ಕಲ್ಪಿತ ಆರ್ಯ-ದ್ರಾವಿಡ ಜನಾಂಗವಾದಕ್ಕೆ ತಲೆ ಒತ್ತೆ ಇಟ್ಟ ತಮಿಳರು
ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಸರ್ಕಾರವು ತನ್ನ 2025-26 ರ ಬಜೆಟ್ ದಾಖಲೆಗಳಲ್ಲಿ ಭಾರತೀಯ ರೂಪಾಯಿ ಚಿಹ್ನೆ '₹' ಅನ್ನು ತೆಗೆದುಹಾಕಿ, ಅದರ ಬದಲಿಗೆ ತಮಿಳು ಲಿಪಿಯಲ್ಲಿ ಬರೆದ 'ರೂ' ಅನ್ನು ಬಳಸುವ ಮೂಲಕ ಪ್ರತ್ಯೇಕವಾದಕ್ಕೆ ಮತ್ತೆ ತುಪ್ಪ ಸುರಿದಿದೆ. ರೂಪಾಯಿಯ ಚಿಹ್ನೆ '₹' ಅನ್ನು ವಿನ್ಯಾಸಗೊಳಿಸಿದಾತ ತಮಿಳುನಾಡಿನ ನಿವಾಸಿಯಾಗಿರುವ, ತನ್ನದೇ ಪಕ್ಷದ ಶಾಸಕ ಧರ್ಮಲಿಂಗಂನ ಪುತ್ರ ಉದಯಕುಮಾರ್ ಧರ್ಮಲಿಂಗಂ ಎನ್ನುವುದನ್ನೂ ಮೂರ್ಖ ಸ್ಟಾಲಿನ್ ಮರೆತಂತಿದೆ. ಧರ್ಮಲಿಂಗಂ ತನ್ನ ಮಗ ರೂಪಾಯಿ ಚಿಹ್ನೆಯನ್ನು ವಿನ್ಯಾಸಗೊಳಿಸುವ ಸ್ಪರ್ಧೆಯಲ್ಲಿ ಗೆದ್ದಾಗ ಇದು ತಮಿಳುನಾಡಿಗೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದ. ಭಾಷಾ ರಾಜಕಾರಣದ ಮೂಲಕ ದೇಶ ಒಡೆಯುವ ಪಕ್ಷದ ಶಾಸಕನಾಗಿ ಆತನಿಗೆ ನಿಜವಾಗಿಯೂ ನಾಚಿಕೆಯಾಗಬೇಕು. ಹಿಂದಿ ಹೇರಿಕೆ ಎಂಬ ವಿಚಾರ ಹಿಡಿದು ಆರಂಭಿಸಿದ ಗದ್ದಲ ಇಂದು ಮೇರೆ ಮೀರಿದೆ. ಆದರೆ ಇದರ ಹಿಂದೆ ಇರುವುದು ಕೇವಲ ಭಾಷಾ ವಿರೋಧ ಮಾತ್ರವೇ ಎಂದು ಆಳಕ್ಕಿಳಿದು ನೋಡಿದರೆ ಅಲ್ಲಿ ದೇಶವನ್ನು ವಿಚ್ಛಿದ್ರಗೊಳಿಸುವ ಬೃಹತ್ ಹುನ್ನಾರವಿದೆ. ಮತ್ತದು ಭಾರತವನ್ನು ಒಡೆಯಲು ಯೂರೋಪಿಯನ್ನರು ಬಳಸಿದ ಬಹು ದೊಡ್ಡ ಷಡ್ಯಂತ್ರದ ಮುಂದುವರೆದ ಭಾಗವಾಗಿದೆ.
ಹದಿನೆಂಟನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ವಿಲಿಯಂ ಜೋನ್ಸ್ ನೆನಪಿರಬಹುದು. ಭಾರತದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿ ಭಾರತ ಶಾಸ್ತ್ರಜ್ಞ ಎನಿಸಿಕೊಂಡಾತ. ತಕ್ಕಮಟ್ಟಿಗೆ ಭಾರತದ ನೈಜ ಇತಿಹಾಸವನ್ನು ಬರೆದ ಈತ ಸರಿಯಾದ ಆಕರಗಳನ್ನೇ ಭಾರತದ ಇತಿಹಾಸದ ರಚನೆಗೆ ತೆಗೆದುಕೊಂಡರೂ ಬರೆಯುವಾಗ ಕ್ರೈಸ್ತಮತಕ್ಕೆ ಪೂರಕವಾಗಿ, ಓದುವವನಿಗೆ ಗೊಂದಲ ಮೂಡುವಂತೆ ಬರೆದ. ಸಂಸ್ಕೃತ ಕಲಿತಿದ್ದ ಈತನನ್ನು ನಮ್ಮವರು ಪಂಡಿತನೆಂದು ಕರೆದರು. ಆದರೆ ಆತ ಮಾಡಿದ್ದೇನು? ಸಂಸ್ಕೃತ ಮತ್ತು ಯುರೋಪಿಯನ್ ಭಾಷೆಗಳ ನಡುವಿನ ಸಂಬಂಧವನ್ನು ವಿವರಿಸಲೋಸುಗ ಬೇಬೆಲ್ ಗೋಪುರದ ಕತೆ ಕಟ್ಟಿದ. ಹಿಂದೂ ಪೌರಾಣಿಕ ಕತೆಗಳು ಹಾಗೂ ಶಾಸ್ತ್ರಗ್ರಂಥಗಳು ಕ್ರಿಶ್ಚಿಯನ್ ಸತ್ಯದ ವಿಕೃತ ರೂಪಗಳೆಂದು ವರ್ಗೀಕರಿಸಿದ. ಭಾರತದ ಮೂಲ ಸಮುದಾಯ ನೋವಾನ ಜಲಪ್ರಳಯದ ನಂತರ ಭಾರತಕ್ಕೆ ಓಡಿ ಬಂದ ಹ್ಯಾಮನ ವಂಶಜರೆಂದು ವರ್ಣಿಸಿದ. ಇದರ ಆಧಾರದ ಮೇಲೆ ಭಾರತೀಯ ಸಮುದಾಯದ ಜನಾಂಗೀಯ ಅರ್ಥವಿವರಣೆಗಳೂ ಆಮೇಲೆ ರಚಿಸಿಲ್ಪಟ್ಟವು.
ತಮಿಳು, ತೆಲುಗು ಭಾಷೆಗಳ ವ್ಯಾಕರಣಗಳನ್ನು ಅಧ್ಯಯನ ಮಾಡಿದ ಫ್ರಾನ್ಸಿಸ್ ವ್ಹ್ಯಾಟ್ ಎಲ್ಲಿಸ್ ಮತ್ತು ಅಲೆಗ್ಝಾಂಡರ್ ಕ್ಯಾಂಪ್ ಬೆಲ್ ನಂತಹಾ ವಸಾಹತು ಆಡಳಿತಗಾರರು ಈ ಭಾಷೆಗಳು ಭಾರತದ ಇತರ ಭಾಷೆಗಳಿಂದ ಬೇರೆಯದಾದ ಭಾಷಾ ವರ್ಗಕ್ಕೆ ಸೇರಿರಬಹುದೆಂಬ ವಾದ ಮಂಡಿಸಿದರು. ಬ್ರಿಟಿಷ್ ಅಧಿಕಾರಿ ಬ್ರಿಯಾನ್ ಹಾಡ್ಗ್ ಸನ್ ಆರಿಸಿದ ಕೆಲವು ತಮಿಳಿನ ವರ್ಗಗಳನ್ನು ಅನಾರ್ಯರೆಂದು ಪರಿಗಣಿಸಿ ಅವರನ್ನು "ತಮೂಲಿಯನ್" ಎಂದು ಕರೆದ. ಎಲ್ಲಿಸ್ ಮತ್ತು ಕ್ಯಾಂಪ್ ಬೆಲ್ ಭಾಷೆಯನ್ನು ಮುಂದಿಟ್ಟು ಭಾರತೀಯರನ್ನು ಒಡೆದರೆ ಹಾಡ್ಗ್ ಸನ್ ವಿಭಿನ್ನ ಜನಾಂಗಗಳಾಗಿ ಭಾರತೀಯರನ್ನು ವಿಭಜಿಸುವ ಕೆಲಸಕ್ಕೆ ಕೈ ಹಾಕಿದ. ಈ ಎರಡನ್ನೂ ಒಂದು ಮಾಡಿ "ದ್ರವಿಡಿಯನ್ ರೇಸ್"ಗೆ ಭಾಷಾ ಸಿದ್ಧಾಂತವನ್ನು ಜನಾಂಗೀಯ ಕಥಾನಕದೊಂದಿಗೆ ಜೋಡಿಸಿದಾತ ಆಂಗ್ಲಿಕನ್ ಚರ್ಚಿನ ಮತ ಪ್ರಚಾರಕನಾಗಿದ್ದ ರಾಬರ್ಟ್ ಕಾಲ್ಡ್ ವೆಲ್. ಇವತ್ತಿಗೂ ತಥಾಕಥಿತ ಆರ್ಯ ದ್ರಾವಿಡ ವಾದವನ್ನು ಬೆಂಬಲಿಸಿ ದ್ರಾವಿಡ ಸಂಬಂಧಿತ ಅಧ್ಯಯನಗೈಯ್ಯುವವರ ನಡುವೆ ಜನಪ್ರಿಯವಾಗಿರುವ "ಕಂಪ್ಯಾರೇಟಿವ್ ಗ್ರಾಮರ್ ಆಫ್ ದಿ ದ್ರಾವಿಡಿಯನ್ ರೇಸ್" ಎಂಬ ಗ್ರಂಥವನ್ನು ಬರೆದವ ಈತನೇ.
ಆತ ತನ್ನ ಪುಸ್ತಕದಲ್ಲಿ ದ್ರಾವಿಡರು ಆರ್ಯರಿಗಿಂತ ಮೊದಲೇ ಭಾರತದಲ್ಲಿ ವಾಸಿಸುತ್ತಿದ್ದರೆಂದು, ಆರ್ಯರ ಠಕ್ಕ ಪ್ರತಿನಿಧಿಗಳಾದ ಬ್ರಾಹ್ಮಣರಿಂದ ವಂಚಿಸಲ್ಪಟ್ಟರೆಂದೂ, ಅವರ ಬಿಡುಗಡೆಗಾಗಿಯೇ ಅವನಂಥ ಯೂರೋಪಿಯನ್ನರು ಬಂದರೆಂದೂ ಬರೆದ. ತಮಿಳಿನಿಂದ ಸಂಸ್ಕೃತ ಪದಗಳನ್ನು ತೆಗೆದು ಹಾಕಬೇಕೆಂದೂ ಸಲಹೆ ಇತ್ತ. ಇವರೆಲ್ಲರ ವಾದದಿಂದಾಗಿ "ಎಲ್ಲಾ ಭಾರತೀಯ ಭಾಷೆಗಳು ಸಂಸ್ಕೃತಜನ್ಯ" ಎಂದು 1801ರಲ್ಲಿ ಲೇಖನ ಬರೆದಿದ್ದ ಕೋಲ್ ಬ್ರೂಕನ ವಿಚಾರ ಮರೆಯಾಗತೊಡಗಿತು. ಸಂಸ್ಕೃತವೂ ಎಲ್ಲಾ ಭಾರತೀಯ ಭಾಷೆಗಳನ್ನು ಏಕೀಕರಿಸುತ್ತದೆ ಎಂಬ ವಿಲಿಯಂ ಕ್ಯಾರಿಯ ವಾದವನ್ನು ಎಲ್ಲಿಸ್ ಬಹಿರಂಗವಾಗಿಯೇ ಖಂಡಿಸಿದ. ಎಲ್ಲಿಸ್ ಮತ್ತು ಕ್ಯಾಂಪ್ ಬೆಲ್ "ಗ್ರಾಮರ್ ಆಫ್ ತೆಲುಗು ಲ್ಯಾಂಗ್ವೇಜ್" ಪುಸ್ತಕ ಬರೆದು ತಮಿಳು ತೆಲುಗುಗಳಿಗೆ ಸಂಸ್ಕೃತಕ್ಕಿಂತ ಬೇರೆಯದಾದ ಒಂದೇ ಮೂಲವಿದ್ದಿತೆಂದು ಅದರಲ್ಲಿ ವಾದಿಸಿದರು. ತಮಿಳು ಹೀಬ್ರೂ ಹಾಗೂ ಪ್ರಾಚೀನ ಅರಬ್ಬರ ಭಾಷೆಗೆ ಸಂಬಂಧ ಹೊಂದಿದೆಯೆಂದು ಎಲ್ಲಿಸ್ ವಾದಿಸಿದ. ಸಂಸ್ಕೃತವು ಹ್ಯಾಮ್ ನ ಭಾಷೆಯಾಗಿತ್ತೆಂದು ವಿಲಿಯಂ ಜೋನ್ಸ್ ಹಾಗೂ ನೋವಾನ ಹಿರಿಯ ಮಗ ಜಾಫೆಥ್ ನಿಂದ ಸಂಸ್ಕೃತ ಬಂದಿತೆಂದು ಉಳಿದ ವಿದ್ವಾಂಸರು ಪರಿಗಣಿಸಿದ್ದರಿಂದ ದ್ರಾವಿಡರನ್ನು ಜುಹೂ ವಂಶದವರೇ ಎಂದು ನಿಶ್ಕರ್ಷೆಗೆ ತರುವ ಮೊಸೇಯಿಕ್ ವಾದದ ಪೂರ್ವಗ್ರಹೀತ ಕಲ್ಪನೆಗೆ ಅವನು ಈಡಾಗಿದ್ದ!
1840 ರಲ್ಲಿ ಸ್ಟೀವನ್ ಸನ್ ಮತ್ತು ಹಾಡ್ಗ್ ಸನ್ ಮೂಲನಿವಾಸಿ ಭಾಷಾ ವರ್ಗವನ್ನು ಪ್ರತಿಪಾದಿಸಿ ದ್ರಾವಿಡ ಹಾಗೂ ಮುಂಡಾ ಪ್ರಕಾರದ ಎಲ್ಲಾ ಭಾಷೆಗಳನ್ನು "ಮೂಲನಿವಾಸಿ ಭಾಷಾ ವರ್ಗ"ದಲ್ಲಿ ಹಾಕಿ, ತಮಿಳರು ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನ ಪೂರ್ವದಲ್ಲಿ ತಮಿಳರ ಅನೇಕ ಭಾಷೆಗಳು ದೇಶದಾದ್ಯಂತ ಹಬ್ಬಿದ್ದವೆನ್ನುವ ಹೊಸ ವಾದವನ್ನು ಹುಟ್ಟು ಹಾಕಿದರು. ಜೊತೆಗೆ ಅಲ್ಪಸಂಖ್ಯಾತ ಬ್ರಾಹ್ಮಣ ಹಾಗೂ ಬಹುಸಂಖ್ಯಾತ ಬ್ರಾಹ್ಮಣೇತರರ ನಡುವೆ ಜನಾಂಗೀಯ, ಭಾಷಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಭಾಜಕ ಗೋಡೆಯನ್ನು ಕಟ್ಟಿ ನಿಲ್ಲಿಸಿದ ಕಾಲ್ಡ್ ವೆಲ್ ನ ಕೃತಿಗಳು ದ್ರಾವಿಡ ಪ್ರತ್ಯೇಕತಾವಾದಕ್ಕೆ ಶಾಸ್ತ್ರೀಯ ಬುನಾದಿ ಹಾಕಿ ಮತಾಂತರಕ್ಕೂ, ಹಿಂದೂ ವಿರೋಧೀ ದ್ರಾವಿಡ ರಾಜಕಾರಣಕ್ಕೂ, ಅನ್ಯ ಭಾಷಾ ವಿರೋಧೀ ಮತಾಂಧತೆಗೂ ಮುನ್ನುಡಿ ಬರೆಯಿತು.
1822ರಲ್ಲಿ ಗ್ರಿಮ್ಸ್ ಸಹೋದರರು ಪ್ರತಿಪಾದಿಸಿದ ಗ್ರಿಮ್ಸ್ ಲಾದ ಬಗ್ಗೆ ಸ್ವಲ್ಪವಾದರೂ ಈ ಹುಸಿ ಜಾತ್ಯಾತೀತವಾದಿಗಳಿಗೆ ತಿಳಿದಿದೆಯೇ? ಇದರ ಪ್ರಕಾರ ಮೂಲದಲ್ಲಿ ಒಂದೇ ಭಾಷೆಯಿಂದ ಉತ್ಪತ್ತಿಯಾಗಿದ್ದು ಧ್ವನಿ ಬದಲಾವಣೆಯ ಕಾರಣದಿಂದ ಅಕ್ಷರಗಳಲ್ಲುಂಟಾದ ಬದಲಾವಣೆಯನ್ನು ಅಧ್ಯಯನ ಮಾಡುವುದರ ಮೂಲಕ ಆ ಭಾಷೆಯ ಮೂಲವನ್ನು ಅರಿಯಬಹುದು. ಈ ರೀತಿ ನೋಡಿದಾಗ ಸಂಸ್ಕೃತ ಭಾರತೀಯ ಮಾತ್ರವಲ್ಲದೆ ಐರೋಪ್ಯ ಸಹಿತವಾಗಿ ಅನೇಕ ಭಾಷೆಗಳಿಗೆ ಮೂಲವಾಗಿರುವುದು ಕಂಡುಬರುತ್ತದೆ.
ಯೂರೋಪಿನ ಉಳಿದ ರಾಷ್ಟ್ರಗಳು ಭಾರತದ ಸಂಪತ್ತನ್ನು ಲೂಟಿಮಾಡುತ್ತಿರುವಾಗ ಜರ್ಮನ್ನರು ಸಂಸ್ಕೃತವನ್ನು ಅಧ್ಯಯನ ಮಾಡುವ ಮೂಲಕ ಭಾರತದ ಅಗಾಧ ಜ್ಞಾನ ಭಂಡಾರದಲ್ಲಿ ಹುಡುಕಾಡುವ ಒಂದು ಬೌದ್ಧಿಕ ಚಳುವಳಿಯನ್ನೇ ಆರಂಭಿಸಿದ್ದರು. ಹೆನ್ರಿಕ್ ಹೇಗ್ ಎಂಬ ಜರ್ಮನ್ ಪ್ರಾಚ್ಯತಜ್ಞ "ಫ್ರಾನ್ಸ್, ಹಾಲಂಡ್, ಇಂಗ್ಲೆಂಡುಗಳು ಹಡಗುಗಳಲ್ಲಿ ಭಾರತದ ಭೌತಿಕ ಸಂಪತ್ತನ್ನು ಕೊಂಡೊಯ್ಯುತ್ತಿರುವಾಗ ನಾವು ಭಾರತದ ಜ್ಞಾನ ಹಾಗೂ ತತ್ವಶಾಸ್ತ್ರದ ಖಜಾನೆಯನ್ನೇ ಕೊಂಡೊಯ್ಯುತ್ತಿದ್ದೇವೆ" ಎಂದಿದ್ದ. ಹೌದು, 18ನೇ ಶತಮಾನದಲ್ಲಿ ಯುರೋಪಿನಲ್ಲಿ ಸಂಸ್ಕೃತ ಅಧ್ಯಯನ ಆರಂಭವಾಗಲು ಮಹತ್ತರ ಕೊಡುಗೆ ನೀಡಿದವರು ಜರ್ಮನ್ ವಿದ್ವಾಂಸರು. ಮತಾಂತರಿಗಳೆಲ್ಲಾ ತಮ್ಮದೇ ಶ್ರೇಷ್ಠ ಎಂದು ಬೀಗುತ್ತಿದ್ದ ಕಾಲದಲ್ಲಿ ಸಂಸ್ಕೃತ ಭಾಷೆಯ ಮಹತ್ತಿಕೆ, ವೇದಗಳು, ಉಪನಿಷತ್‌ಗಳು ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಪಾಶ್ಚಾತ್ಯರ ದೃಷ್ಠಿಕೋನವನ್ನು ಬದಲಾಯಿಸಲು ಇದು ನೆರವಾಯಿತು. ಅಲ್ಲದೆ ಆರ್ಯ ದ್ರಾವಿಡ ಕಲ್ಪನೆಯನ್ನು ಮಾಡಿ ಭಾರತದ ಇತಿಹಾಸವನ್ನು ತಿರುಚಲೂ ಈ ಜರ್ಮನ್ನರೇ ಕಾರಣ. ಕೊಲ್ಕೊತ್ತದಲ್ಲಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದ, ಆರ್ಯರ ಆಕ್ರಮಣ ಸಿದ್ಧಾಂತವನ್ನು ಮೊದಲು ಹರಿಯಬಿಟ್ಟ ಸರ್ ವಿಲಿಯಂ ಜೋನ್ಸ್, ಋಗ್ವೇದವನ್ನು ಇಂಗ್ಲೀಷಿಗೆ ಅನುವಾದಿಸಿಯೂ, ಭಾರತದ ಇತಿಹಾಸವನ್ನು ಬ್ರಿಟಿಷರ ಫೌಂಡಿನಾಸೆಗೆ ಆರ್ಯ-ದ್ರಾವಿಡ ಕಲ್ಪನೆಯಾಗಿ ತಿರುಚಿ, ತನ್ನ ಕೊನೆಗಾಲದಲ್ಲಿ ಈ ಬಗ್ಗೆ ಪಶ್ಚಾತ್ತಾಪ ಪಟ್ಟ ಮ್ಯಾಕ್ಸ್ ಮುಲ್ಲರ್ ಕೂಡಾ ಜರ್ಮನಿಯವರೇ. ಇವರ ನಂತರದಲ್ಲಿ ಅನೇಕ ಜರ್ಮನ್ನರು ಭಾರತ ಜ್ಞಾನದ ಭಂಡಾರವನ್ನು ಪಡೆವ ಆಸೆಯಿಂದ ಬಂದರು. ಲುಡ್ವಿಗ್ ಅಲ್ದಾಫ್, ಜೀನ್ ಫಿಲಾಜಟ್, ಜಾರ್ಜ್ ಬಹರ್, ಲಾರೆಂಜ್ ಕೀಲ್‌ಹಾರ್ನ್, ಮಾರ್ಟಿನ್ ಹಾಗ್, ಯೂಜಿನ್ ಹಲ್ಶ್, ಹೆನ್ರಿಚ್ ಲೂದರ್ಸ್ ಮತ್ತು ಹರ್ಮನ್ ಓಲ್ಡನ್‌ಬರ್ಗ್ ಮೊದಲಾದ ಗಣ್ಯ ವಿದ್ವಾಂಸರ ಗಡಣವೇ ಸಂಸ್ಕೃತದ ಸಿರಿಯನ್ನುಂಡಿದೆ. ಲೂದರ್ಸ್ ಭಾಗಶಃ ಲಭ್ಯವಿದ್ದ ಭತೃಹರಿಯ ಕೃತಿಗಳನ್ನು ಶೋಧಿಸಿದ. ಇವರೆಲ್ಲರೂ ಇಂಡೋ - ಐರೋಪ್ಯ ಭಾಷೆಗಳಲ್ಲಿ ಸಂಸ್ಕೃತ ಅತಿ ಪುರಾತನವಾದುದು ಹಾಗೂ ಗ್ರೀಕ್ ಮತ್ತು ಲ್ಯಾಟಿನ್‌ಗಳ ಜತೆಗೆ ಮೂಲ ಬೇರುಗಳನ್ನು ಹಂಚಿಕೊಂಡಿದೆ ಎಂಬ ಅಭಿಪ್ರಾಯವುಳ್ಳವರಾಗಿದ್ದರು.
ಭಾರತದ ದಕ್ಷಿಣೋತ್ತರಗಳ ನಡುವೆ ಕಂದಕ ಸೃಷ್ಟಿಸಿ, ದೇಶದೊಳಗೆ ಬಿರುಕನ್ನು ಸೃಷ್ಟಿಸುವಲ್ಲಿ ತಮಿಳುನಾಡಿನ ದ್ರಾವಿಡ ರಾಜಕೀಯ ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದೆ. ಪ್ರತ್ಯೇಕ ರಾಷ್ಟ್ರದ ಪ್ರತಿಪಾದನೆ ಮಾಡುವ ಈ ಎಡಪಂಥೀಯರ ಹೊಸ ರಾಜಕೀಯ ತಾಣವೇ ಕೀಲಾಡಿ. ಮಧುರೈಗೆ ಹತ್ತಿರದಲ್ಲೇ ಇರುವ ಈ ಊರಿನಲ್ಲಿ ಪುರಾತತ್ವ ಇಲಾಖೆಯು ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿಸಿದೆ. ಕೀಲಾಡಿಯಲ್ಲಿ ನಡೆದ ಉತ್ಖನನದಲ್ಲಿ ದೊರಕಿದ ಸಾವಿರಾರು ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಗೈ ನದಿಯ ತಪ್ಪಲಿನ ಕೀಲಾಡಿಯಲ್ಲಿ ಅಭಿವೃದ್ಧಿ ಹೊಂದಿದ ನಗರವಿತ್ತು ಎಂದು ವಾದಿಸುವ ತಮಿಳುನಾಡು ಸರ್ಕಾರ ಉತ್ಖನನದಲ್ಲಿ ಭಾಗವಹಿಸಿದವರೆಲ್ಲರನ್ನೂ ತನ್ನ ಹಿಡಿತದೊಳಗಿರಿಸಿದೆ. ಕೀಲಾಡಿಯಲ್ಲಿ ದೊರಕಿದ ಆಧಾರಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳು ಕಂಡುಬಂದಿಲ್ಲ ಎಂದು ಹಬ್ಬಿಸುವ ಮೂಲಕ ತಮಿಳರಿಗೂ ಹಿಂದೂಗಳಿಗೂ ಸಂಬಂಧವೇ ಇಲ್ಲ ಎನ್ನುವ ಕಥೆಯನ್ನು ಸೃಷ್ಟಿ ಮಾಡಲಾಗಿದೆ. ತಮಿಳುನಾಡಿನ ಐತಿಹಾಸಿಕ ದೇವಾಲಯಗಳಲ್ಲಿ ಸರಿಯಾದ ಸುವ್ಯವಸ್ಥೆಯಿಲ್ಲದೆ ಅನೇಕ ಶಾಸನಗಳು ಹಾಳಾಗಿವೆ. ವಿಗ್ರಹಗಳು ಕಳವಾಗಿ ವಿದೇಶಗಳಿಗೆ ಮಾರಲ್ಪಟ್ಟಿವೆ. ಅದರ ಹಿಂದಂತೂ ಬೃಹತ್ ಜಾಲವಿದೆ. ಅದರ ಬೆನ್ನತ್ತಿ ಹೋದ ಪೊಲೀಸರು ನಾಮಾವಶೇಷವಾಗಿದ್ದಾರೆ. ದೇವಾಲಯಗಳಿಗೆ ವಿಕೃತ ಬಣ್ಣ ಬಳಿದು ಹಾಳು ಮಾಡುವ ತಮಿಳು ಸರಕಾರ ಕೀಲಾಡಿಯನ್ನು ಸುವ್ಯವಸ್ಥಿತವಾಗಿರಿಸಿದೆ. ಅಂದರೆ ತನಗೆ ಬೇಕಾದ ಕಥೆಯನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ತನಗೆ ಬೇಕಾದುದನ್ನು ಮಾತ್ರ ಸಂರಕ್ಷಿಸುತ್ತಿದೆ ಅಲ್ಲಿನ ಸರಕಾರ. ಚೋಳ, ಪಾಂಡ್ಯರನ್ನು ವರ್ಣಿಸುತ್ತಾ ತಮ್ಮ ಇತಿಹಾಸದ ವೈಭವವನ್ನು ಸಾರುವ ಈ ತಮಿಳರು ಅವೇ ಚೋಳ, ಪಾಂಡ್ಯರು ತಮಿಳುನಾಡಿನಾದ್ಯಂತ ಉಳಿಸಿ ಹೋಗಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಮರೆಮಾಚುತ್ತಾರೆ.
19ನೇ ಶತಮಾನದ ಉತ್ತರಾರ್ಧದಲ್ಲಿ ಯೂರೋಪಿಯನ್ನರ ಕುತಂತ್ರದ ಬರಹಗಳಿಗೆ ತಮ್ಮ ಮೆದುಳನ್ನು ಒತ್ತೆ ಇಟ್ಟ ತಮಿಳರಿಗೆ ತಮ್ಮದೊಂದೇ ಶ್ರೇಷ್ಠ ಭಾಷೆ, ತಾವೇ ಶ್ರೇಷ್ಠರು; ಉಳಿದುದೆಲ್ಲವೂ ನಗಣ್ಯ ಅನ್ನುವಂತಹ ಮನೋಭಾವ ಬೆಳೆದು ಬಂದಿದೆ. ಕನ್ನಡ, ತೆಲುಗು, ತುಳು ಎಲ್ಲವೂ ತಮಿಳಿನ ಮಕ್ಕಳು ಎನ್ನುವ ಅವರಿಗೆ ಯಾವುದೇ ಭಾಷೆಯ ಯಾವುದೇ ಶಬ್ದ ಕೊಡಿ; ತಮ್ಮ ಕಲ್ಪನಾಶಕ್ತಿಯ ಸಹಾಯದಿಂದ ಅದಕ್ಕೊಂದು ತಮಿಳು ಮೂಲಪದ ಹುಡುಕಿಯೇ ತೀರುತ್ತಾರೆ. 50000 ವರ್ಷಗಳ ಹಿಂದೆ ಈಜಿಪ್ಟ್ ಆಳಿದ್ದು ತಮಿಳು ರಾಜರು ಎನ್ನುವ, ಈಜಿಪ್ಟ್ಯಿನ ಪಿರಮಿಡ್ ಹೆಸರು ಪೆರು ಮತ್ತು ಮೇಡು ಎನ್ನುವ ತಮಿಳು ಶಬ್ದಗಳಿಂದ ಆಗಿದ್ದು ಎನ್ನುವ ಈ ಮೂರ್ಖರನ್ನು ಸುಧಾರಿಸಲು ಸಾಧ್ಯವಿಲ್ಲ. ಕನ್ನಡದ ವಡ್ಡಾರಾಧನೆಯಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖವಿದ್ದರೂ ಅದನ್ನು ಒಪ್ಪದೆ ಅದು ತಮಿಳುನಾಡಿನಲ್ಲೇ ಹುಟ್ಟಿದ್ದು ಅಂತ ಶತಾಯ ಗತಾಯ ಸಮರ್ಥಿಸಿಕೊಳ್ಳುವ ಬುದ್ಧಿಗೇಡಿಗಳನ್ನು ಸರಿಪಡಿಸಲು ಸಾಧ್ಯವೇ? ಕಲ್ಕಿ ಕೃಷ್ಣಮೂರ್ತಿಯಂತಹ ತಮಿಳಿನ ದೊಡ್ಡ ಗ್ರಂಥಕಾರರೇ ತಮ್ಮ ಶಿವಗಾಮಿ ಸಬದಂ ನಲ್ಲಿ ಕನ್ನಡವನ್ನು ಉಲ್ಲೇಖ ಮಾಡದೇ ಪುಲಿಕೇಶಿ ಮಾತನಾಡಿದ್ದು ತಮಿಳು - ಪ್ರಾಕೃತ ಮಿಶ್ರಿತ ಭಾಷೆ ಅಂದಿದ್ದಾರೆ. ಇಂತಹ ಪುಸ್ತಕಗಳು ತಮಿಳುನಾಡಿನ ಪಠ್ಯ ಪುಸ್ತಕಗಳಲ್ಲಿಯೇ ಇರುವುದರಿಂದ ಅದನ್ನು ಓದಿ ಬೆಳೆದ ಯುವಕರಿಗೆ ಭಾಷೆಯ ಬಗ್ಗೆ ತಪ್ಪು ಕಲ್ಪನೆ ಬರುವುದು ಸಹಜ. ದೇವನಾಯ ಪಾವನಾರ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಕಲ್ಪಿತ ಲೆಮುರಿಯಾ ಖಂಡವನ್ನು ತಮಿಳರ ಕುಮಾರಿಖಂಡಮ್ ಗೆ ಹೋಲಿಸಿ ತಮಿಳರು ಕ್ರಿಸ್ತ ಪೂರ್ವ 50000 ರಲ್ಲಿಯೇ ಕುಮಾರಿಕಂಡಮ್ ನಲ್ಲಿದ್ದವರೆಂದೂ ಜಗತ್ತಿನ ಎಲ್ಲ ಭಾಷೆಗಳ ಮೂಲ ತಮಿಳು ಅಂತ ಬರೆದ. ಈತ ಬರೆದದ್ದು ಒಂದೋ ಎರಡೋ ಪುಸ್ತಕ ಅಲ್ಲ ಸರಿಸುಮಾರು 40 ಪುಸ್ತಕಗಳು. ವಿಪರ್ಯಾಸವೆಂದರೆ ಇಂದಿಗೂ ಈ ಪುಸ್ತಕಗಳನ್ನು ಓದಿ ಜನ ಮರುಳಾಗುತ್ತಿದ್ದಾರೆ. ಇನ್ನು ಕೆಲವು ತಮಿಳು ಅರೆಪಂಡಿತರ ಪ್ರಕಾರ ಸಾವಿರಾರು ವರ್ಷಗಳ ಹಿಂದೆಯೆ ಭೂಮಿಗೆ ಭೇಟಿ ನೀಡಿರುವ ಏಲಿಯನ್ ಗಳು ತಮಿಳು ಭಾಷೆಯನ್ನು ಕಲಿತು ಅದನ್ನು ತಮ್ಮ ಗ್ರಹಕೆ ಒಯ್ದಿವೆಯಂತೆ….!!
ದ್ರಾವಿಡ ಪಕ್ಷ ಡಿ.ಎಂ.ಕೆ ತನ್ನ ಮತಬ್ಯಾಂಕ್ ಅನ್ನು ಭದ್ರಗೊಳಿಸಲು 1980ರ ದಶಕದಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ತಮಿಳು ದುರಭಿಮಾನ ಮೂಡುವಂತೆ ಮಾಡಲು ತಮಿಳು ಭಾಷಾ ಶಿಕ್ಷಕರಿಗೆ ಒಂದು ವರ್ಷದವರೆಗೆ ತರಬೇತಿ ನೀಡಲು ಕೊಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿತು. ಇದರ ಜೊತೆಗೆ ಹಿಂದೆ ಯೂರೋಪಿಯನ್ನರು ಶುರು ಹಚ್ಚಿಕೊಂಡ ಆರ್ಯ-ದ್ರಾವಿಡ ವಾದ, ಅದಕ್ಕೆ ಬೇಸ್ತು ಬಿದ್ದ ವಿದ್ವಾಂಸ ಗಡಣ ಹಾಗೂ ಇವೆಲ್ಲವನ್ನೂ ನಾಜೂಕಾಗಿ ಬಳಸಿಕೊಂಡು ಮತಾಂತರಗೈವ ಕ್ರೈಸ್ತ ಪಾದ್ರಿಗಳ ಹುಚ್ಚಾಟದಿಂದ ಸಾಮಾನ್ಯ ತಮಿಳರಲ್ಲೂ ಈ ದುರಭಿಮಾನ ಹೆಚ್ಚುತ್ತಾ ಬಂದು ಇಂದು ಪ್ರತ್ಯೇಕವಾಗುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ