ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ
ಸ್ನಾನ ಮಾಡುವುದಿಲ್ಲವಂತೆ! ಊಟವಿಲ್ಲ, ನಿದ್ರೆಯಿಲ್ಲ; ಒಂದೆಡೆ ಕೂರದೆ ಸದಾ ಅತ್ತಿಂದಿತ್ತ ಓಡಾಡುತ್ತಲೇ ಇರುವರಂತೆ! ಉಡುಗೆಯ ಮೇಲೆ ಎಚ್ಚರವಿಲ್ಲ. ಮಾತಿನಲ್ಲಿ ಅರ್ಥವಿಲ್ಲ! ನಿತ್ಯಾಹ್ನಿಕವಿಲ್ಲ, ಶಾರದೆಯ ಪೂಜೆಯಿಲ್ಲ; ನರಸಿಂಹ ವನದಲ್ಲಿ ಏನನ್ನೋ ಗುನುಗುನಿಸುತ್ತಾ ಓಡಾಡುವರಂತೆ! ಮನಸ್ಸು ಉದ್ವಿಗ್ನವಾಗಿದೆಯಂತೆ! ಅವರಿಗೆ ಬುದ್ಧಿ ಭ್ರಮಣೆಯಂತೆ; ಪೂರ್ವಾಶ್ರಮದ ತಾಯಿ ತೀರಿಕೊಂಡ ಮೇಲೆ ಅದು ಹೆಚ್ಚಿದೆಯಂತೆ!ನಂಜನಗೂಡಿನ ಅರಮನೆಯ ಮುಂಭಾಗದ ಮನೆ. ಮನೆಯ ಮುಂಭಾಗದ ಸಣ್ಣ ಕೋಣೆಯಲ್ಲಿ ಹದಿನೈದು - ಇಪ್ಪತ್ತು ಮಂದಿ ನಿಂತಿದ್ದಾರೆ. ಎಲ್ಲರೂ ಭಕ್ತಿ ಪರವಶರು. ಕೆಲವರು ಕೈಮುಗಿದು, ಕೆಲವರು ಕಣ್ಮುಚ್ಚಿ, ಕೆಲವರು ಕೈಕಟ್ಟಿ, ಕೆಲವರು ನೆಲನೋಟಕರಾಗಿ ನಿಂತಿದ್ದಾರೆ. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ತುಸು ಸಮಯದ ಬಳಿಕ ಮಿಂಚು ಕೋರೈಸಿದಂತಾಯ್ತು; ಕೋಣೆಯ ತುಂಬಾ ಹೊಂಬೆಳಕೊಂದು ಮೂಡಿದಂತಾಯ್ತು! ಒಂದು ಅಪೂರ್ವವಾದ ಅಲೌಕಿಕ ದೃಶ್ಯ ಕಾಣಿಸಿದಂತಾಯ್ತು. ಎಲ್ಲರೂ ಬೆಚ್ಚಿ ಕೋಣೆಯ ಒಳಬಾಗಿಲ ಕಡೆ ದೃಷ್ಟಿ ಹರಿಸಿದರು. ಅವರೇ, ಬುದ್ಧಿ ಭ್ರಮಣೆಯಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದ ಸ್ವಾಮಿಗಳು ಆಗತಾನೆ ಹೊಸ್ತಿಲನ್ನು ದಾಟಿ ಕೋಣೆಗೆ ಬಂದು ನಿಂತಿದ್ದರು. ಅವರ ಹಿಂಬಂದಿ ಎಡಬಲಗಳಲ್ಲಿ ಸೇವಕರಿಬ್ಬರು. ಕೃಶ ಶರೀರಿ, ಆಕರ್ಷಕವಾಗಿ ತೋರದ ಮೈಕಟ್ಟು, ಬಣ್ಣ. ನಡುವಿಗೂ, ಹೊದೆಯಲೂ ಒಂದೇ ಶುಭ್ರ ಕಾವಿ ಬಟ್ಟೆ; ಅದಕ್ಕೆ ಮೆರುಗೂ ಇರಲಿಲ್ಲ, ಅಂಚೂ ಇರಲಿಲ್ಲ! ಕೊರಳಲ್ಲಿ ರುದ್ರಾಕ್ಷಿ ಮಾಲೆಯಿಲ್ಲ; ಕಾಲುಗಳಲ್ಲಿ ಹಾವುಗೆಯೂ ಇಲ್ಲ. ಜಗದ್ಗುರುವಿನ ಆಡಂಬರವೂ ಇಲ್ಲ. ಬಡ ಸಂನ್ಯಾಸಿಯಂತೆ ತೋರುತ್ತಿದ್ದರು. ಆದರೆ ಆ ಮುಖದ ಮೇಲಿನ ಅಪೂರ್ವವಾದ ಕಳೆ ನೋಡಿದವರ ಕಣ್ಣು ಕೋರೈಸುವಂತಿತ್ತು. ತುಟಿಗಳಲ್ಲಿ ಒಸರುತ್ತಿದ್ದ ಮಂದಹಾಸ ನೆರೆದವರ ಮನವನ್ನು ತಣಿಸಿತ್ತು. ಅಲ್ಲಿ ನೀರವ ಮೌನ. ಸೇರಿದವರಿಗೆ ಸ್ವಚ್ಛ ಸಲಿಲದಲ್ಲಿ ಮಿಂದು, ತಂಗಾಳಿಗೆ ಮೈಯೊಡ್ಡುತ್ತಿರುವ ಅನುಭವ! ಐದು ನಿಮಿಷಗಳ ಬಳಿಕ ಆ ಪ್ರಕಾಶ ಕಡಿಮೆಯಾದಂತೆ ಅನಿಸಿತು. ನೋಡಿದರೆ ಸ್ವಾಮಿಗಳು ಬೆನ್ನು ತಿರುಗಿಸದೆ ಹಾಗೆಯೇ ಕಾಲುಗಳನ್ನು ಹೊಸ್ತಿಲ ಹಿಂದಕ್ಕಿಟ್ಟು ಕೋಣೆಯ ಹೊರನಡೆದಿದ್ದಾರೆ. ಅವರ ಎಡಬಲದಲ್ಲಿದ್ದ ಸೇವಕರಷ್ಟೇ ಕಾಣಿಸುತ್ತಿದ್ದಾರೆ.
ಬುದ್ಧಿಭ್ರಮಣೆಯಾಗಿದೆಯೆಂದು ಜನ ಆಡಿಕೊಳ್ಳುತ್ತಿದ್ದ ವ್ಯಕ್ತಿಯ ಅಲೌಕಿಕ ರೂಪ ಅದು. ಅವರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು. ಶೃಂಗೇರಿ ಮಠದ ಪರಂಪರೆಯ ಮೂವತ್ನಾಲ್ಕನೇ ಪೀಠಾಧಿಪತಿಗಳು. ಅವರ ಪೂರ್ವಾಶ್ರಮದ ಹೆಸರು ಪಟಗುಪ್ಪೆ ಈಶ್ವರೀ ನರಸಿಂಹ ಶಾಸ್ತ್ರಿ. ಸಾಗರ ಮತ್ತು ನಗರಗಳ ನಡುವೆ ಕುಶಾವತೀ ನದಿ ದಂಡೆಯ ಮೇಲಿನ ಸಣ್ಣ ಅಗ್ರಹಾರ ಈ ಪಟಗುಪ್ಪೆ. ಈಶ್ವರೀ ಎನ್ನುವುದು ಮನೆತನದ ಹೆಸರು. ಅವರ ಪಿತಾಮಹ ಸುಬ್ಬಾಶಾಸ್ತ್ರಿಗಳು ಘನಪಂಡಿತರು. ಅವಧೂತರಾಗಿ ಹಿಮಾಲಯದತ್ತ ತೆರಳಿದವರು. ಅಪ್ಪ ಗೋಪಾಲಶಾಸ್ತ್ರಿ, ಅಮ್ಮ ಲಕ್ಷ್ಮಮ್ಮನದ್ದು ಕಪಟವರಿಯದ ಸರಳ ಜೀವನ. ಇದ್ದುದರಲ್ಲಿ ತೃಪ್ತರಾಗುವ, ಹೆಚ್ಚು ಗಳಿಸುವ ಆಶೆಯಿಲ್ಲದ, ಹೆರವರನ್ನು ನೋಡಿ ಕರುಬದ, ಜನರ ಗುಂಪಿನಲ್ಲಿ ಬೆರೆಯದ ತಮ್ಮ ಪಾಡಿಗೆ ತಾವಿರುವ ಹಸುವಿನಂತಹ ಮುಗ್ಧತೆ ಅವರದ್ದು. ಅದೇ ಸ್ವಭಾವವನ್ನು ಮೈವೆತ್ತಿಕೊಂಡು ಅವರ ಹದಿನಾಲ್ಕನೆಯ ಕುಡಿಯಾಗಿ ಹುಟ್ಟಿ ಉಳಿದು, ಉಳಿಸಿ, ನಾಡ ಬೆಳಗಿದ ಮಗುವೇ ನರಸಿಂಹ. ನಂದನ ಸಂವತ್ಸರದ ಆಶ್ವೀಜ ಬಹುಳ ಏಕಾದಶಿ(1892, ಅಕ್ಟೋಬರ್ 16)ರಂದು ಭುವಿಗಿಳಿದ ಈ ಪ್ರಭೆ ನರಸಿಂಹನಾಗಿ, ಚಂದ್ರಶೇಖರನಾಯಿತು; ಸಾವಿರಾರು ಸಾಧಕರಿಗೆ ದಾರಿದೀಪವಾಯಿತು.
ಲೋಯರ್ ಸೆಕೆಂಡರಿಯವರೆಗೆ ಆಧುನಿಕ ಶಿಕ್ಷಣವನ್ನು ಪಡೆದ ನರಸಿಂಹ. ಮುಂದೆ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಅಪ್ಪಣೆಯಂತೆ ಶೃಂಗೇರಿಯ ಪ್ರಾಚೀನ ವಿದ್ಯಾಶಿಕ್ಷಣ ಶಾಲೆ "ಸದ್ವಿದ್ಯಾಸಂಜೀವಿನೀ"ಯಲ್ಲಿ ತರ್ಕ, ವ್ಯಾಕರಣಗಳನ್ನು ಮುಗಿಸಿ ಬಳಿಕ ಸ್ವಾಮಿಗಳ ಅಪೇಕ್ಷೆಯಂತೆ ಬೆಂಗಳೂರಿನ ಶಂಕರ ಮಠದಲ್ಲಿ ಅವರಿಂದಲೇ ನಿರ್ಮಿಸಲ್ಪಟ್ಟ "ಗೀರ್ವಾಣಪ್ರೌಢವಿದ್ಯಾಭಿವರ್ಧಿನೀ" ಶಾಲೆಯಲ್ಲಿ ಪೂರ್ವಮೀಮಾಂಸಾಶಾಸ್ತ್ರ ಶಿಕ್ಷಣವನ್ನು ಪಡೆದ ನರಸಿಂಹ. ಹಿಂದೆ ಮಠದ ಅಧಿಕಾರಿ ಶ್ರೀಕಂಠಶಾಸ್ತ್ರಿಗಳ ಮನೆಯಲ್ಲಿದ್ದುಕೊಂಡು ಅವರ ಮೇಲ್ವಿಚಾರಣೆಯಲ್ಲಿ ಬೆಳೆದ ಬಡಹುಡುಗ ನರಸಿಂಹ ಮುಂದೆ ಮಠಾಧಿಪತಿಯಾದುದೂ ವಿಚಿತ್ರ ಘಟನೆಯೇ. ನರಸಿಂಹನ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಇವೆಲ್ಲವನ್ನೂ ನೋಡಿದ ಆಗಿನ ಮಠಾಧೀಶರಾಗಿದ್ದ ನೃಸಿಂಹ ಭಾರತೀ ಸ್ವಾಮಿಗಳು ತಮ್ಮ ಮುಂದಿನ ಉತ್ತರಾಧಿಕಾರಿ ನರಸಿಂಹನೆಂದೇ ಮನಸ್ಸಲ್ಲಿ ನಿಶ್ಚಯಿಸಿಕೊಂಡಿದ್ದರು. ಕಾಲಡಿಯಲ್ಲಿ ಶಂಕರಾಚಾರ್ಯರ ಆಲಯದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಿಂದಿರುಗಿದ ಶ್ರೀ ನೃಸಿಂಹ ಭಾರತೀ ಸ್ವಾಮಿಗಳ ಆರೋಗ್ಯದಲ್ಲಿ ಏರುಪೇರಾಯಿತು. ನಂದಿಬೆಟ್ಟದಲ್ಲಿ ತುಸು ವಿಶ್ರಮಿಸಿದರಾದರೂ ಅವರ ಆರೋಗ್ಯ ಸುಧಾರಿಸಲಿಲ್ಲ. ತಮ್ಮ ಅಂತ್ಯಕಾಲ ಹತ್ತಿರವಾಯಿತೆಂದು ತಿಳಿದ ಶ್ರೀಗಳು ನರಸಿಂಹನನ್ನು ಬೆಂಗಳೂರಿನಿಂದ ಕರೆತರುವಂತೆ ತಮ್ಮ ಆಪ್ತರೂ, ಅರಮನೆಯ ಧರ್ಮಾಧಿಕಾರಿಗಳೂ ಆಗಿದ್ದ ಕುಣಿಗಲ್ಲು ರಾಮಾಶಾಸ್ತ್ರಿಗಳಿಗೆ ಅಪ್ಪಣೆ ಮಾಡಿದರು. ರಾಮಾಶಾಸ್ತ್ರಿಗಳಿಂದ ಸ್ವಾಮಿಗಳ ಪತ್ರ ಪಡೆದು ಸ್ವಾಮಿಗಳ ಇಚ್ಛೆಯಂತೆ ಸ್ವಾಮಿಗಳ ಆಯ್ಕೆಯ ಉತ್ತರಾಧಿಕಾರಿ ನರಸಿಂಹನನ್ನು ನೋಡಲು ಹೋದ ಮೈಸೂರು ಮಹಾರಾಜರಿಗೂ ಸ್ವಾಮಿಗಳ ಆಯ್ಕೆ ಒಪ್ಪಿಗೆಯಾಗಲಿಲ್ಲವಂತೆ. ಆದರೆ ಸ್ವಾಮಿಗಳ ಸಂಕಲ್ಪವನ್ನು ಪರಿಗಣಿಸಿ ತಮ್ಮ ಸಮ್ಮತಿ ಸೂಚಿಸಿದರು. ಇತ್ತ ಗುರುಗಳ ಬದುಕು ತೂಗುಯ್ಯಾಲೆಯಲ್ಲಿತ್ತು. ಈ ನಡುವೆ ಮಠದ ಸರ್ವಾಧಿಕಾರಿಗಳಾದ ಶ್ರೀಕಂಠ ಶಾಸ್ತ್ರಿಗಳು ನರಸಿಂಹ ಬರುವುದು ತಡವಾಗಿ ಅದರೊಳಗೆ ಗುರುಗಳು ತೀರಿಕೊಂಡರೆ ಎಂಬ ಶಂಕೆಯಿಂದ ಒಂದಿಬ್ಬರನ್ನು ಉತ್ತರಾಧಿಕಾರಿ ಪಟ್ಟಕ್ಕೆ ಸೂಚಿಸಿದಾಗ ಶ್ರೀಗಳು ಸ್ವಲ್ಪ ಕಟುವಾಗಿಯೇ "ನರಸಿಂಹ ಬರಲಿ, ಸುಮ್ಮನಿರಿ" ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಸೂಚಿಸಿದರು. ಆದರೆ ನರಸಿಂಹ ಬರುವಷ್ಟರಲ್ಲಿ ಗುರುಗಳು ತೀರಿಕೊಂಡಾಗಿತ್ತು. ನರಸಿಂಹನನ್ನು, ಆತನ ಕುಟುಂಬವನ್ನು ತುಚ್ಛವಾಗಿ ಕಾಣುತ್ತಿದ್ದವರಿಗೆ, ತಮ್ಮ ಬೇಳೆ ಬೇಯಿಸಿಕೊಳ್ಳುವ ಹಂಬಲವಿದ್ದವರಿಗೆಲ್ಲಾ ಈ ಬಡಕಲು ಹುಡುಗ ಜಗದ್ಗುರು ಪಟ್ಟವೇರುವುದು ಇಷ್ಟವಾಗುವುದಾದರೂ ಹೇಗೆ? ಆದರೆ ಅದಾಗಲೇ ಗುರುಗಳ ನಿಲುವು, ಮಹಾರಾಜರ ಸಮ್ಮತಿ ನರಸಿಂಹನಿಗಲ್ಲದೆ ಬೇರಾರಿಗೂ ಉತ್ತರಾಧಿಕಾರಿ ಪಟ್ಟ ಸಿಗದಂತೆ ಪಿತೂರಿಗಾರರನ್ನು ತಡೆದಿತ್ತು.
ವಿಚಿತ್ರವೆಂದರೆ ಮುಂದಿನ ಪೀಠಾಧಿಪತಿಯ ಸಂನ್ಯಾಸ, ಪಟ್ಟ ಮೊದಲಾದ ವಿಧಿಗಳ ಕಾರ್ಯಕ್ರಮಗಳನ್ನು ನಿರ್ಧರಿಸಲು ನಡೆದ ಸಭೆಯಲ್ಲಿ ಮಠದ ಹಿರಿಯ ಅಧಿಕಾರಿಗಳು, ವಿದ್ವಾಂಸರು, ಮಹಾರಾಜರ ಪ್ರತಿನಿಧಿಗಳು ಇದ್ದರೂ, ಮುಂದೆ ಪೀಠಾಧಿಪತಿಯಾಗಲಿದ್ದ ನರಸಿಂಹನೇ ಅಲ್ಲಿರಲಿಲ್ಲ! ಸ್ವಲ್ಪ ಸಮಯದ ಬಳಿಕ ಅವರಲ್ಲೊಬ್ಬರು ಈ ವಿಧಿಗಳೆಲ್ಲಾ ನಡೆಯಬೇಕಾದುದು ನರಸಿಂಹನಿಗೇ, ನಾವು ನಿರ್ಧರಿಸುವ ಕಾರ್ಯಕ್ರಮ ಅವನಿಗೆ ತಿಳಿಯಬೇಡವೇ ಎಂದಾಗ ನರಸಿಂಹನಿಗೆ ಕರೆಕಳುಹಿಸಲಾಯಿತು. ಬಂದು ಕೈಕಟ್ಟಿಕೊಂಡು ನಿಂತ ನರಸಿಂಹನನ್ನು ಕುಳ್ಳಿರೆಂದು ಯಾರೂ ಹೇಳಲಿಲ್ಲ. ಸ್ವಲ್ಪ ಸಮಯದ ಬಳಿಕ ಹಿರಿಯರ ನಡುವೆ ಕುಳ್ಳಿರಲು ಸಂಕೋಚಗೊಂಡು ನಿಂತೇ ಇದ್ದ ನರಸಿಂಹನನ್ನು ಕಂಡು ರಾಮಚಂದ್ರ ಅಯ್ಯರರು "ನೀವು ನಾಳೆ ಜಗದ್ಗುರುಗಳಾಗಲಿಕ್ಕಿರುವವರು. ನಿಂತಿರಬಾರದು ಕೂಡಿ" ಎಂದರಂತೆ. ಅದಕ್ಕೆ ನರಸಿಂಹ "ಅದು ನಾಳೆ ತಾನೇ" ಎಂದು ನಸುನಗುತ್ತ ಉತ್ತರಕೊಟ್ಟನಂತೆ! ವಿಶೇಷವೆಂದರೆ ಮುಂದೆ ರಾಮಚಂದ್ರ ಅಯ್ಯರ್ ಹಾಗೂ ಈ ಘಟನೆಯನ್ನು ತಮ್ಮ ಸ್ವಾಮಿಗಳ ಕುರಿತ ಗ್ರಂಥದಲ್ಲಿ ಉಲ್ಲೇಖಿಸಿದ ಅವರ ಮಗ ಕೃಷ್ಣಸ್ವಾಮಿ ಅಯ್ಯರ್ ಇಬ್ಬರೂ ಇದೇ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿದರು. ಹೀಗೆ ಶೃಂಗೇರಿಯ ಬಡಹುಡುಗ ನರಸಿಂಹ ಸಂನ್ಯಾಸ ಸ್ವೀಕರಿಸಿ ತಾನು ಬಯಸದೇ, ತನ್ನ ಪರಿವಾರದವರು ಬಯಸದೆ, ಮಠಾಧಿಪತಿಗಳಿಗಿರಬೇಕಾದ ಮನೋಧರ್ಮ, ಶಿಕ್ಷಣವಿಲ್ಲದೆ ಹಲವಾರು ಅರಮನೆಗಳಿಗೆ, ಲಕ್ಷಾಂತರ ಜನರಿಗೆ ಗುರುಪೀಠವೆನಿಸಿದ ಜಗದ್ಗುರುಪಟ್ಟವನ್ನು ಏರಿ ಮಠದ ಪರಂಪರೆಯ ಮೂವತ್ನಾಲ್ಕನೇ ಯತಿಯಾಗಿ ಶ್ರೀಚಂದ್ರಶೇಖರ ಭಾರತೀ ಸ್ವಾಮಿಗಳಾದರು.
ಸ್ವಾಮಿಗಳದ್ದು ಕವಿಹೃದಯ. ಸಂಗೀತದಲ್ಲೂ ಅವರಿಗೆ ತುಂಬಾ ಅಭಿರುಚಿಯಿತ್ತು. ಶ್ಲೋಕಗಳನ್ನು ರಸವತ್ತಾಗಿ ಹಾಡುವ ಸಾಮರ್ಥ್ಯವೂ ಇತ್ತು. ಕವಿಹೃದಯದವರಿಗೆ ವಿರಕ್ತಿ ಸಹಜವಾಗಿ ಬರಲಾರದು. ಸ್ವಾಮಿಗಳಿಗೆ ವಿರಕ್ತಿ ಬಂದುದು ಸ್ವಭಾವದಿಂದಲೂ ಅಲ್ಲ, ದುಃಖದರ್ಶನದಿಂದಲೂ ಅಲ್ಲ. ಅವರು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಪಡೆದ ಶಿಕ್ಷಣವೇ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಗುರಿ(ಆತ್ಮತತ್ತ್ವದ ಅನುಸಂಧಾನ)ಯನ್ನು ಸಾಧಿಸುವ ದಾರಿಯನ್ನು ತೋರಿಸಿತು. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರು ಅದರ ಆಧಾರದ ಮೇಲೆ ಮನನ ನಿದಿಧ್ಯಾಸನಗಳನ್ನು ಕೈಗೊಳ್ಳಲು ತಮ್ಮ ಬಾಳನ್ನೇ ಮುಡಿಪಾಗಿಟ್ಟರು. ಹಾಗೆ ಮಾಡುವಾಗ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆತರು. ಹೀಗೆ ಆರಂಭವಾಯಿತು 'ಆತ್ಮವಿದ್ಯಾವಿಲಾಸ'ದ ಅನುಸಂಧಾನ. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳನ್ನೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು.
ತಾಯಿ ತೀರಿಕೊಂಡ ಒಂದೂವರೆ ತಿಂಗಳುಗಳಲ್ಲಿಯೇ ಅವರಿಗಾದ "ಬುದ್ಧಿ ಭ್ರಮಣೆ" ಎಲ್ಲರಿಗೂ ತಿಳಿದು ಬಂತು. ಶಾರದೆಯ ಗುಡಿಗೆ ಬಂದ ಸ್ವಾಮಿಗಳು ಗಣೇಶನ ದರ್ಶನವಾದೊಡನೆ ಹಿಂದಿರುಗಿ ನದಿಗೆ ಬಂದುಬಿಟ್ಟರು. ಸ್ನಾನ ಮಾಡಿ ಮತ್ತೆ ಗುಡಿಗೆ ಬಂದರಾದರೂ ತಾವೇ ಪೂಜೆ ಮಾಡಲಾರದೆ ಪುರೋಹಿತರ ಕೈಯಿಂದಲೇ ಪೂಜೆ ಮಾಡಿಸಿ ತಾವು ಸುಮ್ಮನೆ ಕುಳಿತುಬಿಟ್ಟರು. ಆ ರಾತ್ರಿ ನಿದ್ದೆ ಬಾರದೆ ಅತ್ತಿಂದಿತ್ತ ಠಳಾಯಿಸುತ್ತಿದ್ದರು. ತಮ್ಮ ಸುತ್ತಲಿರುವುದೆಲ್ಲ ತಿರುಗುತ್ತಿದೆಯೆಂದಾಗ ಅವರನ್ನು ನರಸಿಂಹ ವನದಲ್ಲಿ ಇರಿಸುವ ವ್ಯವಸ್ಥೆ ಮಾಡಲಾಯಿತು. ವೈದ್ಯರು ಕೊಟ್ಟ ಲೇಹ್ಯವನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿಬಿಟ್ಟರು. ತೈಲಧಾರೆಯ ಫಲದಿಂದ ಅವರ ಉದ್ವೇಗವೇನೋ ಕಡಿಮೆಯಾಯಿತು. ಆದರೆ ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ಮೊದಲಿನ ದಿನಗಳು; ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಈ ನಡುವೆ ತುಸು ಸಮಯ ಅಂತರ್ಮುಖರಾಗದೇ ಇದ್ದಾಗ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟು ಕಿಗ್ಗ, ಕೊಪ್ಪ, ಚಿಕ್ಕಮಗಳೂರು, ಬೇಲೂರು, ಬೆಳವಾಡಿ, ಹೊಳೆನರಸೀಪುರಗಳಲ್ಲೆಲ್ಲಾ ಸಂಚರಿಸಿ ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ಮುಂದೆ ಸತ್ಯಮಂಗಲ, ತಮಿಳುನಾಡಿನ ಶ್ರೀರಂಗ, ತಿರುಚಿರಪಳ್ಳಿ, ರಾಮೇಶ್ವರದಲ್ಲಿ ಸಂಚರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳಿನಲ್ಲಿಯೇ ಉಪನ್ಯಾಸ ಮಾಡಿದ್ದು ಎಲ್ಲರಿಗೂ ಆಶ್ಚರ್ಯತಂದ ವಿಚಾರವಾಗಿತ್ತು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತುತಿ ಹಾಗೂ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಮುಂದೆ ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆಯನ್ನು ವ್ಯವಸ್ಥೆ ಮಾಡಿ, ಹಿಂದಿರುಗುವಾಗ ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿ ಚಾತುರ್ಮಾಸ್ಯವನ್ನು ಅಲ್ಲೇ ಕಳೆದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.
ಶಿಷ್ಯಪರಿಗ್ರಹವಾದ ಮೇಲಂತೂ ಮಠದೊಂದಿಗಿನ ಅಲ್ಪಸ್ವಲ್ಪ ಸಂಬಂಧವನ್ನೂ ಕಡಿದುಕೊಂಡು ಜೀವನ್ಮುಕ್ತರಂತೆ ನಿಃಸಂಗರಾಗಿ, ನಿರುದ್ವಿಗ್ನರಾಗಿ ಮುಂದಿನ ಇಪ್ಪತ್ಮೂರು ವರ್ಷಗಳ ಕಾಲ ನರಸಿಂಹ ವನದಲ್ಲೇ ತಪಶ್ಚರ್ಯೆಯಲ್ಲಿ ತೊಡಗಿದರು. ಹೀಗೆ ನಿಧಿದ್ಯಾಸನ ಕೈಗೊಂಡು ಏಳು ವರ್ಷಗಳ ಬಳಿಕ ಬಹಿರ್ಮುಖರಾದಾಗ ಅಪೂರ್ವ ತೇಜಸ್ಸಿನಿಂದ ಅವರ ಮುಖ ಕಂಗೊಳಿಸುತ್ತಿತ್ತು.
ಒಮ್ಮೆ ಮಠದ ಆನೆ ಬಹಳ ದಿನಗಳವರೆಗೆ ಆಹಾರವನ್ನು ಮುಟ್ಟದೆ, ಯಾರನ್ನೂ ತನ್ನ ಬಳಿ ಸೇರಿಸದೆ ಚಂಡಿ ಹಿಡಿದಿತ್ತು. ಮಾವುತನನ್ನೂ ಅದು ಲೆಕ್ಕಿಸಲಿಲ್ಲ. ಆನೆಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿ ಅದನ್ನು ಕಾಡಿಗೆ ಕಳುಹಿಸುವ ತೀರ್ಮಾನವಾಗಿತ್ತು. ಆನೆಯ ಕೂಗಾಟ ಕೇಳಿಸಿದ ಕೂಡಲೇ ಗುರುಗಳು ಗಜಶಾಲೆಯತ್ತ ಧಾವಿಸಿದರು. ಅಲ್ಲಿದ್ದವರು ‘ಆನೆಗೆ ಹುಚ್ಚು ಹಿಡಿದಿದೆ, ಹತ್ತಿರ ಹೋಗಬೇಡಿರಿ’ ಎಂದು ಗುರುಗಳ ಬಳಿ ವಿನಂತಿಸಿಕೊಂಡರು. ಗುರುಗಳು ಆನೆಯ ಹತ್ತಿರ ಹೋಗಿ ಅದರ ಸೊಂಡಿಲಿನ ಮೇಲೆ ಕೈಯಾಡಿಸುತ್ತ ಮೃದುವಾದ ಧ್ವನಿಯಲ್ಲಿ ‘ಯಾಕಪ್ಪ ಏನಾಗಿದೆ?’ ಎಂದು ಕೇಳಿದರು. ಆನೆಯು ತಲೆಬಾಗಿ ತನ್ನ ಮುಂಗಾಲನ್ನು ಎತ್ತಿ ತೋರಿಸಿತು. ಅದರ ಅಂಗಾಲಿಗೆ ಮೊಳೆಯೊಂದು ಚುಚ್ಚಿಕೊಂಡಿತ್ತು. ಗುರುಗಳು ಆ ಮೊಳೆಯನ್ನು ಜೋಪಾನವಾಗಿ ತೆಗೆಸಿ ಗಾಯಕ್ಕೆ ಚಿಕಿತ್ಸೆ ಮಾಡಿಸಿದರು. ಆನೆ ಯಾವ ತಕರಾರನ್ನು ಮಾಡದೆ ಚಿಕಿತ್ಸೆಗೆ ಸ್ಪಂದಿಸಿತು. ಗುರುಗಳ ದರ್ಶನಕ್ಕಾಗಿ ಮನವಿ ಮಾಡಿದ್ದ ಗಣ್ಯ ವ್ಯಕ್ತಿಯೊಬ್ಬ ತನಗೆ ಯಾವುದೇ ಉತ್ತರ ಬರದಿದ್ದಾಗ ಮೈಸೂರು ದಿವಾನರ ಮೂಲಕ ಮನವಿ ಸಲ್ಲಿಸಿದ. ವಿಚಾರ ತಿಳಿದ ಗುರುಗಳು ‘ಇದಕ್ಕೆ ಹಿಂದೆ ಬಂದ ಪತ್ರದ ಬಗ್ಗೆ ನನಗೇಕೆ ತಿಳಿಸಲಿಲ್ಲ?’ ಎಂದು ಅಧಿಕಾರಿಗಳಲ್ಲಿ ಕೇಳಿದಾಗ ಅಧಿಕಾರಿಗಳು ‘ಗುರುಗಳೇ, ಸಂದರ್ಶನ ಬಯಸಿದ್ದ ವ್ಯಕ್ತಿಯ ಚಾರಿತ್ರ್ಯ ಸರಿ ಇರಲಿಲ್ಲ. ಎಲ್ಲ ರೀತಿಯ ದುರಭ್ಯಾಸಗಳು ಇವೆ. ಆದ್ದರಿಂದ ತಮಗೆ ಅರಿಕೆ ಮಾಡಲು ಹಿಂಜರಿದಿದ್ದೆ’ ಎಂದರು. ಆಗ ಗುರುಗಳು ಕೊಡುವ ಉತ್ತರ ಸಮಾಜದ ಕಣ್ಣು ತೆರೆಸುವಂತಹದ್ದು. ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ." ಬಳಿಕ ಗುರುಗಳ ದರ್ಶನ ಪಡೆದ ಆ ವ್ಯಕ್ತಿ ಗುರುಗಳಿಂದ ಪ್ರಭಾವಿತರಾಗಿ, ತಮ್ಮ ನಡೆನುಡಿಯನ್ನು ಬದಲಾಯಿಸಿಕೊಂಡು ಗುರುಗಳ ಪರಮ ಭಕ್ತರಾದರು. ಹೀಗೆ ಅವರು ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎಂದು ಅವರ ಬಲವಾದ ನಂಬಿಕೆಯಾಗಿತ್ತು. ಹಾಗಾಗಿ ಗುರುಗಳು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರಂತೆ, ಹನುಮಂತನಿಗಾಗಿ!
ಹಿಂದೂ ಧರ್ಮದ ಬಗ್ಗೆ ಗುರುಗಳ ವಿಶ್ಲೇಷಣೆ ಅದರಲ್ಲೂ ಅವಧೂತರೊಬ್ಬರ ವಿಶ್ಲೇಷಣೆ ಬಲು ಮಹತ್ವವಾದದ್ದು. ಹಿಂದೂ ಧರ್ಮ ಸನಾತನವಾದದ್ದು. "ಹಿಂದೂ" ಎಂಬ ಅದರ ಹೆಸರು ಇತ್ತೀಚಿನದ್ದಾಗಿರಬಹುದು; ಆದರೆ ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ ಅವು ಒಪ್ಪಲಿಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ನಾವು ಅರಿತು ಒಪ್ಪಿಕೊಂಡಲ್ಲಿ ನಮಗೆ ಒಳಿತು. ಇಲ್ಲದಿದ್ದಲ್ಲಿ ಕೆಡುಕು ನಮಗೇ. ಸನಾತನ ಧರ್ಮವು ಈ ರೀತಿಯಾದದ್ದು. ಇತರ ಎಲ್ಲ ಧರ್ಮಗಳ ಉತ್ಕೃಷ್ಟ ಬೋಧನೆಗಳು ತಮ್ಮ ಸ್ಥಾನವನ್ನು ಸನಾತನ ಧರ್ಮದಲ್ಲಿಯೂ ಪಡೆದುಕೊಂಡಿವೆ. ಅವು ಸನಾತನಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ.
ಜಾತಿಪದ್ದತಿಯ ಬಗ್ಗೆ ಅವರ ವಿಶ್ಲೇಷಣೆ:
"ಎಲ್ಲರೂ ಹಿಂದೂಗಳೇ ಎಂದರೆ ಎಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ಮಾರ್ಗದರ್ಶನ ಪಡೆಯಲು ಅರ್ಹರು ಎಂದರ್ಥ. ಆದರೆ ಈ ಮಾರ್ಗದರ್ಶನವು ಎಲ್ಲರಿಗೂ ಒಂದೇ ರೀತಿ ಇರುತ್ತದೆ ಎಂದರ್ಥವಲ್ಲ. ಮನುಷ್ಯನಿಗೆ ಹುಟ್ಟಿನಿಂದ ಬಂದ ಒಲವು, ಸ್ವಭಾವ, ಪೂರ್ವಜನ್ಮದ ಸಂಸ್ಕಾರ, ಪರಿಸರ ಮತ್ತು ಅವನು ಹುಟ್ಟಿದ ಮೇಲೆ ಪಡೆದುಕೊಳ್ಳುವ ತರಬೇತು ಇವೆಲ್ಲವೂ ಒಂದೇ ಆಗಿರಲು ಸಾಧ್ಯವಿಲ್ಲ. ಈ ಅವಿರೋಧ ಸತ್ಯವನ್ನು ಗಣನೆಗೆ ತೆಗೆದುಕೊಂಡು ಸನಾತನ ಧರ್ಮವು ಸಾಮಾನ್ಯಧರ್ಮ ಮತ್ತು ವಿಶೇಷಧರ್ಮಗಳು ಎಂದು ವಿಂಗಡಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ. ಸಾಮಾನ್ಯ ಧರ್ಮ ಇಡೀ ಮಾನವಕುಲಕ್ಕೆ ಸಹಕಾರಿಯಾದರೆ ಸಾಮಾನ್ಯ ಧರ್ಮ ಮತ್ತು ವಿಶೇಷ ಧರ್ಮ ಎರಡೂ ಸೇರಿ ಜಾತಿ ಚೌಕಟ್ಟಿನೊಳಗೆ ಬರುವವರಿಗೆ ಉಪಯುಕ್ತವಾಗಿವೆ."
ಇತರ ಮತಗಳ ಬಗ್ಗೆ ಸ್ವಾಮಿಗಳ ಅಭಿಪ್ರಾಯ:
ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ? ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಮುಕ್ತಿಸಾಧನವು ಮುಂದೆ ಜನಿಸುವ ಕ್ರಿಸ್ತನಲ್ಲಿನ ನಂಬಿಕೆಯು ಅದಕ್ಕೆ ಕಡ್ಡಾಯ ಎಂಬ ನಿಯಮವನ್ನು ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ. ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ.
ಆತ್ಮಾರ್ಪಣೆ:
1954ರ ಭಾದ್ರಪದ ಬಹುಳ ಅಮವಾಸ್ಯೆಯ ಮುನ್ನಾ ದಿನ ರಾತ್ರಿ. ಸ್ವಾಮಿಗಳು ಮಲಗಲೇ ಇಲ್ಲ. ಸಚ್ಚಿದಾನಂದ ವಿಲಾಸದಲ್ಲಿದ್ದ ತಮ್ಮ ಗುರುಗಳ ಸಮಾಧಿಗೆ ಮತ್ತೆ ಮತ್ತೆ ಪ್ರದಕ್ಷಿಣೆ ಮಾಡುತ್ತಿದ್ದರು. ನಡುವೆ ಕಾಲಭೈರವನ ಗುಡ್ಡಕ್ಕೂ ಹೋಗಿ ಬಂದರು. ಆತ್ಮವಿದ್ಯಾವಿಲಾಸವನ್ನು ಗಟ್ಟಿಯಾಗಿಯೇ ಹೇಳಿಕೊಂಡು ತಿರುಗಾಡುತ್ತಿದ್ದರು. ಆಗ ನದಿಯ ಆಚೆ ದಡದಲ್ಲಿ ನವರಾತ್ರಿಗೆ ಭರ್ಜರಿ ಸಿದ್ಧತೆಗಳಾಗಿತ್ತು. ಸ್ವಾಮಿಗಳು ಬೆಳಕು ಹರಿಯುವ ಮುನ್ನವೇ ಅಲ್ಲೇ ಮಲಗಿದ್ದ ಮಹಾಬಲಭಟ್ಟರನ್ನು ಕರೆದು ಸ್ನಾನಕ್ಕೆ ಹೊರಡೋಣವೆಂದು ಹೊರಟುನಿಂತರು. ಮಳೆ, ಚಳಿಯ ಕಾರಣ ತಣ್ಣೀರು ಸ್ನಾನ ಬೇಡವೆಂದು ಭಟ್ಟರು ಅರಿಕೆ ಮಾಡಿಕೊಂಡಾಗ "ಇವತ್ತು ಪುಣ್ಯದಿನವಲ್ಲವೇ, ತುಂಗಾ ಸ್ನಾನವೇ ಆಗಲಿ" ಎಂದುತ್ತರಿಸಿ ಹೊರಟೇ ಬಿಟ್ಟರು. ಇನ್ನೂ ಕತ್ತಲಿದ್ದುದರಿಂದ ಪರಿಚಾರಕ ರಾಮಸ್ವಾಮಿ ಲಾಟೀನು ಹಿಡಿದುಕೊಂಡರು. ರಾಮಸ್ವಾಮಿಯನ್ನು ಮೇಲೆಯೇ ನಿಲ್ಲಿಸಿ ಭಟ್ಟರೊಂದಿಗೆ ಕೆಳಗಿಳಿದು ಹೋದ ಅವರು ನೀರಿನಲ್ಲಿ ಮುಳುಗು ಹಾಕಿ ಪಕ್ಕದ ಕಟ್ಟೆಯ ಮೇಲೆ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತರು. ಬೆನ್ನು ತಿರುಗಿಸಿ ಬಟ್ಟೆ ಒಗೆಯುತ್ತಿದ್ದ ಭಟ್ಟರು ಏನೋ ಬಿದ್ದ ಸದ್ದಾದಂತಾಗಿ ತಿರುಗಿ ನೋಡುತ್ತಾರೆ, ಸ್ವಾಮಿಗಳು ಪದ್ಮಾಸನದಲ್ಲಿಯೇ ತೇಲಿ ಹೋಗುತ್ತಿದ್ದಾರೆ. ಭಟ್ಟರು ಸಹಾಯಕ್ಕಾಗಿ ಕೂಗು ಹಾಕಿ ಈಜಿಕೊಂಡು ಸ್ವಾಮಿಗಳನ್ನು ಕೇಶವಚಾರಿಯ ಸಹಾಯದಿಂದ ದಡಕ್ಕೆ ತಂದರಾದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ!
ಪೀಠಾಧಿಪತಿಗಳಾಗಿದ್ದೂ ಪೀಠದ ಪ್ರಚಾರಕ್ಕೆ ಇದ್ದ ಪರಿಕರಗಳನ್ನು ಬದಿಗೊತ್ತಿ, ಪೀಠದ ಬಿಂಕವನ್ನು ಬಿಸುಟು ನಿಂತವರು ಅವರು. ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಒಂದು ಲೇಖನದಲ್ಲೋ ಕೆಲವು ಪದಗಳಲ್ಲೋ ಅವರನ್ನು ಕಟ್ಟಿಡಲಾಗದು. ಅವರ ಸಾಮಾನ್ಯ ವ್ಯಕ್ತಿತ್ವವೇ ವರ್ಣನೆಗೆ ನಿಲುಕದ್ದು; ಇನ್ನು ಅವರ ಅಸಾಮಾನ್ಯ ಸಿದ್ಧಿಯನ್ನು, ವ್ಯಕ್ತಿತ್ವವನ್ನು ಏನೆಂದು ಬಣ್ಣಿಸಲಿ. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ. ಶಂಕರರ ಬಳಿಕ ಶೃಂಗಗಿರಿಯಲ್ಲಿ ಅದ್ವೈತವನ್ನು ಸಾಕ್ಷಾತ್ಕರಿಸಿಕೊಂಡ ಚಂದ್ರಶೇಖರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ