ಪುಟಗಳು

ಗುರುವಾರ, ಜೂನ್ 30, 2016

ರಣರಾಗಿಣಿ ಧೀರೆ ದುರ್ಗಾವತಿ

ರಣರಾಗಿಣಿ ಧೀರೆ ದುರ್ಗಾವತಿ


              ಅಂಬಾರಿಯ ಮೇಲೆ ಕುಳಿತು ತನ್ನ ಸೈನ್ಯದೊಡನೆ ರಾಣಿ ನರ್ಮದೆಯನ್ನು ದಾಟುತ್ತಿದ್ದಳು. ಮಾವುತನ ಮಗು ಆಯತಪ್ಪಿ ನರ್ಮದೆಗುರುಳಿತು. ತಕ್ಷಣವೇ ನದಿಗೆ ಧುಮುಕಿದ ರಾಣಿ ಮಗುವನ್ನು ಎತ್ತಿ ತಂದು ಜೀವವುಳಿಸಿದಳು. ರಾಣಿಯೇ ಸೇವಕನ ಮಗುವನ್ನು ರಕ್ಷಿಸಿ ಹೊತ್ತು ತರುವುದೆಂದರೇನು? ಅದೂ ಸಹಾ ತನ್ನ ಪ್ರಾಣವನ್ನೇ ಪಣವಾಗಿಟ್ಟು ನೀರಿಗೆ ಧುಮುಕಿ ಮರಳಿ ಮಗುವನ್ನು ಹೊತ್ತು ತಂದು ಮರಳಿ ಅಂಬಾರಿಗೆ ನೆಗೆಯುವುದೆಂದರೆ ಸಾಮಾನ್ಯವೇ? ಕಲ್ಪನೆಗೂ ಮೀರಿದ ಇಂತಹ ಘಟನೆಯೊಂದು ನಡೆದಿರಬಹುದೇ, ನಡೆದಿದ್ದರೆ ಎಲ್ಲಿ ಎನ್ನುವ ಅನುಮಾನಗಳು ಸಹಜ. ಎಲ್ಲೋ ಕೃತ-ತ್ರೇತೆ-ದ್ವಾಪರಗಳ ಘಟನೆಯಿರಬಹುದೆಂದರೆ ನಿಮ್ಮ ಊಹೆ ತಪ್ಪು. ಇಂತಹ ಘಟನೆ ನಡೆದಿರಬಹುದಾದ ದೇಶವೊಂದಿದ್ದರೆ ಅದು ಭಾರತ ಮಾತ್ರ. ಹೌದು ಆಕೆ ಚಂದೇಲರ ರಾಣಿ, ರಣರಾಗಿಣಿ ದುರ್ಗಾವತಿ. ಗೊಂಡ್ವಾಲದ ರಾಜ ಕೀರ್ತಿಸಿಂಹನ ಏಕಮೇವ ಪುತ್ರಿ ಈ ವೀರವತಾರೆ! ಮನಿಯಾಗಢದ ಮನಿಯಾದೇವಿಯ ಅನುಗ್ರಹದಿಂದ 1524 ಅಕ್ಟೋಬರ್ ಐದರಂದು ಜನಿಸಿದ ಸುರಸುಂದರಿ ಸುಶೀಲೆ.

               ಶೂದ್ರರಾಗಿದ್ದರೂ ತಮ್ಮ ವಿಕ್ರಮದಿಂದಲೇ ಕ್ಷತ್ರಿಯರಾದವರು ಚಂದೇಲರು. "ಬ್ರಾಹ್ಮಣಃ ಶೂದ್ರತಾಂ ಯಾತಿ, ಶೂದ್ರೋ ಯಾತಿ ಚ ವಿಪ್ರತಾಂ" ಎನ್ನುವ ಮನುವಾಕ್ಯಕ್ಕೆ ಜ್ವಲಂತ ನಿದರ್ಶನವಿದು. ಬುಂದೇಲಖಂಡದ ಕಾಲಂಜರವನ್ನು ಕೇಂದ್ರವಾಗಿರಿಸಿಕೊಂಡು ಬೆಳೆದ ಚಂದೇಲರು ಯಶೋವರ್ಮ,ಸಬಕ್ತಗೀನ್ ಹಾಗವನ ಮಗ ಮಹಮ್ಮದ್ ಗಜನಿಯರನ್ನು ಬಗ್ಗುಬಡಿದಿದ್ದ ಧಂಗ, ಕುತುಬುದ್ದೀನನ ಸೊಕ್ಕು ಮುರಿದ ತ್ರೈಲೋಕ್ಯಮಲ್ಲನಂತಹ ವೀರರನ್ನು ಕೊಟ್ಟ ರಾಜವಂಶ. ಈಗ ಖಜುರಾಹೋ ಎಂದು ಕರೆಯಲ್ಪಡುವ ಖರ್ಜೂರವಾಹದ ದೇವಾಲಯ ಸಮುಚ್ಚಯಗಳು ಇವರದೇ ಕೊಡುಗೆ. ಇಂತಹ ರಾಜವಂಶದಲ್ಲಿ ಹುಟ್ಟಿದ ವೀರೆ ದುರ್ಗಾವತಿ ಅರಸು ಕುವರರಂತೆ ಬೆಳೆದಳು. ಚಿಕ್ಕವಯಸ್ಸಿಗೇ ಶಸ್ತ್ರ-ಶಾಸ್ತ್ರಗಳಲ್ಲಿ ಕೋವಿದೆಯಾದಳು. ಎಂತಹ ನರಭಕ್ಷಕ ಹುಲಿಯನ್ನಾದರೂ ಲೀಲಾಜಾಲವಾಗಿ ಬೇಟೆಯಾಡಿ ರೈತರಿಗೆ ನೆಮ್ಮದಿ ಕೊಡುತ್ತಿದ್ದ ದುರ್ಗಾವತಿ ತಂದೆಯ ಜೊತೆಗೂಡಿ ಬೇಟೆಯಾಡಲು ಹೋಗುತ್ತಿದ್ದುದು ಮಾತ್ರವಲ್ಲ ರಾಜಶಾಸನದಲ್ಲೂ ನೆರವಾಗುವಷ್ಟರ ಮಟ್ಟಕ್ಕೆ ಬೆಳೆದಳು.

               ಕತ್ತಿವರಸೆಯ ಸ್ಪರ್ದೆ ನಡೆದಿತ್ತು. ದುರ್ಗಾವತಿಯೆದುರು ನಿಲ್ಲಲಾಗದೆ ವೀರರೆಲ್ಲಾ ಕೈಚೆಲ್ಲಿದ್ದರು. ಮನಿಯಾಗಢದ ರಾಜಗೌಂಡ ಸಂಗ್ರಾಮಸಿಂಹನ ಮಗ ದಳಪತಿ ಸಿಂಹ ಅವಳಿಗೆದುರಾಗಿ ಬಂದ. ಅವಳ ಪರಾಕ್ರಮಕ್ಕೆ ಮೆಚ್ಚಿ ರತ್ನ ಖಚಿತ ಕಠಾರಿ "ಭವಾನಿ"ಯನ್ನು ಕೊಟ್ಟ. ಅವರಿಬ್ಬರ ನಡುವೆ ಆದ ಪ್ರೇಮಾಂಕುರ ವಿವಾಹ ಪ್ರಹಸನಕ್ಕೆ ತಿರುಗಿ ದಾಂಪತ್ಯದ ಕುರುಹಾಗಿ ವೀರನಾರಾಯಣನೆಂಬ ಕುವರ ಹುಟ್ಟಿದ. ಚಂದೇಲರ ಕುಮಾರಿಯನ್ನು ಗೊಂಡರವನೊಬ್ಬನಿಗೆ ಕೊಟ್ಟುದುದು ಅದೇ ಮೊದಲು. ಇದರಿಂದ ಎರಡೂ ಸಮುದಾಯಗಳೂ ಹತ್ತಿರವಾಗಿ ಒಟ್ಟಾಗಿ ಶೇರ್ ಷಹಾನ ಆಕ್ರಮಣವನ್ನು ಎದುರಿಸಲು ಮೊದಲ್ಗೊಳ್ಳುವಂತಾಯಿತು. ವಿವಾಹವಾದ ಐದೇ ವರ್ಷದಲ್ಲಿ ಪತಿಯೂ, ಶತ್ರುಗಳ ಕುತಂತ್ರಕ್ಕೆ ಪಿತ ಹಾಗೂ ಮಾವ ಬಲಿಯಾದರು. ದುರ್ಗಾವತಿ ಆಡಳಿತವನ್ನು ತನ್ನ ಕೈಗೆತ್ತಿಕೊಂಡಳು. ಆಕ್ರಮಕ ಶೇರ್ ಷಹಾನ ಸೊಕ್ಕು ಮುರಿದಳು.

           ಎಪ್ಪತ್ತು ಸಾವಿರ ಯೋಧರು, ಇಪ್ಪತ್ತು ಸಾವಿರ ಅಶ್ವಗಳು, ಒಂದು ಸಾವಿರ ಆನೆಗಳುಳ್ಳ ಬಲಿಷ್ಟ ಸೇನೆಯನ್ನು ಕಟ್ಟಿದಳು. ಹದಿನಾರು ವರ್ಷಗಳ ಅವಧಿಯಲ್ಲಿ 51 ಯುದ್ಧಗಳನ್ನು ಮಾಡಿದಳು. ಪ್ರತಿ ಬಾರಿಯೂ ಅವಳದೇ ದಿಗ್ವಿಜಯ. ತನ್ನ ಪ್ರೀತಿಯ ಕರಿಯ ಹತ್ತಿ ಯುದ್ಧರಂಗದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಬಗೆಬಗೆಯ ಆಯುಧಗಳನ್ನು ಚಾಕಚಾಕ್ಯತೆಯಿಂದ ಪ್ರಯೋಗಿಸುತ್ತ ಅರಿಗಳ ಶಿರಗಳನ್ನು ತರಿದು ಹಾಕುತ್ತ ಸಾಕ್ಷಾತ್ ದುರ್ಗೆಯಂತೆ ಕಂಗೊಳಿಸುತ್ತಿದ್ದಳು. ಸೆರೆಸಿಕ್ಕ ಶತ್ರುಗಳನ್ನು ಕ್ಷಮಿಸಿ, ಉಡುಗೊರೆಗಳೊಂದಿಗೆ ಗೌರವಪೂರ್ವಕವಾಗಿ ಬೀಳ್ಕೊಡುತ್ತಿದ್ದ ಆಕೆಯ ಸೌಜನ್ಯವನ್ನು ಶತ್ರುಗಳೂ ಕೊಂಡಾಡುತ್ತಿದ್ದರು.  ಸಾಮ್ರಾಜ್ಯ ವಿಸ್ತರಣೆ ಮಾಡಿದ್ದಲ್ಲದೆ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಳು. ಅವಳ ಅವಧಿಯಲ್ಲಿ ಗೊಂಡ್ವಾನದ ವ್ಯಾಪಾರ ವೃದ್ಧಿಯಾಯಿತು. ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದ ದುರ್ಗಾವತಿ ಸುವ್ಯವಸ್ಥಿತ ಸಮಾಜಕ್ಕಾಗಿ ಕಟ್ಟುನಿಟ್ಟಾದ ಕಾನೂಗಳನ್ನು ಜಾರಿ ಮಾಡಿದ್ದಳು. ತನ್ನ ರಾಜ್ಯದ 23 ಸಾವಿರ ಹಳ್ಳಿ-ಗ್ರಾಮಗಳ ಪ್ರತಿಯೊಬ್ಬ ಊರ ಹಿರಿಯನನ್ನು ಆಕೆ ಹೆಸರು ಹಿಡಿದು ಕರೆಯುತ್ತಿದ್ದಳು. ಪ್ರಜೆಗಳ ದುಃಖ ದುಮ್ಮಾನಗಳನ್ನಾಲಿಸಿ ಅವರ ಸಮಸ್ಯೆಗಳನ್ನೂ ಪರಿಹರಿಸುತ್ತಿದ್ದಳು. ಅಂತಹ ವಾತ್ಸಲ್ಯಮೂರ್ತಿ ಆಕೆ. ಅಬುಲ್ ಫಜಲ್ ತನ್ನ ಅಕ್ಬರ್ ನಾಮಾದಲ್ಲಿ "ತನ್ನ ರಾಜ್ಯದಲ್ಲಿ ನರಭಕ್ಷಕ ಹುಲಿಯೇನಾದರೂ ಕಂಡು ಬಂದರೆ ಅದನ್ನು ಬೇಟೆಯಾಡುವವರೆಗೆ ಆಕೆ ಒಂದು ತೊಟ್ಟು ನೀರೂ ಕುಡಿಯುತ್ತಿರಲಿಲ್ಲ" ಎಂದು ಪ್ರಶಂಸಿಸಿದ್ದಾನೆ. ಮಠ, ಮಂದಿರ, ಬಾವಿ, ಕೆರೆ, ಧರ್ಮಶಾಲೆಗಳನ್ನು ಕಟ್ಟಿಸಿದಳು. ಸಮರ್ಥ ಪರಿಪಾಲನೆಯಿಂದ ರಾಜ್ಯವನ್ನು ಸುಭಿಕ್ಷಗೊಳಿಸಿ ಹಿಂದುಳಿದಿದ್ದ ಗೊಂಡಾಗಳ ಪಾಲಿಗೆ ಬೆಳಕಾದಳು.  ಮಳೆ ಕಡಿಮೆಯಾಗಿ ಭೂಮಿ ಫಲವತ್ತಾಗಿರದ ಕಾರಣ ಹಲವು ಸರೋವರಗಳನ್ನು ಕಟ್ಟಿಸಿದಳು. ತನ್ನ ಹೆಸರಲ್ಲಿ “ರಾಣಿತಾಲ್”, ಅವರತಾಲ್, ದಾಸಿಯ ಹೆಸರಲ್ಲಿ  “ಚರಿತಾಲ್”, ತನ್ನ ವಿಶ್ವಸನೀಯ ಮಂತ್ರಿ ಆಧಾರಸಿಂಹನ ಹೆಸರಲ್ಲಿ "ಆಧಾರ್ ತಾಲ್" ಹೀಗೆ ದುರ್ಗಾವತಿ ನಿರ್ಮಿಸಿದ ಹಲವು ಸರೋವರಗಳು  ಇಂದಿಗೂ ಜನರ ಜೀವನಾಡಿಯಾಗುಳಿದಿವೆ. ಅವಳ ರಾಜ್ಯ ಪರಿಪಾಲನೆಯ ರೀತಿಗೆ ಮಾರು ಹೋದ ಗೊಂಡ್ವಾನ ಪ್ರಜೆಗಳು ಆಕೆಯನ್ನು ಮನೆ ದೇವರಂತೆ ಪೂಜೆ ಮಾಡುತ್ತಿದ್ದರೆಂದರೆ ಆಕೆಯ ಆಡಳಿತ ಹೇಗಿದ್ದೀತು?

                  ಬಾಜ್ ಬಹದ್ದೂರ್ ಹಾಗೂ ಫತೇಖಾನರ ಸೊಲ್ಲಡಗಿಸಿದಳು ದುರ್ಗಾವತಿ. ಯಾರ ತಂಟೆಗೂ ಹೋಗದೆ, ತನ್ನ ಮೇಲೆ ಆಕ್ರಮಣ ಎಸಗಿದವರನ್ನು ಬಿಡದೇ ರಾಜ್ಯವನ್ನು ಸಮರ್ಥವಾಗಿ ಆಳುತ್ತಿದ್ದ ವೇಳೆ ಇಂತಹ ಸಮೃದ್ಧ ದೇಶದ ಮೇಲೆ ಮತಾಂಧ ಅಕ್ಬರನ ಕಣ್ಣು ಬಿತ್ತು. "ಅಕ್ಬರನ ದಾಳಿ ಪಕ್ಕಾ ದುರಾಕ್ರಮಣ. ಅದಕ್ಕೆ ಯಾವ ಪ್ರಚೋದನೆಯೂ ಇರಲಿಲ್ಲ. ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಅದಕ್ಕೆ ಬೇರಾವ ಸಮರ್ಥನೆಯೂ ಇಲ್ಲ" ಎಂದಿದ್ದಾನೆ ಇತಿಹಾಸಕಾರ ವಿನ್ಸೆಂಟ್ ಸ್ಮಿತ್! ತನ್ನ ಸುಬೇದಾರ ಮಜೀದ್ ಖಾನನನ್ನು ದುರ್ಗಾವತಿಯ ಮೇಲೆ ಆಕ್ರಮಣಕ್ಕೆ ಕಳುಹಿಸಿದಾಗ ದುರ್ಗಾವತಿ ಗೌರ್ ಹಾಗೂ ನರ್ಮದೆಗಳ ನಡುವಲ್ಲಿದ್ದ ನರ್ರೈ ಪರ್ವತ ಶ್ರೇಣಿಯಲ್ಲಿ ಅವನನ್ನು ಎದುರಿಸಿದಳು. ದಳಪತಿ ಅರ್ಜುನ್ ದಸ್ವಾಸ್ ವೀರಮರಣವನ್ನಪ್ಪಿದರೂ, ಮೊಘಲರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೂ ಅವರ ಸೊಕ್ಕು ಮುರಿದ ರಾಣಿ ಅವರನ್ನು ಅಟ್ಟಾಡಿಸಿ ಬಡಿದಳು. ಮತ್ತೆ ತನ್ನ ಮೇಲೆ ಯುದ್ಧಕ್ಕೆ ಬಂದ ಅಕ್ಬರನ ಸರದಾರ ಅಸಫ್ ಖಾನನನ್ನು ಓಡಿಸಿದಳು. ಎರಡು ವರುಷಗಳು ಕಳೆದ ಬಳಿಕ(ಜೂನ್ 24, 1564) ಅಸಫ್ ಖಾನ್ ಮತ್ತೆ ದಾಳಿ ಮಾಡಿದ. ಶತ್ರುಗಳನ್ನು ಹಿಮ್ಮೆಟ್ಟಿಸಿದ ರಾಣಿ ಅವರ ಸರ್ವನಾಶಗೊಳಿಸಲೆಂದು ಬೆನ್ನತ್ತಿ ಹೋದಾಗ ಸಂಗಡಿಗರೇ ತಡೆದರು. ರಾತ್ರಿಯಲ್ಲಿ ಶತ್ರುವಿನ ಬೆನ್ನಟ್ಟುವುದು ಸೂಕ್ತವಲ್ಲ. ಅಲ್ಲದೆ ಸೇನೆಯೂ ಬಳಲಿದ ಕಾರಣ ವಿಶ್ರಾಂತಿ ಪಡೆಯುವುದೇ ಸೂಕ್ತ ಎನ್ನುವ ಸಲಹೆ ಮಾಡಿದರು. ಇದೇ ದುರ್ಗಾವತಿಗೆ ಮುಳುವಾಯಿತು. ರಾತ್ರೋರಾತ್ರಿ ಪಲಾಯನಗೈದಿದ್ದ ಶತ್ರು ಸೇನೆ ದುರ್ಗಾವತಿಯ ಮೇಲೆ ಅದೇ ರಾತ್ರಿ ಮರುದಾಳಿ ಮಾಡಿತು. ಮಿಡತೆಯ ಹಿಂಡಿನಂತೆ ಭಾರೀ ಪಡೆಗಳೊಂದಿಗೆ ಬಂದು ಚೌರಾಗಢ್ ಕೋಟೆಯನ್ನು ಸುತ್ತುವರಿಯಿತು. ಗೊಂಡಾಗಳು ವಿಶ್ರಾಂತಿಯಲ್ಲಿದ್ದರು. ಅನಿರೀಕ್ಷಿತವಾಗಿ ಬಂದ ಆಪತ್ತನ್ನು ಕಂಡ ರಾಣಿ ಈ ಮೋಸದ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲು ಸಿದ್ಧಳಾದಳು. ಆತ್ಮಗೌರವಕ್ಕಾಗಿ ಹೋರಾಡಬೇಕೆಂದು ರಾಣಿ ನೀಡಿದ ಕರೆಗೆ ಗೋಂಡಾಗಳನ್ನು ಬಡಿದೆದ್ದು ನಿಲ್ಲಿಸಿತು. ಇಡೀ ಗೊಂಡ್ವಾನವೇ ಸ್ಪೂರ್ತಿಯಿಂದ ಆತ್ಮರಕ್ಷಣೆಗೆ ಎದ್ದು ನಿಂತಿತು. ರಾಣಿಯ ರಭಸಕ್ಕೆ ಮೊಘಲ್ ಸೇನೆ ಕಕ್ಕಾಬಿಕ್ಕಿಯಾಯಿತು. ರಾಜಕುವರ ವೀರನಾರಾಯಣ್ ವೀರಾವೇಶದಿಂದ ಹೋರಾಡಿ ಗಾಯಗೊಂಡಾಗ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಆಜ್ಞೆ ಮಾಡಿ ದ್ವಿಗುಣ ಪರಾಕ್ರಮದಿಂದ ಹೋರಾಡಿದಳು. ಆದರೆ ರಾಜನ ಬೆಂಬಲಕ್ಕೆ ಕೆಲವು ಯೋಧರು ಹೋಗಬೇಕಾಗಿ ಬಂದ ಕಾರಣ ಸೇನೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಅದೇ ಸಮಯಕ್ಕೆ ಬಾಣವೊಂದು ರಾಣಿ ದುರ್ಗಾವತಿಯ ಕಣ್ತಲೆಗೆ ಬಡಿಯಿತು. ಅದನ್ನು ಕಿತ್ತು ಹಾಕಲು ಯತ್ನಿಸುತ್ತಿದ್ದಾಗ ಇನ್ನೊಂದು ಬಾಣ ಆಕೆಯ ಕುತ್ತಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ತನ್ನ ಕಥೆ ಮುಗಿಯಿತೆಂದು ರಾಣಿಗೆ ಅನ್ನಿಸಿತು. ಮತಾಂಧ ಮೊಘಲರ ಕೈಗೆ ಸಿಕ್ಕಿಬಿದ್ದು ಅಪಮಾನ ಅನುಭವಿಸುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ನಿರ್ಧರಿಸಿದಳು. ತನ್ನ ಪ್ರೀತಿಯ ಆನೆಗೆ ಹಾಗೂ ಮಾವುತನಿಗೆ ಸತ್ಕಾರ ಮಾಡಿ, ಉಡುಗೊರೆ ಕೊಟ್ಟು ತನ್ನ ಗಂಡನೇ ಕೊಟ್ಟಿದ್ದ ಸದಾ ಕಾಲದ ಸಂಗಾತಿಯಾಗಿದ್ದ ಖಡ್ಗ "ಭವಾನಿ"ಯಿಂದ ತನ್ನ ರುಂಡವನ್ನು ಮಾತೃಭೂಮಿಗೆ ಅರ್ಪಣೆ ಮಾಡಿದಳು.

            ಗಾಯಗೊಂಡಿದ್ದ ವೀರನಾರಾಯಣ್ ಸುಧಾರಿಸಿಕೊಂಡು ಪ್ರಚಂಡವಾಗಿ ಹೋರಾಡಿದರೂ ಗೆಲುವು ದಕ್ಕಲಿಲ್ಲ. ರಾಜನೂ ಅಸುನೀಗಿದ ಮೇಲೆ ಮೊಘಲ್ ರಕ್ಕಸರು ಊರನ್ನು ಪ್ರವೇಶಿಸುವ ಮೊದಲೇ ಪೌರ ಜನರೆಲ್ಲಾ ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದ ಸೌದೆ, ಒಣಹುಲ್ಲು, ಹತ್ತಿ, ತುಪ್ಪದಂತಹ ಶೀಘ್ರ ದಫನವಾಗುವ ವಸ್ತುಗಳಿದ್ದ ಆವರಣದೊಳಗೆ ಬಂದು ಕೈಯಾರೆ ಅಗ್ನಿಸ್ಪರ್ಷ ಮಾಡಿಕೊಂಡರು.  ಕೋಟೆಯೊಳಗೆ ಬಂದ ಮೊಘಲ್ ಸೇನೆಗೆ ಬೂದಿಯ ರಾಶಿಯ ಕೊರಡುಗಳ ಕೆಳಗೆ ಜೀವಂತವಾಗಿದ್ದ ರಾಜಕುವರಿಯರಿಬ್ಬರು ಕಂಡರು. ಮೊಘಲರ ಕಾಮುಕತೆಗೆ ಬಲಿಯಾಗುವ ಬದಲು ಅಗ್ನಿಗಾಹುತಿಯೇ ಶ್ರೇಯಸ್ಕರವೆಂದು ಬಗೆದಿದ್ದ ಅವರನ್ನು ಸಾವೂ ವಂಚಿಸಿತ್ತು. ಅವರಿಬ್ಬರು ದೊಡ್ಡಿಯಂತಿದ್ದ ಅಕ್ಬರನ ಜನಾನಕ್ಕೆ ಸಾಗಿಸಲ್ಪಟ್ಟು ನಿತ್ಯಸಾವಿಗೆ ತುತ್ತಾಗಬೇಕಾಯಿತು.

            ಅಕ್ಬರನನ್ನು ಮೂರು ಬಾರಿ ಸೋಲಿಸಿದುದು ಮಾತ್ರವಲ್ಲದೆ 51 ಯುದ್ಧಗಳನ್ನು ಗೆದ್ದ ವೀರ ವನಿತೆ ದಕ್ಷ ಆಡಳಿತದಿಂದ ಗೊಂಡಾಗಳ ಮನೆದೇವತೆಯಾದುದು ಮಾತ್ರವಲ್ಲ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತನ್ನ ಹೆಸರನ್ನು ಬರೆದು ಭಾರತೀಯರಿಗೆ ಸ್ಪೂರ್ತಿದಾಯಕಳಾದಳು. ಈ ವೀರಾಗ್ರಣಿ ರಣ ರಾಗಿಣಿಯ ನೆನಪಿಗಾಗಿ 1988ರಲ್ಲಿ ಅವಳ ಭಾವಚಿತ್ರವಿರುವ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಲಾಗಿದೆ.  ಜಬಲ್ಪುರದಲ್ಲಿ ದುರ್ಗಾವತಿಯ ಹೆಸರಿನ ವಿಶ್ವವಿದ್ಯಾಲಯ(1983) ಹಾಗೂ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ.ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ