ಸಂಭಾಲವೇನು, ಭಾರತಾದ್ಯಂತ ದೇವಾಲಯಗಳು ಎದ್ದು ನಿಂತಾವು; ಹಿಂದೂಗಳಲ್ಲಿ ಕಲ್ಕಿಯ ಅವತಾರವಾಗಬೇಕಷ್ಟೇ!
ದೇವಾಲಯಗಳನ್ನು ನಾಶ ಮಾಡಿ, ಹಿಂದೂಗಳು ಸದಾ ಕೊರಗುತ್ತಿರಬೇಕೆಂದು ಅವುಗಳ ಅವಶೇಷಗಳು ಎದ್ದು ಕಾಣುವಂತೆ ಅವುಗಳ ಮೇಲೆಯೇ ಮಸೀದಿಗಳನ್ನು ನಿರ್ಮಿಸಿದ್ದೇ ಈಗ ಮುಸಲರಿಗೆ ಮುಳುವಾಗುತ್ತಿದೆ. ಒಂದೊಂದೇ ದೇವಾಲಯಗಳು ಎದ್ದು ಬರುತ್ತಿವೆ. ಹಿಂದೂಗಳು ತಮ್ಮ ದೇವಾಲಯಗಳನ್ನು ತಮಗೆ ಒಪ್ಪಿಸಬೇಕೆಂದು ಸಾಕ್ಷಿ ಸಮೇತ ನ್ಯಾಯಾಲಯದ ಕದ ತಟ್ಟುತ್ತಿದ್ದಾರೆ. ನ್ಯಾಯಪರ ಸರಕಾರದ ಕಾರಣದಿಂದ, ಸಮೀಕ್ಷೆಗಾಗಿ ಪುರಾತತ್ವ ಇಲಾಖೆಗೆ ಆಜ್ಞಾಪಿಸುತ್ತಿರುವ ನ್ಯಾಯಾಲಯವೂ ತಕ್ಕಮಟ್ಟಿಗೆ ನ್ಯಾಯ ಪರವಿದ್ದ ಹಾಗೆ ಎದ್ದು ಕಾಣುತ್ತಿದೆ. ತಮ್ಮ ಮತಗ್ರಂಥ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವವರು ಎಂದಿನಂತೆ ಕಲ್ಲೆಸೆಯುತ್ತಿದ್ದಾರೆ. ಶ್ರೀರಾಮಮಂದಿರ, ಕಾಶಿ, ಮಥುರಾಗಳ ಬಳಿಕ ಉತ್ತರ ಪ್ರದೇಶದ ಸಂಭಾಲ್'ನಲ್ಲಿ ಕಲ್ಕಿಯ ಮರುಪ್ರವೇಶಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಭಗವಾನ್ ಕಲ್ಕಿಗೆ ಸಮರ್ಪಿತವಾದ ದೇವಾಲಯದ ಜಾಗವನ್ನು ಮಸೀದಿ ಆಕ್ರಮಿಸಿಕೊಂಡಿದೆ ಎಂದು ಪ್ರತಿಪಾದಿಸಿ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಹಾಗೂ ಏಳು ಸಹ ಫಿರ್ಯಾದಿಗಳು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರು. "ಸಂಭಾಲ್ನಲ್ಲಿರುವ ಜಾಮಾ ಮಸೀದಿಯನ್ನು ಶತಮಾನಗಳಷ್ಟು ಹಳೆಯದಾದ ಶ್ರೀ ಹರಿಹರ ದೇವಸ್ಥಾನದ ಮೇಲೆ ನಿರ್ಮಿಸಲಾಗಿದೆ. ಭಗವಾನ್ ಕಲ್ಕಿಗೆ ಸಮರ್ಪಿತವಾದ ಈ ದೇವಾಲಯವನ್ನು ಬಾಬರ್ ನ ಸೇನಾನಿಯೊಬ್ಬ ನಾಶಗೊಳಿಸಿ ಬಲವಂತವಾಗಿ ಮಸೀದಿಯಾಗಿ ಪರಿವರ್ತಿಸಿದ. 1904ರ "ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕಾಯಿದೆ"ಯ ಪ್ರಕಾರ ಇದು ಕೇಂದ್ರೀಯ ಸಂರಕ್ಷಿತ ಸ್ಮಾರಕವಾಗಿದೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಇದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಪಟ್ಟಿಮಾಡಿದೆ. ನಾವುಗಳು ಭಗವಾನ್ ಹರಿ-ಹರರ ಭಕ್ತರಾಗಿರುವುದರಿಂದ ದೇವಾಲಯವನ್ನು ಪ್ರವೇಶಿಸಿ ಪೂಜೆ ಮಾಡುವ ಹಕ್ಕು ನಮಗಿದೆ. ಆದರೆ ಮಸೀದಿಯ ಆಡಳಿತ ಸಮಿತಿಯು ಪೂಜೆಯ ಹಕ್ಕನ್ನು ನಿರಾಕರಿಸಿದೆ. ಇದಲ್ಲದೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಈ ಸ್ಥಳಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಲು ತನಗಿರುವ ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸಲು ವಿಫಲವಾಗಿದೆ" ಎಂದು ಅರ್ಜಿದಾರರು "ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ - 1958 ರ ವಿಭಾಗ 18 ಅನ್ನು ಉಲ್ಲೇಖಿಸಿ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ, ಪ್ರಸ್ತುತ ಪರಿಸ್ಥಿತಿಯು ನಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ. ಹಾಗಾಗಿ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ಮರುಸ್ಥಾಪಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತು. ಕಳೆದ ನವೆಂಬರ್ 19 ರಂದು, ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಜಾಮಾ ಮಸೀದಿಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಯನ್ನು ನಡೆಸಲಾಯಿತು. ವಕೀಲರ ಆಯೋಗದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲಾಯಿತು. ಸಮೀಕ್ಷೆ ಶಾಂತಿಯುತವಾಗಿ ನಡೆಯಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನ್ಯಾಯಾಲಯದ ಆಯೋಗ ವಿವಾದಿತ ಕಟ್ಟಡಕ್ಕೆ ಬಂದಾಗ ಪೂರ್ತಿ ಸಮೀಕ್ಷೆ ಮಾಡಲು ಅಲ್ಲಿ ಜಮಾಯಿಸಿದ್ದ ಜನರಿಂದಾಗಿ ಸಾಧ್ಯವಾಗಲಿಲ್ಲ. ಮತ್ತೊಂದು ದಿನ ಬಂದು ಕೆಲಸ ಪೂರ್ತಿಮಾಡಬೇಕಾಯಿತು. ಆದರೆ ಹೊರಗೆ ಶಸ್ತ್ರ ಸಜ್ಜಿತರಾಗಿ ಸೇರಿದ್ದ ನೂರಾರು ಜನರ ಗುಂಪು ರಕ್ಷಣಾ ಹೊಣೆ ಹೊತ್ತ ಪೊಲೀಸರತ್ತು ಕಲ್ಲು ಇಟ್ಟಿಗೆಯಿಂದ ದಾಳಿ ಮಾಡಿತು. ಗುಂಪಿನಲ್ಲಿದ್ದ ಕೆಲವರು ಪಿಸ್ತೂಲಿನಿಂದ ಗುಂಡಿನ ದಾಳಿಯನ್ನೂ ನಡೆಸಿದರು. ಇದರಿಂದ ಐವರು ಮರಣಹೊಂದಿದರು.ಹಲವು ಪೊಲೀಸರೂ ಗಾಯಗೊಂಡರು. ಪೊಲೀಸರೇ ಕೊಂದಿದ್ದು ಎಂದು ಗುಂಪು ಹೇಳಿತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಕಂತ್ರಿ ಪಿಸ್ತೂಲಿನಿಂದ ಗುಂಡು ಹಾರಿದ್ದು ಖಚಿತವಾಯಿತು. ಗುಂಪು ಸಿಸಿಟೀವಿ ನಾಶ ಮಾಡಿತ್ತಾದರೂ ಉಳಿದ ಕೆಲ ಕ್ಯಾಮರಾದಿಂದ ದೃಶ್ಯ ಸಿಕ್ಕಾಗ ಗುಂಪಿನ ಪುಂಡಾಟಕ್ಕೆ ಮತ್ತು ಗುಂಡು ಹಾರಿಸುತ್ತಿದ್ದುದಕ್ಕೆ ಸಾಕ್ಷಿ ಲಭ್ಯವಾಯಿತು. ಗಲಭೆಗೆ ಎರಡು ದಿನ ಮುಂಚೆ ಅಲ್ಲಿಗೆ ಬೇಟಿ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ಗಲಭೆಗೆ ಪ್ರೇರಣೆ ನೀಡಿದ್ದರು. ಸ್ಥಳೀಯ ಶಾಸಕನ ಪುತ್ರ ಸಹ ಗಲಭೆಗೆ ಪ್ರಚೋದಿಸಿದ್ದರು. ಪೊಲೀಸರು ಇಬ್ಬರ ಮೇಲೂ ಮೊಕದ್ದಮೆ ದಾಖಲಿಸಿದರು. ಅಮಾಯಕರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಕೂಗೆಬ್ಬಿಸಲಾಯಿತು. ಬಂಧಿತರ ಬಳಿಯಿಂದ ವಶಪಡಿಸಿಕೊಂಡ ಮೊಬೈಲ್ ಗಳಲ್ಲಿನ ದಾಖಲೆಗಳು, ಗಲಭೆಯು ಪೂರ್ವ ನಿಯೋಜಿತ ಎಂದೇ ಹೇಳುತ್ತಿವೆ. ಉತ್ತರ ಪ್ರದೇಶದ ಸರ್ಕಾರ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ರೋರ್ವರನ್ನು ಆಯೋಗದ ಮುಖ್ಯಸ್ಥರಾಗಿ ನೇಮಿಸಿತು. ಘಟನಾ ಸ್ಥಳದಲ್ಲಿ ಇನ್ನೂ ಹತ್ತಾರು ಟ್ರಾಕ್ಟರ್ ಗಳಷ್ಟು ಕಲ್ಲು, ಇಟ್ಟಿಗೆ ಚೂರು ಸಂಗ್ರಹಿಸಿಟ್ಟಿದ್ದು ಪತ್ತೆಯಾಯಿತು.
ರೋಹಿಲ್ಖಂಡ್ನ ಹೃದಯಭಾಗದಲ್ಲಿರುವ ಮಾಹಿಷ್ಮತ್ ನದಿಯ ದಡದಲ್ಲಿರುವ ಸಂಭಾಲ್ ನಗರವು ಐತಿಹಾಸಿಕವಾಗಿ ಪ್ರಸಿದ್ಧವಾದ ನಗರವಾಗಿತ್ತು. ಕೃತಯುಗದಲ್ಲಿ ಸಬ್ರಿತ್ ಅಥವಾ ಸಂಭಲೇಶ್ವರ್, ತ್ರೇತಾಯುಗದಲ್ಲಿ ಮಹದ್ಗಿರಿ, ದ್ವಾಪರ ಯುಗದಲ್ಲಿ ಪಿಂಗಲ ನೆಂದು ಕರೆಯಲ್ಪಡುತ್ತಿದ್ದ ಈ ನಗರವು ಕಲಿಯುಗದಲ್ಲಿ ಸಂಭಾಲ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೃಷ್ಟಿಯ ಆರಂಭದಲ್ಲಿ ಭಗವಾನ್ ವಿಶ್ವಕರ್ಮರಿಂದ ಈ ಹರಿಹರ ಮಂದಿರವು ರಚಿಸಲ್ಪಟ್ಟಿತಂತೆ. "ಯಥಾ ಶಿವಸ್ತಥಾ ವಿಷ್ಣು, ಯಥಾ ವಿಷ್ಣುಸ್ತಥಾ ಶಿವಃ," ಎಂಬಂತೆ ಹರಿಹರರ ಅದ್ವೈತ ಭಾವವನ್ನು ಸೂಚಿಸುವ ಈ ಮಂದಿರ ಅದ್ಭುತವಾದ ಪ್ರಾಚೀನ ವಾಸ್ತುಶಿಲ್ಪದಿಂದ ಕೂಡಿತ್ತು. ಕಲಿಯುಗದ ಅಂತ್ಯದಲ್ಲಿ ಭಗವಾನ್ ಕಲ್ಕಿಯು ಇಲ್ಲಿಯೇ ಅವತರಿಸಿ ಬರುತ್ತಾನೆ ಎಂಬ ನಂಬಿಕೆಯಿಂದ ಈ ದೇವಾಲಯವು ಭಗವಾನ್ ಕಲ್ಕಿಗೆ ಸಮರ್ಪಿತವಾಗಿದೆ. ಮಹಾಭಾರತ (3.189) ಭಗವಾನ್ ವಿಷ್ಣು ಸಂಭಾಲದಲ್ಲಿ ಕಲ್ಕಿಯಾಗಿ ಜನ್ಮವೆತ್ತುತ್ತಾನೆ ಎಂದಿದೆ. ಸ್ಕಂದ ಪುರಾಣ ಸಂಭಾಲದಲ್ಲಿ ವಿಷ್ಣು ದೇಗುಲ ಇರುವುದಾಗಿ ಉಲ್ಲೇಖಿಸಿದೆ. ಕಲ್ಕಿಯ ಅವತಾರದ ಬಗೆಗೆ ಬುದ್ಧನೂ ಭವಿಷ್ಯ ನುಡಿದಿದ್ದ. ಕಾಲಚಕ್ರ ತಂತ್ರವು ಕಲ್ಕಿ ಹೆಸರಿನ ರುದ್ರ-ಚಕ್ರಿನ್ ಸಂಭಾಲದಲ್ಲಿ ಅವತಾರವೆತ್ತಿ ಮಧುಮತಿಯ ಪ್ರವಾದಿಯ ಮ್ಲೇಚ್ಛ ಅನುಯಾಯಿಗಳನ್ನು ಕಲಿಯುಗಾಂತ್ಯಕ್ಕೆ ನಾಶಗೊಳಿಸುತ್ತಾನೆ ಎಂದಿದೆ. ಮಹಮ್ಮದ್ ಬಿನ್ ತುಘಲಕ್ ಸಂಭಾಲ್ ನಲ್ಲಿ ದೇವಾಲಯಗಳನ್ನು ನಾಶಗೊಳಿಸಿದಾಗ ಚೀನಾ ಚಕ್ರವರ್ತಿ ತನ್ನ ನಿಯೋಗವನ್ನು ಕಳುಹಿಸಿ ಸಂಭಾಲದಲ್ಲಿ ದೇವಾಲಯಗಳನ್ನು ಮರುನಿರ್ಮಿಸಲು ತುಘಲಕನ ಅನುಮತಿ ಬೇಡಿದ್ದ.
ಬಾಬರ್ನ ಸೇನಾಧಿಕಾರಿ ಮೀರ್ ಬೇಗ್ (ಅಥವಾ ಹಿಂದೂ ಬೇಗ್) 1527-28ರಲ್ಲಿ ದೇವಾಲಯವನ್ನು ಭಾಗಶಃ ಕೆಡವಿ ಮಸೀದಿಯಾಗಿ ಪರಿವರ್ತಿಸಿದನು. ಈ ಘಟನೆಯ ಉಲ್ಲೇಖವು ಬಾಬರನ ದಿನಚರಿ ಬಾಬರ್ನಾಮಾದಲ್ಲಿದೆ. ಕಾಬೂಲಿನಿಂದ ಮಹಿಳೆಯರ ಬೆಂಗಾವಲು ಪಡೆಯ ನೇತೃತ್ವ ವಹಿಸಿದ್ದ ಹುಮಾಯೂನನ ಸೇವಕ ಮೀರ್ ಬೇಗನಿಗೆ ಸಂಭಾಲ್ ಗೆ ತೆರಳುವಂತೆ ಬಾಬರ್ ಆಜ್ಞಾಪಿಸುತ್ತಾನೆ. 932 AH (f297)ನಲ್ಲಿ ಸಂಭಾಲ್ ಅನ್ನು ವಶಪಡಿಸಿಕೊಂಡ ಆತ 933 AH ನಲ್ಲಿ ಹರಿಹರ ದೇವಾಲಯವನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಿದ. ತನ್ನ ಘನಕಾರ್ಯವನ್ನು ಹೊಗಳಿಕೊಳ್ಳುವ ಶಾಸನವೊಂದನ್ನೂ ಅಲ್ಲಿ ಕೆತ್ತಿಸಿದ ಎಂದು ಬಾಬರ್ ನಾಮಾ ಹೇಳುತ್ತದೆ. ಆದರೆ ಈ ಶಾಸನವು ನಕಲಿಯಾದುದೆಂದು ಕನ್ನಿಂಗ್ ಹ್ಯಾಮ್ ಹೇಳುತ್ತಾರೆ. ಇತಿಹಾಸಕಾರ ಮೋಹನ್ ಸಂಕ್ಧೇರ್, ಸಂಭಾಲ್ ಮಸೀದಿಯು ಬಾಬರನಿಂದ ನಿರ್ಮಿತವಾದದ್ದಲ್ಲ ಹಾಗೂ ಬಾಬರನ ಶಾಸನವೆಂದು ಹೇಳಲಾದುದು ಒಂದು ನಕಲಿ ಶಾಸನ ಎಂದು ತನ್ನ "ಸಂಭಾಲ್ ಎ ಹಿಸ್ಟಾರಿಕಲ್ ಸರ್ವೇ" ಯಲ್ಲಿ ಬರೆದಿದ್ದಾರೆ. ಇವರಿಬ್ಬರೂ ಈ ಮಸೀದಿಯು ಹತ್ತೊಂಬತ್ತನೇ ಶತಮಾನಕ್ಕಿಂತ ಹಿಂದಿನದ್ದಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ ಐನ್-ಇ-ಅಕ್ಬರಿಯು ಸಂಭಾಲ್ನಲ್ಲಿರುವ ಹರಿ ಮಂದಿರ ಎಂಬ ಹೆಸರಿನ ಪ್ರಮುಖ ದೇವಾಲಯವನ್ನು ಉಲ್ಲೇಖಿಸಿ ಭಗವಾನ್ ವಿಷ್ಣುವಿನ ಈ ದೇವಾಲಯವು ಭಗವಾನ್ ಕಲ್ಕಿಯ ಅವತಾರದ ಭವಿಷ್ಯವಾಣಿಯ ಜನ್ಮಸ್ಥಳವಾಗಿದೆ ಎಂದು ವಿವರಿಸಿದೆ. ಬಹುಷಃ ಆ ಕಾಲಕ್ಕೆ ಹಿಂದೂಗಳು ಅದನ್ನು ಮರುವಶಕ್ಕೆ ಪಡೆದಿರಬೇಕು. ಹಾಗಾಗಿಯೇ ಅಕ್ಬರನ ಕಾಲದಲ್ಲಿ ದೇವಾಲಯವು ಪ್ರಾಮುಖ್ಯತೆಯನ್ನು ಹೊಂದಿತ್ತು. "ಸಂಬೆಲ್ (ಸಂಭಾಲ್) ನಗರದಲ್ಲಿ ಘೇಂಡಾಮೃಗಗಳಿವೆ. ಇವು ಚಿಕ್ಕ ಆನೆಯಂತಹ ಪ್ರಾಣಿಗಳಾಗಿದ್ದು, ಸೊಂಡಿಲು ಇಲ್ಲದೆ, ಮತ್ತು ಅವುಗಳ ಮೂತಿಯ ಮೇಲೆ ಕೊಂಬನ್ನು ಹೊಂದಿದ್ದು ಅದರ ಮೂಲಕ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಅದರ ಚರ್ಮದಿಂದ ಗುರಾಣಿಗಳನ್ನು ತಯಾರಿಸಲಾಗುತ್ತದೆ ಮತ್ತು ಕೊಂಬಿನಿಂದ, ಬಿಲ್ಲು ತಂತಿಗಳು, ಬೆರಳು-ಕವಚಗಳು ಮುಂತಾದವುಗಳು ತಯಾರಿಸಲಾಗುತ್ತದೆ. ಸಂಬಾಲ್ ನಗರದಲ್ಲಿ ಬ್ರಾಹ್ಮಣನಿಗೆ ಸೇರಿದ ಹರಿ ಮಂಡಲ (ವಿಷ್ಣುವಿನ ದೇವಾಲಯ) ಎಂಬ ದೇವಾಲಯವಿದೆ, ವಿಷ್ಣುವಿನ ಹತ್ತನೇ ಅವತಾರವು ಅವರ ವಂಶಸ್ಥರಲ್ಲಿ ಈ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ." ಎಂದು ಐನ್-ಇ-ಅಕ್ಬರಿ ಉಲ್ಲೇಖಿಸಿದೆ.
1874-76ರ ಅವಧಿಯಲ್ಲಿ ಸಂಭಾಲ್ನಲ್ಲಿ ಹಲವಾರು ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಗಳನ್ನು ಎಎಸ್ಐನ ಆಗಿನ ಮಹಾನಿರ್ದೇಶಕ ಮೇಜರ್-ಜನರಲ್ ಎ. ಕನ್ನಿಂಗ್ಹ್ಯಾಮ್ ನೇತೃತ್ವದಲ್ಲಿ ನಡೆಸಲಾಗಿತ್ತು. ಅವರ "ಟೂರ್ಸ್ ಇನ್ ದಿ ಸೆಂಟ್ರಲ್ ಡೋಬ್ & ಗೋರಖ್ಪುರ" ಎಂಬ ಶೀರ್ಷಿಕೆಯ ವರದಿಯು ದೇವಾಲಯದ ಅವಶೇಷಗಳ ವಾಸ್ತುಶಿಲ್ಪದ ಅಂಶಗಳನ್ನು ಈ ರೀತಿಯಾಗಿ ಉಲ್ಲೇಖಿಸಿದೆ. “ಸಂಭಾಲ್ನಲ್ಲಿರುವ ಪ್ರಮುಖ ಕಟ್ಟಡವು ಜಾಮಿ ಮಸೀದಿಯಾಗಿದೆ, ಇದು ಮೂಲತಃ ಹರಿ ಮಂದಿರದ ದೇವಾಲಯವಾಗಿದೆ ಎಂದು ಹಿಂದೂಗಳು ಹೇಳಿಕೊಳ್ಳುತ್ತಾರೆ. ಇದು 20 ಅಡಿ ಚೌಕದವರೆಗಿನ ಮಧ್ಯದ ಗುಮ್ಮಟದ ಕೋಣೆಯನ್ನು ಒಳಗೊಂಡಿದೆ, ಎರಡು ರೆಕ್ಕೆಗಳು ಅಸಮಾನ ಉದ್ದ, ಉತ್ತರಕ್ಕೆ 500 ಅಡಿ 6 ಇಂಚುಗಳು, ಆದರೆ ದಕ್ಷಿಣದ ರೆಕ್ಕೆ ಕೇವಲ 38 ಅಡಿ 1½ ಇಂಚುಗಳು. ಪ್ರತಿಯೊಂದು ರೆಕ್ಕೆಯು ಮುಂಭಾಗದಲ್ಲಿ ಮೂರು ಕಮಾನಿನ ತೆರೆಯುವಿಕೆಗಳನ್ನು ಹೊಂದಿದ್ದು, ಅವುಗಳೆಲ್ಲಾ 7ರಿಂದ 8 ಅಡಿಗಳಷ್ಟಿವೆ. ಮಹಮ್ಮದೀಯರು ಕಟ್ಟಡದ ನಿರ್ಮಾಣ ಬಾಬರನ ಕಾಲದಲ್ಲಾಯಿತೆಂದು ಮಸೀದಿಯ ಒಳಗಿನ ಶಾಸನವನ್ನು ತೋರಿಸಿ ಹೇಳುತ್ತಾರೆ. ಹಿಂದೂಗಳು ಇದಕ್ಕಿಂತ ಹಿಂದಿನ, ದೇವಸ್ಥಾನಕ್ಕೆ ಸೇರಿದ ಮೂಲ ಹಿಂದೂ ಶಾಸನವು ಚಪ್ಪಡಿಯ ಹಿಂಭಾಗದಲ್ಲಿದೆ ಎಂದು ಹೇಳುತ್ತಾರೆ. ಬಾಬರ್ನ ಹೆಸರನ್ನು ಹೊಂದಿರುವ ಶಾಸನವು ನಕಲಿ ಎಂದು ಸಂಭಾಲ್ನ ಹಲವಾರು ಮುಸಲ್ಮಾನರು ನನ್ನ ಬಳಿ ಒಪ್ಪಿಕೊಂಡರು ಮತ್ತು ದಂಗೆಯ ಸಮಯದವರೆಗೆ ಅಥವಾ 25 ವರ್ಷಗಳ ಹಿಂದಕ್ಕೆ ಮುಹಮ್ಮದೀಯರು ಕಟ್ಟಡವನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ. ದಂಗೆಯ ಬಳಿಕ ಅವರು ಬಲವಂತವಾಗಿ ಕಟ್ಟಡವನ್ನು ಸ್ವಾಧೀನಪಡಿಸಿಕೊಂಡರು; ನ್ಯಾಯಾಲಯದಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆದಾಗ, ಜಿಲ್ಲಾ ನ್ಯಾಯಾಧೀಶರ ಮುಂದೆ ಅವರು ಈ ನಕಲಿ ಶಾಸನವನ್ನು ತೋರಿಸಿ ಮತ್ತು ಎಲ್ಲರೂ ಒಟ್ಟಾಗಿ ಸೇರಿ ಹಿಂದೂಗಳ ವಿರುದ್ಧ ಸುಳ್ಳು ಸಾಕ್ಷಿ ಹೇಳಿ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡರು."
ಕನ್ನಿಂಗ್ಹ್ಯಾಮ್ ಮೂಲ ಹಿಂದೂ ರಚನೆ ಮತ್ತು ಮೊಘಲ್ ಮಾರ್ಪಾಡುಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಿದರು. ಮೊಘಲ್ ಕಟ್ಟಡ ನಿರ್ಮಾತೃಗಳು ಬಳಸಿದ ಪ್ಲಾಸ್ಟರ್ ಅಡಿಯಲ್ಲಿ ಹಿಂದೂ ಶಿಲ್ಪಗಳು ಮತ್ತು ಕೆತ್ತನೆಗಳ ಕೆಲವು ಅವಶೇಷಗಳು ಅವರಿಗೆ ಕಂಡುಬಂದವು. ಸ್ಥಂಬಗಳು, ಮರಳುಗಲ್ಲಿನ ತುಣುಕುಗಳು ಮತ್ತು ಹಿಂದೂ ದೇವಾಲಯದ ವಾಸ್ತುಶಿಲ್ಪದ ಇತರ ಕಲಾಕೃತಿಗಳನ್ನು ಅವರು ದಾಖಲಿಸಿದ್ದಾರೆ. ಪೃಥ್ವಿರಾಜ್ ಚೌಹಾನ್ ಭಗವಾನ್ ವಿಷ್ಣುವಿನ ಭವ್ಯವಾದ ದೇವಾಲಯವನ್ನು ನಿರ್ಮಿಸಿದ. ಅದರ ಭಾಗಗಳು ಅಕ್ಬರನ ಆಳ್ವಿಕೆಯಲ್ಲಿಯೂ ಉಳಿದುಕೊಂಡಿದ್ದವು.
ಮೀನಾಕ್ಷಿ ಜೈನ್ ತಮ್ಮ "ಬ್ಯಾಟಲ್ ಆಫ್ ರಾಮ್" ಕೃತಿಯಲ್ಲಿ ಸಂಭಾಲ್ ಹರಿಹರ ಮಂದಿರದ ಕುರಿತು ಐತಿಹಾಸಿಕ ದಾಖಲೆಗಳೊಂದಿಗೆ ವಿಸ್ತಾರವಾಗಿ ಬರೆದಿದ್ದಾರೆ. 1920ರಲ್ಲೇ ಇದು ಪುರಾತತ್ವ ಇಲಾಖೆಯ ಆಸ್ತಿಯಾಗಿತ್ತು. ಮಸೀದಿ ಸಮಿತಿಯು ಅಕ್ರಮ ಪ್ರವೇಶ ಮಾಡಿ ಇದನ್ನು ತನ್ನ ವಶಕ್ಕೆ ಪಡೆದಿದ್ದಲ್ಲದೇ ಮೂಲ ಸ್ವರೂಪ ಮುಚ್ಚುವ ಕಾರ್ಯ ಮಾಡಿತು. ಆಗ ಮುಸ್ಲಿಮ್ ಮಸೀದಿ ಸಮಿತಿಯ ಮೇಲೆ ಪ್ರಕರಣ ದಾಖಲಾಗಿತ್ತು.ಅತಿಕ್ರಮಣಕ್ಕಾಗಿ ಶಿಕ್ಷೆಯನ್ನೂ ವಿಧಿಸಲಾಗಿತ್ತು. ನೆಹರೂ ಕಾಲದಲ್ಲಿ ಮತ್ತೆ ಮುಸ್ಲಿಮರು ಪರಮಾಧಿಕಾರ ಪಡೆದರು. ಈ ಮಸೀದಿಯ ಒಂದು ಬಾಗದಲ್ಲೇ ಹಿಂದೂಗಳು ಪೂಜೆ ನಡೆಸುತ್ತಿದ್ದರು. ಅಲ್ಲೇ ದೀಪಾವಳಿಯಲ್ಲಿ ದೀಪ ಪ್ರಜ್ವಲನವೂ ನಡೆಯುತ್ತಿತ್ತು. 2011 ರಲ್ಲಿ ಹಿಂದೂಗಳ ಪ್ರವೇಶವನ್ನು ಬಲವಂತವಾಗಿ ನಿಲ್ಲಿಸಲಾಯಿತು.
ಸಂಭಾಲ್'ನಲ್ಲಿ ಮೊಘಲರ ಪ್ರವೇಶವಾದ ಬಳಿಕ ಸತತವಾಗಿ ಮುಸ್ಲಿಮರಿಂದ ಹಿಂದೂಗಳ ಮೇಲೆ, ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆದಿವೆ. ಮೀರ್ ಬೇಗ್ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ ಬಳಿಕ ಹಿಂದೂಗಳು ಅದನ್ನು ಮರುವಶ ಮಾಡಿಕೊಂಡರು. ಆದರೆ ಮುಸ್ಲಿಮರು ಸಾ.ಶ. 1850ರ ಸುಮಾರಿಗೆ ದಂಗೆ ನಡೆಸಿ ದೇವಾಲಯವನ್ನು ಅತಿಕ್ರಮಿಸಿದರು. 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸುಮಾರು 15. 35 ಲಕ್ಷ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿತ್ತು. ಈ ವರ್ಷದ ಜನವರಿಯಲ್ಲಿ ಸಂಭಾಲ್ನಲ್ಲಿ ಶಿವಮಂದಿರ, ಏಪ್ರಿಲ್ನಲ್ಲಿ ಹನುಮ ವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು. ಸಂಭಾಲ್ ಹರಿಹರ ಮಂದಿರದ ಸಮೀಕ್ಷೆಯ ಬಳಿಕ ಶಿವ ಮಂದಿರವೊಂದನ್ನು ಮುಸಲರು ಧ್ವಂಸಗೊಳಿಸಿದರು.
ಇತ್ತ ಸರ್ವೋಚ್ಛ ನ್ಯಾಯಾಲಯ ದೇವಾಲಯಗಳನ್ನು ಧ್ವಂಸಗೊಳಿಸಿ ಕಟ್ಟಿದ ಮಸೀದಿಗಳ ಕುರಿತಾದ ವಿಚಾರಣೆಗಳೆಲ್ಲವನ್ನೂ ನಿಲ್ಲಿಸುತ್ತಿದ್ದಂತೆ ಸಂಭಾಲ್ ನಲ್ಲಿ ಸರಕಾರೀ ಜಾಗವನ್ನು ಅತಿಕ್ರಮಿಸಿದ್ದ ಲಡಾನಿಯಾ ಮಸೀದಿಯನ್ನು ತಪಾಸಣೆ ಮಾಡುತ್ತಿದ್ದಾಗ ಮಸೀದಿಯ ಕಟ್ಟಡದ ಮೇಲೆ ನೂರು ಮನೆಗಳಿಗೆ ವಿದ್ಯುಚ್ಛಕ್ತಿ ವಿತರಿಸುತ್ತಿದ್ದ ಅಕ್ರಮ ವಿದ್ಯುತ್ ಉತ್ಪಾದನ ಘಟಕವೊಂದು ಸಿಕ್ಕಿಬಿತ್ತು. ಜೊತೆಗೆ ವಿದ್ಯುತ್ ಮೀಟರ್ ತಪ್ಪಿಸಿ ನಾಲ್ಕು ಮಸೀದಿಗಳಿಗೆ ಉಚಿತ ವಿದ್ಯುತ್ ಪೂರೈಕೆ ನಡೆಸುತ್ತಿದ್ದ ವ್ಯವಸ್ಥೆಯೂ ಸಿಕ್ಕಿಬಿತ್ತು. ಪೊಲೀಸರ ತಪಾಸಣೆ ತೀವ್ರಗೊಳ್ಳುತ್ತಿದ್ದಂತೆ ಮಸೀದಿಯು ಅತಿಕ್ರಮಿಸಿದ್ದ ಒಂದು ಪುರಾತನ ದೇವಾಲಯವು ಕಂಡುಬಂತು. ಅದರೊಳಗೆ ಶಿವಲಿಂಗ, ಹನುಮನ ವಿಗ್ರಹ ಹಾಗೂ ನಿಗೂಢ ಬಾವಿಗಳು ಕಾಣಸಿಕ್ಕಿದವು. ನಲವತ್ತಾರು ವರ್ಷಗಳ ಹಿಂದೆ ಮುಸ್ಲಿಮರು ದಂಗೆ ನಡೆಸಿ ಈ ಸ್ಥಳದಿಂದ ಹಿಂದೂಗಳನ್ನು ಓಡಿಸಿದ್ದರು. ಈಗ ಯೋಗಿ ಸರಕಾರ ಆ ದೇವಾಲಯವನ್ನು ವಶಕ್ಕೆ ಪಡೆದು ದೇಗುಲಕ್ಕೆ ಅಡ್ಡವಾಗಿ ಕಟ್ಟಿದ್ದ ದಪ್ಪ ಗೋಡೆಯನ್ನು ಕಿತ್ತು ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸಿತು. ನಲವತ್ತಾರು ವರ್ಷಗಳ ಬಳಿಕ ಹಿಂದೂಗಳು ಅಲ್ಲಿ ಶಿವನಿಗೆ ಅಭಿಷೇಕಗೈದರು. ಇದೇ ವೇಳೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮೊಘಲ್ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಡಿ.17ಕ್ಕೆ ಮುಂದೂಡಿಕೆಯಾಗಿದೆ.
ಸಮೀಕ್ಷೆ ನಡೆದು ಸತ್ಯ ಹೊರಬರಲು ಹಿಂದೂಗಳು ಸಾಂವಿಧಾನಿಕ ಹಕ್ಕು ಬಳಸಿ ನ್ಯಾಯಾಲಯದ ಕದ ತಟ್ಟುತ್ತಿದ್ದಾರೆ. ಮುಸಲರು ಹಾಗೂ ಮುಸಲಪ್ರಿಯರು ಸಮೀಕ್ಷೆಗೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದಂತೆ ಸಮೀಕ್ಷೆ ನಡೆದಾಗಲೂ ಗಲಭೆ ದೊಂಬಿ, ಎಬ್ಬಿಸುತ್ತಾರೆ. ವಕೀಲರನ್ನು ಕೊಂದು ಹಾಕುವುದಾಗಿ ಹೇಳಿಕೆ ನೀಡುತ್ತಾರೆ. ಪೊಲೀಸರ ಮೇಲೆ ಕಲ್ಲೆಸೆಯುತ್ತಾರೆ, ಗುಂಡು ಹಾರಿಸುತ್ತಾರೆ. ನೆಹರೂ ಪ್ರಣೀತ ಇತಿಹಾಸಕಾರರು ಅದುಮಿಟ್ಟ ಸತ್ಯ ಹೊರಬರಲೇಬೇಕು. ನಾಲ್ಕಲ್ಲ, ನಲವತ್ತು ಸಾವಿರ ಮಸೀದಿಗಳ ಕೆಳಗೆ ದೇವಾಲಯಗಳಿದ್ದರೂ ಅವೆಲ್ಲವೂ ಎದ್ದು ಬರಬೇಕು. ಅಲ್ಲಿ ದೇವರಿಗೆ ಪೂಜೆಯಾಗಬೇಕು. ನಮ್ಮ ಭವ್ಯ ಸಂಸ್ಕೃತಿ ಮೆರೆಯಬೇಕು. ಕಲ್ಕಿಯ ಅವತಾರವಾಗಬೇಕಾದುದು ಹಿಂದೂಗಳಲ್ಲೇ.