ಪುಟಗಳು

ಬುಧವಾರ, ಸೆಪ್ಟೆಂಬರ್ 29, 2021

ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ

 ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ



ಭವಿಷ್ಯತ್ಪುರಾಣದ ಶ್ಲೋಕವೊಂದು ಇಂತೆನ್ನುತ್ತದೆ:-


ವಿಂಶದ್ಭಿಃ ಕರ್ಮಯೋಗಂ ಚ ಸಮಾರಾಧ್ಯ ಶಿವೋsಭವತ್

ಪೂರ್ಣೇ ತ್ರಿಂಶಚ್ಛತೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ 

ಶಕಾನಾಂಚ ವಿನಾಶಾರ್ಥಮ್ ಆರ್ಯಧರ್ಮ ವಿವೃದ್ಧಯೇ 

ಜಾತಶ್ಶಿವಾಜ್ಞಯಾಸೋsಪಿ ಕೈಲಾಸಾತ್ ಗುಹ್ಯಕಾಲಯಾತ್


ಹಿಂದಿನ ಕಾಲದಲ್ಲಿ ಶಿವದೃಷ್ಟಿಯೆಂಬೊಬ್ಬ ಬ್ರಾಹ್ಮಣನು ತನ್ನ ಅನೇಕ ಶಿಷ್ಯರೊಂದಿಗೆ ವನಕ್ಕೆ ತೆರಳಿದನು. ಅಲ್ಲಿ ಇಪ್ಪತ್ತು ವರ್ಷಗಳ ಕಾಲ ಕರ್ಮಯೋಗಮಾರ್ಗದಿಂದ ಶಿವನನ್ನು ಆರಾಧಿಸಿ ಶಿವನೇ ಆಗಿ ಹೋದನು.  ಮೂರುಸಾವಿರ ವರ್ಷಗಳ ತರುವಾಯ ಭಯಂಕರ ಕಲಿಯುಗವು ಪ್ರಾಪ್ತವಾಯಿತು. ಆಗ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಉಜ್ಜೀವನಗೊಳಿಸಲು ಶಿವನ ಆಜ್ಞೆಯಂತೆ ಶಿವದೃಷ್ಟಿಯು ಕೈಲಾಸದಿಂದ ಇಳಿದು ಧರೆಯಲ್ಲಿ ಅವತರಿಸಿದನು.  ಪ್ರಮರ ರಾಜನ ವಂಶದಲ್ಲಿ ಜನಿಸಿದ ಇವನಿಗೆ ತಂದೆಯಾದ ಗಂಧರ್ವಸೇನನು ವಿಕ್ರಮಾದಿತ್ಯನೆಂಬ ಹೆಸರನ್ನಿರಿಸಿದ. ಮಹಾಬುದ್ಧಿಶಾಲಿಯಾದ ವಿಕ್ರಮನು ಐದು ವರ್ಷ ತುಂಬುತ್ತಿದ್ದಂತೆ ವನಕ್ಕೆ ತೆರಳಿ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ಸಫಲಮನೋರಥನಾಗಿ ಸಂಪತ್ತಿನಿಂದ ಕೂಡಿ, ದಿವ್ಯವಾಗಿ ಶೋಭಿಸುತ್ತಿದ್ದ ಅಂಬಾವತೀ ನಗರಕ್ಕೆ ಬಂದು ಅಲ್ಲಿ ಪರಮೇಶ್ವರನು ತನಗಾಗಿ ಕಳುಹಿಸಿದ ಮೂವತ್ತೆರಡು ಪುತ್ಥಳಿಯುಕ್ತವಾದ ದೇವಲೋಕದ ಸಿಂಹಾಸನವನ್ನು ಏರಿ ರಾಜ್ಯಪಾಲನೆಯನ್ನು ಮಾಡುತ್ತಿದ್ದ. ಅವನ ಮೈಗಾವಲಿಗಾಗಿ ಪಾರ್ವತೀ ದೇವಿಯು ಬೇತಾಳನನ್ನು ಕಳುಹಿಸಿದಳು. ಆ ಮಹಾರಾಜನು ಮಹಾಕಾಲೇಶ್ವರನ ಸನ್ನಿಧಿಗೆ ತೆರಳಿ ಪರಶಿವನನ್ನು ಆರಾಧಿಸುತ್ತಿದ್ದನು. ಒಂದು ವ್ಯೂಹ ವಿಸ್ತಾರವುಳ್ಳ, ನಾನಾವರ್ಣದ ಧಾತುಗಳ ಸ್ತಂಭಗಳಿಂದ ಕೂಡಿ, ನಾನಾ ಮಣಿರತ್ನಗಳಿಂದ ಅಲಂಕೃತವು, ನಾನಾ ವೃಕ್ಷಲತೆಗಳಿಂದ ಕೂಡಿದ ಸಭಾಭವನವನ್ನು ನಿರ್ಮಿಸಿ ಅಲ್ಲಿ ಸಿಂಹಾಸನದಲ್ಲಿ ವಿರಾಜಿತನಾದನು. ವೇದ ವೇದಾಂಗ ಪಾರಂಗತರನ್ನೂ ಯಥೋಚಿತವಾಗಿ ಶಾಸ್ತ್ರೋಕ್ತ ವಿಧಾನದಿಂದ ಸತ್ಕರಿಸಿ ಧರ್ಮಶ್ರವಣ ಮಾಡಿದನು ಎಂದು ಮುಂತಾಗಿ  ಅಲ್ಲದೆ ಈಶ್ವರಾಜ್ಞೆಯಂತೆ ಬಂದ ಬೇತಾಳನು ಕಥೆಗಳನ್ನು ಹೇಳಿ, ತೊಡಕಾದ ಪ್ರಶ್ನೆಗಳನ್ನು ಕೇಳಿ ವಿಕ್ರಮಾರ್ಕನನ್ನು ಪರೀಕ್ಷಿಸುವ ಕಥೆಯನ್ನು ಭವಿಷ್ಯತ್ಪುರಾಣದ ಮುಂದಿನ ಶ್ಲೋಕಗಳು ಹೇಳುತ್ತವೆ. 


ವಿಕ್ರಮಾದಿತ್ಯ ಮತ್ತು ಬೇತಾಳ ಕಥೆಗಳು ಭಾರತೀಯ ಜನಮಾನಸಕ್ಕೆ ಚಿರಪರಿಚಿತ. ವಿಕ್ರಮ ಶಕೆ, ವೇತಾಲ ಪಂಚವಿಂಶತಿ ಕಥಾ, ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನನ್ನು ಭಾರತದಲ್ಲಿ ಜೀವಂತವಾಗಿಟ್ಟವು. ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಗ ಇಂದಿಗೂ ವಿಕ್ರಮ ಶಕೆಯನ್ನೇ ಅವಲಂಬಿಸಿದೆ. ಪುರಾಣಗಳು ರಾಜರನ್ನು ದೈವತ್ವಕ್ಕೇರಿಸಿ ಆಧುನಿಕ ಶಿಕ್ಷಣವನ್ನು ಪಡೆದ ಮನಸ್ಸು ನಂಬಲು ಕಷ್ಟವಾಗುವಂತೆ ಭಾರತದ ಇತಿಹಾಸವನ್ನು ವಿವರಿಸಿದ ಮಾತ್ರಕ್ಕೆ ಪುರಾಣಗಳೆಲ್ಲಾ ಕಪೋಲಕಲ್ಪಿತಗಳೆಂದು ಅಲ್ಲಗೆಳೆಯುವುದು ನಿಜೇತಿಹಾಸವನ್ನು ಹುಡುಕುವವರಿಗೆ ಭೂಷಣವಲ್ಲ. ಅದು ಇತಿಹಾಸವನ್ನು ಸಾಮಾನ್ಯ ಜನಮನಕ್ಕೆ ತಲುಪಿಸುವ ಅಂದಿನ ರೀತಿ. ಪುರಾಣಗಳ ಕಥೆಗಳೊಳಗಿಂದ ನಮ್ಮ ಇತಿಹಾಸವನ್ನು ನಾವೇ ಹೊರತೆಗೆದು ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಕಟ್ಟಿಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಬ್ರಿಟಿಷರು ಬರೆದ ಪೊಳ್ಳು ಇತಿಹಾಸವನ್ನು ನಂಬಿ ಯಾಮಾರಿದ ಹಾಗೆ ಮುಂದಿನ ಪೀಳಿಗೆಯೂ ಬೆಳೆದು ನಿಜ ಇತಿಹಾಸವೇ ಮರೆಯಾಗಿ ಬಿಡುವ ಅಪಾಯವಿದೆ. ಭವಿಷ್ಯತ್ ಪುರಾಣದ ಈ ಶ್ಲೋಕಗಳಿಂದ ದೈವತ್ವಕ್ಕೇರಿಸಿದ ವಿಚಾರವನ್ನು ಬದಿಗಿಟ್ಟು ವಾಸ್ತವಿಕ ದೃಷ್ಟಿಯಿಂದ ಅಥವಾ ಇಂದಿನ ಕಾಲಕ್ಕೆ ಹೋಲಿಸಿ ಘಟನೆಯನ್ನು ಹೆಕ್ಕಿ ತೆಗೆದರೂ ಪ್ರಮರ ವಂಶದ ಗಂಧರ್ವಸೇನನಿಗೆ ವಿಕ್ರಮಾದಿತ್ಯನೆಂಬ ಅಪೂರ್ವ ಶಿಶುವು ಶಿವಕೃಪೆಯಿಂದ ಜನಿಸಿತು. ಬುದ್ಧಿವಂತನಾದ ವಿಕ್ರಮಾದಿತ್ಯ ಐದನೇ ವರ್ಷಕ್ಕೆ ಅಧ್ಯಯನ, ತಪಸ್ಸು, ಸಾಧನೆಯಿಂದ ಅಪಾರ ಸಂಪತ್ತನ್ನು ಗಳಿಸಿ ಚಕ್ರವರ್ತಿಯಾಗಿ ಸ್ವರ್ಣಸಿಂಹಾಸನವನ್ನೇರಿ ವಿದ್ವಜನರನ್ನು ಪೋಷಿಸಿ, ಜನರನ್ನು ಪಾಲಿಸಿ, ಸನಾತನ ಧರ್ಮವನ್ನು ಉಜ್ಜೀವಿಸಿ ಓರ್ವ ಶಕಕರ್ತನಾಗಿ ಮೆರೆದ ಎನ್ನುವುದನ್ನು ಒಪ್ಪಬಹುದಷ್ಟೇ. ಒಪ್ಪಲೇಬೇಕಾಗುತ್ತದೆ; ಇಲ್ಲದಿದ್ದರೆ ಆತನ ಹೆಸರಿನ ಶಕೆಯೊಂದು ಇಲ್ಲಿಯವರೆಗೆ ಉಳಿದು ಬೆಳೆದು ಬರುತ್ತಿತ್ತೇ? ಅವನಿಲ್ಲ ಎಂದಾಗಿದ್ದರೆ ಇಂದಿಗೂ ನಮ್ಮ ಸಂಸ್ಕೃತಿಯ ಮಾತ್ರವಲ್ಲ ಜಗತ್ತಿನ ಮಹಾಕಾವ್ಯ, ಮಹಾಗ್ರಂಥಗಳಾಗಿ ಮನ್ನಣೆ ಪಡೆದ ಕೃತಿಗಳನ್ನು ರಚಿಸಿದ ಮಹಾನ್ ವಿದ್ವಾಂಸರುಗಳಾದ ಆ ನವರತ್ನಗಳನ್ನು ಪೋಷಿಸಿದವರಾದರೂ ಯಾರು? ಮಾತ್ರವಲ್ಲ ವಿಕ್ರಮಾದಿತ್ಯನೆಂಬ ಚಕ್ರವರ್ತಿ ಕಾಲ್ಪನಿಕ ಎಂದಾಗಿದ್ದರೆ ಇವತ್ತು ಕುತುಬುದ್ದೀನ್ ಐಬಕ್'ನಿಂದ ನಿರ್ಮಿತವಾದದ್ದು ಎಂದು ನಾವು ನೀವೆಲ್ಲ ತಪ್ಪು ತಿಳಿದಿರುವ ಕುತುಬ್ ಮಿನಾರ್ ಕೂಡಾ ಕಾಲ್ಪನಿಕವೇ ಆಗಿರಬೇಕಿತ್ತು!


ಸಾಮಾನ್ಯ ಯುಗಕ್ಕಿಂದ ಮೊದಲಿನ 3138ಕ್ಕೆ ಮಹಾಭಾರತ ಯುದ್ಧ ಮುಗಿಯಿತು. ಮುಂದಿನ ಮೂವತ್ತಾರನೇ ವರ್ಷಕ್ಕೆ ಭಗವಾನ್ ಶ್ರೀಕೃಷ್ಣನ ನಿರ್ವಾಣದ ಜೊತೆಗೆ ಕಲಿಯ ಪ್ರವೇಶವೂ ಆಯಿತು. ಕಲಿಯುಗದ 3000ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಯಿತು. ಅಂದರೆ ಸಾಮಾನ್ಯ ಯುಗಕ್ಕಿಂತ 101ವರ್ಷ ಮೊದಲು. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ವಿಕ್ರಮಾದಿತ್ಯ ಎನ್ನುವುದು ತಂದೆ ಗಂಧರ್ವಸೇನ ಹುಟ್ಟಿದಾಗ ಇಟ್ಟ ಹೆಸರೇ ಹೊರತು ಬಿರುದಲ್ಲ. ಸಾಮಾನ್ಯ ಯುಗಕ್ಕಿಂತ ಮೊದಲಿನ 82ರಲ್ಲಿ ಆತ ಪಟ್ಟವೇರಿದ. ಪ್ರಮರ ವಂಶದ ಮೂವತ್ತೆರಡು ರಾಜರ ಉಲ್ಲೇಖ ಸಿಗುತ್ತದೆ. ಈ ರಾಜವಂಶದ ಎಂಟನೇ ರಾಜನೇ ವಿಕ್ರಮಾದಿತ್ಯ. ಐದನೇ ವರ್ಷಕ್ಕೆ ತಪಸ್ಸಿಗೆ ತೆರಳಿದ ಬಾಲಕ ವಿಕ್ರಮ ಹನ್ನೆರಡು ವರ್ಷಗಳ ಸಾಧನೆಯ ಬಳಿಕ  ಅಂಬಾವತಿ(ಉಜ್ಜೈನಿ)ಗೆ ಮರಳಿ ತನ್ನ ಇಪ್ಪತ್ತನೇ ವರ್ಷದಲ್ಲಿ 32 ಪುತ್ಥಳಿಗಳಿದ್ದ ಸ್ವರ್ಣಸಿಂಹಾಸನವನ್ನೇರಿದ. ಮುಂದಿನ ಇಪ್ಪತ್ತನಾಲ್ಕು ವರ್ಷಗಳ ದಂಡಯಾತ್ರೆಯಲ್ಲಿ ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ, ಅಖಂಡ ಭಾರತ ಭೂಮಂಡಲವನ್ನು ಗೆದ್ದು ಸಾಮಾನ್ಯ ಯುಗ ಪೂರ್ವದ 57ರಲ್ಲಿ ವಿಕ್ರಮಶಕೆಯನ್ನು ಸ್ಥಾಪಿಸಿ ದಕ್ಷಿಣದ ಸಾಗರದಿಂದ ಹಿಮಾಲಯದವರೆಗೂ ಆಳ್ವಿಕೆ ನಡೆಸಿ ಚಕ್ರವರ್ತಿಯಾಗಿ ಮೆರೆದ. ಮುಂದಿನ ಎಪ್ಪತ್ತು ವರ್ಷಗಳ ಕಾಲ ಉಜ್ಜೈಯಿನಿಯಲ್ಲಿ ವಿದ್ವಾಂಸರ ಮಧ್ಯೆ ಕಳೆದು ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ. ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಸಾಮಾನ್ಯ ಯುಗ 14ರಲ್ಲಿ ತೀರಿಕೊಂಡಾಗ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಬೆದರಿ ಕಾಶ್ಮೀರ ರಾಜ ಪ್ರಮುಖರು ವಿಕ್ರಮನಲ್ಲಿ ಮೊರೆಯಿಟ್ಟರು. ಆಗ ತನ್ನ ಮಂತ್ರಿ ಮಾತೃಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಗತಿಸಿದನೆಂದು ಕಲ್ಹಣನ ರಾಜತರಂಗಿಣಿಯಲ್ಲಿಯೂ ಸಹ ಉಲ್ಲೇಖವಿದೆ. 


ವಿಕ್ರಮಾದಿತ್ಯನ ಐತಿಹಾಸಿಕತೆಗೆ ಮತ್ತಷ್ಟು ಮಹತ್ವದ ಸಾಕ್ಷಿ ಒದಗಿಸಿರುವುದು ಅವನ ಆಸ್ಥಾನದಲ್ಲಿದ್ದ ನವರತ್ನಗಳಲ್ಲೊಬ್ಬನಾಗಿದ್ದ ಕವಿಕುಲಗುರು ಕಾಳಿದಾಸ. ಕಾಳಿದಾಸ ತನ್ನ ಕೃತಿಯಾದ "ಜ್ಯೋತಿರ್ವಿದಾಭರಣ"ದಲ್ಲಿ ಕಲಿಯುಗದ ಶಕೆಗಳು ಹಾಗೂ ಶಕಕರ್ತರ ಬಗ್ಗೆ ಹೀಗೆ ಬರೆದಿದ್ದಾನೆ.


ಯುಧಿಷ್ಟಿರೋ ವಿಕ್ರಮಶಾಲಿವಾಹನೌ 

ನರಾಧಿನಾಥೋ ವಿಜಯಾಭಿನಂದನಃ | 

ಇಮೇನ ನಾಗಾರ್ಜುನಮೇದಿನೀವಿಭು 

ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||

ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | 

ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ || 

ಶಾಲೇಯಧಾರಾಭೃತಿ ಶಾಲಿವಾಹನಃ | 

ಸುಚಿತ್ರಕೂಟೇ ವಿಜಯಾಭಿನಂದನಃ || 

ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | 

ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||


ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ ಈ ಆರು ಜನ ಕಲಿಯುಗದ ಶಕಕಕರ್ತರುಗಳು. ಸಾಮಾನ್ಯ ಯುಗ ಪೂರ್ವದ 3138ರಲ್ಲಿ ಆರಂಭವಾದ ಯುಧಿಷ್ಟಿರ ಶಕೆಯ ಒಟ್ಟು ಅವಧಿ 3080 ವರ್ಷಗಳು. ಸಾಮಾನ್ಯ ಯುಗ ಪೂರ್ವದ 57ರಿಂದ ಸಾಮಾನ್ಯ ಯುಗದ 78ರವರೆಗೆ 135 ವರ್ಷಗಳು ವಿಕ್ರಮಶಕೆಯ ಕಾಲ. ಮುಂದಿನ ಹದಿನೆಂಟು ಸಾವಿರ ವರ್ಷಗಳು ಶಾಲಿವಾಹನ ಶಕೆ, ಹತ್ತು ಸಾವಿರ ವರ್ಷ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಸೇರಿ ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತವೆ. ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ವಿಕ್ರಮನ ರಾಜಧಾನಿ ಉಜ್ಜಯಿನಿ, ಶಾಲಿವಾಹನನ ರಾಜಧಾನಿ ಧಾರಾನಗರ, ಚಿತ್ರಕೂಟ ವಿಜಯಾಭಿನಂದನನದ್ದು, ನಾಗಾರ್ಜುನನ ಆಳ್ವಿಕೆ ರೋಹಿತಕದಿಂದ, ಬಲಿಯದ್ದು ಭೃಗುಕಚ್ಛದಿಂದ. 


ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ | 

ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು || 

ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ | 

ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ | 

ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||


 ಕವಿಗಳ ಪ್ರತಿಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಹದಿನಾಲ್ಕು ಶಾಸನಗಳು ಕವಿಗಳಿಗೆ ಬಹುಮಾನವಾಗಿ ಸಿಗುತ್ತಿದ್ದವು. ನಾಲ್ಕು ಶ್ಲೋಕಗಳನ್ನು ಹಿಡಿದುಕೊಂಡು ವಿಕ್ರಮನ ಆಸ್ಥಾನಕ್ಕೆ ಹೋದವರ್ಯಾರೂ ಬರಿಗೈಯಲ್ಲಿ ಬಂದವರಿಲ್ಲ. ಅಂತಹಾ ವಿದ್ಯಾಪೋಷಕ, ವಿದ್ವಜ್ಜನ ಪೋಷಕ ವಿಕ್ರಮಾದಿತ್ಯ. "ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕರಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಆದರೆ ಅದು ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದೆಂದಿಗೂ ಸಿಗಲಾರದು" ಎಂದು ವಿಕ್ರಮಾದಿತ್ಯನನ್ನು ಕಾಳಿದಾಸ ಹೊಗಳಿದ್ದಾನೆ. 


ಇದೇ ಶ್ಲೋಕಗಳು ಭೋಜಪ್ರಬಂಧದಲ್ಲಿಯೂ ಇವೆ. ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರನ್ನೆಲ್ಲಾ ಭೋಜನ ಆಸ್ಥಾನದಲ್ಲಿದ್ದರು ಎಂಬಂತೆ ಇದರಲ್ಲಿ ವರ್ಣಿಸಲಾಗಿದೆ. ಭೋಜರಾಜ ಏಳನೇ ಶತಮಾನದಲ್ಲಿದ್ದವ. ಭೋಜ ಪ್ರಬಂಧ ಹದಿನೈದನೇ ಶತಮಾನದ್ದು! ಅದರಲ್ಲೂ ಭೋಜಪ್ರಬಂಧದ ಬಹುತೇಕ ಕಥೆ ಹದಿಮೂರನೇ ಶತಮಾನದ  ಸಿಂಹಳದ "ಪೂಜಾವಳಿ" ಎಂಬ ಕುಮಾರದಾಸನನ್ನು ವರ್ಣಿಸಿದ ಕೃತಿಯಿಂದ ಆಯ್ದುಕೊಂಡದ್ದು. ಕಾಳಿದಾಸನನ್ನು ಕುರಿಕಾಯುವ ಪೆದ್ದನನ್ನಾಗಿಸಿದ್ದು ಇದೇ ಕೃತಿ! ಇದರಿಂದಲೇ ಭೋಜಪ್ರಬಂಧದ ಕಾಲ್ಪನಿಕತೆಯನ್ನು ಊಹಿಸಬಹುದು. ವಿಕ್ರಮಾದಿತ್ಯನನ್ನು ಚರಿತ್ರೆಯಿಂದ ಬದಿಗೆ ಸರಿಸುವ ಸಲುವಾಗಿ ಇದೇ ಕಥೆಯನ್ನು ಆಧರಿಸಿ ಕಾಳಿದಾಸನನ್ನು ಸಾಮಾನ್ಯ ಯುಗಕ್ಕೆ, ಭೋಜರಾಜನ ಆಸ್ಥಾನಕ್ಕೆ ತಂದು ನಿಲ್ಲಿಸಿದ ಭಾರತ ವಿರೋಧೀ ಇತಿಹಾಸಕಾರರಿದ್ದಾರೆ!


ಸಾಲು ಸಾಲು ದಾಖಲೆಗಳಿದ್ದರೂ ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯ ಎಂದರೆ ಹೆಚ್ಚಿನವರಿಗೆ ಗುಪ್ತರ ಎರಡನೇ ಚಂದ್ರಗುಪ್ತನೇ ವಿಕ್ರಮಾದಿತ್ಯ. ಮತ್ತುಳಿದವರಿಗೆ ಆತನೊಬ್ಬ ಕಾಲ್ಪನಿಕ ವ್ಯಕ್ತಿ. ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ ಕೂಡಾ "ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯನ ಕಾಲವೇ ಸ್ಪಷ್ಟವಿಲ್ಲ. ಆ ಹೆಸರಿನ ವ್ಯಕ್ತಿಯಿದ್ದದ್ದೇ ಸಂಶಯ. ಉಜ್ಜೈನಿಯ ಕೆಲ ಜ್ಯೋತಿಷಿಗಳು ಈ ಶಕೆಯನ್ನು ಆರಂಭಿಸಿರಬಹುದು. ವಿಕ್ರಮಾದಿತ್ಯನೆಂಬ ಯಾವುದೋ ಒಬ್ಬ  ರಾಜ ಮಾಳವ ಶಕೆಗೇ ತನ್ನ ಹೆಸರಿಟ್ಟುಕೊಂಡಿರಬಹುದು. ಆ ವಿಕ್ರಮಾದಿತ್ಯ ಬಹುಷಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನು ಆಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು" ಎಂದು ಬರೆದಿದ್ದಾನೆಂದರೆ ಈ ಇತಿಹಾಸಕಾರರು ಸ್ಪಷ್ಟವಾಗಿ ಗೋಚರವಿದ್ದ ಸತ್ಯವನ್ನು ಸುಳ್ಳಾಗಿಸಲು ಎಷ್ಟು ಹೆಣಗಾಡಿದ್ದರು ಎನ್ನುವುದರ ಅರಿವಾಗುತ್ತದೆ. ಸಾಮಾನ್ಯ ಯುಗ ಪೂರ್ವದ 4004ಕ್ಕೆ ಭೂಮಿಯ ಮೇಲೆ ಮೊದಲ ಸೃಷ್ಟಿಯಾಯಿತೆಂದು ಬೈಬಲ್ ಹೇಳಿದ್ದನ್ನು ಯಥಾವತ್ತಾಗಿ ನಂಬಿರುವ ಇದೇ ಇತಿಹಾಸಕಾರರಿಗಲ್ಲವೆ ಆ ಸಮಯದಲ್ಲಿ ಭಾರತದಲ್ಲಿ ಅತ್ಯುಚ್ಛ ನಾಗರೀಕತೆಯೊಂದು ಬೆಳೆದು ಉಚ್ಛ್ರಾಯ ಸ್ಥಿತಿ ತಲುಪಿ ತನ್ನ ಪ್ರಕಾಶವನ್ನು ಸರ್ವತ್ರ ಬೀಸಿತ್ತು ಎನ್ನುವ ತಥ್ಯವನ್ನು ಒಪ್ಪಲಿಕ್ಕಾಗದೇ ಒಡಲು ಉರಿದದ್ದು. ಸರಸ್ವತೀ ನಾಗರೀಕತೆಯನ್ನು ಸಾಮಾನ್ಯ ಯುಗ ಪೂರ್ವದ 2000ಕ್ಕೂ ಈಚೆಗೆ ಅವರು ಎಳೆದು ತಂದದ್ದು ಇದೇ ಕಾರಣಕ್ಕಾಗಿಯಲ್ಲವೇ. ಚಂದ್ರಗುಪ್ತ ಮೌರ್ಯನನ್ನು ಅಲೆಗ್ಸಾಂಡರನ ಕಾಲದ ಜೊತೆ ತಳುಕು ಹಾಕಲು ಹೋಗಿ ಅಗ್ನಿವಂಶವನ್ನೇ ಅಗ್ನಿಗೆ ಅರ್ಪಿಸಿದ್ದು ಈ ಬೈಬಲ್ ಇತಿಹಾಸಕಾರರೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ ಆಳುವಂತೆ ಮಾಡಿ ಅಲ್ಲೋಲಕಲ್ಲೋಲಗೊಳಿಸಿದವರೂ ಅವರೇ! ಹೀಗೆ ಈ ಇತಿಹಾಸಕಾರರಿಂದ ಕಣ್ವ ವಂಶ, ಪ್ರಮರ ವಂಶಗಳು ಸಮಾಧಿಗೆ ಸೇರಿಸಲ್ಪಟ್ಟವು. ವಿಕ್ರಮಾದಿತ್ಯ ಹಾಗೂ ಶಾಲಿವಾಹನರನ್ನು ಅವರು ಕಾಲ್ಪನಿಕ ವ್ಯಕ್ತಿಗಳನ್ನಾಗಿಸಿದರು.


ಪುರಾಣಗಳಲ್ಲಿ ಪ್ರಮರ ವಂಶದ 32 ರಾಜರುಗಳ ಉಲ್ಲೇಖವಿದೆ. ಇದರಲ್ಲಿ ಎಂಟನೆಯವನೇ ವಿಕ್ರಮಾದಿತ್ಯ. ವಿಕ್ರಮನ ಆಸ್ಥಾನ ಜ್ಯೋತಿಷಿಯಾಗಿದ್ದ ಶ್ರೀಕೃಷ್ಣಮಿಶ್ರ ತನ್ನ "ಜ್ಯೋತಿಷ್ಯಫಲರತ್ನಮಾಲಾ"ದಲ್ಲಿ, 


ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ || 

ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ || 


- ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸಿದ್ದಾನೆ. "ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದ" ಎಂದು ಕಲ್ಹಣ ಹೊಗಳಿದ್ದಾನೆ. ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.


ಮಾಂತ್ರಿಕನೊಬ್ಬ ಸಾಧುವಿನ ಸೋಗು ಹಾಕಿ ರಾಜಾ ವಿಕ್ರಮನ ಬಳಿ ಬಂದು ಮರದಲ್ಲಿ ನೇತಾಡುತ್ತಿದ್ದ ಪಿಶಾಚಿಯನ್ನು ಮೌನವಾಗಿ ತನ್ನ ಬಳಿಗೆ ಕರೆತರಲು ಬಿನ್ನವಿಸುತ್ತಾನೆ. ತುಟಿಬಿಚ್ಚಿದಲ್ಲಿ ಪಿಶಾಚಿಯು ಹಾರಿ ಹೋಗುತ್ತದೆ. ಅದರಂತೆ ವಿಕ್ರಮಾದಿತ್ಯ ಪಿಶಾಚಿಯನ್ನು ಕರೆತರಲು ಬೆನ್ನ ಮೇಲೆ ಏರಿಸಿಕೊಂಡಾಗ ಅದು ದಾರಿಯ ಬೇಸರ ಕಳೆಯಲು ತಾನು ಕಥೆ ಹೇಳುವೆನೆಂದು, ಕೊನೆಗೆ ಕೇಳುವ ಪ್ರಶ್ನೆಗೆ ರಾಜ ಉತ್ತರ ಹೇಳಬೇಕೆಂದು, ಉತ್ತರ ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕೆಂದು, ಗೊತ್ತಿದ್ದೂ ಉತ್ತರ ಹೇಳದಿದ್ದರೆ ರಾಜನ ತಲೆ ಸಾವಿರ ಹೋಳಾಗುತ್ತದೆಂದು ಒಪ್ಪಂದ ಮಾಡಿಕೊಳ್ಳುತ್ತದೆ. ವಿಕ್ರಮನಿಗೆ ಪ್ರತಿಯೊಂದು ಪ್ರಶ್ನೆಗೆ ಉತ್ತರ ಗೊತ್ತಿರುತ್ತದೆ, ಮತ್ತು ಮೌನವನ್ನು ಭೇದಿಸಿದ ಕಾರಣ ಬೇತಾಳ ಮತ್ತೆ ಮರದ ಕೊಂಬೆಯನ್ನು ಸೇರಿಕೊಳ್ಳುತ್ತಾನೆ. ಹೀಗೆ ಇಪ್ಪತ್ನಾಲ್ಕು ಬಾರಿ ನಡೆದು ಪಿಶಾಚಿಯನ್ನು ಕರೆತರುವ ವಿಕ್ರಮನ ಪ್ರಯತ್ನ ವಿಫಲವಾಗುತ್ತದೆ. ಇಪ್ಪತ್ತೈದನೆಯ ಕಥೆಯ ಪ್ರಶ್ನೆಗೆ ಮಾತ್ರ ರಾಜನಿಗೆ ಉತ್ತರ ತಿಳಿಯದಾಯಿತು. ಈ ಇಪ್ಪತ್ತೈದು ಕಥೆಗಳೇ "ವೇತಾಲ ಪಂಚವಿಂಶತಿ"ಯಾದದ್ದು. ಇದರ ಕರ್ತೃ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಒಬ್ಬನಾಗಿದ್ದ, "ನೀತಿ ಪ್ರದೀಪ"ವನ್ನು ರಚಿಸಿದ ವೇತಾಲಭಟ್ಟನೆಯೋ ತಿಳಿಯದು. 


ಇಪ್ಪತ್ತೈದನೆಯ ಕಥೆ ಹೀಗಿದೆ. ಆಗತಾನೆ ಯುದ್ಧ ಮುಗಿದಿತ್ತು. ರಣಭೂಮಿಗೆ ಓರ್ವ ವಯಸ್ಕನೂ ಅವನ ಮಗನೂ ಬಂದಾಗ ಆ ರಾಜ್ಯದ ರಾಣಿಯೂ ಆಕೆಯ ಮಗಳೂ ಜೀವದಿಂದಿರುತ್ತಾರೆ. ತಮ್ಮೊಳಗೇ ಮಾತನಾಡಿಕೊಂಡು ಅಪ್ಪ ರಾಜಕುಮಾರಿಯನ್ನೂ ಮತ್ತು ಮಗ ರಾಣಿಯನ್ನೂ ಕೈಹಿಡಿದು ತಮ್ಮ ಮನೆಗೆ ಕರೆತಂದು ಮದುವೆಯಾಗುತ್ತಾರೆ. ಮಗ-ರಾಣಿಯರ ದಾಂಪತ್ಯದಿಂದ ರಾಣಿ ಗಂಡುಮಗುವೊಂದನ್ನು ಹಡೆದರೆ, ಅಪ್ಪ-ರಾಜಕುಮಾರಿಯರ ದಾಂಪತ್ಯದಿಂದ ಮಗಳು ಜನಿಸುತ್ತಾಳೆ. ನವಜಾತ ಶಿಶುಗಳ ನಡುವಿನ ಸಂಬಂಧವೇನು ಎಂದು ಬೇತಾಳ ಪ್ರಶ್ನೆ ಕೇಳುತ್ತಾನೆ. ವಿಕ್ರಮನಿಗೆ ಉತ್ತರ ತಿಳಿಯದೆ ಮೌನವಾಂತು ನಡೆದ. ಬೇತಾಳ ಅವನ ಹೆಗಲೇರಿ ಬಂತು. ತನ್ನ ಜನ್ಮವೃತ್ತಾಂತವನ್ನೂ ಮಾಂತ್ರಿಕನ ಮೋಸವನ್ನೂ ಅದರಿಂದ ಪಾರಾಗುವ ಉಪಾಯವನ್ನೂ ಅದು ವಿಕ್ರಮನಿಗೆ ಅರುಹಿತು. ಬೇತಾಳನ ಪಾಲಕರಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನ ಆಶೀರ್ವಾದದಿಂದ ಪಡೆದ ಮಕ್ಕಳಲ್ಲಿ ಓರ್ವನೇ ಬೇತಾಳ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನಲ್ಲೇ ಬಿಡುವಂತೆ ಮಾಂತ್ರಿಕ ತಾಕೀತು ಮಾಡಿದ. ಬೇತಾಳನಿಗೆ ತನಗೆ ಗೊತ್ತಿದ್ದ ವಿದ್ಯೆಗಳನ್ನೆಲ್ಲಾ ಧಾರೆಯೆರೆದ ಮಾಂತ್ರಿಕ, ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಬೇತಾಳನ ಸಹೋದರನಿಗೆ ಕಡಿಮೆ ವಿದ್ಯೆಗಳನ್ನು ಕಲಿಸಿಕೊಟ್ಟು ಆತನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಸಹೋದರನನ್ನು ಪಾಲಕರಿಗೆ ಮರಳಿಸಿ,ಬೇತಾಳನನ್ನು ಕಾಳಿಗೆ ಬಲಿಕೊಡಬೇಕೆಂದು ಮಾಂತ್ರಿಕ ಉಪಾಯ ಹೂಡಿದ್ದ. "ರಾಜನ್, ಮಾಂತ್ರಿಕನ ಕುಟೀರದೊಳಕ್ಕೆ ಹೋದಾಗ ನಿನ್ನ ತಲೆಯನ್ನು ತಗ್ಗಿಸುವಂತೆ ಆತ ಹೇಳುತ್ತಾನೆ. ತಲೆಬಗ್ಗಿಸಿದ ಕೂಡಲೇ ನಿನ್ನನ್ನು ಬಲಿಹಾಕುತ್ತಾನೆ. ನೀನು ಅದಕ್ಕಾಗಿ ಹೇಗೆ ತಲೆತಗ್ಗಿಸಬೇಕೆಂದು ತೋರಿಸಲು ಹೇಳು. ಹಾಗೆ ಆತ ತಲೆ ಬಗ್ಗಿಸಿದಾಗ ಅವನ ತಲೆಯನ್ನು ತರಿದು ಕಾಳಿಗೆ ಅರ್ಪಿಸು " ಎಂದು ಬೇತಾಳವು ಮಾಂತ್ರಿಕನಿಂದ ರಕ್ಷಿಸಿಕೊಳ್ಳಲು ರಾಜನಿಗೆ ಉಪಾಯವನ್ನು ಸೂಚಿಸುತ್ತದೆ. ಬೇತಾಳದ ಆದೇಶದಂತೆ ನಡೆದುಕೊಂಡ ವಿಕ್ರಮ ಮಾಂತ್ರಿಕನ ಶಿರವನ್ನು ತರಿದು ಕಾಳಿಗೆ ಅರ್ಪಿಸಿದ. ಕಾಳಿ ಪ್ರತ್ಯಕ್ಷಳಾಗಿ ಆಶೀರ್ವದಿಸುತ್ತಾಳೆ. ಖುಷಿಗೊಂಡ ಬೇತಾಳ ವರವನ್ನು ಕೇಳು ಎಂದಾಗ ಮಾಂತ್ರಿಕನ ಮನಸ್ಸನ್ನು ಶುದ್ಧೀಕರಿಸಿ ಆತನಿಗೆ ಜೀವದಾನ ನೀಡುವಂತೆ ಕೇಳಿಕೊಳ್ಳುತ್ತಾನೆ ವಿಕ್ರಮಾದಿತ್ಯ. ರಾಜನ ದಯಾಪರತೆಯನ್ನು ಮೆಚ್ಚಿದ ಬೇತಾಳ ನೆನೆದಾಗ ಬಂದು ಸಹಾಯ ಮಾಡುವೆ ಎಂದು ರಾಜನಿಗೆ ವಾಗ್ದಾನ ಮಾಡಿ ಮಾಂತ್ರಿಕನಿಗೆ ಮರು ಜೀವ ನೀಡುತ್ತದೆ. ಇದು ವೇತಾಲ ಪಂಚವಿಂಶತಿಯ ಕಥೆಯಾದರೂ ಭವಿಷ್ಯತ್ಪುರಾಣದಲ್ಲಿ ವಿಕ್ರಮನ ಕಾವಲಿಗಾಗಿ ಬೇತಾಳನನ್ನು ಪಾರ್ವತಿ ಕಳುಹಿದ ಉಲ್ಲೇಖವನ್ನು ನೋಡುವಾಗ ಇದು ಕಾಲ್ಪನಿಕವಲ್ಲ ಎಂದೇ ಅನ್ನಿಸುತ್ತದೆ. ಭವಿಷ್ಯತ್ಪುರಾಣದಲ್ಲಿ ಬೇತಾಳನು ಬ್ರಾಹ್ಮಣ ರೂಪಿನಿಂದ ಬಂದು "ಇತಿಹಾಸ ಸಮುಚ್ಚಯ"ವೆಂಬ ಕಥೆಯನ್ನು ಹೇಳುವ, ಪ್ರತಿಯೊಂದು ಕಥೆಯ ಬಳಿಕ ಪ್ರಶ್ನೆಯನ್ನು ಕೇಳಿ ವಿಕ್ರಮನಿಂದ ಉತ್ತರವನ್ನು ಹೊರಡಿಸುವ ಪ್ರಸಂಗವಿದೆ. ವಿಕ್ರಮಾದಿತ್ಯನಿಂದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಪಡೆದು ಹರ್ಷಿತವಾದ ಬೇತಾಳನು ದುರ್ಗೆಯನ್ನು ಪೂಜಿಸುವಂತೆ ವಿಕ್ರಮಾದಿತ್ಯನಿಗೆ ಸೂಚಿಸಿ, ತಾನು ಈಶ್ವರಾಜ್ಞೆಯಂತೆ ನಿನ್ನ ಸಹಾಯಕ್ಕೆ ಬಂದಿದ್ದು, ನಿನ್ನ ಭುಜದಲ್ಲಿ ನೆಲೆಸುತ್ತೇನೆ. ನೀನು ಶತ್ರುಗಳನ್ನೆಲ್ಲಾ ಧ್ವಂಸ ಮಾಡಿ ಆರ್ಯಧರ್ಮವನ್ನು ನೆಲೆಗೊಳಿಸು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಬಹುಷಃ ವಿಕ್ರಮನ ಮಿತ್ರನಾಗಿ, ರಕ್ಷಕನಾಗಿ ಬೇತಾಳ ಸದಾ ಇದ್ದಿರಬೇಕು. ಅದು ವೇತಾಲಭಟ್ಟನೋ ಅಥವಾ ಇನ್ನೋರ್ವನೋ ಎಂಬುದನ್ನು ಇತಿಹಾಸಕಾರರು ನಿರ್ಧರಿಸಬೇಕು. ವಿಕ್ರಮಾದಿತ್ಯನ ಜೊತೆ ಅವನ ಮಲತಮ್ಮನಾದ ಭಟ್ಟಿಯೂ ಇರುತ್ತಿದ್ದ ಎಂಬ ವಿವರ ಬಹಳ ಸಿಗುತ್ತವೆ. ಇವನೇ ಬೇತಾಳನೋ, ಅಥವಾ ಇವನೇ ವೇತಾಳಭಟ್ಟನೋ ಎನ್ನುವುದು ಕೂಡಾ ಇತಿಹಾಸಕಾರರ ವಿವೇಚನೆಗೆ ಬಿಟ್ಟದ್ದು. 


ಧನ್ವಂತರೀ ಕ್ಷಪಣಕೋಮರಸಿಂಹ ಶಂಕು ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |

ಖ್ಯಾತೋ ವರಾಹ ಮಿಹಿರೋ ನೃಪತೇ ಸ್ಸಭಾಯಾಂ ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ||


- ಮಹಾಕವಿಗಳಾದ ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರರುಚಿ ಮತ್ತು ವರಾಹಮಿಹಿರ ಎಂಬ "ನವರತ್ನಗಳು" ವಿಕ್ರಮನ  ಆಸ್ಥಾನ ಕವಿಗಳಾಗಿದ್ದರು. ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. ಆಸಕ್ತರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸದ್ಯೋಜಾತಭಟ್ಟರ "ಮಿಹಿರಕುಲಿ"ಯನ್ನು ಓದಬಹುದು.


ರಾಜಾ ವಿಕ್ರಮಾದಿತ್ಯನೇ ಸೋಮನಾಥ ದೇವಾಲಯವನ್ನು ನಿರ್ಮಿಸಿದ ಎನ್ನುವ ವಾದವಿದೆ. ಪಿ. ಎನ್ ಓಕ್ ಅವರು ತಮ್ಮ ಗ್ರಂಥದಲ್ಲಿ ಕಾಬಾ ಕೂಡ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುತ್ತಾರೆ. ಇದಕ್ಕೆ ಪೂರಕವಾಗಿ ಭವಿಷ್ಯತ್ಪುರಾಣದಲ್ಲಿ ರಾಜಾಭೋಜನು ಮ್ಲೇಚ್ಛರಿಂದ ಆವರಿಸಲ್ಪಟ್ಟ ಮರುಭೂಮಿಯಲ್ಲಿ ನೆಲೆಸಿರುವ ಮಹಾದೇವನನ್ನು ಪೂಜಿಸಿದ ಪ್ರಸಂಗವಿದೆ. ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನ ಸಿಂಹಾಸನಕ್ಕೆ ಸಂಬಂಧಪಟ್ಟವು. ಶಕಪುರುಷ ವಿಕ್ರಮಾದಿತ್ಯನ ಕಳೆದು ಹೋಗಿದ್ದ ಸಿಂಹಾಸನವನ್ನು ಧಾರಾನಗರದ ರಾಜಾ ಭೋಜನು ಪತ್ತೆಹಚ್ಚಿದನಂತೆ. ಅವನು ಈ  ಸಿಂಹಾಸನವನ್ನೇರಲು ಪ್ರಯತ್ನಿಸಿದಾಗ ಅದರಲ್ಲಿದ್ದ 32 ಹೆಣ್ಣು ಪುತ್ಥಳಿಗಳು ಮಾತಾಡಲು ಆರಂಭಿಸಿ, ತಾವು ಹೇಳುವ ಕಥೆಗಳಲ್ಲಿ ಬರುವ ರಾಜಾ ವಿಕ್ರಮಾದಿತ್ಯನಷ್ಟು ಉದಾತ್ತನಾದವನು ನೀನಾಗಿದ್ದರೆ ಮಾತ್ರ ಸಿಂಹಾಸನವೇರಬಹುದೆಂದು ಸವಾಲನ್ನು ಒಡ್ದುತ್ತವೆ. 32 ಬಾರಿಯೂ ಭೋಜ ತನ್ನ ನಿಕೃಷ್ಟತೆಯನ್ನು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ ರಾಜಾ ಭೋಜನ ವಿನಯತೆಯಿಂದ ಸಂತಸಗೊಂಡ ಪುತ್ಥಳಿಗಳು ಅವನಿಗೆ ಸಿಂಹಾಸನವನ್ನೇರಲು ಅವಕಾಶ ಕೊಡುತ್ತವೆ.


ವಿಕ್ರಮನು ಕಾಲವಾದ ಬಳಿಕ ಭಾರತವು ಹದಿನೆಂಟು ಭಾಗಗಳಾಗಿ ಒಡೆದು ಹೋಯಿತು. ಸನಾತನ ಧರ್ಮವು ಹ್ರಾಸವಾಗುತ್ತಾ ಬಂದಿತು. ಇದೇ ಸುಸಂದರ್ಭವೆಂದು ಶಕರು, ಹೂಣರು ಮತ್ತೊಮ್ಮೆ ದಂಡೆತ್ತಿ ಬಂದು ಆರ್ಯ ರಾಜರನ್ನು ಬಡಿದಟ್ಟಿ, ರಾಜ್ಯಗಳನ್ನು ಸೂರೆಗೈದು ಮಾನಿನಿಯರ ಮೇಲೆ ಅತ್ಯಾಚರಗೈದರು. ಆ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನು ದೇಶದಿಂದಾಚೆಗೆ ಓಡಿಸಿದವನೇ ವಿಕ್ರಮನ ಮರಿಮೊಮ್ಮಗ ಶಾಲಿವಾಹನ. ಅವನು ಪ್ರಮರ ವಂಶದ 11ನೇ ದೊರೆ. ಅಜ್ಜನನ್ನೇ ಇಲ್ಲವಾಗಿಸಿದವರಿಗೆ ಮೊಮ್ಮಗನನ್ನು ಇಲ್ಲವಾಗಿಸುವುದು ಕಷ್ಟದ ಕೆಲಸವಲ್ಲ. "ವಾಹನ" ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು "ಶಾತವಾಹನ"ನನ್ನಾಗಿಸಿ ಅವನಿಗಿಂತ ನಾಲ್ಕ್ನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಕೇವಲ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಶಾಲಿವಾಹನನು ವಿಕ್ರಮನ ಮರಣಾನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ಪ್ರತಿನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಸಾ.ಯು. 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದಿಗೂ ನಮ್ಮ ರಾಷ್ಟ್ರೀಯ ಶಕೆಯಾಗಿದೆ.


ಶಾಲಿವಾಹನನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಅದರ ಪ್ರಕಾರ ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು. ರಾಜ್ಯಭ್ರಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಅಂದರೆ ಶಾಲಿವಾಹನನ ಸೈನ್ಯ ಅಷ್ಟು ಸಮೃದ್ಧವಾಗಿತ್ತು ಎಂದರ್ಥ. ಪುರಾಣಗಳಲ್ಲೂ, ಜಾನಪದರ ಕಣ್ಣಲ್ಲೂ ನಾಯಕರಾಗಿ ಶಕಪುರುಷರಾಗಿ ಜನಮಾನಸದಲ್ಲಿ ಇಂದಿನವರೆಗೂ ಇರುವ ಈ ನೆಲದ ಸ್ವಾತಂತ್ರ್ಯ ವೀರರನ್ನೇ ಇತಿಹಾಸದ ಪುಸ್ತಕಗಳಿಂದ ಅಳಿಸಿದ ಮಾತ್ರಕ್ಕೆ ಅವರ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಆರ್ಯರ ಚಿತ್ತಭಿತ್ತಿಯಿಂದಿಳಿಸಲೂ ಸಾಧ್ಯವಿಲ್ಲ. ಅವರನ್ನು ಅಳಿಸಲು ಪ್ರಯತ್ನ ಮಾಡಿದಷ್ಟು ಸಲ ಶಾಲಿವಾಹನನ ಮಣ್ಣಗೊಂಬೆಗಳಂತೆ ಅವರು ಮತ್ತೆ ಜೀವತಳೆದು ಎದ್ದು ನಿಲ್ಲುತ್ತಾರೆ. ಇದು ವೀರಭೋಗ್ಯಾ ವಸುಂಧರಾ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ