ಹಿಂದೂ ಭಯೋತ್ಪಾದನೆ ಎಂಬ ರೋಚಕ ಕಥೆ - ಹಿಂದೂಗಳಿಗೆ ಕಾಂಗ್ರೆಸ್ಸಿನ ಉಡುಗೊರೆ!
2006 ಜುಲೈ 11ರಂದು ಮುಂಬೈ ರೈಲಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. 209 ಜನ ಮೃತಪಟ್ಟಿದ್ದರು. 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದರ ರೂವಾರಿಗಳಿಗೆ ಶಿಕ್ಷೆಯಾಗಲು(2015) ಮೋದಿ ಸರಕಾರವೇ ಬರಬೇಕಾಯಿತು. ಅಂದಿನ ಕಾಂಗ್ರೆಸ್ ರಾಜ್ಯ ಹಾಗೂ ಕೇಂದ್ರ ಸರಕಾರ ಮಾಧ್ಯಮಗಳೆದುರು ಬಡಾಯಿ ಕೊಚ್ಚಿಕೊಂಡವಾದರೂ ಈ ದಾಳಿಯಲ್ಲಿ ಮೃತಪಟ್ಟವರಿಗೆ, ಗಾಯಗೊಂಡವರಿಗೆ ಸರಿಯಾಗಿ ಪರಿಹಾರವನ್ನೇ ಕೊಡಲಿಲ್ಲ. ಈ ಮಾಹಿತಿಯನ್ನು ಅಡ್ವಾಣಿಯವರೇ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರಿನಲ್ಲಿ ಮಾಲೆಗಾಂವ್ ನಲ್ಲಿ ಸರಣಿ ಬಾಂಬು ಸ್ಫೋಟಗಳಾಗಿ 37 ಜನ ಮೃತಪಟ್ಟರು. ಇದಾದದ್ದು ಮಸೀದಿಯೊಂದರ ಬಳಿ. ಹಿಂದಿನ ಬಾಂಬ್ ಸ್ಫೋಟದ ರೂವಾರಿಗಳೂ ತಾವೇ ಎಂದು ಮುಸ್ಲಿಂ ಭಯೋತ್ಪಾದಕ ಸಂಘಟನೆಗಳು ಬಹಿರಂಗವಾಗಿ ಘೋಷಿಸಿದ್ದಾಗ್ಯೂ ಅವರನ್ನು ಬಂಧಿಸಲು ವಿಫಲವಾಗಿದ್ದ ಸರಕಾರ ಮತ್ತೆ ಸ್ಫೋಟವಾದಾಗ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ವ್ಯವಸ್ಥಿತ ಜಾಲವೊಂದನ್ನು ಹೆಣೆಯಿತು. ಆಧಾರವಿಲ್ಲದೆ ಬಜರಂಗದಳದ ಹಾಗೂ ಅಭಿನವ ಭಾರತದ ಕಾರ್ಯಕರ್ತರನ್ನು ಬಂಧಿಸಿದ ಸರಕಾರ ಹಿಂದೂ ಭಯೋತ್ಪಾದನೆಯೆಂಬ ಹಸಿ ಸುಳ್ಳನ್ನು ಸತ್ಯವಾಗಿಸುವ ಬೀಜ ಬಿತ್ತಿತು. ಮಸೀದಿಯ ಬಳಿ ಸ್ಫೋಟವಾದ ಕಾರಣ ಈ ಬೀಜ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಲು ನೆರವಾಯಿತು.ಸಂಝೋತಾ ಎಕ್ಸ್ಪ್ರೆಸ್. ವಾರಕ್ಕೆರಡು ಬಾರಿ ದೆಹಲಿ ಹಾಗೂ ಲಾಹೋರನ್ನು ಬೆಸೆಯುತ್ತಿದ್ದ ರೈಲು. 2007ರ ಫೆಬ್ರವರಿ 18ರ ಮಧ್ಯರಾತ್ರಿ ಪಾಣಿಪತ್ ನ ದಿವಾನ ಬಳಿ ರೈಲಿನ ಸಾಮಾನ್ಯ ಬೋಗಿಗಳಲ್ಲಿ ಸೂಟ್ಕೇಸುಗಳಲ್ಲಿಟ್ಟಿದ್ದ ಬಾಂಬುಗಳು ಸಿಡಿದು 68 ಜನ ಪ್ರಾಣ ಕಳೆದುಕೊಂಡರು. ಸತ್ತವರಲ್ಲಿ ಹೆಚ್ಚಿನವರು ಪಾಕಿಸ್ತಾನೀಯರು. ಸೂಟ್ಕೇಸನ್ನಿಟ್ಟಿದ್ದ ವ್ಯಕ್ತಿಯೂ ಸಿಕ್ಕಿಬಿದ್ದ. ಆತ ಪಾಕಿಸ್ತಾನೀಯಾಗಿದ್ದು ಸೂಕ್ತ ಪಾಸ್ ಪೋರ್ಟ್ ಇಲ್ಲದೆ ಭಾರತಕ್ಕೆ ಬಂದಿದ್ದ. ಆತ ಕುಡಿದಿದ್ದಾನೆ ಎಂಬ ಹೇಳಿಕೆ ಕೊಟ್ಟು ಆತನನ್ನು ಬಿಟ್ಟು ಬಿಡಲಾಯಿತು! ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿ ಜನತೆಯ ಗಮನವನ್ನು ಬೇರೆಡೆಗೆ ತಿರುಗಿಸಲು ಹಾಗೂ ಭಯೋತ್ಪಾದನೆಯೆಂಬುದು ಕೇವಲ ಮುಸ್ಲಿಮರು ಮಾತ್ರ ಮಾಡುವುದಲ್ಲ ಎಂಬುದನ್ನು ಸಾಧಿಸಿ, ಈ ಘಟನೆಯನ್ನು ಬಲಪಂಥೀಯ ಸಂಘಟನೆಗಳ ತಲೆಗೆ ಕಟ್ಟಿ ಆ ಮೂಲಕ ತನ್ನ ರಾಜಕೀಯ ಎದುರಾಳಿಗಳನ್ನು ಹಣಿಯಲು ಕಾಂಗ್ರೆಸ್ ಮುಂದಾಯ್ತು! ಹಾಗೆ ಹುಟ್ಟಿಕೊಂಡಿದ್ದೇ "ಹಿಂದೂ ಭಯೋತ್ಪಾದನೆ" ಎಂಬ ಸಾವಿರದ ಸುಳ್ಳು! ಆರ್ಯ ಆಕ್ರಮಣ ವಾದದಂತೆಯೇ ಸಾವಿರ ಸಲ ಹೇಳುತ್ತಾ ಸತ್ಯವಾಗಿಸುವ ಸುಳ್ಳು ಇದು!
ಆದರೆ ಕಾಂಗ್ರೆಸ್ಸಿಗೆ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸುವ ಯಾವುದೇ ಸಾಕ್ಷಿಯೂ ಸಿಗಲಿಲ್ಲ. ಇದ್ದರೆ ತಾನೇ ಸಿಗೋದು! ಸಾಕ್ಷಿಯನ್ನು ಸೃಷ್ಟಿಸುವುದರಲ್ಲಿ ಕಾಂಗ್ರೆಸ್ಸನ್ನು ಮೀರಿಸಿದವರೂ ಇಲ್ಲ. ಅದು ಸೇನೆಯಿಂದಲೇ ಗೂಢಚಾರಿಕೆಗಾಗಿ ನಿಯಮಿಸಲ್ಪಟ್ಟಿದ್ದ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತರನ್ನು ಅಭಿನವ ಭಾರತದ ಸದಸ್ಯರೆಂಬ ಕಾರಣಕ್ಕೆ ಬಂಧಿಸಿ ಅವರೇ ಸಂಝೋತಾ ಎಕ್ಸ್ಪ್ರೆಸ್ ದಾಳಿಯ ರೂವಾರಿ ಎಂದು ಬಿಂಬಿಸಿ ಬಂಧಿಸಿ ಮನ ಬಂದಂತೆ ಶಿಕ್ಷಿಸಿತು. ಸೇನೆಯೇ ಸ್ವತಃ ಗೃಹ ಸಚಿವರಿಗೆ ಪತ್ರ ಬರೆದು ತಾವೇ ಪುರೋಹಿತರನ್ನು ಕೆಲವು ಗೌಪ್ಯ ಮಾಹಿತಿಯನ್ನು ಗಳಿಸಲು ಗೂಢಚಾರಿಕೆಗೆ ನಿಯಮಿಸಿದ್ದು ಎಂದು ಪತ್ರ ಬರೆದರೂ ಕಾಂಗ್ರೆಸ್ ಅವರನ್ನು ನಿರ್ದಯವಾಗಿ ಕತ್ತಲಕೂಪಕ್ಕೆ ತಳ್ಳಿತು. ಅಮೇರಿಕಾದ ಗೂಢಚರ್ಯೆ ವಿಭಾಗ, ಲಷ್ಕರ್-ಇ-ತೊಯಬಾ ಹಾಗೂ ಜೈಷ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳೇ ಈ ದಾಳಿಯ ಸೂತ್ರದಾರರು ಎಂದರೂ ಕಾಂಗ್ರೆಸ್ ಕಿವಿಗೆ ಹಾಕಿಕೊಳ್ಳಲಿಲ್ಲ. ಅಮೆರಿಕಾ ಈ ದಾಳಿಯ ರೂವಾರಿ ಆರೀಪ್ ಕಸ್ಮಾನಿಗೆ ನಿರ್ಬಂಧ ಹೇರಿದಾಗಲೂ(2009) ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳದೆ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸುವ ಕೆಲಸದಲ್ಲಿ ಸಕ್ರಿಯವಾಗಿತ್ತು. ಆದರೆ ಹಿಂದೂಗಳನ್ನು ಭಯೋತ್ಪಾದಕರೆಂದು ಕರೆಯುವ ಸರಕಾರದ ಈ ಪ್ರಯತ್ನ ಜಾಗತಿಕ ಮಟ್ಟದಲ್ಲಿ ಭಾರತದ ಮೇಲಿನ ಗೌರವವನ್ನು ಕಡಿಮೆಗೊಳಿಸಿತ್ತು.
ಇತ್ತ ಕರ್ನಲ್ ಪುರೋಹಿತರನ್ನೂ ಮನಸೋ ಇಚ್ಛೆ ತಳಿಸಲಾಯಿತು. ಕತ್ತಲಕೋಣೆಯಲ್ಲಿ ಕೂಡಿಹಾಕಲಾಯಿತು. ಮುಂಬೈ ಭಯೋತ್ಪಾದಕ ನಿಗ್ರಹ ದಳ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ಹೆಸರನ್ನು ಸುಖಾ ಸುಮ್ಮನೆ ಬಳಸಿ ಹೇಳಿಕೆ ಕೊಡುವಂತೆ ಹಿಂಸಿಸಿತು. ಅವರು 24 ದಿನಗಳ ಕಾಲ ಆಹಾರವಿಲ್ಲದೆಯೇ ಜೀವ ಹಿಡಿದುಕೊಂಡಿರಬೇಕಾಯಿತು. ಪ್ರತಿದಿನದ ಹೊಡೆತದಿಂದ ದೇಹ ಜರ್ಝರಿತವಾಗಿ ಬಹಳಷ್ಟು ಭಾಗಗಳಲ್ಲಿ ಊದಿಕೊಂಡಿತು. ಸೇನೆ ಗೃಹಸಚಿವರಿಗೆ ಪತ್ರ ಬರೆದು ಪುರೋಹಿತರದ್ದು ತಪ್ಪಿಲ್ಲ ಎಂದು ಅಲವತ್ತುಕೊಂಡರೂ ಪ್ರಯೋಜನವಾಗಲಿಲ್ಲ. ತಾವೇ ಇಂತಹಾ ಕೆಲಸ ಮಾಡು ಎಂದು ನೇಮಿಸಿದ್ದ ತಮ್ಮ ಸಹೋದ್ಯೋಗಿಯೊಬ್ಬನನ್ನು ಬಂಧಿಸಿ "ಉಗ್ರ" ಎಂದು ಹಣೆಪಟ್ಟಿ ಕೊಟ್ಟಾಗ ಸೈನ್ಯಕ್ಕೆಂತಹಾ ಆಘಾತವಾಗಿರಲಿಕ್ಕಿಲ್ಲ? ಐವತ್ತೊಂಬತ್ತಕ್ಕೂ ಹೆಚ್ಚು ಸಾಕ್ಷಿಗಳು ಕ. ಶ್ರೀಕಾಂತ್ ಪುರೋಹಿತ್ ಪರವಾಗಿ ಸಾಕ್ಷಿ ನುಡಿದದ್ದು ಕಾಂಗ್ರೆಸ್ಸಿನ ಹಿಂದೂ ಭಯೋತ್ಪಾದನೆಯ ಸುಳ್ಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ತಣ್ಣೀರೆರಚಿತ್ತು. ಮತ್ತಷ್ಟು ಸುಳ್ಳನ್ನು ಹರಿಯಬಿಟ್ಟು, ಗುಜರಾತಿನಲ್ಲಿ ಕ್ರೈಸ್ತರಾಗಿ ಮತಾಂತರರಾದ ಬುಡಕಟ್ಟು ಜನಾಂಗಗಳನ್ನು ಘರ್ ವಾಪಸಿ ಮಾಡಿಸುತ್ತಿದ್ದ, ಮತಾಂತರಿಗಳಿಗೆ ಸಿಂಹಸ್ವಪ್ನರಾಗಿದ್ದ ಸ್ವಾಮಿ ಅಸೀಮಾನಂದರನ್ನು ಇದೇ ಪ್ರಕರಣದ ನೆಪ ಹೊರಿಸಿ ಬಂಧಿಸಿ ತನ್ನ ಆರೋಪ ಸರಿಯಾಗಿದೆ ಎನ್ನುವುದನ್ನು ಬಿಂಬಿಸಲು ಮನಮೋಹನ ಸರಕಾರ ಪ್ರಯತ್ನಿಸಿತು. ಅಸಲಿಗೆ ಅದು ಒಂದೇ ಏಟಿಗೆ ಎರಡು ಲಾಭ ಪಡೆಯಲು ಯತ್ನಿಸಿತ್ತು. ಒಂದು ಹಿಂದೂ ಭಯೋತ್ಪಾದನೆಯ ಕಥೆಯನ್ನು ಮತ್ತಷ್ಟು ಮುಂದುವರಿಸುವುದು, ಇನ್ನೊಂದು ಮತಾಂತರಕ್ಕೆ ಅಡ್ಡಿಯಾಗಿದ್ದ ಅಸೀಮಾನಂದರನ್ನು ಬಂಧಿಸಿ ತಮ್ಮ ಅಧಿನಾಯಕಿಯನ್ನು ತೃಪ್ತಿಪಡಿಸುವುದು. ಕರ್ನಲ್ ಪುರೋಹಿತರಿಗೆ ಮಾರ್ಗದರ್ಶನ ಮಾಡಿದ್ದು ಅಸೀಮಾನಂದರೇ ಎನ್ನುವ ಮೂಲಕ ಮುಸ್ಲಿಮರಲ್ಲಿರುವಂತೆ ಹಿಂದೂಗಳಲ್ಲೂ ಧಾರ್ಮಿಕ ನೇತಾರರೇ ಭಯೋತ್ಪಾದನೆಗೆ ಪ್ರೇರಣೆಯಾಗುತ್ತಾರೆ ಎಂದು ಬಿಂಬಿಸಲು ಕಾಂಗ್ರೆಸ್ ಹೊರಟಿತ್ತು. ಈ ನಡುವೆ ಸಂಘದ ಪ್ರಚಾರಕರಾಗಿದ್ದ ಇಂದ್ರೇಶ್ ಕುಮಾರರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಕಾಂಗ್ರೆಸ್ ಅನುವಾಯಿತು. ಆದರೆ ದೇಶದಾದ್ಯಂತ ಇದರ ವಿರುದ್ಧ ನಡೆದ ಪ್ರತಿಭಟನೆಯಿಂದ ಬೆಚ್ಚಿದ ಕಾಂಗ್ರೆಸ್ ಈ ಯೋಜನೆಯನ್ನು ಕೈಬಿಟ್ಟಿತು.
ಅಷ್ಟರಲ್ಲಿ ಕಾಂಗ್ರೆಸ್ಸಿಗೆ ಸಹಾಯಕವಾಗುವ ಘಟನೆಯೊಂದು ನಡೆಯಿತು. 2008ರ ಸೆಪ್ಟೆಂಬರಿನಲ್ಲಿ ಗುಜರಾತ್, ಮಹಾರಾಷ್ಟ್ರಗಳಲ್ಲಿ ಬಾಂಬು ಸ್ಫೋಟಗಳು ನಡೆದವು. ಅವುಗಳಲ್ಲಿ ಮಾಲೆಗಾಂವ್ನಲ್ಲಿ ಸೆಪ್ಟೆಂಬರ್ 21ರಂದು ಹೀರೋಹೋಂಡಾ ಬೈಕಿನಲ್ಲಿಡಲಾದ ಬಾಂಬು ಸ್ಫೋಟ ಕೂಡಾ ಒಂದು. ಬೈಕಿನ ಹಿಂದಿನ ಮಾಹಿತಿ ಕೆದಕುತ್ತಾ ಹೋದಂತೆ ಅದು ಹಿಂದೊಮ್ಮೆ ಸಾಧ್ವಿ ಪ್ರಜ್ಞಾ ಸಿಂಗ್ ಬಳಿಯಿತ್ತು, ಆಕೆ ಅಭಾವಿಪ ಜವಾಬ್ದಾರಿ ಹೊತ್ತಿದ್ದಾಗ ಅದರಲ್ಲೇ ಸಂಚರಿಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಆದರೆ ಆಕೆ ಎರಡು ವರ್ಷಗಳ ಹಿಂದೆಯೇ ಆ ಬೈಕನ್ನು ಮಾರಾಟ ಮಾಡಿದ್ದರು ಎನ್ನುವ ಮಾಹಿತಿ ಲೆಕ್ಖಕ್ಕೇ ಬರಲಿಲ್ಲ! ಸಾಧ್ವಿಯ ಜೊತೆಗೆ ಇನ್ನೂ ಕೆಲವರನ್ನು ಬಂಧಿಸಿ ಯಮಯಾತನೆ ನೀಡಲಾಯಿತು. ಆ ವೇಳೆಗೆ ಹಿಂದುತ್ವದ ಅಗ್ನಿ ಜ್ವಾಲೆಯಾಗಿ ಧಗಧಗಿಸುತ್ತಿದ್ದ ಯೋಗಿ ಆದಿತ್ಯನಾಥರನ್ನೂ ತಮ್ಮ ಜಾಲದೊಳಗೆ ಬೀಳಿಸಿ ಪ್ರಕರಣವನ್ನು ಗಟ್ಟಿಗೊಳಿಸುವ ಹುನ್ನಾರ ನಡೆಯಿತಾದರೂ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಬದಲಾಗಿ ಕ. ಶ್ರೀಕಾಂತ್ ಪುರೋಹಿತರೊಡನೆ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ಕಾಶಿಯ ಸರ್ವಜ್ಞ ಪೀಠದ ಸ್ವಾಮಿ ದಯಾನಂದ ಪಾಂಡೆಯವರನ್ನು ಬಂಧಿಸಿತು ಕಾಂಗ್ರೆಸ್. ಸಾಧ್ವಿಯವರೊಡನೆ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಸುನಿಲ್ ಜೋಷಿ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವನ್ನು ತಂದಿತು. ಇದನ್ನೂ ಬಂಧನದಲ್ಲಿದ್ದ ಸಾಧ್ವಿಯ ತಲೆಗೆ ಕಟ್ಟುವ ಹುನ್ನಾರ ನಡೆಸಲಾಯಿತು.
ಕಾಂಗ್ರೆಸ್ಸಿನ ಕೇಸರಿ ಭಯೋತ್ಪಾದನೆ ಎಂಬ ಸುಳ್ಳಿನ ಬಲಿಪಶು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಂಘ ಪ್ರಚಾರಕರಾಗಿದ್ದ ಆಯುರ್ವೇದ ವೈದ್ಯರ ಮಗಳು ಆಕೆ. ಮೂವರು ಸಹೋದರಿಯರು, ಓರ್ವ ಸಹೋದರರನ್ನು ಹೊಂದಿದ್ದ ಸಾಧ್ವಿ ಪ್ರಜ್ಞಾ ಎರಡನೆಯಯವಳು. ಹಿಂದುತ್ತ್ವ, ದೇಶಪ್ರೇಮ ರಕ್ತಗತವಾಗಿ ಬಂದಿತ್ತು. ಅಭಾವಿಪ ಹಾಗೂ ದುರ್ಗಾವಾಹಿನಿಯ ಸದಸ್ಯೆಯಾಗಿದ್ದು ತನ್ನ ಪ್ರಖರ ಮಾತು, ಚಿಂತನೆಯಿಂದ ಅಸಂಖ್ಯಾತ ಹಿಂಬಾಲಕರನ್ನು ಹೊಂದಿದ್ದಾಕೆ. ತಲೆಗೂದಲನ್ನು ಕತ್ತರಿಸಿ, ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿ ಗಂಡುಬೀರಿಯಂತೆ ತನ್ನ ಸಹೋದರಿಯೊಂದಿಗೆ ಬೈಕಿನಲ್ಲಿ ಓಡಾಡುತ್ತಿದ್ದ ಆಕೆ ಹುಡುಗಿಯರನ್ನು ಚುಡಾಯಿಸುತ್ತಿದ್ದವರಿಗೆ ಸಿಂಹಸ್ವಪ್ನವಾಗಿದ್ದರು. ಒಮ್ಮೆ ಈ ಸಹೋದರಿಯರು ಕೆಲವು ಗೂಂಡಾಗಳಿಗೆ ಕ್ಷಮೆ ಕೇಳುವ ತನಕ ಬಡಿದಿದ್ದರು. 2002ರಲ್ಲಿ ವಂದೇಮಾತರಂ ಜನ ಕಲ್ಯಾಣ್ ಸಮಿತಿಯನ್ನು ಸ್ಥಾಪಿಸಿದ ಈಕೆ ಲವ್ ಜಿಹಾದಿಗೊಳಗಾಗುವ ಹುಡುಗಿಯರ ರಕ್ಷಣೆಯ ಕಾರ್ಯಕ್ಕೆ ಆರಂಭಿಸಿದರು. ಗೋವು ಮತ್ತು ಧರ್ಮ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸಿದ ಸಾಧ್ವಿ ಪ್ರಜ್ಞಾ ಸಿಂಗ್, ಸ್ವಾಮಿ ಅವಧೇಶಾನಂದ ಗಿರಿಯವರಿಂದ ಸಂನ್ಯಾಸ ಸ್ವೀಕರಿಸಿ ಸಾಧ್ವಿ ಪೂರ್ಣ ಚೇತಾನಂದ ಗಿರಿ ಶರ್ಮಾ ಎಂದೆನಿಸಿಕೊಂಡರು. ಅಷ್ಟರಲ್ಲಿ ಮಾಲೇಗಾಂವ್ ಸ್ಫೋಟದಲ್ಲಿ ಬಳಕೆಯಾಗಿದ್ದ ಬೈಕ್ ಅನ್ನು ಸಾಧ್ವಿ ಹಿಂದೆ ಬಳಕೆ ಮಾಡಿದ್ದರು ಎಂಬ ಅಂಶ "ಹಿಂದೂ ಭಯೋತ್ಪಾದನೆ"ಯನ್ನು ಸೃಷ್ಟಿಸಲು ಹೊರಟವರಿಗೆ ತಿಳಿಯಿತು. ಬೈಕ್ ಬಗ್ಗೆ ಮಾಹಿತಿ ನೀಡಲು ಬರಬೇಕೆಂದು ನೋಟಿಸ್ ಬಂದಾಗ ಸೂರತ್ಗೆ ತೆರಳಿದ ಸಾಧ್ವಿಗೆ ಸಿಕ್ಕಿದ್ದು ಬಂಧನದ ಉಡುಗೊರೆ! ಕೇಸರಿ ಭಯೋತ್ಪಾದನೆಯ ಕಥೆ ಸೃಷ್ಟಿ ಮಾಡಲು ಹೊರಟಿದ್ದ ಚಿದಂಬರಂ ಸಾಧ್ವಿ ಪ್ರಜ್ಞಾರಂತಹ ಪ್ರಖರ ನಾಯಕಿ ಬಲಿಗೆ ಸಿಕ್ಕಾಗ ಅಂತಹಾ ಸದವಕಾಶವನ್ನು ಅತ ಯಾಕೆ ಬಿಟ್ಟುಬಿಡಬಲ್ಲ?
ಸಾಧ್ವಿಯನ್ನು ಮುಂಬೈನ ಎಟಿಎಸ್ ಕಚೇರಿಗೆ ಕರೆತಂದು ಅಲ್ಲಿ 13 ದಿನಗಳ ಕಾಲ ಕಾನೂನುಬಾಹಿರವಾಗಿ ಬಂಧಿಸಿಡಲಾಯಿತು. ಭಯೋತ್ಪಾದನಾ ನಿಗ್ರಹ ದಳ ಆಕೆಯೊಂದಿಗೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿತು. ಅವಾಚ್ಯ ಶಬ್ಧಗಳಿಂದ ಬೈಯುತ್ತಾ ಆಕೆ ಮಹಿಳೆ ಎಂದೂ ನೋಡದೆ ನೆಲದ ಮೇಲೆ ಕೆಡವಿ ಬೆಲ್ಟ್ ಗಳಿಂದ ಬಾರಿಸಿದರು. ಎಲೆಕ್ಟ್ರಿಕ್ ಶಾಕ್ಗಳನ್ನು ಕೊಟ್ಟು ಬೆದರಿಸಿ ಆಕೆಯಿಂದ ತಾನೇ ಅಪರಾಧಿ ಎಂದು ಹೇಳಿಸಲು ಪ್ರಯತ್ನಿಸಿದರು. ಒಮ್ಮೆಯಂತೂ 24 ದಿನಗಳ ಕಾಲ ಒಂದು ತುತ್ತು ಅನ್ನವನ್ನೂ ಕೊಡದೇ ಸತಾಯಿಸಲಾಯ್ತು. ಆ ಸನ್ಯಾಸಿನಿಯ ಸಾತ್ವಿಕತೆಯನ್ನು ನಾಶಪಡಿಸಲು ಜೈಲಿನಲ್ಲಿ ಆಹಾರದಲ್ಲಿ ಮೊಟ್ಟೆ ಬೆರೆಸಿ ಕೊಡಲಾಯಿತು. ತುಚ್ಛ ಪದಗಳಲ್ಲಿ ನಿಂದಿಸುವುದಲ್ಲದೇ ಆಕೆಯನ್ನು ಸುತ್ತುವರಿದಿದ್ದ ಪುರುಷ ಪೊಲೀಸರು ಲೈಂಗಿಕವಾದ ಕೀಳು ಪದಗಳ ಬಳಕೆಯಿಂದ ಆಕೆಯನ್ನು ಮಾನಸಿಕವಾಗಿ ಕೊಲ್ಲಲು ಪ್ರಯತ್ನಿಸಿದ್ದರು. ಅಶ್ಲೀಲ ಸಿಡಿಯೊಂದನ್ನು ಆಲಿಸುವಂತೆ ಬಲವಂತಪಡಿಸಿದರು. ಮಾಲೆಗಾಂವ್ ಸ್ಪೋಟಕ್ಕೆ ಸಂಬಂಧಿಸಿ ತಪ್ಪೊಪ್ಪಿಗೆ ಪಡೆಯುವ ಹುನ್ನಾರ ಪೊಲೀಸರ ಈ ಹಿಂಸಾಚಾರದ ಹಿಂದೆ ಇತ್ತು. ದುರಂತವೆಂದರೆ ಆಕೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟರ ಮುಂದೆಯೂ ತರದೇ ಆರೋಪಪಟ್ಟಿ ಕೂಡಾ ತಯಾರಿಸದೆ ಕಾನೂನು ಬಾಹಿರವಾಗಿಯೇ ಕೂಡಿಹಾಕಿಕೊಂಡಿತ್ತು ವ್ಯವಸ್ಥೆ. ಪೊಲೀಸರ ನಿರಂತರ ಹಿಂಸಾಚಾರಕ್ಕೆ ಸಾಧ್ವಿ ಮಾತ್ರ ಬಗ್ಗಲಿಲ್ಲ. ಆಕೆಯ ಅಂಗಾಂಗ ಹಾಗೂ ಹೊಟ್ಟೆಗೆ ತೀವ್ರ ಗಾಸಿಯಾಗಿ, ಪ್ರಜ್ಞಾಹೀನಳಾಗಿ ಉಸಿರಾಡುವುದಕ್ಕೂ ಕಷ್ಟವಾದಾಗ ಮುಂಬೈನ ಸುಶ್ರೂಷಾ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆಕೆಯ ಮಿದುಳಿಗೆ ಹಾನಿಯಾಗಿರುವ ಮಾಹಿತಿ ಆಸ್ಪತ್ರೆಯ ಆ ವರದಿಯಲ್ಲಿದೆ. ಆ ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಸಾಧ್ವಿಯನ್ನು ವೆಂಟಿಲೇಟರ್ನಲ್ಲಿಡಲಾಗಿತ್ತು. ಅದಾದ ಮೇಲೆ ಪಾಲಿಗ್ರಾಫ್, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳ ಕಾಟ ಬೇರೆ. ಮಂಪರು ಪರೀಕ್ಷೆಗಳು, ಬ್ರೈನ್ ಮ್ಯಾಪಿಂಗ್ಗಳು ಆಕೆಯೆದುರು ಸೋತು ಮಕಾಡೆ ಮಲಗಿಬಿಟ್ಟವು. ಪೊಲೀಸರು ತಮಗೆ ಬೇಕಾದ್ದನ್ನು ಆಕೆಯಿಂದ ಹೇಳಿಸಲೆಂದೇ ಇಷ್ಟೆಲ್ಲಾ ಕಿರುಕುಳ ಕೊಟ್ಟ ನಂತರವೂ ಆಕೆ ಅವರ ಒಂದು ಹೇಳಿಕೆಯನ್ನೂ ಪುನರುಚ್ಚರಿಸಲಿಲ್ಲ. ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಹತ್ತು ವರ್ಷಗಳ ನಂತರ ಆಕೆಯ ವಿರುದ್ಧ ಒಂದೇ ಒಂದು ಸಾಕ್ಷಿಯನ್ನು ಸಂಗ್ರಹಿಸಲಾಗದೆ ಕೈಚೆಲ್ಲಿ ಆಕೆಗೆ ಜಾಮೀನು ನೀಡಬಹುದೆಂದಿತು!
ಗುಜರಾತ್ ಚುನಾವಣೆಯಲ್ಲಿ ಸೂರತ್ನಲ್ಲಿ ಭಾಜಪಾ ಪರವಾಗಿ ತಾನು ಮಾಡಿದ್ದ ಭಾಷಣ ತನ್ನನ್ನಿಂತಹಾ ನರಕಯಾತನೆಗೆ ತಳ್ಳಿಬಿಡಬಹುದೆಂದು ಸಾಧ್ವಿ ಕನಸುಮನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಆಕೆಯನ್ನು ಹಗಲು ರಾತ್ರಿಯೆನ್ನದೆ ಮೂರ್ನಾಲ್ಕು ಪೊಲೀಸರು ಥಳಿಸುತ್ತಿದ್ದರು. ಈ ದೌರ್ಜನ್ಯವೆಲ್ಲವನ್ನೂ ಪ್ರತಿಭಟಿಸಿ ಆಕೆ ಉಪವಾಸ ಕೂತು ಅನಾರೋಗ್ಯದಿಂದ ಬಳಲಿದಾಗ ಪೊಲೀಸರು ಆಕೆಯ ಮೇಲೆ ಆತ್ಮಹತ್ಯೆಯ ಆರೋಪ ಹೊರಿಸಿದರು. ಬಂಧನಕ್ಕೆ ಮುನ್ನ ಉತ್ಸಾಹದ ಬುಗ್ಗೆಯಂತಿದ್ದ, ಆರೋಗ್ಯವಂತ ಸಾಧ್ವಿ ಪ್ರಜ್ಞಾಸಿಂಗ್ ಅಪಾರ ಹಿಂಸೆಯ ಪರಿಣಾಮ ಗಾಲಿ ಕುರ್ಚಿಯಲ್ಲೇ ಓಡಾಡುವಂತಾಯಿತು. ನ್ಯಾಯಾಲಯ ಆಕೆಗೆ ಚಿಕಿತ್ಸೆ ನೀಡಬೇಕೆಂದು ಆದೇಶಿಸಿದ್ದರೂ ಎಟಿಎಸ್ ಸೂಕ್ತ ಚಿಕಿತ್ಸೆ ಕೊಡಿಸಲಿಲ್ಲ. ಬಂಧನಗೊಂಡ ಒಂದೂವರೆ ವರ್ಷದೊಳಗೆ ಸ್ತನ ಕ್ಯಾನ್ಸರ್ಗೆ ಅವರು ತುತ್ತಾದರು. ಮನೆಯವರು ಅಕ್ರೋಶಭರಿತರಾಗಿ ಪತ್ರಿಕಾಗೋಷ್ಠಿ ನಡೆಸಿ ಸರಕಾರ ಹಾಗೂ ಪೊಲೀಸರ ದೌರ್ಜನ್ಯವನ್ನು ಖಂಡಿಸಿದರೂ ಯಾರೊಬ್ಬರೂ ಸೊಲ್ಲೆತ್ತಲಿಲ್ಲ. ಜುಲೈ 2009ರಲ್ಲಿ ತನ್ನ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಸಾಧ್ವಿ ಪ್ರಜ್ಞಾ ಪತ್ರ ಬರೆದಿದ್ದರು. ಆದರೆ, ಇವರ ಆಕ್ರಂದನಕ್ಕೆ ಸ್ಪಂದಿಸದ, ಕಾಂಗ್ರೆಸ್ ನೀಡಿದ ಭಿಕ್ಷೆ ಪಡೆವ ವಾಹಿನಿಗಳು ವಸ್ತುನಿಷ್ಠ ವರದಿ ಪ್ರಕಟಿಸಲೂ ಅಸಡ್ಡೆ ತೋರಿಸಿದ್ದವು. ರಾಷ್ಟ್ರ ದ್ರೋಹದ ಆರೋಪ ಹೊತ್ತಿರುವ ಕನ್ಹಯ್ಯ, ಖಾಲಿದರ ಪರ ನಿಂತ ಮಾಧ್ಯಮಗಳಿಗೆ ಅಮಾಯಕ ಸಾಧ್ವಿಯವರ ಪರ ನಿಲ್ಲಲು ಕಾಂಗ್ರೆಸ್ಸಿನ ಭಿಕ್ಷೆ, ಸೆಕ್ಯುಲರುತನ ಅಡ್ಡ ಬಂದಿತ್ತು. ಭಯೋತ್ಪಾದಕನೊಬ್ಬನನ್ನು ಗಲ್ಲಿಗೇರಿಸಿದಾಗ, ನಕ್ಸಲ್ನನ್ನು ಪೊಲೀಸರು ಗುಂಡಿಕ್ಕಿ ಕೊಂದಾಗ, ದನ ಕಳ್ಳನೊಬ್ಬನನ್ನು ಪ್ರಾಮಾಣಿಕ ಪೇದೆಯೊಬ್ಬ ಎನ್ಕೌಂಟರ್ ಮಾಡಿದಾಗ ದೇಶವೇ ಮುಳುಗಿಹೋಯಿತೆಂಬಂತೆ ಅಬ್ಬರಿಸಿ ಬೊಬ್ಬಿರಿದ ಬುದ್ಧಿಜೀವಿಗಳು ಪ್ರಜ್ಞಾ ಸಿಂಗ್ ಮೇಲಿನ ಹಲ್ಲೆ ವಿಚಾರದಲ್ಲಿ ಮಾತ್ರ ಮುಗುಮ್ಮಾಗುಳಿದಿದ್ದರು! ಭಯೋತ್ಪಾದಕನ ಬಿಡುಗಡೆಗಾಗಿ ರಾತ್ರೋರಾತ್ರಿ ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಿದವರೆಲ್ಲಾ ನಿರಪರಾಧಿ ಸಾಧ್ವಿಯ ವಿಷಯದಲ್ಲಿ ಸೊಲ್ಲೆತ್ತಲಿಲ್ಲ. ಹೆಚ್ಚೇಕೆ ಭಯೋತ್ಪಾದಕರಿಗಾಗಿ ರಾತ್ರೋರಾತ್ರಿ ನ್ಯಾಯಾಲಯದ ಕದ ತೆರೆದಿದ್ದ ನ್ಯಾಯಾಧೀಶರೂ ಕನಿಷ್ಟ ಸಾಧ್ವಿಯ ಮೇಲೆ ಇಷ್ಟರವರೆಗೂ ಚಾರ್ಜ್ ಶೀಟ್ ಏಕೆ ಸಲ್ಲಿಸಲಿಲ್ಲವೆಂದು ಕೇಳಲಿಲ್ಲ!
ಸಾಧ್ವಿ ಪ್ರಜ್ಞಾಸಿಂಗ್ ತಂದೆ ಚಂದ್ರಪಾಲ್ ಸಿಂಗ್ ಮೃತ್ಯುವಶವಾದಾಗ, ತಂದೆಯ ಅಂತಿಮ ಕ್ರಿಯೆಗಳನ್ನು ಪೂರೈಸಲು ತಾತ್ಕಾಲಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಕೋರಿ ಆಕೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಧೀಶರು ಮಾನ್ಯತೆಯನ್ನೇ ನೀಡಲಿಲ್ಲ. ಶಸ್ತ್ರಾಸ್ತ್ರವಿಟ್ಟುಕೊಂಡು ಭಯೋತ್ಪಾದಕರಿಗೆ ಸಹಾಯ ಮಾಡಿದ್ದ ಸಂಜಯ್ ದತ್ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದರೂ ಆತನಿಗೆ ತನ್ನ ಪತ್ನಿ ಮಾನ್ಯತಾಳ ಅನಾರೋಗ್ಯ ಕಾರಣಕ್ಕಾಗಿ ಆಕೆಯನ್ನು ನೋಡಿ ಬರಲು ಪೆರೋಲ್ ಒದಗಿಸಿತ್ತು ಘನ ನ್ಯಾಯಾಲಯ! ವಿಚಿತ್ರವೆಂದರೆ ಸಂಜಯ್ ದತ್ ಪೆರೋಲ್ಗೆ ಅರ್ಜಿ ಹಾಕಿದ್ದ ಸಮಯದಲ್ಲೇ ಮಾನ್ಯತಾ ಮುಂಬೈನ ಹೊಟೇಲ್ಗಳಲ್ಲಿ ನಡೆದ ಪಾರ್ಟಿಗಳಲ್ಲಿ ಡಾನ್ಸ್ ನಲ್ಲಿ ನಿರತಳಾಗಿದ್ದಳು! ಲಾಲೂನಂತಹ ರಾಜಕಾರಣಿಗಳಿಗೂ ಪೆರೋಲ್ ಮೇಲೆ ಬಿಡುಗಡೆ ಭಾಗ್ಯ ಒದಗಿತ್ತು. ಭ್ರಷ್ಟಾಚಾರಿ ಚಿದಂಬರಂಗೆ ಹದಿನೆಂಟು ಬಾರಿ ಜಾಮೀನು ಸಿಕ್ಕಿತ್ತು! ಅನಾರೋಗ್ಯದಿಂದ ತೀವ್ರ ಕಂಗಾಲಾದ ಸಾಧ್ವಿ ಮುಂಬೈ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದು "ನನ್ನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಎಟಿಎಸ್ ಅನ್ಯಾಯವಾಗಿ ಹಾಗೂ ತಪ್ಪಾಗಿ ಈ ಮೊಕದ್ದಮೆಯಲ್ಲಿ ನನ್ನನ್ನು ಎಳೆದು ತಂದು ಹಾಕಿ ಹಿಂಸಿಸುತ್ತಿದೆ" ಎಂದು ವಿವರವಾಗಿ ತಿಳಿಸಿ ತನಗೆ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಬೇಕೆಂದು, ತನ್ನ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕೆಂದು ಇನ್ನಿಲ್ಲದಂತೆ ಪ್ರಾರ್ಥಿಸಿದ್ದರು. ನ್ಯಾಯಾಧೀಶರ ಮನಸ್ಸು ಕರಗಲಿಲ್ಲ. ಕೊಯಮತ್ತೂರ್ ಸ್ಫೋಟ ನಡೆಸಿದ ಮದನಿ, ಸಂಸತ್ ಭವನದ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ ಗುರು, ಮುಂಬೈ ಮೇಲೆ ದಾಳಿ ಮಾಡಿದ ಉಗ್ರ ಕಸಬ್, ನಕ್ಸಲರಿಗೆ ಶಸ್ತ್ರಾಸ್ತ್ರ ಒದಗಿಸಿ ರಾಜಕೀಯ ನಾಯಕರ ಹತ್ಯೆಗೆ ಸಂಚು ರೂಪಿಸಿದ ನಗರ ನಕ್ಸಲರಿಗೆ ಬಿರಿಯಾನಿ ತಿನ್ನಿಸಿ ರಾಜೋಪಚಾರ ನೀಡಿದ ಸರಕಾರ, ನ್ಯಾಯಾಲಯಗಳಿಗೆ ಮುಗ್ಧೆ ಸಾಧ್ವಿಯೊಬ್ಬಳ ಕಣ್ಣೀರು ಕಾಣಲಿಲ್ಲ. ಕಾನೂನು, ನ್ಯಾಯ ಎಲ್ಲರಿಗೂ ಒಂದೇ ಎನ್ನುವುದು ಎಷ್ಟೊಂದು ಚೋದ್ಯದ ಮಾತು!
ಸ್ವಾಮಿ ಅಸೀಮಾನಂದ, ಕ.ಪುರೋಹಿತರಿಗೊದಗಿದ ಹಿಂಸೆಯೂ ಕಡಮೆಯದಾಗಿರಲಿಲ್ಲ. ಮಂಪರು ಪರೀಕ್ಷೆಯಲ್ಲಿ ಸಫ್ದರ್ ನಾಗೋರಿ ಸ್ಫೋಟದ ರೂವಾರಿ ತಾನೇ ಎಂದು ಬಾಯಿ ಬಿಟ್ಟಿದ್ದ. ಆದರೆ ಕಾಂಗ್ರೆಸ್ ಹಿಂದೂ ಭಯೋತ್ಪಾದನೆಯ ಹಿಂದೆ ಬಿದ್ದು ಆ ಹೆಸರಲ್ಲೇ ಪುಸ್ತಕಗಳನ್ನು ಪ್ರಕಟಿಸಿತು. ಸಿಕ್ಕ ವೇದಿಕೆಗಳಲ್ಲಿ ಈ ವಿಚಾರವನ್ನು ಬಳಸಿ ಜನಮಾನಸದಲ್ಲಿ ಬೇರೂರುವಂತೆ ಮಾಡಿತು. ದಿಗ್ವಿಜಯ್ ಸಿಂಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 26/11 ರ ಮುಂಬಯಿ ದಾಳಿಯಲ್ಲಿ ಆರ್.ಎಸ್.ಎಸ್ ಪಾತ್ರ ಎನ್ನುವ ಪುಸ್ತಕವನ್ನೂ ಬಿಡುಗಡೆಗೊಳಿಸಿದರು. ಕೇಸರಿ ಭಯೋತ್ಪಾದನೆ ಎನ್ನುವ ಹೊಸ ಹೆಸರನ್ನು ಹುಟ್ಟುಹಾಕಿದ್ದ ಅಂದಿನ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ನಂತರ ಕ್ಷಮೆ ಕೇಳಿದ್ದರು. ಟೈಮ್ಸ್ ನೌ ವಾಹಿನಿ ಬಿಡುಗಡೆಗೊಳಿಸಿದ ನಾರ್ಕೊ ಅನಾಲಿಸಿಸ್ ಸಾಕ್ಷಿಯೊಂದು ಕಾಂಗ್ರೆಸ್ ಅನ್ನು ಬೀದಿಗೆ ತಂದು ನಿಲ್ಲಿಸಿತು! ಭಯೋತ್ಪಾದನೆಯ ಹೆಸರಿನಲ್ಲಿ ಹಿಂದೂ ನಾಯಕರನ್ನು ಗುರಿ ಮಾಡಿದ ಅದರ ಹೇಯ ಕಾರ್ಯ ಜಗತ್ತಿಗೆ ತಿಳಿಯಿತು. ತುಕಾರಾಂ ಓಂಬಳೆ ಕಸಬ್ ನನ್ನು ಜೀವ ಸಹಿತ ಹಿಡಿಯದಿದ್ದರೆ ಮುಂಬಯಿ ದಾಳಿಯನ್ನೂ ಹಿಂದೂಗಳ ತಲೆಗೆ ಕಟ್ಟುತ್ತಿತ್ತು ಕಾಂಗ್ರೆಸ್! ಸುನೀಲ್ ಜೋಶಿ ಹತ್ಯಾಕಾಂಡ ಪ್ರಕರಣದಲ್ಲಿ ತನ್ನ ಪಾತ್ರ ಖಂಡಿತ ಇಲ್ಲ ಎಂದು ಸಾಧ್ವಿ ಪದೇಪದೇ ಪೊಲೀಸರಿಗೆ, ನ್ಯಾಯಾಲಯಕ್ಕೆ ಮನವರಿಕೆ ಮಾಡುತ್ತಲೇ ಇದ್ದರು. ಆಕೆಯ ಹೇಳಿಕೆ ನಿಜವೆಂಬುದು ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಮನವರಿಕೆಯೂ ಆಗಿತ್ತು. ಆದರೆ ಕಾಂಗ್ರೆಸ್ಸಿನ ಹಠಮಾರಿತನದಿಂದಾಗಿ ಆಕೆಗೆ ಬಿಡುಗಡೆಯ ಭಾಗ್ಯ ದೊರಕಲಿಲ್ಲ. ಮುಂದೆ ಮಾಲೆಗಾಂವ್ ಸ್ಪೋಟ ಪ್ರಕರಣ ಹಾಗೂ ಸುನೀಲ್ ಜೋಶಿ ಹತ್ಯಾಪ್ರಕರಣಗಳಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಇತರ ಆರೋಪಿಗಳ ಜೊತೆ ಬಂಧಿಸಿ ತಪ್ಪು ಮಾಡಲಾಗಿತ್ತು ಎಂದು ಸ್ವತಃ ಎನ್ಐಎ ಒಪ್ಪಿಕೊಂಡಿತು. ಸಂಜೋತಾ ಬಾಂಬು ದಾಳಿಯಲ್ಲಿ ಅಸೀಮಾನಂದ ಹಾಗೂ ಕ. ಪುರೋಹಿತ್ ನಿರಪರಾಧಿಗಳು ಎಂದು ನ್ಯಾಯಾಲಯ ನುಡಿಯಿತು. ಯುಪಿಎ ಕಾಲಘಟ್ಟದಲ್ಲಿ ಕೇಂದ್ರ ಸರಕಾರದಲ್ಲಿ ಅಧಿಕಾರಿಯಾಗಿದ್ದ ಆರ್.ವಿ.ಎಸ್ ಮಣಿಯವರ "ಹಿಂದೂ ಟೆರರ್:ಇನ್ಸೈಡರ್ ಅಕೌಂಟ್ ಆಫ್ ಮಿನಿಸ್ಟ್ರಿ ಆಫ್ ಹೋಮ್ ಅಫೈರ್ಸ್ 2006-2010" ಪುಸ್ತಕ ದಿಗ್ವಿಜಯ್ ಸಿಂಗ್, ಚಿದಂಬರಂ, ಶಿವರಾಜ್ ಪಾಟೀಲ್ ಮೊದಲಾದ ಕಾಂಗ್ರೆಸ್ ನಾಯಕರು ಹಿಂದೂ ಭಯೋತ್ಪಾದನೆ ಎಂಬ ಕಥೆ ಸೃಷ್ಟಿಸಲು ನಡೆಸಿದ ಷಡ್ಯಂತ್ರವನ್ನು ಬಯಲಿಗೆಳೆಯುತ್ತದೆ. ಕಾಂಗ್ರೆಸ್ ನಿಜವಾದ ಭಯೋತ್ಪಾದಕರ ಪರವಾಗಿ ನಿಂತು ಅವರನ್ನು ರಕ್ಷಿಸಿ, ಅಮಾಯಕ ಹಿಂದೂಗಳನ್ನು ಉಗ್ರರೆಂದು ಕರೆಯುವ ಮೂಲಕ ಹೊಸ ಉಗ್ರವಾದಕ್ಕೆ ನಾಂದಿ ಹಾಡಿತ್ತು. ಹಿಂದೂಗಳು ಕನಿಷ್ಟ ಪಕ್ಷ ಭ್ರಷ್ಟಾಚಾರವನ್ನಾದರೂ ಸಹಿಸಿಕೊಂಡಾರು, ಆದರೆ ತಮ್ಮ ಆತ್ಮಗೌರವಕ್ಕೆ ಚ್ಯುತಿಯಾಗುವುದನ್ನು ಕ್ಷಣವೂ ಸಹಿಸರು ಎಂಬುದನ್ನು ಕಾಂಗ್ರೆಸ್ ಮರೆತಿತ್ತು. ಖಡ್ಗ ಹಿರಿಯದೆ, ಇನ್ನೊಬ್ಬರ ಮೇಲೆ ಆಕ್ರಮಣವೆಸಗದೆ ಸಹಸ್ರ ಸಹಸ್ರ ವರ್ಷಗಳಲ್ಲಿ ಕೃಣ್ವಂತೋ ವಿಶ್ವಮಾರ್ಯಮ್ ಎಂದು ಜಗತ್ತನ್ನೇ "ಧರ್ಮ" ಮಾರ್ಗದ ಮೂಲಕ ಸುಸಂಸ್ಕೃತವನ್ನಾಗಿ ಮಾಡಲು ಹೊರಟಿದ್ದ ಅವಿನಾಶಿ ಜನಾಂಗವೊಂದಕ್ಕೆ ಕಾಂಗ್ರೆಸ್ ಕೊಟ್ಟ ಉಡುಗೊರೆ "ಹಿಂದೂ ಭಯೋತ್ಪಾದನೆ"!
ಆದರೆ ಪ್ರಶ್ನೆಗಳಿವೆ... ಸಾಧ್ವಿಯವರನ್ನು ಜೈಲಿನಲ್ಲಿ ಹಿಂಸಿಸಿದ ಅಂದಿನ ತನಿಖಾಧಿಕಾರಿಗಳು ಹಾಗೂ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ತನಿಖೆ ಹಾಗೂ ಕ್ರಮ ಕೈಗೊಳ್ಳುವುದೇ? ಸಾಕ್ಷ್ಯವಿಲ್ಲದಿದ್ದರೂ ಈ ಮುಗ್ಧರನ್ನು ಹತ್ತು ವರ್ಷ ಜೈಲಿನಲ್ಲಿ ಕೊಳೆಯಿಸಿದವರಿಗೆ ಯಾವ ಶಿಕ್ಷೆಯಿದೆ? ನ್ಯಾಯಾಲಯ ಇವರು ಅಪರಾಧಿಗಳಲ್ಲ ಎಂದು ಹೇಳಿ ಬಿಡುಗಡೆ ಮಾಡಿದ್ದರೂ ಅಡಿಗಡಿಗೆ ಹಿಂದೂಭಯೋತ್ಪಾದನೆ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಹೇಳುವ ಕಾಂಗ್ರೆಸ್ ನಾಯಕರಿಗೆ ಯಾರು ಶಿಕ್ಷೆ ಕೊಡುವವರು? ಈಗ ಬಿಡುಗಡೆಯಾಗಿದ್ದರೂ ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತವಾಗಿರುವ ಸಾಧ್ವಿ, ಪುರೋಹಿತ, ಅಸೀಮಾನಂದರ ಕಳೆದು ಹೋದ ದಿನಗಳನ್ನು ಮರಳಿ ಕೊಡುವವರಾರು? ಕಳೆದು ಹೋದ ಅವರ, ಅವರ ಕುಟುಂಬಸ್ಥರ ಗೌರವ, ಮರ್ಯಾದೆಯನ್ನು ಕಾಂಗ್ರೆಸ್ ಮರಳಿಸುವುದೇ? ದೇಶದ ಜನತೆಯ ಎದುರು ಕಾಂಗ್ರೆಸ್ ಅವರ ಕ್ಷಮೆ ಯಾಚಿಸುವುದೇ? ಭ್ರಷ್ಟಾಚಾರದಲ್ಲಿ ಭಾಗಿಯಾದವರಿಗೆ ಮೇಲಿಂದ ಮೇಲೆ ಜಾಮೀನು ಕೊಡುವ, ಭಯೋತ್ಪಾದಕರಿಗಾಗಿ ರಾತ್ರೋರಾತ್ರಿ ಕದ ತೆರೆವ, ದೇಶದ್ರೋಹಿ ನಕ್ಸಲರಿಗೆ ಗೌರವ ಕೊಡಬೇಕೆನ್ನುವ ಘನ ನ್ಯಾಯಾಲಯ ಈ ಪ್ರಕರಣದಲ್ಲಿ ತನ್ನಿಂದಾದ ತಪ್ಪಿಗೆ ಏನು ಶಿಕ್ಷೆ ಕೊಟ್ಟುಕೊಳ್ಳುತ್ತದೆ? ಕನಿಷ್ಟ ಈ ಅಮಾಯಕರ ಕ್ಷಮೆಯನ್ನಾದರೂ ಅದು ಯಾಚಿಸುವುದೇ? ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸುವ ಸಲುವಾಗಿ ಅಮಾಯಕಿ ಸಾಧ್ವಿಯೊಬ್ಬಳನ್ನು ಬಂಧಿಸಿ, ಚಾರ್ಜ್ ಶೀಟ್ ಇಲ್ಲದೆಯೇ ಹತ್ತು ವರ್ಷ ನರಕಯಾತನೆ ಕೊಟ್ಟಿತು ಕಾಂಗ್ರೆಸ್. ಮಾಲೆಗಾಂವ್ ಹಾಗೂ ಸಂಝೋತಾ ದಾಳಿಗಳಲ್ಲಿ ನಿಜವಾದ ದಾಳಿಕೋರರನ್ನು ಬಂಧಿಸದೇ ಕೈಬಿಟ್ಟು, ಅಮಾಯಕ ಹಿಂದೂಗಳನ್ನು ಬಂಧಿಸಿ ಹಿಂಸಿಸಿತು. ಇಶ್ರತ್ ಜಹಾನ್ ಎಂಬ ಆತ್ಮಾಹುತಿ ಬಾಂಬರಳನ್ನು "ಸಹೋದರಿ" ಎಂದು ಕರೆಯಿತು. ಭಯೋತ್ಪಾದಕ ಸೊಹ್ರಾಬುದ್ದೀನ್ ಎನ್ಕೌಂಟರನ್ನು ನಕಲಿ ಎಂದಿತು. ಪಾಕಿಸ್ತಾನೀ ಉಗ್ರರ ಶಿಕ್ಷೆ ಕಡಮೆ ಮಾಡುವಂತೆ ಆಗ್ರಹಿಸಿತು. ಕಸಬ್, ಅಫ್ಜಲ್, ಯಾಕೂಬರನ್ನು ಗಲ್ಲಿಗೇರಿಸಬಾರದೆಂದು ಸಹಿ ಸಂಗ್ರಹಿಸಿತು. ಯಾಕೂಬನ ಬಿಡುಗಡೆಗಾಗಿ ರಾತ್ರೋರಾತ್ರಿ ನ್ಯಾಯಾಲಯವನ್ನು ಕಾರ್ಯನಿರ್ವಹಿಸಲು ತೆರೆಯುವಂತೆ ಮಾಡಿತು. "ಹಿಂದೂಭಯೋತ್ಪಾದನೆ" ಎನ್ನುವ ಕಥೆಯನ್ನು ಸಿಕ್ಕ ವೇದಿಕೆಗಳಲ್ಲಿ ಹೇಳುವ ಮೂಲಕ ದೇಶದ ಜನತೆಯ ಮನಸ್ಸಿನಲ್ಲಿ ಹಿಂದೂಗಳ ಬಗ್ಗೆಯೇ ಸಂಶಯ ಹುಟ್ಟುವಂತೆ ಮಾಡಿತು. ಇಡೀ ಜಗತ್ತಿನ ಎದುರು ದೇಶದ ಮಾನ ಹರಾಜು ಹಾಕಿತು. ವಿದೇಶಗಳ ವೇದಿಕೆಗಳಲ್ಲಿ ರಾ.ಸ್ವ.ಸಂ ಹಾಗೂ ಹಿಂದೂ ಸಂಘಟನೆಗಳನ್ನು ಉಗ್ರ ಪಟ್ಟ ಕಟ್ಟಿ ಅವಮಾನಿಸಿತು. "ಹಿಂದೂ ಭಯೋತ್ಪಾದನೆ" ಎನ್ನುವುದನ್ನು ಹುಟ್ಟು ಹಾಕಿ ಹಿಂದೂಗಳ ಭಾವನೆಯ ಮೇಲೆ ಚೆಲ್ಲಾಟವಾಡಿದ ಕಾಂಗ್ರೆಸ್ ಶಿಕ್ಷಾರ್ಹವಲ್ಲವೇ? ಕಾಂಗ್ರೆಸ್, ಇಲ್ಲದ ಹಿಂದೂ ಭಯೋತ್ಪಾದನೆಯನ್ನು ಸೃಷ್ಟಿಸಲು ಹೆಣಗಾಡುತ್ತಾ ಕೂತಿದ್ದಾಗಲೇ ಪಾಕಿಸ್ತಾನಿ ಪ್ರೇರಿತ ಮತಾಂಧ ಭಯೋತ್ಪಾದಕರು ಮುಂಬೈ ಮೇಲೆ ಭೀಕರ ದಾಳಿ ಎಸಗಿದರು! ತನ್ನ ರಾಜಕೀಯ ಸ್ಥಿರತೆಗೆ ದೇಶವನ್ನು, ಹಿಂದೂಗಳನ್ನು ಬಲಿಕೊಟ್ಟ ಕಾಂಗ್ರೆಸ್ಸಿಗೆ ಯಾವ ಶಿಕ್ಷೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ