ಪುಟಗಳು

ಸೋಮವಾರ, ಜುಲೈ 25, 2016

ಭಾಗವತದಲ್ಲಿ ಅದ್ವೈತ ಭಾವ

ಶುಕ ದ್ವೈಪಾಯನ ವ್ಯಾಸರ ಓರ್ವನೇ ಮಗ. ಮಹಾಜ್ಞಾನಿಯಾಗಿ ತೀವ್ರ ವಿರಾಗ ಭಾವದಿಂದ ಮನೆ ಬಿಟ್ಟು ಹೋದ. ಎಲ್ಲೆಲ್ಲೂ(!) ಅಲೆಯುತ್ತಿದ್ದ. ವ್ಯಾಸರಿಗೆ ಪುತ್ರವಿಯೋಗ ಆವರಿಸಿಕೊಂಡುಬಿಟ್ಟಿತು.  ದೈಪಾಯನ ವ್ಯಾಸರು ಮಗನನ್ನು ಹುಡುಕುತ್ತಾ "ಮಗನೇ" ಎಂದು ಕೂಗಿ ಕರೆಯುತ್ತಾ ಎಲ್ಲೆಲ್ಲೋ ಅಲೆದರು. ಆಗೊಂದು ಅದ್ಭುತ ಘಟಿಸಿತು. ಕಾಡಿನ ತರುಲತೆಗಳೆಲ್ಲಾ ಅವರ ಕರೆಗೆ ಓಗೊಟ್ಟವಂತೆ.
"ದ್ವೈಪಾಯನೋ ವಿರಹಕಾತರಃ ಆಜುಹಾವ| ತರವೋSಭಿನೇದುಃ"

ಶುಕನನ್ನು ವಹಿಸಿಕೊಂಡು ಅವನ ಪರವಾಗಿ ಪ್ರಕೃತಿಯೇ ಪ್ರತಿಸ್ಪಂದಿಸಿದುದನ್ನು ಕಂಡು ವ್ಯಾಸರಿಗೆ "ಅರಿವು" ಉಂಟಾಯಿತು!
ಶುಕನು ಎಲ್ಲಾ ಜೀವಗಳನ್ನು ತನ್ನಂತೆ ಎಂದು ಬಗೆಯುತ್ತಾನೆ. ಅವನಿಗೆ ಎಲ್ಲವೂ ಒಂದೇ ಎನ್ನುವ "ಅದರ" ಅರಿವಾಗಿದೆ. "ಆ ಅದುವೆ" "ನಾನು" ಎನ್ನುವ ಅರಿವು ಈಗ ವ್ಯಾಸರಿಗೂ ಆಗಿದೆ! ಹೀಗೆ ಬಯಲಾದವ ತನ್ನದಾದ ಆಲಯದಲ್ಲಿರಲು ಸಾಧ್ಯವೇ?
ಭಾಗವತದ ಪ್ರವೇಶಿಕೆಯಲ್ಲೇ ಅದ್ವೈತ ಭಾವ! ಮುಂದೆ ಭಾಗವತದಲ್ಲಿರಲಾರದೇ? ಇಲ್ಲ ಎಂದವರಾರು? ಕೃಷ್ಣ ಗೋಪಿಕೆಯರ ಸಂದರ್ಭದಲ್ಲಿ ಕಾಣಿಸಿದ್ದು ಅದೇ ಅಲ್ಲವೇ?

ಸೂಚನೆ: ಶುಕನ ಅಲೆದಾಟಕ್ಕೆ "ಎಲ್ಲೆಲ್ಲೂ" ಹಾಗೂ ವ್ಯಾಸರ ಹುಡುಕಾಟಕ್ಕೆ "ಎಲ್ಲೆಲ್ಲೋ" ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ಉಪಯೋಗಿಸಿದ್ದೇನೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ