ಬೇಕಿದೆ ಬಲಿಷ್ಟ ವಲಸೆ ನೀತಿ, ಅದೇ ಜಗವು ಉಳಿವ ರೀತಿ!
"ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ. ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ" ಜಗಮೊಂಡ ಎಂದೇ ವಿರೋಧಿಗಳಿಂದ ಕರೆಸಿಕೊಂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಇರಾನ್, ಇರಾಕ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ರಾಷ್ಟ್ರಗಳಿಂದ ಬರುವ ಪ್ರವಾಸಿಗರು ಹಾಗೂ ನಿರಾಶ್ರಿತರಿಗೆ ನಿಷೇಧ ಹೇರಿದಾಗ ವ್ಯಕ್ತವಾದ ಟೀಕೆಗೆ ಈ ರೀತಿ ಸಮರ್ಥಿಸಿಕೊಳ್ಳಬೇಕಾಗಿ ಬಂದದ್ದು ಸೆಕ್ಯುಲರಿಸಮ್ ಎಂಬ ಏಕೈಕ ಕಾರಣ. ದೇಶದೇಶಗಳ ವಲಸೆ ನೀತಿಯಲ್ಲಿ ಸೆಕ್ಯುಲರಿಸಮ್ ಎಂಬ ಭೂತ ಹೇಗೆ ಕೈಯಾಡಿಸುತ್ತದೆ ಎನ್ನುವುದಕ್ಕೆ ಬೇರೆ ನಿದರ್ಶನ ಬೇಕೆ? ಟ್ರಂಪ್ ಈ ನಿಷೇಧ ಹೇರಿದ್ದು ಅಮೆರಿಕಾವನ್ನು ಸುರಕ್ಷವಾಗಿರಿಸಿಕೊಳ್ಳುವ ಸಲುವಾಗಿ. ತನ್ನ ದೇಶೀಯರ ರಕ್ಷಣೆಯ ದೃಷ್ಟಿಯಿಂದ. ಆದರೆ ಇದರ ವಿರುದ್ಧ ದೇಶೀಯರಿಂದಲೇ ಟೀಕೆ ವ್ಯಕ್ತವಾಯಿತು. ಅಷ್ಟಕ್ಕೂ ಅಮೆರಿಕಾದ ವಲಸೆ ನೀತಿ ಟ್ರಂಪ್'ರಿಂದ ಶ್ರೀಗಣೇಶವಾದುದಲ್ಲ. 2011ರಲ್ಲಿ ಇರಾಕ್ ದೇಶದ ಪ್ರಜೆಗಳು ಹಾಗೂ ನಿರಾಶ್ರಿತರ ಮೇಲೆ ಒಬಾಮಾ ಸರಕಾರ ಇದೇ ರೀತಿಯ ನಿಷೇಧವನ್ನು ಹೇರಿತ್ತು. ಅಲ್ಲದೆ ಈಗ ಯಾವ ಏಳು ರಾಷ್ಟ್ರಗಳಿಗೆ ಟ್ರಂಪ್ ನಿಷೇಧ ಹೇರಿದ್ದಾರೋ ಉಗ್ರರ ಚಟುವಟಿಕೆ ಹೆಚ್ಚಿರುವ ಆ ರಾಷ್ಟ್ರಗಳು ಭಯೋತ್ಪಾದಕರ ಮೂಲ ಎಂದು ಒಬಾಮಾ ಸರ್ಕಾರವೇ ಪಟ್ಟಿ ಮಾಡಿತ್ತು. ಆದರೆ ಸೆಕ್ಯುಲರುಗಳು ಆಕಾಶ ಭೂಮಿ ಒಂದಾಗುವಂತೆ ಬೊಬ್ಬಿರಿದರು. ಆಗ ಸ್ವತಃ ಟ್ರಂಪ್ "ಇದು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸುವ ನಿರ್ಧಾರವಲ್ಲ. ಮಾಧ್ಯಮಗಳು ತಪ್ಪು ವರದಿ ಮಾಡಿವೆ. ಇದು ಭಯೋತ್ಪಾದನೆಯ ವಿರುದ್ಧದ ನಿರ್ಧಾರವೇ ಹೊರತು ಮತದ ವಿರುದ್ಧದ ನಿರ್ಧಾರವಲ್ಲ. ಈ ಏಳು ರಾಷ್ಟ್ರಗಳ ಹೊರತಾಗಿ ಜಗತ್ತಿನ ಉಳಿದ 40ಕ್ಕೂ ಹೆಚ್ಚು ಮುಸಲ್ಮಾನರನ್ನು ಹೊಂದಿರುವ ರಾಷ್ಟ್ರಗಳು ಈ ನಿರ್ಧಾರಕ್ಕೆ ಒಳಪಡುವುದಿಲ್ಲ. ಇಡೀ ಜಗತ್ತು ಭಯೋತ್ಪಾದನೆಯಿಂದಾಗಿ ನಲುಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಒಮ್ಮೆ ನೋಡಿ. ಹೀಗಾಗಿ ನಮ್ಮ ದೇಶಕ್ಕೆ ಕಠಿಣ ಗಡಿ ನೀತಿ ಹಾಗೂ ವೆಟೊ ಕಾನೂನು ಜಾರಿಯ ಅಗತ್ಯವಿದೆ" ಎಂದು ಸಮಜಾಯಿಷಿ ನೀಡಬೇಕಾಗಿ ಬಂತು.
ತನ್ನ ದೇಶದ ಸುರಕ್ಷತೆ, ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ವಲಸೆ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಟ್ರಂಪ್'ಗೆ ಅಧಿಕಾರವಿಲ್ಲವೇ? ಬುದ್ಧಿಜೀವಿಗಳ ಗಂಜಿಕೇಂದ್ರಗಳ ಉಳಿವಿಗಾಗಿ ದೇಶವನ್ನು ಬಲಿಕೊಡಬೇಕೆ? ಈ ಸೆಕ್ಯುಲರಿಸಮ್ ದಾಳ ಎಷ್ಟು ಬಿಗುವಾಗಿದೆಯೆಂದರೆ ಟ್ರಂಪ್'ರಂತಹ ಟ್ರಂಪೇ ಸಮಜಾಯಿಷಿ ನೀಡಬೇಕಾಗಿ ಬಂತು. ಇದೇ ನಿಷೇಧವೇನಾದರೂ ಭಾರತದಿಂದಾಗಿದ್ದರೆ...? ಹಹ್...ಭಾರತದಿಂದ ಇಂತಹ ವಲಸೆ ನೀತಿ ಸಾಧ್ಯವೇ? ಅಸಲಿಗೆ ಭಾರತದಲ್ಲೊಂದು ವಲಸೆ ನೀತಿ ಇದೆಯೇ? ಇದ್ದರೆ ಅದರ ಅನುಷ್ಠಾನ ಸರಿಯಾಗಿ ಆಗುತ್ತಿದೆಯೇ? ಅಮೆರಿಕಾವನ್ನೇ ಬಗ್ಗಿಸುವ ಸೆಕ್ಯುಲರುಗಳು ಭಾರತದ ಸರಕಾರಗಳನ್ನು ಬಗ್ಗಿಸದೇ ಬಿಟ್ಟಾರೇ?
ಭಾರತದಲ್ಲಿ ವಿದೇಶಿಯರ ಪ್ರವೇಶ ಹಾಗೂ ವಾಸವನ್ನು ನಿಯಂತ್ರಿಸುವ ಏಕೈಕ ಕಾಯಿದೆ "ವಿದೇಶಿಯರ ಕಾಯಿದೆ-1946". ಯಾವುದೇ ವಿದೇಶಿಯ ಭಾರತದಲ್ಲಿ 180 ದಿನಗಳಿಗಿಂತ ಹೆಚ್ಚುಕಾಲ ಇದ್ದರೆ ಆತ ಸ್ಥಳೀಯ ಪೊಲೀಸರ ಬಳಿ ನೋಂದಾಯಿಸಿ ಅನುಮತಿ ಗಿಟ್ಟಿಸಿಕೊಳ್ಳಬೇಕು. ದೇಶವಿಭಜನೆಯ ಸಂದರ್ಭದಲ್ಲಿ ಈ ದೇಶ ಕಂಡದ್ದು ಕಳೆದ ಶತಮಾನದ ಅತೀ ದೊಡ್ಡ ವಲಸೆ. ಆ ಬಳಿಕವೂ ಅನೇಕರು ದೇಶದೊಳಕ್ಕೆ ಬರುತ್ತಲೇ ಇದ್ದರು. ಹಿಂದೂಗಳು ಆಶ್ರಯ ಬಯಸಿ ಬಂದರೆ, ಪಶ್ಚಿಮ ಪಾಕಿಸ್ತಾನದ ಮುಸ್ಲಿಮರು ಭಯೋತ್ಪಾದಕರಾಗಿ ನುಗ್ಗಿದರು. ಪೂರ್ವ ಪಾಕಿಸ್ತಾನದ ಮುಸ್ಲಿಮರು ನುಗ್ಗಿದ ಮೇಲೆ ಭಯೋತ್ಪಾದಕರಾದರು! ದಲಾಯಿ ಲಾಮಾ ಭಾರತಕ್ಕೆ ಬಂದ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ಟಿಬೆಟನ್ನರು ಭಾರತಕ್ಕೆ ಬಂದಿಳಿದಿದ್ದಾರೆ. 1979ರ ಸುಮಾರಿಗೆ ರಷ್ಯಾ ಅಫ್ಘಾನ್ ಅನ್ನು ಆಕ್ರಮಿಸಿದಾಗ 60000 ಅಫ್ಘನ್ನರು ಭಾರತಕ್ಕೆ ಬಂದರು. ಅತ್ತ ಶ್ರೀಲಂಕಾದಿಂದ ಬಂದ ಹತ್ತಿರ ಹತ್ತಿರ ಎಂಬತ್ತು ಲಕ್ಷದಷ್ಟು ತಮಿಳರು ಭಾರತದಲ್ಲೇ ಇದ್ದಾರೆ. ಇದಲ್ಲದೆ ಇಸ್ರೈಲ್, ಇರಾಕ್, ಪ್ಯಾಲೆಸ್ಟೈನ್ಗಳಿಂದಲೂ ನಿರಾಶ್ರಿತರು ಭಾರತಕ್ಕೆ ಬಂದಿದ್ದಾರೆ. 2008ರ ಹೊತ್ತಿಗೆ ಈ ದೇಶದಲ್ಲಿದ್ದು ತಮ್ಮ ವಿವರ ನೋಂದಾಯಿಸಿದ ವಿದೇಶಿಯರ ಸಂಖ್ಯೆ 352,000 ಮಾತ್ರ! ಆದರೆ 2001ರ ಗಣತಿ ಪ್ರಕಾರವೇ ಪಾಕ್-ಬಾಂಗ್ಲಾಗಳಲ್ಲಿ ಜನಿಸಿ ಭಾರತದಲ್ಲಿ ನೆಲೆಸಿರುವವರ ಸಂಖ್ಯೆಯೇ ಹತ್ತಿರ ಹತ್ತಿರ 6 ಮಿಲಿಯನ್ನುಗಳಷ್ಟಿತ್ತು! ಭಾರತದಲ್ಲಿ ವಲಸಿಗರ ಸ್ವವಿವರ ಮತ್ತು ನಿರಾಶ್ರಿತರ ಸ್ಥಿತಿಗೆ ಸಂಬಂಧಿಸಿದ ದಾಖಲಾತಿಗೆ ಯಾವುದೇ ಕಾನೂನು ಅಥವಾ ನಿಬಂಧನೆಗಳಿಲ್ಲ. ಬದಲಿಗೆ, ಇವರೆಲ್ಲರೂ ವಿದೇಶಿಯರ ಕಾಯಿದೆ-1946ರ ನಿಯಂತ್ರಣಕ್ಕೇ ಒಳಪಟ್ಟಿರುತ್ತಾರೆ.
2001ರಲ್ಲಿ ಆಗಿನ ಕೇಂದ್ರ ಗೃಹ ಸಚಿವಾಲಯ 12ಮಿಲಿಯನ್ ಅಕ್ರಮ ವಲಸಿಗರು ದೇಶದ ಹದಿನೇಳು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದಾರೆಂದು ಅಂದಾಜಿಸಿತ್ತು. ಆಬಳಿಕ ಬಂದ ಯುಪಿಎ ಸರಕಾರ ಈ ವರದಿಯನ್ನು ತಳ್ಳಿ ಹಾಕಿತು. ರಾಜಕೀಯ ವಿಜ್ಞಾನಿ ಕಮಲ್ ಸಾದಿಕ್ ಪ್ರಕಾರ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವವರ ಸಂಖ್ಯೆ 15-20 ಮಿಲಿಯನ್! ಈ ಸಂಖ್ಯೆ ಸರಕಾರದ ಅಪ್ರಕಟಿತ ವರದಿಯನ್ನು ಆಧರಿಸಿದ್ದು! ಅಂದರೆ ಇವರೆಲ್ಲಾ ಈಗಾಗಲೇ ಪಡಿತರ ಚೀಟಿ, ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ ಎಂದೇ ಅರ್ಥ! ಬಾಂಗ್ಲಾದೇಶದಿಂದ ಕಾನೂನುಬಾಹಿರ ವಲಸೆ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟಲು ಯೋಗ್ಯ ಕ್ರಮ ಕೈಗೊಳ್ಳಿ ಎಂದು ಏಪ್ರಿಲ್ 2008ರಲ್ಲಿ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆಜ್ಞಾಪಿಸಿತಾದರೂ ಪರಿಣಾಮ ಶೂನ್ಯ! ಯಾವ ಯುಪಿಎ ಸರಕಾರ 2008ರಲ್ಲಿ ಎನ್ಡಿಎ ಸರಕಾರದ 2001ರ ವರದಿಯನ್ನು ತಳ್ಳಿ ಹಾಕಿತ್ತೋ ಅದೇ ಯುಪಿಎ ಸರಕಾರದ ಮಂತ್ರಿಯೋರ್ವರು 2012ರಲ್ಲಿ "ಕಳೆದ ಎರಡು ದಶಕಗಳಲ್ಲಿ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರು ಭಾರತಕ್ಕೆ ಅಕ್ರಮಪ್ರವೇಶ ಮಾಡಿದ್ದಾರೆ. ಅಲ್ಲದೆ ಅವರು ಇಡೀ ದೇಶದಲ್ಲಿ ಹರಿದು ಹಂಚಿಹೋಗಿದ್ದಾರೆ" ಎಂದು ತಮ್ಮ ಲೇಖನದಲ್ಲಿ ಅಲವತ್ತುಕೊಂಡಿದ್ದರು. ಆದರೆ ಬರೇ ಈ ರೀತಿ ಅಳುತ್ತಾ ಕೂತರೆ ಸಮಸ್ಯೆ ಬಗೆಹರಿಯುವುದೇ? ಇದರ ಪರಿಹಾರಕ್ಕೆ ಅವರ ಸರಕಾರವೇ ಯಾವುದೇ ಕ್ರಮ ಕೈಗೊಳ್ಳಲಿಲ್ಲವಲ್ಲ! ಹಿಂದಿನ ಸರಕಾರ ಪ್ರಕಟಿಸಿದ್ದ ವರದಿಯನ್ನೇ ಮೂಲೆಗೆಸೆದು ತೆಪ್ಪಗೆ ಕೂತಿತ್ತಲ್ಲಾ!
ಯಾವುದೇ ವಿದೇಶಿಗ ದೇಶದೊಳಗೆ ಬರಬೇಕಾದರೆ ವಿದೇಶೀ ದೂತಾವಾಸ ಕಛೇರಿಯಲ್ಲಿ ಅನುಮತಿ ಪಡೆದು ಬರಬೇಕಾಗುತ್ತದೆ. ಆದರೆ ಇಂತಹುದೊಂದು ಕಛೇರಿ ತೀರಾ ಇತ್ತೀಚಿನವರೆಗೂ ಬರಿಯ ನಾಮಕೆವಾಸ್ತೇ ಆಗಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅಸ್ಸಾಂನ್ನು ಆಕ್ರಮಿಸಿಕೊಳ್ಳುತ್ತಿದ್ದ ಬಾಂಗ್ಲಾ ನುಸುಳುಕೋರರನ್ನು ತಡೆಯುವ ಪ್ರಯತ್ನವನ್ನು ಹಿಂದಿನ ಸರ್ಕಾರಗಳು ಮಾಡಲೇ ಇಲ್ಲ. ನುಸುಳುಕೋರರಲ್ಲಿ ಕೆಲವರಂತೂ ದಶಕಗಳ ಹಿಂದೆಯೇ ಗಡಿಯಾಚೆಯಿಂದ ಭಾರತದೊಳಕ್ಕೆ ನುಸುಳಿ ಬಂದಿದ್ದು ಪಶ್ಚಿಮ ಬಂಗಾಳ, ಅಸ್ಸಾಂನ ವಿವಿಧ ಭಾಗಗಳ ಲಜ್ಜೆಗೆಟ್ಟ ರಾಜಕಾರಣಿಗಳು ಇವರಿಗೆ ರಾಜಾರೋಷವಾಗಿ ಚುನಾವಣಾ ಗುರುತಿನ ಚೀಟಿ ಮಾಡಿಕೊಟ್ಟಿರುವ ಕಾರಣ ಇವರನ್ನು ಗುಪ್ತಚರ ಇಲಾಖೆಗೂ ಪತ್ತೆ ಹಚ್ಚಲು ಸಾಧ್ಯವಿಲ್ಲ. ದೇಶದಲ್ಲಿ 2 ಕೋಟಿಗಿಂತ ಹೆಚ್ಚು ನುಸುಳುಕೋರರು ನೆಲೆಸಿದ್ದು ಈ ಎರಡು ಕೋಟಿ ಸಂಖ್ಯೆಯ ಸಮುದಾಯ ಮಸೀದಿಯ ಮೌಲ್ವಿಗಳು ಹೇಳಿದವರಿಗೇ ಮತ ಹಾಕುವ ಸಾಧ್ಯತೆಯಿರುವುದರಿಂದ ಬಹುತೇಕ ರಾಜಕೀಯ ಪಕ್ಷಗಳು ತೆಪ್ಪಗಿರುತ್ತವೆ. ಗಮನಿಸಿ ಶ್ರೀಲಂಕಾ, ಸಿರಿಯ, ನೆದರ್ಲೆಂಡ್, ಹಂಗೇರಿ, ಬೆಲ್ಜಿಯಮ್ ಸೇರಿದಂತೆ ಜಗತ್ತಿನ 25ಕ್ಕೂ ಅಧಿಕ ದೇಶಗಳ ಜನಸಂಖ್ಯೆ ಎರಡು ಕೋಟಿಗಿಂತಲೂ ಕಡಿಮೆ! ಅಂದರೆ ಈ ಸಮಸ್ಯೆಯ ಅಗಾಧತೆಯ ಅರಿವಾದೀತು!
ಅರೇ ಇವರಿಂದೇನು ತೊಂದರೆ, ಭಾರತ ಎಂತೆಂಥವರಿಗೆಲ್ಲಾ ಆಶ್ರಯ ಕೊಟ್ಟಿಲ್ಲ? ದೇಹಿ ಎಂದು ಬಂದವರಿಗೆ ನಾಸ್ತಿ ಎನ್ನದ ದೇಶವಿದಲ್ಲವೇ? ಎಂದು ತಿಳುವಳಿಕಸ್ಥರೂ ಪ್ರಶ್ನಿಸಬಹುದು. ಆದರೆ ಸಮಸ್ಯೆ ನಾವು ಅಂದುಕೊಂಡಷ್ಟು ಸರಳವೂ ಅಲ್ಲ, ಪರಿಹರಿಸುವಂತಹದ್ದೂ ಆಗುಳಿದಿಲ್ಲ. ಭಾರತ ಎಲ್ಲರಿಗೂ ಆಶ್ರಯ ಕೊಟ್ಟಿದೆ ನಿಜ. ಆದರೆ ಅದರಿಂದ ಭಾರತಕ್ಕೆ ಹಾನಿಯಾದುದು ಅಷ್ಟೇ ಸತ್ಯ. ಯಹೂದಿಗಳೋ, ಪಾರ್ಸಿಗಳೋ ಇಲ್ಲಿ ಹಾಲಿನಲ್ಲಿ ಸಕ್ಕರೆಯಂತೆ ಬೆರೆತು ಹೋಗಿರಬಹುದು. ದೇಶಕ್ಕಾಗಿ ಜೀವ ತೇಯ್ದಿರಬಹುದು. ಆದರೆ ಎಲ್ಲರೂ ಹಾಗಲ್ಲವಲ್ಲ. ಇಲ್ಲಿಗೆ ಆಕ್ರಮಕರಾಗಿ ಬಂದವರಿಗೂ ಈ ದೇಶ ಆಶ್ರಯ ಕೊಟ್ಟಿತು ನಿಜ. ಆದರೆ ಅವರು ಅಖಂಡವನ್ನೇ ತುಂಡು ಮಾಡಿ ಒಯ್ದರಲ್ಲ! ಈಗ ಇಲ್ಲಿ ನುಸುಳಿ ಬಂದವರೂ ಇದರಲ್ಲೇನೂ ಹಿಂದೆ ಬಿದ್ದಿಲ್ಲ. ಈ ನುಸುಳುಕೋರರಿಂದ ಬಹುಗಂಭೀರವಾದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ, ಸೃಷ್ಟಿಯಾಗುತ್ತಲೇ ಇವೆ, ಸೃಷ್ಟಿಯಾಗುತ್ತವೆ! ಕೌಶಲರಹಿತ ಔದ್ಯೋಗಿಕ ಕ್ಷೇತ್ರದಲ್ಲಿ ಉಂಟಾಗುವ ಪಲ್ಲಟನ, ಇದರಿಂದ ಉಂಟಾದ ಆರ್ಥಿಕ ಪ್ರಾಬಲ್ಯದಿಂದ ಹೆಚ್ಚಾಗುವ ಸಮಾಜಘಾತಕ ಕೃತ್ಯಗಳು, ಮತದ ಕಾರಣದಿಂದ ಹೆಚ್ಚಾಗಬಹುದಾದ ಅಸಹಿಷ್ಣುತೆ ಮತ್ತು ಅದರಿಂದ ಇಲ್ಲಿನ ಅಸುರಕ್ಷಿತ ಬಹುಸಂಖ್ಯಾತ ವರ್ಗದಲ್ಲಿ ಹುಟ್ಟಿಕೊಳ್ಳುವ ಭೀತಿ ಹಾಗೂ ಉಂಟಾಗುವ ಹಾನಿ, ಭಯೋತ್ಪಾದನೆಯ ಜೊತೆ ಇರುವ ಅಥವಾ ಮಾಡಿಕೊಳ್ಳಬಹುದಾದ ನೇರ ಕೊಂಡಿ, ಇಲ್ಲಿನ ಸಮಾಜದ ಮೌಲ್ಯಗಳ ಪರಿಚಯವಿಲ್ಲದ ಕಾರಣ ಸಮಾಜವನ್ನು ಛಿದ್ರಗೊಳಿಸಬಲ್ಲ ನಂಬಿಕೆ, ನಡವಳಿಕೆಗಳು, ಗುರುತು-ಪರಿಚಯದ ನಿಖರ ಮಾಹಿತಿಯೇ ಇಲ್ಲದ ಕಾರಣ ಇಂತಹ ಎಲ್ಲಾ ಕೃತ್ಯಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದಾದ ಸಾಧ್ಯತೆ, ಮತಾಂತರ-ನಿಯಂತ್ರಣವೇ ಇಲ್ಲದ ಸೃಷ್ಟಿಯಿಂದುಂಟಾಗಬಹುದಾದ ಜನಾಂಗೀಯ ಪಲ್ಲಟನ ಇದರಿಂದ ದೇಶ ಮತ್ತೊಮ್ಮೆ ಛಿದ್ರವಾಗಬಹುದಾದ ಭೀತಿ, ಇವೆಲ್ಲಕ್ಕೂ ಬೆಂಬಲವಾಗಿ ನಿಲ್ಲಲು ತುದಿಗಾಲಲ್ಲಿ ನಿಂತಿರುವ (ದುಃ)ಬುದ್ಧಿಜೀವಿ ವರ್ಗ ಇಂತಹ ಗಂಭೀರ ಸಮಸ್ಯೆಗಳನ್ನು ಈಗಾಗಲೇ ಇವರನ್ನು ಒಳಬಿಟ್ಟುಕೊಂಡು ನಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದೇವೆ. ಆಶ್ರಯ ಕೊಡಬೇಕು ನಿಜ, ನಮ್ಮನ್ನು ಮನೆಯಿಂದ ಹೊರಹಾಕಬಾರದಲ್ಲವೇ?
ಭಾರತದಲ್ಲಿ ಎತ್ತ ನೋಡಿದರತ್ತ ಕೂಲಿಯಾಳುಗಳ ಸಮಸ್ಯೆ. ಅದರಲ್ಲೂ ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಸಮಸ್ಯೆ ವಿಪರೀತ. ದೇಶದೊಳಕ್ಕೆ ಅಕ್ರಮವಾಗಿ ನುಗ್ಗುವ ಜನರಿಗೆ ದೇಶದ ಈ ಪರಿಸ್ಥಿತಿಯೇ ಲಾಭ ತಂದೊಡ್ಡಿದೆ. ಹೆಚ್ಚಿನ ದೇಶೀಯ ಕೂಲಿ ಕಾರ್ಮಿಕರು ಮಹಾನಗರಗಳತ್ತ ಮುಖ ಮಾಡುವುದರಿಂದ ಸಣ್ಣ ನಗರಗಳಲ್ಲಿ ಉಂಟಾಗುವ ಕಾರ್ಮಿಕ ಅಭಾವ ಅಕ್ರಮ ವಲಸೆಗಾರರ ಪಾಲಿಗೆ ಭಾಗ್ಯದ ಬಾಗಿಲನ್ನೇ ತೆರೆದಿದೆ. ದೇಶೀಯ ಕಾರ್ಮಿಕರಿಗಿಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಕಾರಣ ಮೇಸ್ತ್ರಿಗಳಿಗೂ ಇವರು ಅಚ್ಚುಮೆಚ್ಚು. ಹಗಲು-ರಾತ್ರಿ ದುಡಿದು ತಾವು ಹೇಳಿದ ಸಮಯಕ್ಕೆ ಕೆಲಸ ಮುಗಿಸಿಕೊಡುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಮೇಸ್ತ್ರಿಗಳು ಹಾಗೂ ಮಾಲಿಕರು ಇವರನ್ನೇ ಅವಲಂಬಿಸುತ್ತಾರೆ. ಅದರಲ್ಲೂ ಮನೆಗಳಿಗೆ ಗ್ರಾನೈಟ್ ಜೋಡಣೆ ಹಾಗೂ ಫ್ಲಾಸ್ಟರ್ ಆಫ್ ಪ್ಯಾರೀಸ್ ಕೆಲಸದಲ್ಲಿ ಇವರು ನಿಪುಣತೆ ಹೊಂದಿರುತ್ತಾರೆ. ಜೊತೆಗೆ, ಕೂಲಿ ವಿಷಯದಲ್ಲೂ ಹೆಚ್ಚಿನ ತಕರಾರು ಮಾಡದ ಕಾರಣ ಇವರು ತಮ್ಮ ಮಾಲಿಕರ ಮೆಚ್ಚುಗೆ ಗಳಿಸುತ್ತಾರೆ. ತಮ್ಮ ಲಾಭವನ್ನೇ ನೋಡಿಕೊಳ್ಳುವ ಮೇಸ್ತ್ರಿ, ಕಟ್ಟಡದ ಮಾಲಿಕರಿಗೆ ಕೂಲಿಯಾಳುಗಳ ಪರಿಚಯ, ದೇಶ, ನಡತೆಗಳನ್ನು ಕಟ್ಟಿಕೊಂಡು ಆಗಬೇಕದ್ದಾದರೂ ಏನು? ಹೀಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರಾಗಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರು ಸದ್ದಿಲ್ಲದೆ ನುಸುಳಿಕೊಳ್ಳುತ್ತಿದ್ದಾರೆ. ನಿರ್ಮಾಣ ವಲಯಕ್ಕೆ ಬಹುಮುಖ್ಯವಾಗಿ ಬೇಕಿರುವ ಇಟ್ಟಿಗೆ ಕಾರ್ಖಾನೆಗಳಲ್ಲಿ ವಲಸಿಗರದೇ ಕಾರುಬಾರು. ಕಾರ್ಖಾನೆ ಇಟ್ಟಿಗೆಗೆ ಬಹು ಬೇಡಿಕೆ ಇರುವ ಈ ಕಾಲದಲ್ಲಿ ಇಟ್ಟಿಗೆ ನಿರ್ಮಾಣದ ಕಾರ್ಖಾನೆಗಳಿಗೇನು ಬರವಿದೆಯೇ? ಪ್ರತಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲೂ ಹತ್ತಾರು ಇಟ್ಟಿಗೆ ಕಾರ್ಖಾನೆಗಳಿವೆ. ಇಂತಹ ಕಾರ್ಖಾನೆಗಳೇ ಪಶ್ಚಿಮ ಬಂಗಾಳ, ಅಸ್ಸಾಂನವರು ಎಂದು ಹೇಳಿಕೊಂಡು ತಿರುಗಾಡುವ ಬಾಂಗ್ಲಾ ನುಸುಳುಕೋರರ ಆಶ್ರಯತಾಣಗಳು. ಕಟ್ಟಡ ನಿರ್ಮಾಣ ಹಾಗೂ ಅದರ ಇತರ ಕೆಲಸಗಳಾದ ಬಡಗಿ, ಪ್ಲಂಬಿಂಗ್, ಗ್ರಾನೈಟ್, ಪೇಂಟಿಂಗ್ ಕೆಲಸಗಳಲ್ಲೂ ಇವರದೇ ಪಾರುಪತ್ಯ! ನಂಜನಗೂಡು ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ಗ್ರಾನೈಟ್ ಕಾರ್ಖಾನೆಗಳಲ್ಲಿ ಇವರೇ ಕೂಲಿ ಕಾರ್ಮಿಕರು. ಬೆರಳೆಣಿಕೆಯ ಕನ್ನಡಿಗರ ಮಧ್ಯೆ ಇವರದೇ ಪ್ರಾಬಲ್ಯ.
ನಗರಗಳಲ್ಲಿ ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವವರೆಲ್ಲಾ ನಮ್ಮದೇ ದೇಶದ ಬಡಪಾಯಿಗಳು ಎಂದರೆ ನಿಮ್ಮ ನಿರೀಕ್ಷೆ ತಪ್ಪಾದೀತು. ಅಲ್ಲಿಯೂ ಬಾಂಗ್ಲಾದಿಂದ ಅಕ್ರಮವಾಗಿ ಇತ್ತ ನುಸುಳಿದವನಿರಬಹುದು. ಹಣ್ಣು, ಜ್ಯೂಸ್, ಪಾನಿಪೂರಿಯಂತಹ ವ್ಯಾಪಾರದಿಂದ ಹಿಡಿದು, ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಟ್ರಾಫಿಕ್ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವ, ಆಟಿಕೆ ಮಾರುವ ಕಾಯಕದಲ್ಲಿಯೂ ನುಸುಳುಕೋರರು ತೊಡಗಿಕೊಂಡಿದ್ದಾರೆ. ಇವರ ಪೂರ್ವಾಪರ ವಿಚಾರಿಸಿದರೆ ಪಶ್ಚಿಮ ಬಂಗಾಳ, ಅಸ್ಸಾಂ ಅಥವಾ ಬಿಹಾರಗಳ ಯಾವುದೋ ಗ್ರಾಮದ ಹೆಸರು ಹೇಳಿ ಸಾಗ ಹಾಕುತ್ತಾರೆ. ಅಸ್ಸಾಮಿಗಳು, ಬಂಗಾಳಿಗಳ ಹೆಸರಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಕಾಫಿ ತೋಟಗಳು, ಟೀ ಎಸ್ಟೇಟ್ಗಳಲ್ಲಿ ಕೂಲಿಗಳಾಗಿ ನೆಲೆಸಿದ್ದಾರೆ. ಭಾರತದಲ್ಲಿ ದಿನಕಳೆದಂತೆ ಕ್ಷೀಣಿಸುತ್ತಿರುವ ಕೌಶಲ್ಯರಹಿತ ಕಾರ್ಮಿಕರ ಸಂಖ್ಯೆಯನ್ನು ಮತ್ತೆ ತುಂಬುತ್ತಿರುವದು ಇದೇ ನುಸುಳುಕೋರ ವರ್ಗವೇ! ಡ್ರೈವರ್ಗಳು, ಹೊಟೇಲ್ ಮಾಣಿಗಳು, ಮನೆಕೆಲಸದವರು, ಕೃಷಿಕಾರ್ಮಿಕರು, ಕ್ಲೀನರ್ಗಳು, ಹಮಾಲಿಗಳು, ಚಿಂದಿ ಆಯುವವರಲ್ಲಿ ಬೆಂಗಾಲಿ ಮಾತನಾಡುವ ಬಾಂಗ್ಲಾ ನುಸುಳುಕೋರರಿದ್ದಾರೆ! ಅಲ್ಲಿಗೆ ಕೌಶಲರಹಿತ ಔದ್ಯೋಗಿಕ ಪಲ್ಲಟನ ಪ್ರಾರಂಭ!
ಇನ್ನೊಂದು ಭಯಾನಕ ಸಮಸ್ಯೆ ಇದೆ. ಈ ನುಸುಳುಕೋರರೆಲ್ಲಾ ಒಂದೋ ಮುಸ್ಲಿಮರು ಅಥವಾ ಮುಸ್ಲಿಮರಾಗಿ ಮತಾಂತರ ಹೊಂದಿದವರು. ಅವರು ತಮ್ಮ ಕ್ಯಾಂಪಿನಲ್ಲೇ ಮಸೀದಿ ನಿರ್ಮಿಸಿ ಕುರಾನ್ ಪಠಣಕ್ಕೆ ತೊಡಗುತ್ತಾರೆ. ಸ್ಥಳೀಯ ಮೌಲ್ವಿಗಳಿಂದ ಇವರಿಗೆ ಬೇಕಾದ ಸಹಾಯ, ಸೌಲಭ್ಯಗಳೂ ದೊರೆಯುತ್ತವೆ. ಸ್ಥಳೀಯ ಮೌಲ್ವಿಗಳಿಗೆ, ಮುಸ್ಲಿಮರಿಗೆ ಇವರೆಲ್ಲಾ ಬಾಂಗ್ಲಾ ನುಸುಳುಕೋರರೆಂಬಾ ವಿಚಾರ ತಿಳಿದಿದ್ದರೂ ಅದನ್ನು ಪೊಲೀಸರಿಗೆ ತಿಳಿಸದೆ ದೇಶದ್ರೋಹದ ಕಾರ್ಯವೆಸಗುತ್ತಿದ್ದಾರೆ! ಅತ್ತ ಭಯೋತ್ಪಾದಕ ಸಂಘಟನೆಗಳೂ ಈ ನುಸುಳುಕೋರರನ್ನು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವ ಮೂಲಭೂತವಾದಿಗಳಿಗೆ ಬಾಂಗ್ಲಾ ನುಸುಳುಕೋರರು ಅತಿ ಪ್ರೀತ್ಯರ್ಥರು! ಅಲ್ಲಿಗೆ ಭಯೋತ್ಪಾದಕ ಸಂಘಟನೆಗಳನ್ನು ದೇಶದ ಮೂಲೆ ಮೂಲೆಯ ಮುಸ್ಲಿಮರೊಂದಿಗೆ ಬೆಸೆಯಲು ಕೊಂಡಿಯೊಂದು ದೊರೆತಂತಾಯ್ತು. ಮೊದಲೇ "ತಮ್ಮ ದೇವರು, ಗ್ರಂಥ, ಮತವನ್ನು ನಂಬದವರು ಕಾಫಿರರು. ಅವರ ಮೇಲೆ ಜಿಹಾದ್ ಘೋಷಿಸಬೇಕು" ಎಂದು ದಿನನಿತ್ಯ ಪಠಿಸುವ ಮತೀಯರನ್ನು ದೇಶದ ವಿರುದ್ಧ ತಿರುಗಿಸಲು ಇನ್ನೇನು ಬೇಕು? ಮಸೀದಿಗಳೆಲ್ಲಾ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಹೊಂದಿದ್ದರೂ ಆಶ್ಚರ್ಯವಿಲ್ಲ! ದೇಶದ ಕಾನೂನಿನ ಲವಲೇಶವೂ ಪರಿಚಯವಿಲ್ಲದ, ಮಸೀದಿಯ ಆದೇಶಗಳನ್ನು ಮಾತ್ರ ಪಾಲಿಸುವ ಮಂದಿಯಿಂದ ದೇಶದ ಭದ್ರತೆಗೆ ಅಪಾಯ ಸದಾ ಕಟ್ಟಿಟ್ಟ ಬುತ್ತಿ. ಮುಂಬಯಿಯಲ್ಲಿ ಅಮರ್ ಜವಾನ್ ಜ್ಯೋತಿಗೆ ಒದ್ದ ಇವರ ಧಿಮಾಕನ್ನೇ ನೆನೆಸಿಕೊಳ್ಳಿ! ಭಾರತದ ಕರಾಳ ಭವಿಷ್ಯವನ್ನು ನೋಡಿ ಭಯವಾಗುತ್ತಿದೆ.
ಏಪ್ರಿಲ್ 2013ರಲ್ಲಿ ದಕ್ಷಿಣ ದೆಹಲಿ ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಾಲ್ಕು ಜನ ಬಾಂಗ್ಲಾ ನುಸುಳುಕೋರರಿಗೆ ಹದಿಮೂರು ವರ್ಷ ಶಿಕ್ಷೆ ವಿಧಿಸುತ್ತಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶಾಸ್ತ್ರಿ ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯುತ್ತಾ ಹೇಳಿದ ಮಾತು ಇದರ ಗಂಭೀರತೆಗೆ ಕನ್ನಡಿ ಹಿಡಿದಿದೆ. "ನೆರೆಯ ದೇಶಗಳಿಂದ ಬಂದ ಅಕ್ರಮ ವಲಸಿಗರನ್ನು ಒಟ್ಟುಗೂಡಿಸಿದರೆ, ಆ ಸಂಖ್ಯೆ ಒಂದು ಮಧ್ಯಮ ಗಾತ್ರದ ದೇಶದ ಜನಸಂಖ್ಯೆಗೆ ಸಮಾನವಾಗಿದೆ. ಈ ನುಸುಳುಕೋರರು ಕಡಿಮೆ ಕೂಲಿಗೆ ಕೆಲಸ ಮಾಡುವ ಮೂಲಕ ಮಧ್ಯಮ ವರ್ಗದ ಸ್ಥಳೀಯರನ್ನು ಯಾಮಾರಿಸಿದ್ದಾರೆ. ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಗರನ್ನು ಗುರುತಿಸಿ ಆದಷ್ಟು ಬೇಗನೆ ಅವರ ದೇಶಗಳಿಗೆ ಕಳುಹಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಕೇಳಿಕೊಳ್ಳುತ್ತಿದ್ದೇನೆ. ಮತ ಬ್ಯಾಂಕ್ ರಾಜಕಾರಣ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ವಿದೇಶೀಯರ ಜೊತೆಗಿನ ವ್ಯವಹಾರ ತಮ್ಮದಲ್ಲವೆಂದು ಪರಸ್ಪರರ ಮೇಲೆ ಆರೋಪ ಹೊರಿಸುತ್ತಾ ಕಾಲಹರಣ ಮಾಡಿದುದರಿಂದ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಅಪರಾಧ ಚಟುವಟಿಕೆ ನಿರಂತರ ಹೆಚ್ಚಾಗುತ್ತಿದೆ." ನ್ಯಾಯಾಧೀಶರ ಮಾತನ್ನಾದರೂ ನಮ್ಮ ಲಜ್ಜೆಗೆಟ್ಟ ಸರಕಾರಗಳು ಪಾಲಿಸುತ್ತಿದ್ದರೆ ಇಂದು ಈ ಸಮಸ್ಯೆ ಪರಿಹಾರವಾಗುತ್ತಿತ್ತು! ಆದರೆ ಹಿಂದಿನ ಸರಕಾರ ತನ್ನ ಸೆಕ್ಯುಲರ್ ನೀತಿ, ಶೇಖ್ ಹಸೀನಾರೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವ ನೆಪ, ಮತಬ್ಯಾಂಕ್ ರಾಜಕಾರಣವನ್ನು ದೃಷ್ಟಿಯಲ್ಲಿರಿಸಿಕೊಂಡು ಗಡಿಭದ್ರತಾ ಪಡೆಗೆ ಅನೇಕ ನಿರ್ಬಂಧಗಳನ್ನು ವಿಧಿಸಿತ್ತು. ತಾವು ಮರುದಾಳಿ ಮಾಡುವಂತಿಲ್ಲವಾದ ಕಾರಣ ಅನೇಕ ಸೈನಿಕರು ಸಾವನ್ನಪ್ಪಿದ, ಹಲವರು ಗಾಯಗೊಂಡ ನಿದರ್ಶನಗಳೂ ಇವೆ. ಇತ್ತೀಚೆಗೆ ಮೋದಿ ಪ್ರಧಾನಿಯಾದ ಬಳಿಕ ಇಂತಹುವುಗಳಿಗೆಲ್ಲಾ ಕಡಿವಾಣ ಬಿದ್ದಿರುವುದು ಸಂತಸದ ವಿಚಾರ.
ಈ ತೀವ್ರ ಸ್ವರೂಪದ ಅಕ್ರಮಪ್ರವೇಶದಿಂದ ಗರಿಷ್ಠ ಹಾನಿಗೀಡಾದ ರಾಜ್ಯವೆಂದರೆ ಅಸ್ಸಾಂ. ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ತೀವ್ರಸ್ವರೂಪದ ಜನಾಸಂಖ್ಯಾ ಅಸಮತೋಲನ ಉಂಟಾಗಿದೆ. ಅಕ್ರಮ ಗಡಿ ನುಸುಳುವಿಕೆ ಹಾಗೂ ಏಕರೂಪದ ಕಾನೂನು ಇಲ್ಲದಿರುವ ಕಾರಣ ಅಸ್ಸಾಂನ ಡುಬ್ರಿ, ಗೋಲ್ಪಾರಾ, ಬಾರ್ ಪೇಟ್, ನಾಗೋನ, ಹೈಲಂಕಾಡಿ, ಕರಿಂಗಂಜ್, ಮಾರಿಂಗಾನ, ದರಾಂಗ್, ಬೊಂಗೈಗಾಂವ್ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೫೦%ಗಿಂತಲೂ ಅಧಿಕವಾಗಿದೆ. ಅಲ್ಲದೆ ಈ ಏರಿಕೆಯ ಪ್ರಮಾಣವೂ ರಾಷ್ಟ್ರೀಯ ಸರಾಸರಿಗಿಂತ ಬಹಳ ಹೆಚ್ಚು. ಪರಿಣಾಮವಾಗಿ ಆಗಾಗ ಮತೀಯ ಘರ್ಷಣೆಗಳೂ ನಡೆದಿವೆ. ಬೃಹತ್ ಸ್ವರೂಪದ ಹತ್ಯಾಕಾಂಡಗಳೂ ಸಂಭವಿಸಿವೆ. ಇದೇ ರೀತಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳಾಗುವ ಮುಜಾಫರ್ ನಗರ್, ಮೊರಾದಾಬಾದ್, ರಾಂಪುರ, ಸಹರಾನ್ಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ೩೫%ಕ್ಕಿಂತ ಅಧಿಕವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ಸದಾ ಗಲಭೆಯ ಕಿಚ್ಚು ಹಚ್ಚುವ ಮಾಲ್ಡಾ, ಉತ್ತರ ದಿನಾಜ್ಪುರಗಳಲ್ಲಿ ಮುಸಲರು ೫೦%ಕ್ಕಿಂತ ಜಾಸ್ತಿಯಿದ್ದರೆ, ಹತ್ತು ಜಿಲ್ಲೆಗಳಲ್ಲಿ ಅವರ ಸಂಖ್ಯೆ ೨೫%ಗಿಂತಲೂ ಹೆಚ್ಚು! ಬಾಂಗ್ಲಾದೇಶದ ಗಡಿಭಾಗದಿಂದ ಕೇವಲ 8 ಕಿಮಿ ದೂರದಲ್ಲಿರುವ ಮಾಲ್ಡಾ ಜಿಲ್ಲೆಯಂತೂ ಅಕ್ರಮ ನುಸುಳುಕೋರರ ಒಂದು ಬೃಹತ್ ಅಡ್ಡೆ! ಪೋಲೀಸ್ ಠಾಣೆಯ ಮೇಲೆ ದಾಳಿ, ಅಪರಾಧದ ದಾಖಲೆಗಳನ್ನು ಸುಡುವ ದೇಶದ್ರೋಹಿ ಚಟುವಟಿಕೆಗಳು, ಭದ್ರತಾ ಸಿಬ್ಬಂದಿಯ ಮೇಲಿನ ಹಲ್ಲೆ, ಫತ್ವಾ ಹೊರಡಿಸಿ ಹಿಂದೂಗಳ ಮೇಲೆ ದಾಳಿ, ಹಿಂಸಾಚಾರ, ಗುಂಪು ಘರ್ಷಣೆ, ಬಾಂಬ್ ತಯಾರಿಕೆ, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಹಸ್ತ ಇವೆಲ್ಲವೂ ಇಲ್ಲಿ ನಿತ್ಯದ ಸಂಗತಿಗಳು. ಈ ಮೂಲಭೂತವಾದಿ ಗುಂಪುಗಳ ಭಯದಿಂದಾಗಿಯೇ ಗಡಿಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳು ಸುರಕ್ಷಿತ ಜಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ನಕಲಿ ನೋಟುಗಳ ಹಾವಳಿ, ಗೋವು ಸಾಗಣಿಕೆಯಂತಹ ದುಷ್ಟ ಚಟುವಟಿಕೆಗಳಿಗೆ ಇದು ರಾಜಮಾರ್ಗ! ಜೊತೆಗೆ ಈ ಜಿಹಾದೀ ಚಟುವಟಿಕೆಗಳಿಗೆ ಬಂಗಾಳದ ಮುಖ್ಯಮಂತ್ರಿ ದೀದಿಯ ಕೃಪಾಕಟಾಕ್ಷ ಬೇರೆ! ಇಂತಹ ಮೂಲಭೂತವಾದಿಗಳನ್ನು ಬಗ್ಗುಬಡಿಯುವ ಬದಲು ಅವರನ್ನು ಪೋಷಿಸುವವರಿಗೆ ಮಂತ್ರಿಗಿರಿ, ರಾಜಕೀಯ, ಲಾಭವುಳ್ಳ ಸರಕಾರಿ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ಬಿಹಾರದ ಕಿಶನ್ ಗಂಜ್ ಹತ್ತಿರ ಹತ್ತಿರ ೭೦% ಮುಸಲರನ್ನು ಹೊಂದಿರುವ ಮಿನಿ ಪಾಕಿಸ್ತಾನ! ಕಾತಿಹಾರ್, ಅರಾರಿಯ, ಪೂರ್ನಿಯಾಗಳಲ್ಲಿ ೪೦% ಕ್ಕಿಂತಲೂ ಅಧಿಕ ಮುಸಲರಿದ್ದು, ಈ ಸಂಖ್ಯೆ ವಿಪರೀತ ಏರುತ್ತಿದೆ. ಇವೆಲ್ಲವೂ ಅಕ್ರಮ ನುಸುಳುಕೋರರಿಗೆ ಆಶ್ರಯ ಕೊಟ್ಟದ್ದಕ್ಕೆ ಸಿಕ್ಕ ಪ್ರತಿಫಲಗಳು!
ಇದು ಅಕ್ರಮ ಬಾಂಗ್ಲಾ ನುಸುಳುಕೋರರಿಂದುಂಟಾದ ಸಮಸ್ಯೆಯಾದರೆ ಆಫ್ರಿಕನ್ನರದ್ದು ಇನ್ನೊಂದು ರೀತಿಯ ಸಮಸ್ಯೆ. ದೇಶದ ವಿವಿಧ ನಗರಗಳಲ್ಲಿ ಡ್ರಗ್ಸ್ ಮಾರಾಟ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಹು ದೊಡ್ದ ವರ್ಗ ನೈಜೀರಿಯನ್ನರದ್ದು! ತೀರಾ ಇತ್ತೀಚೆಗೆ ಮನಸೋ ಇಚ್ಛೆ ಮದ್ಯ ಕುಡಿದು ಅಥವಾ ಡ್ರಗ್ಸ್ ಸೇವಿಸಿ ಸಾರ್ವಜನಿಕರಲ್ಲಿ ಭಯಭೀತಿ ಉಂಟುಮಾಡಿದ, ಪೊಲೀಸರ ಬಳಿಯೇ ಧಿಮಾಕು ಪ್ರದರ್ಶಿಸಿದ ಅಫ್ರಿಕನ್ ವಿದ್ಯಾರ್ಥಿಗಳಿಂದ ಸಂಭವಿಸಿದ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇತರ ದೇಶಗಳಿಂದ ವಿದ್ಯಾರ್ಜನೆಗೆಂದು ಬರುವ ವಿದ್ಯಾರ್ಥಿಗಳು ಸುಲಭವಾಗಿ ಈ ಡ್ರಗ್ಸ್ ಅಡ್ದೆಗಳು ಹಾಗೂ ವೇಶ್ಯಾವಾಟಿಕೆಯ ಜಾಲಗಳನ್ನು ನಡೆಸುವುದು ಹೇಗೆ? ಬಳಿಕ ಬಂದ ವಿದ್ಯಾರ್ಥಿಗಳು ಸುಲಭವಾಗಿ ಅದಕ್ಕೆ ಬಲಿಬಿಳುವುದು ಹೇಗೆ? ಇದು ನಮ್ಮ ಆಂತರಿಕ ಭದ್ರತಾ ಲೋಪವಲ್ಲವೇ? ನಾಳೆ ಅದೇ ಜನ ಅಕ್ರಮ ಶಸ್ತ್ರಾಸ್ತ್ರ ಜಾಲಳನ್ನು ಸ್ಥಾಪಿಸುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆ ಇದೆ? ವಿದ್ಯಾರ್ಥಿಯ ವೀಸಾ ಮೂಲಕ ಬರುವವರು ನಿಜವಾದ ವಿದ್ಯಾರ್ಥಿಗಳು ಹೌದೋ ಅಲ್ಲವೋ ಎಂದು ಬ್ಯೂರೋ ಆಫ್ ಇಮಿಗ್ರೇಷನ್ ಸಾಕಷ್ಟು ಪರಿಶೀಲನೆ ಯಾಕೆ ನಡೆಸುತ್ತಿಲ್ಲ?
ಇವೆಲ್ಲವುಗಳ ಜೊತೆ ವ್ಯವಹರಿಸಲು ಭಾರತದಲ್ಲೊಂದು ಕಟ್ಟುನಿಟ್ಟಾದ ವಲಸೆ ನೀತಿಯೇ ಇಲ್ಲ ಎನ್ನುವುದೇ ಒಂದು ದೊಡ್ಡ ಚೋದ್ಯ! ಇರುವ ಕಾನೂನುಗಳನ್ನಾದರೂ ಉಪಯೋಗಿಸಬಹುದಲ್ಲವೇ ಎಂದರೆ ಆಫ್ರಿಕಾದ ವಿದ್ಯಾರ್ಥಿಗಳ ಜೊತೆ ಕಟ್ಟುನಿಟ್ಟಾಗಿ ವ್ಯವಹರಿಸಿದರೆ ನಮ್ಮ ಹಾಗೂ ಆಫ್ರಿಕಾದ ವಿದೇಶೀ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎನ್ನುವ ಹುಸಿ ಭಯ! ಅವರ ಅಕ್ರಮ ಅಡ್ಡೆಗಳನ್ನು ನಾಶಪಡಿಸಿದರೆ ಅದು ವರ್ಣಭೇದ ನೀತಿಯ ಇನ್ನೊಂದು ಮಜಲಾದೀತು ಎನ್ನುವ ಭೀತಿ! ಅಮೆರಿಕಾ, ಇಸ್ರೇಲುಗಳು ಇಂತಹ ವಿಚಾರದಲ್ಲಿ ಕಠಿಣ ನೀತಿ ಅನುಸರಿಬಹುದಾದರೆ ಭಾರತದಂತಹ ಅತಿ ದೊಡ್ಡ ಅರ್ಥ ವ್ಯವಸ್ಥೆಯುಳ್ಳ ದೇಶಕ್ಕೆ ಯಾಕೆ ಸಾಧ್ಯವಿಲ್ಲ? ಎಲ್ಲದರಲ್ಲೂ ಶಾಂತಿಯುತವಾಗಿರಬೇಕೆಂದು ದೇಶದ ಭದ್ರತೆಯ ವಿಚಾರದಲ್ಲೂ ರಾಜೀ ಮಾಡಿಕೊಳ್ಳುವುದು ಎಷ್ಟು ಸರಿ?
ಹೊರದೇಶಗಳಿಂದ ಶಿಕ್ಷಣ, ವೈದ್ಯಕೀಯ, ಉದ್ಯೋಗ, ಪ್ರವಾಸಕ್ಕಾಗಿ ಜನ ಇಲ್ಲಿಗೆ ಬರುವುದು ಸಂತೋಷದ ವಿಚಾರವೇ. ಆದರೆ ವೀಸಾ ಅವಧಿ ಮುಗಿದ ತಕ್ಷಣ ಅವರನ್ನು ಮರುಕಳುಹದಿದ್ದರೆ ಆಗುವ ಅನಾಹುತಗಳಿಗೆ ಯಾರು ಹೊಣೆ? ಇಲ್ಲಿ ಬಂದವರ ಮೇಲೆ ನಿಗಾ ಇಡಬೇಕಲ್ಲವೇ? ಅವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದಾಗ ಅದನ್ನು ತಡೆಗಟ್ಟಬೇಕಲ್ಲವೇ? ಇದಕ್ಕಾಗಿ ಬಲವಾದ ವಲಸೆ ಹಾಗೂ ಗಡೀಪಾರು ನೀತಿಯನ್ನು ಭಾರತ ಹೊಂದುವ ಅಗತ್ಯವಿದೆ. ಅಲ್ಲದೇ ಈ ಕಾನೂನನ್ನು ಸುಸೂತ್ರವಾಗಿ ನಡೆಸಲು ರಾಜಕೀಯರಹಿತವಾದ ಸ್ವತಂತ್ರ ಸಂಸ್ಥೆಯೊಂದರ ಅವಶ್ಯಕತೆಯೂ ಬಹಳ. ಭಾರತಕ್ಕೆ ಬರುವ ಪ್ರತಿಯೊಬ್ಬ ವಿದೇಶಿಗನ ಮಾಹಿತಿಯ ನಿಖರ ದಾಖಲಾತಿ ಹಾಗೂ ಅದರ ನಿರ್ವಹಣೆಯ ಅಗತ್ಯತೆಯಿದೆ.
ಇದು ಭಾರತದ ಕಥೆಯಾದರೆ ವಲಸಿಗರಿಗೆ ತಮ್ಮ ಹೆಬ್ಬಾಗಿಲನ್ನು ತೆರೆದು ಪೂರ್ಣಕುಂಭ ಸ್ವಾಗತ ಕೋರಿದ ಯೂರೋಪಿನ ದೇಶಗಳು ತಮ್ಮ ತಪ್ಪಿಗೆ ಪರಿತಪಿಸುವ ಕಾಲ ಹತ್ತಿರವಾಗುತ್ತಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಇಂಗ್ಲೆಂಡಿನ ಮುಸ್ಲಿಂ ಜನಸಂಖ್ಯೆ 200%ದಷ್ಟು ಹೆಚ್ಚಳವಾಗಿದ್ದು ಇದೇರೀತಿ ಮುಂದುವರೆದರೆ ಮುಂದಿನ ಹದಿನೈದು ವರ್ಷಗಳಲ್ಲಿ ಇಂಗ್ಲೆಂಡಿನ ಅರ್ಧಕ್ಕರ್ಧ ಜನಸಂಖ್ಯೆ ಮುಸ್ಲಿಂಮಯವಾಗಿಬಿಡುತ್ತದೆ. ಆದರೆ ಇದರಿಂದೇನೂ ಇಂಗ್ಲೀಷರಿಗೆ ಬುದ್ಧಿ ಬಂದಂತೆ ಕಾಣಿಸುತ್ತಿಲ್ಲ. ಅಲ್ಲಿ ಇಸ್ಲಾಂ ಮೂಲಭೂತವಾದದ ವಿರುದ್ಧ ಹೋರಾಡುವವರನ್ನು ಇಲ್ಲಿನಂತೆಯೇ "ಎನಿಮೀ ಆಫ್ ಸ್ಟೇಟ್" ಎಂದು ಕರೆದು ಜೈಲಿಗಟ್ಟಲಾಗುತ್ತಿದೆ. ಇದಕ್ಕೆ ಸರಿಯಾಗಿ ಕಳೆದ ಒಂದೇ ವಾರದಲ್ಲಿ ಎರಡೆರಡು ಬಾಂಬುದಾಳಿಗಳು ಅಲ್ಲಿ ನಡೆದಿವೆ. ಒಂದು ಕಾಲದ ಸೂರ್ಯ ಮುಳುಗದ ನಾಡು ಸೆಕ್ಯುಲರ್ ನೀತಿಯಿಂದ ಕೊಚ್ಚೆಗೆ ಜಾರುತ್ತಿದೆ! ಫ್ರಾನ್ಸಿನಲ್ಲಿ ಫರ್ಟಿಲಿಟಿ ದರ 1.8 ಇದ್ದರೆ ಅಲ್ಲಿನ ಮುಸ್ಲಿಮರಲ್ಲಿ ಅದು 8ಕ್ಕೂ ಹೆಚ್ಚು! ಇದೇ ರೀತಿ ಮುಂದುವರೆದರೆ ಮುಂದಿನ 39 ವರ್ಷಗಳಲ್ಲಿ ಫ್ರಾನ್ಸ್ ಇಸ್ಲಾಮಿಕ್ ರಿಪಬ್ಲಿಕ್ ಆಗಿ ಬದಲಾಗಿರುತ್ತದೆ. ಏಂಜಲೋ ಮೋರ್ಕೆಲ್ ಯುದ್ಧ ಪೀಡಿತ ಮಧ್ಯ ಪೂರ್ವದಿಂದ ಬಂದ ಲಕ್ಷಾಂತರ ವಲಸಿಗರಿಗೆ ಜರ್ಮನಿಯ ಹೆಬ್ಬಾಗಿಲು ತೆರೆದರು. ಜರ್ಮನಿಗೆ ಬಂದ ಲಕ್ಷಾಂತರ ವಲಸಿಗರು ಯಾವ ದೇಶದವರೆಂಬ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಅಲ್ಲಿ ಇಸ್ಲಾಂನ ರಭಸ ಕಂಡರೆ 2050ಕ್ಕೆ ಜರ್ಮನಿ ಮುಸ್ಲಿಂ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಸರಕಾರದ ಅಧಿಕೃತ ವರದಿಯೇ ಹೇಳುತ್ತಿದೆ. ರಷ್ಯಾದಲ್ಲಿ ಪ್ರತೀ ಐವರಲ್ಲಿ ಒಬ್ಬ ಮುಸ್ಲಿಂ! ಬೆಲ್ಜಿಯಂನ 25% ಜನಸಂಖ್ಯೆ ಹಾಗೂ 50% ನವಜಾತ ಶಿಶುಗಳು ಮುಸ್ಲಿಮರು! 2025ಕ್ಕಾಗುವಾಗ ಯೂರೋಪ್ ದೇಶಗಳ ಮೂರರಲ್ಲಿ ಒಂದು ನವಜಾತ ಶಿಶು ಮುಸ್ಲಿಂ ಆಗಿರುತ್ತದೆ. 2001-06ರ ನಡುವೆ ಕೆನಡಾದ ಜನಸಂಖ್ಯೆ 1.6 ಮಿಲಿಯನ್ನಷ್ಟು ಹೆಚ್ಚಿತು. ಅದರಲ್ಲಿ 1.2 ಮಿಲಿಯನ್ ವಲಸಿಗರೇ ಆಗಿದ್ದರು! ಅವರು ಮುಸ್ಲಿಮರು ಎಂದು ಬೇರೆ ಹೇಳಬೇಕಾಗಿಲ್ಲ. 1970ರಲ್ಲಿ 1,00,000ವಿದ್ದ ಅಮೆರಿಕಾದ ಮುಸ್ಲಿಮರ ಸಂಖ್ಯೆ 2008ಕ್ಕಾಗುವಾಗ 90,00,000 ಆಯಿತು! ಸ್ವೀಡನ್ನಿನಲ್ಲಿ 2014ರಲ್ಲಿ ಹತ್ತುಸಾವಿರ ಬಲಪಂಥೀಯ ಕಾರ್ಯಕರ್ತರು ವಲಸಿಗರನ್ನು ಹೊರಹಾಕಬೇಕೆಂದು ಸರಕಾರವನ್ನು ಒತ್ತಾಯಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸರಕಾರಕ್ಕೆ ಆಗ ಕಿವಿ ಕೇಳಿಸುತ್ತಿರಲಿಲ್ಲ. ಜರ್ಮನಿ, ಇಂಗ್ಲೆಂಡ್, ಫ್ರಾನ್ಸುಗಳಲ್ಲಿ ನುಗ್ಗಿರುವ ವಲಸಿಗರು ರಾಜಾರೋಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಂದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಓಡುವ ದೃಶ್ಯಗಳ ವಿಡೀಯೋಗಳು ಯೂಟ್ಯೂಬುಗಳಲ್ಲಿ ಮಾಮೂಲಾಗಿಬಿಟ್ಟಿವೆ. ಇವೆಲ್ಲಾ ದೇಶಗಳಲ್ಲಿ ತಮ್ಮ ದೇಶವನ್ನು ಉಳಿಸಬೇಕೆಂಬ ಸಂಕಲ್ಪ ಹೊತ್ತು ಬಲಪಂಥೀಯ ಸಂಘಟನೆಗಳು ಬೀದಿಗಿಳಿದಿವೆ. ಆದರೆ ಆ ದೇಶಗಳಲ್ಲೂ ಭಾರತದಂತೆ ಸೆಕ್ಯುಲರ್ ಜೀವಿಗಳು ಇದಕ್ಕೆ ಅಡ್ದಗಾಲಾಗಿ ನಿಂತಿವೆ. ಸರಕಾರಗಳೂ ಈ ಸೆಕ್ಯುಲರುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಅಲ್ಲಿಯೂ ಮತಬ್ಯಾಂಕಿನ ದುರಾಸೆ! ಇವೆಲ್ಲವೂ ಅಸಮರ್ಪಕ ವಲಸೆ ನೀತಿ, ಅಥವಾ ಸಮರ್ಪಕವಾಗಿದ್ದರೂ ಅದನ್ನು ಅನುಷ್ಠಾನ ಮಾಡುವಲ್ಲಿನ ಕೊರತೆಯ ನೇರ ಪರಿಣಾಮಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ