ಪುಟಗಳು

ಶುಕ್ರವಾರ, ಸೆಪ್ಟೆಂಬರ್ 28, 2012

ಭಾರತ ದರ್ಶನ-೪

"ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ।
ಸ್ವರ್ಗಾಪವರ್ಗಾಸ್ಪದ ಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್॥"
(ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು ಎಂದು ದೇವತೆಗಳು ಹಾಡಿ ಹೊಗಳಿದ್ದಾರೆ). ಜಗನ್ಮಾತೆ ಆದಿಶಕ್ತಿ ಮಹಾದುರ್ಗೆ ಮೈತಾಳಿದ ಜೀವಂತ ಅವತಾರವೇ ಭಾರತಮಾತೆ ಎಂದರು ಮಹಾಯೋಗಿ ಅರವಿಂದ.
ಪ್ರತಿಯೊಂದು ಜೀವಿಗೆ ಹುಟ್ಟು ಹೇಗೋ ಸಾವೂ ಅನಿವಾರ್ಯ. ಇದು ಜೀವಿಗೆ ಮಾತ್ರವಲ್ಲ. ಜನಾಂಗಕ್ಕೂ ಕೂಡಾ! ಜಗತ್ತಿನಲ್ಲಿ ಅದೆಷ್ಟೋ ಜನಾಂಗಗಳು ಈ ಜನನ ಮರಣಗಳ ಪ್ರಭಾವಕ್ಕೆ ಸಿಲುಕಿ ಯಾ ಕಾಲದ ಕ್ರೂರ ಆಘಾತಕ್ಕೆ ಸಿಲುಕಿಯೋ ನಾಶವಾದವು. ಆದರೆ ಭಾರತ ಮಾತ್ರ ಇದಕ್ಕೆ ಅಪವಾದ. ಇದರ ಹುಟ್ಟನ್ನು ನಿರ್ಧರಿಸುವಲ್ಲಿ ಇತಿಹಾಸಕಾರರಿಗೆ ಯಶಸ್ಸು ಸಿಕ್ಕಿಲ್ಲ. ಜ್ಞಾತ ಜಗತ್ತಿನಲ್ಲಿ ತಾಯಿ ಶಾರದೆಯ ಪ್ರಥಮ ವೀಣಾ ಝೇಂಕಾರ ಋಗ್ವೇದದ ರೂಪದಲ್ಲಿ ಹೊರಹೊಮ್ಮಿತು ಎಂದರೆ ಅತಿಶಯೋಕ್ತಿ ಆಗಲಾರದು. ವಿಶ್ವದ ಬಹುತೇಕ ನಾಗರೀಕತೆಗಳು ಹುಟ್ಟಿದವು, ಕೆಲಕಾಲ ಮಿಂಚು ಹುಳಗಳಂತೆ ಮಿಂಚಿದವು, ಅಲ್ಪಾಯುಗಳಾಗಿ ಕಾಲಗರ್ಭ ಸೇರಿದವು. ಇಡೀ ಯೂರೋಪಗೆ ತತ್ವಜ್ಞಾನ ನೀಡಿದ ಹಾಗೂ ನಾವು ಈ ವಿಶ್ವವನ್ನು ಆಳಲು ಹುಟ್ಟಿದವರು, ಉಳಿದೆಲ್ಲರು ನಮ್ಮ ದಾಸ್ಯವನ್ನು ಒಪ್ಪಿಕೊಳ್ಳಬೇಕು ಅಂತ ಉನ್ಮತ್ತವಾಗಿ ಘೋಷಿಸಿ ಮೆರೆದ ಗ್ರೀಕರು ಇಂದು ಎಲ್ಲಿದ್ದಾರೆ? ಅಸಹಿಷ್ಣು ಏಕದೇವೋಪಾಸಕ ಮತಾಂಧ ಸಿರಿಲ್ನ ಆಕ್ರಮಣದಿಂದ ತತ್ತರಿಸಿದ ಆ ಪ್ರಾಚೀನ ದೇಶ ತನ್ನ ಹೆಸರನ್ನು ಬಿಟ್ಟು ಉಳಿದೆಲ್ಲವನ್ನು ಕಳಕೊಂಡಿತು. ಆತನ ಆಕ್ರಮಣದ ಬಳಿಕ ಮತ್ತೆಂದೂ ಇನ್ನೊಬ್ಬ ಪ್ಲೇಟೋ, ಸಾಕ್ರಟೀಸ್, ಯೂಕ್ಲಿಡ್, ಪೈಥಾಗೋರಸ್ನಂತಹ ಜ್ಞಾನಿಗಳು, ತತ್ವಜ್ಞಾನಿಗಳು ಹುಟ್ಟಲೇ ಇಲ್ಲ! ಅಲೆಗ್ಸಾಂಡರ್ ಸೆಲ್ಯೂಕಸ್ ನಂತಹ ಪರಾಕ್ರಮಿಗಳು ಜನ್ಮವೆತ್ತಲೇ ಇಲ್ಲ.ತನ್ನತನ ಕಳಕೊಂಡ ದೇಶ ಮತ್ತೆ ಮೆರೆಯುವುದೆಂತು ಸಾಧ್ಯ? ಅಂತೆಯೇ ಯುಪ್ರೈಟಿಸ್& ಟೈಗ್ರಿಸ್ ನದಿಗಳ ದಡದ ಮೇಲೆ ಬೆಳೆದ ಮೆಸಪಟೋಮಿಯನ್ ಯಾ ಬ್ಯಾಬಿಲೋನಿಯನ್ ನಾಗರೀಕತೆ ಇಂದಿಲ್ಲ. ಆ ಪ್ರದೇಶ ಇದೆ, ನದಿಗಳಿವೆ, ಆದರೆ ಆ ಸಭ್ಯತೆ ಇಲ್ಲ! ಅದನ್ನಿವತ್ತು ಇರಾಕ್ ಅಂತ ಕರಿತೀವಿ.
ನಾಲ್ಕು ಸಾವಿರ ವರ್ಷಗಳ ಹಿಂದೆ ನೈಲ್ ನದಿ ಕಣಿವೆಯ ಈಜಿಪ್ಷಿಯನ್ ನಾಗರೀಕತೆ ಸಾವಿಗೀಡಾಯಿತು. ಅಲ್ಲಿ ಇಂದು ಪೂರ್ವಜರ ಸ್ಮರಣೆಯೂ ಸಾಧ್ಯವಿಲ್ಲವಾಗಿದೆ. ಸಾವಿರದ ಮುನ್ನೂರು ವರ್ಷಗಳ ಹಿಂದೆ ಇಸ್ಲಾಂ ಆಕ್ರಮಣಕ್ಕೆ ತುತ್ತಾದ ಪರ್ಷಿಯಾ ಇಂದು ಇರಾನ್ ಆಗಿದೆ. ಆಕ್ರಮಣಕ್ಕೆ ಮುನ್ನ ಕೋಟ್ಯಾಂತರ ಸಂಖ್ಯೆಯಲ್ಲಿದ್ದ ಪಾರ್ಸಿಗಳ ಸಂಖ್ಯೆ ಇಂದು ಇಡೀ ವಿಶ್ವದಲ್ಲಿ ೧ ಲಕ್ಷದ ನಲವತ್ತು ಸಾವಿರ ಮಾತ್ರ! ಇಡೀ ಯೂರೋಪ್ಗೆ ಸ್ವಾಭಿಮಾನವನ್ನು ಏಕಶಾಸನದ ಪ್ರಜ್ಞೆಯನ್ನು ನೀಡಿದ ಸೀಸರನ ರೋಮನ್ ಸಾಮ್ರಾಜ್ಯ ಎಲ್ಲಿದೆ? ಸ್ವಾಮಿ ವಿವೇಕಾನಂದರು ಹೇಳಿದರು ಸೀಸರ್ ಆಳುತ್ತಿದ್ದ ಕಡೆ ಇಂದು ಜೇಡರ ಬಲೆಗಳು ತುಂಬಿಕೊಂಡಿದ್ದಾವೆ ಅಂತ!
1492ರಲ್ಲಿ ಕೊಲಂಬಸ್ ಅಮೇರಿಕಾಕ್ಕೆ ಕಾಲಿಟ್ಟ. ಆಗ ಅಲ್ಲಿ ಮಾಯನ್ ಸಂಸ್ಕೃತಿಯ ಹತ್ತುಕೋಟಿ ಜನ ವಾಸವಾಗಿದ್ದರು. ಈಗ ಅವರ ಸಂಖ್ಯೆ ಕೇವಲ 60000! ಜನಸಂಖ್ಯೆ ಕುಸಿದದ್ದು ಹೇಗೆ? ಕೊಲಂಬಸ್ ಅಮೇರಿಕಾವನ್ನು ಲೂಟಿ ಮಾಡಿದ! ನಂತರ ಅವನ ದೇಶದ ಸೇನೆ ಬಂತು. ಮುಗ್ಧ ಮಾಯನ್ನರನ್ನು ಕಂಡಕಂಡಲ್ಲಿ ಕೊಚ್ಚಿ ಕೊಂದರು!ಸಂಸ್ಕೃತಿ ವಿನಾಶಕ್ಕೊಳಗಾಯಿತು.
ಹೀಗೆ ಗ್ರೀಕ್, ಮಾಯನ್, ರೋಮನ್, ಅಜೆಟಿಕ್, ಐಗುಪ್ತ, ಈಜಿಪ್ಷಿಯನ್, ಚಾಂಡಿಯನ್, ಬ್ಯಾಬಿಲೋನಿಯನ್, ಇಂಕಾ, ಸಿಥಿಯನ್, ಪಾರ್ಥಿಯನ್, ಇತ್ಯಾದಿ ಬಹುತೇಕ ನಾಗರೀಕತೆಗಳು ಸಂಸ್ಕೃತಿಗಳು ನಾಶವಾದವು! ಕೆಲವು ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ ಹಲವು ಅಸಹಿಷ್ಣು ಮತಾಂಧರಿಗೆ ಬಲಿಯಾದವು. ಆದರೆ ಅವೆಲ್ಲಕ್ಕೂ ಪ್ರಾಚೀನವಾದ ಭಾರತೀಯ ಸಂಸ್ಕೃತಿ.....?
ಇಂದಿಗೂ ಉಳಿದಿದೆ!
ಆಕ್ರಮಕರು ನಮ್ಮಲ್ಲೂ ಬಂದರು. ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ!
ಆದರೂ ಭಾರತ ಸತ್ತಿಲ್ಲ! ಉಳಿದೆಲ್ಲವೂ ಆಕ್ರಮಕರ ಮೊದಲ ಹೊಡೆತಕ್ಕೆ ನಾಶವಾದರೆ ಭಾರತ ಜಗದ್ವಂದ್ಯವಾಗಿ ನಿಂತಿದೆ. ಆದರೆ ನಾವು ಇತಿಹಾಸದ ಈ ಪ್ರೇರಣಾದಾಯಿತ್ವವನ್ನು, ನಮ್ಮ ಸಂಸ್ಕೃತಿಯ ಚಿರಂಜೀವಿತ್ವವನ್ನು ನಮ್ಮ ಮಕ್ಕಳಿಗೆ ತಿಳಿಸ್ತೀವಾ? ಮೆಕಾಲೆ ಯಾ ಗುಲಾಮೀ ಮಾನಸಿಕತೆಯ ಕೆಲವು ಇತಿಹಾಸಕಾರರು ಭಾರತದ ಇತಿಹಾಸ ಎಂದರೆ ಸೋಲಿನ ಇತಿಹಾಸ ಅಂತ ನಮ್ಮ ಮಕ್ಕಳಿಗೆ ಬೋಧಿಸುವಂತೆ ಮಾಡಿದ್ದಾರೆ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ಈ ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ