ಪುಟಗಳು

ಮಂಗಳವಾರ, ಜೂನ್ 15, 2021

ಶಂಕರರು = ರಮಣರು = ಅದ್ವೈತ

ಶಂಕರರು = ರಮಣರು = ಅದ್ವೈತ

ಸೃಷ್ಟಿಕರ್ತ ಬ್ರಹ್ಮನು ತನ್ನ ಮನಸ್ಸಿನಿಂದ ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಎಂಬ ಹೆಸರಿನ ನಾಲ್ಕು ಮಕ್ಕಳನ್ನು ಸೃಷ್ಟಿಸಿದ. ತಮ್ಮ ಸೃಷ್ಟಿಯ ಉದ್ದೇಶವನ್ನು ಅವರು ಬ್ರಹ್ಮನಲ್ಲಿ ವಿಚಾರಿಸಿದರು. ಆಗ ಆತ "ನಾನು ಪ್ರಪಂಚವನ್ನು ಸೃಷ್ಟಿಸಬೇಕಾಗಿದೆ. ಆದರೆ ಆತ್ಮಸಾಕ್ಷಾತ್ಕಾರಕ್ಕಾಗಿ ನಾನು ತಪಸ್ಸಿಗೆ ತೆರಳುತ್ತೇನೆ. ಆದುದರಿಂದ ಪ್ರಪಂಚ ಸೃಷ್ಟಿಗೆಂದೇ ನಿಮ್ಮನ್ನು ಪಡೆದಿದ್ದೇನೆ. ನಿಮ್ಮನ್ನು ಬಹುವಾಗಿಸಿಕೊಳ್ಳುವುದರಿಂದ ಇದು ಸಾಧ್ಯ" ಎಂದು ಉತ್ತರಿಸಿದ. ಈ ಅಭಿಪ್ರಾಯ ಅವರಿಗೆ ಒಪ್ಪಿಗೆಯಾಗಲಿಲ್ಲ. ಇಷ್ಟೆಲ್ಲಾ ಫಜೀತಿಪಡುವುದಕ್ಕಿಂತ ಎಲ್ಲದರ ಮೂಲವನ್ನು ಹುಡುಕಿ ಆನಂದಾನುಭವಕ್ಕೆ ಅವರು ಬಯಸಿ ಬ್ರಹ್ಮನ ಅಪ್ಪಣೆಯನ್ನು ನೆರವೇರಿಸದೆ ಅವನನ್ನು ತೊರೆದು ತಮಗೆ ಮಾರ್ಗದರ್ಶನ ನೀಡುವ ಗುರುವನ್ನು ಹುಡುಕಿಕೊಂಡು ಹೊರಟರು. ಆತ್ಮಸಾಕ್ಷಾತ್ಕಾರಕ್ಕೆ ಪೂರ್ಣ ಅರ್ಹತೆ ಅವರಿಗಿತ್ತು. ಅತ್ಯುತ್ತಮ ಗುರುವಿನಿಂದಲೇ ಮಾರ್ಗದರ್ಶನ ಬೇಕಿತ್ತು. ಶಿವನಲ್ಲದೆ ಅಂತಹಾ ಗುರು ಮತ್ತಾರು? ಅವನು ಯೋಗಿರಾಜ. ಆಲದ ವೃಕ್ಷದ ನೆರಳಿನಲ್ಲಿ ಕುಳಿತ ಶಿವನು ಅವರಿಗೆ ಗೋಚರನಾದನು. ಕುಳಿತಂತೆಯೇ ಆತ ಸಮಾಧಿಯಲ್ಲಿ ಮುಳುಗಿದ್ದ. ಪೂರ್ಣ ಶಾಂತನಾಗಿದ್ದ. ಮೌನವೇ ಅವನಲ್ಲಿ ತುಂಬಿತ್ತು. ಅಂತಹಾ ಶಿವನನ್ನು ಕುಮಾರರು ಕಂಡರು. ಕೂಡಲೇ ಅವರು ಸಮಾಧಿಸ್ಥರಾದರು. ಅವರ ಸಂದೇಹಗಳೆಲ್ಲಾ ಛಿನ್ನವಾದವು.


ಮೌನವೇ ನಿಜವಾದ ಉಪದೇಶ. ಅದು ಪೂರ್ಣ ಉಪದೇಶ. ಸಾಧನೆಯಲ್ಲಿ ತುಂಬಾ ಮುಂದುವರೆದವನಿಗೆ ಮಾತ್ರ ಮೌನೋಪದೇಶ ಸಿದ್ಧಿಸುತ್ತದೆ. ಉಳಿದವರು ಮೌನದಿಂದ ಪೂರ್ಣ ಪ್ರಭಾವವನ್ನು ಗಳಿಸಲಾರರು. ಸತ್ಯದ ವಿವರಣೆಗಾಗಿ ಅಂಥವರಿಗೆ ಮಾತು ಬೇಕು. ಆದರೆ ಸತ್ಯವೋ ವಾಕ್ಕಿಗೆ ಆತೀತ. ಅದಕ್ಕೆ ಯಾವ ವಿವರಣೆಯೂ ಸಲ್ಲದು. ಅದನ್ನು ಕೇವಲ ಸೂಚಿಸಬಹುದು ಅಷ್ಟೇ. ಮನುಷ್ಯನಿಗಿರುವ ಭ್ರಮೆ ಹೇಗೆ ಮಿಥ್ಯೆ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದರಿಂದ ಬಿಡಿಸಿಕೊಳ್ಳಲು ಅವರು ಯತ್ನಿಸುತ್ತಾರೆ. ಆತ್ಮಶೋಧನೆಗೆ ತೊಡಗುತ್ತಾರೆ. ಆತ್ಮವಾಗಿಯೇ ಇರುವುದರಲ್ಲಿ ಅದು ಪರಿಣಮಿಸುತ್ತದೆ. ಶಿವನ ಅವತಾರವೇ ಆದ ಶ್ರೀಶಂಕರರಿಗೆ ಪತಿತ ಜೀವಿಗಳ ಬಗೆಗೆ ತುಂಬಾ ಅನುಕಂಪ. ಪ್ರತಿಯೊಬ್ಬರೂ ಆತ್ಮಾನಂದವನ್ನು ಪಡೆಯಬೇಕೆಂಬುದೇ ಅವರ ಹಂಬಲ. ಮೌನದಿಂದ ಎಲ್ಲರ ಹೃದಯವನ್ನು ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದುದರಿಂದಲೇ ಜನರು ಓದಿ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲಿ ಎಂದು ಶ್ರೀಶಂಕರರು ದಕ್ಷಿಣಾಮೂರ್ತಿ ಶ್ಲೋಕವನ್ನು ರಚಿಸಿದರು. ಮಾಯೆಯ ಮೂಲಭೂತ ಅಂಶಗಳಾದ ಜೀವ, ಪ್ರಪಂಚ ಹಾಗೂ ಈಶ್ವರ ಇವ್ಯಾವುವೂ ಆತ್ಮನಿಗೆ ಅತೀತವಲ್ಲ ಎಂದು ತಿಳಿದಾಗ ಮಾಯೆ ಇಲ್ಲವಾಗುತ್ತದೆ. ಗುರು ಹಾಗೂ ಶಿಷ್ಯನ ಆತ್ಮಗಳಿಂದ ಜಗತ್ತು ಬೇರೆಯಲ್ಲ ಎಂದು ಜಗತ್ತನ್ನು ಕುರಿತು ಮೊದಲ ನಾಲ್ಕು ಶ್ಲೋಕ ಹೇಳಿದರೆ, ಎರಡನೆಯ ನಾಲ್ಕು ಶ್ಲೋಕಗಳು ಶರಣಾಗತನಾದ ಶಿಷ್ಯನು ಗುರುವಿನ ಆತ್ಮನೇ ಆಗಿದ್ದಾನೆ ಎಂದು ಜೀವವನ್ನು, ಒಂಬತ್ತನೆಯ ಶ್ಲೋಕ ಈಶ್ವರನನ್ನು ಹಾಗೂ ಹತ್ತನೆಯ ಶ್ಲೋಕ ಸಾಕ್ಷಾತ್ಕಾರವನ್ನು ಕುರಿತು ಹೇಳುತ್ತವೆ. ಇದು ಶ್ರೀಶಂಕರರ ದಕ್ಷಿಣಾಮೂರ್ತಿ ಸ್ತ್ರೋತ್ರಕ್ಕೆ ಶ್ರೀರಮಣರು ರಚಿಸಿದ ವ್ಯಾಖ್ಯಾನದ ಸಂಕ್ಷಿಪ್ತ ಪಾಠ. 


ಎಸ್. ಕೃಷ್ಣನ್ ಅವರಿಂದ ಅನುವಾದಿತವಾದ ಶ್ರೀಶಂಕರರ "ವಿವೇಕ ಚೂಡಾಮಣಿ"ಗೆ ರಮಣ ಮಹರ್ಷಿಗಳು ಮುನ್ನುಡಿ ಬರೆದಿದ್ದಾರೆ. ಅಲ್ಲಿ ಶಂಕರರ ಅವತಾರದ ಉದ್ದೇಶವನ್ನು ಬಹು ಚೆನ್ನಾಗಿ ವರ್ಣಿಸಿದ್ದಾರೆ. ಮೌನವಾಗಿ ಆತ್ಮಜ್ಞಾನದ ಉಪದೇಶ ಕೊಡುವ ದಕ್ಷಿಣಾಮೂರ್ತಿಯ ಅವತಾರಿಯ ಮಾತುಗಳೂ ಅದ್ಭುತವೇ. "ಜಗತ್ತಿನ ಪ್ರತಿಯೊಂದು ಜೀವಿಯೂ ದುಃಖ ಸ್ಪರ್ಶವೇ ಇಲ್ಲದ ಸುಖವನ್ನು ಹೊಂದಲು ಬಯಸುತ್ತದೆ. ಅಲ್ಲದೆ ಪ್ರತಿಯೊಬ್ಬನೂ ತನ್ನನ್ನು ತಾನು ತುಂಬಾ ಪ್ರೀತಿಸುತ್ತಾನೆ. ಸುಖದ ಅಭಾವದಲ್ಲಿ ಈ ಪ್ರೀತಿ ಸಾಧ್ಯವಿಲ್ಲ. ನಿದ್ರೆಯಲ್ಲಿ ಎಲ್ಲವೂ ಮಾಯವಾಗಿದ್ದರೂ ಸುಖದ ಅನುಭವ ಮಾತ್ರ ಇರುತ್ತದೆ. ಆದರೂ ತನ್ನ ಸಹಜ ಸ್ವಭಾವದ ಬಗೆಗೆ ಅಜ್ಞಾನದಿಂದ, ಜನರು ಲೌಕಿಕ ಜಗತ್ತಿನಲ್ಲಿ ಸುಖದ ಅನ್ವೇಷನೆಯಲ್ಲಿ ತೇಲುತ್ತಾರೆ; ಸುಖದ ನೇರ ಮಾರ್ಗವನ್ನು ಮರೆಯುತ್ತಾರೆ; ತಪ್ಪು ತಿಳುವಳಿಕೆಯಿಂದ ಇಹಲೋಕ ಮತ್ತು ಪರಲೋಕದ ಸುಖಗಳಲ್ಲಿ ಆನಂದ ಅಡಗಿದೆ ಎಂದು ಭ್ರಮಿಸುತ್ತಾರೆ. ಆದರೆ ದುಃಖ ಲೇಪವಿಲ್ಲದೆ ಸುಖ ಆತನಿಗೆ ದೊರಕುವುದೇ ಇಲ್ಲ. ಸುಖಕ್ಕೆ ನೇರ ಹಾದಿಯನ್ನು ತೋರಿಸಿ ಕೊಡುವುದಕ್ಕೆಂದೇ ಈಶ್ವರನು ಶ್ರೀ ಶಂಕರರ ರೂಪದಲ್ಲಿ ಅವತರಿಸಿದ; ವೇದಾಂತದ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ರಚಿಸಿದ. ಅವೆಲ್ಲವೂ ಆನಂದದ ಔನ್ನತ್ಯವನ್ನು ಎತ್ತಿ ತೋರುತ್ತದೆ. ಅಲ್ಲದೆ ಶ್ರೀಶಂಕರರೂಪೀ ಶಿವನು ತನ್ನ ಇಹಲೋಕದ ಜೀವನ ವಿಧಾನದ ಮೂಲಕ ಅದನ್ನು ಪ್ರಮಾಣಿಸಿ ತೋರಿದ. ಆದರೆ ಮೋಕ್ಷದ ಆನಂದಕ್ಕಾಗಿ ಆತುರರಾದರೂ ಅಗತ್ಯ ಪಾಂಡಿತ್ಯವಿಲ್ಲದ ಸಾಧಕರಿಂದ ಈ ಭಾಷ್ಯಗಳಿಗೆ ಅಷ್ಟಾಗಿ ಪ್ರಯೋಜನವಿಲ್ಲ. ಅಂಥ ಸಾಧಕರ ಪ್ರಯೋಜನಕ್ಕಾಗಿಯೇ ಶ್ರೀಶಂಕರರು ಭಾಷ್ಯಗಳ ಸಾರವನ್ನೇ "ವಿವೇಕ ಚೂಡಾಮಣಿ"ಯಾಗಿ ಬರೆದರು. ಮೋಕ್ಷವನ್ನು ಹುಡುಕುವ ಸಾಧಕರಿಗೆ ಅಗತ್ಯ ವಿವರಗಳನ್ನು ತಿಳಿಸುವ ಮೂಲಕ ಅದು ಅವರನ್ನು ನೇರವಾದ ಹಾದಿಯಲ್ಲಿ ನಡೆಸುತ್ತದೆ. ಮಾನವ ಜನ್ಮವನ್ನು ಗಳಿಸುವುದೇ ಬಹು ಕಷ್ಟ. ಹಾಗೆ ಪಡೆದಿರುವಾಗ ತನ್ನ ಸಹಜ ಸ್ವರೂಪವಾದ ಆನಂದಕ್ಕಾಗಿ ಮಾನವನು ಯತ್ನಿಸಬೇಕು. ಜ್ಞಾನದಿಂದ ಮಾತ್ರ ಈ ಆನಂದಾನುಭವ ಸಾಧ್ಯ, ಸತತ ವಿಚಾರದಿಂದಲೇ ಜ್ಞಾನ ಸಾಧನೆ. ಈ ವಿಚಾರ ಮಾರ್ಗವನ್ನು ಅರಿಯುವುದಕ್ಕಾಗಿ ಗುರುವಿನ ಕೃಪೆಯನ್ನು ಸಾಧಕನು ಪಡೆಯಬೇಕು; ಎಂದು ತಿಳಿಸಿ ಮುಂದೆ ಗುರು ಹಾಗೂ ಶಿಷ್ಯನ ಅರ್ಹತೆಗಳನ್ನು ಶ್ರೀ ಶಂಕರರು ವಿವರಿಸುತ್ತಾರೆ. ಶಿಷ್ಯನು ಹೇಗೆ ಗುರುವನ್ನು ಹೊಂದಿ ಅವನನ್ನು ಸೇವಿಸಬೇಕು, ಮೋಕ್ಷದ ಆನಂದವನ್ನು ಪಡೆಯಲು ಗುರೂಪದೇಶದ ಶ್ರವಣ, ಮನನ, ನಿಧಿಧ್ಯಾಸನಗಳ ಸಾಧನೆ ಅಗತ್ಯ ಎಂದು ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ದೇಹಗಳು ಅನಾತ್ಮ ವಸ್ತುಗಳು. ಅನಿತ್ಯವಾದ ಇವುಗಳನ್ನು ತಾನೆಂದು ಭ್ರಮಿಸುವುದು ಅವಿದ್ಯೆಯ ಕಾರಣದಿಂದ. ಇದೇ ಬಂಧನ. ಈ ಅಜ್ಞಾನವನ್ನು ನಿವಾರಿಸಿಕೊಂಡರೆ ಮುಕ್ತಿ ದೊರಕುತ್ತದೆ. ಇದನ್ನು ಗುರೂಪದೇಶದ ಮೂಲಕ ತಿಳಿಯುವುದು ಶ್ರವಣ. ದರ್ಭೆಯ ಅಗ್ರವನ್ನು ಅದರ ಬೇರಿನಿಂದ ಕಿತ್ತುಕೊಳ್ಳುವಂತೆ, ಅನ್ನಮಯಾದಿ ಪಂಚಕೋಶಗಳಿಂದ ಕೂಡಿದ ಈ ಮೂರು ದೇಹಗಳನ್ನೂ ನೇತಿ ನೇತಿ ಎಂದು ತಿರಸ್ಕರಿಸಿ, ಸೂಕ್ಷ್ಮ ವಿಚಾರದಿಂದ ಹೃದಯ ಕುಹರದಲ್ಲಿ ಅಹಂ-ಅಹಂ ಎಂಬ ರೂಪದಲ್ಲಿ ಹಾಗೂ ಸಮಷ್ಟಿಯಲ್ಲಿ ಪ್ರಕಾಶಿಸುವ ಅದನ್ನು ಗುರುತಿಸಿ, ತತ್ತ್ವಮಸಿ ಮಹಾವಾಕ್ಯದಲ್ಲಿನ ತತ್ ಸ್ವರೂಪನಾಗಿ ಅದನ್ನು ತಿಳಿದು ಚಿಂತಿಸುವುದೇ ಮನನ.


ದಿವ್ಯ ಆನಂದ: ನಾಮರೂಪಗಳಿಂದಾದ ಜಗತ್ ಸತ್ ಅಥವಾ ಬ್ರಹ್ಮನ ಅಧೀನವೇ ಆಗಿದೆ, ಬ್ರಹ್ಮನಿಂದ ಅದು ಬೇರೆಯಲ್ಲ. ಆದುದರಿಂದ ಬ್ರಹ್ಮವೊಂದೇ ಸತ್ಯ. ಜೀವ-ಬ್ರಹ್ಮೈಕ್ಯವನ್ನು ತತ್ತ್ವಮಸಿ ಮಹಾವಾಕ್ಯದ ರಹಸ್ಯವಾಗಿ ಗುರುವಿನಿಂದ ತಿಳಿಯುವುದು ಉಪದೇಶ. ಆಗ ಶಿಷ್ಯನು ಅಹಂ ಬ್ರಹ್ಮಾಸ್ಮಿ ಎನ್ನುವ ಸ್ಥಿತಿಯನ್ನು ಅನುಭವಿಸುತ್ತಾನೆ. ಆದರೆ ಅತ್ಯಂತ ಗಾಢವೂ ಬಲಿಷ್ಟವೂ ಆದ ಪೂರ್ವ ವಾಸನೆಗಳು ಉದ್ಬುದ್ಧವಾಗಿ ಆತ್ಮಾನುಭವಕ್ಕೆ ತಡೆಯೊಡ್ಡುತ್ತವೆ. ಮೂರು ಬಗೆಯ ಈ ವಾಸನೆಗಳಿಗೆ ಅಹಂಕಾರವೇ ಮೂಲ. ಅದು ಬಹಿರ್ಜಗತ್ತಿನಲ್ಲಿ ವಿವಿಧ ಸ್ವರೂಪಗಳಲ್ಲಿ ವರ್ಧಿಸುವಂತೆ ಮಾಡುವುದೇ ವಿಕ್ಷೇಪ. ಅದು ರಜೋಗುಣದ ಪರಿಣಾಮವಾದ ಆವರಣ. ಈ ವಾಸನೆಗಳೆಲ್ಲಾ ನಾಶವಾಗುವವರೆಗೂ ಮನಸ್ಸನ್ನು ದೃಢವಾಗಿ ಇರಿಸುವುದು, ಸತತ ಎಚ್ಚರದಿಂದ ಜಾಗೃತವಾಗುವುದು, ತನ್ನ ಸಹಜ ಸ್ವರೂಪವನ್ನು ಅನುಭವಿಸುವುದು - ಇದನ್ನೇ ಅಹಂ ಬ್ರಹ್ಮಾಸ್ಮಿ, ಬ್ರಹ್ಮೈವಾಹಂ ಎನ್ನಲಾಗಿದೆ. ಈ ಅನುಭವವೇ ನಿದಿಧ್ಯಾಸನ ಅಥವಾ ಆತ್ಮಾನುಸಂಧಾನ. ಈ ಪ್ರಕ್ರಿಯೆ ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಹಾಗೆ, ತೈಲಧಾರೆಯಂತೆ ಸತತವಾಗಿ ಹರಿಯುವ ಸಾಧನೆಯಿಂದ ನಿರ್ವಿಕಲ್ಪ ಸಮಾಧಿಯ ಸಹಜ ಶಾಶ್ವತ ಸ್ಥಿತಿ ಉಂಟಾಗುತ್ತದೆ. ಅದರಿಂದ ನೇರವಾದ, ತಕ್ಷಣದ , ತಡೆಯಿಲ್ಲದ ಬ್ರಹ್ಮನ ಅನುಭವ ಉಂಟಾಗುತ್ತದೆ. ಅದು ಏಕ ಕಾಲದಲ್ಲಿ ಜ್ಞಾನವೂ ಹೌದು, ಅನುಭವವೂ ಹೌದು. ಅದು ಕಾಲ-ದೇಶಾತೀತ. 


ಅಖಂಡ ಆನಂದ: ಅಜ್ಞಾನದ ಭ್ರಮೆ, ಮನೋ ಪ್ರವೃತ್ತಿಗಳ ವಿಷವೃತ್ತ ನಾಶವಾಗಿ ಸಂದೇಹಗಳು ಅಳಿದು ಸಂಚಿತ, ಆಗಾಮೀ, ಪ್ರಾರಬ್ಧ ಕರ್ಮಬಂಧನಗಳು ಕಳಚಿ ಹೃದಯಗ್ರಂಥಿ ಕತ್ತರಿಸಲ್ಪಡುವ ಇದೇ ಆತ್ಮಸಾಕ್ಷಾತ್ಕಾರ. ಈ ದ್ವಂದ್ವಾತೀತವಾದ ಸ್ಥಿತಿಯನ್ನು ಅನುಭವಿಸುವುದೇ ಜೀವನದ ಪರಮಪುರುಷಾರ್ಥ. ಅದನ್ನು ಸಾಧಿಸಿದವನೇ ಜೀವನ್ಮುಕ್ತ. ಅವನು ತನ್ನ ಇಚ್ಛೆಯಂತೆ ವರ್ತಿಸಲು ಸ್ವತಂತ್ರ. ಈ ಭೌತಿಕ ದೇಹವನ್ನು ತ್ಯಜಿಸಿದಾಗ ಮುಕ್ತನಾಗುತ್ತಾನೆ - ಮರಣವೇ ಆಗಿರುವ ಜನ್ಮವನ್ನು ಮತ್ತೆ ಪಡೆಯುವುದಿಲ್ಲ. ಅದು ಅಂತಿಮ ಮೋಕ್ಷ. ವಿದೇಹ ಮುಕ್ತಿ."ಇಂಡಿಯನ್ ಫಿಲಾಸಫಿ ಕೃತಿಯಲ್ಲಿ ಪ್ರೊಫೆಸರ್ ರಾಧಾಕೃಷ್ಣನ್ ಶ್ರೀ ಶಂಕರ ಹಾಗೂ ಗೌಡಪಾದರ ಸಿದ್ಧಾಂತಗಳಲ್ಲಿ ವ್ಯತ್ಯಾಸವನ್ನು ಸೂಚಿಸಿದ್ದಾರೆ. ಪರಮ ಸತ್ಯದ ದೃಷ್ಟಿಯಿಂದ ಸ್ವಪ್ನ ಹಾಗೂ ಜಾಗೃತ್ ಸ್ಥಿತಿಗಳಲ್ಲಿ ವ್ಯತ್ಯಾಸವಿಲ್ಲವೆಂದು ಗೌಡಪಾದರು ತಮ್ಮ ಮಾಂಡೂಕ್ಯ ಕಾರಿಕೆಯಲ್ಲಿ ಸೂಚಿಸಿದರೆ ಶಂಕರರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಈ ಎರಡೂ ಅವಸ್ಥೆಗಳ ನಡುವೆ ವ್ಯತ್ಯಾಸವನ್ನು ಸೂಚಿಸಿದ್ದಾರೆ ಎಂದು ರಾಧಾಕೃಷ್ಣನ್ ಅವರ ಅಭಿಪ್ರಾಯ. ಆದರೆ ಇವರೀರ್ವರ ಸಿದ್ಧಾಂತಗಳಲ್ಲಿ ವ್ಯತ್ಯಾಸವಿರುವುದು ಹೌದೇ?" ಎಂದು ಬಂಗಾಳಿ ಇಂಜಿನಿಯರ್ ಬೋಸ್ ಎಂಬಾತ ಪ್ರಶ್ನಿಸುತ್ತಾರೆ. ಆಗ ಮಹರ್ಷಿಗಳು ಕೊಡುವ ಉತ್ತರ ಹೀಗಿದೆ. " ವ್ಯತ್ಯಾಸ ಇರುವುದು ನಮ್ಮ ಕಲ್ಪನೆಯಲ್ಲಿ ಮಾತ್ರ. ತಾನು ಎಚ್ಚೆತ್ತಿದ್ದೇನೆ ಎಂದು ಹೇಳುವವನಿಗೆ ಮಾತ್ರ ಸ್ವಪ್ನದ ಅನುಭವ. ನಿಜವಾಗಿ ನೋಡಿದರೆ ಈ ಎಚ್ಚರ ಹಾಗೂ ಕನಸು ಎರಡೂ ಮಿಥ್ಯೆಯೇ. ಆದರೆ ಮಿಥ್ಯೆಯ ಪ್ರಮಾಣವೇನು? ಜಗತ್ತು ಬರಿಯ ಶಬ್ದವಲ್ಲ, ಅದೊಂದು ವಸ್ತುಸ್ಥಿತಿ. ಬ್ರಹ್ಮವೇ ಆರೋಪಿಸಿಕೊಂಡ ಸ್ಥಿತಿ - ನಸುಕು ಬೆಳಕಿನಲ್ಲಿ ಹಗ್ಗವು ಹಾವಾಗಿ ತೋರುವಂತೆ. ಅಲ್ಲಿಯಾದರೋ ಹಾವಲ್ಲವೆಂದು ತಿಳಿದಾಗ ಮಿಥ್ಯಾ ಸಂಬಂಧ ನಶಿಸಿ ಹೋಗುತ್ತದೆ. ಆದರೆ ಇಲ್ಲಿ ಜಗತ್ತು ಬಳಿಕವೂ ಇರುತ್ತದೆ; ಹೇಗೆಂದರೆ ಮರೀಚಿಕೆ ಎಂಬ ಜ್ಞಾನ ಉಂಟಾದ ಮೇಲೂ ನೀರಿರುವುದೆಂಬ ಭ್ರಮೆ ತೋರುವ ಹಾಗೆ. ಆದರೆ ಮರೀಚಿಕೆಯಲ್ಲಿ ನೀರಿಲ್ಲವೆಂದು ತಿಳಿದ ಬಳಿಕ ಮನುಷ್ಯ ಅದರ ಬೆನ್ನು ಹತ್ತುವುದನ್ನು ಬಿಡುತ್ತಾನೆ. ಅಂದರೆ ಈ ಎಲ್ಲಾ ಉದಾಹರಣೆಗಳನ್ನು ಪ್ರತ್ಯೇಕ ಹೇಳಿಕೆಯಾಗಿ ಪರಿಗಣಿಸದೆ ಅದರ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಸಾಧಕನನ್ನು ಈ ಎಲ್ಲಕ್ಕೂ ಆಧಾರಭೂತವಾದ ಅಂತಿಮ ಸತ್ಯದ ಕಡೆ ಸೆಳೆಯುವುದೇ ಸರಪಳಿಯ ಕೊಂಡಿಯಂತಿರುವ ಈ ಉದಾಹರಣೆಗಳ ಉದ್ದೇಶವಾಗಿರುತ್ತದೆ.


ಅದಕ್ಕಾಗಿಯೇ ಪ್ರಾತಿಭಾಸಿಕ, ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ಸತ್ಯಗಳೆಂದು ಮೂರು ಬಗೆಗಳಾಗುತ್ತವೆ. ವ್ಯಾವಹಾರಿಕದಲ್ಲಿ ಮಾನವ ಜಗತ್ತನ್ನು ಅದರ ಎಲ್ಲಾ ವೈವಿಧ್ಯಗಳೊಂದಿಗೆ ನೋಡುತ್ತಾನೆ. ಇದರ ಕರ್ತೃವೊಬ್ಬನನ್ನು ಊಹಿಸುತ್ತಾನೆ. ಜಗತ್ತನ್ನು ತಾನು ಅನುಭವಿಸುತ್ತಿದ್ದೇನೆ ಎಂದು ನಂಬುತ್ತಾನೆ. ಈ ಮೂರು ಮೂಲಭೂತ ತತ್ತ್ವಗಳೇ ಜಗತ್ತು, ಜೀವ ಮತ್ತು ಈಶ್ವರ. ಅವನು ಸೃಷ್ಟಿಕರ್ತನ ಬಗ್ಗೆ ವಿಚಾರ ಮಾಡಿ ತಿಳಿಯುತ್ತಾನೆ. ಅಮೃತತ್ವದ ಹಂಬಲದಿಂದ ಅವನನ್ನು ಸೇರಲು ಯತ್ನಿಸುತ್ತಾನೆ. ಒಬ್ಬನು ಹೀಗೆ ಬಂಧನದಿಂದ ಮುಕ್ತನಾದರೆ ಉಳಿದವರೂ ಹೀಗೆಯೇ ತಮ್ಮ ತಮ್ಮ ಮುಕ್ತಿಯನ್ನು ಸಾಧಿಸಬೇಕು. ಈ ಎಲ್ಲಾ ದೃಶ್ಯಗಳ ಹಿಂದಿನ ಸತ್ಯವಸ್ತುವನ್ನು ಅವನು ಒಂದು ರೀತಿಯಲ್ಲಿ ಒಪ್ಪುತ್ತಾನೆ. ಮಾಯೆಯೇ ವೈವಿಧ್ಯಕ್ಕೆ ಕಾರಣ. ಅದು ಈಶ್ವರನ ಶಕ್ತಿ ಅಥವಾ ಬ್ರಹ್ಮದ ಕ್ರಿಯೆ. ಹೀಗಾಗಿ ಹಲವು ಜೀವಿಗಳ ಇರವು, ವಸ್ತುಗಳ ಅಸ್ತಿತ್ವ ಮುಂತಾದ ಕಲ್ಪನೆಗಳಿಂದಲೂ ಅದ್ವೈತಕ್ಕೆ ಬಾಧೆಯಿಲ್ಲ. ಅವುಗಳೊಂದಿಗೆ ಅದ್ವೈತದ ಸಂಘರ್ಷವಿಲ್ಲ. ಪ್ರಾತಿಭಾಸಿಕದಲ್ಲಿ ಜಗತ್ತು, ಜೀವ ಹಾಗೂ ಈಶ್ವರ ಇವು ನೋಟಕನ ದೃಷ್ಟಿಯಿಂದ ಮಾತ್ರ. ಅವನಿಂದ ಸ್ವತಂತ್ರವಾಗಿ ಅವು ಇರಲಾರವು. ಇರುವುದು ಒಂದೇ ಜೀವ ಅದು ಈಶ್ವರನೇ. ಉಳಿದೆಲ್ಲ ಮಿಥ್ಯೆ. ಪಾರಮಾರ್ಥಿಕ ಎಂದರೆ ಎರಡನೆಯದನ್ನು ಒಪ್ಪದ ಅಜಾತವಾದ. ತ್ರಿಕಾಲಾಬಾಧಿತವಾದ ಸತ್ಯ. ಸತ್ಯ ಇರುವುದು ಅಥವಾ ಇಲ್ಲದಿರುವುದು, ಹುಡುಕುವುದು  ಪಡೆಯುವುದು ಎಂದಿಲ್ಲ. ಬಂಧ ಮೋಕ್ಷ ಮುಂತಾದುವೂ ಇಲ್ಲ.


ಸತ್ಯ ಹಾಗೂ ಕಲ್ಪನೆಯ ವಿಚಾರವನ್ನು ಭಗವಾನ್ ರಮಣ ಮಹರ್ಷಿಗಳು ವಿಮರ್ಶಿಸಿದ್ದು ಹೀಗೆ. ಸರಿಯಾಗಿ ಅರ್ಥಮಾಡಿಕೊಳ್ಳದೆ ತಾಂತ್ರಿಕರು ಮೊದಲಾದವರು ಶ್ರೀಶಂಕರರ ಸಿದ್ಧಾಂತವನ್ನು  ಮಾಯಾವಾದ ಎಂದು ತಿರಸ್ಕರಿಸುತ್ತಾರೆ. ಅವರು ಹೇಳುವುದೇನು? ಶಂಕರರ ಪ್ರಕಾರ ಬ್ರಹ್ಮವೊಂದೇ ಸತ್ಯ; ಜಗತ್ತು ಮಿಥ್ಯೆ; ಬ್ರಹ್ಮವೇ ಜಗತ್ತು. ಎರಡನೆಯ ಸಿದ್ಧಾಂತದಲ್ಲಿ ಅವರು ನಿಲ್ಲುವುದಿಲ್ಲ. ಮೂರನೆಯದರಿಂದ ಅದನ್ನು ಸಮರ್ಥಿಸುತ್ತಾರೆ. ಇದರ ಮಹತ್ವವೇನು? ವಿಶ್ವವು ಬ್ರಹ್ಮನಿಂದ ಬೇರೆ ಎಂದು ಕಲ್ಪಿಸಿಕೊಳ್ಳಲಾಗಿದೆ - ಇದು ತಪ್ಪು. ರಜ್ಜು-ಸರ್ಪದ ದೃಷ್ಟಾಂತವನ್ನು ಅವರ ವಿರೋಧಿಗಳು ಎತ್ತಿ ತೋರಿಸುತ್ತಾರೆ. ಇದು ಷರತ್ತು ರಹಿತ ಆರೋಪಣೆ. ಹಗ್ಗದ ಸತ್ಯವನ್ನು ತಿಳಿಯುತ್ತಿದ್ದಂತೆಯೇ, ಹಾವಿನ ಭ್ರಾಂತಿ ಕೂಡಲೇ ತನಗೆ ತಾನೇ ಅಳಿದು ಹೋಗುತ್ತದೆ. ಇದರ ಜೊತೆಗೆ ಮರು ಮರೀಚಿಕಾ, ಮೃಗತೃಷ್ಣಾ ಮುಂತಾದ ಆರೋಪಿತ ಸಂಗತಿಗಳನ್ನೂ ಗಣನೆಗೆ ತಂದುಕೊಳ್ಳಬೇಕು. ಮಿಥ್ಯೆ ಎಂದು ತಿಳಿದ ಮೇಲೂ ಭ್ರಾಂತಿ ಮಾಯವಾಗದು. ಅದರ ನೋಟ ಇದ್ದೇ ಇದೆ. ಆದರೆ ಮನುಷ್ಯನು ಅದರ ಬೆನ್ನು ಹತ್ತಿ ಹೋಗುವುದಿಲ್ಲ. ಈ ಎರಡು ಉದಾಹರಣೆಗಳ ಬೆಳಕಿನಲ್ಲೂ ಶ್ರೀ ಶಂಕರರನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತು ಮಿಥ್ಯೆ. ಅದು ತಿಳಿದ ಮೇಲೂ ಜಗತ್ತಿನ ತೋರಿಕೆ ಮುಂದುವರೆಯುತ್ತದೆ. ಆದರೆ ಜಗತ್ತು ಬ್ರಹ್ಮನಿಂದ ಬೇರೆಯಲ್ಲ ಎಂದು ಚೆನ್ನಾಗಿ ಅರಿಯಬೇಕು. ಪ್ರಪಂಚವು ತೋರಿ ಬರುತ್ತದೆ ಎಂದರೆ - ಅದು ಯಾರಿಗೆ? ಅವರು ಕೇಳುತ್ತಾರೆ. ನಿಮ್ಮ ಉತ್ತರ ಏನು? ಆತ್ಮನಿಗೆ ಎಂದೇ ಹೇಳಬೇಕು. ಆದುದರಿಂದ ಆತ್ಮವೊಂದೇ ಸತ್ಯ. ಇದು ಶ್ರೀ ಶಂಕರರ ತೀರ್ಮಾನ. ಆತ್ಮವೆಂದೇ ಭಾವಿಸಿದಾಗ ಜಗತ್ತು ಸತ್ಯ. ಆತ್ಮನಿಂದ ಬೇರೆ ಎಂದು ತಿಳಿದಾಗ ಮಿಥ್ಯೆ. ಈಗ ತಾಂತ್ರಿಕರು ಮೊದಲಾದವರು ಹೇಳುವುದೇನು? ಸತ್ಯ ವಸ್ತುವಿನ ಭಾಗವೇ ಆಗಿರುವುದರಿಂದ ಈ ತೋರಿಕೆಗಳೂ ಈ ತೋರಿಕೆಗಳೂ ಸತ್ಯ ಎಂದು ಅವರೆನ್ನುತ್ತಾರೆ. ಇವೆರಡೂ ಹೇಳಿಕೆಗಳೂ ಒಂದೇ ಅಲ್ಲವೇ? ಸತ್ಯ - ಅಸತ್ಯಗಳು ಒಂದೇ ಎಂದು ಹೇಳಿದಾಗ ನನ್ನ ಅಭಿಪ್ರಾಯ ಇದೇ ಆಗಿತ್ತು.


ವಿರೋಧಿಗಳು ಮುಂದುವರೆದು ಹೇಳುತ್ತಾರೆ: ನಿರ್ಬಂಧಿತ - ನಿರ್ಬಂಧರಹಿತ ಭ್ರಮೆಗಳನ್ನು ಪರಿಶೀಲಿಸಿದಾಗ ಮರೀಚಿಕೆಯಲ್ಲಿನ ನೀರು ಪೂರ್ಣವಾಗಿ ಮಿಥ್ಯೆ. ಏಕೆಂದರೆ ಆ ನೀರನ್ನು ಯಾವುದಕ್ಕೂ ಬಳಸಲಾಗುವುದಿಲ್ಲ. ಆದರೆ ಜಗತ್ತಿನ ತೋರಿಕೆ ಬೇರೆ ಬಗೆಯದು. ಅದರಿಂದ ಪ್ರಯೋಜನ ಉಂಟು. ಅದಕ್ಕೆ ಉದ್ದೇಶ ಉಂಟು. ಎಂದ ಮೇಲೆ ಅವೆರಡೂ ಉದಾಹರಣೆಗಳು ಎಷ್ಟರಮಟ್ಟಿಗೆ ಸರಿ ಹೊಂದುತ್ತವೆ? ಯಾವುದೋ ಉದ್ದೇಶ ಅಥವಾ ಉದ್ದೇಶಗಳನ್ನು ಸಾಧಿಸುತ್ತದೆ ಎಂಬ ಕಾರಣದಿಂದ ಮಾತ್ರ ತೋರಿಕೆಯು ಸತ್ಯವಾಗಲು ಸಾಧ್ಯವಿಲ್ಲ. ಸ್ವಪ್ನದ ಉದಾಹರಣೆಯನ್ನು ತೆಗೆದುಕೊಳ್ಳಿ. ಸ್ವಪ್ನದ ಸೃಷ್ಟಿಗಳಿಗೂ ಉದ್ದೇಶವುಂಟು. ಕನಸಿನ ಉದ್ದೇಶಗಳನ್ನು ಅವು ಪೂರೈಸುತ್ತವೆ. ಕನಸಿನ ತೃಷ್ಣೆಯನ್ನು ಕನಸಿನ ನೀರು ತೃಪ್ತಿಗೊಳಿಸುತ್ತದೆ. ಆದರೆ ಜಾಗೃತ ಸ್ಥಿತಿಯಲ್ಲಿ ಈ ಸ್ವಪ್ನಸೃಷ್ಟಿ ಒಂದು ಮಿಥ್ಯೆಯೇ. ಯಾವುದು ಸತತವಾಗಿ ಇಲ್ಲವೋ ಅದು ಸತ್ಯವಲ್ಲ. ಸತ್ಯವಸ್ತು ಯಾವಾಗಲೂ ಸತ್ಯವಾಗಿರಬೇಕು - ಒಂದು ಕಾಲದಲ್ಲಿ ಸತ್ಯ ಮತ್ತೊಂದರಲ್ಲಿ ಅಲ್ಲ ಎಂಬಂತೆ ಇರಬಾರದು. ಯಕ್ಷಿಣಿಗಾರನ ಸೃಷ್ಟಿಯೂ ಹೀಗೆಯೇ. ಸತ್ಯವೆಂದು ತೋರುತ್ತದೆ. ಆದರೆ ಕೇವಲ ಭ್ರಮೆ. ಹೀಗೆಯೇ ಪ್ರಪಂಚವೂ ತನಗೆ ತಾನೇ ಸತ್ಯವಾಗಿರಲಾರದು. ಎಂದರೆ ಸತ್ಯ ವಸ್ತುವಿನಿಂದ ಸ್ವತಂತ್ರವಾಗಿ ಬೇರೆಯಾಗಿ ಇರದು. ಸಿನಿಮಾ ತೆರೆಯ ಮೇಲೆ ಬೆಂಕಿಯ ದೃಶ್ಯವಿದೆ. ಅದು ತೆರೆಯನ್ನು ಸುಟ್ಟು ಹಾಕುತ್ತದೆಯೇ? ನೀರಿನ ಪ್ರವಾಹವಿದೆ, ಅದು ತೆರೆಯನ್ನು ತೋಯಿಸುತ್ತದೆಯೇ? ಆಯುಧಗಳು-ಉಪಕರಣಗಳು ಇವೆ. ಅವು ತೆರೆಯನ್ನು ಹರಿದು ಹಾಕಬಲ್ಲವೇ? ಅಚ್ಛೇದ್ಯೋಯಂ, ಅದಹ್ಯೋಯಂ, ಅಕ್ಲೇದ್ಯೋಯಂ, ಮುಂತಾಗಿ ಹೇಳಿರುವುದು ಈ ಅರ್ಥದಲ್ಲಿಯೇ. ಬೆಂಕಿ, ನೀರು ಮುಂತಾದುವೆಲ್ಲಾ ಬ್ರಹ್ಮ ಅಂದರೆ ಆತ್ಮವೆಂಬ ತೆರೆಯ ಮೇಲಿನ ತೋರಿಕೆಗಳು: ಅದನ್ನು ಅವು ಬಾಧಿಸುವುದಿಲ್ಲ.


ಆಲಿವರ್ ಲಕೋಂಬಿ ಎನ್ನುವ ಫ್ರೆಂಚ್ ವ್ಯಕ್ತಿ 1936ರಲ್ಲಿ ಶ್ರೀರಮಣ ಮಹರ್ಷಿಗಳ ದರ್ಶನಕ್ಕಾಗಿ ಬರುತ್ತಾನೆ. ಆತ ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಅವುಗಳ ಮೇಲಿನ ಶಾಂಕರ ಭಾಷ್ಯ, ರಾಮಾನುಜ ಭಾಷ್ಯಗಳನ್ನು ಸಂಸ್ಕೃತ ಮೂಲದಲ್ಲೇ ಓದಿಕೊಂಡಿದ್ದ. ಆತ ರಮಣರನ್ನು ಭೇಟಿಯಾದ ಸಮಯದಲ್ಲಿ ಮಹರ್ಷಿಗಳ ಬೋಧನೆ ಶಂಕರ ಸಿದ್ಧಾಂತಕ್ಕೆ ಅನುಗುಣವಾಗಿದೆಯೇ ಎಂದು ಕೇಳುತ್ತಾನೆ. ಆಗ ರಮಣ ಮಹರ್ಷಿಗಳು "ಮಹರ್ಷಿಯ ಬೋಧನೆ ಅನುಭವ ಹಾಗೂ ಸಾಕ್ಷಾತ್ಕಾರಗಳಿಗೆ ಅನುಗುಣವಾಗಿದೆ. ಶ್ರೀಶಂಕರರ ಸಿದ್ಧಾಂತದೊಡನೆ ಸಾಮ್ಯತೆಯನ್ನು ಅಲ್ಲಿ ಇತರರು ಕಾಣುತ್ತಾರೆ" ಎಂದು ಉತ್ತರಿಸುತ್ತಾರೆ. "ಲೋಕವ್ಯವಹಾರದಲ್ಲಿ ದಲ್ಲಾಳಿಗಳಿರಬಹುದು. ಲೋಕಾತೀತದೊಳಗೆ ದಲ್ಲಾಳಿಗಳಿಗೆ ಅವಕಾಶವಿಲ್ಲ. ದಲ್ಲಾಳಿಗಳಿಲ್ಲದ ಏಕೈಕ ದರ್ಶನ ಅದ್ವೈತ. ಉಳಿದೆಲ್ಲಾ ಮತ ಪ್ರವರ್ತಕರಲ್ಲಿ ನಾನು ಹೇಳಿದ್ದೇನೆ ನೀನು ಒಪ್ಪಿಕೋ ಎನ್ನುವ ಭಾವವಿದ್ದರೆ, ಇಲ್ಲಿ ನಿನ್ನ ಬದುಕಿನಿಂದಲೇ ನೀನು ಹುಡುಕಿಕೋ ಎನ್ನುವ ಸತ್ಯಪಥದ ದಿಗ್ದರ್ಶನವಿದೆ." ಎಂದು ಶ್ರೀಶಂಕರರ ಬಗ್ಗೆ ಉಪನ್ಯಾಸ ಮಾಡುವಾಗ ಒಂದು ಕಡೆ ಶತಾವಧಾನಿಗಳು ಹೇಳುತ್ತಾರೆ. ಆದಿಯೋಗಿಯ ಅಪರಾವತಾರರಾದ ದಕ್ಷಿಣಾಮೂರ್ತಿ, ಶ್ರೀಶಂಕರ ಹಾಗೂ ಶ್ರೀರಮಣರಂತಹಾ ಅವಧೂತ ಪರಂಪರೆಯ ಜೀವನ ಇದಕ್ಕೆ ನಿದರ್ಶನವಾಗಿ ನಿಂತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ