ಬರಿಯ ಕಲ್ಲು ಗುಡಿಯಲ್ಲ; ಅದು ದೇಶದ ಅಸ್ಮಿತೆಯ ಪ್ರತೀಕ!
1926ರಲ್ಲಿ ವಾರ್ಸಾದಲ್ಲಿ ಅಲೆಕ್ಸಾಂಡರ್ ನೆವ್ಸ್ಕಿ ಕೆಥೆಡ್ರಲನ್ನು ಕೆಡವಿ ಹಾಕಲಾಯಿತು. ಹಲವು ಚರ್ಚುಗಳೂ ನೆಲಸಮವಾದವು. ಕಾರಣವಿಷ್ಟೇ ಅವನ್ನು ರಷ್ಯಾದ ದೊರೆಗಳು ನಿರ್ಮಿಸಿದ್ದರು ಎನ್ನುವುದು. ಪೋಲಂಡ್ ಕೂಡಾ ಕ್ರೈಸ್ತರೇ ಬಹುಸಂಖ್ಯಾತರಾಗಿರುವ ದೇಶ. ಆದರೆ ಈ ಕೆಥೆಡ್ರಿಯಲ್ ರಷ್ಯನ್ ಚಕ್ರಾಧಿಪತ್ಯದ, ಪೋಲಂಡಿನ ರಾಷ್ಟ್ರೀಯತೆಯನ್ನು, ಸ್ವಾಭಿಮಾನವನ್ನು ಅಣಕಿಸುವ ಸಂಕೇತವೆಂದೇ ಪೋಲಂಡಿಗರ ಅಭಿಪ್ರಾಯವಾಗಿತ್ತು. ಹಾಗಾಗಿಯೇ ಗುಲಾಮೀತನದ ಸಂಕೇತವಾಗಿದ್ದ ಆ ಕಟ್ಟಡ ನಿರ್ಮಾಣಗೊಂಡ ಹದಿನೈದೇ ವರ್ಷಗಳಲ್ಲಿ ನೆಲಸಮಗೊಂಡಿತು. ದೂರ ದೇಶಗಳೇಕೆ, ನಮ್ಮ ದೇಶದಲ್ಲೇ ಸ್ವಾತಂತ್ರ್ಯ ಸಿಕ್ಕಿದ ಹೊಸತರಲ್ಲೇ ಇಂಡಿಯಾ ಗೇಟ್ ಬಳಿ ಇದ್ದ ಕಿಂಗ್ ಜಾರ್ಜನ ಪ್ರತಿಮೆಯನ್ನು ತೆರವುಗೊಳಿಸಲಾಯಿತು. ಚಾಂದನೀ ಚೌಕದಿಂದ ವಿಕ್ಟೋರಿಯಾ ಪ್ರತಿಮೆಯನ್ನು ಕಿತ್ತು ಹಾಕಲಾಯಿತು. ಗುಲಾಮೀತನವನ್ನು, ಅದರ ಸಂಕೇತವನ್ನು ಯಾವ ದೇಶವೂ, ಯಾವ ಜೀವಿಯೂ ಸಹಿಸಿಕೊಳ್ಳುವುದಿಲ್ಲ ಎನ್ನುವುದಕ್ಕೆ ನಮ್ಮಲ್ಲೇ ಇರುವ ನಿದರ್ಶನಗಳಿವು. ಅಂತಹುದರಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಇದೇ ದಿನ ಗುಲಾಮೀತನದ ಸಂಕೇತವೊಂದು ನೆಲಕ್ಕುರುಳಿದುದು ಮತಾಂಧತೆಯ ಪ್ರತೀಕವಾಗುತ್ತದೆಯೆಂದಾದರೆ ಆ ಸೆಕ್ಯುಲರ್ ಚಿಂತನೆಯಲ್ಲಿ ದೋಷವಿದೆಯೆಂದೇ ಅರ್ಥ!
ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯರ ನೆಲವದಾಗಬೇಕು ಎನ್ನುವ ಭಾವನೆಯಿಂದ ಬಂದ ಹೆಸರು ಅಯೋಧ್ಯೆ. ಅಂತಹ ಪಾವನ ನೆಲ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಇತಿಹಾಸಕಾರ ಬಾರಾಬಂಕಿ ತನ್ನ "ಗೆಜೆಟಿಯರ್"ನಲ್ಲಿ ಬಾಬರ್ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ ಎಂದು ಬರೆದಿದ್ದಾನೆ.
ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ಉಲ್ಲೇಖವಿದೆ. ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ. 1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ.
ಗುಲಾಮಗಿರಿಯ ಸಂಕೇತವನ್ನು ಕಿತ್ತೊಗೆದು ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದದ್ದು ಒಂದೆರಡಲ್ಲ; ಬರೋಬ್ಬರಿ 76 ಯುದ್ಧಗಳು! ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ನಡೆದವು. ಇಷ್ಟು ಯುದ್ಧಗಳು ನಡೆದದ್ದು ಹಿಂದೂಗಳಿಗೆ ಬೇರೆ ಕೆಲಸವಿರಲಿಲ್ಲವೆಂದಲ್ಲ. ಭಾರತೀಯರಿಗೆ ಧರ್ಮವೇ ಉಸಿರು. ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಅವರು ಜೀವದ ಹಂಗು ತೊರೆದು ಹೋರಾಡಿದುದರಲ್ಲಿ ಆಶ್ಚರ್ಯವೇನಿದೆ? 1885ರಲ್ಲಿ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆಯನ್ನು ಮಾಡಲಾರಂಭಿಸಿದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅವರಿಗೆ ಅನುಮತಿ ದೊರಕಲಿಲ್ಲ. 1934ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂಗಳು ಬಾಬರಿ ಮಸೀದಿಯಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡು ಗುಮ್ಮಟಗಳ ದುರಸ್ತಿಗಾಗಿ ಹಿಂದೂಗಳಿಂದಲೇ ದಂಡವನ್ನೂ ಕಟ್ಟಿಸಿಕೊಂಡಿತು. ಈ ಪಾವನ ಕ್ಷೇತ್ರದಲ್ಲಿ 1940ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. 22 ಡಿಸೆಂಬರ್ 1949ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ 1986ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧನದಲ್ಲಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. 1980ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ 1986ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು. 1989ರ ನವೆಂಬರ್ 10ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲರಿಂದ ನೆರವೇರಿತು. ಶ್ರೀರಾಮ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎನ್ನುವುದಕ್ಕೆ ನಿದರ್ಶನವಿದು. ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕರಸೇವೆಗಳು ನಡೆದವು. 1990ರ ಅಕ್ಟೋಬರ್ 30ರಂದು ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ನಡೆಸುತ್ತಿದ್ದ ಸ್ವಯಂಸೇವಕರ ಮೇಲೆ ಗುಂಡುಹಾರಿಸುವ ಆಜ್ಞೆಯನ್ನು ಅರೆಸೇನಾಪಡೆಗಳಿಗೆ ಮಾಡಿದ ಮುಲಾಯಮ್ ಸಿಂಗ್ ಯಾದವ್ ಸತ್ತವರ ಲೆಕ್ಕ ಸಿಗಬಾರದೆಂಬ ದುರುದ್ದೇಶದಿಂದ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು.
ಭಾರತೀಯ ರಕ್ತವಲ್ಲದವನ ಮಸೀದಿಯ ನೆಲಸಮಾಧಿಯಾಗಿದೆ. ಆದರೆ ಧರ್ಮ-ಸಂಸ್ಕೃತಿಯ ರಕ್ಷಣೆಗೆ ಮಾಧ್ಯಮವೂ, ವಾಹಕವೂ ಆದ ನಮ್ಮ ಅಸ್ಮಿತೆಯ ಪ್ರತೀಕದ ಮರುಪ್ರತಿಷ್ಠೆಯಾಗದೇ ಪಡೆದ ಸ್ವಾತಂತ್ರ್ಯಕ್ಕೆ ಏನು ಅರ್ಥವಿದೆ? ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ ಅವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು. ಅಂತಹ ಅಸ್ಮಿತೆಯ ಪ್ರತೀಕವನ್ನು, ಮಾನವೇಂದ್ರನಾದ ಮನುವಿನಿಂದ ನಿರ್ಮಾಣವಾದ ನಗರದಲ್ಲಿ ಆದರ್ಶಮಾನವನ ಪುತ್ಥಳಿಯನ್ನು ಮತ್ತೆ ಸ್ಥಾಪಿಸಲು ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ