ಪುಟಗಳು

ಸೋಮವಾರ, ಜೂನ್ 27, 2016

ವಂದೇ ಮಾತರಂ ದರ್ಶನ! ರಾಷ್ಟ್ರಪ್ರೇಮದ ಭಾವ ಮೀಟಿದ ಬಂಕಿಮ!

ವಂದೇ ಮಾತರಂ ದರ್ಶನ! ರಾಷ್ಟ್ರಪ್ರೇಮದ ಭಾವ ಮೀಟಿದ ಬಂಕಿಮ!


            ಬಿರಿದ ಮಲ್ಲಿಗೆಯಂತೆ ಸುರಿದಿತ್ತು ಶಶಿಯ ಶುಭ್ರ ರಶ್ಮಿ. ಬಿರಬಿರನೆ ಹೆಜ್ಜೆಹಾಕುತ್ತಿದ್ದ ಬ್ರಹ್ಮಚಾರಿ ಭವಾನಂದನ ಹೆಜ್ಜೆ ಸದ್ದಿಗೆ ತರುಲತೆಗಳ ಪಿಸುಮಾತು ಮೌನವಾಗಿತ್ತು. ವ್ಯಾಕುಲಚಿತ್ತನಾಗಿ ಅವನೊಡನೆ ಸಾಗುತ್ತಿದ್ದ ಮಹೇಂದ್ರನಿಗೆ ಕಾವಿ ಧರಿಸಿದ ಆ ಮೊಗದ ರವಿತೇಜ, ಶಶಾಂಕನನ್ನೂ ಮೀರಿಸಿದ ಪ್ರಶಾಂತತೆ, ರುದ್ರ ರಣೋತ್ಸಾಹ ಚಕಿತಗೊಳಿಸಿತ್ತು. ಗಿರಿಯ ಮೇಲೆ ಬೆಳಗುವ ತುಷಾರದಂತಿರುವ ಹಿಮಕರನ ಕಿರಣ, ಲಲನೆಯ ನಾಚಿಸುವ ಸರಸಿರೆಯ ಲಾಸ್ಯ, ಜಲದ ನಾದಕ್ಕೆ ಮೈದೂಗುತ್ತಿದ್ದ ವೃಕ್ಷರಾಜಿ ಭವಾನಂದನ ಮೊಗದಿಂದ ಮಾತ ಸ್ಪುರಿಸಿತ್ತು. ಗಾಂಢೀವದ ಠೇಂಕಾರಕೆ ಬೆದರಿ ಹೊರ ಬಿದ್ದ ಶರಗಳಂತೆ ಬರುತ್ತಿರುವ ನಿರರ್ಗಳ ಮಾತುಗಳು ಮಹೇಂದ್ರನ ಬಿಗುಮಾನವನ್ನು ಸಡಿಲಿಸಿರಲಿಲ್ಲ. ಸ್ಪುರಣೆಗೆ ದೈವ ಪ್ರೇರಣೆಯಲ್ಲದೆ ಇನ್ನೇನು? ಭವಾನಂದನ ಮೊಗದಿಂದ ದೈವಲಿಖಿತ ಗೀತವೊಂದು ಸುಶ್ರಾವ್ಯವಾಗಿ ಜಲಧಿಯ ಜುಳು ಜುಳು ನಾದಕೆ ಜೊತೆಯಾಯಿತು.
"ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ...
...ಸುಖದಾಂ ವರದಾಂ ಮಾತರಂ"
ವಿಸ್ಮಿತನಾದ ಮಹೇಂದ್ರನ ಬಾಯಿಯಿಂದ "ನೀವು ವರ್ಣಿಸುತ್ತಿರುವುದು ದೇಶವನ್ನು. ಆದರೆ ದೇಶ ತಾಯಿಯಾಗಲು ಹೇಗೆ ಸಾಧ್ಯ?" ಎನ್ನುವ ಉದ್ಗಾರವೊಂದು ಹೊರಬಿತ್ತು. ಒಡನೆಯೇ ಕೇಳಿತು ಸಿಂಹಘರ್ಜನೆ - ನಮಗ್ಯಾವ ಮಾತಾಪಿತ, ಬಂಧುಬಳಗಗಳಿಲ್ಲ. ನಮಗಿರುವುದೀ ಸಸ್ಯಶ್ಯಾಮಲೆ ಮಾತ್ರ. ಅವಳೇ ನಮ್ಮ ತಾಯಿ...ಹಾಡು ಭೋರ್ಗರೆಯಿತು!

"ತ್ವಂ ಹೀ ದುರ್ಗಾ ದಶಪ್ರಹರಣಧಾರಿಣೀ... ಎನ್ನುತ್ತಿದ್ದಂತೆ ಸಂಗಮರವರಿ ಕಲ್ಲುಗಳಿಂದ ನಿರ್ಮಿಸಿದ ಮಂದಿರದೊಳಗೆ ಹೊರಗಡೆ ಹಕ್ಕಿಗಳ ಚಿಲಿಪಿಲಿ ನಾದ ಒಳಗಡೆ ನಂದಾದೀಪದ ಬೆಳಕಿನ ಸ್ವಾದದ ನಡುವೆ ಕನಕಲಂಕೃತೆಯಾಗಿ ದಶಭುಜೆಯಾಗಿ ಶೋಬಿಸುತ್ತಿದ್ದ ದುರ್ಗೆಯ ಅಡಿದಾವರೆಗಳಲ್ಲಿ ನತಮಸ್ತಕರಾಗಿದ್ದರು ಸತ್ಯಾನಂದ ಹಾಗೂ ಮಹೇಂದ್ರ...
ವಂದೇ ಮಾತರಂ ಮಂತ್ರ ಸ್ಪುರಿಸಲು ಇದಕ್ಕಿಂತ ಇನ್ನಾವ ಪರಿಸರ ಚೆನ್ನಾಗಿದ್ದೀತು?

                1760-70ರ ದಶಕಗಳಲ್ಲಿ ವಂಗ ಭೀಕರ ಕ್ಷಾಮದಿಂದ ತತ್ತರಿಸಿತ್ತು. ಜನರಲ್ಲಿದ್ದ ದವಸ-ಧಾನ್ಯಗಳನ್ನೆಲ್ಲಾ ಬಿತ್ತನೆಯ ಬೀಜವನ್ನೂ ಬಿಡದೆ ದೋಚಿತ್ತು ಮ್ಲೇಚ್ಛ ಸರಕಾರ. ಎಲ್ಲೆಲ್ಲೂ ಹನಿ ನೀರಿಗೂ ಹಾಹಾಕಾರ. ಅರಾಜಕತೆ ತಾಂಡವವಾಡಿತ್ತು. ಬ್ರಿಟಿಷರ ಹಾಗೂ ಮುಸ್ಲಿಂ ಅರಸರ ಕಚ್ಚಾಟಕ್ಕೆ ಜನತೆ ನಲುಗಿತ್ತು. ಮ್ಲೇಚ್ಛರ ಶೋಷಣೆಯ ವಿರುದ್ಧ ಸಿಡಿದೆದ್ದರು ಸಂತಾನ ಸನ್ಯಾಸಿಗಳು. ಢಾಕಾ, ರಾಂಪುರ್ ಬಲಿಯಾ ಕಾರ್ಖಾನೆಗಳನ್ನು ವಶಪಡಿಸಿಕೊಂಡು 1972ರ ಹೊತ್ತಿಗೆ ರಾಜಶಾಹಿ, ಪೂರ್ಣೀ, ರಂಗಪುರ, ದೀನಜ್ ಪುರ, ಢಾಕಾಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು ಸನ್ಯಾಸಿಗಳ ಪಡೆ. ಈ ಪ್ರದೇಶಗಳನ್ನು ಹತೋಟಿಗೆ ಪಡೆಯಲು ವಾರನ್ ಹೇಸ್ಟಿಂಗ್ಸ್ ಎರಡು ವರ್ಷ ಪರದಾಡಬೇಕಾಯಿತು. ಅದರ ಬಳಿಕವೂ ಹದಿನೈದು ವರ್ಷಗಳ ಕಾಲ ಈ ಕ್ರಾಂತಿ ಸಂಘರ್ಷ ಮುಂದರಿಯಿತು. ಈ ಘಟನಾವಳಿಗೆ "ಆನಂದ ಮಠ"ದ ರೂಪ ಕೊಟ್ಟರು ಬಂಕಿಮರು. ಅಲ್ಲಿ ಸೇರಿದ್ದೇ "ವಂದೇ ಮಾತರಂ" ಎಂಬ ದಿವ್ಯ ಮಂತ್ರ.

              ಈಶ್ವರಚಂದ್ರ ಗುಪ್ತಾ 1866ರಲ್ಲಿ ರಚಿಸಿದ "ಜನನೀ ಭಾರತ ಭೂಮಿ, ಆರ ಕೇನ ಥಾಕ ತುಮಿ..." ಎನ್ನುವ ಕವನ ಬಂಕಿಮರನ್ನು ಆವರಿಸಿತ್ತು. 1875ರ ನವೆಂಬರ್ 7ರಂದು ಇದ್ದಕ್ಕಿದ್ದಂತೆ ಭಾವಾವೇಶದ ದಿವ್ಯ ಸ್ಥಿತಿಗೊಳಗಾದ ಬಂಕಿಮರಿಂದ ಅಪ್ರಯತ್ನವಾಗಿ ಪದ್ಯಪಂಕ್ತಿಗಳು ಕಾಗದದ ಮೇಲೆ ಮೂಡಿದವು. ಯಾವುದೋ ದಿವ್ಯ ಶಕ್ತಿಯೊಂದು ಅವರನ್ನು ನಿಯಂತ್ರಿಸುತ್ತಿರುವಂತೆ ಭಾಸವಾಯಿತು. ಮಾತೆಯ ದರ್ಶನದ ಫಲವಾಗಿ "ವಂದೇ ಮಾತರಂ" ಮಂತ್ರದರ್ಶನವಾಯಿತು. "ಬಂಗದರ್ಶನ"ದ ನಿರ್ವಾಹಕ ರಾಮಚಂದ್ರ ಬಂದೋಪಾಧ್ಯಾಯ ಒಂದು ದಿನ ಪತ್ರಿಕೆಯ ಖಾಲಿ ಜಾಗವನ್ನು ತುಂಬಲು ಯಾವುದಾದರೊಂದು ಸಾಮಗ್ರಿ ಕೊಡಿ ಎಂದು ಸಂಪಾದಕ ಬಂಕಿಮರನ್ನು ಕೇಳಿದಾಗ ಅವರು ಕೊಟ್ಟಿದ್ದು ಇದೇ ಮಂತ್ರವನ್ನು. ಇದೇನು ಅರ್ಧ ಸಂಸ್ಕೃತ, ಅರ್ಧ ಬಂಗಾಳಿಯಲ್ಲಿದೆಯಲ್ಲಾ ಎಂದು ಅವರು ಕೇಳಿದಾಗ ಬಂಕಿಮರು ಇನ್ನೊಂದಿಪ್ಪತ್ತೈದು ವರ್ಷದಲ್ಲಿ ಇಡೀ ಬಂಗಾಳವನ್ನೇ ಈ ಗೀತೆ ಹುಚ್ಚೆಬ್ಬಿಸುತ್ತದೆ ಎಂದಿದ್ದರು! ಮೊಟ್ಟಮೊದಲಿಗೆ 1886ರಲ್ಲಿ ಹೇಮಚಂದ್ರ ಬಂದೋಪಾಧ್ಯಾಯರು ಕೋಲ್ಕತಾ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದರು. ಹತ್ತು ವರುಷಗಳ ತರುವಾಯ ರವೀಂದ್ರ ನಾಥ ಟಾಗೋರ್ ಸ್ವತಃ ಸ್ವರ ಸಂಯೋಜನೆ ಮಾಡಿ ಹಾಡಿ "ನನ್ನ ದೇಹವಿಡೀ ವಿದ್ಯುತ್ ಸಂಚಾರವಾದಂತಾಯಿತು. ಇದು ಹಾಡಲ್ಲ ಜ್ವಾಲಾಮುಖಿ ಎನಿಸಿತು. ಹಾಡಿನೊಂದೊಂದು ಶಬ್ಧವೂ ಶ್ರೋತೃಗಳಲ್ಲಿ ರೋಮಾಂಚನ ತಂದಿತು" ಎಂದು ವರ್ಣಿಸಿದರು.

            ಧಮನಿ ಧಮನಿಗಳಲ್ಲಿ ಸನಾತನತೆಯ ಪ್ರವಾಹವೇ ತುಂಬಿದ್ದ ಬಂಕಿಮರ ಆರಂಭದ ಬದುಕು ಭಾರತೀಯವಾಗಿರಲಿಲ್ಲ. ಜೂನ್ 26, 1838ರಂದು ಬಂಗಾಳದ ಇಪ್ಪತ್ನಾಲ್ಕು ಪರಗಣದ ಕಾಂಟಲಪಾಡದಲ್ಲಿ ಜನಿಸಿದ ಬಂಕಿಮರದ್ದು ಶ್ರೀಮಂತ ಕುಟುಂಬ. ತಂದೆ ಯಾದವಚಂದ್ರರು ಡೆಪ್ಯುಟಿ ಕಲೆಕ್ಟರ್ ಆಗಿದ್ದವರು. ಸಹಜವಾಗಿಯೇ ಬಂಕಿಮರು ಹಾಗವರ ಸಹೋದರರಿಗೆ ಸರ್ಕಾರದ ಉನ್ನತ ಹುದ್ದೆಗಳು ಪ್ರಾಪ್ತವಾದವು. ಕೋಲ್ಕತಾ ವಿವಿಯ ಮೊದಲ ಪದವೀಧರರು ಅವರು. ಬಾಲ್ಯಕಾಲದಲ್ಲಿ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಲೂ ಆಗಿನ ಬಂಗಾಳದ ಸನ್ನಿವೇಶವೇ ಕಾರಣವಾಗಿದ್ದಿರಬಹುದು. ಪಾಶ್ಚಾತ್ಯಮೂಲದ ಆಚರಣೆ-ಜ್ಞಾನಗಳೇ ಶ್ರೇಷ್ಠವೆಂದೂ, ಭಾರತೀಯ ಮೂಲವಾದುದೆಲ್ಲಾ ನಿಕೃಷ್ಟವೆಂಬ ಭಾವನೆಯೇ ಭಾರತೀಯರ ಮಾನಸಿಕತೆಯಲ್ಲಿ ಬಲವಾಗಿ ಬೇರೂರಿದ್ದ ಕಾಲವದು. ಮೆಕಾಲೆಯ ಆಂಗ್ಲ ಶಿಕ್ಷಣ ಫಲ ಕೊಡಲಾರಂಭಿಸಿದ್ದ ವೇಳೆಯದು. ಇಂತಹ ಪರಿಸರದಲ್ಲಿ ಬೆಳೆದ ಬಂಕಿಮರು ಆಂಗ್ಲಶಾಸನವೇ ಲಾಭಕಾರಿ ಎಂದು ಪ್ರತಿಪಾದಿಸುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ಅಂತಹ ಪರಿವಾರದಲ್ಲಿ ಬೆಳೆದಿದ್ದರೂ ಬಂಕಿಮರಿಗೆ ಹನ್ನೊಂದನೆಯ ವಯಸ್ಸಿಗೆ ಐದು ವರ್ಷದ ಬಾಲೆಯೊಡನೆ ಮದುವೆಯಾಗಿತ್ತು. ಇದು ಹೊರಗಿನಿಂದ ಯಾವುದನ್ನು ಪಡೆಯಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ತಿಳಿಯದೆ ಅಂಧಾನುಕರಣೆ ಮಾಡುವ ಇವತ್ತಿನ ಭಾರತೀಯ ಮಾನಸಿಕತೆಗೂ ಕನ್ನಡಿ ಹಿಡಿವ ಘಟನೆಯೇ ಸರಿ. ಆಂಗ್ಲದಲ್ಲಿ ಬರೆಯುವುದೇ ಪರಮ ಶ್ರೇಷ್ಠವೆಂದು ಬಗೆದಿದ್ದ ಆ ಕಾಲದಲ್ಲಿ ಸಹಜವಾಗಿಯೇ ಬಂಕಿಮರ ಮೊದಲ ಕಾದಂಬರಿ ಆಂಗ್ಲ ಭಾಷೆಯಲ್ಲಿಯೇ ಹೊರಬಂತು(ರಾಜ್ ಮೋಹನ್ಸ್ ವೈಫ್:1864). ಆದರೆ ಸ್ವಚಿಂತನೆ ಉದ್ದೀಪನವಾದಂತೆ ಅವರಲ್ಲಿ ಸ್ವಧರ್ಮ-ಸ್ವರಾಷ್ಟ್ರ ಚಿಂತನೆ-ಭಕ್ತಿ ಪ್ರಖರವಾಗುತ್ತಾ ಸಾಗಿತು. ಇದರ ಮೊದಲ ಕುರುಹೇ 1865ರಲ್ಲಿ ಪ್ರಕಟವಾದ "ದುರ್ಗೇಶ ನಂದಿನೀ".

               ಸೌಮ್ಯ ಸ್ವಭಾವದ ಬಂಕಿಮರು ವೃತ್ತಿಜೀವನದಲ್ಲಿ ದಕ್ಷತೆಗೆ ಹೆಸರಾದವರು. ಪ್ರಾಣದ ಹಂಗು ತೊರೆದು ದಿಟ್ಟ ಕ್ರಮಗಳಿಂದ ಖುಲ್ನಾದಲ್ಲಿ ನಡೆಯುತ್ತಿದ್ದ ಲೂಟಿ-ದರೋಡೆಗಳನ್ನು ಹತ್ತಿಕ್ಕಿದರು. ಕಮೀಷನರ್ ಮನ್ರೋನೊಡನೆ ಸಮಾನಸ್ಕಂಧರಂತೆ ವರ್ತಿಸಿದ ಕಾರಣ ಆತನ ಕ್ರೋಧಕ್ಕೂ ತುತ್ತಾದರು. ಕೂಲಿಯಾಳುಗಳನ್ನು ಶೋಷಿಸುತ್ತಿದ್ದ ಜಮೀಂದಾರರ ದರ್ಪವನ್ನೂ ಮುರಿದರು. ಕ್ರೌರ್ಯಕ್ಕೆ ಹೆಸರಾದ ಹೌರಾ ನ್ಯಾಯಾಧೀಶನ ರೀತಿ-ನೀತಿಗಳನ್ನು ವಿರೋಧಿಸಿದ ಕಾರಣ ಅವನ ಕೆಂಗಣ್ಣಿಗೂ ತುತ್ತಾಗಬೇಕಾಯಿತು. ವೃತ್ತಿಯಲ್ಲಿನ ಘನತೆ, ಸ್ವಾಭಿಮಾನ, ಪ್ರಾಮಾಣಿಕತೆ, ದಕ್ಷತೆಯ ಕಾರಣದಿಂದ ರಾಯ್ ಬಹಾದೂರ್ ಗೌರವಕ್ಕೂ ಪಾತ್ರರಾದರು. ಆದರೂ ಬಂಧನದಲ್ಲಿದ್ದ ಹಕ್ಕಿ ಸ್ವಾತಂತ್ರ್ಯವನ್ನೇ ಬಯಸಿತ್ತು. ಸ್ವ ಇಚ್ಛೆಯಿಂದ ನಿವೃತ್ತರಾದಾಗ ಮಹಾ ದೌರ್ಭಾಗ್ಯವೊಂದು ಅಳಿಯಿತೆಂದು ಉದ್ಗರಿಸಿದರು.

               ರಾಜ್ ಮೋಹನ್ಸ್ ವೈಫ್, ವಿಷವೃಕ್ಷ, ಕೃಷ್ಣಕಾಂತನ ಉಯಿಲು, ರಜನೀ, ಇಂದಿರಾ, ರಾಧಾರಾಣೀ, ಯುಗಳಾಂಗುರೀಯ ಇವು ಬಂಕಿಮರ ಸಾಮಾಜಿಕ ಕಾದಂಬರಿಗಳಾದರೆ ದುರ್ಗೇಶನಂದಿನೀ, ಮೃಣಾಲಿನೀ, ಚಂದ್ರಶೇಖರ, ರಾಜಸಿಂಹ, ಆನಂದ ಮಠ, ದೇವೀ ಚೌಧುರಾಣೀ, ಸೀತಾರಾಮ ಐತಿಹಾಸಿಕ ಕಾದಂಬರಿಗಳು. ಪಾಶ್ಚಾತ್ಯಾ ಕಾದಂಬರಿಗಳಿಂದ ಕೊಂಚ ಪ್ರೇರಣೆ ಪಡೆದಿದ್ದರೂ ಅವರಿಗಿಂತ ಹೆಚ್ಚಿನ ನೀತಿ ಪರಿಜ್ಞಾನ, ಸೂಕ್ಷ್ಮತೆ ಬಂಕಿಮರದ್ದು. ಪಾತ್ರಗಳು ಯಾವುದೇ ರೀತಿಯಾಗಿರಲಿ ಅವುಗಳನ್ನು ಸಹಾನುಭೂತಿಯಿಂದ ಕಾಣುವುದು, ಸ್ವಯಂ ಪಾತ್ರಗಳೇ ಕಥೆಯನ್ನು ಮುಂದಕ್ಕೊಯ್ಯುವ ತಂತ್ರ, ವಾಸ್ತವ ನೆಲೆಗಟ್ಟಿನಲ್ಲಿಯೇ ಬೆಳೆಯುವ ಕಥೆ, ವಿಚಾರದ ಘನಿಷ್ಠತೆ, ಮಾಧ್ಯಮದ ಕಲಾವಂತಿಕೆ ಇವು ಅವರ ಓದುಗರ ಬಳಗವನ್ನು ವಿಸ್ತರಿಸಿದವು. ಆರಂಭಿಕ ಕಾದಂಬರಿಗಳಲ್ಲಿ ಕಥೆಯ ರೋಚಕತೆಗೆ ಪ್ರಾಧಾನ್ಯತೆ ದೊರಕಿದರೆ ಆಮೇಲಿನವುಗಳಲ್ಲಿ ವೈಚಾರಿಕತೆ-ಮೌಲ್ಯಗಳೇ ಪ್ರಧಾನವಾದವು. ಅವರ ಕೊನೆಯ ಕಾದಂಬರಿ ಸೀತಾರಾನದಲ್ಲಿ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಮೌಲ್ಯಗಳ ವಾಚ್ಯರೀತಿಯ ವ್ಯಾಖ್ಯೆಗಳೇ ಕಾದಂಬರಿಯನ್ನು ಶೃಂಗಾರಗೊಳಿಸಿವೆ. "ಕಪಾಲಕುಂಡಲಾ" ಒಂದು ಪ್ರಣಯ ಕಥೆ! ಕಾಪಾಲಿಕನೊಬ್ಬನ ಸಾಹಚರ್ಯದಲ್ಲಿ ಬೆಳೆದ ಬಾಲೆಯೋರ್ವಳು ಶಿಥಿಲನಡೆಯ ನವಕುಮಾರನನ್ನು ವಿವಾಹವಾಗುವ ಕಥೆಯದು. ಶಾಕ್ತರು ಬಹುವಾಗುಳ್ಳ ಬಂಗಾಳದಲ್ಲಿ ಈ ಕಾದಂಬರಿ ಬಹು ಪ್ರಸಿದ್ಧಿ ಪಡೆಯಿತು. ಮೃಣಾಲಿನೀ ಕಾದಂಬರಿ, ಅತ್ಯಲ್ಪ ಸೇನೆಯನ್ನುಪಯೋಗಿಸಿಕೊಂಡು ಕುತಂತ್ರದಿಂದ ಬಖ್ತಿಯಾರ್ ಖಿಲ್ಜಿ ಬಂಗಾಳವನ್ನು ವಶ ಮಾಡಿಕೊಂಡ ದುರಂತ ಘಟನೆಯನ್ನಾಧರಿಸಿದ್ದು. ಈ ಕಾದಂಬರಿಗಳಲ್ಲಿ ಹೊರಹೊಮ್ಮಿದ ಅವರ ರಾಷ್ಟ್ರವಾದ ಹಾಗೂ ಸನಾತನತೆಯ ಬಗೆಗಿನ ಪ್ರೀತಿ 1870ರ ದಶಕದ ಅವರ ಬರವಣಿಗೆಯಲ್ಲಿ ಭೋರ್ಗರೆಯಿತು. 1880ರಲ್ಲಿ "ಆನಂದ ಮಠ"ದಲ್ಲಿ ಅದು ಪರಾಕಾಷ್ಠತೆಗೆ ತಲುಪಿತ್ತು. ಇದಕ್ಕೆ ಮೂಲ ಸಂತಾನ ಸನ್ಯಾಸಿಗಳ ಹೋರಾಟವಾದರೂ ಅವರು ತಾರುಣ್ಯದಲ್ಲಿ ಕಂಡ 1857ರ ಸ್ವಾತಂತ್ರ್ಯ ಸಂಗ್ರಾಮ ಅವರನ್ನು ಬಹುವಾಗಿ ಪ್ರೇರೇಪಿಸಿದ್ದಿರಬೇಕು. ಶಾಂತಿಯ ಪಾತ್ರದಲ್ಲಿ ಝಾನ್ಸಿ ಲಕ್ಷೀಬಾಯಿಯ ಪರಕಾಯ ಪ್ರವೇಶವಾದದ್ದೇ ಇದಕ್ಕೆ ಸಾಕ್ಷಿ! 1918ರ ರೌಲಟ್ ಸಮಿತಿಯ ವರದಿ ದೇಶದಲ್ಲಿ ಕ್ರಾಂತಿಕಾರಿ ಪ್ರವೃತ್ತಿ ಹರಡಲು "ಆನಂದ ಮಠ"ವೂ ಒಂದು ಕಾರಣ ಎಂದಿತ್ತು.

               ಕಾದಂಬರಿಗಳು ಮಾತ್ರವಲ್ಲದೆ ಕವನಗಳು, "ಕಮಲಾಕಾಂತ" ಎನ್ನುವ ವಿಡಂಬನೆ, ವೈಚಾರಿಕಾ ಪ್ರಬಂಧಗಳು, ಭಾಷಾ ಪಠ್ಯಗಳನ್ನು ಅವರು ರಚಿಸಿದರು. ಭಗವಾನ್ ಕೃಷ್ಣನನ್ನು ಮನುಷ್ಯನನ್ನಾಗಿಯೇ ಕಂಡು ಆತ ಮಾಡಿದ ಸಾಧನೆ ಯಾರೂ ಸಾಧಿಸಲಾಗದ ಅದ್ಭುತ ಎಂದು ದೈವತ್ವಕ್ಕೇರಿಸಿದ "ಶ್ರೀಕೃಷ್ಣ ಚರಿತ್ರ"; ಮಾನವನ ಗುಣ-ಸ್ವಭಾವಗಳು, ಜ್ಞಾನ-ನೀತಿ-ಭಕ್ತಿಗಳನ್ನು ಶೋಧನೆಗೊಳಪಡಿಸಿದ "ಧರ್ಮತತ್ವ"; ಧರ್ಮ-ಕರ್ಮ-ಬ್ರಹ್ಮಗಳನ್ನು ವಿಶ್ಲೇಷಿಸಿ ಭಾರತೀಯರನ್ನೂ-ಪಾಶ್ಚಾತ್ಯರನ್ನೂ ಪರೀಕ್ಷೆಗೊಳಪಡಿಸಿದ "ಶ್ರೀಮದ್ಭಗವದ್ಗೀತಾ" ಅವರ ಜಿಜ್ಞಾಸಾ ಗ್ರಂಥಗಳು. ಆಂಗ್ಲದಿಂದ ಬಂಗಾಳಿಗೆ ಪಲ್ಲಟಗೊಂಡ ಬಂಕಿಮರು ಜೊತೆಯವರನ್ನೂ ಬಂಗಾಳಿಯಲ್ಲಿ ಸಾಹಿತ್ಯ ಸೃಷ್ಟಿಸುವಂತೆ ಪ್ರೇರೇಪಿಸಿದರು. ಅವರ ಪ್ರೇರಣೆಯಿಂದಲೇ ರಮೇಶಚಂದ್ರದತ್ತರು "ವಂಗವಿಜೇತ" ವೆಂಬ ಐತಿಹಾಸಿಕ ಕಾದಂಬರಿಯನ್ನು ಬರೆದರು. "ಬಂಕಿಮರಿಗಿಂತ ಹಿಂದೆ ಬಂಗಾಳಿಯನ್ಯಾರೂ ಲಕ್ಷ್ಯವೇ ಮಾಡುತ್ತಿರಲಿಲ್ಲ. ಬಂಕಿಮರು ಉನ್ನತ ಶಿಕ್ಷಣ ಪಡೆದಿದ್ದರೂ ತಮ್ಮ ಜ್ಞಾನ-ಪ್ರತಿಭೆಯನ್ನು ಗ್ರಾಮ್ಯ-ಅಪ್ರಬುದ್ಧ-ಪ್ರಾಕೃತ ಭಾಷೆಯೊಂದನ್ನು ಸಾರ್ವತ್ರಿಕಗೊಳಿಸಲು ಮೀಸಲಿಟ್ಟರು. ಏಕತಾರೀ ತಂಬೂರಿಯಾಗಿ ಭಜನೆ ಮಾಡಲಷ್ಟೇ ಉಪಯುಕ್ತವಾಗಿದ್ದ ಭಾಷೆಯೊಂದನ್ನು ಕಲಾವತೀ ರಾಗವನ್ನು ಆಲಾಪನೆ ಮಾಡುವ ಶ್ರೇಷ್ಠ ವೀಣೆಯನ್ನಾಗಿ ಪರಿವರ್ತಿಸಿದರು" ಎಂದಿದ್ದಾರೆ ರವೀಂದ್ರನಾಥ ಟಾಗೋರರು. "ಮುಂದಿನ ಪೀಳಿಗೆ ನವಭಾರತದ ನಿರ್ಮಾತೃಗಳನ್ನು ಶ್ಲಾಘಿಸುವಾಗ ಅವಕಾಶವಾದಿ ರಾಜಕಾರಣಿಗಳನ್ನಾಗಲೀ ಪ್ರಚಾರಪ್ರಿಯ ಸುಧಾರಕರನ್ನಾಗಲೀ ಆರಾಧಿಸುವುದಿಲ್ಲ. ಅದು ಯಾರು ತನಗಾಗಿ ಯಾವ ಸ್ಥಾನಮಾನವನ್ನೂ ಕೋರದೆ ಮೌನವಾಗಿ, ತನ್ನ ಪ್ರತಿಭೆಯನ್ನಷ್ಟೂ ತೊಡಗಿಸಿಕೊಂಡು ಕರ್ಮಣ್ಯೇ ವಾಧಿಕಾರಸ್ಥೇ...ಎಂದು ಒಂದು ಭಾಷೆಯನ್ನೂ ಸಾಹಿತ್ಯವನ್ನೂ ರಾಷ್ಟ್ರವನ್ನೂ ಕಟ್ಟಿ ಬೆಳೆಸಿದರೋ ಅಂತಹ ಸರಳ, ಗಂಭೀರ, ವಂದೇಮಾತರಂ ಮಂತ್ರ ದೃಷ್ಟಾರ ಋಷಿ ಸದೃಷ ವ್ಯಕ್ತಿಗೆ ಪ್ರಶಂಸೆಯ ವರ್ಷಧಾರೆಯನ್ನು ಎರೆಯುತ್ತದೆ" ಎಂದು ಮಹರ್ಷಿ ಅರವಿಂದರೇ ಹೇಳಿರುವರೆಂದರೆ ಬಂಗಾಳ ಭಾಷೆ-ಸಾಹಿತ್ಯವನ್ನುಳಿಸಲು, ದೇಶದ ಸ್ವಾತಂತ್ರ್ಯದ ಹೋರಾಟಕ್ಕೊಂದು ಮೂಲಸ್ತ್ರೋತವನ್ನು ಕೊಟ್ಟು ಭಾವದೀಪ್ತಿಯನ್ನು ಉದ್ದೀಪಿಸಲು ಬಂಕಿಮರ ಕೊಡುಗೆ ಎಷ್ಟು ಎಂದು ಅರಿವಾದೀತು.

           ಬಂಕಿಮರು ಮರಣಶಯ್ಯೆಯಲ್ಲಿದ್ದಾಗ ವೈದ್ಯ ಮಹೇಂದ್ರ ಸರ್ಕಾರ್ ಔಷಧಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು. ನಿರಾಕರಿಸಿದ ಬಂಕಿಮರಿಗೆ ಔಷಧಿ ತೆಗೆದುಕೊಳ್ಳದೇ ಇರುವುದು ಆತ್ಮಹತ್ಯೆಗೆ ಸಮನೆಂದು ಸರ್ಕಾರ್ ಟೀಕಿಸಿದಾಗ "ನಾನು ಔಷಧ ತೆಗೆದುಕೊಳ್ಳುತ್ತಿದ್ದೇನಲ್ಲಾ" ಎಂದರು. ಯಾವ ಔಷಧವೆಂದು ಸರ್ಕಾರರು ಪ್ರಶ್ನಿಸಿದಾಗ ಬಂಕಿಮರ ಕೈ ಪಕ್ಕದಲ್ಲಿದ್ದ ಭಗವದ್ಗೀತೆಯತ್ತ ಬೊಟ್ಟು ಮಾಡಿತ್ತು. ಹಿರಿಯ ಮಗಳ ಬಳಿ ಮಾತನಾಡುವಾಗೊಮ್ಮೆ ವಂದೇಮಾತರಂ ದರ್ಶನವಾದ ಬಗೆಯನ್ನು ಅವರು ವರ್ಣಿಸಿದ ರೀತಿ ಹೀಗಿದೆ - ಹದಿನೆಂಟು ವರುಷಗಳ ಹಿಂದೆ ಆ ಸ್ಮರಣೀಯ ಮುಂಜಾವಿನಲ್ಲಿ ಮೇಜಿನ ಮುಂದೆ ಕುಳಿತಿದ್ದಾಗ ನನ್ನ ಮನಃಚಕ್ಷುವಿನ ಮುಂದೆ ದೇವಿಯೇ ಪ್ರತ್ಯಕ್ಷವಾದಂತೆನಿಸಿತು. ನನಗರಿವಿಲ್ಲದಂತೆ ನನ್ನ ಲೇಖನಿಯಿಂದ ಆ ಮಂತ್ರ ಸಾಲುಗಳು ಹಾಳೆಯ ಮೇಲೆ ಮೂಡಿದವು. ನಾನ್ಯಾವುದೋ ದಿವ್ಯ ಶಕ್ತಿಯ ಪ್ರಭಾವದಲ್ಲಿದ್ದಂತನಿಸುತ್ತಿತ್ತು.

              ದೇಶವೇ ತಾಯಿ ಎನ್ನುವ ಕಲ್ಪನೆ ಭಾರತೀಯರಿಗೇನೂ ಹೊಸದಾಗಿರಲಿಲ್ಲ. ಆದರೆ ಆ ಜ್ಞಾನಕ್ಕೆ ಭಾವವನ್ನು ಮೀಟುವ ಕೆಲಸವಾಗಬೇಕಿತ್ತು. ಅದು ಭಾಷೆಯನ್ನೂ ಮೀರಿ ಸಾಮಾನ್ಯನನ್ನೂ ತಲುಪಬೇಕಾಗಿತ್ತು. ದೇವಿ ಎನ್ನುವುದಕ್ಕಿಂತಲೂ ಅಮ್ಮಾ ಎನ್ನುವ ಶಬ್ಧ ಎಷ್ಟು ಆಪ್ಯಾಯಮಾನವೋ ಅಂತಹ ಭಾವೋದ್ದೀಪನ ಆಗಬೇಕಿತ್ತು. ಪರಂಪರೆಯ ಸೊಬಗಿಗೆ ಆಧುನಿಕತೆಯ ಸ್ಪರ್ಷ ಬೇಕಿತ್ತು. ಪಾಶ್ಚಾತ್ಯಂಧಾನುಕರಣೆಯ ಸುಳಿಯಿಂದ ಜನತೆಯನ್ನು ತಪ್ಪಿಸಿ ರಾಷ್ಟ್ರವೆಂಬ ಭಾವಸಾಗರದಲ್ಲಿ ಈಜಲು ಅನುವು ಮಾಡಿಕೊಡಬೇಕಿತ್ತು. ಸರಿಯಾದ ಸಮಯದಲ್ಲಿ ಪ್ರಕೃತಿ ಬಂಕಿಮರ ಚಿತ್ತಭಿತ್ತಿಯಲ್ಲಿ ಪ್ರತ್ಯಕ್ಷಳಾಗಿ ಅವರ ಭಾವದಲ್ಲಿ ಹೊನಲಾಗಿ ಕವನವಾಗಿ ಹರಿದಳು. ರಾಷ್ಟ್ರಧರ್ಮವೇ ಪರಮೋಧರ್ಮ ಎನ್ನುವುದು ಬುದ್ಧಿಗಿಂತಲೂ ಭಾವವಾಗಿ ಹರಿದುದರಿಂದ ಅದು ಬಂಕಿಮರ ಮಾತಿನಂತೆ ಕೆಲವೇ ವರ್ಷಗಳಲ್ಲಿ ಬಂಗಾಳವೇಕೆ ಇಡಿಯ ಭಾರತವನ್ನೇ ಹುಚ್ಚೆಬ್ಬಿಸಿತು. ರವೀಂದ್ರರಿಗೆ ಜ್ವಾಲಾಮುಖಿಯೆನಿಸಿತು. ಋಷಿಕಲ್ಪ ಅರವಿಂದರಿಗೆ ದರ್ಶನವೆನಿಸಿತು. ಕ್ರಾಂತಿ ಸಂಘಟನೆಗೆ ಪ್ರೇರೇಪಿಸಿತು. ಸ್ವಾಭಿಮಾನವನ್ನು ಉದ್ದೀಪಿಸಿತು. ರಾಷ್ಟ್ರಧ್ವಜದ ಪರಿಕಲ್ಪನೆಗೂ ಸೇರಿತು. ಪತ್ರಿಕೆ, ಸಂಘಟನೆಗಳಿಗೆ ಬೀಜರೂಪವಾಯಿತು. ಹಲವು ಭಾಷೆಗಳಲ್ಲಿ ಹಲವು ಕವಲುಗಳಾಗಿ ಹರಿಯಿತು.  ಆತ್ಮಹತ್ಯೆ ಮತ್ತು ಆತ್ಮಾಹುತಿಯ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸಿ ಸ್ವಾತಂತ್ರ್ಯ ಪ್ರಾಪ್ತಿಗೂ ಕಾರಣವಾಯಿತು. ಇಂದಿಗೂ ಅದು ಸತ್ತಂತಿಹರನು ಬಡಿದೆಚ್ಚರಿಸುತ್ತಲೇ ಇದೆ. ಅದಕ್ಕಾಗಿ ನಾವು ದೃಷ್ಟಾರ ಬಂಕಿಮರಿಗೆ ಋಣಿಯಾಗಿರಲೇಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ