ಪುಟಗಳು

ಗುರುವಾರ, ಜೂನ್ 8, 2017

ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ

ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ

               ಇಂದಿಗೆ ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಪುರಿಯ ರಥಬೀದಿ ಅಕ್ಷರಶಃ ಸ್ಮಶಾನವಾಗಿತ್ತು. ಜಗನ್ನಾಥ ಮಂದಿರದ ಐವತ್ತಕ್ಕೂ ಹೆಚ್ಚು ಅರ್ಚಕರ ಶವಗಳು ದೇಗುಲದ ಎದುರಿನ ಬೀದಿಯಲ್ಲಿ ಬೇಸಗೆಯ ಬಿರು ಬಿಸಿಲಿಗೆ ಒಣಗುತ್ತಿದ್ದವು. ಪೈಕ ಸರದಾರರ ಶವಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪೈಕ ಯೋಧರ ಮಕ್ಕಳ ಶವಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೈಕಾಗಳನ್ನು ಒಡಿಶಾದಿಂದ ಬಹಿಷ್ಕರಿಸಲಾಗಿತ್ತು. ಹಲವಾರು ಜನರನ್ನು ಬ್ರಿಟನ್ನಿನ ತೋಟಗಳಿಗೆ ಗುಲಾಮರಂತೆ ದುಡಿಸಲು ರವಾನಿಸಲಾಗಿತ್ತು. ಇಡಿಯ ಒಡಿಶಾದ ಮನೆಮನೆಗಳಲ್ಲಿ ದುಃಖ ಮಡುಗಟ್ಟಿತ್ತು. ಒಂದೊಂದು ಮನೆಯಲ್ಲೂ ಒಂದೋ ಮನೆಯ ಸದಸ್ಯರೊಬ್ಬರು ಕೊಲೆಯಾಗಿದ್ದರು ಅಥವಾ ದೇಶಭೃಷ್ಟರಾಗಿದ್ದರು. ಪುರಿಯ ಜಗನ್ನಾಥ ಅಸಹಾಯಕನಾಗಿ ದೇಗುಲದೊಳಗೆ ಬಂಧಿಯಾಗಿದ್ದ! ಬ್ರಿಟಿಷರು ಭಾರತದಲ್ಲಿ ಯಾವುದೇ ಕ್ರೌರ್ಯ ತೋರಲಿಲ್ಲ ಎನ್ನುವವರಿಗೆ ಇತಿಹಾಸದ ಈ ತಿಂಗಳು, ಒಡಿಶಾದ ಬೀದಿಬೀದಿಗಳು ಕ್ರೌರ್ಯದ ಪರಾಕಾಷ್ಠೆಯ ಸಾಕ್ಷಿಯಾಗಿ ನಿಂತಿದ್ದವು.

               ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ಅದಕ್ಕಾಗಿನ ಹೋರಾಟ, ಬ್ರಿಟಿಷರ ಕ್ರೌರ್ಯವನ್ನು ವರ್ಣಿಸುವಾಗ ಕಣ್ಣಿಗಡ್ಡವಾಗಿ ಪೊರೆ ಬಂದು ಕೂತಿತು. ಸ್ವಾತಂತ್ರ್ಯ ವೀರ ಸಾವರ್ಕರ್ 1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬರೆಯುವ ಸಾಹಸ ಮಾಡದಿರುತ್ತಿದ್ದರೆ, ಭಾರತದ ಸ್ವಾತಂತ್ರ್ಯ ಹೋರಾಟ ಗಾಂಧಿಯಿಂದಲೇ ಶುರುವಾಯಿತೆಂಬ ಕಾಂಗ್ರೆಸ್ಸಿಗರ ಅಪಲಾಪದ ಮೋಡಿಗೆ ಪ್ರತಿಯೊಂದು ಭಾರತದ ಪೀಳಿಗೆ ಒಳಗಾಗುತ್ತಿತ್ತೇನೋ. 1857ಕ್ಕೂ ಮುನ್ನ ನಡೆದ ಹಲವಾರು ಕ್ರಾಂತಿ ಹೋರಾಟಗಳು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರತಳಹದಿಯೊದಗಿಸಿದವು ಎನ್ನಲಡ್ಡಿಯಿಲ್ಲ. ಇದರೊಂದಿಗೆ ಭಾರತೀಯರಲ್ಲಿ ಐಕ್ಯಮತವಿರಲಿಲ್ಲ, ಹೋರಾಡದೆ ದಾಸ್ಯದ ಬಾವಿಗೆ ಬೀಳುವಂತಾಯಿತು ಎನ್ನುವ ಪೊಳ್ಳು ವಾದಗಳೆಲ್ಲ ಕಾಲಕಾಲಕ್ಕೂ ಇಲ್ಲಿ ನಡೆದ ಸಂಘರ್ಷಗಳ ಬೆಳಕಿನಲ್ಲಿ ಕರಗಿ ಹೋಗುತ್ತವೆ. ಭಾರತೀಯರ ಸ್ವಾತಂತ್ರ್ಯ ಪ್ರಾಪ್ತಿಯ ತುಡಿತದ ಅಂತಹ ಒಂದು ಕಥೆಯೇ ಪೈಕಾ ಕ್ರಾಂತಿ!

               ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ. ಕಾಲ ಬದಲಾದರೂ ಪೈಕಾಗಳ ವೀರತ್ವಕ್ಕೆ ಕುಂದು ಬಂದಿರಲಿಲ್ಲ. ಯುದ್ಧದ ಸಮಯದಲ್ಲಿ ರಾಜನ ಸೈನ್ಯದಲ್ಲಿ ಮುಂದಾಳುಗಳಾಗಿ, ಉಳಿದ ಸಮಯದಲ್ಲಿ ಕೋತ್ವಾಲ, ಆರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಧೀರರು ಪೈಕಾಗಳು. ಇವರ ಸೇವಾ ಮನೋಭಾವನೆಯಿಂದ ಸಂತೃಪ್ತರಾದ ರಾಜರು ಕಾಲಕಾಲಕ್ಕೆ ಪೈಕಾಗಳಿಗೆ ಭೂಮಿಯನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಕತ್ತಿವರಸೆಯಲ್ಲಿ ನಿಷ್ಣಾತರಾದ ಪ್ರಹರಿಗಳು, ಧನುರ್ವಿದ್ಯಾ ಪ್ರವೀಣ ಧೇಂಕಿಯಾಗಳು, ಕೋವಿಯ ಕೋವಿದರಾದ ಬನುವಾಗಳೆಂಬ ಮೂರು ವರ್ಗಗಳು ಈ ಪೈಕಾಗಳಲ್ಲಿವೆ.

              1803ರಲ್ಲಿ ಮರಾಠರಿಂದ ಒಡಿಷಾವನ್ನು ಕಿತ್ತುಕೊಂಡ ಆಂಗ್ಲರು ಅಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಹೊರಟಾಗ ಅದು ಸಹಜವಾಗಿ ಸಾಮಂತ ಖೋರ್ಡಾ ದೊರೆ ಎರಡನೇ ಮುಕುಂದ ದೇವನ ಕಣ್ಣು ಕೆಂಪಗಾಗಿಸಿತು. ಅತ ಪೈಕಾಗಳನ್ನು ಜೊತೆಗೂಡಿಸಿಕೊಂಡು ಹೋರಾಡಲು ಅಣಿಯಾಗುತ್ತಿರುವಂತೆಯೇ ಬ್ರಿಟಿಷರು ಸುತ್ತುವರಿದು ಆತನನ್ನು ಖೋರ್ಡಾದಿಂದ ಹೊರದಬ್ಬಿದರು. ಆತನ ಅರಮನೆ, ರಾಜ್ಯ ಬ್ರಿಟಿಷರ ವಶವಾಯಿತು. ಪೈಕಾಗಳ ಭೂಮಿಯನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಕಿತ್ತುಕೊಂಡಿತು. ಹೀಗೆ ಇನ್ನೂರು ವರ್ಷಗಳಿಂದ ರಾಜಧಾನಿಯಾಗಿ ಮೆರೆದಿದ್ದ ಖೋರ್ಡಾದ ಶುಕ್ರದೆಸೆ ಅಂತ್ಯವಾಗುವ ಸೂಚನೆ ದೊರಕಿತು. ಪರಂಪಾರಗತವಾಗಿ ತಮಗೆ ದೊರೆತಿದ್ದ ಉಂಬಳಿಯನ್ನು ಕಿತ್ತುಕೊಂಡು ಸುಲಿಗೆ, ದಬ್ಬಾಳಿಕೆಯನ್ನು ಆರಂಭಿಸಿದ ಕಂಪೆನಿಯ ಮೇಲೆ ಪೈಕಾಗಳು ಸಹಜವಾಗಿಯೇ ಆಕ್ರೋಶಿತಗೊಂಡರು. ಪ್ರಚಲಿತವಿದ್ದ ಕೌರಿ ಕರೆನ್ಸಿ ವ್ಯವಸ್ಥೆಯನ್ನು ಬದಲಾಯಿಸಿತು ಕಂಪೆನಿ ಸರಕಾರ. ವಹಿವಾಟುಗಳೆಲ್ಲಾ ಬೆಳ್ಳಿಯ ನಾಣ್ಯಗಳಲ್ಲೇ ನಡೆಯಬೇಕೆಂದು ತಾಕೀತು ಮಾಡಿತು. ಬೆಳ್ಳಿಯ ನಾಣ್ಯಗಳ ಪೂರೈಕೆ ಕಡಿಮೆಯಿದ್ದ ಕಾರಣ ಜನತೆ ತೆರಿಗೆ ಸಲ್ಲಿಸಲು ವಿಫಲವಾದಾಗ ನಿರ್ದಾಕ್ಷಿಣ್ಯವಾಗಿ ಅವರ ಭೂಮಿಯನ್ನು ಸೆಳೆದುಕೊಂಡಿತು. ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದನ್ನೂ ನಿಷೇಧಿಸಿತು. ಇದು ಪೈಕಾಗಳನ್ನು ಮತ್ತಷ್ಟು ಕೆರಳಿಸಿತು. ಬ್ರಿಟಿಷರ ದುರ್ನೀತಿಯಿಂದ ಕ್ರೋಧಗೊಂಡ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಮಸೆದು ನಿಲ್ಲಲು ಪೈಕಾಗಳನ್ನು ಹುರಿದುಂಬಿಸಿತು.

              ಆಗ ಮುಕುಂದ ದೇವನ ಸೇನಾಧಿಪತಿಯಾಗಿದ್ದವನು ಜಗಬಂಧು ವಿದ್ಯಾಧರ ಬಕ್ಷಿ. ಬಕ್ಷಿ ಎನ್ನುವುದು ಒರಿಸ್ಸಾದಲ್ಲಿ ಸೇನಾ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಉಪಾಧಿ. ದೇಶಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತಾಪೂರ್ವಕವಾಗಿ ರಾಜವಂಶದಿಂದ ವಂಶದ ಪೂರ್ವಜರಿಗೆ ಬಂದ ಜಹಗೀರು ಜಮೀನು ಜಗಬಂಧುವಿನ ಕೈಯಲ್ಲಿ ಝಗಮಗಿಸುತ್ತಿತ್ತು. ಆ ಜಮೀನನ್ನು ಮೋಸದಿಂದ ಪುರಿಯ ಜಿಲ್ಲಾಧಿಕಾರಿ ವಶಪಡಿಸಿಕೊಂಡ. ತನಗಾದ ಮೋಸ ಜೊತೆಗೆ ತನ್ನ ಒಡೆಯನಿಗಾದ ಅನ್ಯಾಯ, ರೈತಾಪಿ ವರ್ಗದ ಮೇಲೆ ಬ್ರಿಟಿಷರು ಎರಗುತ್ತಿದ್ದ ವೈಖರಿಯನ್ನು ನೋಡಿ ಜಗಬಂಧು ರೋಸಿಹೋದ. ಆತ ರೈತಾಪಿ, ಬುಡಕಟ್ಟು ವರ್ಗ ಹಾಗೂ ತನ್ನ ಪೈಕ ಜನಾಂಗವನ್ನು ಸಂಘಟಿಸಿದ. ಮಾರ್ಚ್ 1817ರಲ್ಲಿ 400 ಜನರಿದ್ದ ಖೋಂಡ್ ಎಂಬ ಬುಡಕಟ್ಟು ವರ್ಗ ಖೋರ್ಡಾ ಹಾಗೂ ಘೂಮುಸರ್ಗಳನ್ನು ಬ್ರಿಟಿಷ್ ಅಧಿಪತ್ಯದಿಂದ ಬಿಡುಗಡೆಗೊಳಿಸಲು ಧಾವಿಸಿ ಬಂತು. ಜಗಬಂಧು ತನ್ನ ಪೈಕ ಯೋಧರು ಹಾಗೂ ರಾಜಾ ಮುಕುಂದ ದೇವನೊಡನೆ ಈ ಯೋಧ ಪಡೆಯನ್ನು ಸೇರಿಕೊಂಡು ಅದರ ನೇತೃತ್ವ ವಹಿಸಿದ. ಈ ಕ್ರಾಂತಿ ಸೈನ್ಯ ಕೈಗೆ ಸಿಕ್ಕ ಬ್ರಿಟಿಷ್ ಅಧಿಕಾರಿಗಳನ್ನು ಸದೆಬಡಿದು ಅವರನ್ನು ಓಡಿಸಿ ಎರಡೂ ನಗರಗಳನ್ನೂ ಸ್ವತಂತ್ರಗೊಳಿಸಿತು. ಮಾರ್ಗ ಮಧ್ಯದಲ್ಲಿ ಜಮೀಂದಾರರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಬೆಂಬಲ ಈ ಸೇನೆಗೆ ದೊರಕಿತು. ಕನಿಕಾ, ಕುಜಾಂಗ್, ನಯಾಘರ್, ಘೂಮುಸರ್ಗಳ ಅರಸರು, ಕರಿಪುರ, ಮಿರ್ಚ್ ಪುರ, ಗೋಲ್ರಾ, ಬಲರಾಮಪುರ, ರೂಪಾಸಾ ಮೊದಲಾದ ಸ್ಥಳಗಳ ಜಮೀಂದಾರರು ಈ ಕ್ರಾಂತಿ ಸೇನೆಗೆ ಸಹಕಾರಿಯಾಗಿ ನಿಂತರು. ಈ ಕ್ರಾಂತಿ ಕ್ಷಣಮಾತ್ರದಲ್ಲಿ ಪುರಿ, ಪಿಪ್ಲಿ ಹಾಗೂ ಕಟಕ್'ಗಳಿಗೂ ಹಬ್ಬಿತು. ಪುರಿಯ ಮಂದಿರದ ಮೇಲೆ ಕೇಸರಿ ವಿಜಯ ಧ್ವಜ ಹಾರಿಸುತ್ತಾ ಜಗನ್ನಾಥನ ಎದುರು ಈ ಕ್ರಾಂತಿ ಸೈನ್ಯ ಹಾಜರಾಯಿತು.

              ತಕ್ಷಣ ಎಚ್ಚೆತ್ತ ಬ್ರಿಟಿಷರು ಲೆಫ್ಟಿನೆಂಟ್ ಪ್ರಿಡ್ಯೂರ್ ಹಾಗೂ ಲೆಫ್ಟಿನೆಂಟ್ ಫರೀಸ್ ನೇತೃತ್ವದ ಎರಡು ಪಡೆಗಳನ್ನು ಕ್ರಮವಾಗಿ ಖುರ್ದಾ ಹಾಗೂ ಪಿಪ್ಲಿಗಳಿಗೆ ಕಳುಹಿಸಿಕೊಟ್ಟರು. ಆದರೆ ಕ್ರಾಂತಿ ಸೈನ್ಯ ಫರೀಸನನ್ನು ಯಮಸದನಕ್ಕಟ್ಟಿತು. ಒಂದು ಪಡೆಯ ನೇತೃತ್ವ ವಹಿಸಿ ಬಂದ ಕಟಕ್'ನ ಬ್ರಿಟಿಷ್ ಆಡಳಿತಾಧಿಕಾರಿ ಸ್ವಲ್ಪದರಲ್ಲೇ ಜೀವವುಳಿಸಿಕೊಂಡ. ಆದರೆ ಪುರಿಯಲ್ಲಿದ್ದ ಕ್ರಾಂತಿ ಸೈನ್ಯಕ್ಕೆ ಕ್ಯಾಪ್ಟನ್ ವೆಲ್ಲಿಂಗ್ಟನ್ನಿನಿಂದ ಸೋಲಾಯಿತು. ತಕ್ಷಣ ಅಲ್ಲಿಗೆ ಧಾವಿಸಿದ ಜಗಬಂಧು ಪುರಿಯನ್ನು ಮರುವಶಪಡಿಸಿಕೊಂಡ. ಜಗನ್ನಾಥ ಮಂದಿರದ ಅರ್ಚಕರು ಮುಕುಂದ ದೇವನನ್ನು ಕಳಿಂಗದ ರಾಜನೆಂದು ಘೋಷಿಸಿ "ಗಜಪತಿ" ಎನ್ನುವ ಬಿರುದನ್ನಿತ್ತರು.

               ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಸೇನೆಯನ್ನು ಕಳಿಸಿದ ಬ್ರಿಟಿಷ್ ಸರಕಾರ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡು ರಾಜಾ ಮುಕುಂದ ದೇವನನ್ನು ಸೆರೆಯಲ್ಲಿಟ್ಟಿತು. ಕೇವಲ ಖಡ್ಗ, ಕೋವಿ ಹಾಗೂ ಬಿಲ್ಲು ಬಾಣಗಳಿಂದ ಯುದ್ಧ ಮಾಡಿದ ಶಕ್ತಿಶಾಲಿ ಸೈನ್ಯವೊಂದು ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೆ ಸೋಲನ್ನಪ್ಪಬೇಕಾಯಿತೆಂಬುದು ದಿಟ! ಮೇ ಅಂತ್ಯದ ವೇಳೆಗೆ ಎಲ್ಲಾ ಕ್ರಾಂತಿಯನ್ನು ಅಡಗಿಸಿದ ಬ್ರಿಟಿಷ್ ಸೈನ್ಯ ಒಡಿಷಾದಲ್ಲಿ ಸೈನ್ಯಾಡಳಿತವನ್ನೇ ಹೇರಿತು. ಆ ನಂತರ ನಡೆದದ್ದೇ ಈ ನರಮೇಧ! ಆದರೆ ಪೈಕಾ ಯೋಧರು ಸುಮ್ಮನುಳಿಯಲಿಲ್ಲ. ಬ್ರಿಟಿಷರ ಆಧುನಿಕ ಆಯುಧಗಳೆದುರು ತಮ್ಮ ಕೈಸಾಗದೆಂದು ಅರಿವಾದೊಡನೆ ಅವರು ಗೆರಿಲ್ಲಾ ಸಮರಕ್ಕಿಳಿದರು. 1818ರಲ್ಲಿ ಪೈಕಾಗಳನ್ನು ಬೇರುಸಹಿತ ಕಿತ್ತೊಗೆಯಲು ವಿಶೇಷ ಪಡೆಯೊಂದನ್ನು ರಚಿಸಿತು ಕಂಪೆನಿ ಸರಕಾರ. ಹಲವು ಪೈಕಾ ಯೋಧರು ಪರಿವಾರ ಸಹಿತ ಬಲಿಯಾದರೂ ಪೈಕಾಗಳ ಸಂಘರ್ಷ 1825ರಲ್ಲಿ ಜಗಬಂಧು ಸೆರೆಸಿಕ್ಕುವವರೆಗೆ ನಡೆದೇ ಇತ್ತು. ಜಗಬಂಧು ಸೆರೆಯಾದೊಡನೆ ಪೈಕಾ ಕ್ರಾಂತಿಯೂ ಕೊನೆಯುಸಿರೆಳೆಯಿತಾದರೂ ಅದು ಮುಂಬರುವ ಕ್ರಾಂತಿಗಳಿಗೆ ದಾರಿದೀಪವಾಯಿತು.

               ಈ ಕ್ರಾಂತಿಗೆ ಕಾರಣಗಳನ್ನು ಹುಡುಕಲು ನೇಮಿಸಿದ ಸಮಿತಿಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯಾ ಹಿರಿಯ ಅಧಿಕಾರಿ ವಾಲ್ಟರ್ ಎವರ್ "ಪೈಕಾಗಳು ಅಪಾಯಕಾರಿಗಳು. ಅವರೊಂದಿಗೆ ಅದರಂತೆಯೇ ವ್ಯವಹರಿಸಬೇಕು. ಈಗಲೂ ಉಳಿದಿರುವ ಪೈಕಾಗಳಲ್ಲೂ ಹಿಂದಿನ ಆಕ್ರಮಣಕಾರಿ ಪ್ರವೃತ್ತಿ ಅಂತೆಯೇ ಉಳಿದಿದೆ. ಅವರ ವಿಷಪೂರಿತ ಹಲ್ಲುಗಳನ್ನುದುರಿಸಲು ಬ್ರಿಟಿಷ್ ಪೊಲೀಸರು ಸದಾ ಅವರ ಮೇಲೆ ತಮ್ಮ ಕಣ್ಗಾವಲಿರಿಸಿ ದೀರ್ಘಕಾಲದವರೆಗೆ ಅವರನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಪೈಕಾ ಸಮುದಾಯ ನಾಶವಾಗದೆ ಬ್ರಿಟಿಷರು ನಿರಾಯಾಸವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ" ಎಂದು ಬರೆದಿದ್ದಾನೆಂದರೆ ಈ ದಂಗೆ ಬ್ರಿಟಿಷರನ್ನು ಗದಗುಟ್ಟಿಸಿದ ಪರಿ, ಪೈಕಾಗಳ ಪರಾಕ್ರಮವನ್ನು ಊಹಿಸಬಹುದು. ಒಂದೊಮ್ಮೆ ಯಶಸ್ವಿಯಾಗುತ್ತಿದ್ದರೆ ಉಪಖಂಡದ ಇತಿಹಾಸವನ್ನೇ ಬದಲಿಸಿಬಿಡುತ್ತಿದ್ದ ಪೈಕಾ ಕ್ರಾಂತಿ "ಒಂದು ದಿನದ ಉಪವಾಸ, ನಾಲ್ಕು ದಿನದ ಅರಮನೆಯೊಳಗೆ ಕೂಡಿ ಹಾಕಿದ ಶಿಕ್ಷೆ"ಯನ್ನೇ ಸ್ವಾತಂತ್ರ್ಯ ಹೋರಾಟ ಎನ್ನುವ ಇತಿಹಾಸಕಾರರಿಗೆ ಮಹತ್ವದ್ದಾಗಿ ಕಾಣದಿದ್ದುದು ಅಚ್ಚರಿಯೇನಲ್ಲ. ಆದರೆ ಭಾರತದ ದೀರ್ಘಕಾಲೀನ ಸ್ವಾತಂತ್ರ್ಯ ಹೋರಾಟವನ್ನು ಸೀಮಿತ ಅವಧಿಗೆ ಹಾಗೂ ಕೆಲವೇ ವ್ಯಕ್ತಿಗಳಿಗೆ ಸೀಮಿತಗೊಳಿಸಿದ ಇತಿಹಾಸಕಾರರ ದ್ರೋಹ ಕಡಿಮೆಯದೇನು? ಎಪ್ಪತ್ತು ವರ್ಷಗಳ ಕಾಲ ಈ ದೇಶವನ್ನಾಳಿದ ಯಾವ ಸರಕಾರಗಳಿಗೂ ಪೈಕಾಗಳ ನೆನಪಾಗಲಿಲ್ಲ. ಮೊನ್ನೆ ಏಪ್ರಿಲ್ ಹದಿನಾರರಂದು ಪ್ರಧಾನಿ ನರೇಂದ್ರ ಮೋದಿ ಜಗಬಂಧುವಿನ ವಂಶಸ್ಥರು ಹಾಗೂ ಇನ್ನಿತರ ಕೆಲ ಪೈಕಾಗಳನ್ನು ಭೇಟಿಯಾಗಿ ಪೈಕಾ ವಂಶಸ್ಥರನ್ನು ಗೌರವಿಸಿದರು. ಈ ದೇಶದ ವೀರ ಪರಂಪರೆಯನ್ನು ನೆನಪಿಸಿ ಗೌರವಿಸಲೂ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕಾಯಿತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ