ಪುಟಗಳು

ಸೋಮವಾರ, ಅಕ್ಟೋಬರ್ 22, 2012

ಭಾರತ ದರ್ಶನ-೧೩

ಭಾರತ ದರ್ಶನ-೧೩:

ಬೆಳಗೆದ್ದೊಡನೇ ಎರಡು ಕರಗಳನ್ನು ನೋಡುತ್ತಾ
"ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತೀ।
ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ॥
ಎಂದು ಪ್ರಾರ್ಥಿಸುತ್ತಿದ್ದ ಮನಸ್ಸುಗಳ ಕರ ಮೂಲದಲ್ಲಿ ಇಂದು ಮೊಬೈಲ್, ರಿಮೋಟ್ ಕಂಟ್ರೋಲರ್, ಟ್ಯಾಬ್ ಬಂದು ಕೂತದ್ದು ಎಂಥಾ ವಿಪರ್ಯಾಸ!

ಹಿರಿಯರು ಚಾಪೆಯಿಂದ ನೆಲಕ್ಕೆ ಕಾಲು ಸ್ಪರ್ಶಿಸುವ ಮುಂಚೆಯೇ
"ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೇ।
ವಿಷ್ಣುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ॥"
ಎಂದು ಕಾಲುಗಳಿಂದ ಭೂಮಿತಾಯಿಯನ್ನು ಮೆಟ್ಟುವ ಸಲುವಾಗಿ ಕ್ಷಮಾಪಣೆ ಕೇಳುವ ಪರಿಪಾಠ ತಾಯಿಯ ಉದರವನ್ನೇ ಬಗೆದು ಹಣ ಮಾಡುವ ನಮಗೆ ಹೇಗೆ ಬರಬೇಕು?

ಹೌದು ನಮ್ಮ ದೇಶವನ್ನು ನಾವು ಕಂಡದ್ದೇ ಹಾಗೇ!

ಜಗತ್ತಿನ ಇತರರಿಗೆ ಕೇವಲ H2O ಆಗಿ ಕಾಣುವ ನೀರು ನಮಗೆ ತಾಯಿ, ತೀರ್ಥ! ಎಲ್ಲ ನದಿಗಳ ಹೆಸರನ್ನು ಅಕ್ಕತಂಗಿಯರಿಗಿಟ್ಟು ಗೌರವಿಸಿದವರು ನಾವು. ಸ್ನಾನ ಮಾಡುವಾಗ, ಕಲಷ ಪೂಜೆ ಮಾಡುವಾಗ ಎಲ್ಲ ನದಿಗಳನ್ನು ಆವಾಹನೆ ಮಾಡುತ್ತಾ
"ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು॥" ಎನ್ನುತ್ತಾ ನದಿಗಳನ್ನು ಸ್ಮರಿಸುತ್ತೇವೆ.

ದೇಶದಾದ್ಯಂತ ನಿಂತಿರುವ ಪುಣ್ಯ ಕ್ಷೇತ್ರಗಳಂತೂ ಭಾರತದ ಮೌಲಿಕ ಏಕತೆಯ ಸಜೀವ ಸಾಕ್ಷಿಗಳಾಗಿವೆ.
"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ।
ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ॥"
ಎಂದು ಸಪ್ತ ಮೋಕ್ಷದಾಯಕ ನಗರಗಳನ್ನು ಸ್ಮರಿಸುವುದು ನಮ್ಮ ದಿನಚರಿಯ ಭಾಗವೇ ಆಗಿತ್ತು.(ಮಾಯಾ-ಹರಿದ್ವಾರ, ಅವಂತಿಕಾ-ಉಜ್ಜಯಿನಿ)

ಜಗದ ಜನರಿಗೆ ಜಡವಾಗಿ ಕಾಣುವ ಪರ್ವತಗಳು ನಮಗೆ ದೈವಾಂಶ ಸ್ವರೂಪವೇ. ಅದಕ್ಕಾಗಿಯೇ
"ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ।
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ॥"

ಶಿವಭಕ್ತನಾದರೆ ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ನಿಂತಿರುವುದನ್ನು ನೋಡೂತ್ತಾನೆ! ಶಿವನ ಅಡಿ ರಾಮೇಶ್ವರದಲ್ಲಾದರೆ ಮುಡಿ ಕೈಲಾಸದಲ್ಲಿ. ಕಾಶಿ ಕಂಚಿಗಳು ಶಿವನ ಎರಡು ಕಣ್ಣುಗಳು ಎಂದವನ ನಂಬಿಕೆ.
ವೈಷ್ಣವನಾದಲ್ಲಿ ಕಂಚಿ, ಗುರುವಾಯೂರುಗಳಿಂದ ಬದರಿಯವರೆಗೆ(108 ವೈಷ್ಣವ ಸ್ಥಾನಗಳು) ಸಾಗುತ್ತಾನೆ.
ಅದ್ವೈತಿಯಾದರೆ ಪ್ರಹರಿಗಳಂತೆ ನಿಂತ ನಾಲ್ಕು ಶಂಕರಾಚಾರ್ಯ ಪೀಠಗಳು ಆತನನ್ನು ದೇಶದ ನಾಲ್ಕು ಮೂಲೆಗೆ ಕರೆದೊಯ್ಯುತ್ತವೆ.
ಶಕ್ತಿಯ ಆರಾಧಕನಾದರೆ ಬಲೂಚಿಸ್ತಾನದ ಹಿಂಗುಲಾತದಿಂದ ಅಸ್ಸಾಮಿನ ಕಾಮಾಕ್ಷಿಯವರೆಗೆ, ಹೈಮಾಚಲದ ಜ್ವಾಲಾಮುಖಿಯಿಂದ ದಕ್ಷಿಣದ ಕುಮಾರಿ ಕ್ಷೇತ್ರದವರೆಗೆ 51 ಶಕ್ತಿಪೀಠಗಳಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ಸಮಾಜದ ಬಂಧುಗಳಲ್ಲಿ ಭಾರತದ ಏಕಾತ್ಮತೆ ಈ ತೀರ್ಥಗಳ ರೂಪದಲ್ಲಿ ದೃಢವಾಗಿ ಪ್ರಕಟಗೊಂಡಿದೆ.

॥ವಂದೇ ಮಾತರಂ॥

1 ಕಾಮೆಂಟ್‌: