ಪುಟಗಳು

ಶುಕ್ರವಾರ, ಸೆಪ್ಟೆಂಬರ್ 21, 2012

ಭಾರತದರ್ಶನ-೨

ಭಾರತದರ್ಶನ-೨

ರಾಷ್ಟ್ರ ಎಂದರೆ ಭೂಮಿಯ ಒಂದು ತುಂಡಾಗಲಿ, ಜನತೆಯ ಒಂದು ಗುಂಪಾಗಲಿ ಅಲ್ಲ. ಅದೊಂದು ಸಜೀವ ಸೃಷ್ಟಿ. ಒಂದೇ ಪರಂಪರೆ, ಇತಿಹಾಸ, ಒಂದೇ ಬಗೆಯ ಆಸೆ ಆಕಾಂಕ್ಷೆಗಳು, ಸುಖ ದುಃಖಗಳು, ಒಂದೇ ಶತ್ರು ಮಿತ್ರ ಭಾವನೆ ಹೊಂದಿ, ಒಂದು ನಿರ್ದಿಷ್ಟ ನೈಸರ್ಗಿಕ ಮೇರೆಗಳನ್ನುಳ್ಳ ಭೂಭಾಗದಲ್ಲಿ ಮಕ್ಕಳಂತೆ ಬೆಳೆದು ಬರುವ ಜನಾಂಗವೇ ಒಂದು ರಾಷ್ಟ್ರ. ವರ್ತಮಾನ ಕಾಲದ ಕೇವಲ ಉದ್ದಗಲಗಳ ಗುಣಾಕಾರಕ್ಕೆ ರಾಷ್ಟ್ರ ಒಳಪಡುವುದಿಲ್ಲ. ಭೂತದ ಇತಿಹಾಸ, ಪರಂಪರೆಗಳ ಆಳ ಅದಕ್ಕಿರುತ್ತದೆ. ಮಾನವ ಜೀವನ ವ್ಯವಸ್ಥೆಯ ಅನೇಕ ಪ್ರಯೋಗಗಳ ಪರಿಪಾಕವಾಗಿ ಶ್ರೇಷ್ಠ ಸಾಂಸ್ಕೃತಿಕ ಸಂಪತ್ತು, ಆದರ್ಶ ಜೀವನ ಪದ್ದತಿಯನ್ನು ನಮ್ಮ ಪೂರ್ವಜರು ಬಹು ಮೊದಲೇ ನಿರ್ಮಿಸಿದರು. ತಮ್ಮ ದೇಶವನ್ನು ತಾಯಿ ಎಂದು ಕರೆದು ತಮ್ಮೆಲ್ಲಾ ಶೃದ್ಧಾಭಕ್ತಿಗಳನ್ನು ಆಕೆಯ ಪದತಲದಲ್ಲಿ ಅರ್ಪಿಸಿದರು.

ವಾಸ್ತವಿಕವಾಗಿ ಭಾರತ ಎಂಬ ಹೆಸರೇ ಇದು ನಮ್ಮ ತಾಯಿ ಎಂದು ಸೂಚಿಸುತ್ತದೆ. ಇದನ್ನು ಅಜನಾಭವರ್ಷ ಎಂದರು. ಅಂದರೆ ಅಜನ್ಮನ(ವಿಷ್ಣು) ನಾಭಿ ಕಮಲದ ಮೇಲೆ ಇದು ನಿಂತಿದೆ ಎಂದರ್ಥ(ಮದ್ಭಾಗವತ). ವಾಯು ಪುರಾಣದಲ್ಲಿ ಹೈಮವತವರ್ಷ ಎಂದರು. ಭರತ ಚಕ್ರವರ್ತಿಯಿಂದಾಗಿ ಭಾರತ ಎನಿಸಿತು. ಸ್ವಾಯಂಭುವ ಮನುವಿನ ಮಗ ಪ್ರಿಯವ್ರತ. ಆತನ ಮಗ ನಾಭಿ. ನಾಭಿಯ ಸುತ ಋಷಭ. ಇವನ ಜೇಷ್ಠ ಪುತ್ರನೇ ಭರತ. ಇದು ವಾಯುಪುರಾಣ, ಭಾಗವತ, ಮಾರ್ಕಂಡೇಯ ಪುರಾಣಗಳಿಂದ ಧೃಢಪಟ್ಟಿದೆ. ಆದರೆ ದುಶ್ಯಂತ ಶಕುಂತಲೆಯರ ಪುತ್ರ ಭರತನಿಂದಾಗಿ ಭಾರತವೆನಿಸಿತೆಂದು ಮಹಾಭಾರತದಲ್ಲಿದೆ. ಈತ ಚತುರ್ ದಿಕ್ಕುಗಳನ್ನು ಗೆದ್ದು ನೂರಕ್ಕೂ ಹೆಚ್ಚು ಅಶ್ವಮೇಧ ಯಾಗ ಮಾಡಿಸಿದನೆಂದು ಐತರೇಯ ಬ್ರಾಹ್ಮಣ ಹೇಳುತ್ತದೆ. ಇವುಗಳ ಪೈಕಿ 78ನ್ನು ಯಮುನೆಯ ತಟದಲ್ಲೂ, 55ನ್ನು ಗಂಗಾ ತೀರದಲ್ಲೂ ನಡೆಸಿದ್ದ ದಾಖಲೆ ಶತಪಥ ಬ್ರಾಹ್ಮಣದಲ್ಲಿದೆ.

ಭೃ ಎನ್ನುವ ಧಾತುವಿನಿಂದ ಭಾರತ ಹುಟ್ಟಿಕೊಂಡಿತು. ಅಂದರೆ ಪೋಷಿಸು, ಭರಿಸು ಎಂದರ್ಥ. ಇದಕ್ಕೆ ಬೆಳಕು, ಜ್ಞಾನ, ಭಗವಂತ ಎಂಬೀ ಅರ್ಥಗಳಿವೆ. ಆದ್ದರಿಂದ ವಿಶ್ವವನ್ನೇ ಪೋಷಿಸಿದ, ವಿಶ್ವಕ್ಕೆ ಬೆಳಕು ನೀಡಿದ, ಜ್ಞಾನ ನೀಡಿದ, ಭಗವಂತನ ನಾಡು ಭಾರತ! 'ಭಾರತ' ಇದು ಪ್ರಗತಿಯ ಚಿಹ್ನೆ. ನಾಟ್ಯಶಾಸ್ತ್ರದ ಹರಿಕಾರ ಭರತಮುನಿಯ ಬೀಡು. ನಟರಾಜನ ಪದತಲ ಸೋಂಕಿದ ಪುಣ್ಯನೆಲ. 'ಭಾ'ವ, 'ರಾ'ಗ, 'ತಾ'ಳಗಳ ಸಾಮರಸ್ಯದ ಭೂಮಿ! ಇದೇ ಇಲ್ಲಿನ ವಿವಿಧತೆಯಲ್ಲೂ ಏಕನಾದ ಹೊರಡಿಸಿಹುದು!
॥ವಂದೇ ಮಾತರಂ॥
-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ