ಪುಟಗಳು

ಮಂಗಳವಾರ, ಆಗಸ್ಟ್ 30, 2016

ಚೀನಾದ ಪ್ರಿಯತಮೆ ಮಂಗೋಲಿಯಾ ಮಗುಚಿ ಬಿದ್ದಿದೆ!

ಚೀನಾದ ಪ್ರಿಯತಮೆ ಮಂಗೋಲಿಯಾ ಮಗುಚಿ ಬಿದ್ದಿದೆ!


              ಐದು ವರ್ಷಗಳ ಹಿಂದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೋಹಿನಿ ಮಂಗೋಲಿಯಾ ಇಂದು ಕುಸಿದು ಬಿದ್ದಿದೆ. ಯಾರೂ ಊಹಿಸದಂತಹ ಪರಿಸ್ಥಿತಿಗೆ ಮಂಗೋಲಿಯಾದ ಆರ್ಥಿಕತೆ ತಲುಪಿದೆ. ಕಾಲದ ಚಕ್ರದಲ್ಲಿ ಒಂದೆರಡೇ ಸುತ್ತುಗಳಲ್ಲಿ ಬಸವಳಿದು ಬಿದ್ದ ಮಂಗೋಲಿಯಾ ಸಾಲದ ಚಕ್ರದಲ್ಲಿ ಬಿದ್ದು ಹೊರಳಾಡುತ್ತಿದೆ! ಮಂಗೋಲಿಯಾ ವಿತ್ತ ಸಚಿವ ಸೈನಿಕರಿಗೆ ಹಾಗೂ ಸರಕಾರೀ ಉದ್ಯೋಗಿಗಳಿಗೆ ಸಂಬಳ ಕೊಡಲು ಸರಕಾರದ ಬಳಿ ಹಣವಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಆಘಾತಕಾರಿ ಆರ್ಥಿಕ ಕುಸಿತಕ್ಕೆ ಒಳಗಾಗಿರುವ ಮಂಗೋಲಿಯಾದ ಜಿಡಿಪಿ ಅನುಪಾತ ಹಾಗೂ ಸರಕಾರೀ ವೆಚ್ಚ 78% ಕ್ಕೆ ಇಳಿದಿದೆ. ಅಲ್ಲಿನ ಕೇಂದ್ರ ಬ್ಯಾಂಕಿನ ನೆಟ್ ಫಾರಿನ್ ರಿಸರ್ವ್ ಈಗ -$429 ಮಿಲಿಯನ್!

               2012 ರಲ್ಲಿ ವಿಶ್ವ ಬ್ಯಾಂಕ್ ಮಂಗೋಲಿಯಾವನ್ನು ಏಷ್ಯಾದಲ್ಲಿ ಶೀಘ್ರ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ(ಬೆಳವಣಿಗೆ ದರ 17.3%) ದೇಶ ಎಂದು ಶ್ಲಾಘಿಸಿತ್ತು. ವಿಶ್ವ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ 2011ರ ವಾರ್ಷಿಕ ಜಿಡಿಪಿ ಬೆಳವಣಿಗೆಯನ್ನು ಗಮನಿಸಿದರೆ ಮಂಗೋಲಿಯಾ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಅದೇ ವರ್ಷ ಗಣಿಗಾರಿಕೆಯಲ್ಲಿ FDI ಗೆ ಅನುಮತಿಯನ್ನೂ ನೀಡಿತು. ಮುಂದಿನ ಕೆಲವೇ ತಿಂಗಳುಗಳಲ್ಲಿ ದೇಶದ್ಯಾಂತ ಅಗಾಧ ಹಣದ ಹರಿವೇ ಸೃಷ್ಟಿಯಾಯಿತು. 2012ರಲ್ಲಿ ತನ್ನಲ್ಲಿದ್ದ ಡಾಲರ್ ಬಾಂಡ್'ಗಳನ್ನು ಮಾರಾಟ ಮಾಡಿ ಅದೇ ತನ್ನ ಮುಂದಿನ ಯಶಸ್ಸಿಗೆ ಪ್ರತೀಹಾರಿಯಾಗಿ ನಿಲ್ಲಬಲ್ಲುದೆಂಬ ಆಶಾವಾದದೊಂದಿಗೆ ಬೀಗುತ್ತಾ ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದ ಮಂಗೋಲಿಯಾ ಇಂದು ಮಗುಚಿ ಬಿದ್ದಿದೆ. ಉತ್ತುಂಗಕ್ಕೆರಿದ್ದ ಕರೆನ್ಸಿ ನಾಲ್ಕೇ ವರ್ಷಗಳಲ್ಲಿ ಮಕಾಡೆ ಮಲಗಿದೆ. ಆರ್ಥಿಕ ಬೆಳವಣಿಗೆ ದರ 17.3% ಇದೆ ಎಂದು ವಿಶ್ವಬ್ಯಾಂಕಿನಿಂದ ಕೊಂಡಾಡಲ್ಪಟ್ಟಿದ್ದ ದೇಶವಿಂದು ಹೊರಗಿನ ನೆರವಿಲ್ಲದಿದ್ದರೆ ಸತ್ತೇ ಹೋಗುವ ಸ್ಥಿತಿಯಲ್ಲಿದೆ.

            ಅನೇಕ ಹೂಡಿಕೆದಾರರು ಈಗಾಗಾಲೇ ತಮ್ಮ ಹಣವನ್ನು ವಾಪಸು ತೆಗೆದುಕೊಂಡಾಗಿದೆ. ಕಳೆದ ಆರು ತಿಂಗಳಲ್ಲಿ 130,000 ನೋಂದಾಯಿತ ಸಂಸ್ಥೆಗಳಲ್ಲಿ 60,000 ಸಂಸ್ಥೆಗಳು ತಮ್ಮ ವಹಿವಾಟನ್ನು ನಿಲ್ಲಿಸಿವೆ.  ಹಾಂಕಾಂಗ್ ಮೂಲದ ಕ್ವಾಮ್ ಲಿಮಿಟೆಡ್ ಸಮೂಹದ ಮುಖ್ಯಸ್ಥ ಬರ್ನಾಡ್ ಪೌಲಿಟ್ 2020ರವರೆಗೆ ಮಂಗೋಲಿಯಾ ಅಭಿವೃದ್ಧಿಯ ಹಳಿಗೆ ಬರುವ ಯಾವ ಲಕ್ಷಣವೂ ಕಾಣುತ್ತಿಲ್ಲ ಎಂದಿದ್ದಾರೆ. 2011ರಿಂದ ಮಂಗೋಲಿಯಾದ ಸಾರ್ವಜನಿಕ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದ ಈತ ಕಳೆದ ವಾರ ಸುಮಾರು $10 ಮಿಲಿಯನ್ ಮೊತ್ತದ ಬಂಡವಾಳವನ್ನು ವಾಪಸ್ ತೆಗೆದುಕೊಂಡಿದ್ದಾರೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸರಿಹೊಂದಿಸಲು ಸಣ್ಣ ಮಾರುಕಟ್ಟೆಯನ್ನು ಹೊಂದಿರುವ ಹಾಗೂ ರಾಜಕೀಯದ ಮೇಲೆ ಬಹಳಷ್ಟು ಅವಲಂಬನೆ ಹೊಂದಿರುವ  ಮಂಗೋಲಿಯಾಕ್ಕೆ ಸಾಧ್ಯವಿಲ್ಲ ಎನ್ನುವುದು ಆತನ ಅಭಿಪ್ರಾಯ. ಮಂಗೋಲಿಯಾದಲ್ಲಿನ ಇನ್ನೊಬ್ಬ ಹೂಡಿಕೆದಾರ "ಕಡಿಮೆ ಬಡ್ಡಿದರದಲ್ಲಿ ದೊಡ್ಡ ಮೊತ್ತದ ಸಾಲ ಪಡೆದುಕೊಂಡವರಿಗೂ ಇಂದು ಅತಿ ಕಡಿಮೆ ಬಡ್ಡಿದರದಲ್ಲೂ ಮರುಪಾವತಿ ಮಾಡಲಾಗದಂತಹ ವಿಚಿತ್ರ ಸ್ಥಿತಿಗೆ ಮಂಗೋಲಿಯಾ ತಲುಪಿದೆ. ಬಡ್ಡಿದರವನ್ನು ಹೆಚ್ಚು ಮಾಡುವುದರಿಂದಲೂ ಆ ದೇಶದ ಪರಿಸ್ಥಿತಿ ಸುಧಾರಿಸಲಾರದು. ಮಂಗೋಲಿಯಾದಂತಹ ದೇಶಗಳಲ್ಲಿನ ಇಂದಿನ ಪ್ರಕ್ಷುಬ್ಧತೆಗೆ ಕೇಂದ್ರ ಬ್ಯಾಂಕುಗಳ ಸಡಿಲ ಹಣಕಾಸು ನೀತಿಯೇ ಕಾರಣ" ಎನ್ನುತ್ತಾರೆ.

              ಕ್ರಿ.ಶ. 1370 ರ ಸುಮಾರಿಗೆ ಮಂಗೋಲಿಯನ್ನರು ಚೆಂಗೀಸ್ ಖಾನನ ನೇತೃತ್ವದಲ್ಲಿ ಟಿಬೇಟನ್ನು ಆಕ್ರಮಿಸಿದರು. ಆದರೆ ಕೆಲವೇ ವರ್ಷಗಳಲ್ಲಿ ಬೌದ್ಧ ಮತ ಮಂಗೋಲಿಯಾದ್ಯಂತ ವಿಸ್ತರಿಸಿತು. ಮಂಗೋಲಿಯನ್ ದೊರೆ ಕುಬ್ಲಾಯ್ಖಾನ್ ಬೌದ್ಧ ಮತವನ್ನು ಅಪ್ಪಿ ಅದರ ಅನುಯಾಯಿಯಾದ. ಮುಂದೆ ಕ್ರಮೇಣ ಮಂಗೋಲಿಯಾದ ಹಿಡಿತ ಸಡಿಲವಾಗಿ ಟಿಬೆಟ್ ಸ್ವತಂತ್ರ ರಾಷ್ಟ್ರವಾಯಿತು. ಆಗಲೂ ಚೀನಾ ಮಂಗೋಲಿಯಾದ ಹಿಡಿತದಲ್ಲೇ ಇತ್ತು. ಕಾಲಕ್ರಮೇಣ ಚೀನಾ ಮಂಗೋಲಿಯಾದ ಹಿಡಿತದಿಂದ ಬಿಡಿಸಿಕೊಂಡಿತು. ಆದರೆ ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಕಮ್ಯೂನಿಷ್ಟರ ಕಪಿಮುಷ್ಠಿಗೆ ಸಿಕ್ಕಿ ಹಾಕಿಕೊಂಡು ನರಳಿತು. 37 ಲಕ್ಷ ಸೈನಿಕರನ್ನು ಹೊಂದಿದ್ದ ಜಿಯಾಂಗ್'ನ ಪಡೆಯನ್ನು ರಷ್ಯಾದ ನೆರವಿನಿಂದ ಸೋಲಿಸಿದ ಮಾವೋ ಮಂಚೂರಿಯಾವನ್ನು ತನ್ನ ವಶಕ್ಕೆ ತೆಗೆದುಕೊಂಡು ಚೀನಾದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಾ ಸಾಗಿದ. ಕೊಲೆಗಡುಕ ಮಾವೋ ಭೀತಿಯಿಂದ ಝಿಯಾಂಗ್ ತೈವಾನ್ ಸೇರಿಕೊಂಡ. ಝಿಯಾಂಗನ ಅಧಿಪತ್ಯದಲ್ಲಿ ತೈವಾನ್ ಏರುಗತಿಯಲ್ಲಿ ಏಳಿಗೆ ಹೊಂದಿದರೆ, ಇತ್ತ ಕಮ್ಯೂನಿಸಂನ ಪ್ರತಿಪಾದಕ ಮಾವೋನ ಆಳ್ವಿಕೆಯಲ್ಲಿ ಚೀನಾ ಮುದುಡುತ್ತಾ ಸಾಗಿತು. ಬಂಡವಾಳಶಾಹಿಯತ್ತ ತಲೆ ಹಾಕಿಯೂ ಮಲಗದೆ ಸಮಾಜವಾದವನ್ನು ಸಿಕ್ಕಿದಲ್ಲೆಲ್ಲಾ ತುರುಕಿಸಿದ ಮಾವೋನ ಕ್ರೌರ್ಯವೂ ಜೊತೆ ಸೇರಿ ಪರಿಣಾಮ ಚೀನಾದಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಯಿತು. ಆದರೆ ತನ್ನ ವಿಸ್ತರಣಾ ನೀತಿಯನ್ನು ಪ್ರತಿಯೊಂದು ಕ್ಷೇತ್ರಕ್ಕೂ ವಿಸ್ತರಿಸಿದ ಚೀನಾ ಪ್ರತಿಯೊಂದು ದೇಶವನ್ನು ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಹಿಡಿತದಲ್ಲಿರಿಸಿಕೊಂಡಿತು. ಒಂದು ಕಾಲದಲ್ಲಿ ಸಮಗ್ರ ಚೀನಾವನ್ನೇ ಆಳಿದ ಮಂಗೋಲಿಯಾ ಇಂದು ಬದುಕಲು ಚೀನಾದ ಮೇಲೆಯೇ ಅವಲಂಬಿತವಾಗಿದೆ ಎನ್ನುವುದು ಇತಿಹಾಸದ ಬಹುದೊಡ್ಡ ಚೋದ್ಯ!

             ಎರಡನೆ ಮಹಾಯುದ್ಧ, ಹಿರೋಶಿಮಾ-ನಾಗಸಾಕಿಗಳ ಮೇಲಿನ ಬಾಂಬುದಾಳಿಗಳಿಂದ ಅಕ್ಷರಶಃ ಸತ್ತೇ ಹೋಗಿದ್ದ ಜಪಾನ್ 1975ರವರೆಗೂ ಅಗಾಧ ಪರಿಶ್ರಮದ ನಡುವೆಯೂ ಚೇತರಿಸಿಕೊಂಡಿರಲಿಲ್ಲ. ಆಗಲೂ ಅದರ ತಂತ್ರಜ್ಞಾನದ ಆಮದು 20ಬಿಲಿಯನ್ ಯೆನ್ ಹಾಗೂ ರಫ್ತು ಕೇವಲ 5 ಬಿಲಿಯನ್ ಯೆನ್ ಗಳಷ್ಟಿತ್ತು. ಆದರೆ ಆ ಬಳಿಕ ಅದರ ಬೆಳವಣಿಗೆ ಏರುಗತಿಯಲ್ಲಿ ಸಾಗಿತು. 1995ಕ್ಕಾಗುವಾಗ ಅದರ ರಫ್ತು 56.21ಬಿಲಿಯನ್ ಯೆನ್ ಗಳಿಗೆ ಮುಟ್ಟಿದ್ದರೆ ಆಮದು 39.17 ಬಿಲಿಯನ್ ಯೆನ್ ಗಳಾಗಿತ್ತು. ಇಪ್ಪತ್ತೇ ವರ್ಷಗಳಲ್ಲಿ ಪರಿಸ್ಥಿತಿಯನ್ನು ತನಗನುಕೂಲಕರವಾಗುವಂತೆ ಬದಲಾಯಿಸಿಕೊಂಡು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಂತಿತ್ತು ಜಪಾನ್! ಹುಲ್ಲುಕಡ್ಡಿಯೂ ಬೆಳೆಯದ, ಸುತ್ತ ಮತಾಂಧರಿಂದ ತುಂಬಿಕೊಂಡು ಸದಾ ಕಿರಿಕಿರಿ ಅನುಭವಿಸುತ್ತಿರುವ, ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಲ್ಲದ ಶೀತಲ ಭೂಮಿ ಇಸ್ರೇಲ್ ಇಂದು ಸೈನ್ಯ-ಶಸ್ತ್ರೋದ್ಯಮ-ಹೈನೋದ್ಯಮ-ಕೃಷಿಗಳಲ್ಲಿ ನಾಯಕನಾಗಿ ಮೆರೆಯುತ್ತಿದೆ. ತನ್ನರ್ಧ ಉತ್ತರಕೊರಿಯಾದಂತೆ ಕಮ್ಯೂನಿಷ್ಟ್ ಸರ್ವಾಧಿಕಾರವನ್ನು ಒಪ್ಪದ ದಕ್ಷಿಣ ಕೊರಿಯಾ, ಚೀನಾಕ್ಕೆ ಸಡ್ಡು ಹೊಡೆದು ನಿಂತ ತೈವಾನ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪಾರಮ್ಯ ಮೆರೆದಿವೆ. ಇವೆಲ್ಲಾ ಕನಿಷ್ಟ ಸಂಪನ್ಮೂಲಗಳನ್ನು ಹೊಂದಿದ್ದು ಅಭಿವೃದ್ಧಿ ಪಥದಲ್ಲಿ ಸಾಗಿದ ರಾಷ್ಟ್ರಗಳು. ಇವುಗಳಿಗೆಲ್ಲಾ ಸಾಧ್ಯವಾದದ್ದು ಅಗಾಧ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಮಂಗೋಲಿಯಾಕ್ಕೆ ಯಾಕೆ ಸಾಧ್ಯವಾಗಲಿಲ್ಲ?

               ಒಂದು ಕಡೆ ನಿತ್ಯಹರಿದ್ವರ್ಣದ ಹಸಿರು, ಇನ್ನೊಂದೆಡೆ ಜಗತ್ತಿನ ಮರುಭೂಮಿಗಳಲ್ಲೊಂದಾದ ಗೋಬಿ ಇಂತಹ ಪರಸ್ಪರ ವೈರುಧ್ಯಗಳ ತವರು ಮಂಗೋಲಿಯಾದಲ್ಲಿ ಈ ರೀತಿಯಾಗುವುದು ಆಶ್ಚರ್ಯವೇನಲ್ಲ. ಮೈನವಿರೇಳಿಸುವ ಗಿರಿ ಶಿಖರಗಳು, ಸುಂದರ ಕಟ್ಟಡಗಳು, ಅಪರೂಪದ ವನ್ಯಮೃಗ ಸಂತತಿಯನ್ನು ಹೊಂದಿರುವ ಮಂಗೋಲಿಯಾ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದೂ ತೀರಾ ಇತ್ತೀಚೆಗೇ! ಚೀನಾದ ಕಾರ್ಖಾನೆಗಳಿಗೆ ಕಚ್ಛಾ ವಸ್ತುಗಳನ್ನು ಪೂರೈಕೆ ಮಾಡುವುದರಲ್ಲೇ ಜೀವಿತಾರ್ಥದ ಸಾರ್ಥಕ್ಯ ಕಂಡುಕೊಂಡಿದ್ದ ಮಂಗೋಲಿಯಾಕ್ಕೆ ಸೊರಗುತ್ತಿರುವ ಚೀನಾದ ಆರ್ಥಿಕತೆ ಶಾಪವಾಗಿ ಕಾಡಿದೆ. ಮಂಗೋಲಿಯಾದ ರಫ್ತಿನ 90% ಭಾಗ ಚೀನಾದೊಂದಿಗೆ ಇತ್ತು. ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಮಂಗೋಲಿಯಾದಲ್ಲಿ ಜಾಗತಿಕ ಆರ್ಥಿಕ ಕುಸಿತದ ಪರಿಣಾಮದಿಂದ ಉಂಟಾದ ಉಪಯುಕ್ತ ವಸ್ತುಗಳ ಮೇಲಿನ ಬೆಲೆ ಕುಸಿತ ಒಂದು ಕಾಲದ ಹಣದ ಮೂಲವಾಗಿದ್ದ ಗಣಿಗಾರಿಕೆಯ ಮೇಲೂ ಭಾರಿಯಾಗಿ ಪರಿಣಮಿಸಿ ವಿದೇಶೀ ನೇರ ಹೂಡಿಕೆಯೂ ನಿಧಾನವಾಗಿ ಕಲ್ಲಿದ್ದಲು ಹಾಗೂ ಚಿನ್ನದ ಗಣಿಗಳನ್ನೇ ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಮಂಗೋಲಿಯಾದ ಕರೆನ್ಸಿ ತುರ್ಗಿಕ್ ಈಗ ಜಗತ್ತಿನ 154 ಕರೆನ್ಸಿಗಳಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಕರೆನ್ಸಿ. ಈ ತಿಂಗಳಲ್ಲೇ 7.8%ನಷ್ಟು ಕುಸಿತ ಕಂಡಿರುವ ತುರ್ಗಿಕ್ ಈ ವರ್ಷಾರಂಭದಲ್ಲಿ 11%ನಷ್ಟು ಇಳಿದಿತ್ತು. ಕೇಂದ್ರ ಬ್ಯಾಂಕ್ ತನ್ನ ಬೆಂಚ್ ಮಾರ್ಕ್ ಬಡ್ಡಿದರವನ್ನು 15%ಕ್ಕೆ ಏರಿಸಬೇಕಾಯಿತು. ಮಂಗೋಲಿಯನ್ ಕರೆನ್ಸಿ ಕಳೆದ ಐದು ವರ್ಷಗಳಲ್ಲಿ 60%ನಷ್ಟು ಇಳಿಯಿತು. ಕಳೆದ ವರ್ಷ 2.3% ಇದ್ದ ಜಿಡಿಪಿ ಬೆಳವಣಿಗೆ ಈಗ 1.3%ಕ್ಕೆ ಕುಸಿದಿದೆ. ಮಂಗೋಲಿಯನ್ ತುಗ್ರಿಕ್ ಡಾಲರ್ ಎದುರು 12% ಕುಸಿತ ಕಂಡಾಗ ಮಂಗೋಲಿಯನ್ ಕೇಂದ್ರ ಬ್ಯಾಂಕ್ ತನ್ನ ನೀತಿ ದರ(policy rate)ವನ್ನು 450 ಮೂಲಾಂಕಗಳಷ್ಟು ಎತ್ತರಿಸಬೇಕಾಯಿತು. ಇದರಿಂದ ಅದರ ಕರೆನ್ಸಿ ಮತ್ತೆ ಅಪಮೌಲ್ಯಕ್ಕೀಡಾಯಿತು.

                   2011ರಲ್ಲಿ ತನ್ನ ಸಮೃದ್ಧ ಭೂಮಿಯನ್ನು ವಿದೇಶೀ ಕಂಪೆನಿಗಳಿಗೆ ಧಾರೆಯೆರೆದುಕೊಟ್ಟು ಮುಟ್ಠಾಳನಂತೆ ಮನೆ, ಸಂಬಳ-ಸವಲತ್ತು, ಸಮಾಜ ಕಲ್ಯಾಣಕ್ಕೆ ಬೇಕಾಬಿಟ್ಟಿ ಖರ್ಚು ಮಾಡಿ ಐಷಾರಾಮದ ಜೀವನ ನಡೆಸುತ್ತಾ, ವಿಪರೀತ ಸಾಲ ಮಾಡಿತು ಅಲ್ಲಿನ ಆಡಳಿತ ಪಕ್ಷ. ಪ್ರಮುಖ ಒಪ್ಪಂದಗಳನ್ನು ಜಾರಿಗೊಳಿಸುವಲ್ಲಿ ಮೀನ-ಮೇಷ ಎಣಿಸುತ್ತಿರುವಾಗ ಹೂಡಿಕೆದಾರರೂ ದೂರ ಸರಿದರು. ಮಂಗೋಲಿಯಾದಲ್ಲಿ ನೈಸರ್ಗಿಕ ಸಂಪತ್ತು ಬಹಳವಿತ್ತು ನಿಜ. ಆದರೆ ಗಣಿಗಾರಿಕೆಗೆ ಹಿಂದು ಮುಂದು ನೋಡದೆ ಬೇಕಾಬಿಟ್ಟಿಯಾಗಿ ಕೊಟ್ಟ ಅನುಮತಿ, ಅದರಿಂದಾಗಿ ಉಂಟಾದ ಆರ್ಥಿಕ ಅಸಮತೋಲನ, ಸರಿಯಾದ ಯೋಜನೆ-ದೂರದೃಷ್ಟಿಯಿಲ್ಲದ ಅಭಿವೃದ್ಧಿ, ಹಣಕಾಸು-ಉದ್ಯಮ ಕ್ಷೇತ್ರಗಳಲ್ಲಿ ಆಗದ ಬೆಳವಣಿಗೆ ಮಂಗೋಲಿಯಾವನ್ನು ಕಾಲಕ್ರಮೇಣ ದುರ್ಬಲವಾಗುವಂತೆ ಮಾಡಿದವು. ವಿದೇಶೀ ತಂತ್ರಜ್ಞಾನಗಳ ಮೇಲೆಯೇ ಅತ್ಯಂತ ಹೆಚ್ಚು ಅವಲಂಬಿತವಾಗಿರುವುದು ಮಂಗೋಲಿಯಾ ಕುಸಿದು ಬೀಳಲು ಬಹುಮುಖ್ಯ ಕಾರಣ. ಆಡಳಿತದಲ್ಲಿ ಹಾಸಿಹೊಕ್ಕಿರುವ ಭೃಷ್ಟಾಚಾರ, ಅದಕ್ಷ ಆಡಳಿತ ಮಂಗೋಲಿಯಾದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಅಸ್ಥಿರ ಸರಕಾರ, ಮುಂದುವರೆಯದೆ, ಜಾರಿಯಾದ ಕೆಲವೇ ಸಮಯದಲ್ಲಿ ಸ್ಥಗಿತಗೊಳ್ಳುವ ಸರಕಾರದ ಯೋಜನೆ-ನೀತಿಗಳಿಂದ ಉದ್ಯಮಗಳಿಗೆ ಸಮಯಕ್ಕೆ ಸರಿಯಾಗಿ ಅನುಮತಿ ಸಿಗದೆ, ಅವಶ್ಯಕ ಮೂಲ ಸೌಕರ್ಯಗಳು ಸಿಗದೆ ಹೂಡಿಕೆದಾರರು ಪರದಾಡುವಂತಾಯಿತು. ಪ್ರವಾಸೋದ್ಯಮ, ಸೇವೆ, ಉತ್ಪಾದನೆ, ಕೃಷಿ, ಹೈನುಗಾರಿಕೆ, ಹಣಕಾಸಿನಂಥ ಅವಕಾಶವಿದ್ದ ಉದ್ಯಮಗಳಿಗೆ ಪ್ರೋತ್ಸಾಹ ಕೊಡದೆ ಕೇವಲ ಗಣಿಗಾರಿಕೆಯ ಮೇಲೆ ಅವಲಂಬಿತವಾದ ಕಾರಣ ಹಣದ ಹರಿವೇ ನಿಂತು ಹೋಯಿತು.

                    ಅನೇಕ ತಜ್ಞರು ಐ.ಎಮ್.ಎಫ್ ಮತ್ತೊಮ್ಮೆ ಮಧ್ಯ ಪ್ರವೇಶಿಸಿ ಮಂಗೋಲಿಯಾವನ್ನು ಮೇಲೆತ್ತಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಂಗೋಲಿಯಾ ಐ.ಎಮ್.ಎಫ್ ನ ಸರಣಿ ಸಾಲಗಾರ. ಬೀಳುವ ಸ್ಥಿತಿಯಲ್ಲಿರುವ ಮಂಗೋಲಿಯಾಕ್ಕೆ ಮತ್ತೊಮ್ಮೆ ಸಾಲ ಕೊಡುವ ಬಗ್ಗೆಯೂ ಯೋಚಿಸಬೇಕಾಗುತ್ತದೆ. 2009ರಲ್ಲಿ ಐ.ಎಮ್.ಎಫ್ ನಿಂದ ಬೈಲ್ ಔಟ್ ಪಡೆದಿದ್ದ ಮಂಗೋಲಿಯಾದೊಂದಿಗಿನ ಹಣಕಾಸು ಸಮಾಲೋಚನೆಯೂ ಅಂತಿಮ ನಿರ್ಣಯವನ್ನು ತಳೆಯುವುದರ ಬಗ್ಗೆಯೂ ಸಂದೇಹಗಳಿವೆ. ಮುಖ್ಯವಾಗಿ ಮಂಗೋಲಿಯಾದ ಉಳಿವು ಅಗತ್ಯವಾಗಿರುವುದು ಚೀನಾಕ್ಕೆ. ಕಲ್ಲಿದ್ದಲು, ತಾಮ್ರ ಹಾಗೂ ಚಿನ್ನಗಳು ಕಡಿಮೆ ಬೆಲೆಗೆ, ಕಡಿಮೆ ಸಾಗಾಟ ವೆಚ್ಚದಲ್ಲಿ ಸಿಗುವ ಚಿನ್ನದ ಕೋಳಿಯಂತಿರುವ ತನ್ನ ನೆರೆಮನೆಯನ್ನು ಅದೇಕೆ ಕೈಬಿಡುತ್ತದೆ? ಹಾಗಾಗಿ ಐ.ಎಮ್.ಎಫ್ ಮುಂದೆ ಮಂಗೋಲಿಯಾ ಪರ ಚೀನಾ ವಕಾಲತ್ತು ವಹಿಸಬಹುದು.

                ಒಂದು ದೇಶ ಕಣ್ಮುಚ್ಚಿ ಕಮ್ಯೂನಿಷ್ಟ್ ಆಳ್ವಿಕೆಯನ್ನು ಸ್ವೀಕರಿಸಿದರೆ ಏನಾಗಬಹುದೆಂಬುದಕ್ಕೆ ನಿದರ್ಶನ ಮಂಗೋಲಿಯಾ. ಬಿದ್ದು ಹೋಗಿರುವ ವೆನಿಜುವೆಲ್ಲಾ ಕಣ್ಣಮುಂದೆ ಇರುವಾಗ ಎಚ್ಚೆತ್ತುಕೊಳ್ಳದೆ ಅದೇ ಸಮಾಜವಾದದ ಅಡಿಬಿದ್ದು ಒದ್ದಾಡುತ್ತಿರುವ ಮಂಗೋಲಿಯಾ ಮಕಾಡೆ ಮಲಗಿದಲ್ಲಿ ಯಾವ ಆಶ್ಚರ್ಯವೂ ಇಲ್ಲ. ಫಲವತ್ತಾದ ಭೂಮಿಯನ್ನು ಅನ್ಯರಿಗೆ ಮೇಯಲೊಪ್ಪಿಸಿ ತಾವು ಮನೆಯಲ್ಲಿ ಕೂತು ತಿಂದರೆ ಇನ್ನೇನಾದೀತು? ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು! ಮನಸ್ಸಿಗೆ ಬಂದ ಭಾಗ್ಯಗಳನ್ನು ಕೊಟ್ಟು, ಜನರನ್ನು ಸೋಮಾರಿಗಳನ್ನಾಗಿಸಿ, ಬೊಕ್ಕಸಕ್ಕೆ ಸಾಲದ ಹೊರೆಯನ್ನೇ ಹೊರಿಸಿ, ತಮ್ಮ ಖುರ್ಚಿ ಗಟ್ಟಿ ಮಾಡಿಕೊಳ್ಳುವ ಪ್ರತಿಯೊಬ್ಬ ನಾಯಕನೂ, ಆತನ ಭಕ್ತರೂ ಅರಿಯಬೇಕಾದ ಸತ್ಯವಿದು. ಎಲ್ಲಾ ಕ್ಷೇತ್ರಗಳಲ್ಲಿ FDI ತುರುಕಿಸಲು ಯತ್ನಿಸುವ ಪ್ರತಿಯೊಬ್ಬ ರಾಜನೀತಿಜ್ಞ ಮಂಗೋಲಿಯಾದ ನಿದರ್ಶನವನ್ನು ನೋಡಿಯಾದರೂ ತಮ್ಮ ರಾಜನೀತಿಯನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅವಶ್ಯಕತೆ ಇದೆ. ಮಾಹಿತಿ ತಂತ್ರಜ್ಞಾನವನ್ನೇ ಉದ್ಯೋಗಕ್ಕಾಗಿ ಅವಲಂಬಿಸಿರುವ ಜನಾಂಗ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲು ಯೋಜನೆ-ಯೋಚನೆ ಹೊಂದಿರದ ದೇಶಗಳು, ತಮ್ಮಲ್ಲಿರುವ ಭೂಮಿಯನ್ನು ಚಿನ್ನದ ತಟ್ಟೆಯಲ್ಲಿಟ್ಟು ವಿದೇಶೀ ಕಂಪೆನಿಗಳಿಗೆ ಒಪ್ಪಿಸುವ ರಾಷ್ಟ್ರಗಳು ಹಾಗೆಯೇ ತಮ್ಮ ಮೆದುಳನ್ನೇ ಪಾಶ್ಚಾತ್ಯ ಮಾನಸಿಕತೆಗೆ-ಮಿಷನರಿ ಕುತಂತ್ರಕ್ಕೆ-ಸಿಕ್ಯುಲರ್ ರಾಜಕಾರಣಕ್ಕೆ ಅಡವಿಡುವ ಮನಸ್ಸುಗಳು ವೆನಿಜುವೆಲ್ಲಾ, ಮಂಗೋಲಿಯಾದಂತೆ ಸಾಯುವ ದಿನ ದೂರವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ