ಪುಟಗಳು

ಮಂಗಳವಾರ, ಆಗಸ್ಟ್ 16, 2016

ಅರವಿಂದರೊಳಗೆ ಕಂಡ ಅರವಿಂದ ಲೋಚನನ ದೃಷ್ಟಿ

ಅರವಿಂದರೊಳಗೆ ಕಂಡ ಅರವಿಂದ ಲೋಚನನ ದೃಷ್ಟಿ

            "ರಾಷ್ಟ್ರವೆಂದರೆ ಭೂಮಿಯ ತುಣುಕಲ್ಲ; ಭಾಷಾಲಂಕಾರವಲ್ಲ; ಮನಸ್ಸಿನ ಕಲ್ಪನೆಯೂ ಅಲ್ಲ. ಅದೊಂದು ಪ್ರಬಲ ಶಕ್ತಿ. ಅದು ಕೋಟ್ಯಾಂತರ ದೇವತೆಗಳು ಒಂದು ಶಕ್ತಿ ಸಮೂಹವಾಗಿ ಏಕತ್ರವಾಗಿ ಭವಾನಿಯು ಎದ್ದು ಬಂದಂತೆ! ತಾಯಿ ಭಾರತಿಯು ಇಲ್ಲಿನ ಕೋಟ್ಯಾಂತರ ಜನಶಕ್ತಿಯ ಜೀವಂತ ಐಕ್ಯ ಸ್ವರೂಪಿಣಿ. ಆದರೆ ಆಕೆ ತನ್ನ ಮಕ್ಕಳ ತಮಸ್ಸು, ಜಡತೆಯ ವರ್ತುಲದಲ್ಲಿ ಬಂಧಿತಳಾಗಿ ನಿಷ್ಕ್ರಿಯಳಾಗಿದ್ದಾಳೆ. ಇದರರ್ಥ ಭಾರತ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲವಾಗಿದೆಯೆಂದಲ್ಲ. ಸ್ವ ಇಚ್ಛೆಯಿಂದ ಅಳಿವನ್ನು ಒಪ್ಪಿಕೊಳ್ಳದೆ ಯಾವುದೇ ವ್ಯಕ್ತಿ ಅಥವಾ ರಾಷ್ಟ್ರ ನಾಶವಾಗದು. ನಮ್ಮದು ಯುಗಯುಗಾಂತರಗಳ ನಾಡು. ತಾಯಿ ಭಾರತಿ ಜಗತ್ತಿಗೆ ಕೊಡಬೇಕಾದುದು ಇನ್ನೂ ಇದೆ. ಆಕೆಯಿನ್ನೂ ತನ್ನ ಅಂತಿಮ ಸೃಜನಾತ್ಮಕ ಮಂತ್ರವನ್ನು ಜಗತ್ತಿಗೆ ಕೊಡಬೇಕಷ್ಟೆ. ನಾವು ಈಗ ಜಾಗೃತಗೊಳಿಸಬೇಕಾದುದು ಆಂಗ್ಲೀಕರಣಕ್ಕೊಳಗಾದ ಪಶ್ಚಿಮದ ಯಶಸ್ಸು-ವೈಫಲ್ಯಗಳನ್ನು ಪುನರಾವರ್ತಿಸುವ ದೌರ್ಭಾಗ್ಯಕ್ಕೆ ಗುರಿಯಾದ ಪಶ್ಚಿಮದ ವಿಧೇಯ ಅನುಯಾಯಿಗಳನ್ನಲ್ಲ. ಬದಲಾಗಿ ತನ್ನ ಆತ್ಮವನ್ನು ಪುನಃ ಪಡೆಯಲು ಉದ್ಯುಕ್ತವಾಗಿ ಬ್ರಾಹ್ಮ-ಕ್ಷಾತ್ರಗಳ ಪರಮೋಚ್ಛತೆಯೆಡೆಗೆ ಸಾಗುತ್ತಾ ತನ್ನ ಧರ್ಮದ ಸಂಪೂರ್ಣ ಅರ್ಥ ಹಾಗೂ ಅದರ ವಿಸ್ತೃತ ರೂಪದ ಶೋಧಕ್ಕಾಗಿ ಸನ್ನದ್ಧವಾಗಿರುವ ಅವಿಸ್ಮರಣೀಯ ಶಕ್ತಿಯನ್ನು!"
ಕೃಷ್ಣನ ಜೀವನ ದೃಷ್ಠಿ ಮರುಕಳಿಸಿತೇ? ಚಾಣಕ್ಯನ ಕಾರ್ಯತಂತ್ರ ಗೋಚರಿಸಿತೇ? ಸ್ವಾತಂತ್ರ್ಯ ಹೋರಾಟವೆನ್ನುವುದು ಮುಸ್ಲಿಮರ ಓಲೈಕೆಯ - ಸ್ವಾರ್ಥದ ರಾಜಕಾರಣವಾಗಿ, ಕಮ್ಯೂನಿಷ್ಟ್ ಗೊಂದಲಗಳ ಆಡುಂಬೋಲವಾಗಿ ಬದಲಾಗುತ್ತಿದ್ದಾಗ ಅದಕ್ಕೆ ಪ್ರಾಚೀನ ಭಾರತದ ಪರಂಪರೆಯ-ಸಂಸ್ಕೃತಿಯ ಸ್ಪರ್ಷ ಕೊಟ್ಟು ಕ್ರಾಂತಿಕಾರಿಗಳ ಗುರುವಾಗಿ, ಭವಾನಿ ಮಂದಿರದ ಅಧ್ವರ್ಯುವಾಗಿ ತಕ್ಷಣದ ರಾಜಕೀಯ ಸ್ವಾತಂತ್ರ್ಯಕ್ಕಿಂತ ಪ್ರಾಚೀನ ಭಾರತಕ್ಕೆ ಭವ್ಯತೆಯನ್ನು ಒದಗಿಸಿಕೊಟ್ಟ ಆಧ್ಯಾತ್ಮ ದೀವಿಗೆಯನ್ನು ನಂದಾದೀಪವನ್ನಾಗಿರಿಸುವುದೇ ಭಾರತದ ಮರುಹುಟ್ಟಿಗೆ ಬೇಕಾದ ನಿಜವಾದ ಬೀಜರೂಪವೆಂದು ಗುರುತಿಸಿ ಆ ನಿಟ್ಟಿನಲ್ಲಿ ಸಾಗಿ ಮಹರ್ಷಿಯೆಂದೆನಿಸಿಕೊಂಡ, ಗುರುದೇವ ರವೀಂದ್ರರಿಂದ "ಭಾರತೀಯ ಚೇತನದ ಮುಕ್ತ, ಮೂರ್ತಿಮಂತ  ವಾಣಿ" ಎಂದು ಗೌರವಿಸಲ್ಪಟ್ಟ ಅರವಿಂದರಿಗೆ ಕೃಷ್ಣ-ಚಾಣಕ್ಯರು ಸ್ಪೂರ್ತಿಯಾಗಿದ್ದಲ್ಲಿ ಆಶ್ಚರ್ಯವೇನಿದೆ?

             ಅರವಿಂದರು ಭಾರತಕ್ಕೆ ಮರುಹುಟ್ಟು ಇದೆ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿದವರು. ಅದರ ಸೂಚನೆಯೇನೋ ಅನ್ನುವಂತೆ ಭಾರತಕ್ಕೆ ಸ್ವಾತಂತ್ರ್ಯವೂ ಅರವಿಂದರ ಜನ್ಮದಿನದಂದೇ ದೊರಕಿತು. ಆಂಗ್ಲ ಕಾಲಗಣನೆ ವೈಜ್ಞಾನಿಕವಲ್ಲ ಎನ್ನುವುದು ನಿಜವಾಗಿದ್ದರೂ ಅರವಿಂದರ ಹೆಸರು, ವಿಚಾರಗಳು ಇದರೊಂದಿಗೆ ತಳುಕು ಹಾಕಿರುವುದು ಕಾಕತಾಳೀಯವಾಗಿರಲಿಕ್ಕಿಲ್ಲ. ದೇಶದ ಜನತೆಗೆ ಈಗ ಅರವಿಂದರು ನೆನಪಾಗದಿದ್ದರೂ ಕಾಲ ಅವರನ್ನು ಸರಿಯಾದ ಸಮಯಕ್ಕೆ ನೆನಪಿಸಬಹುದು. 1872ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಅರವಿಂದರು ಬಾಲ್ಯಕಳೆದದ್ದು ಈಗ ಬಾಂಗ್ಲಾದಲ್ಲಿರುವ ರಂಗಪುರದಲ್ಲಿ. ಐದನೇ ವರ್ಷದಲ್ಲಿ ಅವರನ್ನು ಕಾನ್ವೆಂಟಿಗೆ ಸೇರಿಸಿದ ಹೆತ್ತವರು ಎಂಟನೆಯ ವಯಸ್ಸಿಗೆ ತಮ್ಮೊಂದಿಗೆ ಇಂಗ್ಲೆಂಡಿಗೆ ಕರೆದೊಯ್ದರು. ಇಪ್ಪತ್ತನೇ ವರ್ಷದಲ್ಲೇ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರವಿಂದರು ಮರು ವರ್ಷವೇ ಭಾರತಕ್ಕೆ ಮರಳಿದರು. ಅದೇ ಸಮಯಕ್ಕೆ ಇಂದುಪ್ರಕಾಶ ಎನ್ನುವ ಮರಾಠಿ-ಇಂಗ್ಲೀಷ್ ಪತ್ರಿಕೆಗೆ "ನ್ಯೂ ಲ್ಯಾಂಪ್ಸ್ ಫಾರ್ ದಿ ಓಲ್ಡ್" ಎನ್ನುವ ಹೆಸರಲ್ಲಿ ಸರಣಿ ಲೇಖನಗಳನ್ನು ಬರೆದರು. ಆಂಗ್ಲ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ಸಿನ ನೀತಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದ ಈ ಲೇಖನಸರಣಿ ಸಂಪಾದಕರ ಮೇಲೆ ಬಂದ ಧಮಕಿಯಿಂದ ನಿಂತು ಹೋಯಿತು.

              ತಮ್ಮ ಸೋದರ ಬಾರೀಂದ್ರ ಹಾಗೂ ಜತೀಂದ್ರರ ಸಹಾಯದಿಂದ ಕ್ರಾಂತಿಸಂಘಟನೆಗಳನ್ನು ಸಂಪರ್ಕಿಸಿ ಅವುಗಳ ಕಾರ್ಯವನ್ನು ಸಂಯೋಜಿಸಲು ಪ್ರಯತ್ನಿಸಿದರು ಅರವಿಂದರು. ಅದಕ್ಕಾಗಿ ಚಿತ್ತರಂಜನ್ ದಾಸ್, ಮಿತ್ರ, ಸೋದರಿ ನಿವೇದಿತಾ ಹಾಗೂ ಸುರೇಂದ್ರರೊಡಗೂಡಿ ರಹಸ್ಯ ಪರಿಷತ್ತನ್ನೂ ಸ್ಥಾಪಿಸಿದರು. ದೇಶವನ್ನು ಕ್ರಾಂತಿ ಹೋರಾಟಕ್ಕೆ ಸಜ್ಜುಗೊಳಿಸಲು ಭವಾನಿಮಂದಿರ ಎಂಬ ಕರಪತ್ರವನ್ನೂ ಹಂಚಿ ಅದರ ಸಿದ್ಧತೆಗೂ ತೊಡಗಿದರು. ಲಾಲ್, ಬಾಲ್, ಪಾಲ್ ರೊಡನೆ ಸೇರಿ ಸ್ವಾತಂತ್ರ್ಯ ಹೋರಾಟದ ಅಧ್ವರ್ಯುವಾದರು. ಅವರ ಸಂಪಾದಕತ್ವದಲ್ಲಿ "ವಂದೇಮಾತರಂ"ನ ಪ್ರಚಾರ-ಪ್ರಸಾರ-ಪ್ರಭಾವಗಳಿಂದ, ಬಂಗಾಳದ ರಾಷ್ಟ್ರೀಯ ವಿದ್ಯಾಲಯವನ್ನು ಸಹಯೋಗಿ ಸುಭೋದ್ ಮಲ್ಲಿಕನ ಸಹಾಯದಿಂದ ಸ್ಥಾಪಿಸಿ ವ್ಯಾಪಿಸಿದ ರಾಷ್ಟ್ರೀಯತೆಯ ದೀಕ್ಷೆಗಳಿಂದ ಬೆಚ್ಚಿದ ಆಂಗ್ಲ ಸರಕಾರ ಅವರನ್ನು ಬಂಧಿಸಿತು. ಸೂರತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಮಂದ ನಿಲುವಿನಿಂದ ರೋಸಿ ಹೋಗಿ ಅರವಿಂದರಿದ್ದ ರಾಷ್ಟ್ರೀಯತಾವಾದಿ ಪಕ್ಷ ಕಾಂಗ್ರೆಸ್ಸಿನಿಂದ ಬೇರೆಯಾಯಿತು. ಬರೋಡಾದಲ್ಲಿ ವಿಷ್ಣು ಭಾಸ್ಕರ ಲೇಲೆ ಎನ್ನುವ ಮಹಾರಾಷ್ಟ್ರೀಯ ಯೋಗಿಯ ಭೇಟಿಯ ಸಮಯದಲ್ಲಿ ಬ್ರಹ್ಮಪ್ರಜ್ಞೆಯ ಮೊದಲ ಅನುಭೂತಿ ಅವರಿಗುಂಟಾಯಿತು. ಆಲೀಪುರ ಬಾಂಬು ಪ್ರಕರಣದಲ್ಲಿ ಮತ್ತೆ ಸರಕಾರ ಅರವಿಂದರನ್ನು ಬಂಧಿಸಿತು. ಒಂದು ವರ್ಷದಲ್ಲಿ ಬಿಡುಗಡೆಯಾದ ಬಳಿಕ "ಕರ್ಮಯೋಗಿ" ಎನ್ನುವ ಆಂಗ್ಲ ಸಾಪ್ತಾಹಿಕ ಹಾಗೂ "ಧರ್ಮ" ಎನ್ನುವ ಬಂಗಾಳಿ ಸಾಪ್ತಾಹಿಕವನ್ನು ಅವರು ಆರಂಬಿಸಿದರು. ಅದೇ ಸಂದರ್ಭದಲ್ಲಿ ಭಾರತದ ಭವಿಷ್ಯಕ್ಕೆ ಬೇಕಾದ ಆಧ್ಯಾತ್ಮಿಕ ಶಕ್ತಿಯನ್ನು ಮನಗಂಡು ಆತ್ಮಶಕ್ತಿಯ ಉದ್ದೀಪನೆಗೆ ಪಾಂಡಿಚೇರಿಗೆ ಬಂದು ನೆಲೆಸಿದರು.

               ಪ್ರಾಚೀನ ಭಾರತದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರವಿಂದರ ಪ್ರತಿಪಾದನೆ ಬಹುಷಃ ಆ ಕಾಲದಲ್ಲಿನ ಯಾವ ಇತಿಹಾಸಕಾರನೂ ಯೋಚಿಸಿರದ ದಿಕ್ಕಿನಲ್ಲಿ ಸಾಗಿತ್ತು. ಅದೇ ಈಗ ಸೂರ್ಯ ಸತ್ಯದಂತೆ ನಮ್ಮ ಕಣ್ಣಮುಂದೆ ದಾಖಲೆ ಸಮೇತ ಧರ್ಮಪಾಲರ ಬರಹಗಳಲ್ಲಿ ದರ್ಶನವಿತ್ತಿದೆ. ಪ್ರಾಚೀನ ಭಾರತದ ಸಮಾಜ ಧರ್ಮದ ತಳಹದಿಯಲ್ಲಿ ನಿರ್ಮಾಣವಾಗಿತ್ತು ಎಂದರು ಅರವಿಂದರು. ಇಲ್ಲಿ ಧರ್ಮವೆಂದರೆ ಸಂಕುಚಿತ ಮತಾಚರಣೆಯಲ್ಲ. ನಮ್ಮ ಅಸ್ತಿತ್ವದ ಅತ್ಯುನ್ನತ ನಿಯಮವಾದ ಧರ್ಮ. ಅಲ್ಲಿದ್ದುದು ಸಮುದಾಯ ಸ್ವಾತಂತ್ರ್ಯ. ಪ್ರತಿಯೊಂದು ಸಮುದಾಯ ತನ್ನದೇ ಆದ ಧರ್ಮವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವಿತ್ತು. ತನ್ನೊಳಗೇ ಅದು ಸ್ವತಂತ್ರವಾಗಿತ್ತು. ಯಾವ ಹಾದಿ ಹಿಡಿಯಬೇಕೆಂಬುದು ವ್ಯಕ್ತಿಗೆ ಮುಕ್ತ ಆಯ್ಕೆಯ ವಿಷಯವಾಗಿತ್ತು. ಪ್ರತಿ ಗ್ರಾಮ - ನಗರಗಳೂ ರಾಜಕೀಯ ನಿಯಂತ್ರಣದಿಂದ ಮುಕ್ತವಾದ ತಮ್ಮದೇ ವ್ಯವಸ್ಥೆಯನ್ನು ಹೊಂದಿದ್ದವು. ಅದರೊಳಗಿನ ಪ್ರತಿಯೊಬ್ಬ ವ್ಯಕ್ತಿ ತನ್ನ ಅಭಿವೃದ್ಧಿಗೆ ಒಂದು ಪಥವನ್ನು ಬಿಟ್ಟು ಇನ್ನೊಂದನ್ನು ಆಯ್ದುಕೊಳ್ಳಲು ಸ್ವತಂತ್ರನಿದ್ದ. ರಾಜನು ಸಮುದಾಯದ ಹಕ್ಕನ್ನು ಉಲ್ಲಂಘಿಸುವಂತಿರಲಿಲ್ಲ. ಉಲ್ಲಂಘಿಸಿದರೆ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತಿತ್ತು. ನಮ್ಮ ಜನಾಂಗದ ಪ್ರತಿಭೆಯು ವಿಕಾಸಗೊಂಡ ರೂಪವದು. ಪ್ರತಿ ಸಮುದಾಯವೂ ತನ್ನ ಸ್ವಂತ ಹಿತಾಸಕ್ತಿಗೆ ಹೋರಾಡುತ್ತಿರಲಿಲ್ಲ. ರಾಷ್ಟ್ರೀಯ ಜೀವನವನ್ನು ಕೇಂದ್ರೀಕರಿಸಿದ ಧರ್ಮದ ಪರಿಕಲ್ಪನೆಯಿತ್ತು. ಅಲ್ಲಿ ಈಗಿನಂತೆ ಜಾತೀಯ ಸಂಸ್ಥೆಗಳಿರಲಿಲ್ಲ. ಸಮುದಾಯ ಜೀವನಕ್ಕೆ ಸಂಘಟಿತವಾದ ವೃತ್ತಿಪರ ಶ್ರೇಣಿಗಳಿದ್ದವು. ಆಡಳಿತ ಯಂತ್ರವು ಯಾಂತ್ರಿಕವಾಗಿರದೆ ನಮ್ಯಶೀಲವಾಗಿತ್ತು. ಮಹಮ್ಮದೀಯರು ಇದನ್ನೇ ಅನುಸರಿಸಿದರಾದರೂ ರಾಜನೇ ನಿರಂಕುಶ ಪ್ರಭುವೆಂಬ ಮಧ್ಯ ಏಷ್ಯಾದ ತಮ್ಮ ಕಲ್ಪನೆಯನ್ನೇ ಇಲ್ಲಿ ತಂದು ತುರುಕಿದರು. ಬ್ರಿಟಿಷರು ಈ ವ್ಯವಸ್ಥೆಯನ್ನು ಹೊಸಕಿ ಹಾಕಿದರು. ಭಾರತದಲ್ಲಿ ರಾಜಕೀಯ "ರಾಷ್ಟ್ರ"ದ ಕಲ್ಪನೆ ಇಲ್ಲದಿದ್ದಿರಬಹುದು. ಆದರೆ ಇಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ "ರಾಷ್ಟ್ರ" ಕಲ್ಪನೆಯಿತ್ತು. ಅದೇ ಭಾರತವನ್ನು ಆಸೇತುಹಿಮಾಚಲ ಬೆಸೆದಿತ್ತು. ಸಂಸದೀಯ ವ್ಯವಸ್ಥೆ ನಮ್ಮ ಜನತೆಗೆ ಸರಿ ಹೊಂದುವುದಿಲ್ಲ ಎನ್ನುವುದು ಅರವಿಂದರ ವಾದವಾಗಿತ್ತು.

               ಬರೋಡಾದಲ್ಲಿ ಬ್ರಹ್ಮ ಸಾಕ್ಷಾತ್ಕಾರದ ಮೊಟ್ಟ ಮೊದಲ ಅನುಭವವಾದ ಬಳಿಕ ಮಾಡಿದ ಅನೇಕ ಭಾಷಣಗಳಲ್ಲಿ ರಾಷ್ಟ್ರೀಯ ಶಿಕ್ಷಣದ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಗತಕಾಲದಿಂದ ಆರಂಭವಾಗಿ ವರ್ತಮಾನದ ಸಂಪೂರ್ಣ ಉಪಯೋಗ ಪಡೆದು ಶಕ್ತಿಶಾಲಿ ರಾಷ್ಟ್ರವೊಂದನ್ನು ನಿರ್ಮಿಸುವ ಅಗತ್ಯತೆಯನ್ನು ಅವರು ಸಾರಿ ಹೇಳಿದರು. ಭಾರತ ಅನಾದಿಯಿಂದ ಹೊಂದಿರುವ ಜ್ಞಾನ, ಚಾರಿತ್ರ್ಯ, ಉದಾತ್ತ ತತ್ತ್ವಗಳ ಭಂಡಾರವನ್ನು ಭಾರತಕ್ಕಾಗಿ ಉಳಿಸಿ ಯಂತ್ರ ನಿರ್ಮಾಣ ಮಾಡದೆ ವ್ಯಕ್ತಿ ನಿರ್ಮಾಣದ ಕಡೆಗೆ ಕರೆ ಕೊಟ್ಟರು. ನಮ್ಮ ಮಕ್ಕಳ ಮನಸ್ಸನ್ನು ರಾಷ್ಟ್ರಭಾವನೆಯಿಂದ ಉದ್ದೀಪನಗೊಳಿಸಬೇಕು. ಪ್ರತೀ ಹಂತದಲ್ಲೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ದೇಶಭಕ್ತ ನಾಗರಿಕರನ್ನಾಗಿಸುವಂತಹ ಸದ್ಗುಣಗಳ ಅಭ್ಯಾಸಕ್ಕೆ ಅಣಿಗೊಳಿಸಬೇಕು. ಇಂತಹ ಪ್ರಯತ್ನವಿಲ್ಲದಿದ್ದರೆ "ರಾಷ್ಟ್ರ"ವೆನ್ನುವುದು ನಿರ್ಮಾಣವಾಗದು. ಶಿಸ್ತಿಲ್ಲದ ರಾಷ್ಟ್ರೀಯತೆ, ದೇಶಭಕ್ತಿ, ಪುನರ್ನಿರ್ಮಾಣ ಇವು ರಾಷ್ಟ್ರಚೇತನದ ಭಾಗಗಳಾಗದೆ ಕೇವಲ ಶುಷ್ಕಪದಗಳಾಗಿ, ವಿಚಾರಗಳಾಗಿ ಬಿಡುತ್ತವೆ. ಕೇವಲ ಪಠ್ಯಪುಸ್ತಕಗಳು ಬೋಧಿಸುವ ದೇಶಭಕ್ತಿಯಿಂದ ಯಾವ ಉಪಯೋಗವೂ ಇಲ್ಲ. ಶಿಕ್ಷಣವೆಂದರೆ ಜ್ಞಾನಗಳಿಕೆ ಅಷ್ಟೇ ಅಲ್ಲ. ಗಳಿಸಿದ್ದನ್ನು ಉತ್ತಮ ರೀತಿಯಲ್ಲಿ ಬಳಸುವುದೂ ಮುಖ್ಯ. ಐರೋಪ್ಯ ಶಿಕ್ಷಣವು ನಮ್ಮ ಬುದ್ಧಿ, ಚಾರಿತ್ರ್ಯ ಹಾಗೂ ಅಭಿರುಚಿಗಳನ್ನು ಭೃಷ್ಟಗೊಳಿಸಿದೆ. ನಮ್ಮ ಪರಂಪರೆಯಿಂದ ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ದೂರ ಸರಿಯುವಂತೆ ಮಾಡಿದ ಈಗಿನ ಶಾಲೆಗಳು ಸ್ವಂತಿಕೆಯನ್ನು ತರಬಲ್ಲ ಅಭಿಲಾಶೆ-ಚೈತನ್ಯವನ್ನೇ ಉಡುಗಿಸಿವೆ. ಸಂಕುಚಿತವೂ ಭಾವಹೀನವೂ ಆದ ಇಂತಹ ಶಿಕ್ಷಣವನ್ನು ಪಡೆದ ವ್ಯಕ್ತಿ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಿ ಪಂಚಭೂತಗಳನ್ನು ತನ್ನ ಸೇವೆಗೆ ಇಳಿಸಿಕೊಂಡ ಆದರೆ ಚೇತನವನ್ನು ವಿಕಸಿತಗೊಳಿಸದ ಪಶುಸ್ವಭಾವದ ರಕ್ಕಸನಾಗಿಬಿಡುತ್ತಾನೆ. ಪರಂಪರೆಯನ್ನು ಜೀವಂತವಾಗಿರಿಸುವ ಋಜುತ್ವ, ಕಾಣ್ಕೆಯ ಸ್ಪೂರ್ತಿ, ಭಾರತೀಯ ದೃಷ್ಟಿಯ ಅಂತರ್ನೋಟಗಳ ಶಿಕ್ಷಣ ನಮ್ಮನ್ನು ಮತ್ತೆ ಔನ್ನತ್ಯಕ್ಕೆ ಏರಿಸಬಲ್ಲುದು ಎಂದು ಶಿಕ್ಷಣದ ಸ್ವರೂಪ ಸಿದ್ಧವಾಗಬೇಕಾದ ಬಗೆಗೆ ಸಲಹೆ ಮಾಡಿದ್ದರು.

                  ಅರವಿಂದರ ಜೊತೆಯಲ್ಲಿದ್ದ ಕ್ರಾಂತಿಸಂನ್ಯಾಸಿ ಭಾರತೀ ಕೃಷ್ಣರು ಮುಂದೆ ಪುರಿ ಹಾಗೂ ದ್ವಾರಕೆಗಳಿಗೆ ಶಂಕರ ಪೀಠಾಧಿಪತಿಯಾದರು. ವರ್ತಮಾನದಲ್ಲಿನ ಆಧ್ಯಾತ್ಮಿಕ ಶಕ್ತಿಯು ಭವಿಷ್ಯದಲ್ಲಿ ಭೌತಿಕ ಶಕ್ತಿಯನ್ನು ಸೃಷ್ಟಿಸುತ್ತದೆ. ವರ್ತಮಾನದಲ್ಲಿ ಭೌತಿಕ ಶಕ್ತಿಯ ಮೇಲುಗೈಯಾದರೆ ಆಧ್ಯಾತ್ಮಿಕ ಶಕ್ತಿಯು ಭವಿಷ್ಯವನ್ನು ರೂಪಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದರಿತ ಅರವಿಂದರು ಸಕ್ರಿಯ ರಾಜಕಾರಣದಿಂದ ದೂರವಾಗಿ ಆತ್ಮಶಕ್ತಿಯ ಜಾಗೃತಿಗಾಗಿ ಆಧ್ಯಾತ್ಮಿಕ ಪಥ ತುಳಿದರು. ಆ ನಂತರವೂ ಅವರು  ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಬಗ್ಗೆ ತಮ್ಮ ಸಲಹೆ ಕೇಳಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.  ತಮ್ಮ "ಸೀಕ್ರೆಟ್ ಆಫ್ ವೇದ" ಗ್ರಂಥದಲ್ಲಿ ಅರವಿಂದರು ವೇದಾರ್ಥವನ್ನು ಸಾಂಕೇತಿಕವಾಗಿ ವಿವರಿಸುವ ಮೂಲಕ "ಆರ್ಯ ಆಕ್ರಮಣ ಸಿದ್ಧಾಂತ"ವನ್ನು ಖಂಡಿಸಿದರು. ಅವರು ಆರ್ಯನೆಂದರೆ ಯಾವುದಕ್ಕೂ ಹೆದರದೆ, ಹಿಂಜರಿಯದೆ, ದೌರ್ಬಲ್ಯಕ್ಕೊಳಗಾಗದೆ ದೈವಿಕತೆಯ ಶಿಖರವನ್ನು ಹಂತಹಂತವಾಗಿ ಏರಲಿಚ್ಛಿಸುವ ಅಂತರಂಗ ಹಾಗೂ ಬಾಹ್ಯದಲ್ಲಿ ಆದರ್ಶದ ಔನ್ನತ್ಯದ ಆತ್ಮಸಂಸ್ಕಾರವುಳ್ಳವ ಎಂದು ವ್ಯಾಖ್ಯಾನಿಸಿದರು.


                 ಆ ಸಮಯದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅರವಿಂದ ಘೋಷ್ ಅಭಿಪ್ರಾಯಗಳು ಅವರು ಬರೆದ ಪತ್ರಗಳ ಮೂಲಕ ಸಿಗುತ್ತವೆ. ಮುಸ್ಲಿಮ್ ಪುಂಡುತನ ಹಾಗೂ ಕಾಂಗ್ರೆಸ್ಸಿನ ಓಲೈಕೆಯ ನೀತಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದರು ಅರವಿಂದರು. "ಪರರನ್ನು ಪೀಡಿಸುವವನು ಶೂರನೂ ಅಲ್ಲ, ಶಕ್ತಿವಂತನೂ ಅಲ್ಲ. ಹಿಂದೂವಿನ ಆತ್ಮನಿಯಂತ್ರಣ ಗುಣ ಅವನ ರಾಷ್ಟ್ರೀಯ ಸ್ವಭಾವದ ಲಕ್ಷಣ ಎನ್ನುವುದು ಅವನ ಹೇಡಿತನ ಎಂದು ಪರಿಗಣಿಸಿದರೆ ಅದು ಮೂರ್ಖತನ. ಮುಸ್ಲಿಂ ಅಧ್ಯಕ್ಷನನ್ನು ಆರಿಸುವುದರಿಂದ ಕಾಂಗ್ರೆಸ್ ವಿರೋಧಿ ಮುಸಲ್ಮಾನರ ಮನಸ್ಸನ್ನು ಓಲೈಸಬಹುದೆಂಬ ಕಾಂಗ್ರೆಸ್ಸಿನ ವಿಚಾರಧಾರೆ ಮೂರ್ಖತನದ್ದು. "ನಾನು ನಿನ್ನನ್ನು ಸಹಿಸಲಾರೆ" ಎನ್ನುವ ತತ್ವವಿರುವ ಮತದ ಜೊತೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರು ನಮ್ಮನ್ನು ಮತಾಂತರಗೊಳಿಸುತ್ತಲೇ ಸಾಗುತ್ತಾರೆ. ನಾವು ಅಹಿಂಸೆ ಎಂದು ಹೇಳುತ್ತಾ ಯಾವ ಮುಸಲ್ಮಾನನನ್ನೂ ಶುದ್ಧೀಕರಣಗೊಳಿಸದಿದ್ದರೆ ಐಕ್ಯತೆ ಬಿಡಿ, ನಾವೇ ಉಳಿಯಲಾರೆವು. ತಮ್ಮ ಪರವಾಗಿ ಹಾಗೂ ತಮ್ಮ ಹೆಸರಿನಲ್ಲಿ ಏನನ್ನು ಹೇಳಬೇಕು ಅಥವಾ ಹೇಳಬಾರದು, ಮಾಡಬೇಕು ಅಥವಾ ಮಾಡಬಾರದು ಎನ್ನುವುದನ್ನು ನಿರ್ಧರಿಸುವ ಸಾರ್ವಜನಿಕರ ಹಕ್ಕನ್ನು ಕಾಂಗ್ರೆಸ್ ಹುಟ್ಟಿದಂದಿನಿಂದ ಈ ರಾಷ್ಟ್ರೀಯ ಚಳುವಳಿಯ ನೇತಾರರು ನಿರಾಕರಿಸುತ್ತಲೇ ಬಂದಿದ್ದಾರೆ. ಆರೇಳು ಜನ ಗುಪ್ತ ಸಭೆ ನಡೆಸಿ ತೆಗೆದುಕೊಳ್ಳುವ ನಿರ್ಣಯವನ್ನು ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಸುಮ್ಮನೆ ಅನುಮೋದಿಸುವುದು ಕಾಂಗ್ರೆಸ್ಸಿನ ವೈಖರಿಯಾಗಿಬಿಟ್ಟಿದೆ. ಸರ್ವಾಧಿಕಾರಿಗಳಂತಾಗದೆ ಸೇವಕರಂತೆ ವರ್ತಿಸಿದಲ್ಲಿ ಮಾತ್ರ ನಾಯಕರು ಗೌರವಕ್ಕೆ ಅರ್ಹರಾಗುತ್ತಾರೆ. ರಾಜಕಾರಣ ಕ್ಷತ್ರಿಯನ ಕೆಲಸ. ತೋಳ್ಬಲವಿಲ್ಲದ ಮೆದುಳು ನಿರ್ವೀರ್ಯವಾದದ್ದು. ಸ್ವಾತಂತ್ರ್ಯಕ್ಕೆ ನೈತಿಕ ಅರ್ಹತೆ ಪಡೆಯಬೇಕಾದರೆ ನಾವು ಕ್ಷಾತ್ರ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಾಸ್ತವಾಂಶವನ್ನು ಎತ್ತಿ ಹಿಡಿಯಲು ಹೆದರುವ ಅತಿಯಾದ ಸಜ್ಜನಿಕೆ, ಚಕ್ಷು ಲಜ್ಜೆಯಿಂದ ಯಾವ ಉಪಯೋಗವೂ ಇಲ್ಲ! ಜನತೆಯ ನಡುವಿನ ಪ್ರತಿಯೊಂದು ಘಟಕವನ್ನು -ಪಂಡಿತ, ಕಾರ್ಮಿಕ, ರೈತ - ಸಂಘಟಿಸಿ ಯಾರು ಮುನ್ನಡೆಸುವನೋ ಅವನಿಗೇ ರಾಜಕೀಯದಲ್ಲಿ ಗೆಲುವೇ ಹೊರತು ವಾಗ್ಝರಿ ಹರಿಸುವ ಮಾತಿನ ಚತುರರಿಗಲ್ಲ. ಆದರೆ ಕಾಂಗ್ರೆಸ್ ಜನರಿಂದ ದೂರವಿದ್ದು ಬ್ರಿಟಿಷ್ ಸರಕಾರದೆಡೆ ಗಮನ ಹರಿಸಿ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ಸಿನ ಸ್ವಾರ್ಥದಾಟವನ್ನು ಅಂದೇ ಬಯಲಿಗೆಳೆದಿದ್ದರು.

             ಗಾಂಧಿಯವರ ಖಿಲಾಫತ್ ಅತಿರೇಕದಿಂದ ದೇಶಾದ್ಯಂತ ಹಿಂದೂಗಳು ಅಪಾರ ಹಾನಿಗೆ ತುತ್ತಾದಾಗ ಅರವಿಂದರು "ಹಿಂದೂ ಮುಸ್ಲಿಂ ಐಕ್ಯತೆಯೆಂದರೆ ಹಿಂದೂಗಳು ಅಧೀನರಾಗುವುದಲ್ಲ. ಹಿಂದೂಗಳ ಮೃದು ಗುಣ ಮುಸ್ಲಿಂ ದೌರ್ಜನ್ಯಕ್ಕೆ ಎಡೆಮಾಡಿದೆ. ಹಿಂದೂಗಳು ಸಂಘಟಿತರಾಗುವುದೇ ಇದಕ್ಕೆ ಪರಿಹಾರ. ಆಗ ಐಕ್ಯತೆ ತಾನಾಗಿಯೇ ಸಾಧಿತವಾಗುವುದು. ಮುಂದೊಂದು ದಿನ ಮುಸ್ಲಿಮರು ನಮ್ಮ ಮೇಲೆ ದಾಳಿಗೆ ಬಂದಾಗಲೂ ಇದು ನೆರವಾಗುವುದು" ಎಂದು ಸ್ಪಷ್ಟ ಶಬ್ಧಗಳಲ್ಲಿ ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯತೆಯನ್ನು ಹೇಳಿದ್ದರು.

              ಬಹುತೇಕ ನಾಯಕರು ಕುರಿಗಳಂತೆ ಗಾಂಧಿಯವರನ್ನು ಹಿಂಬಾಲಿಸಿದಾಗ ಕೆಲವೇ ಕೆಲವರು ಅವರ ಚಳುವಳಿಯ ಅನಿಶ್ಚಿತತೆಯನ್ನು, ಅದರಿಂದ  ದೇಶೀಯರಲ್ಲುಂಟಾಗಬಹುದಾದ ಗೊಂದಲವನ್ನು, ಭಾರತಕ್ಕಾಗಬಹುದಾದ ಹಾನಿಯನ್ನು ಮನಗಂಡು ದೇಶದ ಜನತೆಯನ್ನು ಎಚ್ಚರಿಸಿದ್ದರು. ಅಂತಹವರಲ್ಲಿ “ಕಾಂಗ್ರೆಸ್ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ತೋರುವ ಉತ್ಸಾಹ ಹೃದಯಪೂರ್ವಕವಾದುದಲ್ಲ. ನಿಷ್ಕಪಟವಾದುದೂ ಅಲ್ಲ. ಅದರ ನಾಯಕರುಗಳು ನಾಯಕರಾಗುವುದಕ್ಕೆ ಯೋಗ್ಯತೆಯನ್ನೇ ಹೊಂದಿಲ್ಲ” ಎಂದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ನಿರ್ಭೀತವಾಗಿ ಹೇಳಿದ್ದ ಅರವಿಂದರೂ ಒಬ್ಬರು. ಗಾಂಧಿಯವರ ಅಹಿಂಸಾ ಹೋರಾಟದ ಅನರ್ಥವನ್ನು ತಮ್ಮ ಶಿಷ್ಯರಿಗೆ ಅವರು ಈ ರೀತಿ ವಿವರಿಸಿದ್ದಾರೆ - ಮನುಷ್ಯ ಅಹಿಂಸೆಯನ್ನು ಕೈಗೊಂಡಾಗ ಶುದ್ಧಗೊಳ್ಳುತ್ತಾನೆ ಎಂದು ಗಾಂಧಿ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಸ್ವೈಚ್ಛೆಯಂದ ಯಾತನೆ ಅನುಭವಿಸಿದಾಗ ಪ್ರಾಣಕೋಶಗಳು ಬಲಗೊಳ್ಳುತ್ತವೆ. ಹಾಗಾಗಿ ಗಾಂಧಿಯವರ ಈ ಅಹಿಂಸಾ ಚಳುವಳಿ ಪ್ರಾಣಕೋಶಗಳನ್ನಷ್ಟೇ ಬಾಧಿಸುತ್ತದೆ. ದಬ್ಬಾಳಿಕೆ ನಡೆಸುವ ಶಕ್ತಿಯನ್ನು ಎದುರಿಸುವ ಸಾಮರ್ಥ್ಯವಿಲ್ಲದಿದ್ದಾಗ ಅದನ್ನು ಸಹಿಸಿ ಬವಣೆ ಅನುಭವಿಸುವುದರಿಂದ ಯಾವ ಪ್ರಯೋಜನವಿದೆ? ಯಾತನೆಯನ್ನುಂಡ ಮನುಷ್ಯ ಅಧಿಕಾರ ದೊರೆತಾಗ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾ ಪ್ರವೃತ್ತಿಯನ್ನಷ್ಟೇ ಪರಿವರ್ತಿಸಬಹುದು. ಆದರೆ ಸತ್ಯಾಗ್ರಹದ ಮಾರ್ಗದಿಂದ ಅದು ಸಾಧ್ಯವಿಲ್ಲ. ಹಿಂಸಾ ಪ್ರವೃತ್ತಿಯ ಶುದ್ಧೀಕರಣಕ್ಕೆ ಪ್ರಾಚೀನ ಕ್ಷಾತ್ರ ಪ್ರವೃತ್ತಿಯೇ ಬೇಕು. ಅದು ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುತ್ತಿತ್ತು. ಅದರ ಉನ್ನತ ಗುರಿ ಆಧ್ಯಾತ್ಮೀಕರಣವಾಗಿತ್ತು. ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲ ಎನ್ನುವುದು ಕೂಡಾ ಹಿಂಸೆಯೇ! ನಿಜವಾದ ಅಹಿಂಸೆ ಬಾಹ್ಯ ಕ್ರಿಯೆಯಲ್ಲಿ/ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವೂ ಅಹಿಂಸೆಯ ಉಲ್ಲಂಘನೆಯೇ! ಗಾಂಧಿಯವರು ಆಫ್ರಿಕಾದಿಂದ ಹಿಂದಿರುಗಿದ ನಂತರ ಅವರು ಪಡೆದ ರಿಯಾಯಿತಿಗಳೆಲ್ಲಾ ಏನಾದವು? ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತೇಕೆ? ಒಂದು ವೇಳೆ ಅಫ್ಘನ್ನರು ಭಾರತವನ್ನು ಆಕ್ರಮಿಸಿದರೆ ಅಹಿಂಸೆಯಿಂದ ಅವರನ್ನು ಎದುರಿಸಲು ಸಾಧ್ಯವೆ? ಗಾಂಧಿಯವರು ತಮ್ಮ ಗೀತೆಯ ವ್ಯಾಖ್ಯೆಯನ್ನು ಪ್ರಶ್ನಿಸಿದವರಿಗೆ ಹಾರಿಕೆಯ ಉತ್ತರ ನೀಡಿದರು. ಮಹರ್ಷಿ ದಯಾನಂದರು ವಿಗ್ರಹಾರಾಧನೆಯನ್ನು ರದ್ದು ಪಡಿಸಿ ವೇದಗಳ ಮೂರ್ತಿಪೂಜೆಯನ್ನು ಸೃಷ್ಟಿಸಿದ್ದಾರೆಂದು ಹೇಳುವ ಗಾಂಧಿಯವರು ತಾವು ಚರಕ-ಖಾದಿ-ಅಹಿಂಸೆಗಳ ಮೂಲಕ ಸೃಷ್ಟಿಸಿದ್ದೂ ಅದನ್ನೇ ಎನ್ನುವುದನ್ನು ಮರೆತಿದ್ದಾರೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ! ಗಾಂಧಿಯವರು ನೈತಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಒಂದೇ ಎಂದು ಪರಿಗಣಿಸಿದ್ದಾರೆ. ಗಾಂಧಿಯವರ ಉಪವಾಸವೆನ್ನುವುದು ಪಾಪಮಾರ್ಜನೆಗಾಗಿ ಇರುವ ಕ್ರೈಸ್ತರ ಕಲ್ಪನೆ. ಆತ ಬೋಧಿಸಿರುವುದೆಲ್ಲವೂ ಕ್ರೈಸ್ತ ಮತದಿಂದ ಎರವಲು ಪಡೆದದ್ದು. ಅವರ ರೂಪ ಭಾರತೀಯ. ಆದರೆ ಅಂತಃಸತ್ತ್ವ ಕ್ರೈಸ್ತಮತದ್ದು. ಅವರ ವ್ಯಕ್ತಿತ್ವವಂತೂ ನೀರಸ, ಅದು ಅವರು ತಮ್ಮ ಸಿದ್ಧಾಂತಗಳನ್ನು ಎರವಲು ಪಡೆದ ರಷ್ಯನ್ ಕ್ರೈಸ್ತರಿಗಿಂತಲೂ ನೀರಸ ಹಾಗೂ ಅವರ ಮನಸ್ಸು ಚಂಚಲ. ಟಾಲ್ ಸ್ಟಾಯ್, ಬೈಬಲುಗಳಿಂದ ಪ್ರಭಾವಿತರಾದ ಅವರ ಉಪದೇಶಗಳಲ್ಲಿ ಕೆಲ ಮಟ್ಟಿಗೆ ಜೈನ ಮತದ ಛಾಯೆಯಿದೆ. ಗಾಂಧಿಯವರ ಚಳುವಳಿ ಅಭಾಸಕ್ಕೂ, ಗೊಂದಲಕ್ಕೂ ಕಾರಣವಾಗುತ್ತದೆ. ಭಾರತದ ರಾಜಕಾರಣಿಗಳು ವಿಚಾರಹೀನರಾಗಿ ಗಾಂಧಿಯ ಖಿಲಾಫತ್ತಿಗೆ ಬೆಂಬಲ ಸೂಚಿಸಿದರು. ವಾಸ್ತವತೆಯನ್ನು ನೇರವಾಗಿ ಎದುರಿಸುವ ಬದಲು ತಮ್ಮ ಮಾನಸಿಕ ವಿಚಾರಗಳ ಬಲದಿಂದ ಮುಸಲರ ದೌರ್ಷ್ಟ್ಯವನ್ನು ಎದುರಿಸುವ ಅರ್ಥಹೀನ ಪ್ರಯತ್ನ ಮಾಡಿದರು. ಅಸಹಕಾರ ಚಳುವಳಿ ಅಸತ್ಯದ ಮೇಲೆ ನಿಂತಿದೆ. ಸ್ವರಾಜ್ಯಗಳಿಕೆ ನೂಲುವುದರಿಂದ ಸಾಧ್ಯವೇ? ಗ್ರಾಮಸಂಘಟನೆಗಳ ಮಾತಾಡುವ ಗಾಂಧಿಯವರು ಮೊದಲು ಹಳ್ಳಿಗಳಿಗೆ ಜೀವ ತರಲಿ. ಆಗ ಅವು ತಾವಾಗಿ ಸಂಘಟನೆಗೊಳ್ಳುತ್ತವೆ. ಗಾಂಧಿಯವರು ಗೋಪ್ಯತೆಯನ್ನು ಪಾಪ ಎಂದಿದ್ದಾರೆ. ಆದರೆ ಅದು ಅವರ ಅತಿರೇಕಗಳಲ್ಲೊಂದು ಅಷ್ಟೇ!  

                ಆಧುನಿಕ ವೃತ್ತ ಪತ್ರಿಕೆಗಳು ಕಪೋಲಕಲ್ಪಿತ ವರದಿಯನ್ನು ಪ್ರಕಟಿಸುತ್ತವೆ. ಜನಸಾಮಾನ್ಯರ ರಂಜನೆಗೆ ಅವು ಇಳಿಯುವ ಕಾರಣ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತವೆ ಎಂದಿದ್ದರು ಅರವಿಂದರು. 1950ರಲ್ಲಿ ಅರವಿಂದರು ಚೀನಾ ನೈಋತ್ಯ ಏಷ್ಯಾ ಹಾಗೂ ಟಿಬೆಟುಗಳನ್ನು ನುಂಗಿ ನೊಣೆದು ಭಾರತದ ಭದ್ರತೆಗೆ ಬೆದರಿಕೆಯೊಡ್ಡಬಹುದು ಎಂದು ಎಚ್ಚರಿಸಿದ್ದರು. ಅವರು ಹೇಳಿದ ಆರುತಿಂಗಳಲ್ಲೇ ಚೀನಾ ಟಿಬೆಟನ್ನು ಆಕ್ರಮಿಸಿತು. 1962 ರಲ್ಲಿ ಭಾರತದ ಮೇಲೂ ದಾಳಿಯೆಸಗಿತು.

                 1950ರ ಡಿಸೆಂಬರ್ 5ರಂದು ಅರವಿಂದರು ತಮ್ಮ ಕಾಯ ತ್ಯಜಿಸಿದರು. ಜೀವಿತದ ಮೊದಲ ಇಪ್ಪತ್ತು ವರ್ಷಗಳನ್ನು ಪಾಶ್ಚಾತ್ಯ ಸಂಸ್ಕೃತಿಯ ಪರಿಧಿಯೊಳಗೆ ಬೆಳೆದ ಅರವಿಂದರನ್ನು ತಾಯಿನಾಡು ಕೂಗಿ ಕರೆಯಿತು. ಮುಂದಿನ ಎಂಟು ವರುಷಗಳಲ್ಲಿ ತಮ್ಮ ಸಿದ್ಧಾಂತವನ್ನು ಪಕ್ವಗೊಳಿಸುವ ಪ್ರಕ್ರಿಯೆ ಮೊದಲಾಯಿತು. 1900 ಸುಮಾರಿಗೆ ಬಂಗಾಳ ಹಾಗೂ ಮಹಾರಾಷ್ಟ್ರಗಳ ಕ್ರಾಂತಿಸಂಘಟನೆಗಳ ಸಂಪರ್ಕವುಂಟಾಯಿತು. ಕ್ರಾಂತಿ ದೀಕ್ಷಿತರಾದರು. ಮುಂದಿನ ಹತ್ತು ವರುಷಗಳು ಮಾತೃಭೂಮಿಯನ್ನು ವಿದೇಶೀ ಆಡಲಿತದ ಕಪಿಮುಷ್ಠಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. ಅವರಿಗೆ ಭಾರತಿ ತಾಯಿಯ ರೂಪದಲ್ಲಿ ಕಂಡಳು. ಅದರ ಫಲವೇ  "ಭವಾನಿಮಂದಿರ!". 1908ರ ಸುಮಾರಿಗೆ ಉಂಟಾದ ಬ್ರಹ್ಮಪ್ರಜ್ಞೆಯ ಅನುಭೂತಿ ಎರಡು ವರುಷಗಳಲ್ಲಿ ಅವರನ್ನು ಪಾಂಡಿಚೇರಿಗೆ ಒಯ್ಯಿತು. ವೇದಗಳ ಮೇಲೆ ನಡೆಸಿದ ಆಳವಾದ ಅಧ್ಯಯನ ಬ್ರಹ್ಮಸತ್ಯದ ಸಾರ ಹಾಗೂ ಪ್ರಾದುರ್ಭಾವದ ಸತ್ಯವನ್ನು ಅರಸುವತ್ತ ಅವರನ್ನು ಪ್ರೇರೇಪಿಸಿತು. ಆಗ ಅವರಿಗಾದ "ದರ್ಶನ" ಭೂಮಿಯನ್ನು ಮೃತಪಾಯವಾಗಿರುವ ಯುಗದಿಂದ ಬಿಡಿಸುವ ಕಾರ್ಯದಲ್ಲಿ ಅನುವಾಗುವಂತೆ ಮಾಡಿತು. ಕಾಲಗರ್ಭದಲ್ಲಿ ತುಕ್ಕು ಹಿಡಿದಿರುವ ಮಾನವ ಜನಾಂಗದ ಭವಿಷ್ಯದ ಕೀಲಿಕೈ ಭಾರತದಲ್ಲಿದೆ. ನಿದ್ರಾವಸ್ಥೆಯಲ್ಲಿರುವ ಅದನ್ನು ಎಚ್ಚರಿಸಲು ಆಧ್ಯಾತ್ಮಿಕ ಶಕ್ತಿಸಂಚಯನವೇ ಅಗತ್ಯವೆಂದು ಮನಗಂಡು ಮುಂದಿನ ನಲವತ್ತು ವರುಷಗಳ ಕಾಲ ಅಂತರ್ಮುಖಿಯಾದ ಆ ಯೋಗಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ