ಪುಟಗಳು

ಬುಧವಾರ, ಅಕ್ಟೋಬರ್ 31, 2012

ಭಾರತ ದರ್ಶನ-೧೬


ಭಾರತ ದರ್ಶನ-೧೬:

      ನಮ್ಮ ಹಿರಿಯರು ಈ ನೆಲದೊಂದಿಗೆ ತಾಯಿ ಮಗನ ಸಂಬಂಧವನ್ನು ಕಂಡುಕೊಂಡರು. ಅಥರ್ವವೇದದ ಭೂಮಿಸೂಕ್ತವನ್ನು ಈ ದೇಶದ ಮೊದಲ ರಾಷ್ಟ್ರಗೀತೆ ಅಂತ ಹೇಳಿದ್ದಾರೆ. ಆ ವೇದದ ಒಂದು ಮಾತು, ಆಂಗೀರಸ ಅನ್ನುವ ಋಷಿ ಹೇಳಿದ ಆ ಮಾತು...
"ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ"
ಅಂದರೆ ಭೂಮಿ ನನ್ನ ತಾಯಿ ನಾನವಳ ಮಗು.
       ಈ ಮಾತು ಜಗತ್ತಿನ ಚಿಂತನಾ ವಿಧಾನವನ್ನೇ ಬದಲಾಯಿಸಿತು. ಭೂಮಿಯನ್ನು ಜಡವಸ್ತು ಅಂತ ಭಾವಿಸಿದ್ದ ಜಗತ್ತಿನ ಕಣ್ಣು ತೆರೆಸಲಾಯಿತು. ಅವರೆಲ್ಲಾ ತಮ್ಮ ತಮ್ಮ ದೇಶವನ್ನು ತಾಯಿಯಂತೆ ಕಾಣಲು ಪ್ರಾರಂಭಿಸಿದರು. ಇಂಗ್ಲೆಂಡಿನ ಶಾಲಾ ಮಕ್ಕಳು ಪ್ರಾರ್ಥನೆ ಆದ ನಂತರ " oh mother England, with all the faults I love the" ಎನ್ನಲು ಪ್ರಾರಂಭಿಸಿದ್ದು ಭಾರತೀಯ ಸಂಸ್ಕೃತಿಯ ಪ್ರಭಾವವಲ್ಲದೆ ಮತ್ತೇನು?

      ತಾಯಿ ಮಗುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ನಮ್ಮಲ್ಲಿ ಮಾತ್ರವಲ್ಲ ಇಡೀ ಸೃಷ್ಠಿಯಲ್ಲಿ ಮಾತೃತ್ವದ ಭಾವ ಇದೆ. ಪಕ್ಷಿಗಳು ಆಹಾರ ಸಿಕ್ಕಾಗ ತಾವು ತಿನ್ನದೆ ಮರಿಗಳಿಗೆ ತಂದುಣಿಸುತ್ತವೆ. ಬೆಕ್ಕು ತನ್ನ ಮರಿಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳ ಹುಡುಕುತ್ತಾ ಹುಡುಕುತ್ತಾ ಹನ್ನೆರಡು ಕಡೆ ಸ್ಥಾನಾಂತರ ಮಾಡುತ್ತಂತೆ. ಮಂಗ ಮರದಿಂದ ಮರಕ್ಕೆ ಹಾರುವಾಗ ಒಂದು ಕೈಯಲ್ಲಿ ಮರಿಯನ್ನು ಭದ್ರಪಡಿಸಿಕೊಳ್ಳುತ್ತಾ ಅಪಾಯವನ್ನು ತನ್ನ ಮೈಮೇಲೆಳೆದುಕೊಂಡು ಇನ್ನೊಂದು ಕೈಯನ್ನು ಚಾಚುತ್ತಾ ಚಾಚುತ್ತಾ ನೆಗೆಯುತ್ತೆ. ಸಿಂಹಿಣಿಯ ಹಲ್ಲು ಮತ್ತು ಉಗುರು ನಮಗೆ ಶೂಲ.ಆದರೆ ಅದರ ಮರಿಗಳಿಗದು ಕುಸುಮಕೋಮಲ. ಹಸು ಮತ್ತು ಕರುವಿನ ಸಂವಾದವನ್ನು "ವಾತ್ಸಲ್ಯದ ಮಹಾಕಾವ್ಯ" ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಕರುವಿನ ಹಗ್ಗ ಬಿಚ್ಚಿ, ಎರಡೇ ನೆಗೆತಕ್ಕೆ ತಾಯಿ ಬಳಿ ತಲುಪುತ್ತೆ. ಹಸು ಬಳಿ ಬಂದ ಕರುವಿನ ಮೈಯನ್ನು ನೆಕ್ಕುತ್ತೆ. ಮನೆಯಲ್ಲಿಯೂ  ಅಂಗಳದಲ್ಲಿ ಆಟವಾಡಿ ದಣಿದು, ಬಳಲಿ, ಬಾಯಾರಿ ಬಂದ ಮಗುವನ್ನು ತಾಯಿ ಬರಸೆಳೆದು ಹಣೆಗೆ ಮುತ್ತನ್ನೀಯುತ್ತಾಳೆ.

       ಕರು ಹಾಲು ಕುಡಿಯುವುದನ್ನು ನೋಡಿದ್ದೀರಾ? ಸುಮ್ಮನೇ ನಿಂತು ಹಾಲು ಕುಡಿಯಲ್ಲ.  ಹಾಲು ಕುಡಿಯುವಾಗ ನೆಗೆಯುತ್ತೆ, ಕುಣಿಯುತ್ತೆ, ಕೆನೆಯುತ್ತೆ, ಕೆಚ್ಚಲಿಗೆ ತನ್ನ ನೆತ್ತಿಯನ್ನು ಚುಚ್ಚುತ್ತಾ ಚುಚ್ಚುತ್ತಾ ಹಾಲು ಕುಡಿಯುತ್ತೆ. ಮಗುವಿನ ಲೀಲೆ ಅದು. ಮಗು ಹಾಲು ಕುಡಿಯುವಾಗ ಅಮ್ಮನಿಗೆ ಒದೆಯುತ್ತೆ. ತಾಯಿ ಮಗುವಿನ ಪಾದವನ್ನು ದೇವರ ಪಾದ ಅಂತ ಚುಂಬಿಸಿ ಕಣ್ಣಿಗೊತ್ತಿಕೊಳ್ಳುತ್ತಾಳೆ. ತನಗೆ ಒದ್ದು ಅದಕ್ಕೆಲ್ಲಿ ನೋವಾಯ್ತೋ ಅಂತ ಪಾದವನ್ನು ನೀವುತ್ತಾಳೆ. ಆದರೆ ಪಶು ಪಕ್ಷಿಗಳು ಮತ್ತು ಮನುಷ್ಯರ ತಾಯಿ ಮಗುವಿನ ಸಂಬಂಧದಲ್ಲಿ ಒಂದು ವ್ಯತ್ಯಾಸ ಇದೆ.
      ಪಶು ಪಕ್ಷಿಗಳಲ್ಲಿ ಈ ಸಂಬಂಧ ಹೆಚ್ಚು ಕಾಲ ಉಳಿಯಲ್ಲ. ಮರಿ ಬೆಳೆಯುತ್ತೆ, ರೆಕ್ಕೆ ಬಲಿಯುತ್ತೆ, ನೀಲಾಕಾಶ ನೋಡುತ್ತೆ, ಮೈ ಜುಮ್ಮೆನ್ನುತ್ತೆ, ರೆಕ್ಕೆ ಬಡಿದು ಬಾನಿಗೇರುತ್ತೆ, ಸ್ವಾವಲಂಬಿ ಆಗುತ್ತೆ, ತಾಯಿಯನ್ನು ಮರೆಯುತ್ತೆ.ಇದೇ ರೀತಿ ಪ್ರಾಣಿ ಸಂಕುಲ ತನ್ನ ಆಹಾರ ಅರಸಲು ಶುರು ಮಾಡಿದೊಡನೆ ಸ್ವಾವಲಂಬಿ ಆಗುತ್ತೆ. ಆದರೆ ಮನುಷ್ಯ ಸ್ವಾವಲಂಬಿ ಆದ ಮೇಲೆ ಅಪ್ಪ ಅಮ್ಮನನ್ನು ಮರೆಯೋಲ್ಲ.
" ತಾಯಿ ತಂದೆಯರ ಸೇವೆಯ ಯೋಗ
ಬರಬಾರದೆ ಬಾಳಿನಲಿ ಬೇಗ"
ಅನ್ನೋದೆ ನಮ್ಮ ಬಾಳಿನ ಪಲ್ಲವಿ.

      ಕಣ್ಣೇ ಇಲ್ಲದ ಅಪ್ಪ ಅಮ್ಮನನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರ ನಮಗೆ ಆದರ್ಶ.
ತಂದೆಯ ಮಾತ ಉಳಿಸಲೋಸುಗ ಚಿಕ್ಕಮ್ಮನ ಸಂತೋಷಕ್ಕಾಗಿ ತಮ್ಮನಿಗೆ ರಾಜ್ಯದಧಿಕಾರಬಿಟ್ಟು ಅಡವಿಗೆ ತೆರಳಿದ ಪೊಡವಿಪತಿ ಶ್ರೀರಾಮಚಂದ್ರ ಈ ದೇಶದ ಆದರ್ಶ. ಆದರೆ ಇಂದು.....?

       ನಮ್ಮ ಅಕ್ಕ ತಂಗಿಯರಿಗೆ ವೇದ, ಶೃತಿ, ಗೀತಾ ಮುಂತಾದ ಹೆಸರಿಡುತ್ತೇವೆ. ನಮ್ಮನ್ನು ಭಗವಂತ( ಜ್ಞಾನ ) ನೆಡೆಗೆ ಒಯ್ಯುವ ಎಲ್ಲವನ್ನೂ ತಾಯಿ ಅಂತ ಗೌರವಿಸುತ್ತೇವೆ. ನಮಗೆ ಉಪಕರಿಸುವ ಎಲ್ಲದಕ್ಕೂ ಕೃತಜ್ಞರಾಗಿರಬೇಕು ಎಂಬುದರ ಅಭಿವ್ಯಕ್ತಿ ಅದು. ಹಾಗಾಗಿಯೇ ನಾವು ವೇದ, ಉಪನಿಷತ್, ನೆಲ, ಜಲ, ಹಸು, ಪ್ರಕೃತಿ,.....ಹೀಗೆ ಎಲ್ಲವನ್ನೂ ತಾಯಿ ರೂಪದಲ್ಲಿ ಕಾಣುತ್ತೇವೆ.

||ವಂದೇ ಮಾತರಂ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ