ಬಡವರ ಒಡಲಿಗೆ ಕೊಳ್ಳಿ ಇಟ್ಟಾತನೇ ಟಿಪ್ಪು
ಭಾರತವನ್ನು ನಿಧಾನವಾಗಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಬ್ರಿಟಿಷರಿಗೆ ಇಲ್ಲಿನ ಸಾಮಾಜಿಕ ಪರಿಸ್ಥಿತಿಯ ಅಧ್ಯಯನದ ಅವಶ್ಯಕತೆಯಿತ್ತು. ಅಂತಹಾ ಸಮಯದಲ್ಲಿ ಮದರಾಸು, ಮಲಾಬಾರ್, ಕೆನರಾ ಮತ್ತು ಮೈಸೂರು ಭಾಗಗಳ ಅಧ್ಯಯನಕ್ಕೆ ನಿಯುಕ್ತಿಗೊಂಡವನೇ ಕಲ್ಕತ್ತಾ ಏಷಿಯಾಟಿಕ್ ಸೊಸೈಟಿಯ ಸಂಶೋಧನಾ ವಿದ್ಯಾರ್ಥಿಯೂ ಪ್ರಾಚ್ಯ ವಸ್ತುಗಳ ಅಧ್ಯಯನಕಾರನೂ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ವೈದ್ಯನೂ ಆಗಿದ್ದ ಫ್ರಾನ್ಸಿಸ್ ಬುಕಾನನ್. ಆತನ A journey from madras-through the countries of MYSORE,CANARA AND MALABAR ಆ ಕಾಲದ ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ ಒಂದು ಅಪರೂಪದ ಐತಿಹಾಸಿಕ ದಾಖಲೆಯೆನಿಸಿದೆ. ಟಿಪ್ಪುವಿನ ಅವಸಾನದ ತಕ್ಷಣದಲ್ಲೇ ನಡೆದ ಈ ಅಪೂರ್ವ ದಾಖಲಾತಿ ಇಲ್ಲಿನ ಜನತೆಯ ಮೇಲೆ ಟಿಪ್ಪುವಿನ ದೌರ್ಷ್ಟ್ಯವನ್ನೂ ತನಗರಿವಿಲ್ಲದಂತೆಯೇ ಹೇಳುತ್ತಾ ಹೋಗುತ್ತದೆ.
ಗಡಾಯಿಕಲ್ಲಿನ ಕೋಟೆಯನ್ನು ಟಿಪ್ಪು ಕಟ್ಟಿದ್ದಲ್ಲ; ಆಕ್ರಮಿಸಿ, ಜಮಲಾಬಾದ್ ಎಂದು ಸುನ್ನತ್ ಮಾಡಿಸಿದ್ದು! ಬಂಗಾರ್ ಅರಸನನ್ನು ಬ್ರಿಟಿಷರ ಪರ ಎಂಬ ಗುಮಾನಿಯ ಮೇರೆಗೆ ಟಿಪ್ಪು ನೇಣಿಗೇರಿಸಿದ. ಅವನ ಮಕ್ಕಳು ನಂದಾವರಕ್ಕೆ ಓಡಿ ಹೋಗಿ ಕೃಷಿ ಮಾಡಿ ಹೊಟ್ಟೆ ಹೊರೆಯಬೇಕಾಯಿತು. ಇಕ್ಕೇರಿಯ ನಾಯಕರಾಗಲೀ, ಹೈದರನಾಗಲೀ ಬೆಳ್ತಂಗಡಿಯ ಜನತೆಯ ಮೇಲೆ ತೆರಿಗೆ ವಿಧಿಸಿರಲಿಲ್ಲ. ಆದರೆ ಟಿಪ್ಪು ಉಳಿದ ಶ್ರೀಮಂತ ಪ್ರದೇಶಗಳ ಮೇಲಿದ್ದ ತೆರಿಗೆಯನ್ನೇ ಬೆಳ್ತಂಗಡಿಯ ಬಡ ರೈತರ ಮೇಲೆ ಹೊರಿಸಿದ. “ಜಮಲಾಬಾದ್ ಮೂಲತಃ ನರಸಿಂಘ ಅಂಗಡಿ. ಇವತ್ತು ಇಲ್ಲಿ ದಟ್ಟವಾಗಿ ಮರಗಳಿವೆಯಾದರೂ ಒಂದು ಕಾಲದಲ್ಲಿ ಕೃಷಿ ಮಾಡಿದ ಕುರುಹುಗಳು ಅಲ್ಲಿವೆ. ಮಣ್ಣಿನ ಫಲವತ್ತತೆಯೂ ಅದನ್ನೇ ಸೂಚಿಸುತ್ತದೆ. ಮಯೂರವರ್ಮನ ಬಳಿಕ ನರಸಿಂಘ ರಾಯನೆಂಬ ಬ್ರಾಹ್ಮಣ ರಾಯ ತುಳುನಾಡನ್ನು ಆಳುತ್ತಿದ್ದಾಗ ಇಲ್ಲಿನ ಸಣ್ಣ ನದಿಯ ದಂಡೆಯಲ್ಲಿ ಈ ನಗರವನ್ನು ನಿರ್ಮಿಸಿದ. ಅವನ ಹೆಸರಿನಿಂದಲೇ ಈ ನಗರ ಕರೆಯಲ್ಪಟ್ಟಿತು. ನರಸಿಂಘ ಘಡದ ಮೇಲಿನ ಈ ಕೊಟೆಯನ್ನು ಕಟ್ಟಿದವನು ಅವನೇ. ಆತನ ವಂಶದ ಮನೆಯೊಂದು ಅಲ್ಲಿದೆಯಾದರೂ ಇದಕ್ಕಿಂತ ಹೆಚ್ಚಿನ ಇತಿಹಾಸ ಅವರಿಗೂ ತಿಳಿದಿಲ್ಲ.” ಎಂದು ಕೋಟೆಯ ನೈಜ ಇತಿಹಾಸವನ್ನು ಹೊರಗೆಡವಿದ್ದಾನೆ ಬುಕಾನನ್. ಇಂತಹ ಕೋಟೆಯನ್ನು ತನ್ನ ಕೈವಶ ಮಾಡಿಕೊಂಡ ಟಿಪ್ಪು ತಕ್ಕ ಮಟ್ಟಿಗೆ ಅದನ್ನು ಸಜ್ಜುಗೊಳಿಸಿದ. ಬಳಿಕ ಬ್ರಿಟಿಷರ ಕೈಗೆ ಸುಲಭದ ತುತ್ತಾಗುವಂತಿದ್ದ ಕಾರಣದಿಂದ ಮಂಗಳೂರು ಕೋಟೆಯನ್ನು ನಾಶಗೊಳಿಸಿದ. ಮಂಗಳೂರಿನ 27 ಚರ್ಚುಗಳ ನಾಶಕ್ಕೆ ಟಿಪ್ಪು ಆದೇಶಿಸಿದ್ದು ಈ ಕೋಟೆಯಲ್ಲಿ ಕುಳಿತೇ! ಮಂಗಳೂರಿನಲ್ಲಿ ಕ್ರೈಸ್ತರ ಮೇಲೆರಗಿ ಮಾರಣಹೋಮ ನಡೆಸಿ ಐವತ್ತು ಸಾವಿರಕ್ಕೂ ಹೆಚ್ಚು ಸೆರೆಯಾಳುಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸುವಾಗ, ಇದೇ ಗಡಾಯಿ ಕಲ್ಲಿನ ಕೋಟೆಯಿಂದ ಕೆಲ ಪ್ರಮುಖರನ್ನು ತಳ್ಳಿ ಕೊಂದಿದ್ದ ಟಿಪ್ಪು.
ಅರ್ಕುಳದ ಸಮೀಪದ ಫರಂಗಿಪೇಟೆ ಬಹುತೇಕ ನಾಶವಾಗಿತ್ತು. ಪಣ್ಯನಿ(?) ನದಿಯ ಇಕ್ಕೆಲಗಳಲ್ಲಿದ್ದ ಗದ್ದೆ ತೋಟಗಳಿಗೆ ಟಿಪ್ಪು ಮಾರಕವಾಗಿ ಎರಗಿದ್ದ. ಕಾಲು ಭಾಗದಷ್ಟು ಭೂಮಿಯನ್ನೂ ವ್ಯವಸಾಯ ಮಾಡಲಾಗದ ಸ್ಥಿತಿಗೆ ತಂದಿದ್ದ. ಕಾಳು ಮೆಣಸಿನ ಬಳ್ಳಿಗಳು, ಅವುಗಳು ಅಡರಿದ್ದ ಮರಗಳೆಲ್ಲಾ ಟಿಪ್ಪುವಿನ ಆಜ್ಞೆಯಂತೆ ಅವನ ಸೈನ್ಯದ ಕೊಡಲಿಯೇಟಿಗೆ ಧರೆಗುರುಳಿದ್ದವು. ಬಂಟ್ವಾಳದ ಸುಮಾರು 200 ಪರಿವಾರದ ಜನರನ್ನು ಟಿಪ್ಪು ಸೆರೆ ಹಿಡಿದಿದ್ದ. ಬುಕಾನನ್ ಹೋದ ಸಂದರ್ಭದಲ್ಲಿ ಅಲ್ಲಿ ಕೇವಲ 200 ಮನೆಗಳು ಉಳಿದಿದ್ದವು. ನಾಶವಾದ ಮನೆಗಳು ದುರಸ್ಥಿಯಾಗುತ್ತಿದ್ದವು. ದಾರಿಯುದ್ದಕ್ಕೂ ಕಬ್ಬಿಣದ ಕೋವಿಗಳು ಮತ್ತು ಅದರ ಅವಶೇಷಗಳು ಬಿದ್ದಿದ್ದವು. ಮಂಗಳೂರು ಕೋಟೆಯನ್ನು ಧ್ವಂಸಗೊಳಿಸಿದ ಬಳಿಕ ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಲು ಟಿಪ್ಪು ನೀಡಿದ್ದ ಆದೇಶವನ್ನು ಸರಿಯಾಗಿ ಪಾಲಿಸದ ಅವನ ಸೈನಿಕರು ಅವನ್ನು ದಾರಿಯುದ್ದಕ್ಕೂ ಎಸೆದಿದ್ದರು. ಬಿದ್ದಿದ್ದ ಬಂದೂಕುಗಳನ್ನು ಕಂಡು ಜನರು ಹೆದರಿ ಓಡುತ್ತಿದ್ದರು! ಮೂಡಬಿದಿರೆಯಲ್ಲಿ ಏಳುನೂರರಷ್ಟು ಜೈನ ಹಾಗೂ ಶಂಕರಾಚಾರ್ಯ ಅನುಯಾಯಿಗಳಾದ ಶಿವಭಕ್ತ ಬ್ರಾಹ್ಮಣರ ಮನೆಗಳಿದ್ದವು. ಟಿಪ್ಪುವಿನ ಆಡಳಿತದಲ್ಲಿ ಇಲ್ಲಿನ ದೇವಾಲಯಗಳಿಗೆ ಸಿಗುತ್ತಿದ್ದ ಹಣ 360 ಪಗೋಡಾಗಳಿಂದ 90 ಪಗೋಡಾಗಳಿಗಿಳಿಯಿತು. ಟಿಪ್ಪುವಿನ ದಾಳಿಯ ಬಳಿಕ ಅಲ್ಲಿ ಕೇವಲ ನೂರರಷ್ಟು ಮನೆಗಳುಳಿದಿವೆ! ನಾನು ಇಷ್ಟರವರೆಗೆ ನೋಡಿದ ಪ್ರದೇಶಗಳಲ್ಲಿ ಅತೀ ಬಡತನದಲ್ಲಿರುವ ಪ್ರದೇಶ ಎಂದರೆ ಇದೇ ಎಂದು ಬರೆದಿದ್ದಾನೆ ಬುಕಾನನ್!
"250 ವರ್ಷಗಳ ಹಿಂದೆ ಕಾರ್ಕಳಕ್ಕೆ ಬಂದು ನೆಲೆಸಿದ್ದ ಮರಾಠೀ ಬ್ರಾಹ್ಮಣರು ಅಡಕೆ ಬೆಳೆಗಾರರಾಗಿ ಬದಲಾಗಿದ್ದರು. ಸುಬ್ರಹ್ಮಣ್ಯ ಗೋಕರ್ಣಗಳ ನಡುವೆ ಅವರ 750 ಪರಿವಾರಗಳಿದ್ದವು. ಆದರೆ ಟಿಪ್ಪು ಸಮುದ್ರ ಮಾರ್ಗದ ಮೂಲಕ ವ್ಯಾಪಾರವನ್ನು ನಿಷೇಧಿಸಿದ ಬಳಿಕ ಅಡಕೆಯ ಬೆಲೆ ಕುಸಿದು ತೋಟಗಳು ಪಾಳು ಬೀಳಲಾರಂಭಿಸಿದವು. ಮರಾಠಿ ಬ್ರಾಹ್ಮಣರ ಸಂಖ್ಯೆ 400 ಪರಿವಾರಕ್ಕಿಳಿಯಿತು. ಕಾರ್ಕಳದಲ್ಲಿ ಮುರಿದ ಮನೆಗಳನ್ನು ಮತ್ತೆ ನಿರ್ಮಿಸುವಲ್ಲಿ ಜನ ವ್ಯಸ್ತರಾಗಿದ್ದರು. ತೋಟಗಳಿಗೆ ಬೆಂಕಿ ಬಿದ್ದಂತೆ ಕಾಣುತ್ತಿತ್ತು. ಟಿಪ್ಪುವಿನ ದೌರ್ಜನ್ಯಕ್ಕೆ ವರ್ತಕರೂ ಬಲಿಯಾಗಿ ಪೇಟೆ ಬಿಕೋ ಎನ್ನುತ್ತಿದೆ. ದೇವಸ್ಥಾನವೊಂದರ ದುರಸ್ತಿ ಕೆಲಸ ಅರ್ಧದಲ್ಲೇ ನಿಂತಿದೆ” ಎಂದು ದಾಖಲಿಸಿದ್ದಾನೆ ಬುಕಾನನ್. ಅದು ವೆಂಕಟರಮಣ ದೇವಾಲಯವೆಂದು ಬೇರೆ ಹೇಳಬೇಕಾಗಿಲ್ಲ! ಸಮುದ್ರ ಮಾರ್ಗ ಅಡಕೆ ವಹಿವಾಟಿಗೆ ಮುಕ್ತವಾದದ್ದು ಟಿಪ್ಪು ನಾಶವಾದ ಬಳಿಕವೇ!
ಹಿರಿಯಡ್ಕದ ಜೈನ ಬಸದಿಯಲ್ಲಿದ್ದ ವಿಗ್ರಹವನ್ನು ಟಿಪ್ಪು ಜಮಲಾಬಾದಿಗೆ ಒಯ್ದು ಕರಗಿಸಿ ನಾಣ್ಯಗಳನ್ನಾಗಿ ಪರಿವರ್ತಿಸಿದ್ದ. ಒಂದೊಮ್ಮೆ ಬ್ರಹ್ಮಾವರದ ಮುಂದಿನ ಕಲ್ಯಾಣಪುರದ ರಸ್ತೆಗಳನ್ನು ಅಲಂಕರಿಸಿದ್ದ ಧೂಪದ ಮರಗಳು ಟಿಪ್ಪುವಿನ ಸೈನ್ಯದ ಕತ್ತಿಯೇಟಿಗೆ ಧರಾಶಾಯಿಯಾಗಿದ್ದವು. ಅಲ್ಲಿನ ಗದ್ದೆ, ತೋಟ ಹಾಗೂ ಮನೆಗಳೆಲ್ಲಾ ಟಿಪ್ಪುವಿನ ಪದಾಘಾತಕ್ಕೆ ಸಿಲುಕಿ ಜನಜೀವನ ಅಸ್ತವ್ಯಸ್ತವಾಗಿತ್ತು.ಹೊನ್ನಾವರದ ಮಾರುಕಟ್ಟೆಯೊಂದರಲ್ಲೇ ಆ ಕಾಲದಲ್ಲಿ ಸುಮಾರು 12ಸಾವಿರ ರೂಪಾಯಿಗಳ ಕೊಪ್ಪರ(ಒಣ ಕೊಬ್ಬರಿ) ಹೊರದೇಶಗಳಿಗೆ ರಫ್ತಾಗುತ್ತಿತ್ತು. ಅಕ್ಕಿ, 9 ಸಾವಿರ ಪಗೋಡ ಮೊತ್ತದ ಕಾಳು ಮೆಣಸು, ಹತ್ತುಸಾವಿರ ಪಗೋಡಾಗಳ ಮೊತ್ತದ ಅಡಕೆ ರಫ್ತಾಗುತ್ತಿತ್ತು. ಇವೆಲ್ಲಾ ಕೇವಲ ಭಟ್ಕಳ ಹಾಗೂ ಮಿರ್ಜಿಯ ನಡುವಿನ ಸಣ್ಣ ಪ್ರದೇಶದ ಸರಕುಗಳು. ಟಿಪ್ಪುವಿನ ದಬ್ಬಾಳಿಕೆಯಿಂದ ಅವೆಲ್ಲಾ ನಿಂತು ಹೋದವು. ಒಂದು ಕಾಲದಲ್ಲಿ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಈ ಪ್ರದೇಶಗಳು ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾದ ದುಃಸ್ಥಿತಿಗೆ ತಲುಪಿದವು. ಕುಮಟಾದ ತೆಂಗಿನ ತೋಟಗಳು ಎರಡೆರಡು ಬಾರಿ ಹತ್ತಿರವೇ ಠಿಕಾಣಿ ಹೂಡಿದ್ದ ಟಿಪ್ಪುವಿನ ಸೇನೆಯ ಬೆಂಕಿಗೆ ಆಹುತಿಯಾಗಿದ್ದವು! ಇದು ಮತಾಂಧನೊಬ್ಬನ ಸೇನೆ ಅವನಂತೆಯೇ ಅಜಾಗರೂಕವೂ, ದುರಾಚಾರಿಯೂ, ಕ್ರೂರವೂ ಆಗದೇ ಉಳಿದೀತೇ? ಹೈದರನ ವಿರುದ್ಧ ಸೆಟೆದು ನಿಂತ ಊರು ಮಿರ್ಜಿ. ವಾಸ್ತವದಲ್ಲಿ ಮಿಡಿಜಯ್ ಮುಸಲ್ಮಾನರ ಬಾಯಲ್ಲಿ ಮಿರ್ಜಿಯಾಗಿ ವಿರೂಪಗೊಂಡಿತ್ತು. ಇಂತಹ ಮಿಡಿಜಯ್ ಟಿಪ್ಪುವಿನ ದಬ್ಬಾಳಿಕೆಗೆ ನಲುಗಿ ನಿರ್ಜನ ಪ್ರದೇಶವಾಗಿ ಹೋಯಿತು.
ನೀಲೇಶ್ವರದಿಂದ ಕಾರವಾರದವರೆಗೆ ಟಿಪ್ಪುವಿನ ಕೈದಿಗಳಾದ ಕ್ರೈಸ್ತರ ಸಂಖ್ಯೆಯೇ ಬರೋಬ್ಬರಿ 80 ಸಾವಿರ! ಸ್ತ್ರೀ, ಪುರುಷ, ರೋಗಿ, ಅಶಕ್ತ ಎಂದೆಲ್ಲಾ ನೋಡದೆ ಅವರನ್ನು ಬೆಟ್ಟಗುಡ್ಡಗಳಲ್ಲಿ ಎಳೆದುಕೊಂಡು ಹೋಗಿ ಶ್ರೀರಂಗಪಟ್ಟಣದ ಕಾರಾಗೃಹಗಳಲ್ಲಿ ಕೊಳೆಸಲಾಯಿತು. ಇಪ್ಪತ್ತು ಸಾವಿರದಷ್ಟು ಮಂದಿ ದಾರಿಯಲ್ಲೇ ಸತ್ತರು. ಮದಕರಿ ನಾಯಕರನ್ನು ಮೋಸದಿಂದ ಕೊಲ್ಲಿಸಿದ; ಮೈಸೂರು, ಕೊಡಗು, ಮಲಬಾರ್, ತುಳುನಾಡು ಸೀಮೆಗಳಾದ್ಯಂತ ದೇವಾಲಯಗಳನ್ನೂ, ಜನರನ್ನೂ ನಾಶ ಮಾಡಿ, ಮತಾಂತರಿಸಿ ಊರೂರುಗಳನ್ನೇ ಸ್ಮಶಾನವಾಗಿ ಪರಿವರ್ತಿಸಿದ ಮತಾಂಧನೊಬ್ಬನ ಆಡಳಿತದಲ್ಲಿ ಸಮಾಜ ಎಂತಹಾ ದುರ್ದೆಶೆಗೆ ಒಳಗಾಗಿರಬಹುದು? ಮನೆ, ಗದ್ದೆ, ತೋಟಗಳನ್ನೂ ಸುಟ್ಟು, ವ್ಯಾಪಾರಕ್ಕೂ ಅವಕಾಶ ಕೊಡದೆ, ಕಂದಾಯವನ್ನು ಬೇಕಾಬಿಟ್ಟಿ ಏರಿಸಿ ಬಡ ರೈತರ ಒಡಲಿಗೆ ಕೊಳ್ಳಿ ಇಟ್ಟ ಕ್ರೂರಿಯೊಬ್ಬ ಮಾತೆತ್ತಿದರೆ ಸಮಾಜವಾದದ ಮಾತಾಡುವ ಸರಕಾರಕ್ಕೆ ಅಪ್ಯಾಯಮಾನವಾಗಿದ್ದಾನೆಯೆಂದರೆ ಇದು ಕಲಿಯುಗವೇ ಸರಿ. ಏನಿಲ್ಲ, ತಾವು ಬಡವರ ಪರ ಎಂದು ಬಡಾಯಿ ಕೊಚ್ಚಿಕೊಳ್ಳುವ ಜನ ಬಡಜನರ, ರೈತರ ಭೂಮಿಯ ಮೇಲೆರಗಿದ್ದ ಈ ಧೂರ್ತನ ಪ್ರಶಂಸೆ ಮಾಡುವ ಮೂಲಕ ತಮ್ಮನ್ನು ತಾವು ಬೆತ್ತಲಾಗಿರಿಸಿಕೊಂಡಿದ್ದಾರೆ, ಅಷ್ಟೇ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ