ಪುಟಗಳು

ಬುಧವಾರ, ನವೆಂಬರ್ 28, 2012

ಇಂಥವರೂ ಇದ್ದಾರೆ...!!!                     ಇವತ್ತು ಮನಸ್ಸು ರೋಷಗೊಂಡ ಘಟನೆಯೊಂದು ನಡೆಯಿತು. ಆಟೋವೊಂದರಲ್ಲಿ ಹೋಗುತ್ತಿದ್ದೆ. ಒಬ್ಬ ಹುಡುಗ ಹಾಗೂ ಹುಡುಗಿಯೊಬ್ಬಳು ಅದೇ ಆಟೋದಲ್ಲಿ ಇದ್ದರು. ಬಹುಷ ಒಂದೇ ಶಾಲೆಯವರಿರಬೇಕು, ಸಮವಸ್ತ್ರ ಏಕರೂಪದ್ದಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಆಟೋ ಚಾಲಕ ಮಾತಾಡಲು ಶುರು ಮಾಡಿದ. ನನ್ನಲ್ಲಿ ಅಂತ ತಿಳಿದಿದ್ದರೆ ನಿಮ್ಮದು ತಪ್ಪು ಕಲ್ಪನೆಯಾದೀತು! ಆ ಹುಡುಗಿಯಲ್ಲಿ...ನೀನ್ಯಾಕೆ ಇನ್ನೂ ನಿನ್ನ ಭಾವಚಿತ್ರ ಕೊಟ್ಟಿಲ್ಲ...ಇವತ್ತು ನನ್ನ ತಂಗಿ ನಿನ್ನ ತರಗತಿ ಬಳಿ ಬರುತ್ತಾಳೆ...ಅವಳ ಕೈಲಿ ಕೊಡು...ಹೀಗೆ ಸಾಗಿತ್ತು ಮಾತು.. ಹುಡುಗಿಯು ಮಧ್ಯ ಮಧ್ಯದಲ್ಲಿ ನಗುವುದು ಅದೇನೋ ಬಡಬಡಿಸುವುದು ಮಾಡುತ್ತಿದ್ದಳು. ಮಾತಿನ ಮಧ್ಯೆ ಆ ಆಟೋ ಚಾಲಕ ಹುಡುಗಿಯಲ್ಲಿ..ನಿನ್ನ ತಾಯಿ ಸತ್ತಿದ್ದಾಳಾ ಇಲ್ಲಾ ಇನ್ನೂ ಬದುಕಿದ್ದಾಳಾ...ಅವಳು ಮೊದಲು ಸಾಯಬೇಕು. ಆಗ ನಿಮ್ಮಪ್ಪ ಆಟೋಮ್ಯಾಟಿಕ್ ಆಗಿ ನಿನ್ನನ್ನು ನನಗೆ ಕೊಡುತ್ತಾನೆ..ಎಂದುಬಿಟ್ಟ. ಆಶ್ಚರ್ಯವೆಂದರೆ ಹುಡುಗಿ ಆಗಲೂ ನಗುತ್ತಿದ್ದಳೇ ಹೊರತು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ!

                   ಅಲ್ಲಾ ಪ್ರೀತಿಸೋದು ತಪ್ಪು ಅಂತಾ ನಾನು ಹೇಳೋದಿಲ್ಲ. ಅಥವಾ ಅವ ಆಟೋ ಚಾಲಕ ಅಂತನೂ ಅಲ್ಲ. ಭಾವನೆ ಎಲ್ಲರಲ್ಲೂ ಇರುವಂತದ್ದೇ! ಪ್ರೀತಿ ಎಂಬುದು ವಯೋ ಸಹಜವೆ! ಆದರೆ ತನ್ನ ಪ್ರೀತಿಗಾಗಿ ಅವಳ ತಾಯಿಯನ್ನು ಸಾಯಬಯಸುವುದು, ಹಾಗೆ ಹೇಳಿದಾಗಲೂ ಆಕೆ ಸುಮ್ಮನಿರುವುದು ಎಷ್ಟು ಸರಿ? ನವ ಮಾಸ ಪರ್ಯಂತ ಅಪಾರ ನೋವುಂಡು ಸಂಸ್ಕೃತಿ, ಬದುಕಿನ ಪಾಠ ಕಲಿಸುವ ಪ್ರತ್ಯಕ್ಷ ದೇವತೆಯನ್ನು ನಿಂದಿಸುವ ಪರಿಗೆ ಬೇರೆಯವರಾಗಿದ್ದರೆ ಕಪಾಳ ಮೋಕ್ಷ ಮಾಡುತ್ತಿದ್ದರು. ಆ ಹುಡುಗ(ಆಟೋ ಚಾಲಕ)ನೂ ಅಷ್ಟೇ. ಒಂದು ವೇಳೆ ಅದೇ ಮಾತನ್ನು ಹುಡುಗಿ ಆಡಿದ್ದಿದ್ದರೆ ಸುಮ್ಮನಿರುತ್ತಿದ್ದನೇ?
                       ಮನ ಕಲಕಿದ ಈ ಘಟನೆ ಇಡೀ ದಿವಸ ನನ್ನ ಮನಸ್ಸನ್ನು ಆವರಿಸಿತ್ತು. ತಡೆದುಕೊಳ್ಳಲಾಗದೇ ನಿಮ್ಮೊಂದಿಗೇ ಹಂಚಿಕೊಂಡಿದ್ದೇನೆ.
ನಿಮಗೆ ಅತೀವ ದುಃಖವಾಗಿದ್ದಾಗ ನಿಮಗೆ ಸಾಂತ್ವನ ಹೇಳುವ ಏಕಮಾತ್ರ ವ್ಯಕ್ತಿ ತಾಯಿ. ನೀವು ದುಃಖ ಮುಚ್ಚಿಟ್ಟು ನಗುತ್ತಿದ್ದರೂ ನಿಮ್ಮ ಮನಸ್ಥಿತಿ ಅವಳಿಗೆ ಅರ್ಥ ಆಗುತ್ತೆ. ನಿಮ್ಮ ಬದುಕಿನ ಮೊದಲ ಗುರು, ಮೊದಲ ಸ್ನೇಹಿತೆ ಆಕೆ! ನೀವು ಮಗುವಾಗಿದ್ದಾಗ, ಅನಾರೋಗ್ಯ ಪೀಡಿತರಾಗಿದ್ದಾಗ, ಉಳಿದವರು ನಿಮ್ಮನ್ನು ಅಪಹಾಸ್ಯ, ದೂಷಣೆಗೊಳಪಡಿಸಿದಾಗಲೂ ನಿಮ್ಮ ಕೈ ಹಿಡಿದು ನಡೆಸುವವಳು ಅವಳೇ! ಆದ್ದರಿಂದ ಅವಳನ್ನು ದೂಷಿಸುವಾಗ ಎಚ್ಚರದಿಂದಿರಿ, ದೂಷಿಸುವ ಮೊದಲು ಯೋಚಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ