ಪುಟಗಳು

ಶನಿವಾರ, ಅಕ್ಟೋಬರ್ 6, 2012

ಭಾರತ ದರ್ಶನ-೬

                    ತಾನು ಮಾತ್ರವಲ್ಲ, ತನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನು ಸ್ವಾತಂತ್ರ್ಯ ಯಜ್ಞದ ಅಗ್ನಿಕಣಗಳನ್ನಾಗಿಸಿದವರು ವೀರ ಸಾವರ್ಕರ್!
ಇಲ್ಲದಿದ್ದರೆ ಬೀದಿ ಬದಿಯಲ್ಲಿ ಪುಂಡರೊಡನೆ ಚೇಷ್ಟೆಯಲ್ಲಿ ಕಾಲ ಕಳೆಯುತ್ತಿದ್ದ ಹೆಳವ ಆಬಾ ಪಾಂಗಳೆಯ ಬಾಯಿಂದ ತಾಯಿಯ ಗುಣಗಾನ ಕಾವ್ಯರಸಧಾರೆಯಾಗಿ ಹರಿಯಲು ಸಾಧ್ಯವೇ? ಇಂಜಿನಿಯರಿಂಗ್ ಮಾಡಲು ಹೋಗಿ ಮೋಜು-ಮಸ್ತಿ ಮಾಡುತ್ತಾ ಹುಡುಗಿಯರನ್ನು ಚುಡಾಯಿಸುತ್ತಿದ್ದ ಧಿಂಗ್ರಾನಿಂದ ಕರ್ಜನ್ ವಾಯ್ಲಿಯ ಸಂಹಾರ ಸಾಧ್ಯವಿತ್ತೆ? ಇವೆರಡು ಉದಾಹರಣೆ ಅಷ್ಟೇ. ಆದ

ರೆ ಅಂತಹ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರರನ್ನು ನಾವು ನಡೆಸಿಕೊಂಡ ರೀತಿ ಎಂತಹ ಹೀನ ವ್ಯಕ್ತಿಯಲ್ಲಿಯಾದರೂ ರೋಷ ಉಕ್ಕಿಸುವಂತಹದ್ದು ಅಲ್ಲವೇ? ತಾತ್ಯಾಟೋಪೆಯ ಕಥನ ಬರೆದ ನಂತರ ಸಾವರ್ಕರ್ ಕಣ್ಣೀರ್ಗರೆಯುತ್ತಾ ಹೇಳಿದ್ದರು, "ತಾತ್ಯಾ ನೀ ಇಂತಹ ಹತಭಾಗ್ಯ ದೇಶದಲ್ಲಿ ಯಾಕೆ ಹುಟ್ಟಿದೆ? ಬೇರಾವ ದೇಶದಲ್ಲಾದರು ಹುಟ್ಟಿದ್ದರೆ ನಿನ್ನ ವಿಗ್ರಹವನ್ನು ಮನೆಮನೆಯಲ್ಲಿಟ್ಟು ಪೂಜಿಸುತ್ತಿದ್ದರು!" ವಾಸ್ತವದಲ್ಲಿ ಅವರಿದನ್ನು ತಾತ್ಯಾಟೋಪೆಗೆ ಹೇಳಿದ್ದರೂ ನಾವು ತಾತ್ಯಾರಾವ್ ಸಾವರ್ಕರರಿಗೆ ಇದೇ ಪರಿಸ್ಥಿತಿ ತಂದೆವಲ್ಲ! ಭಾರತದ ಹತಭಾಗ್ಯ ಪರಿಸ್ಥಿತಿಗೆ ಕಾರಣ ನಾವೇ ಅಲ್ಲವೇ? ಇತಿಹಾಸವನ್ನು ಮರೆತ ದೇಶ ಅವನತಿಗೆ ಸಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ?
ಹಾಗಾದರೆ ಹೇಗಿತ್ತು ಭಾರತ?ಕೇಳಿ ವಿದ್ಯಾನಂದರ ಧ್ವನಿಯಲ್ಲಿ-
                       "ವಿಶ್ವಸಂತತಿಯೆಲ್ಲಾ ನಿನ್ನ ಪುಣ್ಯೋದರದ ಹಸುಗೂಸುಗಳೆಂದು ಹಾಲುಣಿಸಿದೆ. ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ ಪ್ರೇಮ ಸಂಗೀತದಲಿ ಮೈಮರೆಸಿದೆ" ಎಂಬ ಕವಿವಾಣಿ ಎಷ್ಟು ಚೆನ್ನ. ಮಗು ಭರತನಿಂದಾಗಿ ದೇಶ ಭಾರತವೆನಿಸಿತು ಎಂದು ಎಲ್ಲರಿಗೂ ತಿಳಿದಿದೆ. ಇದರ ಹಿಂದಿರುವ ಒಂದು ಸಾಂಸ್ಕೃತಿಕ ಮೌಲ್ಯ ಗಮನಿಸಿ. ನಮ್ಮ ತಾಯಿಯನ್ನ ಗುರುತಿಸಿದ್ದು ಆಕೆಯ ಮಗನ ಮೂಲಕ! ಹೆಣ್ಣು ಮಕ್ಕಳನ್ನು ಮಾತೃಸ್ವರೂಪದಲ್ಲಿ ಕಾಣೋದು ನಮ್ಮ ಸಂಸ್ಕೃತಿ. ಕಣ್ಣಿಗೆ ಕಾಣುವ ಸಕಲ ಸ್ತ್ರೀ ಅಂಶವನ್ನು ಜಗಜ್ಜನನಿ ಪಾರ್ವತಿ ಸ್ವರೂಪದಲ್ಲಿ ನೋಡುವ ಸಂಸ್ಕೃತಿ ನಮ್ಮದು. ಇದು ಬರೀ ತತ್ವಜ್ಞಾನ ಅಲ್ಲ ವ್ಯವಹಾರದಲ್ಲಿದೆ!
                     ಮನೆಯಲ್ಲಿ ನೋಡಿ, ತಂದೆ ತನ್ನ ಮಗಳನ್ನ ಅಮ್ಮಾ ಅಂತ ಕರೀತಾನೆ. ಮನೆಗೆ ಬಂದವರು ಆಗಷ್ಟೇ ಅಂಬೆಗಾಲಿಕ್ಕುವ ಬೊಚ್ಚು ಬಾಯೊಳು ಕಿಲಕಿಲ ನಗುವ ಮಗುವನ್ನು ಮುತ್ತಕ್ಕೀ ಏನಮ್ಮಾ ಅಂತ ಅನ್ನಲ್ವಾ? ತನ್ನ ಮಗಳನ್ನ ತಾಯಿ ರೂಪದಲ್ಲಿ ಕಾಣೋ ವ್ಯಕ್ತಿಗೆ ಕೈ ಹಿಡಿದ ಹೆಂಡತಿಯನ್ನು ತಾಯಿ ರೂಪದಲ್ಲಿ ಕಾಣೋದು ಕಷ್ಟವಾಗಲ್ಲ. ಧರ್ಮಪತ್ನಿಯನ್ನ ದೇವಿರೂಪದಲ್ಲಿ ಕಂಡು ಪರಮಹಂಸರು ಆರಾಧನೆ ಮಾಡಿದ್ರಲ್ಲ!
ಮನೆಯಲ್ಲಿನ ಸಂವಾದ ಸ್ವಲ್ಪ ಗಮನಿಸಿ. ಮನೇಲಿ ಹೆಂಡ್ತೀನಾ ಕರೆಯುವಾಗ ಗಂಡ ನೇರವಾಗಿ ಕರೆಯೋಲ್ಲ. ಮಗುವನ್ನು ಕರೆದು ಅಮ್ಮ ಎಲ್ಲಿದ್ದಾಳೆ ಅಮ್ಮನ್ನ ಕರಿ ಎನ್ನುತ್ತಾನೆಯೇ ಹೊರತು ನನ್ನ ಹೆಂಡ್ತೀನಾ ಕರಿ ಎನ್ನಲ್ಲ. ಹಾಗೆಯೇ ಹೆಂಡ್ತೀ ಗಂಡನನ್ನು ಕರೆಯುವಾಗ ಮಗು ಅಪ್ಪ ಎಲ್ಲಿದ್ದಾರೆ ನೋಡು. ಸ್ವಲ್ಪ ಕರಿ ಎನ್ನುತ್ತಾಳೆಯೇ ಹೊರತು ನನ್ನ ಹಸ್ಬೆಂಡನ ಕರಿ ಎನ್ನಲ್ಲ. ಶಬ್ಧಗಳೇನೋ ಸರಿ. ನಮಗದು ಹಿಡಿಸಲ್ಲ. ಅದರಲ್ಲಿ ನಮ್ಮ ಸಂಸ್ಕೃತಿಯ ಪ್ರವಾಹ ಇಲ್ಲ!
ಇಲ್ಲೆಲ್ಲಾ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡ ನಾವು ಇನ್ನೊಬ್ಬರಿಗೆ ತನ್ನ ಹೆಂಡತಿಯನ್ನು ಪರಿಚಯಿಸುವಾಗ ಇವಳು ನನ್ನ ಮಿಸ್ಸೆಸ್ಸು ನಾನವಳ ಹಸ್ಬೆಂಡ್ ಹೀಗೆಲ್ಲಾ ಹೇಳ್ತಾರೆ. ನಮ್ಮ ಹಿರಿಯರು ಹೀಗೆ ಹೇಳ್ತಾ ಇರಲಿಲ್ಲ. ಅವರು "ಈಕೆ ನನ್ನ ಕುಟುಂಬ. ನನ್ನ ಮಗುವಿನ ತಾಯಿ" ಎಂದು ಪರಿಚಯಿಸುತ್ತಿದ್ದರು. ಎಷ್ಟು ಸುಂದರವಾದ ಪದ್ದತಿ! ಹೆಂಡತಿ ಎಂಬ ಶಬ್ಧ ಗೌಣ. ಯಾಕೆಂದರೆ ಹೆಂಡತಿ ಅನ್ನೋ ಶಬ್ಧದಲ್ಲಿ ಭೋಗದ ವಾಸನೆ ಇದೆ. ತಾಯಿ ಅನ್ನುವ ಶಬ್ಧದಲ್ಲಿ ತ್ಯಾಗದ ಸುಗಂಧ ಇದೆ!
(ಮುಂದಿನ ಭಾಗ ಮೇಲಿನ ವಿಷಯದ ಪೂರಕ ಮಾಹಿತಿಗಳೊಂದಿಗೆ)
-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ