ಪುಟಗಳು

ಮಂಗಳವಾರ, ಜೂನ್ 15, 2021

ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್

 ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್


1931ರ ಫೆಬ್ರವರಿ 22. ವೇದಮಂತ್ರ ಘೋಷಗಳು ಮೊಳಗುತ್ತಿರಲು, ಕರವೀರ ಪೀಠದ ಶಂಕರಾಚಾರ್ಯರ ನೇತೃತ್ವದಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಿಂದೂಗಳ ಸಮ್ಮುಖದಲ್ಲಿ ಭಂಗಿ ಬಾಲಕನೊಬ್ಬ  ಭಗವಾನ್ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಭಂಗಿ ಬಾಲಕನೊಬ್ಬ ಶಂಕರಾಚಾರ್ಯರ ಪಾದ ಪೂಜೆ ಮಾಡಿ ಅವರಿಗೆ ಪುಷ್ಪ ಮಾಲೆಯೊಂದನ್ನು ಅರ್ಪಿಸಿದ. ಆದಿ ಶಂಕರರು ದೇವನದಿ ಗಂಗೆಯ ತಟದಲ್ಲಿ ಆತ್ಮ ತತ್ತ್ವವನ್ನು ಅರಿತಿದ್ದ ಚಾಂಡಾಲನನ್ನು ಅಪ್ಪಿಕೊಂಡ ಐತಿಹಾಸಿಕ ಘಟನೆಯನ್ನು ಆ ದೃಶ್ಯ ನೆನಪಿಸಿತು. ಉಪೇಕ್ಷಿತ ವರ್ಗಕ್ಕೆ ಸೇರಿದ ಬಾಲಕಿಯರೀರ್ವರು "ನಾನು ಜಡದೇಹ, ಅವನೆನ್ನ ಪ್ರಾಣ; ಅವನು ಹಿಂದೂ ದೇವ, ನಾನು ಹಿಂದು; ನಾನು ದೀನ, ಅವನು ದಯಾ ಸಿಂಧು, ನೀ ಎನ್ನ ಧರ್ಮಬಂಧು - ನನ್ನನ್ನು ತಡೆಯದಿರು, ಮುಂದೆ ಹೋಗಲು ಬಿಡು" ಎಂದು ಆರ್ತ ಸ್ವರದಲ್ಲಿ ಹಾಡಿದ ಪ್ರಾರ್ಥನೆ ನೆರೆದಿದ್ದವರ ಹೃದಯ ಕರಗಿಸಿತು. " ಹೇ ಪತಿತಪಾವನ ಸ್ವಾಮಿ ರಾಷ್ಟ್ರಕ್ಕೆ ರಾಷ್ಟ್ರವೇ ಪತಿತರಾಗಿರುವ ನಮ್ಮನ್ನು ಎಂದಿಗೆ ಉದ್ಧರಿಸುವೆ" ಎಂದು ನೆರೆದಿದ್ದ ಹಿಂದೂ ಜನಸ್ತೋಮ ಕರವ ಜೋಡಿಸಿ ಹಾಡಿತು. ಅಂದಿನಿಂದ ಅದು ಪತಿತಪಾವನ ಮಂದಿರವಾಯಿತು. ಅಲ್ಲಿ "ಸಹನಾವವತು| ಸಹನೌ ಭುನಕ್ತು" ಎಂಬ ಮಂತ್ರ ಸಾಕ್ಷಾತ್ಕಾರಗೊಂಡು ಅಖಿಲ ಹಿಂದೂಗಳ ಪೂಜೆಗೆ, ಸಹಭೋಜನಗಳಿಗೆ, ಸಭೆ ಸಮಾರಂಭಗಳಿಗೆ, ಹಿಂದೂಗಳ ಏಕತ್ವಕ್ಕೆ ಅದು ವೇದಿಕೆಯಾಯಿತು. ಪತಿತರನ್ನು ಪಾವನಗೊಳಿಸುವ ಈ ಮಹಾ ಕಾರ್ಯಕ್ಕೆ ಅಧ್ವರ್ಯುವಾಗಿ ನಿಂತಿದ್ದವರೇ ಸ್ವಾತಂತ್ರ್ಯ ವೀರ ಸಾವರ್ಕರ್.



ಅಂದು ಛಾಪೇಕರರಿಗೆ ಅನ್ಯಾಯವಾದಾಗ ಕಣ್ಣೀರ್ಗರೆಯುತ್ತಾ, ಫಡಕೆಯೆಂಬ ಕಿಡಿಯನ್ನು ಅಗ್ನಿದಿವ್ಯವನ್ನಾಗಿಸುತ್ತೇನೆಂಬ ಪ್ರತಿಜ್ಞೆಗೈಯ್ಯುವಾಗ ಭವತಾರಿಣಿಯ ಪಾದ ಸ್ಪರ್ಶಿಸಿದ್ದ ಪುಟ್ಟ ಹಸ್ತಗಳ ಮೂಲಕ ಯಾವ ಶಕ್ತಿ ಸ್ತ್ರೋತ ತನುವಿನಾದ್ಯಂತ ಸಂಚರಿಸಿ ಸ್ಪೂರ್ತಿ ತುಂಬಿತ್ತೋ ಅದೇ ಶಕ್ತಿ ಸ್ತ್ರೋತ ಇಂದು ಅಸ್ಪೃಶ್ಯರನ್ನು ಸ್ಪೃಶ್ಯರನ್ನಾಗಿಸಲು ದಾರಿ ತೋರಿಸಿತ್ತು. ಹಾಗೆಂದು ಅದೇನೂ ಆ ಕ್ಷಣದ ನಿರ್ಧಾರವೂ ಆಗಿರಲಿಲ್ಲ. ಅಥವಾ ಇಂದಿನ ಜಾತ್ಯಾತೀತರನ್ನುವಂತೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ದಮನಿತ ವರ್ಗವನ್ನು ಸೆಳೆದು ಬಲಿಪಶು ಮಾಡುವ ಹುನ್ನಾರವೂ ಆಗಿರಲಿಲ್ಲ. ತನ್ನ ಪ್ರಚಾರಕ್ಕಾಗಿ ಮಾಡಿಕೊಂಡ ಕಾರ್ಯವೂ ಅದಾಗಿರಲಿಲ್ಲ. ಅದಕ್ಕೆ ಅಂಡಮಾನಿನಲ್ಲಿ ಕರಿನೀರ ರೌರವವನ್ನು ಉಣುವಾಗಲೇ ಬೀಜಾರೋಪವಾಗಿತ್ತು. "ಏಕ ದೇವ ಏಕ ದೇಶ ಏಕ ಆಶಾ | ಏಕ ಜಾತಿ ಏಕ ಜೀವ ಏಕ ಭಾಷಾ ||" ಎಂಬ ಮಂತ್ರ ಅಲ್ಲಿಯೇ ಮೊಳೆದಿತ್ತು. ಅಂಡಮಾನಿನಿಂದ ಯರವಡಾ ಜೈಲಿಗೆ, ಬಳಿಕ ರತ್ನಗಿರಿಗೆ ಸ್ಥಾನಬದ್ಧತೆಯ ಶಿಕ್ಷೆಗೆ ಬಂದು ಸೇರಿದಾಗ ಅದರ ವ್ಯಾಪ್ತಿ ಮತ್ತಷ್ಟು ಹಿಗ್ಗಿತು. "ಅರಿಶಿನ-ಕುಂಕುಮ" ಕಾರ್ಯಕ್ರಮದ ಮೂಲಕ ಎಲ್ಲಾ ವರ್ಗದ ಮಹಿಳೆಯರ ನಡುವೆ ಸಮರಸ ಬೆಸೆಯುವ ಪ್ರಯತ್ನ ನಡೆಯಿತು. ಉಚ್ಛ ವರ್ಣೀಯ ಸ್ತ್ರೀಯರು ಉಪೇಕ್ಷಿತ ವರ್ಗದ ಮಹಿಳೆಯರಿಗೆ ಅರಿಶಿನ ಕುಂಕುಮ ಕೊಡಲು ನಿರಾಕರಿಸಿದಾಗ ತನ್ನ ಪತ್ನಿ ಯಮುನಾಳ ಮುಖಾಂತರ ಉಚ್ಛ ವರ್ಗದವರೊಬ್ಬರ ಮನೆಯಲ್ಲೇ ಅದನ್ನು ನೆರವೇರಿಸಿದರು. ಆರಂಭದ ವಿರೋಧ ನಿಧಾನವಾಗಿ ಕರಗುತ್ತಾ ಬಂದಿತು.


ಇದರ ನಡುವೆ ಹಿಂದೂ ಸಂಘಟನೆಗಾಗಿ ಸಾವರ್ಕರ್ ಕಾರ್ಯಕರ್ತರೊಡನೆ ಬೀದಿ ಬೀದಿ ಸುತ್ತಿದರು. ಸಮಾಜದ ಮೇಲ್ವರ್ಗದ ಮನೆಯ ಜೊತೆಗೆ ಸಮಾಜದಿಂದ ಉಪೇಕ್ಷಿತರಾಗಿದ್ದ ಬಂಧುಗಳ ಮನೆಗೂ ಅವರು ಸಂಪರ್ಕ ಬೆಸೆದರು. ಹಾಗೆ ಮಾಡುವಾಗ ಬೈಗುಳ, ಅವಹೇಳನ, ಅಪಮಾನಗಳನ್ನೂ ಅವರು ಸಹಿಸಬೇಕಾಯಿತು. ಅಂತಹಾ ಮೇರು ವ್ಯಕ್ತಿ ಅದೆಲ್ಲವನ್ನೂ ಮೌನವಾಗಿ ಸ್ವೀಕರಿಸಿದರು. ಸಾರ್ವಜನಿಕ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೂ ಪ್ರವೇಶ ದೊರಕಿಸಲು ಅವರ ಹೋರಾಟ ನಡೆಯಿತು. ವಿರೋಧಿಸಿದವರಿಗೆ ಸಾವರ್ಕರ್ ಹೇಳಿದ್ದು ಒಂದೇ ಮಾತು - "ನಿಮ್ಮ ಮಕ್ಕಳನ್ನು ಮ್ಲೇಚ್ಛರೊಂದಿಗೆ ಕುಳಿತುಕೊಳ್ಳಲು ಬಿಡುತ್ತೀರಿ. ಒಂದು ವೇಳೆ ಅಸ್ಪೃಶ್ಯನೊಬ್ಬ ಮತಾಂತರವಾಗಿ ಮುಸ್ಲಿಮನೋ, ಕ್ರೈಸ್ತನೋ ಆದರೆ ಅವನ ಜೊತೆ ಸೇರುವಿಕೆಗೂ ನಿಮ್ಮ ಆಕ್ಷೇಪಗಳಿಲ್ಲ. ಆದರೆ ನಮ್ಮದೇ ದೇವರನ್ನು ಪೂಜಿಸುವ, ನಮ್ಮದೇ ಸಂಸ್ಕೃತಿಯನ್ನು ಆಚರಿಸುವ, ನಮ್ಮ ಪೂಜಾಪದ್ದತಿಯನ್ನೇ ಅನುಸರಿಸುವ ನಮ್ಮದೇ ಬಾಂಧವರನ್ನು ತುಚ್ಛವಾಗಿ ಕಾಣುವುದು ಯಾವ ಧರ್ಮ? ಯಾವ ನೀತಿ?". ಸಾವರ್ಕರರ ಈ ಹೋರಾಟ ಎಷ್ಟು ಪರಿಣಾಮ ಬೀರಿತೆಂದರೆ ಸ್ವತಃ ಶಾಲೆಗಳಿಗೆ ಸಂದರ್ಶನವಿತ್ತ ಜಿಲ್ಲಾ ನ್ಯಾಯಾಧೀಶರು " ಸಾವರ್ಕರರ ಪ್ರಯತ್ನಗಳ ಪರಿಣಾಮವಾಗಿ ಅಸ್ಪೃಶ್ಯ ಮಕ್ಕಳೂ ಎಲ್ಲರೊಡನೆ ಸಮವಾಗಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ" ಎಂದು ತಮ್ಮ ವರದಿಯಲ್ಲಿ ಬರೆದರು.


ತಾವು ಅಂಡಮಾನಿನಲ್ಲಿ ಆರಂಭಿಸಿದ್ದ ಶುದ್ಧಿಕಾರ್ಯವನ್ನು ರತ್ನಗಿರಿಯಲ್ಲೂ ಮುಂದುವರೆಸಿದರು ಸಾವರ್ಕರ್. ಮೋಸಕ್ಕೋ, ಆಸೆಗೋ ಬಲಿಯಾಗಿ ಮತಾಂತರವಾಗಿದ್ದವರು ಮಾತೃಧರ್ಮಕ್ಕೆ ಮರಳಿ ಬಂದರು. ಕೆಲವು ಕ್ರೈಸ್ತ ಪಾದ್ರಿಗಳು ಮುಂಬೈ ಗವರ್ನರನಿಗೆ ದೂರು ನೀಡಿ, ಸರಕಾರ ಈ ಬಗ್ಗೆ ಸಾವರ್ಕರರಿಂದ ಸ್ಪಷ್ಟೀಕರಣ ಕೇಳಿದಾಗ, ಸಾವರ್ಕರ್ "ನಿಮ್ಮ ಅಧಿಕಾರವಿರುವ ಪ್ರದೇಶದಲ್ಲಿ ಮತಪರಿವರ್ತನಾ ಸ್ವಾತಂತ್ರ್ಯ ಇದೆಯೆಂದು ನಿಮ್ಮದೇ ಕಾನೂನು ಹೇಳುತ್ತದೆ. ಹಿಂದೂಗಳು ಕ್ರೈಸ್ತರಾಗುವುದನ್ನು ನೀವು ನಿಲ್ಲಿಸಿದರೆ ಆಗ ಶುದ್ಧಿ ಚಳುವಳಿಯ ಅವಶ್ಯಕತೆಯೇ ಇರುವುದಿಲ್ಲ" ಎಂದು ಮರು ಸವಾಲು ಹಾಕಿದರು. ರತ್ನಗಿರಿಯಲ್ಲಿದ್ದ ಕ್ರೈಸ್ತ ಮಿಷನರಿಗಳು ರಾತ್ರೋ ರಾತ್ರಿ ಗಂಟುಮೂಟೆ ಕಟ್ಟಬೇಕಾಯಿತು. ಮುಂದೆ ಸಾವರ್ಕರ್ ಕೈಗೊಂಡುದುದು ಅಸ್ಪೃಶ್ಯರಿಗೆ ದೇವಾಲಯಕ್ಕೆ ಪ್ರವೇಶ ದೊರಕಿಸಿಕೊಡುವಂತಹಾ ಮಹಾನ್ ಕಾರ್ಯ. ಮಹಾರರೋ, ಭಂಗಿಗಳೋ ದೇವಾಲಯದೊಳಕ್ಕೆ ಬಂದರೆ ಮೈಲಿಗೆಯಾಗುತ್ತದೆಯೆಂದು ಮೇಲ್ಜಾತಿಗಳವರು ಶರಂಪರ ವಿರೋಧಿಸಿದಾಗ ಸಾವರ್ಕರ್ " ಅಷ್ಟಕ್ಕೆಲ್ಲಾ ಮೈಲಿಗೆಯಾಗುವವನು ಅವನೆಂತಹಾ ದೇವರು?" ಎಂದು ಪ್ರಶ್ನಿಸಿದರು. "ದೇವರೆಂದರೆ ಪತಿತಪಾವನ, ಅವನ ದರ್ಶನ ಮಾತ್ರದಿಂದ ಎಂತಹಾ ವ್ಯಕ್ತಿಯೂ ಪುನೀತರಾಗುತ್ತಾರೆ. ನಿಜವಾದ ಅಸ್ಪೃಶ್ಯತಾ ನಿವಾರಣೆಯೆಂದರೆ, ತಮ್ಮ ಸಹಬಂಧುಗಳನ್ನೇ ದೂರವಿಟ್ಟು ಮನುಷ್ಯತ್ವಕ್ಕೆ ಕಳಂಕಪ್ರಾಯರಾಗಿ ನೀಚ ದೆಸೆಗಿಳಿದಿರುವ, ನಿಜವಾದ ಸನಾತನ ಧರ್ಮದಿಂದ ಹಾದಿ ತಪ್ಪಿರುವ, ತಾವು ಮಾತ್ರ ಸ್ಪೃಶ್ಯರೆಂದು ಭಾವಿಸಿರುವವರ ಉದ್ಧಾರ ಕಾರ್ಯ ಎಂದು ಈ ವಿರೋಧವನ್ನು ಕಟುವಾಗಿ ವಿಮರ್ಶಿಸಿದರು. ಇದರ ಪರಿಣಾಮ 1929ರ ನವೆಂಬರ್ ತಿಂಗಳಲ್ಲಿ ರತ್ನಗಿರಿಯ ಪ್ರಸಿದ್ಧ ವಿಠೋಬಾ ಮಂದಿರಕ್ಕೆ ಉಪೇಕ್ಷಿತ ವರ್ಗಕ್ಕೆ ಪ್ರವೇಶಾವಕಾಶ ದೊರೆತು ಶತಶತಮಾನಗಳ ಪರ್ಯಂತ ಭಾರತದ ಧರ್ಮಕ್ಕೆ, ಇತಿಹಾಸಕ್ಕೆ, ಯೋಗ್ಯತೆಗೆ ಕಳಂಕವಾಗಿದ್ದ ಕಪ್ಪು ಚುಕ್ಕೆಯೊಂದರ ಅಳಿಸುವಿಕೆಯ ಆರಂಭವಾಯಿತು. "ಯುಗಯುಗಗಳ ಕಳಂಕ ಕಳೆಯಿತು. ಮೈಲಿಗೆಯ ವಿಧಿಲಿಖಿತ ತೊಳೆದುಹೋಯಿತು. ಜನ್ಮಜನ್ಮಾಂತರಗಳ ಜಗಳ ಅಳಿಯಿತು. ಸಮಾಜದ ಶತ್ರುಗಳ ಸಂಚು ಮುರಿಯಿತು. ದಾಸರಾಗಿದ್ದವರಿಂದು ನಿಮ್ಮ ಸಹಕಾರಿಗಳಾಗಿದ್ದೇವೆ. ದೇವರ ಬಾಗಿಲನ್ನೂ, ನಿಮ್ಮ ಮನದ ಬಾಗಿಲನ್ನೂ ತೆರೆದುದಕ್ಕೆ ಕೃತಜ್ಞತೆಗಳು" ಎನ್ನುವ ಸಾವರ್ಕರರ ಗೀತೆಯನ್ನೇ ಒಕ್ಕೊರಲಿನಿಂದ ಹಾಡುತ್ತಿದ್ದ ಹಿಂದೂ ಜನಾಂಗದಿಂದ ಉಪೇಕ್ಷಿತವಾಗಿದ್ದು ಈಗ ಅಪೇಕ್ಷೆ ಈಡೇರಿದ ಆ ಕಣ್ಣುಗಳು ಕಾಂತಿಯಿಂದ ಮಿನುಗುತ್ತಿದ್ದವು. ಇದರ ಜೊತೆಗೆ ಹಿಂದೂ ಗಣಪತಿ ಉತ್ಸವ ಮೇರೆ ಮೀರಿದ ಸಂಭ್ರಮದೊಂದಿಗೆ ವರ್ಷಂಪ್ರತಿ ನಡೆಯತೊಡಗಿತು.


ಈ ಸಮಯದಲ್ಲೇ ಸಾವರ್ಕರ್ ಮನದಲ್ಲಿ "ಸರ್ವ ಹಿಂದೂ ಕೇಂದ್ರ"ವೊಂದರ ಸ್ಥಾಪನೆಯ ಯೋಚನೆಯೊಂದು ಮೂಡಿತು. ಅದರ ಫಲವಾಗಿ ಎದ್ದು ನಿಂತದ್ದೇ "ಪತಿತಪಾವನ"ವೆಂಬ ಭವ್ಯ ಮಂದಿರ. ಉದ್ಯಮಿಯಾಗಿದ್ದ ಭಾಗೋಜಿ ಕೀರ್ ಅವರ ಶ್ರದ್ಧೆ ಹಾಗೂ ಧನಸಹಾಯದ ಫಲವಾಗಿ ಈ ಮಂದಿರದ ನಿರ್ಮಾಣವಾಯಿತು. ಮಂದಿರದ ಉದ್ಘಾಟನೆಗೆ ಮೊದಲು ಸಾವರ್ಕರ್ ಕಾಶಿ ಪ್ರಯಾಗ ಸೇರಿದಂತೆ ಹಲವು ಕಡೆಗಳಿಂದ ವೇದಶಾಸ್ತ್ರ ಪಂಡಿತರನ್ನೆಲ್ಲಾ ಕರೆಯಿಸಿ ಅಸ್ಪೃಶ್ಯತೆಯ ಬಗೆಗೆ ಮೂರು ದಿನಗಳ ಸಂವಾದವೊಂದನ್ನು ಏರ್ಪಡಿಸಿದರು. ಒಂದು ಕಡೆ 125 ಜನ ಮಹಾ ಪಂಡಿತರು, ಇನ್ನೊಂದು ಕಡೆ ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರರ ವಾದಕ್ಕೆ ಮನಸೋತ ವಿದ್ವಾಂಸರುಗಳು "ಶಾಸ್ತ್ರ ರೀತ್ಯಾ ನಿಮ್ಮ ಮಾತುಗಳಿಗೆ ನಮ್ಮ ಸಹಮತವಿದೆ. ಆದರೆ ಸಮಾಜ ಅದನ್ನು ಸ್ವೀಕರಿಸುವ ಪಕ್ವತೆಯನ್ನು ಸಾಧಿಸಿಲ್ಲ" ಎಂದು ಸಾವರ್ಕರರಿಗೆ ಜಯಘೋಷ ಹಾಡಿದರು. ದೇವರು ನಮ್ಮ ಪಾಲಿಗೆ ಎಂತಹಾ ಸತ್ಪುರುಷನನ್ನು ಕಳುಹಿಸಿದ್ದಾನೆ ಎಂಬ ಕೃತಜ್ಞ ಭಾವ ನಮ್ಮಲ್ಲಿ ಮೂಡಿ ಅಂತಃಕರಣ ತುಂಬಿ ಬಂತು ಎಂದು ಈ ವಾದದ ಪ್ರತ್ಯಕ್ಷದರ್ಶಿಯಾಗಿದ್ದ ಹಿಂದುಳಿದ ವರ್ಗಗಳ ನಾಯಕ ಕೃಷ್ಣರಾವ್ ಗಾಂಗುರ್ಡೆ ಬರೆದಿದ್ದಾರೆ. ಭಾಗೋಜಿ ಕೀರರು ಕಾಶಿ, ನಾಸಿಕ್ ಗಳಿಂದ ಮಂದಿರ ಪ್ರತಿಷ್ಠಾಪನೆಗೆ ವೇದ ವಿದ್ಯಾ ಸಂಪನ್ನ ಪಂಡಿತರನ್ನು ಕರೆಯಿಸಿದ್ದನ್ನು ನೋಡಿ ಸಹಿಸದ ಸ್ಥಳೀಯ ಬ್ರಾಹ್ಮಣರು "ಭಂಡಾರಿ ಜಾತಿಗೆ ಸೇರಿದ ಭಾಗೋಜಿ ಕೀರ್ ನಿರ್ಮಿಸಿದ ಮಂದಿರದಲ್ಲಿ ವೇದೋಕ್ತ ಪದ್ದತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ಸಮಂಜಸವಲ್ಲ" ಎಂದು ಆ ಬ್ರಾಹ್ಮಣರ ಕಿವಿಯೂದಿದರು. ಇದನ್ನು ಕೇಳಿ ಅವರೂ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಲು ನಿರಾಕರಿಸಿದಾಗ ಸಾವರ್ಕರ್ " ನೀವು ವೇದೋಕ್ತವಾಗಿಯೇ ಎಲ್ಲವನ್ನೂ ನಡೆಸಿಕೊಡಬೇಕು. ಇಲ್ಲವಾದರೆ ನಾನು ಹಿಂದೂ ಧರ್ಮ್ ಕೀ ಜೈ" ಎಂಬ ಒಂದೇ ಮಂತ್ರದೊಂದಿಗೆ ಮೂರ್ತಿಯನ್ನು ಸ್ಥಾಪಿಸಿ ಬಿಡುತ್ತೇನೆ" ಎಂದು ಖಡಕ್ ಧ್ವನಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ಈ ಮಾತು ಕೇಳಿ ಆ ಬ್ರಾಹ್ಮಣರ ನಿರ್ಧಾರವೂ ಬದಲಾಯಿತು. ಪತಿತ ಪಾವನ ನೆಲೆನಿಂತು ಪತಿತರನ್ನು ಉದ್ಧರಿಸಿದ. ಬಳಿಕ ರತ್ನಗಿರಿಯ ಭಾಗೇಶ್ವರ ದೇವಾಲಯದ ಬಾಗಿಲೂ ಪತಿತರಿಗೆ ಸಾವರ್ಕರ್ ನೇತೃತ್ವದಲ್ಲಿ ತೆರೆಯಲ್ಪಟ್ಟಿತು. ನಿಧಾನವಾಗಿ ಯಾರು ತಮ್ಮ ಜಾತಿಯ ಸಂಕುಚಿತ ಸಂಕಲೆಗಳಲ್ಲಿ ಬಂಧಿತರಾಗಿ ಕಟ್ಟರ್ ಜಾತಿವಾದಿಗಳಾಗಿದ್ದರೋ ಅವರೆಲ್ಲಾ ಕಟ್ಟರ್ ಸಾವರ್ಕರ್ ವಾದಿಗಳಾಗಿ ಬದಲಾಗತೊಡಗಿದರು. 


ದೀನರ ಬವಣೆ ಕಂಡು ಅವರ ಮನಸ್ಸು ಕರಗುತ್ತಿತ್ತು. ಸಮುದ್ರ ತಟದಲ್ಲಿ ಕುಷ್ಠರೋಗದಿಂದ ನರಳುತ್ತಾ, ಕೊಳೆತು ನಾರುತ್ತಿದ್ದ ಕೃಶ ದೇಹದಿಂದ ಬಿದ್ದಿದ್ದ ಮಹಿಳೆಯೋರ್ವಳಿಗೆ ತನ್ನ ಹೆಗಲ ಮೇಲಿದ್ದ ಶಲ್ಯವನ್ನೆ ಹೊದೆಸಿ, ಅನ್ನ ನೀರು ಕೊಟ್ಟು, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅನಾಥ ಮಹಿಳೆಯೊಬ್ಬಳು ಸತ್ತಾಗ ಆಕೆಯ ಮಗು ಬೀದಿಯಲ್ಲಿ ಬಿದ್ದಿದ್ದರೂ ಸಮಾಜ ಬಾಂಧವರು ಮುಗುಮ್ಮಾಗುಳಿದಾಗ ಆ ಮಗುವನ್ನು ಎದೆಕವಚಿಕೊಂಡು ಬೋರಕರ್ ನಾಟಕ ಮಂಡಲಿಯವರ ಬಳಿ ಕೊಟ್ಟು ಸಾಕುವಂತೆ ತಾಕೀತು ಮಾಡಿದರು. ಆದರೆ ಸಾವರ್ಕರರ ಹಿಂದೂ ಸುಧಾರಣೆಯಂತಹಾ ಸಾಮಾಜಿಕ ಕ್ರಾಂತಿಯಿಂದ ಅವರ ಸ್ಥಾನಬದ್ಧತೆಯ ಶಿಕ್ಷೆ ಮತ್ತೆ ಎಂಟು ವರ್ಷ ಮುಂದುವರೆಯಿತು. ಹೌದು ಕರಿನೀರ ಶಿಕ್ಷೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದಾಗ ಭಾರತದಲ್ಲಿ ನಕಲಿ ಜಾತ್ಯಾತೀತವಾದ ಹಾಗೂ ನಕಲಿ ಅಹಿಂಸೆಯ ರಾಜಕಾರಣ ಬೇರು ಬಿಟ್ಟು ಹಿಂದೂ ಧರ್ಮವೆಂಬ ವೃಕ್ಷ ನಲುಗುತ್ತಿತ್ತು. ಅದಕ್ಕಾಗಿಯೇ ಸಾವರ್ಕರ್ ಹಿಂದುತ್ವಕ್ಕೊಂದು ವ್ಯಾಖ್ಯೆ ಕೊಡಬೇಕಾದ ಅಗತ್ಯತೆಯನ್ನು ಮನಗಂಡರು. ಹಾಗೆ ಮೂಡಿದ್ದೇ "ಹಿಂದುತ್ವ" ಎಂಬ ಕೃತಿ. ಜೊತೆಗೆ ಅವರು ಪ್ರತಿಪಾದಿಸಿ ಕಾರ್ಯಾಚರಿಸಿದ್ದು ಅಹಿಂದೂಗಳ ಶುದ್ಧೀಕರಣ, ಹಿಂದೂಗಳ ಸಂಘಟನೆ ಹಾಗೂ ಹಿಂದೂ ಸೈನಿಕೀಕರಣ ಎಂಬ ಮೂರು ಮುಖ್ಯ ಅಂಶಗಳು.


"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|

ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"


ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್. ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ಸ್ಪಷ್ಟವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದನ್ನು ಪ್ರತಿಪಾದಿಸಿದ್ದರು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗೆ ಎಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ. 


   "ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ" ಎಂದಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ." ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಾವರ್ಕರ್ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. 


      ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ, ಯಾವ ಭಾರತಕ್ಕಾಗಿ ಮೊಟ್ಟ ಮೊದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ನೀವೂ ನಮ್ಮವರೇ ಎಂದು ಆಲಿಂಗಿಸಿ ಹಿಂದೂಗಳ ಸಂಘಟನೆಗೆ, ಸಮಗ್ರತೆಗೆ ಜೀವನವನ್ನು ಮುಡಿಪಾಗಿಟ್ಟರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಬಗೆಗೆ ಅಧ್ಯಯನ ಮಾಡಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ