ಪುಟಗಳು

ಗುರುವಾರ, ಜೂನ್ 30, 2016

ಅಶೋಕನ ಅತಿರೇಕದ ಅಹಿಂಸೆಯಿಂದ ಕುಸಿದು ಬಿದ್ದ ಕ್ಷಾತ್ರ

ಅಶೋಕನ ಅತಿರೇಕದ ಅಹಿಂಸೆಯಿಂದ ಕುಸಿದು ಬಿದ್ದ ಕ್ಷಾತ್ರ 


ಜಗತ್ತಿನ ಎಲ್ಲಾ ಇತಿಹಾಸಜ್ಞರೂ ಅಶೋಕನನ್ನು ಆದರ್ಶ ರಾಜನೆಂದೇ ಹಾಡಿ ಹೊಗಳಿದ್ದಾರೆ. ಪ್ರಾಚೀನ ರಾಜರುಗಳಲ್ಲಿ ಯಾರೂ ಯಾವ ದೇಶದಲ್ಲಿಯೂ ಅಶೋಕನಂತೆ ಧರ್ಮಶಾಸನ ಮಾಡಿರಲಿಲ್ಲ. ಇಂದಿಗೆ ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಕೆಳಗೆ ಈ ಮಟ್ಟದಲ್ಲಿ, ಈ ವ್ಯಾಪ್ತಿಯಲ್ಲಿ, ಈ ತೆರನಾಗಿ ರಾಜ್ಯಭಾರ ಮಾಡಿರಲಿಲ್ಲ. ಇಷ್ಟು ತೀವ್ರವಾದ ಆತ್ಮವಿಮರ್ಶನೆ ಮತ್ತು ಆತ್ಮನಿವೇದನೆಯ ದಾಖಲೆಗಳನ್ನು ಯಾರೂ ಮಾಡಿರಲಿಲ್ಲ. ಆದರೆ ಇದೇ "ಅತಿ ಸರ್ವತ್ರವರ್ಜಯೇತ್" ಎನ್ನುವಂತಾದದ್ದೂ ಅಷ್ಟೇ ಸತ್ಯ! ಅತಿರಂಜಿತ ಬೌದ್ಧ ಗ್ರಂಥಗಳ ಪ್ರಕಾರ ತನ್ನ ನೂರು ಮಂದಿ ಸೋದರರನ್ನು ಮಂತ್ರಿ ರಾಧಾಗುಪ್ತನ(ಈತನನ್ನು ಚಾಣಕ್ಯನ ಮೊಮ್ಮಗ, ಮಹಾನೀಚ ಬ್ರಾಹ್ಮಣನೆನ್ನುತ್ತವೆ ಬೌದ್ಧಗ್ರಂಥಗಳು) ದುರಾಲೋಚನೆಯಂತೆ ಸ್ವಮತಾಗ್ರಹದಿಂದ ತರಿದು ಪಟ್ಟವೇರಿದ್ದ ಅಶೋಕ, ಆದರೆ ಇತ್ತೀಚಿನ ಸಂಶೋಧನೆಗಳು ಇವನ್ನೆಲ್ಲಾ ಕಟ್ಟುಕಥೆ ಎಂದಿವೆ. ವಿಶೇಷತಃ ನೆಹರೂ ಯುಗದ ರಾಜಕೀಯ ದುರುದ್ದೇಶಗಳಿಗಾಗಿ ಅಶೋಕನನ್ನು ಎತ್ತಿ ಹಿಡಿಯುವ ಪೃಥೆ ಮೊದಲಾಯಿತು.  ತನ್ನ ತಂದೆ-ತಾತಂದಿರು ಕೊಟ್ಟ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತಾರ ಮಾಡಿಕೊಂಡಿದ್ದ ಅಶೋಕನ ಕಣ್ಣು ಆಗ್ನೇಯದಲ್ಲಿದ್ದ ಕಳಿಂಗದ ಮೇಲೆ ಬಿತ್ತು. ಘನಘೋರ ಕದನ. ಆ ಯುದ್ಧದಲ್ಲಿ ಅಶೋಕ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೆರೆ ಹಿಡಿಯಬೇಕಾಯಿತು. ಒಂದು ಲಕ್ಷಕ್ಕೂ ಅಧಿಕ ಜನರನ್ನು ಕೊಲ್ಲಬೇಕಾಯಿತು.

ತಾನೆಸಗಿದ ಉಗ್ರ ಹಿಂಸೆಗೆ ಪಶ್ಚಾತ್ತಾಪಪಟ್ಟು ಅಶೋಕ ಬೌದ್ಧನಾದನೆನ್ನುತ್ತಾರೆ. ಆದರೆ ಈ ಸಂಗತಿ ಇತಿಹಾಸದಲ್ಲೆಲ್ಲೂ ಸ್ಪಷ್ಟವಾಗಿಲ್ಲ. ಏಕೆಂದರೆ ತಾನು ಬೌದ್ಧನಾದೆನೆಂದು ಸ್ವಯಂ ಎಲ್ಲೂ ಹೇಳಿಕೊಳ್ಳುವುದಿಲ್ಲ. ಅವನ ಅಸಂಖ್ಯ ಧರ್ಮಶಾಸನಗಳಲ್ಲೆಲ್ಲೂ ಇದು ಉಲ್ಲೇಖಗೊಂಡಿಲ್ಲ. ಅವನು ಶ್ರಮಣರನ್ನೂ, ಬ್ರಾಹ್ಮಣರನ್ನೂ ನಿರ್ವಿಶೇಷವಾಗಿ ಗೌರವಿಸಬೇಕೆನ್ನುತ್ತಾನೆ. ಶ್ರಮಣ, ತೀರ್ಥಕ, ತೀರ್ಥಂಕರ, ಅರ್ಹಂತ, ಉಪಾಸಕ ಮೊದಲಾದ ಮೇಲ್ನೋಟಕ್ಕೆ ಜೈನ-ಬೌದ್ಧಗಳೆಂಬಂತೆ ತೋರುವ ಪದಗಳು ವೇದಮೂಲೀಯವೇ; ಇವೆಲ್ಲಾ ಮೂಲತಃ ಸನಾತನ ಧರ್ಮದ್ದೇ ಎಂದು ಆನಂದ ಕುಮಾರ ಸ್ವಾಮಿ, ಬಲದೇವ ಉಪಾಧ್ಯಾಯ, ಗೋವಿಂದ ಚಂದ್ರ ಪಾಂಡೆಯಂತಹ ವಿದ್ವಾಂಸರು ನಿರೂಪಿಸಿದ್ದಾರೆ. ಹೀಗಾಗಿ ಅಶೋಕನು ಹೆಸರಿಸುವ ಶ್ರಮಣರು ವೈದಿಕ ಸನ್ಯಾಸಿಗಳೂ ಆಗಬಹುದಷ್ಟೇ!ಕೆಲವು ಕಡೆ ಶ್ರಮಣರೆಂದು ಹೆಸರಿಸುವಾಗ ಜೈನರನ್ನೂ ಗೌರವಿಸುವ ವಿಚಾರ ತಿಳಿಯುತ್ತದೆ. ಆತ ಆತ್ಮವಿಮರ್ಶನೆ ಮಾಡಿಕೊಂಡದ್ದು ನಿಜ. ಕಳಿಂಗ ಯುದ್ಧವಾದ ಬಳಿಕ ಅವನ್ಯಾವ ಯುದ್ಧವನ್ನೂ ಮಾಡಲಿಲ್ಲ. ಹಾಗೆಂದೂ ಕಳಿಂಗರಿಗೆ ಸ್ವಾತಂತ್ರ್ಯವನ್ನೂ ಕೊಡಲಿಲ್ಲ. ಅವರ ಕ್ಷಮೆಯನ್ನೂ ಬೇಡಲಿಲ್ಲ! ಹಾಗಾಗಿ ಅವನ ವೈರಾಗ್ಯವೆನ್ನುವುದು ಕ್ಷಾತ್ರವನ್ನು ಸರಿಯಾಗಿ ನಿರ್ವಹಿಸದ ಅತ್ತಿತ್ತ ಹೊಯ್ದಾಟದ ಸಂಧಿಗ್ಧ ಸ್ಥಿತಿ! ಅರ್ಜುನನಿಗಾದರೋ ಕೃಷ್ಣನಿದ್ದ. ಅಶೋಕನಿಗೆ ಕೃಷ್ಣನ ಬೆಳಕೂ ಸಿಕ್ಕಲಿಲ್ಲ. ಬುದ್ಧನ ದಿಟವಾದ ಬದುಕೂ ದಕ್ಕಲಿಲ್ಲ. ದೇಶದ ರಾಜನಾದವ ನಾನು ಇನ್ನು ಮುಂದೆ ಯುದ್ಧವನ್ನೇ ಮಾಡುವುದಿಲ್ಲ ಎಂದರೆ ದೇಶದ ಗತಿ ಏನು? ರಾಜಸೂಯಧ್ವರದ ಬಳಿಕ ಯಾರೇನು ಹೇಳಿದರೂ ವಿರೋಧಿಸುವುದಿಲ್ಲ. ಏನನ್ನೂ ನಿರಾಕರಿಸುವುದಿಲ್ಲ ಎಂದು ಯುದ್ಧಿಷ್ಟಿರ ಮಾಡಿದ ಪ್ರತಿಜ್ಞೆಯಿಂದ ಎಷ್ಟೆಲ್ಲಾ ಅನಾಹುತವಾಯಿತು. ಜೂಜಿಗೆ ಕರೆದಾಗಲೂ ಹೋಗಬೇಕಾಯಿತು. ಹೆಂಡತಿಯನ್ನು ಪಣಕ್ಕೊಡ್ಡು, ಅವಳನ್ನು ಸಭೆಗೆ ಎಳೆಸು ಅಂದದ್ದಕ್ಕೂ ಅಸ್ತು ಎನ್ನಬೇಕಾಯಿತು. ತಂತ್ರಕ್ಕೆ ಪ್ರತಿತಂತ್ರ ಹೂಡುವುದು, ಕಚ್ಚದಿದ್ದರೂ ಬುಸುಗುಡುತ್ತಾ ಇರುವುದು ಕ್ಷಾತ್ರ ನೀತಿ. ಆದರೆ ಬುದ್ಧನನ್ನು ಪೂಜಿಸಿದ ಅಶೋಕನಿಗೆ ಬುದ್ಧನ ತತ್ವಗಳೇ ಸರಿಯಾಗಿ ಅರ್ಥವಾಗಲಿಲ್ಲ.

ಬುದ್ಧ ಅಶೋಕನಿಗಿಂತಲೂ ಮುನ್ನೂರು ವರುಷ ಮೊದಲಿದ್ದವ. ಅವನಿಗೆ ಗಣತಂತ್ರವ್ಯವಸ್ಥೆಯ ಪರಿಚಯವಿತ್ತು. ಅವುಗಳ ಲೋಪದೋಶಗಳೂ ತಿಳಿದಿದ್ದವು. ಆದರೂ ಸ್ವಾತಂತ್ರ್ಯಪ್ರೀತಿಯಿಂದ ಹೋರಾಡುವುದನ್ನು ಬೆಂಬಲಿಸಿದ್ದ. ಬುದ್ಧನನ್ನು ಹೇಡಿತನದ-ಹುಸಿ ಸೆಕ್ಯುಲರಿಸಮ್ಮಿನ ಲಾಂಛನವನ್ನಾಗಿಸಿದ್ದಾರೆ. ಆದರೆ ಅವನಿಗೆ ಕ್ಷಾತ್ರ ತೇಜದ ಬಗ್ಗೆ ತಿಳಿದಿತ್ತು. ಆತ ಅತ್ಯಂತ ಪ್ರಾಮಾಣಿಕವಾಘಿ ವೈದಿಕ ಮೌಲ್ಯವನ್ನು ಎತ್ತಿ ಹಿಡಿದಿದ್ದ. ಕಮ್ಯೂನಿಷ್ಟರಿಂದ ರಾಜವಿರೋಧಿ ಎಂದು ಚಿತ್ರಿತನಾದ ಬುದ್ಧ ಉಳಿಯುತ್ತಿದ್ದುದು ರಾಜರ ಅರಮನೆಯ ಆಸುಪಾಸಿನಲ್ಲಿಯೇ. ಅನೇಕ ಅರಸರು ಅವನ ಭಕ್ತರಾಗಿದ್ದರು. ಅವನಿಗೆ ಜ್ಞಾನೋದಯವಾಗುವುದಕ್ಕಿಂತ ಮುಂಚೆಯೇ ಬೇರೆ ಬೇರೆ ರಾಜರ ಪರಿಚಯವಿದ್ದಿತು. ಜ್ಞಾನೋದಯವಾದ ಬಳಿಕವೂ ಬಿಂಬಸಾರ ತನ್ನ ಮಗ ಅಜಾತಶತ್ರು ಪ್ರಸೇನಜಿತ್ ಮೊದಲಾದ ಅರಸರೊಡನೆ ಆತ್ಮೀಯನಾಗಿದ್ದ. ಉದಯನ ವತ್ಸರಾಜನ ರಾಜಧಾನಿ ಕೌಶಾಂಬಿಯಲ್ಲಿ ಚಾತುರ್ಮಾಸ್ಯವನ್ನೂ ಕಳೆದಿದ್ದ. ಕಾಶಿಯ ಬ್ರಹ್ಮದತ್ತ, ಕ್ಷಾತ್ರಗಣಗಳಾದ ಮಲ್ಲ, ಮದ್ರ, ಶಾಕ್ಯ, ಕೋಲೀಯ, ವಜ್ಜಿಗಳ ಜೊತೆ ಅವನ ಒಡನಾಟವಿತ್ತು. ಸುದತ್ತ, ಅನಾಥಪಿಂಡದ ಮೊದಲಾದ ದ್ವೀಪಾಂತರ ವ್ಯಾಪಾರವಿದ್ದ ಶ್ರೀಮಂತ ವೈಣಿಕರೊಡನೆಯೂ ಚೆನ್ನಾಗಿ ವ್ಯವಹರಿಸುತ್ತಿದ್ದ. ರಾಜರು, ಆಢ್ಯರು ತನಗಾಗಿ ಸ್ಥಾಪಿಸಿದ ವಿಹಾರಗಳಲ್ಲಿ ತಂಗುತ್ತಿದ್ದ. ಅವರಲ್ಲಿ ಭಿಕ್ಷಾ ಸ್ವೀಕಾರಕ್ಕೂ ಹೋಗುತ್ತಿದ್ದ. ಇವಿಷ್ಟೂ ಬುದ್ಧನ ಸಮದರ್ಶಿತೆಯ ಸಂಕೇತ. ಲಿಚ್ಛವಿ ಗಣ ಸಂಜಾತ, "ಜ್ಞಾತೃಪುತ್ರ" ವರ್ಧಮಾನ ಮಹಾವೀರ ಬುದ್ಧನನ್ನು ಅಕ್ರಿಯಾವಾದಿ(ಕ್ರಿಯೆ-ಕ್ಷಾತ್ರವನ್ನು ಉಜ್ಜೀವಿಸದೇ ಇರುವವನು) ಎಂದು ಕರೆದಾಗ ಲಿಚ್ಛವಿಗಳ ನಾಯಕ ಸಿಂಹ ಸೇನಾಪತಿ ಬುದ್ಧನನ್ನು "ಮಹಾವೀರರು ಹೇಳುವಂತೆ ನೀವು ಅಕ್ರಿಯಾವಾದಿಗಳು ಹೌದೇ" ಎಂದು ಪ್ರಶ್ನಿಸಿದಾಗ ಬುದ್ಧ  "ನಾನು ಕರ್ಮಯೋಗವನ್ನಾಗಲಿ ದಂಡವನ್ನಾಗಲಿ ವ್ಯಕ್ತಿಯ ಇಚ್ಛಾಸ್ವಾತಂತ್ರ್ಯವನ್ನಾಗಲಿ ಕರ್ತವ್ಯವನ್ನಾಗಲಿ ಎಂದಿಗೂ ವಿಸ್ಮರಣೆ ಮಾಡುತ್ತಿಲ್ಲ. ಯಾವುದು ಅತಿರೇಕಕ್ಕೆ ಹೋಗಬಾರದು ಎಂದಷ್ಟೇ ಹೇಳುತ್ತೇನೆ. ನಾನು ಕ್ರಿಯಾವಾದಿಯೇ" ಎನ್ನುತ್ತಾನೆ. ಇದು ಮಧ್ಯಮಮಾರ್ಗ. ಇದು ಸನಾತನ ಧರ್ಮದ ಮುಖ್ಯಲಕ್ಷಣವೂ ಹೌದು.

ಲಿಚ್ಛವಿಗಳು "ಮಾಗಧರು ನಮ್ಮ ಮೇಲೆ ನಿರಂತರ ಯುದ್ಧ ಮಾಡುತ್ತಾರೆ. ನಮ್ಮ ಸ್ವಾತಂತ್ರ್ಯ-ಸಾರ್ವಭೌಮತ್ವದ ಉತ್ಕರ್ಷವನ್ನು ಕಾಪಾಡಿಕೊಳ್ಳುವುದು ಹೇಗೆ" ಎಂದು ಪ್ರಶ್ನಿಸಿದಾಗ ಬುದ್ಧನು ಸಪ್ತಶೀಲ(ಏಳು ಅಂಶ)ಗಳನ್ನು ಕೊಡುತ್ತಾನೆ. ಇದರ ಬಗ್ಗೆ ಸೀತಾರಾಮ್ ಗೋಯಲರು "ಸಪ್ತಶೀಲ್" ಕಾದಂಬರಿ(ಮೀಠೀ ಬೋಲೀ ಹಿಂದಿಯಲ್ಲಿದೆ)ಯನ್ನೇ ಬರೆದರು. ಬುದ್ಧ ಹೇಳುತ್ತಾನೆ..." ಎಲ್ಲಿಯವರೆಗೂ ನೀವೆಲ್ಲರೂ ಐಕ್ಯಮತ್ಯದಿಂದ ಇರುತ್ತೀರೋ ಅಲ್ಲಿಯವರೆಗೆ ನಿಮಗೆ ಸ್ವಾತಂತ್ರ್ಯವಿರುತ್ತದೆ. ಒಳಜಗಳಗಳನ್ನು ಬಿಟ್ಟು ಗಣತಂತ್ರದ ಕೇಂದ್ರಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವವರೆಗೆ ಹಾಗೂ ರಣದುಂಧುಬಿ ಮೊಳಗಿದಾಕ್ಷಣ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ರಣರಂಗಕ್ಕೆ ಧುಮುಕುವವರೆಗೆ ನಿಮ್ಮ ಸ್ವಾತಂತ್ರ್ಯ ಉಳಿಯುತ್ತದೆ." ಅಹಿಂಸೆಯ ಮೂರ್ತಿ ಎಂದು ಖ್ಯಾತಿವೆತ್ತಾತನೂ ಹೇಳಿದ್ದು ಸನಾತನ ಧರ್ಮದ ವ್ಯಾಖ್ಯೆಯನ್ನೇ! ರಾಷ್ಟ್ರರಕ್ಷಕರು ಸದಾ ಆಯುಧಪಾಣಿಗಳಾಗಿ ಮೌಲ್ಯಯುತ ಜೀವನ ನಡೆಸಬೇಕೆಂದು ಹೇಳಿದ ಬುದ್ಧ ವಿನಯಪಿಟಿಕದಲ್ಲಿ ಭಿಕ್ಷುಗಳಿಗೂ ಯುದ್ಧತಂತ್ರ ಮತ್ತು ಆತ್ಮರಕ್ಷಣೆಯ ಮಾರ್ಗಗಳು ಗೊತ್ತಿರಬೇಕೆಂದು ಹೇಳಿದ್ದಾನೆ. ಬೌದ್ಧ ಮತ ನಮ್ಮ ದೇಶದಿಂದ ಹೊರಹೋದಾಗ ಅಲ್ಲಿನವರು ಭಿಕ್ಷುಗಳ ಯುದ್ಧಕೌಶಲಗಳನ್ನು ಸಮರ್ಥವಾಗಿ ಬಳಸಿಕಂಡರು. ನಮ್ಮಲ್ಲಿ ಮರೆತೇ ಬಿಟ್ಟರು. ನಾಲಂದಾ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಹಾಗೂ ಸಮರಕಲೆ(ಮಾರ್ಷಲ್ ಆರ್ಟ್ಸ್) ಪ್ರತಿಯೊಬ್ಬ ವಿದ್ಯಾರ್ಥಿಯೂ ಸನ್ಯಾಸಿಯೂ ಕಲಿಯಲೇಬೇಕಾದ ವಿಷಯಗಳಾಗಿದ್ದವು. ಅಶೋಕನಿಗೇಕೆ ಇದು ತಿಳಿಯಲಿಲ್ಲ? ಅಶೋಕನ ಹೊತ್ತಿಗೆ ಬೌದ್ಧ ಮತದ ಅವನತಿ ಆರಂಭವಾಗಿತ್ತು. ಅಶೋಕ ತನ್ನ ಮಟ್ಟಿಗೆ ತಾನು ಹಿಂಸೆಗೆ ಪಶ್ಚಾತ್ತಾಪ ಪಟ್ಟುದೇನೋ ಸರಿ. ಅನ್ಯಾಯವಾಗಿ ಅದನ್ನು ದೇಶದ ಕ್ಷಾತ್ರ ನೀತಿಯ ಮೇಲೇಕೇ ಹೇರಬೇಕಿತ್ತು? ವ್ಯಕ್ತಿಯಾಗಿ ಅಶೋಕ ದೊಡ್ಡವನಿರಬಹುದು. ಆದರೆ ಸಮಷ್ಟಿ ಹಿತದಲ್ಲಿ ಆತನದ್ದು ದೌರ್ಬಲ್ಯವೇ ಸರಿ. ಆತನ ಈ ನೀತಿಯಿಂದಾಗಿಯೇ ಮತ್ತೆ ಗ್ರೀಕರು ಪ್ರಬಲರಾದರು. ಸತ್ರಪರ ಆಳ್ವಿಕೆ ಪ್ರಾರಂಭವಾಯಿತು. ಮಧ್ಯಭಾರತದ ಉಜ್ಜಯಿನಿಯವರೆಗೆ ಅವರು ಬರುವಂತಾಯಿತು. ಆದರೆ ಬಲಿಷ್ಟವಾದ ಸನಾತನ ಧರ್ಮದ ಸಾಮಾಜಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ರಚನೆಯ ಕಾರಣ ಅದು ಗ್ರೀಕರನ್ನೂ ತನ್ನಲ್ಲಿ ಜೀರ್ಣಿಸಿಕೊಂಡಿತು. ಸನಾತನ ಧರ್ಮೀಯರಿಗಿಂತ ಹೆಚ್ಚಿನ ಸನಾತನ ಧರ್ಮೀಯರಂತೆ ಸಂಸ್ಕೃತವನ್ನು ಕಲಿತರು. ವೇದೇತಿಹಾಸಗಳನ್ನು ಅಭ್ಯಾಸ ಮಾಡಿದರು. ಇಲ್ಲಿನ ಸಾಂಸ್ಕೃತಿಕ ಜಗತ್ತಿನೊಂದಿಗೆ ಒಂದಾಗುವುದಕ್ಕೆ ಹಾರ್ದಿಕವಾಗಿ ತೊಡಗಿದರು. ಗ್ರೀಕರು, ಶಕರು, ಹೂಣರ ಮತಗಳು ಮತಾಂಧ ಇಸ್ಲಾಂ-ಕ್ರೈಸ್ತಗಳಂತಲ್ಲದ ಕಾರಣ ಈ ಸಮನ್ವಯವು ಸಾಧ್ಯವಾಯಿತು.

ಅಶೋಕನು ಸಂನ್ಯಾಸಿಯಾಗಿದ್ದ, ಬೌದ್ಧ ಭಿಕ್ಷುವಾಗಿದ್ದ ಎಂದು ಇತ್ಸಿಂಗನೇ ಮೊದಲಾದ ಒಬ್ಬಿಬ್ಬರು ಚೈನೀಯಾತ್ರಿಕರು ಉಲ್ಲೇಖಿಸಿದ್ಡಾರೆ. ಆ ರೀತಿಯಾದ ಒಂದು ವಿಗ್ರಹವನ್ನೂ ನೋಡಿದ್ದೇವೆ ಎನ್ನುತ್ತಾರೆ. ಬೌದ್ಧರಲ್ಲಿ ಒಂದು ವ್ಯವಸ್ಥೆಯಿದೆ. ಯಾರು ಬೇಕಾದರೂ ಸಂನ್ಯಾಸಿಯಾಗಬಹುದು, ಅಲ್ಲಿಂದ ಹಿಂದಕ್ಕೆ ಬಂದು ಗೃಹಸ್ಥನಾಗಬಹುದು, ಬೇರೊಂದು ಆಶ್ರಮಕ್ಕೆ ಹೋಗಬಹುದು. ಮೊದಲಾಗಿ ಇವರೆಲ್ಲಾ ಚೀನಾದಿಂದ ಭಾರತಕ್ಕೆ ಬಂದ ಬೌದ್ಧ ಯಾತ್ರಿಕರು. ಅಲ್ಲದೆ ಇವರೆಲ್ಲಾ ಸ್ವಮತಾಭಿಮಾನದಿಂದ ಸ್ತ್ಯದೂರವಾದ ಮಾತುಗಳನ್ನಾಡಿದ್ದೂ ಇದೆ. ಅಶೋಕನು ಭಿಕ್ಷುವೇಶದಲ್ಲಿರುವ ವಿಗ್ರಹವನ್ನು ತಾನು ನೋಡಿದ್ದೇನೆನ್ನುವ ಅವನ ಮಾತನ್ನು ನೆಚ್ಚಿದರೆ ಅಶೋಕನು ತನ್ನಧಿಕಾರವನ್ನು ಪಕ್ಕಕ್ಕಿಟ್ಟೇ ಧರ್ಮಶಾಸನಗಳನ್ನು ಮಾಡಿದ್ದಿರಬೇಕೆನಿಸುತ್ತದೆ. ಹೀಗಾಗಿಯೇ ಅಷ್ಟು ವಿರಕ್ತಿಯ, ಶಾಂತಿ-ಅಹಿಂಸೆಯ ಮಾತುಗಳನ್ನಾಡಿರಬೇಕು. ಅಹಿಂಸಾ ಪರಮೋ ಧರ್ಮ ಎನ್ನುವಂತೆ ಅದರ ಉತ್ತರಾರ್ಧ ಧರ್ಮ ಹಿಂಸಾ ತಥೈವಚ ಎನ್ನುವುದು ಮಹಾಭಾರತದ ನೀತಿ. ಧರ್ಮಬದ್ಧವಾದ ಹಿಂಸೆಗೆ ಅಹಿಂಸೆಯಷ್ಟೇ ಬೆಲೆಯಿದೆ. ಅಲ್ಲದೆ ಅಹಿಂಸೆ, ಅದ್ವೇಷ, ವಿಶ್ವಮೈತ್ರಿಗಳನ್ನೂ ಕ್ಷಮೆ, ಔದಾರ್ಯ, ಕಾರುಣ್ಯಗಳನ್ನು ಇವುಗಳ ಪರಿಪೂರ್ಣಸ್ತರದಲ್ಲಿ ಕೇವಲ ಕೆಲವೇ ಮಂದಿ ತ್ರಿಕರಣಶುದ್ಧರಾದ ಯತಿಗಳು ಆಚರಿಸಬಹುದಲ್ಲದೆ ಬಹುಜನಸಾಮಾನ್ಯರಲ್ಲ. ಕ್ಷತ್ರಿಯರಿಗಂತೂ ಇದು ಅಸಾಧ್ಯ. ಅಸಾಧು ಕೂಡಾ!

            ನಿರಂತರ ಜಾಗರೂಕವಾದ ಸೈನ್ಯವಿಲ್ಲದಿದ್ದರೆ, ಸರ್ವನಿರ್ಣಯಸಮರ್ಥನಾದ ಒಡೆಯನಿಲ್ಲದಿದ್ದರೆ ಸುಸಂಸ್ಕೃತವೂ ಸಮೃದ್ಧವೂ ಆದ ರಾಷ್ಟ್ರ ಉಳಿಯಲಾರದು. ಅಹಿಂಸೆ ಅಹಿಂಸೆ ಎಂದು ಹೇಳುತ್ತಾ ಬೌದ್ಧ ಮತ ಪ್ರಸಾರಕ್ಕೆ ರಾಜ್ಯಾಂಗದಲ್ಲಿ ಪ್ರತ್ಯೇಕ ವಿಭಾಗವನ್ನೇ  ಮಾಡಿ ಅದಕ್ಕಾಗಿಯೇ ಅಧಿಕಾರಿಗಳನ್ನು ನಿಯೋಜಿಸಿದ್ದರೂ ಈ ವ್ಯವಸ್ಥೆಯೂ ಕುಸಿದು ಬಿತ್ತಲ್ಲವೇ? ಇದು ಕ್ಷಾತ್ರ ಕಡಿಮೆಯಾದುದರಿಂದಲೇ ಅಲ್ಲವೆ? ಅಲ್ಲದೆ ಇಂತಹ ಹುರುಡುಗಟ್ಟಿದ ಮತಪ್ರಚಾರದ ಆವೇಶವು ಯಾವುದೇ ಸಹಜವೂ ಜನಮಾನಸನಿಷ್ಟವೂ ಆದ ಸಾಂಸ್ಕೃತಿಕ ಸಂವೇದನೆಗಳ ಆಳ ಸೂಕ್ಷ್ಮತೆಯಿಲ್ಲದ ಕಾರಣ ಹಲವು ಬಗೆಯಲ್ಲಿ ಅನರ್ಥವಾಯಿತು. ಇಂಥ ಪ್ರಕಲ್ಪಗಳು ಎಂದೂ ಅಯುಕ್ತವೆಂಬ ಅಂಶವೂ ಸಾಬೀತಾಯಿತು. ಅಶೋಕನ ಬುಡದಲ್ಲೇ ದೊಡ್ಡ ಕ್ರಾಂತಿ ಉಂಟಾಯಿತೆಂದರೆ ಅಶೋಕ ಎಡವಿದ್ದೆಲ್ಲಿ ಎಂದು ತಿಳಿಯುತ್ತದೆ. ಅಶೋಕ ಸಾಧನೆ ಬಹುಮುಖಿಯಾದದ್ದು, ಕೌಶಲ ಬಗೆಬಗೆಯದ್ದು. ಆದರೆ ತಾನು ಸಮರ್ಥನಿದ್ದೂ, ದಕ್ಷ ಆಡಳಿತ ನೀಡಿಯೂ ಆತ ಯೋಗ್ಯರಾದ ಉತ್ತರಾಧಿಕಾರಿಗಳನ್ನು ತಯಾರು ಮಾಡಲಿಲ್ಲ.

          ಅಶೋಕನ ಕಾಲದಿಂದ ಈಚೆಗೆ ಬಂದ ಅಹಿಂಸೆಯ ಅತಿರೇಕವು ಅನೇಕ ರೀತಿಯ ದೌರ್ಬಲ್ಯಗಳಿಗೂ ತನ್ಮೂಲಕ ಅವಸಾನಕ್ಕೂ ಕಾರಣವಾಯಿತು. ಆದರೆ ಭಗವಾನ್ ಬುದ್ಧ ಎಂದೂ ಈ ರೀತಿಯ ನಿಷ್ಕ್ರಿಯತೆಯನ್ನು ಪ್ರತಿಪಾದಿಸಿರಲಿಲ್ಲ. ವರ್ಧಮಾನ ತೀರ್ಥಂಕರಾದಿಯಾಗಿ ಯಾರೂ ಇಂತಹ ಅತಿರೇಕಕ್ಕೆ ಹೋಗಿರಲಿಲ್ಲ. ಭಾರತವನ್ನಾಳಿದ ಯಾವ ಜೈನ ರಾಜನೂ ಅಹಿಂಸೆ ಎಂದು ಕೈಕಟ್ಟಿ ಕೂತು ಯುದ್ಧದಿಂದ ವಿಮುಖನಾಗಲಿಲ್ಲ. ಹಾಗೆ ನೋಡಿದರೆ ಜೈನ ಮತದಲ್ಲಿ ತೀವ್ರವಾಗಿರುವಷ್ಟು ಅಹಿಂಸಾತೀವ್ರತೆ ಬೌದ್ಧದಲ್ಲಿ ಇಲ್ಲ. ಬೌದ್ಧರಿಗೆ ಪಿಂಡಪಾತದ ವೇಳೆಯಲ್ಲಿ ತಾನಾಗಿ ಬಂದ ಮಾಂಸಾಹಾರ ಭಕ್ಷಣಕ್ಕೆ ನಿಷೇಧವೇನೂ ಇರಲಿಲ್ಲ. ಕೇವಲ ಬೌದ್ಧ, ಜೈನರಲ್ಲಿ ಅಹಿಂಸೆಯ ಬಗ್ಗೆ ಹೇಳಿಲ್ಲ. ಸನಾತನ ಧರ್ಮದಲ್ಲಿಯೂ ಅಹಿಂಸೆಗೆ ಮಹತ್ವವಿದೆ. ಸಂನ್ಯಾಸ ಧರ್ಮದಲ್ಲಿ ಸರ್ವರಿಗೂ ಅಭಯವನ್ನು ಕೊಡಬೇಕು, ಸಂನ್ಯಾಸಿ ಅಗ್ನಿಯನ್ನು ಇಟ್ಟುಕೊಂಡಿರಬಾರದು, ಅಗ್ನಿಯಿಂದ ಲೋಕ ಹಿಂಸೆಯಾಗುತ್ತದೆ, ಮರ ಕಡಿಯಬೇಕಾಗುತ್ತದೆ, ಅಗ್ನಿಗೆ ಆಹುತಿ ನೀಡಬೇಕಾಗುತ್ತದೆ, ಸಂಸಾರವನ್ನು ಆಶ್ರಯಿಸಬೇಕಾಗುತ್ತದೆ. ಹೇಚ್ಚೇನು ಸಂನ್ಯಾಸಿಯ ಅಂತ್ಯಕ್ರಿಯೆಯನ್ನು ಅಗ್ನಿಸಂಸ್ಕಾರದಿಂದ ಮಾಡುವುದಿಲ್ಲ. ಭೂಮಿಯಲ್ಲಿ ಹೂಳುವುದು, ನೀರಿನಲ್ಲಿ ಎಸೆಯುವುದು ಅಥವಾ ಗಾಳಿಯಲ್ಲಿ ಬಿಸುಡುವುದು-ಹೀಗೆ ಅಹಿಂಸಾತ್ಮಕವಾದ ಅಂತ್ಯ ಕ್ರಿಯೆ. ನಮ್ಮಲ್ಲಿ ಪ್ರತಿಯೊಂದು ಆಶ್ರಮಕ್ಕೂ ಅಹಿಂಸೆಯ ತೀವ್ರತೆಯನ್ನು ಪ್ರತ್ಯೇಕವಾಗಿ ಹೇಳಿದ್ದಾರೆ. ಆದರೆ ಅಶೋಕನು ವಿವೇಕದಿಂದ ಅರ್ಥೈಸಿಕೊಳ್ಳಲಿಲ್ಲ. ಕೆಲವು ಇತಿಹಾಸಕಾರರು ಚಂದ್ರಗುಪ್ತ ಮೌರ್ಯನೇ ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಕೈಗೊಂಡ ಎಂದು ಬರೆದಿದ್ದಾರೆ. ಆದರೆ ಆತ ಚಂದ್ರಗುಪ್ತ ಮೌರ್ಯನಲ್ಲ. ಆತ ಸಂಪ್ರತಿ ಚಂದ್ರಗುಪ್ತ. ಅಶೋಕನ ಮೊಮ್ಮಗ. ಕ್ಷಾತ್ರಧರ್ಮ ಚ್ಯುತನಾಗಿದ್ದ ಆತ ಜೈನದೀಕ್ಷೆ ಸ್ವೀಕರಿಸಿ ಶ್ರವಣಬೆಳಗೊಳದ ಚಂದ್ರಗಿರಿ ಎಂದು ಹೆಸರಾದ ಬೆಟ್ಟದಲ್ಲಿ ಭದ್ರಬಾಹುಮುನಿಗಳ ಜೊತೆ ಬಂದು ಸಲ್ಲೇಖನವನ್ನು ಮಾಡಿದ. ಈತನ ಮಗನೇ ಬೃಹದ್ರಥ. ಇವನ ಕಾಲಕ್ಕೆ ಯವನರು ಮಗಧಕ್ಕೆ ನುಗ್ಗಿದರು. ವಿದಿಶಾ-ವಿದರ್ಭಗಳವರೆಗೆ ಆಕ್ರಮಿಸಿಕೊಳ್ಳುತ್ತಾರೆ. ಹೀಗೆ ಅಶೋಕನ ಸಾಮ್ರಾಜ್ಯ ತರಗೆಲೆಗಳು ಉದುರುವಂತೆ ಕುಸಿದು ಬಿತ್ತು.

ಆಧಾರ: ಶತಾವಧಾನಿ ಡಾ|| ಆರ್. ಗಣೇಶರ "ಭಾರತೀಯ ಕ್ಷಾತ್ರ ಪರಂಪರೆ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ