ಪುಟಗಳು

ಶುಕ್ರವಾರ, ಜುಲೈ 15, 2016

ಭಾರತೀಯರ ಚಿತ್ತಭಿತ್ತಿಯಲ್ಲೂ "ಅಜೇಯ"ನಾಗುಳಿದ ಪ್ರಳಯರುದ್ರ

ಭಾರತೀಯರ ಚಿತ್ತಭಿತ್ತಿಯಲ್ಲೂ "ಅಜೇಯ"ನಾಗುಳಿದ ಪ್ರಳಯರುದ್ರ


    ವಿಶ್ವನಾಥನ ಮೇಲಿನ ಮೋಹದಿಂದ ಹರಿಯುವುದನ್ನೇ ಮರೆತ ಗಂಗೆ; ಜಟೆಗಟ್ಟಿದಕೂದಲು, ನೆಲಮುಟ್ಟುತ್ತಿರುವ ಗಡ್ದ, ಚಳಿ-ಮಳೆ-ಗಾಳಿಗೆ ಲೆಕ್ಕಿಸದ ಬರೀ ಮೈಯ ತೇಜಸ್ವೀ ಸಾಧುಗಳು, ಕಾಷಾಯ ವಸ್ತ್ರಧಾರಿ ಸಂತ-ಮಹಂತರು, ವಿಭೂತಿ ಬಳಿದು ಓಡಾಡುತ್ತಿರುವ ಸಂನ್ಯಾಸಿಗಳ ಹರ್ ಹರ್ ಮಹಾದೇವ್ ಘರ್ಜನೆ; ಪಂಡಿತರ ವೇದ ಘೋಷ; ತಿಲಕ ಧರಿಸಿ, ಜುಟ್ಟು ಬಿಟ್ಟು, ಕಚ್ಛೆ ಹಾಕಿ ಪಾಠ ಶಾಲೆಗೆ ಹೋಗುತ್ತಿರುವ ವಟುಗಳು-ಪಾಶ್ಚಾತ್ಯ ದಿರಿಸು ಧರಿಸಿ ತರುಣಿಯರನ್ನು ಕೆಣಕುತ್ತಿರೋ ಕಾಲೇಜು ವಿದ್ಯಾರ್ಥಿಗಳು; ಭಿಕ್ಷೆ ಎತ್ತುತ್ತಿರುವವರ ಆರ್ತದನಿಗಳು, ಜೋಳಿಗೆ ದಾಸಯ್ಯರ ಶಂಖ-ಜಾಗಟೆಗಳು, ಶಕುನದವರ ಬುಡಬುಡಿಕೆಗಳು, ಕ್ಷಾತ್ರವನ್ನು ಹ್ರಾಸಗೊಳಿಸುತ್ತಿರುವ ಅಹಿಂಸಾ ಜಾಥಾಗಳು; ಗಂಗೆಯ ತಟ-ವಿಶ್ವನಾಥನ ಮಠದಿಂದ ಮೊಳಗುತ್ತಿರುವ ಶಂಖನಾದದ ನಡುವೆ ಮರಿಸಿಂಹವೊಂದು ಹೂಂಕರಿಸಿತು...
"ಮೈ ಆಜಾದ್ ಹೂಂ, ಆಜಾದ್ ಹೀ ರಹೂಂಗಾ, ಆಜಾದ್ ಹೀ ಮರೂಂಗಾ!"
ಅಗಲವಾದ ತೇಜಸ್ವೀ ಮೊಗ ನಿಗಿ ನಿಗಿ ಹೊಳೆಯುವ ಅರಳು ಕಣ್ಣುಗಳು ದೃಢವಾದ ಮೈಕಟ್ಟಿನ ಚಂದ್ರಶೇಖರ ಶರ್ಮ, ತ್ರಿವರ್ಣ ಧ್ವಜ ಹಿಡಿದು ಶಂಖನಾದ ಮಾಡುತ್ತಾ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ವೀರ ಸಂನ್ಯಾಸಿ ಸ್ವಾಮಿ ಶಂಕರಾನಂದ ಬ್ರಹ್ಮಚಾರಿಯನ್ನು ಲಾಠಿಯಿಂದ ಸಾಯ ಬಡಿಯುತ್ತಿದ್ದ ಸಬ್ ಇನ್ಸ್ಪೆಕ್ಟರನ ಹಣೆಗೆ ಕಲ್ಲಿಂದ ಗುರಿಯಿಟ್ಟು ಹೊಡೆದಿದ್ದ! "ಅಹಿಂಸಾ ಪರಮೋ ಧರ್ಮ" ಎನ್ನುತ್ತಿದ್ದ ಚಳುವಳಿಯಲ್ಲಿ ಭಾಗವಹಿಸಿದ್ದ ಹದಿನೈದು ವರುಷದ ಹುಡುಗನಲ್ಲಿ "ಧರ್ಮ ಹಿಂಸಾ ತಥೈವಚಾ" ಎನ್ನುವ ಅದರ ಉತ್ತರಾರ್ಧ ಕಾಯಾ-ವಾಚಾ-ಮನಸಾ ಪ್ರತಿಧ್ವನಿಸಿತ್ತು. ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸುತ್ತಾ ಹೆಸರೇನೆಂದು ಕೇಳಿದಾಗ "ಆಜಾದ್" ಎಂದು ಸಿಡಿಗುಂಡಿನಂತೆ ಹೊರಟ ಆ ಸ್ವರ ಮಧ್ಯಪ್ರದೇಶದ ಝೂಬುವಾ ಜಿಲ್ಲೆಯ ಭಾವರಾ ಎಂಬ ಪರ್ವತ, ಹಚ್ಚಹಸಿರಿನ ವನಸಿರಿ, ಬಳುಕುವ ತರಂಗಿಣಿಯನ್ನೊಳಗೊಂಡ ರಮಣೀಯ ಹಳ್ಳಿಯಲ್ಲಿ ಸೀತಾರಾಮ್ ತಿವಾರಿ-ಜಗರಾಣಿ ದೇವಿ ಸ್ವಾಭಿಮಾನಿ ದಂಪತಿಗಳ ದ್ವಿತೀಯ ಸಂಜಾತನಾಗಿ 1906 ಜುಲೈ 23, ಶ್ರಾವಣ ಶುದ್ಧ ದ್ವಿತೀಯ, ಸೋಮವಾರ ಧರೆಗಿಳಿದಿತ್ತು.

    ನಡೆಯಲು ಬರುವ ಮೊದಲೇ ಅಂಬೆಗಾಲಿಕ್ಕಿಕೊಂಡು ಹಳ್ಳಿಯ ಮನೆಮನೆಗೂ ನುಗ್ಗುತ್ತಿದ್ದ ಚಂದ್ರಶೇಖರ ಹಳ್ಳಿಯ ಹುಡುಗರ ಸೇನಾಪತಿಯಾಗಿ ಕಾಡು-ಮೇಡುಗಳಲ್ಲಿ ಅಲೆದಾಡುವುದು, ಬೆಟ್ಟಗುಡ್ದಗಳನ್ನು ಹತ್ತಿಳಿಯುವುದು, ತೋಟಗಳಿಗೆ ನುಗ್ಗಿ ಮರವೇರಿ ಹಣ್ಣುಗಳನ್ನು ಕಿತ್ತು ಪರಾರಿಯಾಗುವುದರ ಜೊತೆಜೊತೆಗೆ ಭಿಲ್ಲ ಹುಡುಗರ ಜೊತೆ ಶಿಕಾರಿಗೂ ಹೋಗುತ್ತಿದ್ದ. ಹುಲಿ ಶಿಕಾರಿಯಲ್ಲಿ ಅವನದು ಎತ್ತಿದ ಕೈ! ಜೋಬಟ್, ಧಾಂದಲಾ, ಮೇಘನಗರ್, ಪೆಟ್ಲಾವದ್, ಅಂಬುಮಾ, ರಾಣಾಪುರಗಳಲ್ಲಿ ಅವನದೇ ಪಾರಮ್ಯ. ಅವನ ದಂಡಯಾತ್ರೆಗೆ ಅಲಿರಾಜಪುರ ಮಾತ್ರವಲ್ಲದೆ ಸುತ್ತಮುತ್ತಲಿನ ಸಂಸ್ಥಾನಗಳೂ ಬಲಿಯಾಗಿದ್ದವು. ಅವನ ಸಾಹಸಗಾಥೆಗಳು ಮನೆಮಾತಾಗಿದ್ದವು. ಅನೇಕ ಯುವತಿಯರ ಶೀಲ ಕೆಡಿಸಿದ್ದ ತರುಣನೊಬ್ಬನಿಗೆ ಭಿಲ್ಲ ಪದ್ದತಿಯಂತೆ ಶಿಕ್ಷೆ ವಿಧಿಸುವಾಗ ಆಜಾದ್ ಪ್ರಯೋಗಿಸಿದ್ದ ಮೊದಲ ಬಾಣವೇ ಅವನ ಕಣ್ಣನ್ನು ಛೇದಿಸಿತ್ತು! ಮುಂದೆ ಭಾರತದ ಅತ್ಯಂತ ತೀಕ್ಷ್ಣ, ಕುಶಲ, ನಿಖರ ಗುರಿಕಾರನೆಂದು ಶತ್ರುಗಳಿಂದಲೇ ಮೆಚ್ಚುಗೆ ಗಳಿಸಿದ್ದ ಆಜಾದನಿಗೇ ಆ ಭಿಲ್ಲರೇ ಗುರುಗಳು! ಅವನು ಮನೆ ಬಿಟ್ಟು ಹೋದ ಎಷ್ಟೋ ವರ್ಷಗಳ ನಂತರವೂ ಅವನ ಮನೆಯ ಗೋಡೆಯಲ್ಲಿ ಅವನೇ ತಯಾರಿಸಿದ್ದ ಬಿಲ್ಲುಬಾಣಗಳು ನೇತಾಡುತ್ತಿದ್ದವು!

    ನ್ಯಾಯಪರತೆಯ ಗುಣಗಳು ಎಳವೆಯಿಂದಲೇ ಅವನಲ್ಲಿ ಗೋಚರಿಸುತ್ತಿದ್ದವು. ಎಂಟು ವರ್ಷದವನಿದ್ದಾಗ, ಹಿಂದಿ ಪಾಠ ಹೇಳಿಕೊಡುತ್ತಿದ್ದ ಗುರು ಮನೋಹರ್ ಒಮ್ಮೆ ತಪ್ಪು ಮಾಡಿದಾಗ ಬೆತ್ತದಲ್ಲಿ ಛಟೀರೆಂದು ಗುರುವಿಗೇ ಎರಡೇಟು ಬಿಗಿದಿದ್ದನಾತ. ಯಾಕೆಂದು ಪ್ರಶ್ನಿಸಿದರೆ "ಅಣ್ಣ ತಪ್ಪು ಮಾಡುವಾಗ ಪಂಡಿತಜೀ ಹೊಡೆಯೋಲ್ಲವೆ. ಈಗ ಅವರು ತಪ್ಪು ಮಾಡಿದರು. ಅದಕ್ಕೇ ಹೊಡೆದೆ" ಎಂದಿದ್ದ. ಆದರೆ ತಂದೆಯ ರೌದ್ರಾವತಾರ ಮುಂದೆಂದೂ ಹಿರಿಯರಿಗೆ ಅಗೌರವ ತೋರಿಸಬಾರದೆಂಬ ಪಾಠ ಕಲಿಸಿತ್ತು. ಶಾಲೆಗೆಂದು ಕಳುಹಿಸಿದರೆ ಗೆಳೆಯರ ಜೊತೆ ಕಾಡು ಸೇರಿ ಯುದ್ಧದಾಟವಾಡುವ, ಶಿಕಾರಿ ಮಾಡುವ ಮಗ ಸುಧಾರಿಸುವುದಿಲ್ಲ ಎಂದರಿತ ಅಪ್ಪ ತಹಶೀಲ್ದಾರೊಬ್ಬರ ಬಳಿ ಕೆಲಸಕ್ಕೆ ಸೇರಿಸಿದರು. ಆಗವನಿಗೆ ಬರೇ ಹನ್ನೊಂದು ವರ್ಷ! ಅಧಿಕಾರಿಗಳಿಗೆ ಸಲಾಂ ಹಾಕಲೊಪ್ಪದ ಅವನ ಪರಿಸ್ಥಿತಿ ಪಂಜರದೊಳಗೆ ಕೂಡಿ ಹಾಕಿದ ಸಿಂಹದಂತಾಗಿತ್ತು. ಹವಳದ ವ್ಯಾಪಾರಿಯೊಬ್ಬನ ಸಹಾಯದಿಂದ ಮುಂಬೈಗೆ ಬಂದಿಳಿದ ಈ ಹದ್ದಿನ ಮುಂದಿನ ಹಾರಾಟಕ್ಕೆ ಮೇರೆಯೇ ಇರಲಿಲ್ಲ! ಕೆಲವೇ ದಿವಸಗಳಲ್ಲಿ ಮೂಟೆ ಹೊರುವ ಕೆಲಸವೂ ಬೇಜಾರಾಗಿ, ಅಪ್ಪನ ಅಪೇಕ್ಷೆಯ ನೆನಪು ಬಂದು ಸಂಸ್ಕೃತ ಪಂಡಿತನಾಗುವ ಹಂಬಲದಿಂದ ಕಾಶಿಯ ಹಾದಿ ಹಿಡಿದ. ಚಂದ್ರಶೇಖರೀರ್ವರೂ ತಮ್ಮೀ ಮಿಲನಕ್ಕೆ ಕಾಯುತ್ತಿದ್ದರೇನೋ?

    ಕಾಶಿಯಲ್ಲಿ ಸಂಸ್ಕೃತ ಛಾತ್ರ ಸಮಿತಿಯ ಬೆನ್ನುಲುಬಾಗಿ ಕಾಂಗ್ರೆಸ್ಸಿನ ಚಳುವಳಿಗಳ ನೇತಾರನಾಗಿದ್ದರೂ ಅನ್ಯಾಯವಾಗುತ್ತಿದ್ದಾಗ ಅಹಿಂಸೆ ಎಂದು ಕೈಕಟ್ಟಿ ಕೂರಲಿಲ್ಲ. ಕಾಶಿಯ ಕುಖ್ಯಾತ ಗೂಂಡಾನನ್ನು ಸದೆಬಡಿದ, ಯುವತಿಯ ಮೇಲುಗುಳಿದ ಅಪ್ಘನ್ ವ್ಯಾಪಾರಿಯನ್ನು ಚಚ್ಚಿದ, ಆಂಗ್ಲ ಹುಡುಗರನ್ನು ತರಿದಂತಹ ಅನೇಕ ಘಟನೆಗಳಲ್ಲಿ ಶತಶತಮಾನಗಳಿಂದ ಹ್ರಾಸಗೊಂಡಿದ್ದ ಕ್ಷಾತ್ರ ಬ್ರಾಹ್ಮಣ ಆಜಾದನಲ್ಲಿ ಪುನರ್ಜನ್ಮ ಪಡೆದುದನ್ನು ಕಾಣಬಹುದು! 'ಆನಂದಮಠ'ದ ಸಂತಾನರ ಬ್ರಹ್ಮಚರ್ಯ ಜೀವನ ಆಜಾದನಲ್ಲಿ ಧೃಢನಿರ್ಧಾರವೊಂದನ್ನು ಮಾಡಿಸಿತ್ತು. ಚೌರಿಚೌರಾದ ನಂತರದ ಗಾಂಧಿಯ ನಿಷ್ಕ್ರಿಯತೆ ಆಜಾದನ ಸುಪ್ತಮನಸ್ಸಿನಲ್ಲಿದ್ದ ನಿಶಿತ ಗುರಿಯೆಡೆ ಸಾಗುವಂತೆ ಮಾಡಿತ್ತು. ಮಣಿಕರ್ಣಿಕಾ ಘಾಟಿನಲ್ಲಿ ಧಗಧಗಿಸುತ್ತಿದ್ದ ಅಸಂಖ್ಯ ಚಿತಾಗ್ನಿ ಚರಕದ ಬದಲು ಪಿಸ್ತೂಲ್ ಹಿಡಿದು ದುರ್ಗೆಯ ಆರಾಧಕನಾಗುವ ಪ್ರತಿಜ್ಞೆಗೆ ಸಾಕ್ಷಿಯಾಗಿತ್ತು!

    ಪಂಡಿತ ರಾಮಪ್ರಸಾದನ ಆತ್ಮೀಯ ಶಿಷ್ಯನಾಗಿ ತನ್ನ ಪ್ರತಿಭೆ, ಶಕ್ತಿ, ಬುದ್ಧಿಚಾತುರ್ಯಗಳಿಂದ ಕ್ರಾಂತಿಪಾಳಯದಲ್ಲಿ ಗಣನೀಯ ಸ್ಥಾನ ಗಳಿಸಿಬಿಟ್ಟ ಆಜಾದ್. ಅವನ ಗುಂಡು ಹಾರಿಸುವ ತರಬೇತಿಗೆ ಸಾಕ್ಷಿಯಾಗಿದ್ದ, ರಾಣಿ ಲಕ್ಷ್ಮೀಬಾಯಿಯ ಸಾಹಸಗಾಥೆ ಹಾಡುತ್ತಿದ್ದ, ನಾಡಿಗಿಂತ ಕಾಡೇ ವಾಸಿ ಎನ್ನುತ್ತಿದ್ದ ಅವನ ಮನೋಭಾವನೆಗೆ ಸ್ಪಂದಿಸಿದ್ದ ಝಾನ್ಸಿಯ ಕಾಡಂತೂ ಅವನಿಗೆ ಆಪ್ಯಾಯಮಾನವಾಗಿತ್ತು. ಒಮ್ಮೆ ಶಚೀಂದ್ರ ಗುಂಡು ತುಂಬಿದ್ದ ರಿವಾಲ್ವರನ್ನು ಹಿಡಿದು ಅದನ್ನು ಚಲಾಯಿಸುವುದರ ಬಗ್ಗೆ ಭಾವೋನ್ಮತ್ತನಾಗಿ ಭಾಷಣ ಬಿಗಿಯುತ್ತಿದ್ದ. ಅವನಿಗರಿವಿಲ್ಲದಂತೆ ಅವನ ಬೆರಳು ರಿವಾಲ್ವರಿನ ಕುದುರೆಯನ್ನದುಮಿತ್ತು. ಎದುರುಗಡೆ ಭಗವಾನ್ ದಾಸ್ ಕೂತಿದ್ದ. ಎಲ್ಲರೂ ಅವನ ಭಾಷಣದ ಝಲಕಿನಲ್ಲಿ ತೇಲಿ ಹೋಗಿದ್ದರು. ಆಜಾದ್ ತಕ್ಷಣ ಜಿಗಿದು ರಿವಾಲ್ವರ್ ಬಾಯಿಯನ್ನು ಛಾವಣಿಯ ಕಡೆ ತಿರುಗಿಸಿದ. ಮಿಕ್ಕವರೆಲ್ಲಾ ಭಾವಜೀವಿಗಳಾಗಿ ವಾಸ್ತವಲೋಕವನ್ನು ತೊರೆದಿದ್ದರೂ ಆಜಾದ್ ಯಾವಾಗಲೂ ಎಚ್ಚೆತ್ತಿರುತ್ತಿದ್ದ. ಇಂತಹ ಹಲವಾರು ಘಟನೆಗಳನ್ನು ಅವನ ಜೀವನದುದ್ದಕ್ಕೂ ಕಾಣಬಹುದು. ಕಾಕೋರೀ ಕಾಂಡದ ಮುಖ್ಯ ರೂವಾರಿಯಾಗಿದ್ದರೂ, ತನ್ನ ನಾಯಕರು-ಸಹವರ್ತಿಗಳೆಲ್ಲರೂ ಸಿಕ್ಕಿಬಿದ್ದಿದ್ದರೂ, ಪೊಲೀಸರು ಸತತವಾಗಿ ಹಿಂಬಾಲಿಸುತ್ತಿದ್ದರೂ ಆಜಾದ್ ಸಿಕ್ಕಿಬೀಳಲಿಲ್ಲ. ಕಾಕೋರಿ ಮೊಕದ್ದಮೆಗೆ ಬೇಕಾದ ಹಣ, ವಿಷಯಸಾಮಗ್ರಿ ಸಂಗ್ರಹ ಮಾಡುತ್ತಾ, ವಕೀಲರನ್ನು ನೇಮಿಸುತ್ತಾ ತನ್ನನ್ನು ಹುಡುಕುತ್ತಿದ್ದ ಪೊಲೀಸರ ಜೊತೆಯೇ "ಕಲಾಯಿ ಪಂಜಾ" ಆಡುತ್ತಾ ಕ್ರಾಂತಿ ಸಂಘಟನೆ ಮುಂದುವರೆಸಿದ್ದ. ಪೊಲೀಸ್ ಸೂಪರಿಡೆಂಟನ ಕೈಯಿಂದಲೇ ವಾಹನ ಚಾಲನ ಪರವಾನಗಿ ಪತ್ರವನ್ನು ಪಡೆದಿದ್ದ ಅವನ ಚಾಣಕ್ಷತೆಯಂತೂ ಅದ್ಭುತ!

    ಅತ್ಯಾಚಾರಿಗಳು, ಕಾಮುಕರು, ಲಂಪಟರು, ಕುಡಿದು ಹೆಂಡತಿ ಮಕ್ಕಳನ್ನು ಬಡಿಯುವವರನ್ನು ಕಂಡರೆ ಆಜಾದನಿಗಾಗುತ್ತಿರಲಿಲ್ಲ. ಅಸಹಾಯಕರ ಪರ ನಿಂತು ಅವನು ಅನ್ಯಾಯಗಾರರಿಗೆ ಬುದ್ಧಿಕಲಿಸಿದ ಘಟನೆಗಳು ಅಸಂಖ್ಯ. ಢಿಮರಾಪುರದ ಹನುಮಾನ್ ದೇವಸ್ಥಾನದಲ್ಲುಳಿದು ಪಂಡಿತ್ ಜೀ ಎನಿಸಿಕೊಂಡು ಇಡೀ ಊರಿನ ಮನೆಯ ಮಗನಂತೆ ಬಾಳಿದ ಆಜಾದ್ ಆ ಊರು ಬಿಡುವಾಗ ಊರಿಗೇ ಊರೇ ಅತ್ತು ಸ್ಮಶಾನ ಮೌನ ತಾಳಿತ್ತು! ಯೌವನವತಿ ವಿಧವೆಯೊಬ್ಬಳು ಕಾಮವಾಂಛೆಯಿಂದ ಅಜಾದನನ್ನು ಕಾಡಿದಾಗ ಇಪ್ಪತ್ತಡಿ ಎತ್ತರದ ಮಹಡಿಯಿಂದ ಜಿಗಿದು ಸ್ತ್ರೀಮೋಹ ಜಾಲದಿಂದಲೂ ಆಜಾದನಾಗುಳಿದದ್ದು ಇಲ್ಲೇ! ತನಗಾಗಿಯಾಗಲೀ ತನ್ನ ಹೆತ್ತವರಿಗಾಗಲೀ ಯಾರಿಂದಲೂ ಸಹಾಯ ಯಾಚಿಸದ, ಭಿಕ್ಷೆ ಬೇಡದ, ಕೊಟ್ಟವರಿಗೇ ಬೈದು ಕಳುಹಿದ, ತನ್ನ ಮಾತಾಪಿತರ ಸೇವೆಗೆ ತನ್ನ ಪಿಸ್ತೂಲಿನ ಎರಡು ಗುಂಡುಗಳು ಸಾಕು ಎಂದ ತ್ಯಾಗ ಮೂರ್ತಿ ಅವನು. ಹೊಕ್ಕ ಮನೆಯ ಅವಿಭಾಜ್ಯ ಅಂಗವಾಗಿ ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಮನೆಯ ವಾತಾವರಣ-ಸಂದರ್ಭ-ಆಚರಣೆಗೆ ತಕ್ಕಂತೆ ಮನೆಯ ಮಗನಂತೆ ಇರುತ್ತಿದ್ದ ಆಜಾದ್ ತನ್ನ ಗುರಿಯತ್ತ ಮುನ್ನಡೆಯಲು ನಾನಾವೇಶಗಳನ್ನೂ ಧರಿಸಬೇಕಾಗಿತ್ತು. ಆಂಗ್ಲ ಸಿಪಾಯಿಗಳೊಡನೆಯೇ ಸೈಕಲ್ ರೇಸ್ ಮಾಡುತ್ತಿದ್ದ ಅವನನ್ನು ಬುಂದೇಲ್ ಖಂಡದ ಅನೇಕ ರಾಜರೂ, ಸರದಾರರೂ ಆತ್ಮೀಯವಾಗಿ ಕಾಣುತ್ತಿದ್ದರು. ಆಜಾದನನ್ನು ಕಾಣುವ ಬಯಕೆ ಅನೇಕ ಗಣ್ಯರಿಗಿತ್ತು. ರಾಜಕೀಯ ನಾಯಕಿಯಾಗಿದ್ದ ಶ್ರೀಮಂತ ಮಹಿಳೆಯೋರ್ವಳು ತನಗೆ ಆಜಾದನೊಡನೆ ಭೇಟಿ ಕಲ್ಪಿಸಿದರೆ ಸಂಘಟನೆಗೆ 2000 ರೂಪಾಯಿ ಕೊಡುವುದಾಗಿ ರುದ್ರನಾರಾಯಣರ ಬಳಿ ಹೇಳಿದಾಗ ಆಜಾದ್ "ಜನರಿಗೆ ದರ್ಶನ ಕೊಟ್ಟು, ಹಸ್ತಾಕ್ಷರ ಕೊಟ್ಟು, ಹಣ ಸಂಗ್ರಹಿಸುತ್ತಾ ಓಡಾಡಲು ನಾನೇನು ಗಾಂಧಿಯಲ್ಲ" ಎಂದಿದ್ದ.

    ಒಂದೆರಡು ಒಣಗಿದ ರೊಟ್ಟಿಗಳು, ಒಂದು ಬೆಲ್ಲದ ತುಂಡೇ ಅವನ ಆಹಾರ. ಊಟಕ್ಕೆ ಕುಳಿತಾಗ ಉಳಿದೆಲ್ಲರನ್ನು ವಿಚಾರಿಸದೆ ಊಟ ಮಾಡುತ್ತಿರಲಿಲ್ಲ. ಸಂಗಡಿಗರು ಯಾರಾದರೂ ಉಪವಾಸವಿದ್ದದ್ದು ಗೊತ್ತಾದರೆ ತನ್ನ ಪಾಲಿನದ್ದನ್ನು ಅವರಿಗೆ ನೀಡಿ ತನ್ನ ಊಟವಾಗಿದೆ ಎನ್ನುತ್ತಿದ್ದ. ಸಾವಿರಾರು ರೂಪಾಯಿಗಳಿರುತ್ತಿದ್ದರೂ ಅವಶ್ಯಕತೆಗಿಂತ ಹೆಚ್ಚು ಚಿಕ್ಕಾಸನ್ನೂ ಖರ್ಚು ಮಾಡುತ್ತಿರಲಿಲ್ಲ. ಸಂಸ್ಥೆಯ ಒಂದೊಂದು ಕಾಸನ್ನು ವ್ಯರ್ಥವಾಗದಂತೆ ರಕ್ಷಿಸುವುದು, ಪ್ರತಿ ಖರ್ಚಿನ ಲೆಖ್ಖ ಇಡುವುದು ಸೇನಾಧಿಪತಿಯಾದ ತನ್ನ ನೈತಿಕ ಜವಾಬ್ದಾರಿ ಎನ್ನುವುದು ಅವನ ನಿಲುವಾಗಿತ್ತು. ಅನೇಕ ಬಾರಿ ಉಪವಾಸವೇ ಇರುತ್ತಿದ್ದ. ಒಮ್ಮೆ ಕಲ್ಕತ್ತೆಯ ಶ್ರೀಮಂತ ಮುದುಕಿಯ ಮನೆಗೆ ಡಕಾಯಿತಿ ಮಾಡಲು ಹೋಗಿದ್ದಾಗ ಸಂಗಡಿಗನೊಬ್ಬ ಮುದುಕಿಯ ಮಗಳನ್ನು ಅತ್ಯಾಚಾರ ಮಾಡಲು ಧಾವಿಸಿದಾಗ ಸರಕ್ಕನೆ ಅವನ ಕೈಹಿಡಿದು ನಿಲ್ಲಿಸಿದ್ದು ಮಾತ್ರವಲ್ಲದೆ, ತಮ್ಮ ಕಾರ್ಯ ಅಪವಿತ್ರವಾಯಿತೆಂದು ದರೋಡೆಯನ್ನೇ ನಿಲ್ಲಿಸಿ ಮುದುಕಿಯ ಕ್ಷಮೆ ಕೇಳಿದ್ದ ಆಜಾದ್! ಅವನು ಕಳ್ಳತನ ಮಾಡುವಾಗಲೂ ಉದಾತ್ತ ಧ್ಯೇಯದ ಪಾವಿತ್ರ್ಯತೆ ಇರುತ್ತಿತ್ತು. ಆಂಗ್ಲರನ್ನು ಶಿಕ್ಷಿಸಬೇಕಾಗಿ ಬಂದಾಗ ಅವರ ಪತ್ನಿ ಮಕ್ಕಳ ಮೇಲೆ ಕೈಮಾಡದಂತೆ ನಿರ್ದೇಶಿಸುತ್ತಿದ್ದ.
   
    1927ರಲ್ಲೊಮ್ಮೆ ಲಾರಿಯ ಹ್ಯಾಂಡಲ್ ತಿರುಗಿಸುವ ಸಹಾಯ ಮಾಡಲು ಹೋಗಿ ಆಜಾದನ ಕೈಯ ಮೂಳೆ ಮುರಿದಿತ್ತು. ವೈದ್ಯರ ಬಳಿ ಕ್ಲೋರೋಫಾರಂ ಕೊಡದೆಯೇ ಶಸ್ತ್ರಚಿಕಿತ್ಸೆ ಮಾಡಲು ಹೇಳಿದ ಆಜಾದ್. ಕ್ಲೋರೋಫಾರಂನಿಂದ ಜ್ಞಾನ ತಪ್ಪಿದಾಗ ತನ್ನ ರಹಸ್ಯಳನ್ನೆಲ್ಲಾ ಬಡಬಡಿಸಿದರೆ ಅನಾಹುತವಾದೀತೆಂಬ ಎಚ್ಚರಿಕೆ ಅವನದ್ದು. ಆದರೆ ವೈದ್ಯರು ರೋಗಿಯ ಮಾತು ಕೇಳುವುದು ಎಲ್ಲಾದರೂ ಉಂಟೇ? ಶಸ್ತ್ರಚಿಕಿತ್ಸೆ ನಡೆಯಿತು. ಆಜಾದ್ ಊಹಿಸಿದ್ದ ಅನಾಹುತ ನಡೆದೇ ಹೋಗಿತ್ತು. ಆದರೆ ವೈದ್ಯ ಆಂಗ್ಲರ ಬಾಲಬಡುಕನಾಗಿರಲಿಲ್ಲವಾದ್ದರಿಂದ ಆಜಾದ್ ಬಚಾವಾದ. ಮುಂದೆ ಅದೇ ಕೈ ಪ್ರಚಂಡ ಪರಾಕ್ರಮದಿಂದ ಶತ್ರುಗಳ ಮೇಲೆ ಅವಿರತ ಗುಂಡಿನ ಮಳೆಗರೆದುದನ್ನು ಕೇಳಿದಾಗ ಆ ವೈದ್ಯನಲ್ಲಿ ಎಂತಹ ಭಾವನೆಗಳು ಉಕ್ಕಿರಬಹುದು?

    ಬಿಸ್ಮಿಲ್ಲನ ಬಳಿಕ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿದ ಆಜಾದ್. ಲಾಲಾಜಿಯನ್ನು ಕೊಂದ ಸೇಡಿಗೆ ಸ್ಯಾಂಡರ್ಸನ ವಧೆಯ ನೇತೃತ್ವ ಆಜಾದನದ್ದೇ! ಬಾಂಬು ತಯಾರಿಕಾ ತಜ್ಞ ಜತೀನ್ ದಾಸನ ಮನವೊಲಿಸಿ ತನ್ನ ಸಂಗಡಿಗರಿಗೆ ಬಾಂಬು ತಯಾರಿಸುವ ತರಬೇತಿ ಕೊಡಿಸಿದ. ಮುಂದೆ ಆಜಾದನ ಯೋಜನೆಯಂತೆ ಅಸೆಂಬ್ಲಿಯಲ್ಲಿ ಭಗತ್-ದತ್ತರು ಸ್ಫೋಟಿಸಿದ್ದು ಹೀಗೆ ತಯಾರಾದ ಬಾಂಬುಗಳನ್ನೇ! ವಾಸ್ತವವಾಗಿ ಭಗತ್ ಸಿಂಗನ "ಶತ್ರುಗಳ ಕೈಗೆ ಸಿಕ್ಕಿ ಬೀಳುವ ಆತ್ಮಾರ್ಪಣೆ" ಆಜಾದನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕೆಚ್ಚೆದೆಯಿಂದ ಹೋರಾಡಿ ವಿಜಯಿಯಾಗುವ ಚಾಣಕ್ಯ ನೀತಿ ಅವನದ್ದು. ಸಾವು ಬಂದಾಗಲೂ ವೀರರಂತೆ ಹೋರಾಡಿ ಸಾಯಬೇಕೆ ಹೊರತು ಶತ್ರುಗಳ ಕೈಗೆ ಸಿಕ್ಕಿ ಬೀಳುವುದು ವ್ಯಾವಹಾರಿಕವೂ ಅಲ್ಲ, ತರ್ಕಬದ್ಧವೂ ಅಲ್ಲ ಎನ್ನುವುದು ಅವನ ನಿಲುವು. ಆದರೆ ಭಗತನ ಹುಚ್ಚು ಆವೇಶದ ಮುಂದೆ ಆಜಾದ್ ಸೋಲಬೇಕಾಯ್ತು. ಭಗತನನ್ನು ಹಾರಿಸಿಕೊಂಡು ಬರುವ ಯೋಜನೆಯೂ ಭಗತನಿಂದ ಸಂಕೇತ ಬರದ ಕಾರಣ ವಿಫಲವಾಯಿತು.

    ಆಲ್ಫ್ರೆಡ್ ಪಾರ್ಕಿನಲ್ಲಿ ಸ್ನೇಹಿತ ಸುಖದೇವನ ಜೊತೆ ಭವಿಷ್ಯದ ಕ್ರಾಂತಿ ಸಂಘಟನೆಯ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಾ ಪತ್ರವಾಹಕನೊಬ್ಬನನ್ನು ನಿರೀಕ್ಷಿಸುತ್ತಾ ನೇರಳೆ ಮರದ ಕೆಳಗೆ ಕುಳಿತಿದ್ದ ಆಜಾದನನ್ನು ದ್ರೋಹಿ ವೀರಭದ್ರ ತಿವಾರಿಯ ಸೂಚನೆಯಂತೆ ಪೊಲೀಸ್ ಪಡೆ ಸುತ್ತುವರಿಯಿತು. ಗೆಳೆಯನನ್ನು ಸುರಕ್ಷಿತವಾಗಿ ರವಾನಿಸಿ ಬರೋಬ್ಬರಿ ಮೂವತ್ತೆರಡು ನಿಮಿಷಗಳ ಕಾಲ ಪ್ರಳಯರುದ್ರನಂತೆ, ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನಂತೆ ರಣ ಹೂಂಕಾರ ಮಾಡುತ್ತಾ ಹೋರಾಡಿತು ಆ ರಣಕೇಸರಿ! ಅವನ ರಣವಿಕ್ರಮ ಕಂಡು ಜಿಲ್ಲಾಧಿಕಾರಿ ಮಮ್ ಫೋರ್ಡ್ ಮೈಮರೆತು "ವ್ಹಾವ್ ವ್ಹಾಟ್ ಎ ವಂಡರ್ ಫುಲ್ ಷಾಟ್" ಎಂದು ಬೊಬ್ಬಿರಿಯುತ್ತಿದ್ದ. ಈ ಕಾಳಗವನ್ನು ವೀಕ್ಷಿಸಲು ಸುತ್ತಲೂ ಅಸಂಖ್ಯ ಜನ ಸೇರಿದ್ದರು. ಸಂಸ್ಥೆಯ ಹಣದ ಖರ್ಚಿನ ಲೆಖ್ಖದಂತೆ ಆಜಾದನಿಗೆ ಗುಂಡಿನ ಲೆಖ್ಖವೂ ಇತ್ತು. ಕಡೆಯ ಗುಂಡು...ಆಜಾದನ ಕಣ್ಣ ಮುಂದೆ ಅವನ ಪ್ರತಿಜ್ಞೆ ನಲಿಯತೊಡಗಿತು. ಪೊಲೀಸರತ್ತ ಗುರಿ ಮಾಡಿದ್ದ ಪಿಸ್ತೂಲು ತಲೆಯ ಕಡೆ ತಿರುಗಿತು. ಕ್ಷಣಾರ್ಧದಲ್ಲಿ ಅವನು ಅಜೇಯನಾಗಿಯೇ ವೀರಸ್ವರ್ಗ ಪಡೆದಿದ್ದ. ಅವನ ಸ್ವಾತಂತ್ರ್ಯದ ಪ್ರತಿಜ್ಞೆಯ ಘರ್ಜನೆಗೆ, ಸ್ವಾತಂತ್ರ್ಯ ಹೋರಾಟದ ದೀಕ್ಷೆಗೆ ಸಾಕ್ಷಿಯಾಗಿದ್ದ ಗಂಗೆ ಅವನ ಅಂತಿಮ ರಣಹೂಂಕಾರಕ್ಕೂ-ಪ್ರತಿಜ್ಞೆಯ ಸಾಕಾರಕ್ಕೂ ಸಾಕ್ಷಿಯಾಗಿ ಅವನನ್ನು ತನ್ನೊಡಲಲ್ಲಿ ಸೇರಿಸಿಕೊಂಡಳು.

    ತೇಜಸ್ವೀ ಕಂಗಳ ಹೊಳಪಿನ ಕೆಳಗೆ ಹುರಿಮೀಸೆ ಹೊಸೆಯುವ ಭೀಮಬಾಹುಗಳು; ಸದ್ಗುಣಗಳ ಗಣಿ, ಅಪ್ರತಿಮ ದೇಶಪ್ರೇಮ, ತೀಕ್ಷ್ಣ ಬುದ್ಧಿ, ಪ್ರಸಂಗಾವಧಾನ, ಲೋಕಸಂಗ್ರಹ, ಕಾರ್ಯ ಕೌಶಲ್ಯ, ಪ್ರಚಂಡ ಧೈರ್ಯ, ಭೀಮ ಪರಾಕ್ರಮ, ಅವಿರತ ಚಟುವಟಿಕೆ, ಅಮಿತ ಆಶಾವಾದದ ಮೇರು ಮೂರ್ತಿ; ಕ್ರಾಂತಿ ಸಂಘಟನೆಯ ಪ್ರಧಾನ ದಂಡನಾಯಕನಾಗಿ ಉತ್ತರ-ದಕ್ಷಿಣಾದ್ಯಂತ ಕ್ರಾಂತಿ ಸಂಘಟನೆ ಮಾಡಿ, ದೇಶವನ್ನೇ ತನ್ನ ಮನೆಯನ್ನಾಗಿ ಮಾಡಿಕೊಂಡು ಪರಿವ್ರಾಜಕ ಜೀವನ ನಡೆಸಿದ ಅಮಿತ ಸಾಹಸಿ. ಎಲ್ಲರಂತೆ ಹುಟ್ಟಿ ಬೆಳೆದ ಮಣ್ಣಿನ ಮಗನಾದರೂ ಅವನು ಶೀಲ ಕೆಡುವ ಸಮಯದಲ್ಲಿ ಜಾರಲಿಲ್ಲ. ಮೋಹಕ್ಕೆ ಬಲಿಯಾಗಲಿಲ್ಲ. ಹತಾಶೆಯಲ್ಲಿ ಮುಳುಗಲಿಲ್ಲ. ಪ್ರಳಯರುದ್ರನಂತೆ ಕಾದಿದ. ಕೇವಲ ಇಪ್ಪತ್ತೈದು ವರ್ಷಗಳ ಜೀವನಾವಧಿಯಲ್ಲಿ ಮಹಾದ್ಭುತವನ್ನು ಸಾಧಿಸಿದ. ಭಾರತ ಸರಕಾರ ಆಜಾದನ ಪಿಸ್ತೂಲನ್ನು ಕೇಳಿದಾಗ ನಾಟ್ ಬಾವರ್ "ಒಂದೇ ಒಂದು ಗುಂಡಿನಿಂದ ನನ್ನ ಇಡೀ ಕೈಯನ್ನು ಉಧ್ವಸ್ತಗೊಳಿಸಿದ ಆ ಮಹಾವೀರನ ಪಿಸ್ತೂಲನ್ನು ಹೇಗೆ ಕೊಡಲಿ?" ಎಂದಿದ್ದ. ಶತ್ರುವಿನ ಹೃದಯವನ್ನೂ ಗೆದ್ದ ಗಂಡುಗಲಿ ಅವನು. ಆಜಾದನದ್ದು ಒಂದು ಲೇಖನದಲ್ಲಿ ಹಿಡಿದಿಡಲು ಸಾಧ್ಯವಿಲ್ಲದ ವಿಕ್ರಮ!ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ