ಅಂತಃಕಲಹವಲ್ಲ; ಸೂಫಿ ಸಂತನ ವಿದ್ರೋಹ
ಭಾರತದ ಭವಿಷ್ಯವನ್ನು ಬದಲಿಸಿತು!
ಶ್ರೀಕೃಷ್ಣಾವತಾರದಲ್ಲಿ ಒಂದು ಕುತೂಹಲಕರ ಪ್ರಸಂಗ ನಡೆಯುತ್ತದೆ. ವಿದರ್ಭ ದೇಶದ ರಾಜ ಭೀಷ್ಮಕನ ಮಗಳು ರುಕ್ಮಿಣಿ ಶ್ರೀಕೃಷ್ಣನನ್ನು ಪ್ರೇಮಿಸುತ್ತಿರುತ್ತಾಳೆ. ಆದರೆ ಆಕೆಯ ಸೋದರ ರುಕ್ಮಿಗೆ ತಂಗಿಯನ್ನು ಶಿಶುಪಾಲನಿಗೆ ಮದುವೆ ಮಾಡಿಸುವ ಧಾವಂತ. ರುಕ್ಮಿಣಿಯ ಹೆತ್ತವರಿಗೆ ಕೃಷ್ಣನೇ ಅಳಿಯನಾಗಲೆಂಬ ಆಸೆ. ಆದರೆ ಕಂಸ-ಜರಾಸಂಧ-ಶಿಶುಪಾಲ ಬಳಗದಲ್ಲಿದ್ದ ರುಕ್ಮಿಗೆ ಕೃಷ್ಣನ ಮೇಲೆ ದ್ವೇಷ. ರುಕ್ಮಿಣಿಯನ್ನು ವಿವಾಹವಾಗಲೆಂದು ರುಕ್ಮಿಯ ಆಹ್ವಾನದಂತೆ ಶಿಶುಪಾಲ ಬಂದಿದ್ದಾಗ ರುಕ್ಮಿಣಿಯ ಅಂತರಂಗವನ್ನು ಅರಿತ ಕೃಷ್ಣ ಆಕೆಯನ್ನು ಜೊತೆಗೆ ಕರೆದೊಯ್ಯುತ್ತಾನೆ. ಅಡ್ಡಗಟ್ಟಿದ ಜರಾಸಂಧ ಹಾಗವನ ಸಾಮಂತ ರಾಜರ ಸೈನ್ಯವನ್ನು ಕೃಷ್ಣ ಬಲರಾಮರು ಧೂಳೀಪಟ ಮಾಡುತ್ತಾರೆ. ನೈಜ ಪ್ರೇಮ ಎಂದರೆ ಇದು! ನಿಜಕ್ಕೂ ಅಮರ ಪ್ರೇಮಕ್ಕೆ ಲೈಲಾ-ಮಜನೂನ ಉದಾಹರಣೆಯನ್ನು ಕೊಡುವವರು ಎಚ್ಚೆತ್ತು ನೋಡಬೇಕಾದ ಘಟನೆ ಇದು. ತೇಜೋಮಹಾಲಯವನ್ನು ಧ್ವಂಸ ಮಾಡಿ ತನ್ನ ಹೆರಿಗೆಯಂತ್ರ-ಹದಿನಾಲ್ಕನೆಯ ಪತ್ನಿಯ ನೆನಪಿಗಾಗಿ ತಾಜ್ ಮಹಲಾಗಿ ಪರಿವರ್ತಿಸಿದ ವಿಕೃತಕಾಮಿ ಷಾಜಹಾನನನ್ನು ಅಮರ ಪ್ರೇಮಿ ಅನ್ನುವವರಿಗೆ ಈ ಪವಿತ್ರ ಪ್ರೇಮ ಬರಿಯ ಕಥೆಯಾಗಿ ಕಾಣದಿದ್ದೀತೇ? ಅವೆಷ್ಟೋ ಮುಚ್ಚಿಹೋದ ಭಾರತದ ಇತಿಹಾಸ ತಂತುಗಳಲ್ಲಿ ಇದೂ ಒಂದು ಎಂದು ಸುಮ್ಮನಾಗೋಣವೇ? ಆದರೆ ಇಂಥದ್ದೇ ಒಂದು ಅಮರ ಪ್ರೇಮ ಕಥೆ ಭಾರತ ವೀರನೊಬ್ಬನ ಇತಿಹಾಸವನ್ನೇ ಬದಲಿಸಿಬಿಟ್ಟಿತಲ್ಲಾ? ಆತನ ಹುಚ್ಚು ಪ್ರೇಮವೇ ಭಾರತವನ್ನು ಪರಕೀಯರು ಆಕ್ರಮಿಸಲು ನೆರವಾಯಿತು ಎಂಬ ಕಟ್ಟುಕಥೆ ಇಂದಿಗೂ ಚಾಲ್ತಿಯಲ್ಲಿದೆಯಲ್ಲಾ? ಒಂದು ಹೆಣ್ಣಿಗೋಸ್ಕರ ಸುತ್ತಲಿನ ರಾಜರ ಜೊತೆ ದ್ವೇಷ ಕಟ್ಟಿಕೊಂಡು ಸಾವಿರಾರು ಮಹಾವೀರರ ಸಾವಿಗೆ ಕಾರಣನಾದ ಎಂಬ ಪಟ್ಟವನ್ನು ನಮ್ಮ ಇತಿಹಾಸಕಾರರು ಕಟ್ಟಿಬಿಟ್ಟರಲ್ಲಾ? ಇವತ್ತಿಗೂ ನಮ್ಮ ಪಠ್ಯಪುಸ್ತಕಗಳಲ್ಲಿ ಅವನ ಬಗೆಗಿನ ನೈಜತೆ ಬಯಲಾಗದೇ ಉಳಿದಿದೆಯಲ್ಲಾ?ಪೃಥ್ವೀರಾಜ ರಾಸೋ. ಅದ್ಭುತ ಪ್ರೇಮಕಾವ್ಯ. ರಚಿಸಿದವನು ಪ್ರಥ್ವಿರಾಜನ ಗೆಳೆಯನೂ, ಆಸ್ಥಾನಕವಿಯೂ ಆಗಿದ್ದ ಚಾಂದ್ ಬರ್ದಾಯ್ ಅಥವಾ ಚಾಂದ್ ಭಟ್ಟ. ಅದರಲ್ಲಿರುವಂತೆ ಜಯಚಂದ್ರನ ಮಗಳಾಗಿದ್ದ ಸಂಯೋಗಿತ ಯಾ ಸಂಯುಕ್ತ ದೆಹಲಿಯ ದೊರೆ ಪೃಥ್ವೀರಾಜನನ್ನು ಪ್ರೀತಿಸುತ್ತಿದ್ದಳು. ಆದರೆ ಜಯಚಂದ್ರನಿಗೆ ಪೃಥ್ವೀರಾಜನನ್ನು ಕಂಡರಾಗುತ್ತಿಲ್ಲ. ಮಗಳ ಸ್ವಯಂವರ ಏರ್ಪಾಟು ಮಾಡಿದವ ಓರಗೆಯ ಅರಸರೆಲ್ಲರನ್ನು ಆಹ್ವಾನಿಸಿದರೂ ಪೃಥ್ವೀರಾಜನನ್ನು ಮಾತ್ರ ಕರೆಯಲಿಲ್ಲ. ಅಲ್ಲದೆ ಅವನಿಗೆ ಅವಮಾನ ಮಾಡಲೋಸುಗ ಅವನದೊಂದು ಪ್ರತಿಮೆಯನ್ನು ಮಾಡಿಸಿ ಬಾಗಿಲ ಬಳಿ ದ್ವಾರಪಾಲಕನಂತೆ ನಿಲ್ಲಿಸಿದ. ಸ್ವಯಂವರದ ಸಮಯದಲ್ಲಿ ವರಮಾಲೆ ಕೈಯಲ್ಲಿ ಹಿಡಿದು ಬಂದ ಸಂಯುಕ್ತಾ ಉಳಿದ ರಾಜಕುಮಾರರನ್ನು ಕತ್ತೆತ್ತಿಯೂ ನೋಡದೆ ಸರಸರನೆ ನಡೆದು ಪ್ರಥ್ವಿರಾಜನ ಮೂರ್ತಿಗೆ ಮಾಲೆ ಹಾಕಿದಳು. ಅದೇ ವೇಳೆ ಪ್ರತಿಮೆಯ ಹಿಂದೆ ಅಡಗಿದ್ದ ಪ್ರಥ್ವೀರಾಜ ಅವಳನ್ನು ಕುದುರೆಯ ಮೇಲೆ ಹತ್ತಿಸಿಕೊಂಡು ಅಡ್ಡ ಬಂದವರನ್ನು ಅಡ್ಡಡ್ಡ ಸಿಗಿದು ಗಾಂಧರ್ವ ಪದ್ದತಿಯಂತೆ ಅವಳನ್ನು ವಿವಾಹವಾದ. ಕೆಲವು ಕಥೆಗಳಲ್ಲಿ ಪ್ರಥ್ವೀರಾಜನ ಪ್ರತಿಮೆಗೆ ಮಾಲೆಹಾಕಿದುದರಿಂದ ಕುಪಿತನಾದ ಜಯಚಂದ್ರ ಆಕೆಯನ್ನು ಬಂಧಿಸಿದ. ಆ ಸಂಗತಿ ತಿಳಿದು ತನ್ನ ಮೇಲಿನ ರಾಜಕುಮಾರಿಯ ಪ್ರೇಮದ ಪರಿಯನ್ನರಿತು ಕನೌಜಿನ ಮೇಲೆ ದಂಡೆತ್ತಿ ಬಂದು ಸಂಯುಕ್ತಳನ್ನು ಗಾಂಧರ್ವ ವಿಧಿಯಂತೆ ವಿವಾಹವಾದ. ಅನಂತರ ಯುದ್ಧದಲ್ಲಿ ಶತ್ರು ಸೇನಾಪತಿ ಪ್ರಹಾರ ಮಾಡುತ್ತಿದ್ದಾಗ ಸಂಯುಕ್ತಾ ಖಡ್ಗ ಬೀಸಿ ಪತಿಯನ್ನುಳಿಸಿಕೊಂಡಳು ಎಂಬ ವರ್ಣನೆಯೂ ಇದೆ.
ಈ ಘಟನೆಯ ಬಳಿಕ ಜಯಚಂದ್ರ ಪ್ರಥ್ವಿರಾಜರ ನಡುವಣ ವೈರ ಮತ್ತಷ್ಟು ಹೆಚ್ಚಾಯಿತು. ಜಯಚಂದ್ರ ಪೃಥ್ವೀರಾಜನನ್ನು ಮಣಿಸಲು ಶಹಾಬುದ್ದೀನ್ ಘೋರಿಯೊಡನೆ ಕೈ ಜೋಡಿಸಿದ. ಇಷ್ಟಾದರೆ ಕಷ್ಟವಿಲ್ಲ. 1191ರಲ್ಲಿ ಮೊದಲ ತರೈನ್ ಯುದ್ಧದಲ್ಲಿ ಘೋರಿಯನ್ನು ಸಂಪೂರ್ಣ ಸೋಲಿಸಿದ ಪೃಥ್ವೀರಾಜ ಅವನಿಗೆ ಪ್ರಾಣಭಿಕ್ಷೆ ನೀಡಿದ. ಎರಡನೇ ತರೈನ್ ಯುದ್ಧದಲ್ಲಿ ಘೋರಿ, ಗುಜರಾತ್ ದೊರೆ ಹಾಗೂ ಜಯಚಂದ್ರನ ಸಹಾಯದಿಂದ ದಂಡೆತ್ತಿ ಬಂದು ಪ್ರಥ್ವಿರಾಜನನ್ನು ಸೋಲಿಸಿ ಆತನನ್ನು ಕೊಂದ ಎಂದೂ, ಸೋಲಿಸಿ ಬಂಧಿಸಿ ಕೆಲ ದಿನಗಳ ಬಳಿಕ ಕೊಂದನೆಂದು ಅನೇಕ ಕಥೆಗಳಿವೆ. ಆತನ ಕಣ್ಣು ಕೀಳಿಸಿ ತನ್ನ ಸೆರೆಯಲ್ಲಿಟ್ಟುಕೊಂಡನೆಂದು ಕೆಲ ಇತಿಹಾಸಕಾರರು ಬರೆದಿದ್ದಾರೆ. ಆದರೆ ಪೃಥ್ವೀರಾಜ್ ರಾಸೋದಲ್ಲಿ ಇರುವುದೇ ಬೇರೆ. ಪ್ರಥ್ವಿರಾಜನ ಕಣ್ಣು ಕೀಳಿಸಿದ ಘೋರಿ ಆತನನ್ನು ಅಫ್ಘಾನಿಸ್ತಾನಕ್ಕೆ ಕೊಂಡೊಯ್ದು ಅಲ್ಲಿ ಬಹುಕಾಲ ತನ್ನ ಸೆರೆಯಲ್ಲಿಟ್ಟುಕೊಂಡಿದ್ದ. ತನ್ನ ಗೆಳೆಯನನ್ನು ಹೇಗಾದರೂ ಸೆರೆಯಿಂದ ಬಿಡಿಸಬೇಕೆಂದು ಚಾಂದಭಟ್ಟ ಮಾರುವೇಷದಲ್ಲಿ ಘೋರಿಯ ಆಸ್ಥಾನ ಸೇರಿ ಆತನ ವಿಶ್ವಾಸ ಸಂಪಾದಿಸಿಕೊಂಡ. ಒಮ್ಮೆ ಘೋರಿಯೊಡನೆ ಮಾತನಾಡುತ್ತಾ ಪ್ರಥ್ವಿರಾಜ ಕುರುಡನಾದರೂ ಶಬ್ಧವೇಧೀ ವಿದ್ಯಾಪ್ರವೀಣನೆಂದು ಹೊಗಳಿದ. ಘೋರಿ ನೋಡಿಯೇ ಬಿಡೋಣವೆಂದು ಬಿಲ್ವಿದ್ಯಾ ಪ್ರದರ್ಶನ ಏರ್ಪಡಿಸಿದ. ಪ್ರಥ್ವಿರಾಜ ಅರಸನಾದ ತಾನು ಇನ್ನೊಬ್ಬ ಅರಸನನ್ನು ಹೊರತುಪಡಿಸಿ ಬೇರಾರಿಂದಲೂ ಆದೇಶ ಸ್ವೀಕರಿಸಲಾರೆ ಎಂದು ಘರ್ಜಿಸಿದ. ತೂಗು ಹಾಕಿದ ಕಂಚಿನ ಜಾಗಟೆಯ ಶಬ್ದವನ್ನು ಕೇಳಿ ಬಾಣ ಬಿಟ್ಟು ಛೇದಿಸುವಂತೆ ಸ್ವತಃ ಘೋರಿಯೇ ಬಾಯ್ಬಿಟ್ಟು ನಿರ್ದೇಶಿಸಿದ. ಅದೇ ಸಮಯಕ್ಕೆ ಚಾಂದಭಟ್ಟ ಘೋರಿ ನಿಂತ ಸ್ಥಳವನ್ನು ಪ್ರಥ್ವಿರಾಜನಿಗೆ ತಿಳಿಸಲು
"ಚಾರ್ ಬನ್ಸ್, ಚೌಬೀಸ್ ಗಜ್, ಅಂಗುಲ್ ಅಷ್ಟ ಪ್ರಮಾಣ್ |
ತಾ ಊಪರ್ ಹೈ ಸುಲ್ತಾನ್, ಚೂಕೇ ಮತ್ ಚೌಹಾನ್||"
ಎಂದೊಂದು ಹಾಡು ಕಟ್ಟಿದ. ಮೊದಲ ಬಾಣ ಸರಿಯಾಗಿ ಗುರಿಮುಟ್ಟಿತು. ಆಶ್ಚರ್ಯಗೊಂಡ ಘೋರಿ ಶಭಾಷ್ ಎಂದು ಉದ್ಗಾರ ತೆಗೆದ. ಪೃಥ್ವೀರಾಜನ ಮುಂದಿನ ಶರ ಶಬ್ಧ ಬಂದೆಡೆಯತ್ತ ಸಾಗಿತು . ಅದು ಘೋರಿಯ ಗಂಟಲನ್ನು ಸೀಳಿ ಹೊರಬಂತು. ಶತ್ರುಗಳ ಕೈಯಲ್ಲಿ ಸಾಯಲು ಇಷ್ಟವಿಲ್ಲದೇ ಪ್ರಥ್ವಿರಾಜ ಮತ್ತು ಚಾಂದಭಟ್ಟ ಪರಸ್ಪರ ಕತ್ತಿಯಿಂದ ತಿವಿದುಕೊಂಡು ಸತ್ತರೆನ್ನುತ್ತದೆ ರಾಸೋ. ಈ ಕಥೆಯ ಕೊನೇ ಭಾಗವನ್ನು ಬರೆದವ ಚಾಂದನ ಮಗ.
ಇದು ಶತಶತಮಾನಗಳಿಂದ ಪ್ರಚಾರದಲ್ಲಿರುವ ಪೃಥ್ವೀರಾಜನ ಕಥೆ, ಅಲ್ಲಲ್ಲಾ ಇತಿಹಾಸ! ಕಥೆಯ ಕೆಲ ಸನ್ನಿವೇಶಗಳಲ್ಲಿ ವ್ಯತ್ಯಾಸವಿದ್ದಾಗ್ಯೂ ಬಹುಪಾಲು ಜನರು ಒಪ್ಪುವ ಕಥೆ ಇದೇ. ಇದನ್ನೇ ಆಧರಿಸಿ ನೆಹರೂ ಕೂಡಾ ಪೃಥ್ವೀರಾಜನನ್ನು "ಶೋಧಿಸಿ"ಯೇ ಬಿಟ್ಟರು! ಪೃಥ್ವೀರಾಜ ಒಂದು ಹೆಣ್ಣಿನ ಪ್ರೇಮಪಾಶದಲ್ಲಿ ಸಿಲುಕಿ ರಾಜ್ಯವನ್ನು ಕಳೆದುಕೊಂಡು ಈ ದೇಶವನ್ನು ಪರಕೀಯರ ದಾಸ್ಯಕ್ಕೆ ದೂಡಿದನೆಂದೂ, ಜಯಚಂದ್ರನದೇನು ತಪ್ಪಿದೆ ಎಂದು ಮೊರೆದರು. ಇರಲಿ ಅವರವರ ಭಾವಕ್ಕೆ, ಬುದ್ಧಿಗೆ, ನಿಷ್ಠೆಗೆ! ಈ ಕಥೆಯೇನೋ ರುಕ್ಮಿಣಿ ಸ್ವಯಂವರದಂತೆಯೇ ಇದೆ. ಆದರೆ ಕಥೆಯ ಮಧ್ಯದಲ್ಲಿ ನುಸುಳಿರುವ ಸಣ್ಣ ತಪ್ಪೊಂದು ಇಡೀ ಕಥೆಯನ್ನೇ ಸಂಶಯಕ್ಕೀಡುಮಾಡುತ್ತದೆ. ದೆಹಲಿಯನ್ನಾಳಿದ ತುವರವಂಶಜ ಅನಂಗಪಾಲನಿಗೆ ಪುತ್ರ ಸಂತಾನವಿರಲಿಲ್ಲ. ಇಬ್ಬರು ಪುತ್ರಿಯರ ಪೈಕಿ ಕಮಲಾದೇವಿಯನ್ನು ಅಜ್ಮೀರದ ದೊರೆ ಸೋಮೇಶ್ವರನಿಗೂ, ವಿಮಲಾದೇವಿಯನ್ನು ಕನೋಜಿನ ರಾಜ ವಿಜಯಪಾಲನಿಗೂ ವಿವಾಹಮಾಡಿಕೊಟ್ಟಿದ್ದ. ಕಮಲಾದೇವಿಯ ಮಗ ಪೃಥ್ವೀರಾಜನಾದರೆ ವಿಮಲಾದೇವಿಯ ಮಗನೇ ಜಯಚಂದ್ರ. ತಾತ ಅನಂಗಪಾಲ ಬದರಿಕಾಶ್ರಮಕ್ಕೆ ತೆರಳುವ ಮುನ್ನ ಮೊಮ್ಮಗ ಪೃಥ್ವೀರಾಜನಿಗೆ ರಾಜ್ಯವನ್ನೊಪ್ಪಿಸಿ ಹೋದ. ತನಗೆ ರಾಜ್ಯ ಸಿಗಲಿಲ್ಲ ಎಂದು ಸಿಟ್ಟಾದ ಜಯಚಂದ್ರ. ಪೃಥ್ವೀರಾಜ-ಜಯಚಂದ್ರರ ನಡುವಿನ ದ್ವೇಷದ ಮೂಲ ಇದು! ಇದರ ಪ್ರಕಾರ ಜಯಚಂದ್ರ ಪೃಥ್ವೀರಾಜರು ವರಸೆಯಲ್ಲಿ ಅಣ್ಣತಮ್ಮಂದಿರಾಗುತ್ತಾರೆ. ಜಯಚಂದ್ರನ ಮಗಳಿಗೆ ಪೃಥ್ವೀರಾಜ ಚಿಕ್ಕಪ್ಪನಾಗುತ್ತಾನೆ. ತನ್ನ ಚಿಕ್ಕಪ್ಪನನ್ನು ಸಂಯುಕ್ತ ಹೇಗೆ ಪ್ರೇಮಿಸುತ್ತಾಳೆ? ನಮ್ಮಲ್ಲಿ ಅಣ್ಣನ ಮಗಳನ್ನು ವಿವಾಹವಾಗುವ ಪದ್ದತಿ ಇಲ್ಲವಲ್ಲ!
ಪೃಥ್ವೀರಾಜನ ಚರಿತ್ರೆಗೆ ಪ್ರಧಾನ ಆಧಾರ ಎಂದು ಪರಿಗಣಿಸಬಹುದಾದ ಇನ್ನೆರಡು ಗ್ರಂಥಗಳೆಂದರೆ ಪೃಥ್ವೀರಾಜ್ ವಿಜಯ್ ಹಾಗೂ ಹಮೀರ್ ಮಹಾಕಾವ್ಯ. ಬಹುಪಾಲು ಇತಿಹಾಸಕಾರರು ಪ್ರಾಮಾಣಿಕ ಎಂದು ಒಪ್ಪಿಕೊಂಡಿರುವ ಗ್ರಂಥ ಪೃಥ್ವೀರಾಜ್ ವಿಜಯವೇ ಹೊರತು ಪೃಥ್ವೀರಾಜ್ ರಾಸೋ ಅಲ್ಲ. ಪೃಥ್ವೀರಾಜ್ ವಿಜಯದಲ್ಲೆಲ್ಲೂ ಸಂಯುಕ್ತಳ ಉಲ್ಲೇಖವೇ ಇಲ್ಲ. ತಿಲೋತ್ತಮೆ ಎಂಬ ರೂಪಸಿಯೊಬ್ಬಳನ್ನು ಪ್ರೇಮಿಸಿ ಮದುವೆಯಾದ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ತಿಲೋತ್ತಮೆ ಜಯಚಂದ್ರನ ಮಗಳಲ್ಲ. ಇನ್ನು ಪೃಥ್ವೀರಾಜನ ಜೀವನವನ್ನು ಸವಿವರವಾಗಿ ವರ್ಣಿಸುವ ಹಮೀರ್ ಕಾವ್ಯದಲ್ಲೂ ಸಂಯುಕ್ತಳ ಉಲ್ಲೇಖವಾಗಲೀ, ಅಂತಹ ಪ್ರೇಮಪ್ರಕರಣದ ಉಲ್ಲೇಖವೂ ಇಲ್ಲ! ರೋಮ್ಯಾಂಟಿಕ್ ಕಾವ್ಯ ಪೃಥ್ವೀರಾಜ್ ರಾಸೋ ರಚಿಸಿದ್ಯಾವಾಗ ಎನ್ನುವುದು ತಿಳಿದು ಬಂದಿಲ್ಲ. 13ನೇ ಶತಮಾನದ ನಂತರ ಅಸ್ತಿತ್ವದಲ್ಲಿದ್ದ ಇದರಲ್ಲಿ ಅನೇಕರು ಕೈಯಾಡಿಸಿ, ತಮ್ಮ ಮನಸ್ಸಿಗೆ ಬಂದುದನ್ನು ಸೇರಿಸಿ ಅದು ಪ್ರಕ್ಷೇಪಗೊಂಡಿದ್ದಂತೂ ಸತ್ಯ! ಅಲ್ಲದೆ ತಮ್ಮ ಸುಲ್ತಾನರ ಪರಾಕ್ರಮಗಳನ್ನು ಉತ್ಪ್ರೇಕ್ಷೆಯೊಂದಿಗೆ ಸಾಕಷ್ಟು ಪಕ್ಷಪಾತದಿಂದ ವರ್ಣಿಸುವ ಆ ಕಾಲದ ಪರ್ಷಿಯನ್ ಇತಿಹಾಸಕಾರರ್ಯಾರೂ ಈ ಪ್ರೇಮಕಥನದ ಬಗ್ಗೆ ಹೇಳಲೇ ಇಲ್ಲ. ಹಿಂದೂರಾಜನೊಬ್ಬ ಇನ್ನೊಬ್ಬ ಹಿಂದೂರಾಜನ ಮಗಳನ್ನೆತ್ತಿಕೊಂಡು ಹೋಗಿ ಆ ಕಾರಣದಿಂದ ಉಂಟಾದ ಹಗೆತನದಿಂದ ಹೊಡೆದಾಡಿ ತಮ್ಮ ರಾಜರಿಂದ ಸೋತಿದ್ದರು ಎಂದಾಗಿದ್ದರೆ ಪರ್ಷಿಯನ್ ಇತಿಹಾಸಕಾರರು ಇಲಿಯನ್ನು ಹುಲಿಯನ್ನಾಗಿಸಿ ಹಲವು ಕಥೆ ಹೆಣೆದು ಬಿಡುತ್ತಿದ್ದರು. ಭಾರತೀಯ ಇತಿಹಾಸಕಾರಲ್ಲಿ ತಕ್ಕಮಟ್ಟಿಗೆ ವಸ್ತುನಿಷ್ಟ ಎಂದು ಕರೆಸಿಕೊಳ್ಳುವ ಆರ್.ಸಿ. ಮಜುಂದಾರರು ತಮ್ಮ "The History and Culture of Indian People" ನಲ್ಲಿ ಈ ರೋಮ್ಯಾಂಟಿಕ್ ಕಥನವೇ ಅಸಂಗತ-ಅಸಂಬದ್ಧ ಎಂದಿದ್ದಾರೆ.
ಅಂದಿನ ಸನ್ನಿವೇಶದಲ್ಲಿ ಘೋರಿಯನ್ನು ಸೋಲಿಸುವ ತಾಕತ್ತು ಇದ್ದದ್ದು ಪೃಥ್ವೀರಾಜ, ಜಯಚಂದ್ರ ಹಾಗೂ ಚಾಲುಕ್ಯರ ಮೂಲರಾಜರಲ್ಲಿ. ಆದರೆ ಈ ಮೂವರು ಒಟ್ಟಾಗಿ ನಿಂತು ಘೋರಿಯನ್ನು ಎದುರಿಸುವ ಪ್ರಯತ್ನ ಮಾಡಲೇ ಇಲ್ಲ. ಪೃಥ್ವೀರಾಜ ಹಾಗೂ ಜಯಚಂದ್ರನ ನಡುವೆ ದ್ವೇಷವಿತ್ತು ಎನ್ನುವುದನ್ನು ಬಹುತೇಕ ಇತಿಹಾಸಕಾರರು ಒಪ್ಪುತ್ತಾರೆ. ಜಯಚಂದ್ರನ ತಂಗಿ ಕರ್ಮದೇವಿ ಸಿಸೋದಿಯಾವಂಶದ ಸಮರಸಿಂಹನ ಪತ್ನಿಯಾಗಿದ್ದಳು. ಸಮರಸಿಂಹ ಜಯಚಂದ್ರನ ಆತ್ಮೀಯ ಸ್ನೇಹಿತನೂ ಆಗಿದ್ದ. ಇದೇ ಸಮರಸಿಂಹ ಹಾಗೂ ಪೃಥ್ವೀರಾಜರು ಏಕೋಭಾವದಿಂದ ಒಟ್ಟಾಗಿ ನಿಂತು ಮೊದಲನೇ ತರೈನ್ ಯುದ್ಧದಲ್ಲಿ ಘೋರಿಗೆ ಮಣ್ಣು ಮುಕ್ಕಿಸಿದ್ದರು. ಹಾಗಾಗಿ ಇವರೀರ್ವರ ನಡುವಣ ವೈರವೂ ದೊಡ್ಡಮಟ್ಟದ್ದಾಗಿರಲಿಕ್ಕಿಲ್ಲ. ಹಾಗೆಯೇ ಜಯಚಂದ್ರ ಪೃಥ್ವೀರಾಜನಿಗೆ ದ್ರೋಹವೆಸಗಿಲ್ಲ ಎಂದು ಇತ್ತೀಚಿನ ಸಂಶೋಧನೆಗಳು ದೃಢಪಡಿಸುತ್ತವೆ. ಈತನೂ ಮಹಮದ್ ಘೋರಿಯ ಎದುರು ನಿಂತು ಹೋರಾಡಿ ಅಸುನೀಗಿದ.
ಹಾಗೆಯೇ ಅಂತಃಕಲಹಗಳ ಕಾರಣದಿಂದ ಹಿಂದೂಗಳು ಘೋರಿ ಕೈಯಲ್ಲಿ ಸೋತರು ಎನ್ನುವುದು ಕೂಡಾ ಅಸಂಬದ್ಧ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. 1191ರಲ್ಲಿ ಪಂಜಾಬಿನ ಪ್ರಾಂತ್ಯದ ತಾನೇಶ್ವರ್ ಸಮೀಪ ನಡೆದ ತಾರಾಯಿನ್ ಯುದ್ಧದಲ್ಲಿ ಸೋತ ಘೋರಿಯನ್ನು ಮುಂದೆ ಪ್ರಥ್ವಿರಾಜ ಒಂದೆರಡಲ್ಲ, ಏಳು ಬಾರಿ ಕ್ಷಮಿಸಿ ಕಳುಹಿಸಿದ್ದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಃಪತನವನ್ನು ಕಾಣಬೇಕಿರಲಿಲ್ಲ. 1192ರಲ್ಲಿ ಎರಡನೇ ತರೈನ್ ಯುದ್ಧದಲ್ಲಿ ನೆಹರೂ ಹೇಳುವಂತೆ ಆಗ ಪೃಥ್ವೀರಾಜ ರಾಜಕನ್ಯೆಯನ್ನು ಹಾರಿಸಿಕೊಂಡು ಹೋದನೆಂಬ ಕಾರಣಕ್ಕೆ ಉಳಿದ ರಾಜರೆಲ್ಲಾ ಪೃಥ್ವೀರಾಜನಿಗೆ ಎದುರು ಬಿದ್ದ ಕಾರಣ ಮಹಾವೀರರೆಲ್ಲಾ ಸಾವಿಗೀಡಾಗಿ ಸೈನ್ಯ ದುರ್ಬಲಗೊಂಡು ಪೃಥ್ವೀರಾಜ ಸೋತದ್ದಲ್ಲ. ಘೋರಿಯ ಸಮಕಾಲೀನನಾದ ಮಿನಾಜುದ್ದೀನ್ ಸಿರಾಜ್ "ಹಿಂದೂಸ್ಥಾನದ ರಾಜರೆಲ್ಲರೂ ಪೃಥ್ವೀರಾಜನ ಪರವಾಗಿದ್ದಾರೆ" ಎಂದು ತನ್ನ ತಬಾಕ್ತ್-ಇ-ನಾಸಿರಿಯಲ್ಲಿ ಬರೆದಿದ್ದಾನೆ. ಪ್ರಥ್ವಿರಾಜನ ಜೊತೆ ಅಕ್ಕಪಕ್ಕದ ರಾಜ್ಯದ 150 ರಾಜಕುಮಾರರ ಸಹಿತ ಮೂರು ಲಕ್ಷ ಅಶ್ವದಳ, ಮೂರು ಸಾವಿರ ಗಜದಳಕ್ಕಿಂತ ಹೆಚ್ಚಿನ ಬೃಹತ್ ಸೇನೆಯೆದುರು ಘೋರಿಯ ಸೈನ್ಯ ಯಾತಕ್ಕೂ ಸಾಲುತ್ತಿರಲಿಲ್ಲವೆಂದು ಫಿರಿಸ್ತಾ,ತಬಕತ್-ಇ-ನಾಸಿರಿಯಲ್ಲಿ ಮಿನಾಜುದ್ದೀನ್ ಸಿರಾಜ್ ಮತ್ತು ತಾಜು-ಇ-ಮಹಾಸಿರ್ನಲ್ಲಿ ಹಸನ್ ನಿಜಾಮಿಯಂಥ ಪ್ರಖ್ಯಾತ ಪರ್ಷಿಯನ್ ಇತಿಹಾಸಕಾರರೇ ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಬೃಹತ್ ಸೇನೆ ಹೊಂದಿದ್ದ ಸ್ವತಃ ಮಹಾಪರಾಕ್ರಮಿಯಾಗಿದ್ದ ಪೃಥ್ವೀರಾಜ ಸೋತಿದ್ದು ಹೇಗೆ? ಒಂದು ವರ್ಷದ ಹಿಂದೆ ಘೋರಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕಿದ್ದ ಯಮಸದೃಶ ಹೋರಾಟಗಾರ ಅದೇ ಬೃಹತ್ ಸೈನ್ಯ ಹೊಂದಿದ್ದೂ ಸೋತನೇಕೆ? 1191ರಲ್ಲಿ ಘೋರಿಯ ಜೊತೆ ಬಂದಿದ್ದ ಮೊಯಿನುದ್ದೀನ್ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ್ದ. ಪೃಥ್ವೀರಾಜನನ್ನು ವಂಚನೆಯ ಮೂಲಕ ಮಾತ್ರ ಗೆಲ್ಲಲು ಸಾಧ್ಯವೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ. ಅಣ್ಣನನ್ನು ಕೇಳದೆ ನಾನು ನಿರ್ಣಯಿಸಲಾರೆ. ಹಾಗಾಗಿ ಅಣ್ಣನಿಂದ ಉತ್ತರ ಬರುವವರೆಗೆ ತಡೆಯಿರಿ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ ಘೋರಿ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ಆತ ಸಾಧಿಸಿದ ವಿಜಯವನ್ನು ವಿಕ್ರಮ ಎನ್ನುವವರು ಮೂರ್ಖರಲ್ಲದೆ ಮತ್ತೇನು? ತರೈನಿನಲ್ಲಿ ತಮ್ಮ ಅರಸ ಕಾಫಿರರನ್ನು ಹೇಗೆ ವಂಚಿಸಿ ಸಾಯಬಡಿದ ಎಂದು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ. ಮುಂದುವರೆದ ಘೋರಿ ಅಜ್ಮೀರದ ದೇವಾಲಯಗಳನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಈ ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ಚಿಸ್ತಿ ಅಲ್ಲಾನಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ. ಹೀಗೆ ಭಾರತದ ಭವಿಷ್ಯವನ್ನು ಬದಲಿಸಿದ್ದು ಅಂತಃಕಲಹವಲ್ಲ; ಸೂಫಿ ಸಂತನ ವಿದ್ರೋಹ! ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು! ಅನ್ನ ಕೊಟ್ಟ ಭೂಮಿಗೆ ದ್ರೋಹ ಬಗೆದ, ಹಿಂದೂಗಳ ಮಾರಣದ್ವರಕ್ಕೆ ಕಾರಣನಾಗಿ ಹಿಂದೂಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟವನ ಗೋರಿಗೆ ಹಿಂದೂಗಳಿಂದ ಪುಷ್ಪಾರ್ಚನೆಯಾಗುತ್ತಿದೆ!
ಅಫಘಾನಿಸ್ತಾನದ ಘಜನಿಯಲ್ಲಿ ಮಹಮ್ಮದ್ ಘೋರಿಗೆ ಒಂದು ಭವ್ಯ ಸಮಾಧಿ ಕಟ್ಟಲಾಗಿದೆ. ಇದರ ಆವರಣದ ಹೊರಭಾಗದಲ್ಲಿ ಚಪ್ಪಲಿ ಕಳಚುವ ಜಾಗದಲ್ಲಿ ಒಂದು ಚಿಕ್ಕ ಸಮಾಧಿ ಇದೆ, ಪ್ರಥ್ವಿರಾಜ ಚೌಹಾನನದ್ದು! ಘೋರಿಯನ್ನು ಕೊಂದ ಪ್ರಥ್ವಿರಾಜನ ಮೇಲಿನ ಸಿಟ್ಟು ಅಲ್ಲಿನ ಜನರಲ್ಲಿ ಶತಮಾನಗಳುರುಳಿದರೂ ತಣಿದಿಲ್ಲ. ಅಲ್ಲೇ ಚಪ್ಪಲಿ ಕಳಚಿ, ಆ ಸಮಾಧಿಗೆ ಅಲ್ಲಿಟ್ಟ ದಪ್ಪ ಹಗ್ಗದ ತುದಿಯಿಂದ ಎರಡೇಟು ಹೊಡೆದೇ ಘೋರಿಯ ದರ್ಶನಕ್ಕೆ ಭಕ್ತರು ಒಳಪ್ರವೇಶಿಸುವುದು! ನಮ್ಮ ಮಾಜಿ ಪ್ರಧಾನಿ ಮನಮೋಹನ ಸಿಂಗ್, ನಟವರ್ ಸಿಂಗ್ ಹಾಗೂ ರಾಹುಲ್ ಗಾಂಧಿ 2005ರಲ್ಲಿ ಅಪ್ಘಾನಿಸ್ತಾನಕ್ಕೆ ತೆರಳಿದಾಗ ಘೋರಿಯ ಸಮಾಧಿಗೆ ಕೈಮುಗಿದು ಬಂದರೇ ವಿನಾ ಪೃಥ್ವೀರಾಜನ ಸಮಾಧಿಯೆಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಅವರಿಂದ ಅಂತಹ ನಿರೀಕ್ಷೆಯೂ ಇಲ್ಲ ಬಿಡಿ. ಆದರೆ ಈ ದೇಶದ ಜನಸಾಮಾನ್ಯನಿಗೆ ಈ ಮಣ್ಣಿನ ಬಗೆಗೆ ಅಪಾರ ಗೌರವವಿದೆ. ನಿಮಗೆ ಶೇರ್ ಸಿಂಗ್ ರಾಣಾ ನೆನೆಪಿರಬಹುದು. ಕುಖ್ಯಾತ ಡಕಾಯಿತೆ, ಬೆಹ್ಮೈಯ ಇಪ್ಪತ್ತು ಠಾಕೂರರನ್ನು ವಿನಾ ಕಾರಣ ಕೊಂದ, ಮುಂದೆ ಸಂಸದೆಯಾಗಿದ್ದ ಪೂಲನ್ ದೇವಿಯನ್ನು ಅವಳ ನಿವಾಸದಲ್ಲೇ ಜುಲೈ25, 2001ರಲ್ಲಿ ಕೊಂದವ. ತಾನೇ ಕೊಂದವನೆಂದು ಎದೆಯುಬ್ಬಿಸಿ ಹೇಳಿ ಜೀವಾವಧಿ ಶಿಕ್ಷೆಗೊಳಗಾಗಿ ತಿಹಾರ್ ಜೈಲಿನಲ್ಲಿ ಬಂಧಿಯಾದವ. ಇವನಿಗೂ ಪೃಥ್ವೀರಾಜನಿಗೂ ಏನು ಸಂಬಂಧ? ಸ್ವಾರಸ್ಯ ಇರುವುದೇ ಇಲ್ಲಿ! ಪ್ರಪಂಚದ ಅತಿ ದುರ್ಭೇದ್ಯ ಜೈಲುಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಿಂದ 2005ರಲ್ಲಿ ಹಾಡುಹಗಲೇ ನಾಟಕೀಯ ರೀತಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡ ಈತ ಸಂಜಯ್ ಗುಪ್ತಾ ಎಂಬ ನಕಲಿ ಹೆಸರಲ್ಲಿ ಮೂರು ತಿಂಗಳ ಬಾಂಗ್ಲಾದೇಶೀ ವೀಸಾ ಪಡೆದುಕೊಂಡು ಅಲ್ಲಿಂದ ದುಬೈನ ಮೂಲಕ ಅಫ್ಘಾನಿಸ್ತಾನ ತಲುಪಿ ಕಂದಹಾರ್- ಕಾಬೂಲ್- ಹೀರತ್ ಗಳ ಮುಖಾಂತರ ಘಜನಿಯ ಡೀಕ್ ಅನ್ನೋ ಹಳ್ಳಿಯನ್ನು ತಲುಪಿದ. ಅಲ್ಲಿತ್ತು ಪೃಥ್ವೀರಾಜನ ಸಮಾಧಿ. ತಾನು ಘೋರಿಯ ಸಮಾಧಿಯ ಬಗ್ಗೆ ಸಂಶೋಧನೆ ಮಾಡಲು ಬಂದ ಪಾಕಿಸ್ತಾನಿಯೆಂದು ಸ್ಥಳೀಯರನ್ನು ನಂಬಿಸಿ ರಾತ್ರೋರಾತ್ರಿ ಪ್ರಥ್ವಿರಾಜನ ಸಮಾಧಿಯ ಪವಿತ್ರ ಮಣ್ಣನ್ನು ಅಗೆದು ತೆಗೆದು ಭಾರತಕ್ಕೆ ತಂದ. ಸ್ಥಳೀಯರ ಸಹಕಾರದಿಂದ ಏಪ್ರಿಲ್ 2005 ರಲ್ಲಿ ಎತ್ವಾಹ್ ಜಿಲ್ಲೆಯಲ್ಲಿ ಪೃಥ್ವೀರಾಜನ ಸಮಾಧಿಯ ಪವಿತ್ರ ಮಣ್ಣನ್ನಿಟ್ಟು ಸ್ಮಾರಕವೊಂದನ್ನು ನಿರ್ಮಿಸಿದ. ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದ ಆತನ ತಾಯಿಯ ಹೃದಯ ತುಂಬಿ ಬಂದಿತ್ತು. ಕಣ್ಣುಗಳಿಂದ ಆನಂದದ ಅಶ್ರುಬಿಂದುಗಳುರುಳುತ್ತಿದ್ದವು. ಮನಸ್ಸು ಬೇಷ್ ಮಗನೇ ಎಂದಿತ್ತು! ಆಕೆ "ನನ್ನ ಮಗ ಈ ದೇಶದ ಹೆಮ್ಮೆ, ಈ ದೇಶದ ನೈಜ ಸೇವಕ" ಅಂದಳು! ವಸುಂಧರೆಯ ಸಿರಿಸುತೆಯರಸನ ಮಣ್ಣಾದ ದೇಹ ಸಿರಿಪೃಥ್ವಿಗೇ ಮರಳಿತು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ