೆ ಕಾವ್ಯಕಂಠರದ್ದು. ಇಂತಹಾ ಮಹಾನ್ ಚೇತನ ತಪಗೈಯುತ್ತಲೇ ಮರೆಯಾಯಿತು. ಅವರು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರೇ ಎಂದು ಭಕ್ತರೊಬ್ಬರು ಪ್ರಶ್ನಿಸಿದಾಗ ಭಗವಾನ್ ರಮಣರು "ಅದು ಅವರಿಗೆ ಹೇಗೆ ಸಾಧ್ಯ? ಅವರ ಸಂಕಲ್ಪಗಳು ಬಹಳ ಪ್ರಬಲವಾಗಿದ್ದವು. ಅಂತಹಾ ಮತ್ತೊಬ್ಬ ವ್ಯಕ್ತಿಯು ಎಂದು ಬರುವನು?" ಎಂದು ಉದ್ಘರಿಸಿದರು. ವಾಸಿಷ್ಠ ಕುಲದಲ್ಲಿ ಉದ್ಭವರಾಗಿ ಕಾವ್ಯಕಂಠರಾಗಿ, ಗಣಪತಿಯಾಗಿ, ಮಹಾಮುನಿಯಾಗಿ ಮರೆಯಾದ ಈ ಮಹಾತಪಸ್ವಿಯ ಬಗೆಗಿನ ಪುಸ್ತಕವೊಂದು ಅದೇ ಹೆಸರಲ್ಲಿ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡಿರುವುದು ಕನ್ನಡಿಗರ ಭಾಗ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ