ಪುಟಗಳು

ಬುಧವಾರ, ಅಕ್ಟೋಬರ್ 4, 2017

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ

ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ ಘಟ್ಟದ ಮೇಲಿನವರ ಮಾತಿನ ಸತ್ಯ ಕಣ್ಣಿಗೆ ರಾಚುತ್ತಿತ್ತು. ಆಗುಂಬೆ ದಾಟಿದೊಡನೆ ಅಲ್ಲಲ್ಲಿ ಕಾಣಸಿಕ್ಕಿದ ರಬ್ಬರ್ ಹಾಡಿಗಳು ಮಳೆ ಕಡಿಮೆಯಾಗಿದ್ದಕ್ಕೆ ಕಾರಣವಾದ ಅಂಶದ ನಗ್ನದರ್ಶನವಿತ್ತಿತ್ತು. ತೀರ್ಥಹಳ್ಳಿಯಲ್ಲಿ ಹೆದ್ದಾರಿ ಬಿಟ್ಟು ಹಳ್ಳಿಯ ದಾರಿ ಹಿಡಿದ ನಮಗೆ ನಾವು ಗತ ವೈಭವವೊಂದರ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದೇವೆಂಬ ಭಾವವಾದರೂ ಹೇಗುಂಟಾದೀತು? ಕವಳೆದುರ್ಗ, ತೀರ್ಥಹಳ್ಳಿಯ ಬಳಿಯಿರುವ ಸ್ಥಳ ಎಂಬ ಕನಿಷ್ಟ ಮಾಹಿತಿಯೊಂದಿಗೆ ಎಂದಿನ ಅಭ್ಯಾಸದಂತೆ ಮಾರ್ಗದರ್ಶಕರಿಲ್ಲದೆ, ನಿಖರ ಮಾರ್ಗ ಗೊತ್ತಿಲ್ಲದೆ, ಅಲ್ಲಿನ ಇತಿಹಾಸದ ಬಗ್ಗೆಯೂ ತಿಳಿದುಕೊಳ್ಳದೆ ಸಾಗುತ್ತಿದ್ದ ನಮಗೆ ಆರಂಭದಲ್ಲಿ ಕಾದಿದ್ದು ನಿರಾಶೆಯೇ. ಒಂದೆರಡು ಮನೆಗಳಲ್ಲಿ ವಿಚಾರಿಸಿಕೊಂಡು, ಹದಗೊಳಿಸಿದ ಗದ್ದೆಗಳನ್ನೂ, ಪಾಳು ಬಿದ್ದು ಈಗ ಕೆರೆಯಂತಾಗಿರುವ ಗದ್ದೆಗಳನ್ನು ದಾಟಿ ಬಂದು ನಿಂತವರಿಗೆ ಕಂಡಿದ್ದು ಅಷ್ಟೇನೂ ದಟ್ಟವಲ್ಲದ ಮರಗಳು, ಪೊದೆಗಳಿಂದಾವೃತವಾದ ಕಲ್ಲು, ಮಣ್ಣುಗಳಿಂದಾವೃತವಾದ ಒಂದು ಗುಡ್ಡ. ಅದರ ಮೇಲೆ ಕೋಟೆಯ ಕುರುಹು!


ಕೋಟೆಯ ಒಳ ಹೋಗಲು ಕರಿಯ ದೊರಗು ಕಲ್ಲುಗಳನ್ನು ನೆಲಕ್ಕೆ ಅನುಕ್ರಮವಿಲ್ಲದೆ ಜೋಡಿಸಿದ ಒರಟಾದ ಅಗಲವಾದ ಈಗಿನ ದ್ವಿಪಥ ಎನ್ನಬಹುದಾದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ತುಳುವಿನಲ್ಲಿ "ಅಗರ್(ಅಥವಾ ಅಗಳ್)"ನಂತೆಯೇ ಇರುವ ಕಲ್ಲುಗಳನ್ನು ಜೋಡಿಸಿ ರೂಪಿಸಿದ ದಂಡೆಗಳು. ಮೇಲಿಂದ ಕೆಲ ಬಂಡೆಗಳು ಜಾರಿ ರಸ್ತೆಗೆ ಬಿದ್ದಿವೆಯಾದರೂ ಆ ರಸ್ತೆ ದಂಡೆಗಳ ಸಮೇತ ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷ. ಮುಂದುವರಿದಂತೆ ಕೋಟೆಯ ಮುಖ್ಯ ದ್ವಾರದಲ್ಲಿ ಕಾಣಸಿಕ್ಕಿದ ರಸ್ತೆಯ ಇಕ್ಕೆಲಗಳಲ್ಲಿರುವ ಎರಡು ಬೃಹತ್ ಕಾವಲು(ಅಥವಾ ವೀಕ್ಷಕ) ಗೋಪುರಗಳು ನಮ್ಮ ಕುತೂಹಲವನ್ನು ಬಡಿದೆಬ್ಬಿಸಿದವು. ಯಾವುದೋ ಕಾಲದಲ್ಲಿ ನೇತು ಹಾಕಿದ ಭಾರತೀಯ ಪುರಾತತ್ವ ಇಲಾಖೆಯ ಭಿತ್ತಿಪತ್ರ ಇತಿಹಾಸವನ್ನು ತುಸು ನೆನಪಿಸುವುದರ ಜೊತೆಜೊತೆಗೆ ಒಳಗಿರಬಹುದಾದ ವಿಶೇಷತೆಯನ್ನೂ ಹಾಗೂ ಅವ್ಯಾವುವೂ ಸರಿಯಾಗಿ ನಿರ್ವಹಣೆಗೊಳಗಾಗುತ್ತಿಲ್ಲವೆನ್ನುವುದನ್ನು ಸಾರಿ ಹೇಳುತ್ತಿತ್ತು! ಒಳಹೊಕ್ಕಾಗ ನಮ್ಮನ್ನು ಸ್ವಾಗತಿಸಿದ್ದು ಇಳಿಜಾರಾದ ಕಲ್ಲುಗಳ ನಡುವೆಯೂ ಮೇವನ್ನರಸಿ ಕೋಟೆಯೊಳಗೆ ಹೊರಟಿದ್ದ ಗೋವುಗಳು!

ಅದು ಕವಳೆದುರ್ಗ. ತೀರ್ಥಹಳ್ಳಿಯಿಂದ 16ಕಿಮೀ ದೂರದಲ್ಲಿ ಸಮುದ್ರ ಮಟ್ಟದಿಂದ 1541ಮೀ ಎತ್ತರದ ಬೆಟ್ಟದಲ್ಲಿ ನಿರ್ಮಿತವಾದ ಕೋಟೆ. ಅನೇಕ ಸಾಧುಗಳ ಸಾಧನೆಗೆ ನೆರವಾದ ಪುಣ್ಯಭೂಮಿ. ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರಕ್ಕೇ ಸೇರಿತ್ತು ಎನ್ನುವ ಪ್ರತೀತಿ ಇದೆ. ತ್ರೇತೆಯಲ್ಲಿ ಅಗಸ್ತ್ಯ ಹಾಗೂ ವಾಲ್ಮೀಕಿ ಮಹರ್ಷಿಗಳು ಇಲ್ಲಿ ತಪಃಗೈದಿದ್ದರು ಎನ್ನುವ ಪುರಾಣ ಕಥೆಗಳೂ ಇವೆ. ದ್ವಾಪರೆಯಲ್ಲಿ ಪಾಂಡವರು ಇಲ್ಲಿ ನೆಲೆಸಿದ್ದರು ಎನ್ನುವ ಕಥೆಗಳೂ ಇವೆ. ಸ್ಕಂದ ಪುರಾಣದಲ್ಲಿ ಕಾವ್ಯ ವನ ಹಾಗೂ ಕಪಿಲದುರ್ಗ ಎಂದು ಹೆಸರಿಸಿರುವ ಸ್ಥಳ ಇದೇ ಎನ್ನುವ ವಾದಗಳೂ ಇವೆ. ಆದರೆ ಐತಿಹಾಸಿಕವಾಗಿ ಇದರ ಕುರುಹು ಸಿಗುವುದು 9ನೇ ಶತಮಾನದ ಬಳಿಕವೇ.  ಈ ಕೋಟೆ ನಿರ್ಮಾಣಗೊಂಡದ್ದು ಸುಮಾರು 9ನೇ ಶತಮಾನದಲ್ಲಿ. 14ನೇ ಶತಮಾನದಲ್ಲಿ ಬೇಲಗುತ್ತಿಯ ಅರಸ ಚೆಲುವರಂಗಪ್ಪ ಕೋಟೆಯನ್ನು ನವೀಕರಣಗೊಳಿಸಿ ಅಭಿವೃದ್ಧಿಪಡಿಸಿದ. ಧೋಲಾಯ್ತಮ ಹಾಗೂ ಮುಂಡಿಗೆ ಎನ್ನುವ ಸಹೋದರರು ಈ ಕೋಟೆಯನ್ನು ವಶಪಡಿಸಿದ ಬಳಿಕ ಇದು ಕೌಳಿ ಎನ್ನುವ ಹಳ್ಳಿಯಲ್ಲಿದ್ದ ಕಾರಣಕ್ಕಾಗಿ ಇದನ್ನು ಕೌಳಿ ದುರ್ಗ ಎಂದೇ ಕರೆದರು. ಹದಿನಾರನೇ ಶತಮಾನದಲ್ಲಿ ಕೆಳದಿಯ ಅರಸ ಹಿರಿಯ ವೆಂಕಟಪ್ಪನಾಯಕ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡು ಅದಕ್ಕೆ ಏಳು ಸುತ್ತಿನ ತಡೆಗೋಡೆಗಳ ರಕ್ಷಣೆಯನ್ನು ಒದಗಿಸಿದ. ಆ ಸಮಯದಲ್ಲಿ ಇದು ಭುವನಗಿರಿಯೆಂದೇ ಹೆಸರು ಪಡೆಯಿತು. ಅದು ಕೋಟೆಯ ಸ್ವರ್ಣಮಯ ಕಾಲ! 1763ರಲ್ಲಿ ಹೈದರ್ ಅಲಿ ಆಕ್ರಮಣ ಮಾಡಿದ ಬಳಿಕ ಕೋಟೆ ಅವಸಾನದತ್ತ ಸಾಗಿತು. ತನ್ನ ಒಂದಷ್ಟು ಸೈನಿಕರನ್ನು ಕೋಟೆಯ ಕಾವಲಿಗೆ ಆತ ನಿಲ್ಲಿಸಿದ ಕಾರಣದಿಂದ ಈ ಕೋಟೆ ಜನರ ಬಾಯಲ್ಲಿ ಕಾವಲು ದುರ್ಗವಾಗಿ ಬದಲಾಯಿತು. ಟಿಪ್ಪುವಿನ ಬಳಿಕ ಮೈಸೂರು ಒಡೆಯರ ವಶಕ್ಕೆ ಈ ಕೋಟೆ ಸಿಕ್ಕಿತಾದರೂ ಅದರ ಅಭಿವೃದ್ಧಿ ಕಡೆಗೆ ಅವರೂ ಮನ ಮಾಡಿದಂತೆ ಕಾಣಲಿಲ್ಲ. 1882ರವರೆಗೂ ತಾಲೂಕು ಕೇಂದ್ರವಾಗಿ ಮೆರೆದಿದ್ದ, ಅನೇಕ ಹೆಸರುಗಳನ್ನು ಪಡೆಯುತ್ತ ಅವಸಾನದತ್ತ ಸಾಗುತ್ತಿದ್ದ ಕೋಟೆಗೆ ಇಂದಿನ ಹೆಸರು ಕವಳೆ ದುರ್ಗವೇ. ಕ್ರಮೇಣ ತಾಲೂಕು ಕೇಂದ್ರ ತೀರ್ಥರಾಜಪುರ ಅಂದರೆ ಇಂದಿನ ತೀರ್ಥಹಳ್ಳಿಗೆ ಸ್ಥಳಾಂತರಗೊಂಡಿತು.

ಕೋಟೆಯ ಅಭಿವೃದ್ಧಿಗೆ ವೆಂಕಟಪ್ಪ ನಾಯಕನ ಕೊಡುಗೆ ಅಪಾರ. ಆತ ಇಲ್ಲಿ ಅರಮನೆಯೊಂದನ್ನು ಕಟ್ಟಿಸಿದ. ಅಗ್ರಹಾರ ಹಾಗೂ ಮಹತ್ತಿನ ಮಠವನ್ನು ಕಟ್ಟಿಸಿದ. ಶೃಂಗೇರಿ ಮಠ, ಖಜಾನೆ, ಧಾನ್ಯದ ಕಣಜ, ಟಂಕಸಾಲೆ, ದೇವಾಲಯಗಳು, ಕೊಳಗಳು ಹಾಗೂ ಆನೆ ಮತ್ತು ಕುದುರೆ ಲಾಯಗಳಿಂದ ಕೋಟೆಯ ವೈಭವವನ್ನು ಹೆಚ್ಚಿಸಿದ. ನೈಸರ್ಗಿಕ ಗುಡ್ಡದ ರೂಪುರೇಷೆಯನ್ನಾಧರಿಸಿ ಬೃಹತ್ ಕಣಶಿಲೆಗಳಿಂದ ಮೂರು ಸುತ್ತಿನ ಗೋಡೆಗಳನ್ನು ನಿರ್ಮಿಸಿದ. ಪ್ರತಿಯೊಂದು ಸುತ್ತಿನ ದ್ವಾರದ ಇಕ್ಕೆಲಗಳಲ್ಲಿ ರಕ್ಷಣಾ ಕೊಠಡಿಗಳನ್ನು ಕಾಣಬಹುದು. ಪ್ರತಿಯೊಂದು ಸುತ್ತಿನಲ್ಲೂ ಕಾವಲುಗಾರರ ಕೋಟೆಗಳನ್ನೊಳಗೊಂಡ ಪ್ರವೇಶದ್ವಾರವಿದ್ದು ಪ್ರತಿಯೊಂದು ಸುತ್ತಿನ ಮಧ್ಯಭಾಗದಲ್ಲಿ ದೇವಾಲಯಗಳ ಅವಶೇಷಗಳು, ಶಿಥಿಲಗೊಂಡ ಅರಮನೆಯ ನಿವೇಶನಗಳು, ಕಟ್ಟಡಗಳ ಅವಶೇಷಗಳಿವೆ. ಮೊದಲ ಸುತ್ತಿನ ಸಂಕಲಿಸಿದ ಎರಡು ವೃತ್ತಾಕಾರದ ರಚನೆಗಳು ಎರಡನೆ ಸುತ್ತಿಗೆ ದ್ವಾರಗಳಾಗಿವೆ. ಇವಕ್ಕೆ ನಗಾರಿ ಬಾಗಿಲು ಎಂದೇ ಹೆಸರು. ಇದೊಂದು ಸುಭದ್ರವಾದ, ಭವ್ಯ, ಸುಸಜ್ಜಿತ ಕೋಟೆಯಾಗಿತ್ತೆಂದು ಅದರ ಅವಶೇಷಗಳೇ ಸಾರಿ ಹೇಳುತ್ತವೆ. ಕೋಟೆ ಸುಮಾರು 8 ಕಿ.ಮೀ ವಿಸ್ತೀರ್ಣದಲ್ಲಿ ವಿಸ್ತರಿಸಿದೆ. ಹಳ್ಳಿಯನ್ನೇ ಸುತ್ತುವರಿದಿದ್ದ ಹೊರಗಿನ ಎರಡು ರಕ್ಷಣಾ ಗೋಡೆಗಳು ಕಾಲದ ಹೊಡೆತಕ್ಕೆ ಸಿಕ್ಕಿ ಬಹುತೇಕ ಅಳಿದು ಹೋಗಿವೆ. ಉಳಿದ ಐದು ಸುತ್ತಿನ ಗೋಡೆಗಳಲ್ಲೂ ಒಳಗಿನ ಎರಡಷ್ಟೇ ಭದ್ರವಾಗಿ ನಿಂತಿವೆ. ಕೆಲವು ಕಡೆಗಳಲ್ಲಿ ಗೋಡೆಗಳು ಈಗಲೂ 40 ಅಡಿಗಳಷ್ಟು ಎತ್ತರವಿರುವುದನ್ನು ನೋಡಿದರೆ ಕೋಟೆಯ ಅಗಾಧತೆ ಹಾಗೂ ಬಲಿಷ್ಟತೆಯನ್ನು ಊಹಿಸಬಹುದು.






ಕೋಟೆಯೊಳಗಿದ್ದ ಹದಿನೈದು ದೇವಾಲಯಗಳಲ್ಲಿ ಈಗ ಉಳಿದಿರುವುದು ಕೆಲವೇ ಕೆಲವು. ಅವುಗಳಲ್ಲಿ ಮೈಲಾರೇಶ್ವರ, ಕಾಶಿ ವಿಶ್ವನಾಥ, ಲಕ್ಷ್ಮೀನಾರಾಯಣ, ಶಿಖರೇಶ್ವರ ದೇವಾಲಯಗಳು ಪ್ರಮುಖವಾದವು. ಆಸ್ಥಾನದ ಅವಶೇಷಗಳು ಹದಿನಾರನೇ ಶತಮಾನದ ರಾಜದರ್ಬಾರನ್ನು ಕಣ್ತುಂಬಿಕೊಳ್ಳಬಯಸುತ್ತವೆ. ಲಕ್ಷ್ಮೀನಾರಾಯಣ ದೇಗುಲ ಮೊದಲ ಸುತ್ತಿನ ಕೋಟೆಯ ಒಳಭಾಗದಲ್ಲಿ ಬೃಹದಾಕಾರದ ಬಂಡೆಯ ಮೇಲೆ ಕಟ್ಟಲ್ಪಟ್ಟಿದೆ. ಇಲ್ಲೇ ಆಸ್ಥಾನದ ಅವಶೇಷಗಳು, ರಾಣಿಯ ಪ್ರತ್ಯೇಕ ಈಜುಕೊಳ, ಜೈಲಿನ ಅವಶೇಷಗಳು, ಶಸ್ತ್ರಾಗಾರ, ಕಾಲವನ್ನು ಅಳೆಯುತ್ತಿದ್ದ ತಾಮ್ರದ ಘಳಿಗೆ ಬಟ್ಟಲು, ಆನೆ ಮತ್ತು ಕುದುರೆ ಲಾಯಗಳನ್ನು ಕಾಣಬಹುದು. ಬೃಹದಾಕಾರದ ಬಂಡೆಯ ಮೇಲೆ ನಿಂತಿದೆ ಶಿಖರೇಶ್ವರ ದೇವಾಲಯ. ಇಡಿಯ ಕೋಟೆಗೆ ಕಿರೀಟದಂತೆ ಪರ್ವತದ ತುತ್ತತುದಿಯಲ್ಲಿ ಶೋಭಿಸುತ್ತ ನಿಂತಿರುವ ಈ ದೇವಾಲಯ ಬೃಹದಾಕಾರದ ಕಲ್ಲುಗಳಿಂದ ಕಟ್ಟಲ್ಪಟ್ಟ ಒಂದು ಸುಂದರ ಗುಡಿ. ಕೆಳಗಿಂದ ನೋಡಿದರೆ ಈ ದೇವಾಲಯವೇ ಒಂದು ಶಿವಲಿಂಗದಂತೆ ಭಾಸವಾಗುತ್ತದೆ. ಈ ದೇವಾಲಯವು ತಲವಿನ್ಯಾಸದಲ್ಲಿ ಗರ್ಭಗೃಹ, ನಂದಿ ಮಂಟಪ ಹಾಗೂ ಮುಖ ಮಂಟಪವನ್ನು ಹೊಂದಿದ್ದು ಅನುಪಮ ಸೂರ್ಯಾಸ್ತದ ವೀಕ್ಷಣೆಗೆ ಸಹಕಾರಿಯಾಗಿದೆ. ಮೂರನೇ ಸುತ್ತಿನ ಕೋಟೆಯೊಳಗಿರುವ ಕಾಶಿ ವಿಶ್ವನಾಥ ದೇವಾಲಯ ವಿಶೇಷವಾದದ್ದು. ದೇಗುಲದ ಎದುರಿಗೆ ಇಕ್ಕೆಲಗಳಲ್ಲಿರುವ ಎರಡು ಶಿಲಾಸ್ಥಂಭಗಳು ಇತಿಹಾಸಕಾರರ ಕುತೂಹಲಕ್ಕೆ ಕಾರಣವಾಗಬಹುದಾದ ಸಂಗತಿ. ಇದು ದಕ್ಷಿಣ ಭಾರತದ ದೇಗುಲಗಳಲ್ಲಿ ಅಪರೂಪ ಎನ್ನಬಹುದಾದ ರಚನೆಯೇ ಸರಿ. ದೇವಾಲಯದ ಎದುರಿಗಿರುವ ಮಂಟಪವನ್ನು ತುಲಾಭಾರ ಮಂಟಪವೆಂದೇ ಕರೆಯಲಾಗುತ್ತಿತ್ತು. ಬಹುಷಃ ತುಲಾಭಾರ ಸೇವೆ ಇಲ್ಲಿಯೇ ನಡೆಯುತ್ತಿದ್ದಿರಬಹುದೆಂಬ ಊಹೆ. ಆಸ್ಥಾನ ನೃತ್ಯಾಂಗನೆಯ ಚಿತ್ರವೊಂದು ಈ ಮಂಟಪದ ಗೋಡೆಯಲ್ಲಿ ಕೆತ್ತಲ್ಪಟ್ಟಿದೆ. ಹಾಂ, ಮುಸಲರಿಂದ ಆಕ್ರಮಣಗೊಂಡ ಎಲ್ಲಾ ದೇವಾಲಯಗಳಲ್ಲಿ ಇರುವಂತೆ ಇಲ್ಲಿಯೂ ಮತಾಂಧತೆಯ ಕುರುಹು ಇದ್ದೇ ಇದೆ. ಕಾಶಿ ವಿಶ್ವನಾಥ ದೇವಾಲಯದ ಗರ್ಭಗೃಹದ ಹೊರಕೋಣೆಯ ದ್ವಾರವನ್ನು ಹೈದರ್ ಇಸ್ಲಾಮಿಕ್ ಶೈಲಿಗೆ ಬದಲಾಯಿಸಿದ್ದಾನೆ.


ವ್ಯವಸ್ಥಿತವಾದ ಅಡುಗೆ ಒಲೆಗಳು, ಸ್ನಾನಗೃಹ, ನೀರಿನ ತೊಟ್ಟಿಗಳು, ನೀರು ಪೂರೈಕೆ ವ್ಯವಸ್ಥೆಗಳು, ನೀರಿನ ಸಂಪು, ಮುಚ್ಚಿಗೆಯಿರುವ ಬಾವಿ ಎಲ್ಲವೂ ಇದರೊಳಗಿವೆ. ಅರಮನೆಯ ನಿವೇಶನ ಎತ್ತರವಾದ ಮಜಲುಗಳುಳ್ಳ ಅಲಂಕೃತ ಅಧಿಷ್ಠಾನವನ್ನು ಹೊಂದಿದೆ. ಒಂದಕ್ಕೊಂದು ಸಂಪರ್ಕವಿರುವ ಹಲವಾರು ಕೋಣೆಗಳುಳ್ಳ ಸ್ಥಂಭಗಳ ಜಗತಿಯುಳ್ಳ ಒಳಾಂಗಣ ಇತ್ತೀಚಿನ ಸರ್ವೇಕ್ಷಣೆಯಲ್ಲಿ ಬೆಳಕಿಗೆ ಬಂತು. ಮೂಮ್ಭಾಗದಲ್ಲಿ ಸ್ಥಂಭಗಳುಳ್ಳ ಜಗತಿ, ನೈಮಿತ್ತಿಕ ಪೂಜಾ ಕೋಣೆ, ಅಡುಗೆ ಮನೆ, ತನ್ನದೇ ನೀರು ಸರಬರಾಜು ಉಳ್ಳ ಸ್ನಾನಗೃಹ, ಆವರಣವಿರುವ ಹಿತ್ತಲ ಕೋಣೆ, ಪಾವಟಿಕೆಗಳುಳ್ಳ ನೀರಿನ ಕೊಳ ಅಂದಿನ ವಾಸ್ತುಶಿಲ್ಪದ ಕಡೆಗೆ ಬೆಳಕು ಚೆಲ್ಲುತ್ತವೆ. ಐದು ಕಡೆ ಜ್ವಾಲೆಗಳನ್ನು ಹೊರಸೂಸುವ ಕಲ್ಲಿನ ಒಲೆ ಪಾಕಶಾಲೆಯಲ್ಲಿ ಕಂಡುಬಂದಿರುವುದು ಅಂದಿನ ತಂತ್ರಜ್ಞಾನದ ಮಟ್ಟವನ್ನು ಬಿಂಬಿಸುತ್ತದೆ.

ಒಂದು ಗುಹೆಯಂತಹಾ ರಚನೆ, ಅಲ್ಲಿಂದ ಹೊರಹೊಮ್ಮುತ್ತಿತ್ತು ಪುಷ್ಕಳವಾದ ಜಲ. ಗದಾ ತೀರ್ಥವದು. ಭೀಮನ ಗದೆಯಿಂದ ಸೃಷ್ಟಿಯಾದುದೆಂಬ ಪ್ರತೀತಿ. ಕಲ್ಲಿನಿಂದ ನಿರ್ಮಿಸಲ್ಪಟ್ಟ ಎರಡು ಪುಟ್ಟ ಕೊಳಗಳು ಒಳ ಸುತ್ತಿನ ಕೋಟೆಯಲ್ಲಿವೆ. ಒಟ್ಟು ಏಳು ಕೊಳಗಳು ಕೋಟೆಯೊಳಗಿವೆ. ಬಿರು ಬೇಸಗೆಯಲ್ಲೂ ಅವು ತುಂಬಿಕೊಂಡಿರುತ್ತವೆ. ನಾವು ಇಂದಿಗೂ ಅಳವಡಿಸಿಕೊಳ್ಳಲು ಮೀನಮೇಷ ಎಣಿಸುತ್ತಿರುವ ಮಳೆಕೊಯ್ಲನ್ನು ಆ ಕಾಲದಲ್ಲೇ ಈ ಕೋಟೆಯಲ್ಲಿ ಅಳವಡಿಸಲಾಗಿದೆ. ಹೀಗೆ ಸಂಗ್ರಹಿಸಲ್ಪಟ್ಟ ಮಳೆ ನೀರು ಕೋಟೆಯ ತುದಿಯಿಂದ ತಳದವರೆಗೆ ವಿಶೇಷವಾಗಿ ನಿರ್ಮಿಸಿದ ನೀರಿನ ಕಾಲುವೆಗಳಲ್ಲಿ ಹರಿಯುತ್ತದೆ. ದಟ್ಟವಾಡ ಕಾಡಿನಿಂದ ಬೆಟ್ಟದ ಮೂಲಕ ಹರಿದು ಬರುವ ನೀರನ್ನೂ ಕಾಲುವೆಗಳ ಮೂಲಕ ಕೊಳಗಳನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ನೀರು ಸಾಗುವಂತೆ ನೆಲದಡಿಯಲ್ಲಿ ಕಾಲುವೆಗಳನ್ನು ರೂಪಿಸಲಾಗಿದೆ. ಅವು ಇಂದಿಗೂ ಸುಸ್ಥಿತಿಯಲ್ಲಿವೆ. ಹೀಗೆ ಹರಿದ ನೀರು ಕೆಳಗಿರುವ ದೊಡ್ಡ ಕೆರೆಯನ್ನು ಸೇರುತ್ತದೆ. ಅಲ್ಲಿಂದ ಮುಂದುವರಿದು ಹಳ್ಳಿಯ ಹಳ್ಳದಲ್ಲಿ ಹರಿದು ದೊಡ್ಡದಾದ "ತಿಮ್ಮರಸ ನಾಯಕನ ಕೆರೆ"ಗೆ ಸಾಗುತ್ತದೆ. ಇದೊಂದು ಯೋಜನಾಬದ್ಧವಾಗಿ ರೂಪಿಸಿರುವ ವ್ಯವಸ್ಥಿತ ಕೋಟೆಯೇ ಸರಿ. ಒಳಸುತ್ತಿನ ಕೋಟೆಯಲ್ಲಿ ಆದಿಶೇಷನ ಸುಂದರ ವಿಗ್ರಹವೊಂದು ಕಾಣಸಿಗುತ್ತದೆ. ನಾಗದೇವರುಗಳು ಕೋಟೆಯನ್ನು ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿದ್ದರೆಂಬ ಪ್ರತೀತಿ. ತುಪಾಕಿ ಬುರುಜು ಎಂದು ಕರೆಯಲ್ಪಡುತ್ತಿದ್ದ ಶಸ್ತ್ರಾಗಾರವೂ ಅಲ್ಲೇ ಇದೆ.




ಕವಳೆದುರ್ಗ ನಿಜವಾಗಿಯೂ ಭುವನಗಿರಿಯೇ ಸರಿ. ಅದನ್ನು ಹತ್ತಿ ನಿಂತಾಗ ಸುತ್ತ ಕಾಣುವ ನೋಟ ಬಲು ರಮ್ಯವಾದದ್ದು. ಪಶ್ಚಿಮಕ್ಕೆ ವಾರಾಹಿ ಹಾಗೂ ಚಕ್ರಾ ನದಿಗಳ ಜಲಧಾರೆಯೂ, ವಾರಾಹಿ ಅಣೆಕಟ್ಟು ದೂರದಲ್ಲಿ ಗೋಚರಿಸುತ್ತದೆ. ವಾರಾಹಿ ಅಣೆಕಟ್ಟಿನಿಂದಾಗಿ ಜಲಾವೃತಗೊಂಡ ಪ್ರದೇಶದಲ್ಲಿ ದಟ್ಟವಾದ ಪುಟ್ಟ ಪುಟ್ಟ ಅರಣ್ಯಗಳು ಮಿಂದೆದ್ದಂತೆ ಗೋಚರಿಸಿದರೆ ದಕ್ಷಿಣಕ್ಕೆ ಕುಂದಾದ್ರಿ ಧಿಗ್ಗನೆದ್ದು ನಿಂತಿದೆ. ಉತ್ತರದಲ್ಲಿ ಮನೋಹರ ಸುಂದರಿ ಕೊಡಚಾದ್ರಿ ಏನನ್ನೋ ಉಸುರುತ್ತಿದೆ.

ಕೆಳದಿಯ ನಾಯಕರು ನಿರ್ಮಿಸಿದ ಈ ಅತ್ಯದ್ಭುತ ಕೋಟೆಯು ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲನ ಗರ್ಭದೊಳಗೆ ಮೆಲ್ಲನೆ ನುಸುಳಿ ಮರೆಯಾಗುತ್ತಿದೆ. ಇಂದಿನ ಜನಾಂಗಕ್ಕೆ ಇತಿಹಾಸದ ಸತ್ಯ - ತಥ್ಯ ದರ್ಶನವನ್ನೂ, ತಂತ್ರಜ್ಞಾನದ ಮಾರ್ಗದರ್ಶನವನ್ನೂ ಮಾಡಬಹುದಾಗಿದ್ದ ಅಮೂಲ್ಯ ನಿಧಿಯನ್ನು ನಾವು ಬಳಸಿಕೊಳ್ಳುತ್ತಿರುವ/ಉಳಿಸಿಕೊಂಡಿರುವ ಸ್ಥಿತಿ ಶೋಚನೀಯ. ಕೋಟೆಯ ಸಮಗ್ರ ನಿರ್ವಹಣೆ ಹಾಗು ಸಮರ್ಪಕ ಉತ್ಖನನದಿಂದ ಅರಣ್ಯ ಗರ್ಭದೊಳಗೆ ಹುದುಗಿರುವ ಸತ್ಯಗಳು ಹಾಗು ಕೆಳದಿಯ ನಾಯಕರ ಬಗೆಗಿನ ವಿವರಗಳು ಇನ್ನಷ್ಟು ಹೊರಬರಬಹುದು. ಹೊರ ಖಂಡಗಳಿಗೆ ಕಾಳು ಮೆಣಸನ್ನು ಮಾರಾಟ ಮಾಡುತ್ತಾ ಅಗಾಧ ಶ್ರೀಮಂತಿಕೆಯನ್ನು ಹೊಂದಿದ್ದ ಸಂಸ್ಥಾನ ಕೆಳದಿ. ಅಲ್ಲಿ ಕಾಶಿ ವಿಶ್ವನಾಥನ ದೇಗುಲದ ಗೋಡೆಯಲ್ಲಿ ನಿಧಿಯನ್ನು ಸೂಚಿಸುವ ನಾಗನ ಚಿತ್ರವನ್ನು ಕೆತ್ತಲಾಗಿದೆ. ಅದು ನನಗೆ ಬಳ್ಳಿ ಕಾಳ ಬೆಳ್ಳಿಯು ಬಳುಕಿದಂತೆ ಅನಿಸುತ್ತಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ