ಪುಟಗಳು

ಶನಿವಾರ, ನವೆಂಬರ್ 3, 2012

ಭಾರತ ದರ್ಶನ-೧೭

ಭಾರತ ದರ್ಶನ-೧೭:



                 ಭೂಮಿಯನ್ನು ನಾವು ತಾಯಿ ಅಂತ ಗೌರವಿಸುತ್ತೇವೆ. ನಮ್ಮ ಹಿರಿಯರು ಹೇಳಿದರು

"ಅಮ್ಮಾ ನಾನು ನಿನ್ನಲ್ಲಿ ಅರಳ್ತೀನಿ, ಹೊರಳ್ತೀನಿ, ಕೊನೆಗೆ ನಿನ್ನಲ್ಲೇ ಮರಳ್ತೀನಿ. ನಿನ್ನ ಅಂಗಳದಲ್ಲೇ ಆಟ ಆಡ್ತೀನಿ. ಕೊನೆಗೆ ನಿನ್ನ ಮಡಿಲಲ್ಲೇ ವಿಶ್ರಾಂತಿ ಪಡೀತೀನಿ." ಹೀಗೆ ನಮ್ಮ ಭೌತಿಕ ಮತ್ತು ಭೌದ್ಧಿಕ ಸಾಹಸಗಳಿಗೆ ಪ್ರೇರಣೆಯಾಗಿರುವ ಮನುಕುಲಕ್ಕೆ ಆಧಾರವಾಗಿರುವ ಬದುಕಿದ್ದಾಗಲೂ ಸತ್ತ ಮೇಲೂ ನೆಲೆ ಕಲ್ಪಿಸುವ ಭೂಮಿ ತಾಯಿಯಲ್ಲದೆ ಮತ್ತೇನು?



                    ನೀರನ್ನು ಗಂಗಾಜಲ ಅಂತ ಪೂಜಿಸ್ತೀವಿ. ಮನೆಗೆ ಬಂದವರಿಗೆ ಗಂಗೋದಕ ಕೊಟ್ಟು ಉಪಚರಿಸುತ್ತೇವೆ. ಮನೆಯಲ್ಲಿ ಕಲಷದಲ್ಲಿ ಗಂಗೆಯನ್ನು ಆವಾಹಿಸಿ ಪೂಜಿಸುತ್ತೇವೆ. ಹಿರಿಯರು ಸತ್ತಾಗ ದುಃಖವಾದರೂ ಅವರು ಗಂಗೋದಕ ಸ್ವೀಕರಿಸಿ ಪ್ರಾಣ ತೊರೆದರೆಂದರೆ ಸಮಾಧಾನವೂ ಆಗುತ್ತೆ. ಗಂಗೆಯನ್ನು ಸ್ವೀಕರಿಸೋದು ಅಥವಾ ಗಂಗೆಯನ್ನು ದಾಟೋದು ಅಂದರೆ ಜನನ ಮರಣಗಳ ಚಕ್ರ ದಾಟೋದು ಅಂತರ್ಥ.

                       ಮನೆಯಲ್ಲಿ ನೀರು ಕುಡಿಯುವಾಗ ಮಗೂ ಅದು ಗಂಗೆ,ತೀರ್ಥ ಎಂಜಲು ಮಾಡಬಾರದು ಅಂತ ತಾಯಿ ಮಗುವನ್ನು ಎಚ್ಚರಿಸುತ್ತಾಳೆ(ಇಂದು???). ಸ್ನಾನ ಮಾಡುವಾಗ, ಪೂಜೆ ಮಾಡುವಾಗ ಗಂಗೆ ಯಮುನೆಯರೇ ಮೊದಲಾದ ಸಪ್ತ ಜಾಹ್ನವಿಗಳನ್ನು ನಾವು ಆವಾಹನೆ ಮಾಡುತ್ತೇವೆ. ಜಗತ್ತಿನ ಎಲ್ಲಾ ನಾಗರೀಕತೆಗಳು ಬೆಳಕು ಕಂಡು ಬೆಳೆದದ್ದು ನದೀ ತಟಗಳಲ್ಲೇ. ಅತ್ಯಂತ ಪ್ರಾಚೀನ ಸಂಸ್ಕೃತಿ ನಾಗರೀಕತೆಯ ಜೋಗುಳ ಹಾಡಿದ್ದು ಸಿಂಧೂ-ಸರಸ್ವತೀಯರ ಮಡಿಲಲ್ಲೇ. ಅದರಿಂದಾಗಿಯೇ ಅದಕ್ಕೆ ಮಾತೃ ಸ್ಥಾನ. ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ ನಿರ್ಮಾಣವಾದದ್ದು ಸರಯೂ ನದೀ ತೀರದಲ್ಲಿ. ಮನುಕುಲದ ಮೊದಲ ವಿಶ್ವವಿದ್ಯಾಲಯ ನಿರ್ಮಾಣವಾದದ್ದೂ ಗಂಗೆಯ ತಟದಲ್ಲಿ. ಲೋಕ ಕಲ್ಯಾಣಕ್ಕಾಗಿ ಪ್ರಜಾಪತಿ ಬ್ರಹ್ಮ ಮಾಡಿದ ಮೊದಲ ಯಾಗ ನಡೆದದ್ದು ತ್ರಿವೇಣಿ ಸಂಗಮ ಪ್ರಯಾಗದಲ್ಲಿ.

                      ಮಗಧದ ರಾಜಧಾನಿ ಪಾಟಲೀಪುತ್ರ ಗಂಗೆಯ ತಟದಲ್ಲಿ ನಿರ್ಮಾಣವಾಯಿತು. ಚಂದ್ರವಂಶೀಯರ ರಾಜಧಾನಿಗಳಾದ ಹಸ್ತಿನಾವತಿ, ಇಂದ್ರಪ್ರಸ್ಥ ನಿರ್ಮಾಣವಾದದ್ದು ಗಂಗೆ ಯಮುನೆಯರ ತಟಗಳಲ್ಲೇ. ಶಕಕರ್ತರಾದ ವಿಕ್ರಮ, ಶಾಲಿವಾಹನರ ರಾಜಧಾನಿಗಳು ಕ್ಷಿಪ್ರ ಮತ್ತು ಗೋದೆಯರ ಆರೈಕೆ ಪಡೆದವು. ತುಂಗೆಯ ತಟದಲ್ಲಿ ವಿಜಯನಗರವಿದ್ದಿತು.ದಕ್ಷಿಣದ ಬಹುತೇಕ ರಾಜ ಮನೆತನಗಳಿಗೆ ಕಾವೇರಿಯ ಬಗ್ಗೆ ಅಪಾರವಾದ ಗೌರವವಿತ್ತು. ನೀರನ್ನು ತಾಯಿ ಅಂತ ಗೌರವಿಸಿದ್ದು ಕೃತಜ್ಞತೆಯ ಕಾರಣಕ್ಕಾಗಿ. ಶಾಲಾ, ಕಾಲೇಜುಗಳಲ್ಲಿ ನೀರು ಜಲಜನಕ ಆಮ್ಲಜನಕಗಳ ಮಿಶ್ರಣ ಅಂತ ಕಲಿತ ಹುಡುಗ ಮನೆಗೆ ಬಂದು ಅಮ್ಮಾ H2O ಕೊಡು ಅಂತ ಕೇಳಲ್ಲ. ನೀರನ್ನು ಗಂಗೆ ಅಂತ ಮಗುವಿಗೆ ಹೇಳಿಕೊಡಬೇಕಾದವಳು ತಾಯಿ. ಅದಕ್ಕೇ ಮೇಷ್ಟ್ರ H2O ತರಗತಿ ಕೋಣೆಗಷ್ಟೇ ಸೀಮಿತವಾಗುತ್ತೆ. ತಾಯಿ ಹೇಳಿಕೊಟ್ಟ ಪಾಠ ಕೊನೇತನಕ ಉಳಿಯುತ್ತೆ.



                     "ಗಾವೋ ವಿಶ್ವಸ್ಯ ಮಾತರಃ" ಅಂದರು ಹಿರಿಯರು. ತಾಯ ಎದೆ ಹಾಲು ನಿಂತ ನಂತರ ಜೇವನ ಪೂರ್ತಿ ಹಾಲುಣಿಸೋ ಹಸುವನ್ನು ತಾಯಿ ಅನ್ನದೇ ಇರಲಿಕ್ಕಾಗುತ್ತದೆಯೇ? ಕೃಷಿ ಆಧಾರಿತ ಭಾರತದ ಅರ್ಥ ವ್ಯವಸ್ಥೆಯ ಪ್ರತೀಕ ಹಸು. ಹಸುಗಳಿಂದ ಭಾರತಕ್ಕೆ ಪ್ರತೀ ವರ್ಷ ೨ ಲಕ್ಷ ಕೋಟಿ ವರಮಾನ ಬರುತ್ತೆ. ೫ ಲಕ್ಷ ಗ್ಯಾಲನ್ ನಷ್ಟು ಹಾಲು ಸಿಗುತ್ತೆ. ಗೋಮೂತ್ರದಲ್ಲಿ ಔಷಧೀಯ ಗುಣ ಇದೆ. ಭಾರತಕ್ಕೆ ಅದರ ಪೇಟೆಂಟ್ ಸಿಕ್ಕಿದೆ. ಭೂಮಿಯ ಸಾರ ಹೆಚ್ಚಿಸಲು ಗೋಮಯ ಬೇಕು. ದೇಹಶುದ್ಧಿಗೆ ಪಂಚಗವ್ಯ ಸ್ವೀಕಾರ ಮಾಡುತ್ತೇವೆ. ಅಮೃತದಂತಹ ಹಾಲು, ಔಷಧಿ ತುಂಬಿದ ಗೋಮೂತ್ರ, ನೆಲಕ್ಕೆ ಶಕ್ತಿ ಕೊಡೋ ಗೋಮಯ, ಅಷ್ಟೇ ಅಲ್ಲ ಹಸುವಿನ ಉಸಿರಿನಿಂದ ಮನುಕುಲ ಉಳಿದಿದೆ! ಯಂತ್ರೋಪಕರಣಗಳು ಬಂದ ನಂತರವೂ ಗ್ರಾಮೀಣ ಭಾರತದ ನೂರಕ್ಕೆ ಎಪ್ಪತ್ತು ಶೇಕಡಾ ಸಾಗಾಣಿಕೆ ಎತ್ತಿನ ಗಾಡಿಗಳಿಂದ ಆಗುತ್ತೆ. ಇವುಗಳಿಂದ ಭಾರತಕ್ಕೆ ವರ್ಷಕ್ಕೆ ಒಂದು ಲಕ್ಷ ಲೀಟರ್ ಡೀಸೆಲ್ ಉಳಿತಾಯ ಆಗುತ್ತೆ. ಅಂದರೆ ವರ್ಷಕ್ಕೆ ೧೨೦೦೦ ಕೋಟಿ ರೂಪಾಯಿಗಳ ವಿದೇಶಿ ವಿನಿಮಯದ ಉಳಿತಾಯ. ಈ ಜೀವಿಗಳ ಮೇಲೆ ಸ್ವಲ್ಪನಾದರೂ ಕೃತಜ್ಞತೆ ಬೇಡ್ವಾ?



ಮೈಸೂರಿನ ಸಾವಯುವ ಕೃಷಿಕ ಮಿತ್ರರೊಬ್ಬರು ತಮ್ಮ ಹೊಲದಲ್ಲಿ ಈ ರೀತಿ ಬರೆದು ಹಾಕಿದ್ದಾರೆ,

" ಎತ್ತು ಹೊಗೆ ಉಗುಳಲ್ಲ ಮತ್ತು ಟ್ರಾಕ್ಟರ್ ಸಗಣಿ ಹಾಕಲ್ಲ"

ಎಂಥಾ ಮಾತು. ಅದಕ್ಕೆ ನಾವು ಗೋವನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ.



                            ೧೯೪೭ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಜನಸಂಖ್ಯೆ ೩೩ ಕೋಟಿ ಇದ್ದರೆ ಪಶುಗಳ ಸಂಖ್ಯೆ ೪೧ ಕೋಟಿ ಇತ್ತು. ಇವತ್ತು ಜನಸಂಖ್ಯೆ ೧೨೦ ಕೋಟಿಗೇರಿದೆ, ಪಶುಗಳ ಸಂಖ್ಯೆ ೧೧ ಕೋಟಿಗಿಳಿದಿದೆ! ಕಸಾಯಿ ಖಾನೆಗಳ ಸಂಖ್ಯೆ ೩೦೬ರಿಂದ ೩೬ಸಾವಿರಕ್ಕೇರಿದೆ!! ಕೇವಲ ದೆಹಲಿಯೊಂದರಲ್ಲಿಯೇ ೫೦ಸಾವಿರ ಕಟುಕರು ಪ್ರತಿನಿತ್ಯ ೧ ಲಕ್ಷ ಲೀಟರ್ ಹಸುವಿನ ರಕ್ತವನ್ನು ಗಟಾರದ ಮೂಲಕ ಯಮುನೆಗೆ ಹರಿಸುತ್ತಾರೆ! ಎಂತಹ ಮಾಲಿನ್ಯ!! ಎಂತಹ ಪೈಶಾಚಿಕ ಕೃತ್ಯ!!! ನಾವು ಈಗಲೂ ಕಣ್ಣು ತೆರೆಯದಿದ್ದರೆ, ಕಣ್ಣು ತೆರೆಯೋ ಭಾಗ್ಯದಿಂದ ವಂಚಿತರಾಗಬೇಕಾಗುತ್ತೆ.



                        ಈ ನೆಲ, ಜಲ, ಪ್ರಕೃತಿ, ವೇದ, ಗೋವುಗಳು ತಾಯಿ ಅಂತ ನಮಗೆ ಕಲಿಸಿಕೊಡಬೇಕಾದವಳು ನಮ್ಮ ತಾಯಿ. ತಾಯಿಯ ನಡವಳಿಕೆ ನೋಡಿ ಮಗು ಕಲಿಯುತ್ತೆ. ತಾಯಿ ನೆಲ, ಜಲ, ಸೂರ್ಯ, ಗೋವು, ತುಳಸಿ, ವಟವೃಕ್ಷಗಳಿಗೆ ನಮಸ್ಕರಿಸುವಾಗ ಜತೆಗಿದ್ದು ಅನುಕರಿಸುವ ಮಗುವಿಗೆ ಕ್ರಮೇಣ ತಾನಿವುಗಳಿಗೆ ಋಣಿಯಾಗಿರಬೇಕೆಂಬ ಭಾವ ಬಲಿಯುತ್ತೆ. ಹಾಗಾದರೆ ಇಂದಿನ ತಾಯಂದಿರು ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆಂದಾಯಿತಲ್ಲವೇ?



                         ಕಬಡ್ಡಿ ಆಟಕ್ಕೆ ಮುಂಚೆ ಆಟಗಾರನೊಬ್ಬ ಮಧ್ಯ ರೇಖೆಯಲ್ಲಿನ ಮಣ್ಣನ್ನು ಹಣೆಗೊತ್ತಿಕೊಳ್ಳೋದು ಕಬಡ್ಡಿ ಆಟದ ನಿಯಮಗಳಲ್ಲೇನಾದರೂ ಬರೆದಿದೆಯಾ? ಕಟ್ಟಡ ಕಟ್ಟೋಕೆ ಮುಂಚೆ ಭೂಮಿ ಪೂಜೆ ಮಾಡ್ತೇವೆ. ನೇಗಿಲು ನೆಲಕ್ಕೆ ತಾಗಿಸುವ ಮುಂಚೆ ಅಮ್ಮಾ ಬಂಗಾರದ ಬೆಳೆ ಕೊಡು ಅಂತ ಪ್ರಾರ್ಥನೆ ಮಾಡುತ್ತೇವೆ. ಇವೆಲ್ಲಾ ತಾಯಿ ಕಲಿಸಿದ ಪಾಠ. ಇಂತಹ ಶಿಕ್ಷಣ ಸಿಕ್ಕಿದ ಮಗುವಿನ ಮನಸ್ಸಿನಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮೂಡುತ್ತೆ, ರಾಷ್ಟ್ರಕ್ಕೆ ಅಪಮಾನ ಆದರೆ ಮನಸ್ಸು ಸಿಡಿದೇಳುತ್ತೆ. ಇದನ್ನೇ ಶಾಲೆಗಳಲ್ಲಿ ಕಲಿಸಹೋದರೆ ಕೇಸರೀಕರಣ ಅಂತಾರಲ್ಲ! ತಾಯಿಯನ್ನು ತಾಯಿ ಅಂತ ಗೌರವಿಸುವುದನ್ನು ನಿಮ್ಮ ಮುಂದಿನ ಪೀಳಿಗೆಗೆ ಹೇಳಿಕೊಡೋದು ನಿಮಗೆ ಬೇಡವೆ? ನಮ್ಮ ಇತಿಹಾಸದ ಸಾರ್ವಭೌಮತ್ವವನ್ನು ಹೇಳಿಕೊಡೋದನ್ನು, ನಮ್ಮ ರಾಷ್ಟ್ರಪುರುಷ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಪಠ್ಯ ಪುಸ್ತಕಗಳಿಂದ ತೆಗೆಯಲಾಗಿದೆ. ನಮ್ಮ ಮಕ್ಕಳು ಭೃಷ್ಟ, ಲಂಚಕೋರ. ಮತಾಂಧ, ದೇಶದ್ರೋಹಿ ರಾಜಕಾರಣಿಗಳ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಓದಬೇಕಾದ ದೌರ್ಭಾಗ್ಯ ಬಂದಿದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ