ಪುಟಗಳು

ಶನಿವಾರ, ನವೆಂಬರ್ 24, 2012

ಭಾರತ ದರ್ಶನ-೨೦:

                  ಸತಿಯೊಂದಿಗೆ ಶ್ರೀರಾಮ ಶಿವನ ಪೂಜೆ ಮಾಡಿದ ಪವಿತ್ರ ಕ್ಷೇತ್ರ ರಾಮೇಶ್ವರ. ಅಲ್ಲಿಂದ ಶಿವಭಕ್ತರು ಉತ್ತರದ ರಾಮೇಶ್ವರದ ಕಡೆಗೆ ಪಯಣಿಸುತ್ತಾರೆ. ಅಲ್ಲೊಂದು ನೈಸರ್ಗಿಕ ಗುಹೆ. ಸಮುದ್ರ ಮಟ್ಟದಿಂದ ೧೩೦೦೦ ಅಡಿ ಎತ್ತರದಲ್ಲಿರುವ ಆ ಗುಹೆಯಲ್ಲೊಂದು ಪವಾಡ.ಪ್ರತಿ ತಿಂಗಳ ಶುಕ್ಲ ಪಕ್ಷದಂದು ನೀರು ಹಿಮದ ರೂಪದಲ್ಲಿ ತೊಟ್ಟಿಕ್ಕಿ ಲಿಂಗ ರೂಪ ಧಾರಣೆ ಮಾಡುತ್ತೆ. ಹುಣ್ಣಿಮೆಯ ದಿನ ಹತ್ತಾರು ಅಡಿ ಎತ್ತರದ ಲಿಂಗವನ್ನು ನಾವಲ್ಲಿ ಕಾಣಬಹುದು. ಕೃಷ್ಣ ಪಕ್ಷದಲ್ಲಿ ಚಂದ್ರ ಕರಗುತ್ತಾ ಹೋದಂತೆ ಲಿಂಗವೂ ಕರಗುತ್ತಾ ಬರುತ್ತೆ! ಅಮವಾಸ್ಯೆ ದಿನ ಬಾನಿನಲ್ಲಿ ಅವನಿರೋದಿಲ್ಲ. ಭುವಿಯಲ್ಲಿ ಇವನಿರೋದಿಲ್ಲ!

                ಶ್ರಾವಣ ಪೂರ್ಣಿಮೆಯ ದಿನ ಅಲ್ಲಿ ದೊಡ್ಡ ಜಾತ್ರೆ ನಡೆಯುತ್ತೆ. ಅಮರನಾಥಕ್ಕೆ ಹೋಗೋದು ಅಷ್ಟು ಸುಲಭವಲ್ಲ. ಕಡಿದಾದ ದಾರಿಯಲ್ಲಿ ನಡೆದು ಸಾಗಬೇಕು. ಎಚ್ಚರದಿಂದ ಹೋದರೆ ಅಮರನಾಥ. ಎಚ್ಚರ ತಪ್ಪಿದರೆ ಕೈಲಾಸ! ಜಾಗೃತಾವಸ್ಥೆಯಲ್ಲಿ ಸಾಗಿದರೆ ಸೃಷ್ಠಿಯ ಸೌಂದರ್ಯವನ್ನು ಸವಿಯಬಹುದು.ವ್ಯತ್ಯಾಸವಾದರೆ ಸೃಷ್ಠಿಯ ರಹಸ್ಯವನ್ನು ನೋಡಬೇಕಾಗುತ್ತೆ! ಅಂಥ ಅಪಾಯಕಾರಿ ದಾರಿ. ಆದರೂ ಜನ ಧಾವಿಸುತ್ತಾರೆ. ಯೋಚನೆ ಮಾಡಿ| ಶ್ರಾವಣ ಮಾಸ, ಮಳೆಗಾಲ, ಕಾರ್ಮುಗಿಲು, ಹಿಮಾಲಯ, ಕಾಲುದಾರಿ, ಅಮರ ಗಂಗೆಯ ಭಯಾನಕ ಆಳವಾದ ಕಣಿವೆ, ಜೊತೆಗೆ ಭಯೋತ್ಪಾದಕರ ಅಟ್ಟಹಾಸ!
ಆದರೂ ಜನ ಹೋಗುತ್ತಾರೆ ಯಾಕೆ?
ಯಾಕೆಂದರೆ ಶ್ರಾವಣ ಪೂರ್ಣಿಮೆಯಂದು ಶಿವ ಪಾರ್ವತಿಗೆ ರಾಮ ಮಂತ್ರ ಉಪದೇಶ ಮಾಡಿದ ಪವಿತ್ರ ಜಾಗವದು!
ಅದಕ್ಕಾಗಿಯೇ
" ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ|
  ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ||
  ರಾಮ ಮಂತ್ರವ ಜಪಿಸೋ||"
ಎನ್ನುತ್ತಾರೆ ದಾಸರು.

ರಾಮ ಶಿವನ ಪೂಜೆ ಮಾಡುತ್ತಾನೆ, ಶಿವ ಸತಿಗೆ ರಾಮಮಂತ್ರ ಉಪದೇಶ ಮಾಡುತ್ತಾನೆ. ಅವರಿಬ್ಬರ ಭಕ್ತರು ತನ್ನ ದೇವ ದೊಡ್ಡವ ಅಂತ ಹೊಡೆದಾಡಿಕೊಳ್ಳುತ್ತಾರೆ!

ಒಬ್ಬ ಸಂಸ್ಕೃತ ಕವಿ ಅದ್ಭುತ ಸಮನ್ವಯ ಶ್ಲೋಕ ಬರೆಯುತ್ತಾನೆ.

" ಪಾಯಾತ್ ಕುಮಾರ ಜನಕಃ ಶಶಿಖಂಡ ಮೌಳಿಃ|
  ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ||
  ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ|
  ಆಧ್ಯಕ್ಷರೇಣ ಸಹಿತೋ ರಹಿತೋಪಿ ದೇವಾಃ||

ಈ ಎಲ್ಲ ಪದಗಳ ಅರ್ಥ ಶಿವ ನನ್ನನ್ನು ಕಾಪಾಡಲಿ ಎಂದು. ಇವುಗಳೆಲ್ಲದರ ಮೊದಲ ಅಕ್ಷರ ತೆಗೆದರೆ ಹರಿ ನನ್ನನ್ನು ಕಾಪಾಡಲಿ ಎಂದಾಗುತ್ತೆ!
( ಪಾಯಾತ್ = ಕಾಪಾಡಲಿ.
ಕುಮಾರ ಜನಕ = ಸುಬ್ರಹ್ಮಣ್ಯನ ತಂದೆ; ಮಾರ ಜನಕ = ಮನ್ಮಥ ಪಿತ.
ಶಶಿಖಂಡಮೌಳಿಃ = ಚಂದ್ರನ ತುಂಡನ್ನು(ಬಿದಿಗೆ ಚಂದ್ರ) ಶಿರದಲ್ಲಿ ಧರಿಸಿದವ ; ಶಿಖಂಡಮೌಳಿಃ = ನವಿಲು ಗರಿಯನ್ನು ಶಿರದಲ್ಲಿ ಧರಿಸಿದವ.
ಶಂಖಪ್ರಭಶ್ಚ = ಬಿಳುಪಾದ ಮೈಬಣ್ಣದವ ; ಖಪ್ರಭಶ್ಚ = ಆಕಾಶದ ಮೈಬಣ್ಣದವ, ನೀಲಮೇಘಶ್ಯಾಮ.
ನಿಧನಶ್ಚ = ಹಣವಿಲ್ಲದವ, ಲಯಕಾರಿ ; ಧನಶ್ಚ = ಲಕ್ಷ್ಮೀಪತಿ.
ಗವೀಶಯಾನಃ = ಹಸುವಿನ ಒಡೆಯ( ಎತ್ತು )ನನ್ನು ವಾಹನವಾಗುಳ್ಳವ ; ವೀಶಯಾನಃ = ಪಕ್ಷಿಗಳ ಒಡೆಯ( ಗರುಡ )ನನ್ನು ವಾಹನವಾಗುಳ್ಳವ.
ಗಂಗಾಂಚ = ಗಂಗಾಧರ ; ಗಾಂಚ = ಗೋವುಗಳನ್ನು ಸಲಹಿದವ, ಗೋಪಾಲಕೃಷ್ಣ.
ಪನ್ನಗಧರ = ನಾಗಾಭರಣ ; ನಗಧರ = ಪರ್ವತ ಎತ್ತಿಹಿಡಿದವ, ಗೋವರ್ಧನ ಗಿರಿಧಾರಿ.
ಉಮಾ ವಿಲಾಸಃ = ಉಮಾಪತಿ ; ಮಾವಿಲಾಸಃ = ಲಕ್ಷ್ಮೀಪತಿ, ಮಾಧವ.)

ಕೊನೆಯಲ್ಲಿ ಕವಿಯ ಆಶಯವೇನು?
ಮೊದಲಕ್ಷರ ಸಹಿತವಾಗಿ ಅಥವಾ ರಹಿತವಾಗಿ ಸ್ತುತಿಸಲ್ಪಡುವ ಒಬ್ಬನೇ ದೇವರು ನಮ್ಮನ್ನು ಕಾಪಾಡಲಿ. ಎಂಥಾ ಸಾಮರಸ್ಯ! ಎಂಥಾ ಅದ್ಭುತ ಶ್ಲೋಕ!
ಶೈವ ವೈಷ್ಣವರು ತಮ್ಮ ತಮ್ಮ ದೇವರಿಗಾಗಿ ಹೊಡೆದಾಡುವ ಮೊದಲು ಈ ಶ್ಲೋಕದ ಕಡೆ ಗಮನ ಕೊಡಿ, ಮಾತೆಯ ರಕ್ಷಣೆಗಾಗಿ ಹೋರಾಡಿ!

ವಂದೇ ಮಾತರಂ


5 ಕಾಮೆಂಟ್‌ಗಳು: