ಪುಟಗಳು

ಶುಕ್ರವಾರ, ನವೆಂಬರ್ 9, 2012

ಭಾರತ ದರ್ಶನ-೧೮

ಭಾರತ ದರ್ಶನ-೧೮:

              ಜಗತ್ತಿನ ಇತರ ದೇಶಗಳಿಗೆ ಜಡವಾಗಿ ಕಾಣುವ ಪರ್ವತಗಳು ನಮ್ಮ ಪಾಲಿಗೆ ಭಗವದಂಶವೇ ಸರಿ. ಇದಕ್ಕೆ ಕಾರಣಗಳು ಹಲವು. ಕೆಲವು ಪರ್ವತಗಳು ದೇವತೆಗಳ ವಾಸಸ್ಥಾನ ಅಂತ ನಾವು ನಂಬುತ್ತೇವೆ. ಕೆಲವು ಪರ್ವತಗಳು ಋಷಿಮುನಿಗಳ ತಪೋಭೂಮಿ. ಇನ್ನು ಕೆಲವು ಪವಿತ್ರ ನದಿಗಳ ಉಗಮ ಸ್ಥಾನ. ಹೆಚ್ಚಿನವುಗಳಲ್ಲಿ ನಮ್ಮ ಹಿರಿಯರು ದೇವಾಲಯಗಳನ್ನು ನಿರ್ಮಿಸಿದ್ದಾರೆ.

          ಭಾರತದ ಉತ್ತರ ಸೀಮೆಯುದ್ದಕ್ಕೂ ಹಬ್ಬಿಕೊಂಡಿರುವ ಪ್ರಚಂಡ ಪರ್ವತ ಸೀಮಾ ಹಿಮಾಲಯ. ಹಿಮಾಲಯ ಅನ್ನೋ ಶಬ್ಧ ಹಿಂದೂವಿನ ಕಿವಿಗೆ ಬಿದ್ದೊಡನೆ ಅವನ ಹೃದಯ ಅರಳಿ ಹಲವು ದಿವ್ಯ ಭಾವಗಳ ನಾಡಿಗಳು ಮೀಟತೊಡಗುತ್ತವೆ. ಭಾರತದ ಇತಿಹಾಸದ ಘಟನಾವಳಿಗಳಿಗೆ ಮೂಕ ಸಾಕ್ಷಿ ಹಿಮಾಲಯ. ಜಗತ್ತಿನ ಅತ್ಯಂತ ಎತ್ತರದ ಶಿಖರವನ್ನು ಕವಿಯೊಬ್ಬ ಮುಗಿಲ ಹಾರ ಅಂತ ವರ್ಣಿಸಿದ್ದಾನೆ.
    "ಹರನ ಮಂದಿರ ಗಿರಿಯ ಕಂದರ
     ಅತುಲ ಸುಂದರ ಮುಗಿಲ ಹಾರ!
     ನರ ಕಿರಾತನ ಸೆಣಸಿ ದಣಿಸಿ
     ಪಾಶುಪತ ಪಡೆದವರ ಕ್ಷೇತ್ರ!
     ಶೈಲ ಕುಲ ಸಾಮ್ರಾಟ ಪೀಠ!"
ಎಂದು ವರ್ಣಿಸಿದ್ದಾನೆ.

       ಕುಮಾರ ಸಂಭವದಲ್ಲಿ ಕಾಳಿದಾಸ ಹಿಮಾಲಯವನ್ನು ಪರ್ವತಗಳ ರಾಜ, ದೇವತೆಗಳ ಆತ್ಮ, ಭೂಮಿಯ ಅಳತೆಗೋಲು ಅಂದಿದ್ದಾನೆ. ವಾಲ್ಮೀಕಿ ಶ್ರೀರಾಮನ ಧೈರ್ಯವನ್ನು ಹಿಮಾಲಯಕ್ಕೆ ಹೋಲಿಸಿದ್ದಾನೆ. ಭಾರವಿ ಹಿಮಾಲಯವನ್ನು ವೇದಗಳಿಗೆ ಹೋಲಿಸಿದ್ದಾನೆ.
       ಹಲವು ಋಷಿ ಮುನಿಗಳ ಆಶ್ರಮ ಹಿಮಾಲಯದಲ್ಲಿತ್ತು. ವಸಿಷ್ಠರ ಆಶ್ರಮ ಹಿಮಾಲಯದ ತಪ್ಪಲಲ್ಲಿತ್ತು. ಮಾಲಿನೀ ತೀರದಲ್ಲಿ ಕಣ್ವಾಶ್ರಮ, ತಮಸೆಯ ತಟಿಯಲ್ಲಿ ವಾಲ್ಮೀಕಿ ಆಶ್ರಮ, ಬದರಿಯ ಮಾಣಾ ಗ್ರಾಮದಲ್ಲಿ ವ್ಯಾಸಾಶ್ರಮ ಇತ್ತು. ಇಲ್ಲೇ ವ್ಯಾಸರು ಭಾರತ ಮತ್ತು ಭಾಗವತಗಳನ್ನು ಬರೆದರು. ಆಚಾರ್ಯ ಶಂಕರರು ಹಿಮಾಲಯದ ಭಾಗಗಳಲ್ಲಿ ದೇವಾಲಯಗಳ ಸಮೂಹವನ್ನೇ ಸೃಷ್ಠಿಸಿದರು.

           ಈ ನಗಾಧಿರಾಜನಿಂದ ಆರ್ವಾಚೀನ ಕಾಲದಲ್ಲಿ ಸ್ವಾಮಿ ವಿವೇಕಾನಂದ, ರಾಮತೀರ್ಥ, ಅಖಂಡಾನಂದ, ಶೃದ್ಧಾನಂದ, ಮಹರ್ಷಿ ದಯಾನಂದ ಸರಸ್ವತೀ, ಶ್ರೀ ಗುರೂಜಿ ಗೊಳ್ವಾಲ್ಕರ ಕೂಡಾ ಪ್ರಭಾವಿಸಲ್ಪಟ್ಟರು. ಅನೇಕ ಸಾಧು ಸಂತರು ಇಂದಿಗೂ ಹಿಮಾಲಯದಲ್ಲಿ ಅವ್ಯಕ್ತ ರೂಪದಲ್ಲಿ ಸಾಧನಾನಿರತರಾಗಿದ್ದಾರೆ. ಉತ್ತುಂಗ ಹಿಮಚ್ಛಾದಿತ ಶುಭ್ರದವಳ ಶಿಖರಗಳು, ನೇರವಾಗಿ ತಲೆಯೆತ್ತಿ ನಿಂತ ಗಿರಿಗಳು, ಆಳವಾದ ಕಣಿವೆಗಳು, ವೇಗವಾಗಿ ಹರಿಯುವ ನದಿಗಳು,ಗಹನಾರಣ್ಯ, ಬಗೆ ಬಗೆಯ ಫಲ ಪುಷ್ಪಗಳಿಂದ ಅಲಂಕೃತವಾದ ವೃಕ್ಷವಲ್ಲಿಗಳು, ಈ ಎಲ್ಲ ಹಿಮಾದ್ರಿಯ ನೈಸರ್ಗಿಕ ವೈಭವ ನೋಡುವಾಗ ಮನಸ್ಸು ಪ್ರಸನ್ನಗೊಳ್ಳುತ್ತದೆ. ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತ, ಶಿಲ್ಪ ಇತ್ಯಾದಿ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ಹಿಮಾಲಯ ಪ್ರಭಾವ ಬೀರಿದೆ. ಆದ್ದರಿಂದಲೇ ಅದು ಕಲ್ಲು ಮಣ್ಣುಗಳ ಬೆಟ್ಟವಲ್ಲ, ಪರಶಿವನ ಆಲಯವೆಂದೇ ನಮ್ಮ ನಂಬಿಕೆ.

           ಸಮುದ್ರ ಮಟ್ಟದಿಂದ ಸುಮಾರು ೨೩೦೦೦ ಅಡಿ ಎತ್ತರದಲ್ಲಿದೆ ಕೈಲಾಸ. ಅದು ಶಿವನ ನಿವಾಸ. ನಮ್ಮೆಲ್ಲರ ಶ್ವಾಸ. ಸಧ್ಯಕ್ಕೆ ಚೀನಾದ ವಶ. ಅಷ್ಟದಳಾಕೃತಿಯ ಬಿಳಿಯ ಹೂವಿನ ಮಧ್ಯದಲ್ಲಿ ಸ್ಪಟಿಕದ ಶಿವಲಿಂಗ ಇಟ್ಟರೆ ಹೇಗೆ ಕಾಣುತ್ತೋ ಹಾಗೆ ಕೈಲಾಸ ನಮಗೆ ಗೋಚರವಾಗುತ್ತೆ. ಅದರ ಬುಡದಲ್ಲಿದೆ ರಾಕ್ಷಸ ತಲ. ರಾವಣ ಆತ್ಮಲಿಂಗ ಪ್ರಾಪ್ತಿಗಾಗಿ ಕೈಲಾಸವನ್ನು ಅಲುಗಾಡಿಸಲು ಹೋಗಿ ಸೋತು ತಪಸ್ಸು ಮಾಡಿದ ಸ್ಥಳ ಅದು.ರಾಕ್ಷಸ ತಲದಿಂದ ಅನತಿ ದೂರದಲ್ಲಿ ಮಾನಸ. ಮನಸ್ಸಿನಷ್ಟು ತಿಳಿಯಾದ ಸ್ಪಟಿಕ ಶುಭ್ರ ಜಲವುಳ್ಳ ತಳ ಕಾಣುವ ರಾಜ ಹಂಸಗಳು ವಿಹರಿಸುವ ಸರೋವರ. ಅಂಡಾಕೃತಿಯ ಈ ಸರೋವರದಿಂದ ಸಿಂಧೂ, ಸರಯೂ, ಬ್ರಹ್ಮಪುತ್ರಗಳು ಹುಟ್ಟುತ್ತವೆ. ಇದೊಂದು ಶಕ್ತಿ ಪೀಠವು ಹೌದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ