ಪುಟಗಳು

ಸೋಮವಾರ, ಅಕ್ಟೋಬರ್ 22, 2012

ಭಾರತ ದರ್ಶನ-೧೪

ಭಾರತ ದರ್ಶನ-೧೪:

ಭಾರತ ಒಂದು ರಾಷ್ಟ್ರವಾಗಿತ್ತೇ?

       ರಾಷ್ಟ್ರೀಯತೆ ನಮಗೆ ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನಂಬಿರುವ ಹಲವು "ಪಂಡಿತರು" ನಮ್ಮಲ್ಲಿದ್ದಾರೆ. ಸತ್ಯವೆಂದರೆ ಚರಿತ್ರೆ ಕಣ್ಣು ಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು. ಪಾಶ್ಚಾತ್ಯರು ಮಾನವಂತರಾಗುವ ಮೊದಲೇ ನಾವು ಒಂದು ಅಖಂಡ ಮಾತೃಭೂಮಿಯಲ್ಲಿ ನೆಲೆಸಿದ ರಾಷ್ಟ್ರವಾಗಿದ್ದೆವು.

       " ಪೃಥಿವ್ಯಾ ಸಮುದ್ರಾ ಪರ್ಯಂತಾಯಾ ಏಕರಾಟ್ " (ಸಮುದ್ರದವರೆಗಿನ ಇಡೀ ಭೂಮಿ ಒಂದು ರಾಷ್ಟ್ರ.) ಎಂಬುದು ವೇದಗಳ ಕಹಳೆಯ ಮೊಳಗು. ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಪರಾಕ್ರಮಿ ಪೂರ್ವಜರು ನಾಡಿನ ನಾಲ್ಕು ಸೀಮೆಗಳನ್ನು ತಿಳಿಸುವ ಈ ಮಾತು ಹೇಳಿದರು:
"ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಶಿಣಮ್ |
ವರ್ಷಂ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ ||" -ವಿಷ್ಣುಪುರಾಣ
(ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಶಿಣಕ್ಕೆ ಇರುವ ಭೂಮಿ ಭರತ ವರ್ಷ. ಭಾರತೀಯರು ಇದರ ಮಕ್ಕಳು)

        ವಾಯುಪುರಾಣ ಇದೇ ಮಾತಿಗೆ ಮನ್ನಣೆ ಕೊಡುತ್ತಾ
" ಆಯತೋ ಹ್ಯಾಕುಮಾರಿಕ್ಯಾದಾಗಂಗಪ್ರಭಾವಶ್ಚವೈ ||" (ಕನ್ಯಾಕುಮಾರಿಯಿಂದ ಗಂಗೆಯ ಉಗಮ ಸ್ರೋತದವರೆಗೆ ಹಬ್ಬಿದ ಈ ಭೂಮಿ ಭಾರತ) ಎಂದಿದೆ.
" ಹಿಮಾಲಯಾತ್ ಸಮಾರಭ್ಯ ಯಾವದಿಂದುಸರೋವರಂ |
ತಂ ದೇವ ನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ ||"
                                       - ಬಾರ್ಹಸ್ಪತ್ಯಶಾಸ್ತ್ರ
(ಹಿಮಾಲಯದಿಂದ ಇಂದು ಸರೋವರ(ಹಿಂದೂಮಹಾಸಾಗರ)ದವರೆಗೆ ವ್ಯಾಪಿಸಿರುವ ದೇಶವೇ ಹಿಂದೂಸ್ಥಾನವೆಂದು ಪ್ರಸಿದ್ಧವಾಗಿದೆ.)

        
           ವೇದಗಳಲ್ಲೂ ನಾಡನ್ನು ಕುರಿತು ಮಾತೃಭಾವ ವ್ಯಕ್ತವಾಗಿದೆ.ಭೂಮಿಸೂಕ್ತವನ್ನು ಭಾರತದ ರಾಷ್ಟ್ರಗೀತೆ ಎಂದರೂ ತಪ್ಪಾಗಲಾರದು. ಈ ಸೂಕ್ತದಲ್ಲಿ ಬರುವ ೬೩ ಮಂತ್ರಗಳೂ ದೇಶಭಕ್ತಿಯ ಭಾವನೆಯನ್ನೇ ಹೊರಸೂಸುತ್ತವೆ. ರಾಮಾಯಣದಲ್ಲಿ
" ಇಕ್ವಾಕೂಣಾಮಿಯಂ ಭೂಮಿಃ ಸಶೈಲವನಕಾನನಾ |
  ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ || "
( ಪರ್ವತ, ಉದ್ಯಾನ, ಕಾಡುಗಳಿಂದ ತುಂಬಿದ ಈ ಭೂಮಿ ಇಕ್ವಾಕು ವಂಶದವರಿಗೆ ಸೇರಿದ್ದು, ಇದರಲ್ಲಿ ಮೃಗ, ಪಕ್ಷಿ, ಮನುಷ್ಯರಿಗೆ ನಿಗ್ರಹ, ಅನುಗ್ರಹ ನೀಡುವುದೆಲ್ಲವೂ ಅವರ ಪಾಲಿಗೇ ಸೇರಿದ್ದು.)

       "ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ |
       ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ || "
                                -ಕುಮಾರಸಂಭವದಲ್ಲಿ ಕಾಳಿದಾಸ
(ಉತ್ತರ ದಿಕ್ಕಿನಲ್ಲಿ ದೇವತೆಗಳ ಆತ್ಮದಂತಿರುವ ಪರ್ವತ ರಾಜ ಹಿಮಾಲಯವಿದೆ. ಪೂರ್ವ ಪಶ್ಚಿಮಗಳಲ್ಲಿ ಸಮುದ್ರವನ್ನಾಲಂಗಿಸುತ್ತಾ ಭೂಮಿಯ ಮಾನದಂಡದಂತೆ ಅದು ಸ್ಥಿರವಾಗಿ ನಿಂತಿದೆ. )

      "ಹಿಮವತ್ಸಮುದ್ರಾಂತರಮುದೀಚೀನಂ ಯೋಜನಸಹಸ್ರಪರಿಮಾಣಂ - ಆಚಾರ್ಯ ಚಾಣಕ್ಯ
    (ಸಾಗರಗಳ ಉತ್ತರಕ್ಕೆ ಹಿಮಾಲಯದವರೆಗೆ ದೇಶದ ಉದ್ದ ಸಾವಿರ ಯೋಜನಗಳು)


         ಇವುಗಳ ಜೊತೆಯಲ್ಲೇ ಆಸೇತು ಹಿಮಾಚಲ, ಕನ್ಯಾಕುಮಾರಿಯಿಂದ ಕೈಲಾಸ, ಕಾಶಿ ರಾಮೇಶ್ವರ, ಕಛ್ ನಿಂದ ಕಾಮರೂಪ, ಅಟಕ್ ನಿಂದ ಕಟಕ್... ಮುಂತಾದ ನುಡಿಗಟ್ಟುಗಳ ಮೂಲಕ ನಮ್ಮ ಸಮಾಜವು ಭಾರತದ ಉದ್ದ ಅಗಲ, ವ್ಯಾಪ್ತಿಯನ್ನು ಸ್ಪಷ್ಟಪಡಿಸಿದೆ.

      ಅಂದರೆ ವಿಶ್ವದ ಉಳಿದೆಲ್ಲೆಡೆ ಕತ್ತಲು ಕವಿದಿದ್ದಾಗ , "ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಃ ಎಂಬ ಕರೆ ನೀಡಿ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಜಗದ್ಗುರು ಭಾರತ. ಬದುಕಿನ ಜಂಜಡತೆಯ ಕತ್ತಲಿನಿಂದ ಭವಬಂಧನದ ಮೃತ್ಯುವಿನಿಂದ ಪರಮ ಸತ್ಯದ ಸಾಕ್ಷಾತ್ಕಾರದ ಬೆಳಕಿನೆಡೆಗೆ ಅಮೃತತ್ವದೆಡೆಗೆ ಸಾಗಿದ ಅತೀವ ಸುಭಗರ ನಾಡು "ಭಾರತ".


ವಂದೇ ಮಾತರಂ...
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ