ಪುಟಗಳು

ಭಾನುವಾರ, ಸೆಪ್ಟೆಂಬರ್ 14, 2014

ಕಲ್ಲೇಟು ತಿಂದೂ ಬೆಲ್ಲದ ಸವಿಯ ಉಣಬಡಿಸಿತು ಭಾರತೀಯ ಸೇನೆ

ಕಲ್ಲೇಟು ತಿಂದೂ ಬೆಲ್ಲದ ಸವಿಯ ಉಣಬಡಿಸಿತು ಭಾರತೀಯ ಸೇನೆ!
             ಏಳು ದಿನಗಳ ಮಗುವನ್ನು ರಕ್ಷಿಸಿದರು. ಏಳು ವರ್ಷಗಳ ಬಾಲೆಯನ್ನೂ. ಎಪ್ಪತ್ತು ವರ್ಷದ ವೃದ್ಧರನ್ನೂ! ರಕ್ಷಿಸುವಾಗ ಜಾತಿ-ಮತಗಳಾವುವೂ ಅಡ್ಡಿಯಾಗಲಿಲ್ಲ. ಪ್ರತ್ಯೇಕವಾದಿ-ಏಕತಾವಾದಿ, ಪರಿಸರ ರಕ್ಷಕ-ಪರಿಸರ ಭಕ್ಷಕ, ದೇಶಪ್ರೇಮಿ-ದೇಶದ್ರೋಹಿ ಅಂತ ಯಾರನ್ನೂ ವಿಂಗಡಿಸಲಿಲ್ಲ. ಎಲ್ಲರನ್ನೂ ಪ್ರವಾಹದ ವಿರುದ್ದ ಈಜಿ ದಡ ಸೇರಿಸಿದರು. ಪ್ರೀತಿ ತೋರಿದವರನ್ನೂ ರಕ್ಷಿಸಿದರು. ತಮ್ಮ ಮೇಲೆ ಕಲ್ಲೆಸೆದವರನ್ನೂ ರಕ್ಷಿಸಿದರು! ಬಾಂಬಿಟ್ಟವರನ್ನೂ! ಏಕೆಂದರೆ ಭಾರತೀಯ ಸೈನಿಕರಲ್ಲೂ, ಸಂಘದ ಸ್ವಯಂಸೇವಕರಲ್ಲೂ ಇರುವುದು ದೇಶದ ಮೇಲಿನ ಅಪರಿಮಿತ ಭಕ್ತಿ! ತತ್ಪರಿಣಾಮದಿಂದ ರಾಗ-ದ್ವೇಷಗಳೆರಡೂ ಮರೆಯಾಗಿ ಸೇವೆಯ ಮೂರ್ತರೂಪವಷ್ಟೇ ಅಲ್ಲಿ ಉಳಿದು ಬಿಡುತ್ತದೆ! ಹೌದು, ಶತಮಾನದಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ಸಿಲುಕಿ ನಲುಗುತ್ತಿದೆ ಜಮ್ಮು ಕಾಶ್ಮೀರ! ಝೀಲಂ ಮತ್ತು ತಾವಿ ನದಿಗಳು ಉಕ್ಕೇರಿ ಹರಿದುದರ ಪರಿಣಾಮ ಕಾಶ್ಮೀರ ಕಣಿವೆ ಸಂಪೂರ್ಣ ಜಲಾವೃತಗೊಂಡು ಜಗತ್ತಿನ ದೊಡ್ಡ ಸರೋವರದಂತೆ ಭಾಸವಾಗುತ್ತಿದೆ.  ಪ್ರವಾಹದುರಿಯಲ್ಲಿ ಸಿಲುಕಿದ ಸ್ಥಳೀಯರು-ಪ್ರವಾಸಿಗರನ್ನು ರಕ್ಷಿಸುವ ಕಾರ್ಯದಲ್ಲಿ ಸೇನೆಯೊಂದಿಗೆ ಕೈ ಜೋಡಿಸಿದ್ದು ಕೋಮುವಾದಿಗಳು ಎಂದು ಕರೆಯಲ್ಪಡುವ ಅದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು!
                   1893ರಿಂದಲೂ ಆಗಾಗ್ಗೆ ಇಂತಹ ಪ್ರವಾಹ ಪರಿಸ್ಥಿತಿ ಉದ್ಭವವಾಗುತ್ತಲೇ ಇದೆ. 1903ರಲ್ಲಿ ದಾಲ್ ಸರೋವರದ ನೀರು ಉಕ್ಕೇರಿ ಕಾಶ್ಮೀರ ಕಣಿವೆ ಅಕ್ಷರಷಃ ಸರೋವರವಾಗಿ ಮಾರ್ಪಟ್ಟಿತ್ತು. ಮೂರು ಸಾವಿರಕ್ಕೂ ಅಧಿಕ ಮನೆಗಳು, 70 ಕಿಮೀಗೂ ಅಧಿಕ ರಸ್ತೆ, ಅಪಾರ ಪ್ರಮಾಣದ ಬೆಳೆ ನಾಶವಾಗಿ ಶ್ರೀನಗರ ಸ್ಮಶಾನ ಸದೃಶವಾಗಿತ್ತು. ವ್ಯವಸ್ಥಿತ ಹಾಗೂ ಸ್ಪಷ್ಟ ಯೋಜನೆಗಳಿಲ್ಲದ ನಗರೀಕರಣ, ಪರ್ವತ-ಕಾಡು ಕಡಿದು ಹೆಚ್ಚಿಸಿದ ಕೃಷಿಭೂಮಿ, ಸರೋವರಗಳ ನಿರ್ವಹಣೆ ಮಾಡದೆ ಅವುಗಳ ದಡದಲ್ಲಿ ಅಲ್ಲದೆ ಸರೋವರಗಳಿಗೂ ಕನ್ನ ಹಾಕಿ ಬೆಳೆದ ಅಕ್ರಮ ಕಟ್ಟಡಗಳು, ಜಲವಿದ್ಯುತ್ ಯೋಜನೆಗಳು, ಸ್ಥಳೀಯ ಸರಕಾರದ ವೈಫಲ್ಯ ಪ್ರತಿ ಬಾರಿಯೂ ಪ್ರವಾಹ ಹಾಗೂ ಪ್ರವಾಹದಿಂದ ಉದ್ಭವವಾದ ಪರಿಸ್ಥಿತಿಗೆ ಮೂಲ ಕಾರಣಗಳಾಗಿ ಸ್ಪಷ್ಟವಾಗಿ ಗೋಚರವಾಗುತ್ತವೆ. ದಾಲ್ ಸರೋವರದ ನೀರು ಏರಿಕೆಯಾಗುತ್ತಿದ್ದ ಹಾಗೆ ಅದನ್ನು ಆಂಚಾರ್ ಮತ್ತು ವುಲಾರ್ ಸರೋವರಗಳಿಗೆ ಬಿಡಲೆಂದಿರುವ ಫ್ಲಡ್ ಗೇಟುಗಳನ್ನು ತೆರೆಯದೇ ಇದ್ದುದು ಸ್ಥಳೀಯ ಸರಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಓಮರ್ ಅಬ್ದುಲ್ಲಾ ಸರಕಾರದ ಅಸಮರ್ಥತೆ ಹಾಗೂ ದುರಾಡಳಿತವೇ ಇದಕ್ಕೆಲ್ಲಾ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
                ಕಾಶ್ಮೀರ ಕಣಿವೆಯಲ್ಲಿ 1000ಕ್ಕೂ ಅಧಿಕ ಹಳ್ಳಿಗಳು ಪ್ರವಾಹಕ್ಕೆ ಬಲಿಯಾಗಿವೆ. 400ಕ್ಕೂ ಅಧಿಕ ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ. ಕೆಲವೆಡೇ ಏಳು ಅಡಿಗಳಿಗಿಂತಲೂ ಅಧಿಕ ನೀರು ತುಂಬಿಕೊಂಡಿದೆ. ಅತ್ತ ಭಾರತೀಯ ಸೈನ್ಯಕ್ಕೂ ಈ ಪ್ರವಾಹ ಅಪಾರ ನಷ್ಟವನ್ನುಂಟುಮಾಡಿದೆ. ಕಾಶ್ಮೀರ ಕಣಿವೆಯಲ್ಲಿದ್ದ ಹೆಚ್ಚಿನ ಸೈನಿಕ ಕ್ಯಾಂಪುಗಳು ಮುಳುಗಡೆಯಾದ ಕಾರಣ ಅಪಾರ ಪ್ರಮಾಣದ ಶಸ್ತಾಸ್ತ್ರಗಳು ನಷ್ಟವಾಗಿವೆ. ಅನೇಕ ರೈಫಲ್ಸುಗಳು, ಗ್ರೇನೇಡುಗಳು, ಬಾಂಬುಗಳು ನೀರಿನಲ್ಲಿ ಕೊಚ್ಚಿಕೊಂಡುಹೋಗಿವೆ. 1.5 ಲಕ್ಷಕ್ಕೂ ಹೆಚ್ಚು ಜನರನ್ನು ಇದುವರೆಗೆ ರಕ್ಷಿಸಲಾಗಿದೆ.  ಬೆಳಿಗ್ಗೆ ನಾಲ್ಕು ಗಂಟೆಯಿಂದ ಮಧ್ಯರಾತ್ರಿಯವರೆಗೂ ಪರಿಹಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಧಪಡೆಗೆ ವಿಶ್ರಾಂತಿಯೆಂಬುದೇ ಮರೀಚಿಕೆಯಾಗಿದೆ. ಭಾರತೀಯ ವಾಯುಪಡೆ 35 ಹೆಲಿಕಾಫ್ಟರುಗಳನ್ನು, 53 ಏರ್ ಕ್ರಾಫ್ಟ್ ಗಳನ್ನು ಪರಿಹಾರ ಕಾರ್ಯಕ್ಕಾಗಿ ಬಳಸುತ್ತಿದೆ ಭಾರತೀಯ ರೈಲ್ವೇ ಹೆಚ್ಚುವರಿ ರೈಲುಗಳನ್ನು ವ್ಯವಸ್ಥೆಗೊಳಿಸಿದ್ದು, ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿದೆ. ಔಷಧ-ಆಹಾರ-ವಸನ-ವಸತಿ ನಿರ್ಮಾಣ ಸಾಮಗ್ರಿಗಳನ್ನು ಪ್ರತ್ಯೇಕ ಬೋಗಿಗಳಲ್ಲಿ ಸಾಗಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಹಗಲೂ ರಾತ್ರಿ ಪೀಡಿತರನ್ನು ಸಂರಕ್ಷಿಸುವ ಕಾರ್ಯದಲ್ಲಿ ಸೇನೆಯ ಕೈ ಬಲಪಡಿಸಿದ್ದು ಮಾತ್ರವಲ್ಲದೆ ಕಟ್ಟಡ ನಿರ್ಮಾಣ, ಆಹಾರ ಪೂರೈಕೆ ಮುಂತಾದುದನ್ನು ಎಂದಿನಂತೆ ಯಾವುದೇ ಪ್ರಚಾರವಿಲ್ಲದೆ ಮಾಡುತ್ತಿದೆ.  ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಆಹಾರದ ಪೊಟ್ಟಣಗಳನ್ನು ಉಚಿತವಾಗಿ ವಿತರಿಸುತ್ತಿದೆ ಅಮೃತಸರದ ಚಿನ್ನದ ಮಂದಿರ. ಅನೇಕ ಸಂಘ ಸಂಸ್ಥೆಗಳು ಭಂಡಾರಗಳನ್ನು ತೆರೆದು ಧರ್ಮಾರ್ಥ ಆಹಾರ ವಿತರಣೆಯನ್ನು ಆರಂಭಿಸಿವೆ. ಆದರೆ ತಾನೊಬ್ಬನೇ ಕಾಶ್ಮೀರದ ರಕ್ಷಕನೆನ್ನುವಂತೆ ಬೊಬ್ಬಿರಿಯುತ್ತಿದ್ದ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಪಕ್ಷ ಕಾಶ್ಮೀರದಲ್ಲಿ ಇಂಥಾ ಸಂಧಿಗ್ಧ ಪರಿಸ್ಥಿತಿ ಬಂದಿದ್ದಾಗ ಕಾಣೆಯಾಗಿದೆ.
                  ಯಾವ ಸೈನ್ಯವನ್ನು ಕಾಶ್ಮೀರಿಗಳು ಅನುಮಾನದ ಕಣ್ಣಿನಿಂದ ನೋಡುತ್ತಿದ್ದರೋ, ಪ್ರತ್ಯೇಕತಾವಾದಿಗಳು ಪ್ರತಿದಿನವೂ ಯಾವ ಸೈನ್ಯವನ್ನು ಗುರಿಯಾಗಿಸಿ ಅರಚುತ್ತಿದ್ದರೋ, ಜಿಹಾದಿಗಳು ಯಾವ ಸೈನ್ಯದ ಮೇಲೆ ಬಾಂಬು ಒಗೆಯುತ್ತಿದ್ದರೋ ಅಂತಹ ಭಾರತೀಯ ಸೈನ್ಯವೇ ಇಂದು ಅವರ ರಕ್ಷಣೆಗೆ ಬೇಕಾಯಿತು ಎನ್ನುವುದು ಅಪ್ಪಟ ಸತ್ಯ. ಆದರೆ ಬಂದ ಪ್ರವಾಹದಲ್ಲಿ ಕಾಶ್ಮೀರದ ಸಮಸ್ಯೆಗಳು-ಪ್ರತ್ಯೇಕತಾವಾದಿ ಮನಸ್ಸುಗಳು ಕೊಚ್ಚಿಕೊಂಡು ಹೋಗಿ ಅವರ ಮನಸ್ಥಿತಿ ಬದಲಾಗಿದೆ ಎನ್ನೋಣವೆ? ಇಲ್ಲ! ಜಗತ್ತು ಮುಳುಗಿ ಹೋದರು ತಾವು ಬದಲಾಗುವುದಿಲ್ಲ ಎನ್ನುತ್ತಿದ್ದಾರೆ ಜಿಹಾದಿಗಳು! ಸೈನ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಸಮರೋಪಾದಿಯಲ್ಲಿ ಮುನ್ನುಗ್ಗುತ್ತಿರುವಂತೆ ಯಾವುದೇ ಭೇದವೆಣಿಸದೇ ಪ್ರವಾಹದುರಿಗೆ ಸಿಲುಕಿದ ಉಳಿದವರಂತೆ ತಮ್ಮನ್ನೂ ರಕ್ಷಿಸಿದ ಯೋಧರತ್ತ ಕಲ್ಲು ತೂರುತ್ತಿದ್ದಾರೆ ಪ್ರತ್ಯೇಕವಾದಿಗಳು. ಅಸಹಾಯಕರನ್ನು ರಕ್ಷಿಸಲು ಬರುತ್ತಿದ್ದ ಹೆಲಿಕಾಪ್ಟರುಗಳ ಮೇಲೂ ಕಲ್ಲು ತೂರಿದರು. ಕೆಲವು ಸ್ಥಳಗಳಲ್ಲಿ ಹೆಲಿಕಾಫ್ಟರುಗಳನ್ನು ಇಳಿಯಗೊಡಲಿಲ್ಲ. ಪ್ರವಾಸಿಗರಿಗೆ ಪಾಕಿಸ್ತಾನ ಪರ ಘೋಷಣೆ ಕೂಗಿ, ಅಲ್ಲಾನಿಗೆ ಜೈಕಾರ ಹಾಕಿ ಇಲ್ಲದಿದ್ದರೆ ನೀವು ಪ್ರಾಣ ಸಹಿತ ಹಿಂದಿರುಗಲಾರಿರಿ ಎಂದು ಧಮಕಿ ಹಾಕುತ್ತಿದ್ದಾರೆ. ಮೊದಲು ಸ್ಥಳೀಯರಾದ ನಮ್ಮನ್ನು ರಕ್ಷಿಸಿ, ಪ್ರವಾಸಿಗರು ಸತ್ತರೆ ಸಾಯಲಿ ಎಂದು ಯೋಧರ ಜೊತೆ ಜಗಳಕ್ಕಿಳಿಯುತ್ತಿದ್ದಾರೆ. ಯಾವುದೇ ಮತಭೇದವೆಣಿಸದೇ ಭಾರತೀಯರು ಕಾಶ್ಮೀರಿ ಮುಸ್ಲಿಮರನ್ನು ರಕ್ಷಿಸಿದ್ದಾರೆ. ಆದರೆ ಅದು ಏಕಮುಖ ಮಾತ್ರ ಎನ್ನುತ್ತಾರೆ ಭಾರತವನ್ನು ಪ್ರೀತಿಸುವ ಪ್ಯಾರಿಸ್ಸಿನ ಪತ್ರಕಾರ ಪ್ರಾಂಕೋಯಿಸ್ ಗೌತಿಯರ್. ಅದನ್ನು ಸಹಾಯ ಮಾಡುತ್ತಿರುವಾಗಲೇ ನಿಜ ಮಾಡುತ್ತಿದ್ದಾರೆ ಕಾಶ್ಮೀರಿಗಳು! ತಾವು ಕಾಶ್ಮೀರದ ಮುಸ್ಲಿಮರನ್ನು ರಕ್ಷಿಸಲಿಕ್ಕಿರುವವರು ಎಂಬಂತೆ ಪೋಸು ಕೊಡುತ್ತಿದ್ದ ಪ್ರತ್ಯೇಕವಾದಿಗಳು ಪ್ರವಾಹ ಬಂದಾಗ ಜನರ ರಕ್ಷಣೆಗೇಕೆ ಇಳಿಯಲಿಲ್ಲ. ಸದಾ ಪ್ರತ್ಯೇಕವಾದಿಗಳ ಪರವಾಗಿರುವ ಕೆಲವು ಮಾಧ್ಯಮ ಮಂದಿ ಪ್ರವಾಹ ಪೀಡಿತ ಸ್ಥಳಗಳಲ್ಲಿ ಪ್ರವಾಸ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇತ್ತ ಸೈನ್ಯ ರಕ್ಷಣೆ ಹಾಗೂ ಪರಿಹಾರದ ಕಾರ್ಯದಲ್ಲಿ ತೊಡಗಿದ್ದರೆ ಅತ್ತ ಭಯೋತ್ಪಾದಕರು ಇದೇ ಸುಸಂದರ್ಭವೆಂದು ಗಡಿಯಲ್ಲಿ ನುಸುಳಿ ಬರುತ್ತಿದ್ದಾರೆ.
                ಅಲ್ಲದೇ ಈ ಪ್ರತ್ಯೇಕತಾವಾದಿಗಳ ಮನಸ್ಥಿತಿ ಹೇಗಿದೆಯೆಂದರೆ ಸೈನ್ಯ ಇರುವುದೇ ಸೇವೆ ಮಾಡಲು. ಹಾಗಾಗಿ ಸೈನ್ಯಕ್ಕೇನೂ ಈ ಪರಿಹಾರ ಕಾರ್ಯದ ಹೆಗ್ಗಳಿಕೆಯನ್ನು ಕೊಡಬೇಕಾಗಿಲ್ಲ ಎಂಬುದು ಅವರ ನಿಲುವು. ಅಲ್ಲದೆ ತಮ್ಮದೇ ಹುಡುಗರು ಅಷ್ಟು ಸಹಾಯ ಮಾಡಿದರು, ನೀರು ತುಂಬಿದ ಸ್ಥಳಗಳಲ್ಲಿ ಪ್ರತಿದಿನ ಈಜಿ ಹಲವಾರು ಜನರನ್ನು ರಕ್ಷಿಸಿದರು ಎಂದು ಸುಳ್ಳೇ ಸುಳ್ಳು ಸುದ್ದಿಗಳನ್ನು ಟ್ವಿಟರ್, ಬ್ಲಾಗುಗಳಲ್ಲಿ ಗೀಚುತ್ತಿದ್ದಾರೆ. ವಾಸ್ತವವಾಗಿ ಅವರು ಮಾಡುತ್ತಿರುವುದು ಯೋಧರ ಕಡೆಗೆ ಕಲ್ಲು ತೂರಾಟ, ಯೋಧರ ಜೊತೆ ಜಗಳ, ಹಾಗೂ ಅಳಿದುಳಿದ ಮನೆಗಳಿಂದ ದೋಚುವಿಕೆ, ಪ್ರವಾಸಿಗರಿಗೆ ಧಮಕಿ ಹಾಕುವುದು ಇವೇ ಮುಂತಾದುವು! ಅಲ್ಲದೆ ಕೆಲವು ಕಡೆ ಜವಾನರಿಗೆ ಬಡಿದು ಪೀಡಿತರ ರಕ್ಷಣೆಗೆಂದು ಒಯ್ಯುತ್ತಿದ್ದ ದೋಣಿಯನ್ನು ಮುರಿದು ಹಾಕಲಾಗಿದೆ. ಅಲ್ಲಲ್ಲಿ ನಮಗೆ ಭಾರತದ ಸೈನ್ಯದ ನೆರವು ಬೇಕಿಲ್ಲ ಎನ್ನುವ ಬ್ಯಾನರುಗಳು ಕೂಡಾ ಕಾಣಸಿಗುತ್ತಿವೆ. ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಕಟ್ಟಕಡೆಯ ವ್ಯಕ್ತಿಯನ್ನು ರಕ್ಷಿಸುವವರೆಗೆ ನಾವು ವಿರಮಿಸುವುದಿಲ್ಲ. ಅವರು ನಮ್ಮತ್ತ ಕಲ್ಲೆಸೆಯಲಿ-ಹಲ್ಲೆ ಮಾಡಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ರಕ್ಷಣೆಗೆ ಬಂದ ಭಾರತೀಯ ಸೈನ್ಯದ ಶ್ರೇಷ್ಠ ಕಾರ್ಯದಿಂದಲೂ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡಿಲ್ಲವೆಂದರೆ ಅಂಥವರು ಮುಂದೆ ಕಾಶ್ಮೀರ ಕಣಿವೆಯಲ್ಲಿ ಪಂಡಿತರ ಮರುಸ್ಥಾಪನೆಯಾದನಂತರ ಅವರನ್ನು ಬದುಕಗೊಡುವರೇ? ಹಾಗಾಗಿ ಈ ಪ್ರತ್ಯೇಕತವಾದಿಗಳನ್ನು ನಿಗ್ರಹಿಸಬೇಕಾದ ತುರ್ತು ಅವಶ್ಯಕತೆ ಕೇಂದ್ರ ಸರಕಾರದ ಮುಂದೆ ಇದೆ. ಪ್ರತ್ಯೇಕವಾದಿಗಳು ಕಾಶ್ಮೀರಿ ಪಂಡಿತರಿಗೆ ಕೌಸರ್ ನಾಗ್ ಸರೋವರ ಯಾತ್ರೆಗೆ ಅಡ್ಡಿಪಡಿಸಿದರು. ಹಾಗಾಗಿ ಕೌಸರ್ ನಾಗಿನಿಂದ ಹೊರಡುವ ನದಿ "ವೇಶವ್" ತಾನೇ ಪಂಡಿತರ ಬಳಿ ಹರಿದು ಬಂತೋ ಎಂಬಂತೆ ಭಾಸವಾಗುತ್ತಿದೆ ಕಾಶ್ಮೀರದ ಈಗಿನ ಪರಿಸ್ಥಿತಿಯನ್ನು ನೋಡಿದರೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ