ಪುಟಗಳು

ಸೋಮವಾರ, ಜುಲೈ 4, 2016

ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್

ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್

          ಜಾರ್ಜ್ ಆರ್ವೆಲ್ ಬರೆದ ವಿಡಂಬನೆ "ಅನಿಮಲ್ ಫಾರ್ಮ್" ಬಗ್ಗೆ ಕೇಳಿದ್ದೀರಾ? ಸ್ಟಾಲಿನ್ನನ ಸರ್ವಾಧಿಕಾರವನ್ನು ಲೇವಡಿ ಮಾಡಿ ಬರೆದ ಈ ವಿಡಂಬನಾತ್ಮಕ ಕಥನ ದಶಕಗಳುರುಳಿದರು ಬಹಳ ಪ್ರಖ್ಯಾತ! ಆ ಕಥೆಯ ಸಂಕ್ಷಿಪ್ತ ರೂಪವನ್ನು ಎಸ್. ಆರ್. ರಾಮಸ್ವಾಮಿಯವರು ಜಾರ್ಜ್ ಆರ್ವೆಲನ ಬಗ್ಗೆ ಬರೆದ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದರು. ಅದನ್ನು ಓದಿದಾಗ ನಿಮಗೆ ನಿಮ್ಮ ಸರಕಾರವೋ, ಕೆಲಸ ಮಾಡುವ ಸಂಸ್ಥೆಯೋ ನೆನಪಾದರೆ ಅಚ್ಚರಿಯೇನಲ್ಲ.

         "ಮೇನರ್ ಫಾರ್ಮ್"ನ ಪ್ರಾಣಿಗಳೆಲ್ಲಾ ಒಂದಾಗಿ ಬಂಡಾಯವೆದ್ದು ಜಮೀನಿನ ಯಜಮಾನನನ್ನು ಹೊರಗಟ್ಟಿ ತಮ್ಮದೇ ಅಧಿಕಾರವನ್ನು ಸ್ಥಾಪಿಸುತ್ತವೆ. ಪ್ರಾಣಿಗಳ ಬಂಡಾಯದ ಗುಂಪಿನ ಮುಖ್ಯಸ್ಥರು ಮೂರು ಹಂದಿಗಳು. ಸ್ಟಾಲಿನ್ನನ ಪ್ರತಿರೂಪವೆನಿಸಿದ ನೆಪೋಲಿಯನ್ ಎನ್ನುವ ನಾಯಕ, ಟ್ರಾಟ್ ಸ್ಕಿಯನ್ನು ಹೋಲುವ ಸ್ನೋಬಾಲ್ ಎನ್ನುವ ಬುದ್ಧಿಜೀವಿ, ಸ್ಕ್ವೀಲರ್ ಎನ್ನುವ ಸರಕಾರದ ಯೋಜನೆಗಳನ್ನು ಪ್ರಚಾರ ಮಾಡುವವರೇ ಈ ಮೂರು ಹಂದಿಗಳು. ಸ್ನೋಬಾಲ್ ಬಂಡಾಯದ ಮೂಲತತ್ವಗಳನ್ನು ಏಳು ಸೂತ್ರಗಳಲ್ಲಿ ಅಡಕಗೊಳಿಸುತ್ತಾನೆ.

೧. ಎರಡು ಕಾಲಿನ ಮೇಲೆ ನಡೆಯುವವರೆಲ್ಲಾ ನಮ್ಮ ಶತ್ರುಗಳು.
೨. ನಾಲ್ಕು ಕಾಲಿನವು ಹಾಗೂ ರೆಕ್ಕೆಯುಳ್ಳವು ನಮ್ಮ ಮಿತ್ರವರ್ಗ.
೩. ಯಾವ ಪ್ರಾಣಿಯೂ ಬಟ್ಟೆ ಧರಿಸಕೂಡದು.
೪. ಯಾವ ಪ್ರಾಣಿಯೂ ಹಾಸಿಗೆಯಲ್ಲಿ ಮಲಗಕೂಡದು.
೫. ಯಾವ ಪ್ರಾಣಿಯೂ ಹೆಂಡ ಕುಡಿಯಕೂಡದು.
೬. ಯಾವ ಪ್ರಾಣಿಯೂ ಬೇರೆ ಪ್ರಾಣಿಯನ್ನು ಕೊಲ್ಲಕೂಡದು.
೭. ಎಲ್ಲಾ ಪ್ರಾಣಿಗಳೂ ಸಮಾನ.

ಪ್ರಾಣಿಗಳು ಅನಕ್ಷರಸ್ಥ ಹಾಗೂ ಅಜ್ಞಾನಿಗಳಾದುದರಿಂದ ಅವುಗಳಿಗೆ ಈ ಸೂತ್ರಗಳು ತಿಳಿಯದಾದಾಗ ಸ್ನೋಬಾಲ್ ಈ ಸೂತ್ರಗಳನ್ನು ಮತ್ತಷ್ಟು ಸರಳಗೊಳಿಸಿದ; "ನಾಲ್ಕು ಕಾಲು, ಒಳ್ಳೆಯವರು; ಎರಡು ಕಾಲು, ಕೆಟ್ಟವರು!"

            ಪ್ರಾಣಿಗಳು ಎಷ್ಟು ಮುಗ್ಧವೆಂದರೆ ಉಳಿದೆಲ್ಲಾ ಪ್ರಾಣಿಗಳ ಆವಶ್ಯಕತೆಗಳು ತಮ್ಮ ಆವಶ್ಯಕತೆಗಳು ಒಂದೇ ಎಂದು ಭಾವಿಸಿದ್ದವು. ಆಗ ಸ್ಕ್ವೀಲರ್ ಬುದ್ಧಿಜೀವಿಗಳು ಅರ್ಥಾತ್ ಹಂದಿಗಳಿಗೆ ವಿಶೇಷ ಆಹಾರ ಆವಶ್ಯಕವೆಂದು ತಿಳಿಯಪಡಿಸುತ್ತಾನೆ. ಹೀಗೆ ಸೇಬು, ಹಾಲು ಮುಂತಾದ ಶ್ರೀಮಂತ ಆಹಾರವೆಲ್ಲಾ ಹಂದಿಗಳಿಗೆ ಮೀಸಲು. ಹಂದಿಗಳಿಗೆ ಆಹಾರದಲ್ಲಿ ಪೋಷಣೆ ಸಾಲದೆ ಹೋದರೆ ನಮ್ಮ "ಪ್ರಾಣಿಗಳ ಬೀಡು" ಮತ್ತೆ ಹಿಂದಿನ ಯಜಮಾನನ ವಶವಾಗುತ್ತೆ ಎಂದು ಪ್ರಾಣಿಗಳನ್ನು ನಂಬಿಸಲಾಗುತ್ತದೆ.

           ಏತನ್ಮಧ್ಯೆ ಸ್ನೋಬಾಲ್ ಹಾಗೂ ನೆಪೋಲಿಯನ್ನರ ನಡುವೆ ಭಿನ್ನಮತ ತಲೆದೋರಿ ಸ್ನೋಬಾಲ್'ನ ಗಡಿಪಾರಾಗುತ್ತದೆ. ನೆಪೋಲಿಯನ್ ಪ್ರಾಣಿಗಳ ಸಂಸತ್ತಿಗೆ ಬದಲಾಗಿ ವಾರಕ್ಕೊಮ್ಮೆ ಬುಜೀಗಳ(ಹಂದಿಗಳ) ತಜ್ಞ ಸಮಿತಿ ಸಮಾವೇಶಗೊಂಡು ನಿರ್ಣಯ ಕೈಗೊಳ್ಳುವಂತೆ ಏರ್ಪಾಡು ಮಾಡುತ್ತಾನೆ. ಆಡಳಿತವನ್ನೆಲ್ಲಾ ನಾವೇ ನೋಡಿಕೊಳ್ಳುತ್ತೇವೆ. ನೀವು ಶ್ರಮ ಪಡುವ ಅಗತ್ಯವಿಲ್ಲ ಎಂದು ಸ್ಕ್ವೀಲರ್ ಪ್ರಾಣಿಗಳಿಗೆ ತಿಳುವಳಿಕೆ ಕೊಡುತ್ತಾನೆ. ಸ್ನೋಬಾಲ್ ಗಾಳಿಯಂತ್ರ ಸ್ಥಾಪಿಸೋಣ ಎಂದಾಗ ಅದನ್ನು ದೇಶದ್ರೋಹವೆಂತಲೂ ಗುಲಾಮಗಿರಿಯ ಮರುಸ್ಥಾಪನೆಯೆಂತಲೂ ಹೇಳಿದ್ದ ನೆಪೋಲಿಯನ್ ಈಗ ತಾನೇ ಗಾಳಿಯಂತ್ರ ಸ್ಥಾಪಿಸುತ್ತಾನೆ. ವಾಸ್ತವವಾಗಿ ಈ ಯೋಜನೆ ಹಾಕಿದ್ದವ ನೆಪೋಲಿಯನ್ನೇ, ಸ್ನೋಬಾಲ್ ಇದನ್ನು ಕದ್ದಿದ್ದ ಎಂದು ಸಾರಲಾಗುತ್ತದೆ. ಹಾಗಿದ್ದರೆ ನೆಪೋಲಿಯನ್ ತನ್ನದೇ ಯೋಜನೆಯನ್ನು ವಿರೋಧಿಸಿದ್ದೇಕೆಂದು ತಲೆಯಲ್ಲಿ ಅಲ್ಪಸ್ವಲ್ಪ ಬೊಂಡಿದ್ದ ಪ್ರಾಣಿಗಳು ವಿಚಾರಿಸಿದಾಗ ಅದು ದೇಶಹಿತದ ದೃಷ್ಟಿಯಿಂದ ಸ್ನೋಬಾಲನ್ನು ಓಡಿಸುವುದಕ್ಕೆ ಕೈಗೊಂಡ ನಿರ್ಧಾರ ಎನ್ನಲಾಗುತ್ತದೆ. ನೆಪೋಲಿಯನ್ನನ ದೂರದೃಷ್ಟಿಯನ್ನೂ, ಪ್ರಾಜ್ಞತೆಯನ್ನೂ ಪ್ರಾಣಿಗಳೆಲ್ಲಾ ಕೊಂಡಾಡುತ್ತವೆ.

ಗುಲಾಮಗಿರಿಯ ಸ್ಮರಣೆಯನ್ನು ಅಳಿಸಿಹಾಕುವ ಉದ್ದೇಶದಿಂದ ನೆಪೋಲಿಯನ್ ಪ್ರಾಣಿಗಳ ದುಡಿಮೆಯ ಅವಧಿಯನ್ನು ಹೆಚ್ಚಿಸುತ್ತಾನೆ. ಭಾನುವಾರದ ರಜೆಯನ್ನು ರದ್ದುಗೊಳಿಸುತ್ತಾನೆ. ನೆರೆಹೊರೆಯ ಜಮೀಂದಾರರೊಡನೆ ಸಂಪರ್ಕ ಬೆಳೆಸುವ ಯೋಜನೆಯನ್ನು ಸರ್ಕಾರ ಪ್ರಕಟಿಸಿದಾಗ ಪ್ರಾಣಿಗಳ ಹುಬ್ಬೇರುತ್ತವೆ. ಯಾಕೆಂದರೆ ಮನುಷ್ಯವರ್ಗದೊಡನೆ ಯಾವ ಸಂಪರ್ಕವನ್ನೂ ಇರಿಸಿಕೊಳ್ಳಬಾರದೆಂಬುದೇ ಪ್ರಾಣಿಗಳ ಬಂಡಾಯದ ಪ್ರೇರಕಸೂತ್ರವಾಗಿದ್ದುದು. ಈ ಮೂಲಕಲ್ಪನೆ ಸ್ನೋಬಾಲ್'ನ ಅವಿವೇಕದ ಫಲ ಎನ್ನುತ್ತಾನೆ ನೆಪೋಲಿಯನ್! ನೆಪೋಲಿಯನ್ನನ ದಕ್ಷ ಆಡಳಿತದ ಪರಿಣಾಮ ಆಹಾರಾಭಾವ ತಲೆದೋರುತ್ತದೆ. ಇದು ಸುಳ್ಳೆಂದು ಸಾಬೀತು ಮಾಡಲು ಮನುಷ್ಯವರ್ಗದ ಪ್ರತಿನಿಧಿಯೊಬ್ಬನನ್ನು ಕರೆಸಿ ತುಂಬಿತುಳುಕುತ್ತಿದ್ದ ಧಾನ್ಯದ ಗೂಡೆಗಳನ್ನು ಪ್ರದರ್ಶಿಸಲಾಗುತ್ತದೆ. ವಾಸ್ತವವಾಗಿ ಮೇಲ್ಪದರದಲ್ಲಿ ಧಾನ್ಯವಿದ್ದರೆ ಕೆಳಗೆ ಮರಳಿನಿಂದ ಗೂಡೆಯನ್ನು ತುಂಬಿಸಲಾಗಿರುತ್ತದೆ. ಹಾಲಿನ ಕೊರತೆ, ಮೊಟ್ಟೆಗಳ ನಾಶ, ಧಾನ್ಯದ ಕಳವು ಎಲ್ಲಕ್ಕೂ ಸ್ನೋಬಾಲ್ನ ಪಿತೂರಿಯೇ ಕಾರಣವೆಂದು ಸರ್ಕಾರ ಪ್ರಚಾರ ಮಾಡುತ್ತದೆ. ಸ್ನೋಬಾಲ್ ಬೀಡಿನ ಹಿಂದಿನ ಯಜಮಾನನ ಜೊತೆ ಕೈ ಜೋಡಿಸಿದ್ದಾನೆಂದು ಸಾರಲಾಗುತ್ತೆ. ಭಾನುವಾರದ ದುಡಿಮೆಗೆ ಆಕ್ಷೇಪಿಸಿದ ನಾಲ್ವರು ಹಂದಿಗಳನ್ನು ಸ್ನೋಬಾಲ್ ಏಜೆಂಟರೆಂದು ದಸ್ತಗಿರಿ ಮಾಡಲಾಗುತ್ತೆ. "ಯಾವ ಪ್ರಾಣಿಯೂ ಬೇರೆ ಪ್ರಾಣಿಯನ್ನು ಕೊಲ್ಲಕೂಡದು" ಎಂಬ ಸೂತ್ರಕ್ಕೆ "_ಕಾರಣವಿಲ್ಲದೆ" ಎಂದು ಸೇರಿಸಲಾಗುತ್ತೆ. ಹಂದಿಗಳು ಮಾತ್ರ ನೆಮ್ಮದಿಯಿಂದಿರುತ್ತವೆ. ಅವು ಮದ್ಯಪಾನ ಮಾಡಿದುದಕ್ಕೆ ಕೆಲ ಪಾನಪ್ರಿಯ ಪ್ರಾಣಿಗಳು ಆಕ್ಷೇಪಿಸಿದಾಗ "ಅತಿಯಾಗಿ ಕುಡಿಯಬಾರದೆಂದು ಮಾತ್ರ ನಿಯಮವಿರುವುದು" ಎನ್ನಲಾಗುತ್ತೆ. ಉಳಿದ ಪ್ರಾಣಿಗಳ ದುಡಿಮೆಗೆ ದೊರಕುವ ಫಲ ಹಿಂದಿಗಿಂತ ಹೆಚ್ಚು ಹಾಡುಗಳು, ಭಾಷಣಗಳು, ಮೆರವಣಿಗೆಗಳು! "ಪ್ರಾಣಿಗಳ ಬೀಡಿ"ನ ಯಶಸ್ಸನ್ನು ಕೀರ್ತಿಸಲು ವಾರಕ್ಕೊಮ್ಮೆ ಮೇಳ ನಡೆಸುವಂತೆ ನೆಪೋಲಿಯನ್ ಆಜ್ಞಾಪಿಸುತ್ತಾನೆ. "ನಾಲ್ಕು ಕಾಲು ಒಳ್ಳೆಯವರು, ಎರಡು ಕಾಲು ಕೆಟ್ಟವರು" ಪಲ್ಲವಿಯನ್ನು ಎಲ್ಲರೂ ಒಕ್ಕೊರಲಿನಿಂದ ಹಾಡುತ್ತಾರೆ.

ಶಿಸ್ತು ತಪ್ಪಿದರೆ ಶತ್ರುಗಳು ಮೇಲೆರಗುತ್ತಾರೆ ಎಂದು ಹೆದರಿಸಲಾಗುತ್ತೆ. ಅಧಿಕ ದುಡಿಮೆ, ಕಡಿಮೆ ಪ್ರತಿಫಲದಿಂದ ಪ್ರಾಣಿಗಳೆಲ್ಲಾ ಸೊರಗಿದ್ದರೂ ನಾಯಕವರ್ಗದ ಹಂದಿಗಳು, ಪೊಲೀಸ್ ವ್ಯವಸ್ಥೆ ನಿರ್ವಹಿಸುತ್ತಿದ್ದ ನಾಯಿಗಳು ಮಾತ್ರ ಸೊಂಪಾಗಿರುತ್ತವೆ. ಕಾಲಕ್ರಮದಲ್ಲಿ ಹಂದಿಗಳು ಬಟ್ಟೆ ಧರಿಸುತ್ತವೆ. ಹಾಸಿಗೆಯ ಮೇಲೆ ಮಲಗುತ್ತವೆ. ಎರಡು ಕಾಲಿನ ನಡಿಗೆಯನ್ನೂ ಪ್ರಾರಂಭಿಸುತ್ತವೆ. ಕೈಯಲ್ಲಿ ಚಬುಕು ಹಿಡಿದು ನೆಪೋಲಿಯನ್ ರಾಜಗಾಂಭೀರ್ಯದಿಂದ ಎರಡು ಕಾಲುಗಳಲ್ಲಿ ನಡೆಯತೊಡಗಿದಾಗ ಹೊಸ ಘೋಷಣೆ ಮೊಳಗುತ್ತದೆ. "ನಾಲ್ಕು ಕಾಲು ಒಳ್ಳೆಯದು; ಎರಡು ಕಾಲು ಅದಕ್ಕಿಂತ ಉತ್ಕೃಷ್ಟ!" ಜೊತೆಗೆ ಪ್ರಾಣಿಗಳ ಏಳು ಸೂತ್ರ "ಎಲ್ಲ ಪ್ರಾಣಿಗಳೂ ಸಮಾನ, ಆದರೆ ಕೆಲವು ಪ್ರಾಣಿಗಳು ಉಳಿದವಕ್ಕಿಂತ ಹೆಚ್ಚು ಸಮಾನ" ಎಂದಾಗುತ್ತದೆ! ಪ್ರಾಣಿವರ್ಗದ ಪ್ರತಿನಿಧಿ ಪಿಲ್ಕಿಂಗ್ ಟನ್'ನನ್ನು ಔತಣಕ್ಕೆ ಆಹ್ವಾನಿಸಿದ ನೆಪೋಲಿಯನ್ ಪ್ರಾಣಿಗಳ ಬೀಡನ್ನು ಮತ್ತೆ "ಮೇನರ್ ಫಾರ್ಮ್" ಎಂದು ಮರುನಾಮಕರಣ ಮಾಡುತ್ತಾನೆ! ನೆಪೋಲಿಯನ್, ಪಿಲ್ಕಿಂಗ್ ಟನ್ನರನ್ನು ಅಕ್ಕಪಕ್ಕದಲ್ಲಿ ನೋಡಿದಾಗ ಮನುಷ್ಯ ಯಾರು ಹಂದಿ ಯಾರು ಎಂದು ಗುರುತಿಸಲೇ ಕಷ್ಟವಾಗುತ್ತದೆ!

ಪ್ರಖ್ಯಾತವಾದ ಈ ಕಥೆಯ ಪ್ರಸ್ತುತತೆ ಇಂದಿಗೂ ಕುಂದಿಲ್ಲ. ಈ ಕಥೆ ಒಂದು ತಿಂಗಳು ಪೂರೈಸಿರುವ ಕೇರಳದ ವಾಮರಂಗ ಸರಕಾರಕ್ಕೆ ಹೇಳಿ ಮಾಡಿಸಿದಂತಿದೆ! ಇದನ್ನೋದಿದಾಗ ಬ್ರಿಟಿಷರ ತರುವಾಯ ಬಂದ ಕಾಂಗ್ರೆಸ್ ಸರಕಾರ, ಬಂಗಾಳದಲ್ಲಿನ ಸರಕಾರಗಳು, ಕೇಜ್ರಿವಾಲನ ದೆಹಲಿಯ ಆಡಳಿತ ನೆನಪಾದರೂ ಆಶ್ಚರ್ಯವಿಲ್ಲ. ಹೆಚ್ಚೇಕೆ, ನಿದ್ದೆ ಮಾಡುತ್ತಿರೋ ನೆಪೋಲಿಯನ್, ಬೋಳುಮಂಡೆ ಸ್ಕ್ವೀಲರ್ ಏನಾದರೂ ನಿಮ್ಮ ಮನಃಪಟಲದಲ್ಲಿ ಹಾದುಹೋದರೆ ನಾನು ಜವಾಬ್ದಾರನಲ್ಲ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ