ಪುಟಗಳು

ಸೋಮವಾರ, ಅಕ್ಟೋಬರ್ 1, 2012

ಭಾರತ ದರ್ಶನ-೫

ವಾಸುದೇವ ಬಲವಂತ ಫಡಕೆ!
ಮಹಾರಾಷ್ಟ್ರದಲ್ಲಿ ರಾಮೋಶಿಗಳ ಪಡೆ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಈ ವೀರ ದೂರದ ಮರಳುಗಾಡು ಏಡನ್ ನಗರದಲ್ಲಿ ಬಂಧನದಲ್ಲಿ ವೀರಸ್ವರ್ಗ ಪಡೆಯುವಾಗ ಭರತ ಭೂಮಿಯ ಪವಿತ್ರ ಮೃತ್ತಿಕೆ(ಮಣ್ಣು) ಆ ಯೋಧನ ಮುಷ್ಠಿಯಲ್ಲಿ ಭದ್ರವಾಗಿತ್ತು!
ಆತನ ಈ ಅಚಲ ನಿಷ್ಟೆ ಆತನಿಂದಾಗಿ ಪಡೆದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರೋ ನಮಗೆ ಇದೆಯೇ? ನಾವು ನಮ್ಮತನವನ್ನೇ ಮರೆತಿದ್ದೇವೆ ಎಂದೆನಿಸುತ್ತಿಲ್ಲವೆ?
ಯಾಕೀ ಮಾತು?
ಕೇಳಿ ವಿದ್ಯಾನಂದರ ಅಮೃತವಾಣಿ.
ನಮ್ಮ ದೇಶದ ಇಕ್ಕೆಲಗಳಲ್ಲಿರುವ ಸಮುದ್ರಗಳೆರಡರ ಹೆಸರುಗಳ ಬಗ್ಗೆ ಯೋಚಿಸಿದ್ದೀರಾ? ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ! ನಮ್ಮ ಸಮುದ್ರಕ್ಕೆ ನಮ್ಮ ಮೇಲೆ ಆಕ್ರಮಣ ಮಾಡಿದ ಅರಬ್ಬರ ಹೆಸರೇಕೆ? ನಮ್ಮ ಹಿರಿಯರು ಪಶ್ಚಿಮ ಸಮುದ್ರಕ್ಕೆ ರತ್ನಾಕರ ಪೂರ್ವ ಸಮುದ್ರಕ್ಕೆ ಮಹೋದಧಿ ಅಂತ ಹೆಸರಿಟ್ಟಿದ್ದರು. ಸ್ವಾತಂತ್ರ್ಯ ವೀರ ಸಾವರ್ಕರ್ ದಾಸ್ಯದ ಹೆಸರುಗಳನ್ನು ಬದಲಾಯಿಸೋಕೆ ಕರೆ ಕೊಟ್ಟರು. ಪಶ್ಚಿಮ ಸಮುದ್ರಕ್ಕೆ ಸಿಂಧೂ ಬಂದು ಸೇರುತ್ತೆ, ಪೂರ್ವ ಸಮುದ್ರಕ್ಕೆ ಗಂಗೆ ಬಂದು ಸೇರ್ಕೊತ್ತಾಳೆ. ಹಾಗಾಗಿ ದಾಸ್ಯದ ಹೆಸರುಗಳನ್ನು ಬಿಟ್ಟು ಕನಿಷ್ಟ ಆ ನದಿಗಳ ಹೆಸರಿಂದ ಅಂದರೆ ಸಿಂಧೂ ಸಾಗರ ಮತ್ತು ಗಂಗಾ ಸಾಗರ ಅಂತ ಕರೆಯೋಣ ಅಂತ ಹೇಳಿದರು. ನಮ್ಮ ರಾಜಕಾರಣಿಗಳು,ನಾವೂ ಕಿವಿಗೊಡಲೇ ಇಲ್ಲ!
ನಮ್ಮಹೆಸರುಗಳ ಮೇಲೆ ಆಕ್ರಮಣ ನಡೆಯಿತು ಎನ್ನುವುದಕ್ಕೆ ಇದೆರಡು ಉದಾಹರಣೆ ಅಷ್ಟೆ! ಇಂತದೆಷ್ಟಿರಬಹುದು? ದೇಶದ ಉದ್ದಗಲಕ್ಕೆ ಒಮ್ಮೆ ಕಣ್ಣು ಹಾಯಿಸಿ.
ಜಗತ್ತಿನ ಅತೀ ಎತ್ತರದ ಶಿಖರ ಅದು ನಮ್ಮ ತೀರ್ಥ. ಅದರ ಹೆಸರು ಗೊತ್ತಾ ಮಗು ಎಂದು ನಮ್ಮ ದೇಶದ ಯಾವುದಾದರೂ ಮಗುವನ್ನು ಕೇಳಿ ನೋಡಿ. ಮೌಂಟ್ ಎವರೆಷ್ಟ್ ಅಲ್ವಾ ಅಂಕಲ್ ಎನ್ನುತ್ತದೆ ಆ ಮಗು. ಈ ಅಂಕಲ್, ಮೌಂಟ್, ಎವರೆಷ್ಟ್ ಯಾವುವೂ ನಮ್ಮದಲ್ಲ. ನಮ್ಮ ಋಷಿಗಳ ಕಾಲದಲ್ಲಿ ಇಂಗ್ಲೀಷ್ ಹುಟ್ಟಿಯೇ ಇರಲಿಲ್ಲ. ಜಗತ್ತಿನ ಅತ್ಯುನ್ನತ ಶಿಖರಕ್ಕೆ ನಮ್ಮ ಪೂರ್ವಜರು ಸಾಗರಮಾಥಾ ಅಂತ ಹೆಸರಿಟ್ಟಿದ್ದರು. ಅಂದರೆ ಶಿವನ ನೆತ್ತಿ ಅಂತ ಅರ್ಥ. ಗೌರಿ ಶಂಕರ ಎಂದಾಗ ನಮ್ಮ ಹೃದಯ ಅರಳುತ್ತೆ, ಎವರೆಷ್ಟ್ ಎಂದಾಗ ಭಾವನೆಗಳು ನಿರ್ಮಾಣ ಆಗೋದೇ ಇಲ್ಲ! ಕೆಲವೊಂದನ್ನು ಅವರಿಗೆ ಉಚ್ಚಾರ ಮಾಡಲಿಕ್ಕೆ ಆಗಲೇ ಇಲ್ಲ. ಉದಾಹರಣೆಗೆ ಈಶಾನ್ಯ ಭಾರತದ ಒಂದು ಉತ್ತುಂಗ ಶಿಖರ ಕಾಂಚನ ಗಂಗಾ. ಹಿಮಾಲಯದಲ್ಲಿ ಎತ್ತರಕ್ಕೆ ಅದಕ್ಕೆ ಮೂರನೇ ಸ್ಥಾನ. ಮುಂಜಾನೆ ಮುಂಜಾನೆ ಅರುಣನ ಚಿನ್ನದ ಕಿರಣ ಈ ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟದ ಮೇಲೆ ಬಿದ್ದಾಗ ಇಡೀ ಬೆಟ್ಟವೇ ಚಿನ್ನದ ಗಟ್ಟಿಯಂತೆ ಹೊಳೆಯುತ್ತೆ. ಪ್ರಕೃತಿಯ ಈ ಪವಾಡದಿಂದ ಮುದಗೊಂಡ ನಮ್ಮ ಹಿರಿಯರು ಈ ಬೆಟ್ಟಕ್ಕೆ ಕಾಂಚನ ಗಂಗಾ ಎಂದು ಕರೆದರು. ಬ್ರಿಟಿಷರ ಬಾಯಲ್ಲಿ ಅದು ಕಿಂಚನ್ ಚುಂಗಾ ಆಗಿದೆ! ಹಾಗೆಯೇ ಶಕ್ತಿ ಪೀಠ ಕಾಳೀ ಘಾಟ್ ಇವತ್ತು ಕೋಲ್ಕತ್ತಾ ಆಗಿದೆ. ಬಂಗಾಳದ ಇನ್ನೊಂದು ಶಿವಕ್ಷೇತ್ರ ದುರ್ಜಯಲಿಂಗ. ತಪಸ್ಸು ಕೆಡಿಸಲು ಬಂದ ಮನ್ಮಥನನ್ನು ಹಣೆಗಣ್ಣಿನ ಕಿಡಿನೋಟದಿಂದ ಹಿಡಿಬೂದಿ ಮಾಡಿದ ಆ ತ್ರಿಪುರಾರಿ ಲಿಂಗ ರೂಪದಲ್ಲಿ ನೆಲೆನಿಂತ ಕ್ಷೇತ್ರ ಅದು. ಅವನು ಅಜೇಯ, ಅದಕ್ಕೇ ಅದು ದುರ್ಜಯ ಲಿಂಗ. ಬ್ರಿಟಿಷರ ಬಾಯಲ್ಲಿ ಅದು ಡಾರ್ಜ್ ಲಿಂಗ್ ಆಯ್ತು, ಈಗಲೂ ಉಳಿದುಕೊಂಡಿದೆ! ಕನ್ನಡ ಕೆನರಾ ಆಯ್ತು. ಕೊಡಗು ಕೂರ್ಗ್, ಮಡಿಕೇರಿ ಮರ್ಕೆರಾ!
ಹಿಮಾಲಯದ ತಪ್ಪಲಲ್ಲಿರೋ ದ್ರೋಣಧಾರಾ ಡೆಹರಾಡೂನ್ ಆಯ್ತು, ಮಹಾರಾಷ್ಟ್ರದ ಧಾರಾಶಿವ ಉಸ್ಮನಾಬಾದ್ ಆಗಿದೆ! ಆಂದ್ರದ ಪಾಲಾಮೂರ್ ಮೆಹಬೂಬ್ ನಗರ ಆಗಿದೆ, ಸಕಲೇಶಪುರಕ್ಕೆ ಟಿಪ್ಪು ಮಾಂಜರಾಬಾದ್ ಅಂತ ಹೆಸರಿಟ್ಟಿದ್ದ!
ಬೀದರನ ಜಯಸಿಂಹಪುರ ಹುಮನಾಬಾದ್ ಆಗಿದೆ! ಆಂಧ್ರದ ರಾಜಧಾನಿ ಭಾಗ್ಯನಗರ ಹೈದರಾಬಾದ್ ಆಗಿದೆ! ಯಾದವರ ದೇವಗಿರಿ ದೌಲತಾಬಾದ್, ಉತ್ತರಪ್ರದೇಶದ ರಾಮಘರ್ ಈಗ ಅಲಿಘರ್! ಕೃಷ್ಣನ ಸಹಪಾಠಿ ಗೆಳೆಯ ಸುಧಾಮನ ಊರು ಸುಧಾಮ ಪುರಿ ಪೋರಬಂದರ್ ಆಗಿ ಡರ್ ಪೋಕ್ ದೇಶದ್ರೋಹಿಗಳಿಗೆ ಜನ್ಮವೆತ್ತಿದೆ!
ಪ್ರಜಾಪತಿ ಬ್ರಹ್ಮ ಯಾಗ ಮಾಡಿದ ತ್ರಿವೇಣಿ ಸಂಗಮ ಅಕ್ಷಯ ವಟವೃಕ್ಷ ಇರೋ ತೀರ್ಥರಾಜ ಪ್ರಯಾಗ, ಅದನ್ನು ಅಕ್ಬರ್ ಅಲಹಬಾದ್ ಅಂತ ಬದಲಾಯಿಸಿದ್ದಾನೆ! ಕಾಶಿಯನ್ನ ಔರಂಗಜೇಬ್ ಮಹಮ್ಮದಾಬಾದ್ ಅಂತ ಮಾಡಿದ್ದ! ಅಯೋಧ್ಯೆ ಫೈಜಾಬಾದ್ ಆಯ್ತು, ಭವಾನಿಪುರ ಢಾಕಾ ಆಯ್ತು. ಶ್ರೀರಾಮನ ಕಿರಿಯ ಮಗ ಮಹಾರಾಜ ಲವನ ರಾಜಧಾನಿ ಲವಪುರ ಲಾಹೋರ್ ಆಗಿ ಪಾಕಿಸ್ತಾನಕ್ಕೆ ಸೇರಿತು! ಗಾಂಧಾರ ಅಪ್ಘಾನಿಸ್ಥಾನ ಆಗಿದೆ. ಪ್ರಹ್ಲಾದನಿಗೆ ಜನ್ಮವಿತ್ತ ಪ್ರಹ್ಲಾದ ಪುರಿ ಯಾ ಹಿರಣ್ಯಾಕ್ಷ ನಗರಿ ಮುಲ್ತಾನ್ ಆಗಿ ಪಾಕಿಸ್ತಾನದಲ್ಲಿ ನಾರುತ್ತಿದೆ! ಕೃಷ್ಣ ಇಟ್ಟ ಹೆಸರು ಇಂದ್ರಪ್ರಸ್ಥ ಇವತ್ತು ದಿಲ್ಲಿ ಆಗಿದೆ!
ಹೆಸರಿನ ಮೇಲಿನ ಆಕ್ರಮಣ ಅಲ್ಲಿಗೆ ನಿಲ್ಲಲಿಲ್ಲ. ಮನೆ ಮನ ಪ್ರವೇಶ ಮಾಡಿತು. ಅಮ್ಮ ಮಮ್ಮಿ ಆದಳು. ಅಪ್ಪ ಡ್ಯಾಡಿ ಆದ. ಗಂಡಸರೆಲ್ಲಾ ಅಂಕಲ್ಸ್, ಹೆಂಗಸರೆಲ್ಲಾ ಆಂಟಿಗಳು. ಭಾರತ ಇಂಡಿಯಾ!
ಬಂಧುಗಳೇ ಒಳ್ಳೇ ಸಂಗತಿಗಳನ್ನು ಜಗತ್ತಿನ ಎಲ್ಲಾ ಕಡೆಯಿಂದ ಸ್ವೀಕಾರ ಮಾಡಿದವರು ನಾವು! ಆದರೆ ತೆಗೆದು ಕೊಳ್ಳುವಾಗ ಯೋಚನೆ ಮಾಡ್ಬೇಕು. ಅದರಿಂದ ನಮ್ಮ ಸಂಸ್ಕೃತಿಗೆ ಒಳ್ಳೆಯದಾಗುತ್ತಾ ಅಂತ ಯೋಚಿಸಬೇಕು!
ಮಮ್ಮಿ ಅನ್ನೋ ಶಬ್ಧಕ್ಕೆ ಹೆಣ ಅನ್ನೋ ಅರ್ಥ ಇದೆಯಲ್ಲಾ! ನೈಲ್ ನದಿ ಕಣಿವೆಯ ಈಜಿಪ್ಷಿಯನ್ ಜನ ಶವಗಳನ್ನು ಬಿಳಿ ಬಟ್ಟೆಗಳಲ್ಲಿ ಸುತ್ತಿ ಪಿರಮಿಡ್ಗಳಲ್ಲಿ ಇರಿಸ್ತಾ ಇದ್ದರು! ಜನ್ಮ ಕೊಟ್ಟ ಭಾಗ್ಯದಾತೆನಾ ಹೆಣ ಅಂತಾ ಅರ್ಥ ಬರೋ ಶಬ್ಧದಲ್ಲಿ ಕರೆಯೋದು ಸರೀನಾ? ತಾಯಿನಾ ಗುರುತಿಸೋಕೆ ನಮ್ಮಲ್ಲೇನು ಶಬ್ಧದ ದಾರಿದ್ರ್ಯ ಇದೆಯಾ? ಅಮ್ಮಾ, ತಾಯಿ, ಆಯಿ, ಮಾತೆ, ಅವ್ವೆ, ಅಬ್ಬೆ... ಎಷ್ಟೊಂದು ಶಬ್ಧಗಳು! ಶಬ್ಧದ ಜೊತೆಗೆ ಸಂಸ್ಕೃತಿ ಹರಿಯುತ್ತೆ. ಹಾಗಾಗಿ ಮಕ್ಕಳಿಗೆ ಶಬ್ಧಗಳನ್ನು ಕಲಿಸುವಾಗ ಎಚ್ಚರವಹಿಸಬೇಕು! ಭಾರತ( ಅರ್ಥಕ್ಕೆ ಭಾರತ ದರ್ಶನ-೨ ನೋಡಿ) ಇಂಡಿಯಾ ಆದದ್ದು ಹೇಗೆ? ಆ ಪದಕ್ಕೆ ಅರ್ಥವೇ ಇಲ್ಲ. ವಾಯುವ್ಯ ಭಾರತವನ್ನು ಅತಿಕ್ರಮಿಸಿದ ಅಲೆಗ್ಸಾಂಡರ್ ಸಿಂಧೂ ನದಿಯನ್ನು ನೋಡಿದ.(ಸಿಂಧೂ ಎಂದರೆ ಪವಿತ್ರ ಅಥವಾ ಮಂಗಲ ಎಂದರ್ಥ) ಅಲೆಗ್ಸಾಂಡರ್ ಬಾಯಲ್ಲಿ ಅದು ಇಂಡೋಸ್ ಆಯ್ತು. ಇಂಡೋಸ್ ನಿಂದ ಇಂಡಿಕಾ, ಇಂಡಿಯಾ ಶಬ್ಧಗಳು ಬಂದವು. ಹೀಗಾಗಿ ಇಂಡಿಯಾ ಎಂದಾಗ ನಮ್ಮ ತಾಯಿಯ ಮುಡಿಗೆ ಕೈ ಹಾಕಿದ ಅಲೆಗ್ಸಾಂಡರ್ ನೆನಪಾಗುತ್ತೆ!
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ