ಶೇಷನಿಂದಿಳಿದು ವಿಶೇಷನಾದ ಮಹಾವೈಷ್ಣವ
ತುಂಬು ಹರೆಯದ ತರುಣ ಬಿರಬಿರನೇ ನಡೆಯುತ್ತಿದ್ದಾನೆ. ಶಿಖೆ, ಯಜ್ಞೋಪವೀತ ಕಾಂಚಿಪುರದ ಆ ತರುಣನ ಮೊಗದ ತೇಜಸ್ಸನ್ನೇನೋ ವೃದ್ಧಿಸಿದೆ. ಆದರೂ ಮುಖದಲ್ಲೇನೋ ದುಗುಡ ಕಾಣಿಸುತ್ತಿದೆ. ಶ್ರೀರಂಗಂ ಪಂಡಿತರ ಬಳಿ ಶಿಷ್ಯವೃತ್ತಿ ಕೈಗೊಳ್ಳಲು ಹಾತೊರೆಯುತ್ತಿರುವ ಮನಸ್ಸಿನ ಮೂಲೆಯಲ್ಲಿ ಕಳವಳವು ಮಳೆಯ ಭೋರ್ಗರೆತದ ಬಳಿಕ ಮರದಿಂದ ತೊಟ್ಟಿಕ್ಕುವ ಹನಿಯಂತೆ ಮತ್ತೆ ಮತ್ತೆ ಕಾಣಿಸುತ್ತಿದೆ. ಮನೆಯ ಬಾಗಿಲಲ್ಲಿ ಬಂದೊಡನೆ ಸೂತಕದ ವಾಸನೆ. ಗುರುಗಳ ಪ್ರಾಣಪಕ್ಷಿ ಹಾರಿದೆ. ಅರೇ ಇದೇನಚ್ಚರಿ...ಶವದ ಬಲಗೈಯ ಮೂರು ಬೆರಳು ಮಡಚಿಯೇ ಇದೆ. ಎಂದಿಗೂ ಗುರುಗಳ ಕೈಬೆರಳುಗಳು ಆ ರೀತಿ ಮಡಚಿಯೇ ಇಲ್ಲವೆನ್ನುವುದು ಶಿಷ್ಯರ ಅಂಬೋಣ. ಆ ಬೆರಳುಗಳೇನು ನೇರವಾಗುತ್ಯೇ? ಆಗ ಆ ತರುಣನಿಂದ ಮೂರು ಮಾತು ಪ್ರತಿಜ್ಞೆಯ ರೂಪದಲ್ಲಿ ಹೊರಬೀಳುತ್ತದೆ... "ನಾನು ತಮಿಳು ವೇದ(ತಿರುವಾಯ್ ಮೊಳ್)ಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತೇನೆ, ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುತ್ತೇನೆ ಮತ್ತು ಅಪಾರ ಸಾಧನೆಯನ್ನು ಮಾಡಿದ ಯೋಗ್ಯನಾದ ವೈಷ್ಣವನಿಗೆ ನಾನು ‘ಪರಾಶರ’ನೆಂದು ನಾಮಕರಣ ಮಾಡುತ್ತೇನೆ". ಪವಾಡ ಸಂಭವಿಸಿಯೇ ಬಿಟ್ಟಿತು. ತರುಣನ ಒಂದೊಂದೇ ಮಾತು ಮುಗಿಯುತ್ತಿದ್ದಂತೆಯೇ ಪಂಡಿತರ ಮುಚ್ಚಿದ ಬೆರಳುಗಳು ಒಂದೊಂದಾಗಿಯೇ ಸಡಿಲವಾಗುತ್ತಾ, ನೇರವಾಗುತ್ತಾ ಹೋಗುತ್ತವೆ. ಆ ಪಂಡಿತರೇ ಆಳ್ವಂದಾರ್ ಮತ್ತು ಆ ತರುಣನೇ ರಾಮಾನುಜ. ಈ ಘಟನೆಯ ಸತ್ಯಾಸತ್ಯತೆ ಏನೇ ಇರಲಿ ಆ ತರುಣ ರಾಮಾನುಜ ತನ್ನ ಮಾತಿನಂತೆಯೇ ನಡೆದುಕೊಂಡ ಎನ್ನುವುದು ಗಮನಿಸಬೇಕಾದ ಅಂಶ.ಭಾರತ ಮತಾಂಧ ಮುಸಲರ ದಾಳಿಗೆ ತುತ್ತಾಗಿ ಹೈರಾಣಾಗಿತ್ತು. ಘಜನಿಯ ಸಾಲುಸಾಲು ದಂಡಯಾತ್ರೆ, ಸೋಮನಾಥ ಸಹಿತ ಸಾವಿರಾರು ದೇಗುಲಗಳ ನಾಶದಿಂದ ಹಿಂದೂ ಸಮಾಜ ತತ್ತರಿಸಿತ್ತು. ಅಲ್ಲದೆ ಸಮಾಜವು ಜಾತಿ-ಮತ, ಸ್ಪೃಶ್ಯ-ಅಸ್ಪೃಶ್ಯ ಭೇದಭಾವಗಳಿಂದ ಛಿದ್ರಗೊಂಡಿತ್ತು. ಅಂತಹ ಸಮಯದಲ್ಲಿ ತಮಿಳುನಾಡಿನ ಪೆರಂಬದೂರು ಎಂಬ ಸಣ್ಣ ಊರಿನಲ್ಲಿ ಸನಾತನ ಧರ್ಮಜ್ಯೋತಿಯೊಂದು ಬೆಳಗಿತು. ಕೇಶವಸೋಮಯಾಜಿ ದೀಕ್ಷಿತ ಮತ್ತು ಕಾಂತಿಮತಿಯ ಮಗನಾಗಿ 1017ರ ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿಕೊಂಡ ಈ ಹಣತೆ ಮುಂದೆ 'ವಿಶಿಷ್ಟಾದ್ವೈತ’ ಸಿದ್ಧಾಂತವೆಂಬ ದಿವ್ಯ ದೀವಿಗೆಯಿಂದ ಜಗವನ್ನೇ ಬೆಳಗಿತು. ಶೇಷನೇ ರಾಮಾನುಜನಾಗಿ ಅವತರಿಸಿದ ಎಂದು ಶ್ರೀವೈಷ್ಣವರ ನಂಬುಗೆ. ಹದಿನಾರನೆಯ ವಯಸ್ಸಿನಲ್ಲಿಯೇ ಮದುವೆಯಾದ ರಾಮಾನುಜರು ಬಳಿಕ ಕೆಲ ಸಮಯದಲ್ಲೇ ಸಂಸಾರ ತೊರೆದು ಸಂನ್ಯಾಸ ಸ್ವೀಕಾರ ಮಾಡಿದರು. ಮದುವೆಯಾದ ಹೊಸತರಲ್ಲೇ ತಂದೆ ತೀರಿಕೊಂಡಾಗ ಮಡದಿ ಮತ್ತು ತಾಯಿಯೊಡನೆ ಕಾಂಚೀಪುರಂ ಬಂದು ನೆಲೆಸಿದರು. ಇದಕ್ಕೆ ಬಹುಮುಖ್ಯವಾದ ಕಾರಣವೂ ಇತ್ತು. ಆ ಕಾಲಕ್ಕೆ ಪ್ರಕಾಂಡ ಪಂಡಿತರೆಂದೇ ಪ್ರಖ್ಯಾತರಾದವರು ಯಾದವಪ್ರಕಾಶರು. ಅವರಿದ್ದದ್ದು ಕಾಂಚೀಪುರಂನಲ್ಲಿಯೇ. ರಾಮಾನುಜಾಚಾರ್ಯರು ಯಾದವಪ್ರಕಾಶರ ಶಿಷ್ಯರಾಗಿ ಅಧ್ಯಯನಕ್ಕೆ ತೊಡಗಿದರು. ಯಾದವ ಪ್ರಕಾಶರು ಅದ್ವೈತಿಗಳೆಂದೂ ರಾಮಾನುಜರಿಗೆ ಪರಮಹಿಂಸೆಯನ್ನು ಕೊಟ್ಟರೆಂದು ಕೆಲವರು ಬರೆದಿದ್ದಾರೆ. ಇದಕ್ಕೆ ಯಾವ ಐತಿಹಾಸಿಕ ಆಧಾರಗಳಿಲ್ಲ. ಅಲ್ಲದೆ ಯಾದವ ಪ್ರಕಾಶರು ಅದ್ವೈತಿಗಳಲ್ಲ. ಇದಕ್ಕೆ ಅವರು ಬ್ರಹ್ಮಸೂತ್ರಕ್ಕೆ ಬರೆದ ಭಾಷ್ಯವೇ ಸಾಕ್ಷಿ. ಅವರದ್ದು ಭೇದಾಭೇದಾ ಮತ. ಅದು ಹೆಚ್ಚುಕಡಮೆ ರಾಮಾನುಜ ಮತಕ್ಕೆ ಹತ್ತಿರ(ಭಾರತೀಯ ಕ್ಷಾತ್ರಪರಂಪರೆ:ಶತಾವಧಾನಿ ರಾ. ಗಣೇಶ್). ಹೀಗೆ ರಾಮಾನುಜರು ಶ್ರೀರಂಗಂಗೆ ತೆರಳಿದ್ದು ಆಳ್ವಂದಾರರ ಕೋರಿಕೆಯ ಮೇರೆಗೆ ಹೊರತು ಯಾದವಪ್ರಕಾಶರೊಂದಿಗಿನ ಭಿನ್ನಾಭಿಪ್ರಾಯ ಅಥವಾ ಅವರಿಂದ ಬಂದೊದಗಿತು ಎನ್ನಲಾದ ಹಿಂಸೆಯಿಂದಲ್ಲ.
ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತದ ಮೂಲ ಸ್ಥಾಪಕರೇನಲ್ಲ. ಬೋಧಾಯನರೇ ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಪುರುಷ ಎನ್ನುವುದು ಪ್ರತೀತಿ. ರಾಮಾನುಜರಿಗಿಂತ ಮುಂಚೆ ತಮಿಳುನಾಡಿನಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತವನ್ನೇ ಮೈವೆತ್ತುಕೊಂಡಿದ್ದ ಆಳ್ವಾರ್ ಗಳೆಂಬ ಅಸಾಮಾನ್ಯ ಭಕ್ತಿಪರಂಪರೆಯ ಪ್ರವರ್ತಕರು ಆಗಿ ಹೋಗಿದ್ದರು. ವಿಶೇಷವೆಂದರೆ ಎಲ್ಲಾ ಆಳ್ವಾರರುಗಳೂ ಬ್ರಾಹ್ಮಣರಲ್ಲ. ರಾಮಾನುಜರಿಗೆ ಸ್ಪೂರ್ತಿ ನೀಡಿದ್ದು "ನಾಲಾಯಿರಂ" ಎಂದು ಕರೆಯಲ್ಪಡುತ್ತಿದ್ದ ತಮಿಳುನಾಡಿನಲ್ಲಿ ಭಕ್ತಿ ಸಾಹಿತ್ಯ ಸ್ತೋತ್ರವನ್ನೇ ಹರಿಸಿದ ಈ ಆಳ್ವಾರರ ಪ್ರಬಂಧಗಳು. ಹನ್ನೆರಡು ಜನ ಆಳ್ವಾರರಿಂದ ದೊರೆತ ಈ ಶ್ರೇಷ್ಠ ಭಕ್ತಿ ಸಾಹಿತ್ಯಗಳು "ತಮಿಳು ವೇದ"ಗಳೆಂದೇ ಪ್ರಖ್ಯಾತಿ ಪಡೆದಿವೆ. ರಾಮಾನುಜರು ಈ ಸಿದ್ಧಾಂತವನ್ನು ಮತ್ತಷ್ಟು ಸಮಾಜಮುಖಿಯಾಗಿ ಹೊರತಂದರು. ಇತ್ತ ವೇದಾಂತವನ್ನೂ ಅತ್ತ ತಮಿಳು ದಿವ್ಯ ಪ್ರಬಂಧಗಳನ್ನೂ ಸಮನ್ವಯಗೊಳಿಸಿದ ಆಚಾರ್ಯರು "ಉಭಯ ವೇದಾಂತ ಪ್ರವರ್ತಕ"ನೆನಿಸಿಕೊಂಡರು. ರಾಮಾನುಜರನ್ನು ಪ್ರಭಾವಿಸಿದ ಭಕ್ತಿಪಂಥ ಹಾಗೆಯೇ ರಾಮಾನುಜರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಉತ್ತರಭಾರತದಲ್ಲಿ ಭಕ್ತಿ ಚಳವಳಿಯನ್ನೇ ಹುಟ್ಟು ಹಾಕಿತು. ಸಂತ ರಾಮಾನಂದ, ವಲ್ಲಭಾಚಾರ್ಯ, ಚೈತನ್ಯ ಮಹಾಪ್ರಭು, ನಾಮದೇವ, ಏಕನಾಥ, ತುಕಾರಾಮ, ಸಮರ್ಥ ರಾಮದಾಸರು, ತುಳಸೀದಾಸ, ಸೂರದಾಸ, ಅಣ್ಣಮಾಚಾರ್ಯ, ಮೀರಾ, ಪೋತನ, ಪುರಂದರ, ಕನಕ, ಯೋಗಿ ನಾರೇಯಣ ತಾತಯ್ಯ ಇವರೆಲ್ಲಾ ಭಕ್ತಿ ಪಂಥದ ಪ್ರವರ್ತಕರಾದರು.
ರಾಮಾನುಜರ ಜೀವನದ ಮಹತ್ವದ ಪ್ರಸಂಗ ಜಾತಿಭೇದವನ್ನು ತೊರೆದು ಎಲ್ಲರಿಗೂ ತಿರುಮಂತ್ರವನ್ನು ಉಪದೇಶಿಸಿದ ಅಪೂರ್ವ ಘಟನೆ! ತಿರುಕ್ಕೋಳೂರಿನಲ್ಲಿದ್ದ ಅಪೂರ್ವ ಜ್ಞಾನಿ ಗೋಷ್ಠಿ ಪೂರ್ಣರ ಬಳಿ ಅಧ್ಯಯನಕ್ಕಾಗಿ ಹೋಗಿದ್ದರು ರಾಮಾನುಜರು. ರಾಮಾನುಜರ ಶೃದ್ಧೆ, ಭಕ್ತಿಗಳನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದ ಗೋಷ್ಠಿಪೂರ್ಣರು ಅವರಿಗೆ "ಓಂ ನಮೋ ನಾರಾಯಣಾಯ" ಎಂಬ ತಿರುಮಂತ್ರವನ್ನು ಉಪದೇಶಿಸಿದರು. ಶೃದ್ಧಾಭಕ್ತಿಗಳಿಂದ ಅದನ್ನು ಜಪಿಸುವುದರಿಂದ ಮೋಕ್ಷ ಪ್ರಾಪ್ತಿ ಎಂದೂ, ಅಪಾತ್ರರಿಗೆ ಅದನ್ನು ಬೋಧಿಸಕೂಡದೆಂದೂ ತಿಳಿಸಿದರು. ರಾಮಾನುಜರು ಶಿಷ್ಯರೊಡನೆ ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಸಿಕ್ಕ ಜನರನ್ನು ಕಂಡು ಅವರ ಮನಸ್ಸು ಖೇದಗೊಂಡಿತು. "ತಿರುನಾಮದ ಮಂತ್ರದ ಅರಿವಿಲ್ಲದೆ ಇವರೆಲ್ಲಾ ಅಂಧಕಾರದಲ್ಲಿ ಮುಳುಗಿದ್ದಾರಲ್ಲಾ. ಈ ತಿರುಮಂತ್ರವನ್ನು ಇವರಿಗೆಲ್ಲಾ ಉಪದೇಶಿಸುವುದರಿಂದ ಅವರೆಲ್ಲರಿಗೂ ಮೋಕ್ಷಪ್ರಾಪ್ತಿಯಾಗುತ್ತದೆಯಲ್ಲವೇ?" ಎಂದು ಅವರ ಮನಸ್ಸು ಚಿಂತಿಸತೊಡಗಿತು. ಕ್ಷಣಮಾತ್ರದಲ್ಲಿ ಎಲ್ಲರನ್ನೂ ತಮ್ಮ ಬಳಿಗೆ ಕರೆದು ದೇವಾಲಯದ ಬಳಿಯ ಎತ್ತರದ ಜಾಗವನ್ನು ಹತ್ತಿ ಯಾವುದನ್ನು ಗೋಷ್ಠಿಪೂರ್ಣರು ಪರಮ ರಹಸ್ಯವೆಂದು ಹೇಳಿದ್ದರೋ ಅದನ್ನು ಉಚ್ಛಸ್ಥಾಯೀ ಸ್ವರದಲ್ಲಿ ನೆರೆದವರೆಲ್ಲರಿಗೂ ಉಪದೇಶಿಸಿದರು. "ಓಂ ಓಂ ನಮೋ ನಾರಾಯಣಾಯ" ಎಂಬ ಮಂತ್ರ ತಿರುಕ್ಕೋಳೂರಿನಾದ್ಯಂತ ಅನುರಣಿಸಿತು. ಶ್ರೀರಂಗದ ಶ್ರೀವೈಷ್ಣವ ಮಠದ ಪೀಠಾಧಿಪತಿಗಳ ಈ ಕ್ರಾಂತಿಕಾರಕ ನಡೆಯನ್ನು ಕಂಡು ಸಮಾಜ ಚಕಿತಗೊಂಡಿತು. ವಿಷಯ ಅರಿತ ಗೋಷ್ಠಿಪೂರ್ಣರು ಕೆಂಡಾಮಂಡಲರಾಗಿ ಗುರುದ್ರೋಹ ಮಾಡಿದೆಯೆಂದು ಜರೆದು ಅಪಾತ್ರನಾದ ನಿನಗೆ ಮಂತ್ರದೀಕ್ಷೆ ಕೊಟ್ಟು ನಾನು ರೌರವ ನರಕವನ್ನು ಅನುಭವಿಸುವಂತಾಯಿತು ಎಂದು ಗೋಳಾಡಿದಾಗ " ಗುರುಗಳೇ, ಈ ತಿರುಮಂತ್ರದ ಉಪದೇಶ ಪಡೆದ ಲಕ್ಷಾಂತರ ಜನ ಮೋಕ್ಷಪಥದತ್ತ ಸಾಗುವುದಾದರೆ, ಅದನ್ನು ಉಪದೇಶಿಸಿದ ನಾನು ನರಕಕ್ಕೆ ಹೋಗುವುದೇ ಸರಿಯೆಂದೂ, ಕೋಟ್ಯಾಂತರ ಜೀವಿಗಳಿಗೆ ಮೋಕ್ಷದ ದಾರಿಯನ್ನು ತೋರುವುದೇ ಪುಣ್ಯಕಾರ್ಯವೆಂದೂ ನನಗನಿಸಿತು" ಎಂದು ಸಮಾಧಾನಿಸಿದರು. ರಾಮಾನುಜರ ತರ್ಕಪೂರ್ಣ ವಾದವನ್ನು ಕೇಳಿ ಸಮಾಧಾನ ತಾಳಿದ ಗೋಷ್ಠಿಪೂರ್ಣರು ತಮಗೆ ತಿಳಿದಿದ್ದ ಎಲ್ಲಾ ವಿದ್ಯೆಯನ್ನು ಅವರಿಗೆ ಧಾರೆ ಎರೆದು "ಎಂಬೇರುಮನ್ನಾರ್" ಎಂದು ಅವರನ್ನು ಹರಸಿದರು.
ರಾಮಾನುಜರ ಸಿದ್ಧಾಂತ ಹಾಗೂ ನೇರನಡೆನುಡಿಗಳೇ ಅವರಿಗೆ ಮುಳುವಾಗಿ ಶ್ರೀ ರಂಗಂನ ಪ್ರಧಾನ ಅರ್ಚಕರಿಂದ ನಡೆದ ಕೊಲೆ ಪ್ರಯತ್ನ ಸಾಧ್ವಿಯಾದ ಆತನ ಪತ್ನಿಯಿಂದಲೇ ವಿಫಲವಾಯಿತು. ರಾಮಾನುಜರನ್ನು ಕ್ರಿಮಿಕಂಠ ಚೋಳನೆಂಬ ಕರಿಕಾಲಚೋಳನು ಕೊಲ್ಲಲು ಯತ್ನಿಸಿದನೆಂದು ಕೆಲವರು ಹೇಳುತ್ತಾರೆ. ಆದರೆ ಆ ಚೋಳ ರಾಜನ ಹೆಸರೇ ಇತಿಹಾಸದಲ್ಲೆಲ್ಲಿಯೂ ಕಾಣ ಸಿಗುವುದಿಲ್ಲ. ಹಾಗೆಯೇ ಚೋಳರ ಮತಾಂಧತೆಗೆ ಯಾವುದೇ ವಿಶ್ವಸನೀಯ ನಿದರ್ಶನಗಳು ದೊರಕುವುದಿಲ್ಲ. ರಾಮಾನುಜಾಚಾರ್ಯರನ್ನು ಚೋಳರು ಹಿಂಸಿಸಿದರೆಂದೂ, ಅವರು ಪ್ರಾಣಭೀತಿಯಿಂದ ಹೊಯ್ಸಳ ನಾಡಿಗೆ ಬಂದರೆಂಬುದೂ ಕಟ್ಟುಕಥೆ. ಚಿದಂಬರದ ಗೋವಿಂದರಾಜನ ಮೂರ್ತಿಯನ್ನು ಕಡಲಿಗೆಸೆದರೆಂಬುದೂ ಸುಳ್ಳೆಂದು ಈಚಿನ ಸಂಶೋಧನೆಗಳು ವಿವೇಚಿಸಿವೆ ಎಂದು ತಮ್ಮ "ಭಾರತೀಯ ಕ್ಷಾತ್ರ ಪರಂಪರೆ"ಯಲ್ಲಿ ದಾಖಲಿಸಿದ್ದಾರೆ ಶತಾವಧಾನಿ ರಾ. ಗಣೇಶ್.
ರಾಮಾನುಜರು ಲಕ್ಷ್ಮಣನ ಅವತಾರವೆಂದೇ ವೈಷ್ಣವರ ನಂಬಿಕೆ. ಶ್ರೀರಂಗನಿಂದ ಹೊರಟು ರಾಮಾನುಜಾಚಾರ್ಯರು ಹೊಯ್ಸಳರ ರಾಜ್ಯದ ಸೀಮೆಯಲ್ಲಿದ್ದ ಮೇಲುಕೋಟೆಯಲ್ಲಿ ಬಂದು ನೆಲೆಸಿದರು. ಸಹೋದರನ ಅಕಾಲ ಮರಣದಿಂದ ಧೃತಿಗೆಟ್ಟಿದ್ದ ರಾಜಾ ಬಿಟ್ಟಿದೇವನಿಗೆ ಆಚಾರ್ಯರ ಮಾರ್ಗದರ್ಶನ ಶಾಂತಿಯನ್ನು ಕೊಟ್ಟಿತು. ಆಚಾರ್ಯರು ಬಿಟ್ಟಿದೇವನ ಮನೋಬಲ ತುಂಬಿ ಅವನ ಉತ್ಸಾಹದ ಚಿಲುಮೆಯನ್ನಾಗಿಸಿ ಶ್ರೀವೈಷ್ಣವ ದೀಕ್ಷೆಯನ್ನು ಕೊಟ್ಟು ವಿಷ್ಣುವರ್ಧನನೆಂದು ನಾಮಕರಣ ಮಾಡಿದುದು ಈಗ ಐತಿಹ್ಯ. ಒಟ್ಟು ಹದಿನಾಲ್ಕು ವರ್ಷಗಳ ಕಾಲ ಮೇಲುಕೋಟೆಯಲ್ಲಿ ತಂಗಿದ್ದರು ಆಚಾರ್ಯರು. ಅಲ್ಲಿದ್ದಾಗ ತುಳಸೀವನದೊಳಗಿನ ಹುತ್ತದ ಬಳಿ ಅನಾಥವಾಗಿ ಬಿದ್ದಿದ್ದ ಹಳೆಯ ವಿಗ್ರಹವೊಂದು ರಾಮಾನುಜರ ದೃಷ್ಟಿಗೆ ಬೀಳುತ್ತದೆ. ಅದರ ಬಗ್ಗೆ ವಿಚಾರಿಸಿದಾಗ ದೆಹಲಿಯ ಸುಲ್ತಾನನ ವಿಗ್ರಹಭಂಜಕ ದಾಳಿಯ ಸಮಯದಲ್ಲಿ ಅರ್ಚಕರು ಮೂಲ ವಿಗ್ರಹವನ್ನು ಸ್ಥಳಾಂತರಿಸಿ ರಕ್ಷಿಸಿದ ವಿಚಾರ ಬಯಲಿಗೆ ಬಂತು. ಆ ವಿಗ್ರಹವೇ ಇದೆಂದು ಮನಗಂಡ ಆಚಾರ್ಯರು ಅಲ್ಲಿ ದೇವಾಲಯವನ್ನೂ, ರಕ್ಷಣೆಗಾಗಿ ಎತ್ತರದ ಸುತ್ತು ಪೌಳಿಯನ್ನೂ ನಿರ್ಮಿಸಿದರು.
ಯಾದವಾದ್ರಿ ದೇಗುಲದ ಉತ್ಸವ ಮೂರ್ತಿಯನ್ನು ದೆಹಲಿಯ ಸುಲ್ತಾನ ತನ್ನ ಅರಮನೆಗೆ ಹೊತ್ತೊಯ್ದಿದ್ದ. ಸುಲ್ತಾನನ ಮಗಳು ಆ ವಿಗ್ರಹದ ಸೌಂದರ್ಯಕ್ಕೆ ಮನಸೋತು ಅದನ್ನು ಆರಾಧಿಸತೊಡಗಿದಳು. ಈ ವಿಚಾರ ತಿಳಿದ ತಕ್ಷಣ ರಾಮಾನುಜರು ದೆಹಲಿಯ ಸುಲ್ತಾನನ್ನು ಭೇಟಿಯಾಗಿ ವಿಗ್ರಹಕ್ಕಾಗಿ ಬೇಡಿಕೆ ಸಲ್ಲಿಸಿ ಅದನ್ನು ತಿರುನಾರಾಯಣಪುರ(ಮೇಲುಕೋಟೆ)ಕ್ಕೆ ತಂದು ಶೆಲ್ವಪಿಳ್ಳೈ ಎಂದು ಕರೆದು ಪೂಜಿಸತೊಡಗಿದರು. ತನ್ನ ಇಷ್ಟ ಮೂರ್ತಿ ಮರೆಯಾಗಿರುವುದನ್ನು ಕಂಡು ವಿಚಾರ ತಿಳಿದ ಸುಲ್ತಾನನ ಮಗಳು ಬೀಬಿ ತಿರುನಾರಾಯಣಪುರಕ್ಕೆ ಬಂದು ರಾಮಾನುಜರನ್ನು ಕಂಡು ವಿಗ್ರಹವನ್ನು ಹಿಂದಕ್ಕೆ ಕೊಡಬೇಕೆಂದು ಆಗ್ರಹಿಸಿದಳು. ಆಗ ಆಚಾರ್ಯರು ಅದು ಹಿಂದೂ ವಿಗ್ರಹವೆಂದೂ, ಅದನ್ನು ವೇದ ಮಂತ್ರಗಳಿಂದ ಅರ್ಚಿಸಬೇಕೆಂದೂ, ಗೃಹಯೋಗ್ಯವಲ್ಲವೆಂದೂ ಬುದ್ಧಿಮಾತನ್ನು ಹೇಳಿದಾಗ ಕೊನೇ ಪಕ್ಷ ತನಗೆ ಇಲ್ಲಿಯಾದರೂ ಮೂರ್ತಿಯನ್ನು ಆರಾಧಿಸುವ ಅವಕಾಶ ಕೊಡಬೇಕೆಂದು ಪ್ರಾರ್ಥಿಸಿದಳು. ಆಕೆಯ ನಿರ್ಮಲ ಮನಸ್ಸಿನ ಉತ್ಕಟ ಭಕ್ತಿಯನ್ನು ಕಂಡ ರಾಮಾನುಜರು ಆಕೆಗೆ ದೇಗುಲ ಪ್ರವೇಶಕ್ಕೆ ಅನುಮತಿ ಕಲ್ಪಿಸಿದರು. ಯಾವ ಯಾದವಾದ್ರಿಯ ಪೂಜಾಸ್ಥಳವನ್ನು ಮತಾಂಧನೊಬ್ಬ ಧ್ವಂಸ ಮಾಡಿದ್ದನೋ ಅದೇ ಯಾದವಾದ್ರಿ ಆ ವಿಗ್ರಹ ಭಂಜಕನ ಮಗಳ ಪಾಲಿಗೆ ಭೂಸ್ವರ್ಗವಾಗಿಬಿಟ್ಟಿತು. ಸಂಕುಚಿತ ದೇವರ ಬದಲು ಸರ್ವವ್ಯಾಪಿ(ವಿಷ್ಣು ಪದದ ಅರ್ಥ) ದೇವರನ್ನು ಪೂಜಿಸಲಾರಂಭಿಸಿದ ಬೀಬಿ ಅಲ್ಲಿಯೇ ಕೊನೆಯುಸಿರೆಳೆದಳು. ಅವಳ ಹೆಸರಿನ ಬೀಬಿ ನಾಚಿಯಾರ್ ಮೂರ್ತಿ ಈ ಪ್ರಸಂಗಕ್ಕೆ ಸಾಕ್ಷಿಯಾಗಿ ನಿಂತಿದೆ.
ರಾಮಾನುಜರು ಬಾಲ್ಯಾವಸ್ಥೆಯಲ್ಲಿದ್ದಾಗ ಭಾರತವಿಡೀ ಮುಸಲರ ದೇವಾಲಯಧ್ವಂಸಕ್ಕೆ ತುತ್ತಾಗಿತ್ತು. ಬಲವಂತದ ಮತಾಂತರ ವ್ಯಾಪಕವಾಗಿತ್ತು. ಅವರು ಮೇಲುಕೋಟೆಯಲ್ಲಿದ್ದಾಗ ಘಜನಿಯ ಎರಡನೇ ಮಗ ಉತ್ತರಭಾರತದಲ್ಲಿ ದೇಗುಲನಾಶ, ವಿಗ್ರಹಭಂಜನೆಯ ಕಾರ್ಯಕ್ಕೆ ತನ್ನಪ್ಪನಿಂದ ದುರವೀಳ್ಯ ಪಡೆದಿದ್ದ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜವನ್ನು ಸಾಮಾನ್ಯನ ದೃಷ್ಟಿಯಲ್ಲಿ ಕಂಡು ಅದಕ್ಕೆ ಬೇಕಾದ ಚಿಕಿತ್ಸೆಯ ಬಗ್ಗೆ ಒಲವು ತೋರಿದವರು ಆಚಾರ್ಯರು. ಸಮಾಜವು ಸನ್ಮಾರ್ಗದಲ್ಲಿ ಸಾಗಲು ದೇವಾಲಯಗಳನ್ನು ಪುನರುದ್ಧಾರಗೊಳಿಸುವುದೇ ಸೂಕ್ತ ಎಂದು ಮನಗಂಡರು ಆಚಾರ್ಯರು. ದೇವಾಲಯಗಳು ಕೇವಲ ಪೂಜಾಸ್ಥಾನಗಳಾಗದೆ ಸಾಂಸ್ಕೃತಿಕ ಕೇಂದ್ರಗಳೂ ಆಗುವಂತೆ ಮಾಡಲು ದೇವಾಲಯಗಳ ನಿರ್ವಹಣೆಗೆ ಒಂದು ವ್ಯವಸ್ಥಿತ ಪದ್ದತಿಯನ್ನೇ ಹುಟ್ಟುಹಾಕಿದರು. ದೇವಾಲಯಗಳ ಸಿಬ್ಬಂದಿಗಳ ಹೊಣೆಗಾರಿಕೆಯನ್ನು ವಿಂಗಡಿಸಿ ವಿತರಿಸಿ ಪೂಜಾ ಕೈಂಕರ್ಯದಿಂದ ಹಿಡಿದು ಹಣಕಾಸಿನ ವ್ಯವಹಾರದವರೆಗೆ ನಿಯಮಾವಳಿಗಳನ್ನು ರಚಿಸಿ ದೇವಾಲಯ ಸಂಸ್ಕೃತಿಗೆ ಭದ್ರ ಬುನಾದಿಯನ್ನೇ ಹಾಕಿದರು.
ರಾಮಾನುಜಾಚಾರ್ಯರನ್ನು ದಕ್ಷಿಣ ಭಾರತದ ಬ್ರಾಹ್ಮಣ ಪಂಗಡವೊಂದರ ಗುರುವೆಂದಷ್ಟೇ ಪರಿಗಣಿಸಲಾ ಗುತ್ತಿರುವುದು ವಿಷಾದನೀಯ. ಅವರು ವಿಶಿಷ್ಟಾದ್ವೈತದ ಪ್ರವರ್ತಕ ಮಾತ್ರವಲ್ಲ, ಕ್ರಾಂತಿಕಾರಿ ಕೂಡ. ಜಾತಿಭೇದ ಮತ್ತು ಲಿಂಗತಾರತಮ್ಯವನ್ನು ಹೋಗಲಾಡಿಸಲು ರಾಮಾನುಜರು ಕೊಡುಗೆ ಅಪಾರ. ಆ ಕಾಲದಲ್ಲೇ ಅವರು ಸಮಾಜದ ಅತ್ಯಂತ ಕೆಳವರ್ಗದ ಜನರ ಉತ್ಕರ್ಷಕ್ಕಾಗಿ ಶ್ರಮಿಸಿದವರು; ಅವರಿಗೆ ದೇವಾಲಯಗಳ ಪ್ರವೇಶಾವಕಾಶ ಕಲ್ಪಿಸಿದವರು. ಅವರ ಅನುಯಾಯಿಗಳು ಹಾಗೂ ಮಠಗಳನ್ನು ಇಂದು ರಾಷ್ಟ್ರದ ಎಲ್ಲೆಡೆಗಳಲ್ಲಿ, ನೇಪಾಳದಲ್ಲೂ ಕೂಡ ಕಾಣಬಹುದು. ಅವರು ತಮ್ಮ ಕಾಲದಲ್ಲಿ 74 ಅಧಿಪತಿಗಳನ್ನು ನೇಮಿಸಿದರು. ಅದರಲ್ಲಿ ಸಾಕಷ್ಟು ಜನ ಬ್ರಾಹ್ಮಣೇತರರು ಮತ್ತು 5 ಮಹಿಳೆಯರು ಇದ್ದರು ಎನ್ನುವುದು ಗಮನಾರ್ಹ ಅಂಶ. ರಾಮಾನುಜರು ಅವರನ್ನು "ತಿರುಕ್ಕುವಳತ್ತಾರ್' ಅಥವಾ ಅತ್ಯಂತ ಶ್ರೇಷ್ಠ ವರ್ಗದ ಜನ ಎಂದರು. ಹೀಗಿದ್ದರೂ ಹೆಚ್ಚಿನ ದಲಿತ ನಾಯಕರು ಹಾಗೂ ಬುದ್ಧಿಜೀವಿಗಳು ರಾಮಾನುಜರ ದಲಿತೋದ್ಧಾರ ಪ್ರಯತ್ನಗಳನ್ನು ಮರೆತುಬಿಟ್ಟಿದ್ದಾರೆ. ಚೆಲುವ ನಾರಾಯಣ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ದಲಿತರಿಗೆ ಅನುವು ಮಾಡಿಕೊಟ್ಟ ರಾಮಾನುಜರು ಅವರ ಹಣೆಗಳ ಮೇಲೆ ತಿರುನಾಮವನ್ನೂ ಇರಿಸಿದರು. ಬಿಳಿಗಿರಿ ರಂಗನ ಬೆಟ್ಟದ ನಿವಾಸಿಗಳಾಗಿದ್ದ ಸೋಲಿಗರು ರಂಗನಾಥ ಸ್ವಾಮಿಯ ಒಕ್ಕಲೆನಿಸಿಕೊಂಡರು. ದಾಸಯ್ಯಗಳ ವರ್ಗವನ್ನು ಅಸ್ತಿತ್ವಕ್ಕೆ ತಂದವರು ಕೂಡ ರಾಮಾನುಜರೇ. ರಾಮಾನುಜರು ಹಿಂದೂ ಧರ್ಮ ಕಕ್ಷೆಯೊಳಗೇ ಇದ್ದುಕೊಂಡು ಅದರ ಸುಧಾರಣೆಗಾಗಿ ತಮ್ಮ ಶಕ್ತಿಯನ್ನು ಧಾರೆಯೆರೆದರು, ಅವರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಲಿಲ್ಲ. ಇನ್ನೊಂದು ಹೊಸ ಮತವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿರಲಿಲ್ಲ.
ಹಲವಾರು ವೇದಪಂಡಿತರಲ್ಲಿ ಕಲಿತ ರಾಮಾನುಜರು ತಮ್ಮ ಸಂಬಂಧಿಯಾದ ಶ್ರೀಶೈಲಪೂರ್ಣನಿಂದ ತಿರುಮಲದಲ್ಲಿ ರಾಮಾಯಣವನ್ನು ಅಭ್ಯಸಿಸಿದರು. ಗೋವಿಂದರಾಜನ ಮೂರ್ತಿಯನ್ನು ಗೋವಿಂದರಾಜಪುರ (ತಿರುಪತಿ)ದಲ್ಲಿ ಸ್ಥಾಪಿಸಿದರು. ತಿರುಪತಿಯಲ್ಲಿ ಅಪರೂಪವಾಗಿದ್ದ ಪೂಜಾಕ್ರಮಗಳಿಗೆ ಮೆರಗುಕೊಟ್ಟವರೇ ರಾಮಾನುಜರು. ಅವುಗಳಲ್ಲಿ ಮೊದಲನೆಯದು ತಿರುಮಲದ ವೆಂಕಟರಮಣ ಮತ್ತು ಆದಿವರಾಹಗಳ ಪೂಜೆ. ಪೂಜೆಗಳನ್ನು ಹಬ್ಬಗಳಂತೆ, ಉತ್ಸವಗಳಂತೆ ಆಚರಿಸಿ, ದೈವಿಕ ಅನುಭೂತಿಯನ್ನು ಪಡೆಯಬೇಕೆಂಬ ಉದ್ದೇಶದಿಂದ ಆರಂಭಿಸಿದ್ದೇ ಭಾಗಸವಾರಿ ಉತ್ಸವ, ತಣ್ಣೀರ ಮಧು ಉತ್ಸವ. ಭೂವರಾಹಸ್ವಾಮಿಗೆ ಪ್ರಥಮಪೂಜೆ, ಪ್ರಥಮ ನೈವೇದ್ಯ ಮತ್ತು ಪ್ರಥಮ ದರ್ಶನದಂಥ ಸಂಪ್ರದಾಯವನ್ನು ಆರಂಭಿಸಿದ್ದೂ ಇವರೇ. ವೆಂಕಟರಮಣ, ಸಾಲಿಗ್ರಾಮದ ರೂಪದಲ್ಲಿ ಶಿಲೆಯಾಗಿ ತಿರುಪತಿಯಲ್ಲಿ ಕುಳಿತಾದ ಮೇಲೆ ವಿಖಾನಸ ಮಹರ್ಷಿಯ ರೂಪದಲ್ಲಿ ಮಾನವನಾಗಿ ಜನಿಸಿದ್ದಾನೆಂಬುದು ರಾಮಾನುಜರ ನಂಬಿಕೆಯಾಗಿತ್ತು. ಆದ್ದರಿಂದ ತಿರುಮಲದಲ್ಲಿ ವೆಂಕಟರಮಣನ ಪೂಜೆ ವೈಖಾನಸ ಸಂಪ್ರದಾಯದ ಪ್ರಕಾರವೇ ನಡೆಯಬೇಕೆಂದು ತೀರ್ಮಾನಿಸಿದರು.
ಹಬ್ಬ ಮತ್ತು ಉತ್ಸವಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ, ತಿಮ್ಮಪ್ಪನ ಜೊತೆಗೆ ರಾಮಾನುಜರಿಗೂ ಪೂಜೆ ಸಲ್ಲಿಸಲಾಗುತ್ತದೆ. ರಾಮಾನುಜಾಚಾರ್ಯರ ಸಹಸ್ರ ಜನ್ಮ ಮಹೋತ್ಸವದ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಇಡೀ ವರ್ಷ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ವಿಶೇಷ ಕಾರ್ಯಕ್ರಮಗಳಲ್ಲಿ ‘ರಾಮಾನುಜ ಸಂಚಾರಂ’ ತುಂಬಾ ಪ್ರಮುಖವಾದುದು. ಮಲಯಪ್ಪಸ್ವಾಮಿ, ಶ್ರೀದೇವಿ, ಭೂದೇವಿ ಮತ್ತು ರಾಮಾನುಜಾಚಾರ್ಯರ ಉತ್ಸವ ಮೂರ್ತಿಗಳನ್ನು ಹೊತ್ತ ವಿಶೇಷವಾಗಿ ಅಲಂಕೃತಗೊಂಡ ತೇರು ಈ ವರ್ಷ ದೇಶದ 106 ವೈಷ್ಣವ ದಿವ್ಯದೇಸಂಗಳಲ್ಲಿ ಸಂಚರಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ