ಪುಟಗಳು

ಬುಧವಾರ, ನವೆಂಬರ್ 1, 2017

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

ಭಾಷೆಯ ಮೇಲಿನ ದುರಭಿಮಾನ...ರಾಷ್ಟ್ರದ್ರೋಹಕ್ಕೆ ಆಹ್ವಾನ!

           "ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ"- ವಸುಧೆಯೊಳಗೆ ವಿಲೀನವಾಗಿದ್ದೂ ತನ್ನ ವಿಶೇಷತೆಯನ್ನು ವಿಶದಗೊಳಿಸುತ್ತಲೇ ಇರುವ ಕಾವೇರಿಯಿಂದ ಗೋದಾವರಿಯವರೆಗಿರುವ ಜನಪದ ಎಂದು ಕನ್ನಡದ ಅನನ್ಯತೆ, ಸ್ವಂತಿಕೆಯನ್ನು ಮನೋಜ್ಞವಾಗಿ ಬಣ್ಣಿಸಿದೆ ಕವಿರಾಜಮಾರ್ಗ. ಕನ್ನಡವೊಂದು ಗುಪ್ತಭಾಷೆಯಾಗಿದ್ದಿತು ಎಂದು ಕುಮುದೇಂದು ಮುನಿಯ 'ಸಿರಿ ಭೂವಲಯ' ಗ್ರಂಥ ತಿಳಿಸುತ್ತದೆ. ಕನ್ನಡ ಭಾಷೆಯ ಈ ಕಾವ್ಯದಲ್ಲಿ ಲಿಪಿಗಳಿರುವ, ಲಿಪಿ ಇಲ್ಲದ ೭೧೮ ಭಾಷೆಗಳಿದ್ದು, ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ; ಅದು "ಸರ್ವಭಾಷಾಮಯಿ ಭಾಷಾ" ಎಂದು ಕನ್ನಡವನ್ನು ಹಾಡಿಹೊಗಳಿದ್ದಾನೆ ಕುಮುದೇಂದು ಮುನಿ. "ಗಾನವ ಬೆರೆಯಿಸಿ ವೀಣೆಯ ದನಿಯೊಳು ವಾಣಿಯ ನೇವುರ ನುಡಿಸುತೆ ಕುಣಿಯಲು ಮಾಣದೆ ಮೆರೆಯುವ ಮಂಜುಲ ರವ"ವೆಂದು ಒಂದು ಕಾಲದಲ್ಲಿ ಕವಿಗಳ ವರ್ಣನೆಯ ಭಾರಕ್ಕೆ ನಲುಗಿದ ಈ ಮನವ ತಣಿಸುವ ಮೋಹನ ಸುಧೆಯನ್ನು ಇನ್ನೇನು ಕೆಲವೇ ಸಮಯದಲ್ಲಿ ಕಳೆದು ಕೊಳ್ಳುತ್ತೇವೆಯೋ ಎನ್ನುವ ಭಯ ಆರಂಭವಾಗಿರುವುದು ಸುಳ್ಳಲ್ಲ! ಅಪರಿಮಿತ ಸಂಖ್ಯೆಯ ಶಬ್ಧಗಳೂ, ಕರಾರುವಕ್ಕಾದ ಅಗಾಧ ಶಬ್ಧೋತ್ಪತ್ತಿ ಇರುವ ಕನ್ನಡದ ಶಬ್ಧಗಳು ನಮ್ಮ ಕಣ್ಣೆದುರಲ್ಲೇ ಕರಗಿ ಹೋಗುತ್ತಿರುವುದನ್ನು ಕಂಡಾಗ ಅಂತಹಾ ಭಯ ಹುಟ್ಟದಿರುತ್ತದೆಯೇ?

              ಆದರೆ ಕನ್ನಡಿಗರಿಗೆ ಇದರ ಅರಿವಿದೆಯೇ? ಕನ್ನಡಕ್ಕಾಗಿ ಹೋರಾಟ ಮಾಡಲು ಬೀದಿಗೊಂದರಂತೆ ಎದ್ದಿರುವ ಕನ್ನಡ ಸಂಘಟನೆಗಳು ಕನ್ನಡದ ಅಳಿವಿಗೆ ಕಾರಣವಾಗುತ್ತಿರುವ ನೈಜ ಸಮಸ್ಯೆಯನ್ನು ಬಗೆಹರಿಸಲು ಹೋರಾಡುತ್ತಿವೆಯೇ? ಇಂತಹ ಅನುಮಾನ ಬರಲು ಕಾರಣವಿದೆ. ದಿನ ದಿನವೂ ಒಂದೊಂದಾಗಿ ಮುಚ್ಚುತ್ತಿರುವ ಕನ್ನಡ ಶಾಲೆಗಳ ದುಃಸ್ಥಿತಿಯ ಕುರಿತು ಇವರು ತುಟಿಪಿಟಿಕ್ಕೆನ್ನುವುದಿಲ್ಲ. ನಾಯಿಕೊಡೆಗಳಂತೆ ಬೆಳೆಯುತ್ತಿರುವ ಅನ್ಯಭಾಷಾ ಶಾಲೆಗಳ ಬಗ್ಗೆ ಇವರದ್ದು ದಿವ್ಯ ಮೌನ. ಅರೇಬಿಕ್ ಭಾಷೆಯನ್ನು ಪ್ರಾಥಮಿಕ ಶಾಲೆಗಳಲ್ಲಿ ಕಲಿಸುತ್ತೇವೆಂದು ಸರಕಾರ ಘೋಷಣೆ ಮಾಡಿದಾಗ ಮುಗುಮ್ಮಾಗಿ ಉಳಿದ ಈ ಹೋರಾಟಗಾರರು ಇತ್ತೀಚೆಗಷ್ಟೇ "ಮೆಟ್ರೋದಲ್ಲಿ ಹಿಂದಿ ಹೇರಿಕೆ" ಎನ್ನುವ ಕ್ಷುಲ್ಲಕ ವಿಚಾರವನ್ನು ಹಿಡಿದುಕೊಂಡು ಬೆಂಗಳೂರನ್ನು ರಾಡಿ ಎಬ್ಬಿಸಲಾರಂಭಿಸಿದರು!. ಕೇಂದ್ರ ಸರಕಾರದ ತ್ರಿಭಾಷಾ ಸೂತ್ರದ ಅನ್ವಯ ಮೆಟ್ರೋ ರೈಲಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ – ಈ ಮೂರು ಭಾಷೆಗಳಲ್ಲಿ ನಡೆಯುತ್ತಿವೆ. ಮೆಟ್ರೋ ಬೆಂಗಳೂರಿಗೆ ಬಂದ ದಿನದಿಂದಲೂ ಇದು ನಡೆಯುತ್ತಾ ಬಂದಿದೆಯೇ ಹೊರತು ಕೇಂದ್ರದಲ್ಲಿ ಭಾಜಪಾ ಸರಕಾರ ಬಂದ ಮೇಲೆ ಕಾಣಿಸಿಕೊಂಡ ಬೆಳವಣಿಗೆಯಲ್ಲವಲ್ಲ. ಈ ಹೋರಾಟಗಾರರು ಹೇಳುವ ಹಾಗೆ ಕನ್ನಡವನ್ನು ಮೂರನೇ ಸ್ಥಾನಕ್ಕೆ ತಳ್ಳಲಾಗಿಲ್ಲ. ಅದು ಮೊದಲನೆಯ ಸ್ಥಾನದಲ್ಲೇ ಇದೆ. ಕೇವಲ ಮೆಟ್ರೋ ಮಾತ್ರವಲ್ಲ; ಭಾರತೀಯ ರೈಲ್ವೇ, ಸೂಪರ್ ಮಾರ್ಕೆಟ್, ಅಂಚೆ, ಬ್ಯಾಂಕ್, ಬಸ್ ನಿಲ್ದಾಣ ಎಲ್ಲಾ ಕಡೆ ಇದೇ ಕ್ರಮ ಹಲವು ದಶಕಗಳಿಂದಲೂ ಚಾಲ್ತಿಯಲ್ಲಿದ್ದರೂ ಈಗ ಇದ್ದಕ್ಕಿದ್ದಂತೆ ಕೆಲವರು ದಂಗೆ ಎದ್ದದ್ದೇಕೆ? ಈಗ ಮೂರನೇ ಸ್ಥಾನದಲ್ಲಿರುವ ಹಿಂದಿ ಮುಂದೊಂದು ದಿನ ಕನ್ನಡದ ಸ್ಥಾನವನ್ನು ತಾನೇ ಆಕ್ರಮಿಸಿಕೊಳ್ಳುತ್ತದೆ ಎನ್ನುವ ಇವರ ವಾದದಲ್ಲಿ ಹುರುಳಿದೆಯೇ? ಕನ್ನಡ ತನ್ನ ಸ್ಥಾನವನ್ನು ಫಲಕದಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಜನಮಾನಸದಲ್ಲಿ ಉಳಿಸಿಕೊಳ್ಳಬೇಕೇ? ಹಿಂದಿ ಬೇಡವೇ ಬೇಡ ಎನ್ನುವವರಿಗೆ ಕೆಲವು ಪ್ರಶ್ನೆಗಳಿವೆ. ಇಂಗ್ಲೀಷ್ ಬಾರದ ಉತ್ತರ ಭಾರತದ ವ್ಯಕ್ತಿಯೊಬ್ಬ ಕರ್ನಾಟಕಕ್ಕೆ ಬಂದರೆ ಏನು ಮಾಡಬೇಕು? ಇಂಗ್ಲೀಷ್ ಜಾಗತಿಕ ಭಾಷೆ ಎನ್ನುವವರಿಗೆ ಭಾರತದಲ್ಲಿ ಇಂಗ್ಲೀಷ್ಗಿಂತ ಹೆಚ್ಚು ಹಿಂದಿ ಮಾತಾಡುವವರಿದ್ದಾರೆ ಎನ್ನುವುದರ ಅರಿವಿದೆಯೇ? ಇಂಗ್ಲೀಷ್ ಜಾಗತಿಕ ಭಾಷೆ, ಹೊರಗಿನವರು ಬಂದರೆ ಬೇಕು ಎನ್ನುವ ವಾದ ಹೂಡುವವರಿಗೆ ನಮ್ಮವರೇ ಆದ ಭಾರತೀಯರು ಬೇಡವೇ? ಇಂಗ್ಲೀಷ್ ಬರುವುದಕ್ಕಿಂತ ಎಷ್ಟೋ ಮುಂಚೆ ಇಲ್ಲಿನವರು ಬದುಕಿರಲಿಲ್ಲವೇ? ಒಂದು ಸ್ಥಳದಿಂದ ಇನ್ನೊಂದು ಕಡೆ ಅಡ್ಡಾಡುತ್ತಿರಲಿಲ್ಲವೇ?  ಕರ್ನಾಟಕದಲ್ಲಿ 5000ಕ್ಕೂ ಹೆಚ್ಚು ಪ್ರಾಥಮಿಕ / ಮಾಧ್ಯಮಿಕ / ಪ್ರೌಢ ಉರ್ದು ಶಾಲೆಗಳಿವೆ. ಇಷ್ಟೊಂದು ಸಂಖ್ಯೆಯ ಉರ್ದು ಶಾಲೆಗಳು ಮುಂದೊಂದು ದಿನ ರಾಜ್ಯದ ಎರಡನೇ ಬಹುದೊಡ್ಡ ಪಂಗಡವನ್ನು ಕನ್ನಡವೇ ಮರೆಯುವಂತೆ ಮಾಡಬಹುದೆಂದು ಕನ್ನಡದ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ಈ ಹೋರಾಟಗಾರರಿಗೇಕೆ ಅನಿಸಿಲ್ಲ? ಅವರ್ಯಾಕೆ ಈ ಉರ್ದು ಹೇರಿಕೆಯ ಮೇಲೆ ಹೋರಾಟ ಮಾಡಲೊಲ್ಲರು? ಕನ್ನಡದ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ ಕನ್ನಡ ವಿರೋಧಿ ಟಿಪ್ಪುವಿನ ವೈಭವೀಕರಣದ ಆಚರಣೆಗೆ ತೊಡಗಿದ ರಾಜ್ಯ ಸರ್ಕಾರದ ಕ್ರಮವನ್ನು ಇವರು ವಿರೋಧಿಸಿಲ್ಲವೇಕೆ? ಹಿಂದಿಯಿಂದಾಗಿ ಕನ್ನಡ ಸಾಯುತ್ತದೆ ಅನ್ನುವುದು ಸುಳ್ಳು. ಹಿಂದಿಯ ನಡುವೆ ಇದ್ದುಕೊಂಡು ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿಲ್ಲವೆ? ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಭೀತಿ ಕೇವಲ ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

            ವಾಸ್ತವದಲ್ಲಿ ಈ ಹೋರಾಟಗಾರರಲ್ಲಿ ಹೆಚ್ಚಿನವರಿಗೆ ಹೋರಾಟವೆಂದರೆ ತಮ್ಮ ಬೇಳೆ ಬೇಯಿಸಿಕೊಳ್ಳಲಿರುವ ಒಂದು ಮಾಧ್ಯಮ ಅಷ್ಟೆ. ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸದ ಇವರದ್ದು ಎಂತಹಾ ಹೋರಾಟ? ಅವರಿಗೆ ಕೇವಲ ತಮ್ಮ ಸ್ವಾರ್ಥ ಸಾಧನೆಗಷ್ಟೇ ಕನ್ನಡ ಬೇಕು.  ಮೆಟ್ರೋ ಸಂಚಾರ ವ್ಯವಸ್ಥೆಯಲ್ಲಿ ಯಾರೂ ಗಮನ ಕೊಡದ ಯಃಕಶ್ಚಿತ್ ಬೋರ್ಡುಗಳ ಭಾಷೆಯ ವಿಷಯವೇ ಇವರಿಗೆ ಪ್ರಧಾನವಾಗಿ ಕಾಣಿಸಿಕೊಳ್ಳುವುದರ ಹಿಂದೆ ಏನೋ ಕುಯುಕ್ತಿ, ಹಿತಾಸಕ್ತಿಗಳು ಇರುವುದು ಸುಸ್ಪಷ್ಟ. ಯಾವ ಹೋರಾಟದಿಂದ ಕೇಂದ್ರದ ಭಾಜಪಾ ಸರಕಾರವನ್ನು ಜನರ ಮನಸ್ಸಿನಲ್ಲಿ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ, ರಾಜ್ಯದ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಮರೆಸಬಹುದೋ ಅಂಥವಷ್ಟೇ ಇವರಿಗೆ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ಅವಕ್ಕಷ್ಟೇ ಇವರ ಕಪ್ಪು ಬಾವುಟಗಳು ಹಾರಾಡುತ್ತವೆ. ವಿಚಿತ್ರ ಹಾಗೂ ವಿಪರ್ಯಾಸದ ವಿಚಾರವೆಂದರೆ ಹೆಚ್ಚಿನ ಕನ್ನಡಪರ ಚಳವಳಿಗಳಲ್ಲಿ ಭಾಗವಹಿಸುವ ಕಾರ್ಯಕರ್ತರನೇಕರಿಗೆ ತಾವ್ಯಾಕೆ ಹೋರಾಟ ನಡೆಸುತ್ತಿದ್ದೇವೆ ಎನ್ನುವುದರ ಅರಿವೇ ಇರುವುದಿಲ್ಲ. ಹಿಡಿಯಷ್ಟಿರುವ ಪ್ರಾಮಾಣಿಕ ಹೋರಾಟಗಾರರಿಗೆ ತಾವು ಮುಂಚೂಣಿಯಲ್ಲಿರುವವರ ಸ್ವಾರ್ಥಕ್ಕೆ ಬಲಿಯಾಗಿರುವುದು ತಿಳಿದಾಗ ಬೆಳಗಾಗಿರುತ್ತದೆ.

            ಕೆಲ ರಾಜ್ಯಗಳ ಗಡಿ ಭಾಗಗಳಲ್ಲಿ ಭಾಷೆಯ ಬದಲು ಭಾಷಾ ಜಗಳಗಳ ನಿತ್ಯ ಕಲರವ. ಭಾಷೆಯ ಮೇಲಿನ ಅಂಧಾಭಿಮಾನ ಕೇವಲ ಭೂ ಅಥವಾ ಜಲವಿವಾದಕ್ಕಷ್ಟೇ ಸೀಮಿತವಾಗಿಲ್ಲ. ಅದು ರಾಜಕಾರಣದಲ್ಲೂ, ಆಡಳಿತಾತ್ಮಕ ಸೇವೆಗಳಲ್ಲೂ ಕಾರ್ಪೋರೇಟ್ ಜಗತ್ತಿನಲ್ಲೂ ಹಾಸುಹೊಕ್ಕಾಗಿದೆ. ತಮಿಳಿಗರ ಭಾಷಾಂಧತೆ ಎಷ್ಟೆಂದರೆ ಅಲ್ಲಿ ದೇಶವನ್ನು "ರಾಷ್ಟ್ರ"ವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಂಸ್ಕೃತ ಹಾಗೂ ಇತರ ಭಾಷೆಗಳಿಗೆ ಸ್ಥಾನವೇ ಇಲ್ಲ. ಆದರೆ ತಮಿಳರಿಗೆ ಧರ್ಮ, ಸಂಸ್ಕೃತಿ ಹಾಗೂ ಜೀವನಕ್ರಮ ಹೀಗೆ ಎಲ್ಲವೂ ಆಗಿರುವ ತಮಿಳು ಭಾಷೆ ಇತ್ತೀಚೆಗೆ ಎಷ್ಟು ವಿಸ್ತಾರಗೊಂಡಿದೆ? ಬ್ರಿಟನ್ನಿನ ನೆರೆಯ ರಾಷ್ಟ್ರ ಫ್ರಾನ್ಸ್ ಇಂಗ್ಲೀಷನ್ನು ತನ್ನೊಳಗೆ ಬಿಟ್ಟುಕೊಳ್ಳಲೇ ಇಲ್ಲ. ಜೊತೆಗೇ ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಅವರು ಅದನ್ನು ಫ್ರಾನ್ಸಿನ ಗಡಿಯೊಳಗೆ ಬಂಧಿಸಿಬಿಟ್ಟರು. ಇದರಿಂದ ಇಂಗ್ಲೀಷಿಗೇನೂ ನಷ್ಟವಾಗಲಿಲ್ಲ. ಆದರೆ ಇವತ್ತು ಫ್ರೆಂಚನ್ನು ಫ್ರಾನ್ಸ್ ಹಾಗೂ ಬೆರಳೆಣಿಕೆಯ ದೇಶಗಳನ್ನು ಬಿಟ್ಟರೆ ಕೆಲವು ಪ್ರತಿಷ್ಠಿತ ವಿದ್ಯಾಲಯಗಳ ಅಹಮಿಕೆಯ ಭಾಷಾ ಕಲಿಕೆಯಾಗಿ ಮಾತ್ರ ನಾವು ನೋಡಬಹುದು ಅಷ್ಟೇ! ಒಂದು ಭಾಷೆಯನ್ನು ನಮ್ಮದು, ನಮ್ಮದು ಮಾತ್ರ ಎಂದು ಹಿಡಿದಿಟ್ಟರೆ, ಒಂದು ಪ್ರಾಂತ್ಯಕ್ಕಷ್ಟೇ ಸೀಮಿತಗೊಳಿಸಿದರೆ ಅದು ಬೆಳೆಯುವುದಾದರೂ ಹೇಗೆ? ಇದನ್ನೇ ಕನ್ನಡಿಗರಿಗೂ ಅನ್ವಯಿಸಬಹುದು. ಕನ್ನಡದ ಹೆಸರಲ್ಲಿ ಕಂಡಕಂಡವರಿಗೆ ಬಡಿದರೆ ಕನ್ನಡ ಉಳಿಯುತ್ತದೆಯೇ? ಕನ್ನಡ ಮಾತಾಡಲು ಬರುವುದಿಲ್ಲವೆಂಬ ಕಾರಣಕ್ಕಾಗಿ ಅನ್ಯಭಾಷಿಕರ ಮೇಲೆ ಹಲ್ಲೆ ನಡೆಸುವ ಅನಗತ್ಯ "ಓರಾಟ"ಗಳಿಗೆ ಬಲಿಬೀಳುವ ಬದಲು ಇಲ್ಲಿರುವ ಅನ್ಯಭಾಷಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಿ, ಕನ್ನಡ ಕಲಿಸಿ; ಆಗ ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ. ಎರಡು ಸಾವಿರ ವರ್ಷಗಳ ಕಾಲ ಮರಳಿನಡಿ ಹೂತುಹೋಗಿದ್ದ ಹೀಬ್ರೂ ಭಾಷೆಯನ್ನು ಮತ್ತೆ ಮೇಲೆ ಚಿಮ್ಮಿಸಿದ  ಇಸ್ರೇಲಿಗಳ ಸಾಹಸಗಾಥೆ ನಮ್ಮ ಕಣ್ಣಮುಂದಿದೆ.

            ಯಾವಾಗ ಕವಿರಾಜಮಾರ್ಗ 'ಕಾವೇರಿಯಿಂದ ಗೋದಾವರಿವರೆಗೆ ಮೆರೆವ ಜನಪದ' ಎಂದು ಕನ್ನಡವನ್ನು ವರ್ಣಿಸಿತ್ತೋ ಆಗ ಇಂಗ್ಲೀಷ್, ಹಿಂದಿಗಳು ಹುಟ್ಟಿರಲೇ ಇಲ್ಲ. ಹಾಗೆ ಮೆರೆದ ಕನ್ನಡ ಭಾಷೆಯ ಉಳಿವಿಗಾಗಿ ಇಂದು ಹೋರಾಟ ನಡೆಸಬೇಕಾಗಿ ಬಂದಿರುವುದಕ್ಕೆ ಹೊಣೆ ಯಾರು? ಅನ್ಯ ಭಾಷಿಕರಂತೂ ಖಂಡಿತಾ ಅಲ್ಲ. ತಮ್ಮ ಮುಂದಿನ ಪೀಳಿಗೆಯ ಮಾತೃಭಾಷೆಯನ್ನೇ ಬದಲು ಮಾಡುತ್ತಿರುವ ಕನ್ನಡಿಗರೇ ಅಲ್ಲವೇ? ಕನ್ನಡಿಗರು ಎಷ್ಟರ ಮಟ್ಟಿಗೆ ಭಾಷೆಯನ್ನು ದೂರ ಸರಿಸುತ್ತಿದ್ದಾರೆ ಎಂದರೆ ಇಲ್ಲಿ ಬಂದು ನೆಲೆಸಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಯುವ ಶ್ರಮ ಬೇಡವೆಂದು ಕನ್ನಡಿಗರೇ ಅವರ ಭಾಷೆಯನ್ನು ಕಲಿತು ಅವರಿಗೆ ಸಹಕಾರ ಮಾಡುವಷ್ಟು! ನಡುನಡುವೆ ಯಥೇಚ್ಛ ಆಂಗ್ಲ ಪದಗಳನ್ನು ಬಳಸುವುದೇ ಪ್ರತಿಷ್ಠೆಯ ವಿಚಾರವಾಗಿರುವುದು ಕನ್ನಡಿಗರ ಶಬ್ಧ ದಾರಿದ್ರ್ಯದ ಸಂಕೇತ. ಮಾಹಿತಿ ತಂತ್ರಜ್ಞಾನದ ಕೇಂದ್ರ ಎಂದೆನಿಸಿರುವ ಕರ್ನಾಟಕದಲ್ಲಿ ಮಾಹಿತಿಗಾಗಲಿ ಅಥವಾ ಆಡಳಿತಾತ್ಮಕ ವಿಷಯಗಳಿಗಾಗಲೀ ಮಾತೃಭಾಷೆ ಕನ್ನಡವನ್ನು ಬಳಸುವ ತಂತ್ರಜ್ಞಾನದ ಬೆಳವಣಿಗೆ ಆಗಿರುವುದು ಅತ್ಯಲ್ಪ ಎಂದರೆ ವಿಚಿತ್ರವಲ್ಲವೇ? ಹೀಗೆ ನಮ್ಮ ಭಾಷೆಯ ಅಳಿವಿಗೆ ನಾವೇ ಕಾರಣವಾಗಿದ್ದರೂ ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಭಾಷೆ ಬೆಳೆಯುವುದು ಯಾವುದೋ ಶಾಸ್ತ್ರೀಯ ಸ್ಥಾನಮಾನವೋ ದೊಡ್ಡ ಇಡುಗಂಟು ಸಿಗುವುದರಿಂದಲ್ಲ. ಭಾಷೆ ಬೆಳೆಯಬೇಕಾದರೆ ಜನ ಅದನ್ನು ತಮ್ಮ ನಿತ್ಯ ವ್ಯವಹಾರದಲ್ಲಿ ಬಳಸಬೇಕು. ವಿಚಿತ್ರವೆಂದರೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಡುವವರ ಮಾತಿನಲ್ಲಿ ಕಂಗ್ಲೀಷ್ ತುಂಬಿತುಳುಕಾಡುತ್ತಿರುತ್ತದೆ!

2005ರ ಮೇಯಲ್ಲಿ ಮಣಿಪುರದ ಮಹಾನ್ ಆಸ್ತಿಯಾಗಿದ್ದ ಬೃಹತ್ ಗ್ರಂಥಾಲಯವೊಂದು ಧಗಧಗನೆ ಉರಿದು ಹೋಯಿತು. ಪ್ರಾಚೀನ ಕಾಲದ ಅಪರೂಪದ ಪುಸ್ತಕಗಳು, ಸಾವಿರಾರು ಹಸ್ತಪ್ರತಿಗಳು ಭಸ್ಮವಾದವು. ಗ್ರಂಥಾಲಯದಲ್ಲಿ ಬಂಗಾಳಿ ಹಸ್ತಪ್ರತಿಗಳ ಸ್ಥಾನದಲ್ಲಿ ಸ್ಥಳೀಯ ಮೈತಿಯ್ ಭಾಷೆಯ ಹಸ್ತಪ್ರತಿಗಳಿರಬೇಕು ಎಂಬ ಕಮ್ಯೂನಿಸ್ಟರು ಹಾಗೂ ಚರ್ಚುಗಳಿಂದ ಪ್ರೇರಿತವಾಗಿರುವ ಸ್ಥಳೀಯ ಮೈತಿಯ್ ಆಂದೋಲನದ ತಾಲಿಬಾನ್ ಮನಸ್ಥಿತಿ ಇದಕ್ಕೆ ಕಾರಣವಾಗಿತ್ತು! ಅಧ್ಯಾಪಕರಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರವರೆಗೂ ತಮ್ಮವರನ್ನೇ ನೇಮಕ ಮಾಡಬೇಕೆಂದು ಗನ್ ಹಿಡಿದೇ ಬೆದರಿಸುವ ಈ ಸಂಘಟನೆ ರಾಷ್ಟ್ರಗೀತೆಯನ್ನೇ ನಿಷೇಧಿಸಿತ್ತು. ಕನ್ನಡ ಪರ ಹೋರಾಟಗಾರರ ಇತ್ತೀಚೆಗಿನ ನೀತಿ ನಿಲುವುಗಳನ್ನು, ಹೋರಾಟಗಳ ಭವಿಷ್ಯವನ್ನು ಊಹಿಸಿದರೆ ಅವು ಮೇಲಿನ ಘಟನೆಯನ್ನು ಮೆಲುಕು ಹಾಕುವಂತೆ ಮಾಡುತ್ತವೆ. ಕನ್ನಡ ಹೋರಾಟದ ಮುಖವಾಡ ಹೊತ್ತು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಇಂಥವರ ನಡುವೆ ನಲುಗುತ್ತಿರುವ ಕನ್ನಡಿಗರು ಎಚ್ಚೆತ್ತುಕೊಳ್ಳುವುದು ಅವಶ್ಯ. ಒಂದೇ ಪರಂಪರೆ-ಇತಿಹಾಸ, ಒಂದೇ ಬಗೆಯ ಆಸೆ-ಆಕಾಂಕ್ಷೆಗಳುಳ್ಳ ನಾವು ವರ್ತಮಾನದ ಲೆಕ್ಕಾಚಾರಗಳಿಗೆ ಸಿಲುಕಿ, ಮನಸ್ಸು ಮನಸ್ಸುಗಳ ನಡುವೆ ಪ್ರತ್ಯೇಕತೆಯ ಗೋಡೆ ಎಬ್ಬಿಸಿಕೊಂಡು ಭಾಷಾಂಧರಾಗಿ ನಮ್ಮ ಪರಂಪರೆಯನ್ನು ಮರೆತು ಈ ದೇಶವನ್ನು ತುಂಡರಿಸುತ್ತಾ ಹೋದೆವೆಂದರೆ ಒಂದು ರಾಷ್ಟ್ರವಾಗಿ ಉಳಿಯಲಾರೆವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ