ಈ ಕಟುಕರ ಸಂತೆಗೆ ಯಾಕೆ ಇಳಿದೆ ತಾಯೇ ನಂದಿನಿ
ಮತ್ತೆ ಗೋವಿನ ವಿಚಾರ ಸದ್ದು ಮಾಡುತ್ತಿದೆ. ಮತ್ತೆ ಅಂದರೇನು ಅದು ಎಂದೆಂದೂ ಸದ್ದು ಮಾಡಿದ,ಮಾಡುವ ವಿಚಾರವೇ ಈ ದೇಶದಲ್ಲಿ. ಗೋಹತ್ಯೆಯನ್ನು ನಿಷೇಧಿಸಬೇಕು ಎನ್ನುವ ಸಾತ್ವಿಕ ಮನಸ್ಸುಗಳು ಒಂದು ಕಡೆ; ಅದು ಒಂದು ವರ್ಗದ ಆಹಾರ, ಆಹಾರ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಬೊಬ್ಬಿರಿವ ಆಷಾಢಭೂತಿಗಳು ಇನ್ನೊಂದೆಡೆ, ನಿಷೇಧವಿದ್ದಾಗ್ಯೂ ಕಡಿದು ತಿಂದು ತೇಗುವ ದಾನವ ರೂಪಿಗಳು ಮತ್ತೊಂದೆಡೆ; ಇದರ ಮಧ್ಯೆ ನಿಷ್ಕ್ರಿಯರಾಗಿ ಕುಳಿತ ಹಲವರು ಮಗದೊಂದೆಡೆ...ಆದರೆ ಗೋಭೂಮಿ ಎಂದು ಕರೆಯಲ್ಪಟ್ಟ ದೇಶದಲ್ಲಿ ಗೋವು ಮಾತ್ರ ಮೌನವಾಗಿ ಕಣ್ಣೀರು ಸುರಿಸುತ್ತಲೇ ಇದೆ.
ಯಜುರ್ವೇದದಲ್ಲಿ ಇರುವ ವೈದಿಕ ರಾಷ್ಟ್ರಗೀತೆ "ದೋಗ್ಧ್ರೀ ಧೇನುರಿತ್ಯಾಹ| ಧೇನ್ವಾಮೇವ ಪಯೋ ದಧಾತಿ| ತಸ್ಮಾತ್ಪುರಾ ದೋಗ್ಧ್ರೀ ಧೇನುರಜಾಯತ|" ಅಂದರೆ ಹಾಲು ಕರೆಯುವ ಗೋವುಗಳು ಯಥೇಚ್ಛವಾಗಲಿ. ಹಸುವಿನ ಹಾಲೇ ಅಮೃತ ಎಂದಿದೆ. "ಮಾ ಗಾಂ ಅನಾಗಾಂ ಅದಿತಿಂ ವಧಿಷ್ಟ" ಎನ್ನುತ್ತದೆ ಗೋಸೂಕ್ತ. ರೋಗಿಷ್ಟವಲ್ಲದ ಗೋವನ್ನು ಕೊಲ್ಲಬೇಡ ಎಂಬರ್ಥ. ಗೋವು ಎಂಬ ಪದಕ್ಕೆ ತಾಯಿ, ಹದವಾದ ಭೂಮಿ, ಸೂರ್ಯ, ಬೆಳಕು ಹೀಗೆ 23 ಅರ್ಥಗಳಿವೆ. ಗಂಗಾಜಲಕ್ಕೆ ಸಮನಾದ ಸುಮಾರು 148 ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುವ ಗೋಮೂತ್ರ; ಕ್ರಿಮಿನಾಶಕ, ರೋಗ ನಿವಾರಕ ಗುಣಗಳನ್ನು ಹೊಂದಿರುವ ಗೋಮಯ; ಅಗತ್ಯ ಸಂದರ್ಭದಲ್ಲಿ ಮೈಶಾಖವನ್ನು ಕೊಡುವ ವಿಭೂತಿ; ತ್ರಿದೋಷಗಳನ್ನೇ ಹೋಗಲಾಡಿಸುವ ಅಮೃತವೆಂದೇ ಹೆಸರಾದ ಗೋಕ್ಷೀರ; ವಾತಹರವೂ ಪಿತ್ಥ, ರಕ್ತದೋಷವನ್ನು ನಿವಾರಿಸುವ ದಧಿ; ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುವ ಬೆಣ್ಣೆ; ವಾತಪಿತ್ತವಿಷಹರ ಘೃತ; ಗೋರೋಜನ; ಕ್ರಿಮಿಹರ, ರಕ್ಷೋಘ್ನ ಗೊರಸು; ಹೀಗೆ ಅಪರಿಮಿತ ಪ್ರಯೋಜನಕಾರಿಯಾದ, ಮಾನವನ ಜೀವಕ್ಕೂ, ಆತ್ಮಕ್ಕೂ ಆಪತ್ಬಾಂಧವಳಾದ ಸರ್ವೋಪಕಾರಿಯಾದ ಗೋಮಾತೆಯನ್ನೂ ಬಿಡದ ಮಾನವನ ಸ್ವಾರ್ಥಕ್ಕೆ ಏನೆನ್ನಬೇಕು? ಗೋ ವಧೆ ಎಂದರೆ ಮಾತೃ ಹತ್ಯೆ ಅಷ್ಟೇ!
ದೇಶದಲ್ಲೀಗ 36 ಸಾವಿರಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. 1760ರಷ್ಟು ಹಿಂದೆ ಸರ್ಕಾರದ ಒಂದೇ ಒಂದು ಅಧಿಕೃತ ಕಸಾಯಿಖಾನೆ ಇರಲಿಲ್ಲ. 1910ರಲ್ಲಿ ದೇಶದಲ್ಲಿ ಕಸಾಯಿಖಾನೆಗಳ ಸಂಖ್ಯೆ 350ಕ್ಕೆ ತಲುಪಿತ್ತು. ಆದರೆ ಸ್ವಾತಂತ್ರ್ಯ ಬಂದ ಬಳಿಕ ಕಸಾಯಿಖಾನೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದು ಗೋಸಂತತಿ ರಕ್ಷಣೆ ಕುರಿತು ಆಡಳಿತಾರೂಢ ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ದ್ಯೋತಕ. 36 ಸಾವಿರ ಕಸಾಯಿಖಾನೆಗಳಿಗೆ ಹಗಲುರಾತ್ರಿ ನಿರಂತರ ಕೆಲಸ ದೊರೆಯಬೇಕಾದರೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಗೋವುಗಳು ಹತ್ಯೆಯಾಗಲೇ ಬೇಕು. ಸಂಯುಕ್ತ ರಾಷ್ಟ್ರ ಸಂಘದ ಅಗ್ರಿಕಲ್ಚರ್ ಆರ್ಗನೈಸೇಶನ್ 2007ರ ವರದಿಯಲ್ಲಿ ಕೊಟ್ಟ ಅಂಕಿಅಂಶಗಳ ಪ್ರಕಾರ ಆ ವರ್ಷದಲ್ಲಿ 1,60,70,000 ಗೋವುಗಳ ಹತ್ಯೆಯಾಗಿತ್ತು. ಇಂದು ಅದು ಎರಡೂವರೆ ಕೋಟಿಯನ್ನೂ ದಾಟಿದೆ. ಗೋಮಾಂಸ ರಫ್ತಿನಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಕೃಷಿ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, ಭಾರತದಿಂದ ಅಮೆರಿಕಕ್ಕೆ ಗರಿಷ್ಠ ಪ್ರಮಾಣದ ಗೋಮಾಂಸ ರಫ್ತಾಗುತ್ತಿದೆ. ಭಾರತದಲ್ಲಿ 2001-02ರಲ್ಲಿ 18.59ಲಕ್ಷ ಟನ್ ಇದ್ದ ಗೋಮಾಂಸ ಉತ್ಪಾದನೆ 2011-12ರಲ್ಲಿ 48.69ಲಕ್ಷ ಟನ್ನಿಗೆ ಹೆಚ್ಚಿತು. 2011ರ ಬಳಿಕ ಇದು ಪ್ರತಿವರ್ಷ ಸರಾಸರಿ ಶೇಕಡ 14ರಂತೆ ಏರಿಕೆಯಾಗಿದೆ. 2013ರ ಎಪ್ರಿಲ್ನಿಂದ ಅಕ್ಟೋಬರ್ ಅವಧಿಯಲ್ಲಿ ವಿಯಟ್ನಾಂಗೆ ಗೋಮಾಂಸ ರಫ್ತು ಮೌಲ್ಯ ಶೇಕಡ 229ರಷ್ಟು ಹೆಚ್ಚಿದೆ. ಭಾರತ 2014ರ ಒಂದೇ ವರ್ಷ 4.8 ಶತಕೋಟಿ ಡಾಲರ್ (29,455 ಕೋಟಿ ರೂ.)ಗಳ ಗೋಮಾಂಸ ರಫ್ತುಮಾಡಿದೆ. 2014-15ನೇ ಸಾಲಿನಲ್ಲಿ ಭಾರತ 24 ಲಕ್ಷ ಟನ್, ಬ್ರೆಜಿಲ್ 20 ಲಕ್ಷ ಟನ್, ಆಸ್ಟ್ರೇಲಿಯಾ 15 ಲಕ್ಷ ಟನ್ ಗೋಮಾಂಸ ರಫ್ತು ಮಾಡಿವೆ.
ಗಾಬರಿ ಹುಟ್ಟಿಸುವ ಮೇಲಿನ ಸಂಗತಿಗಳನ್ನು ಅವಲೋಕಿಸುವಾಗ ಈ ದೇಶದಲ್ಲಿ ಗೋ ಹತ್ಯೆಯ ವಿರುದ್ಧ ಯಾರೂ ದನಿಯೆತ್ತಿಲ್ಲವೇ ಎನ್ನುವ ಅನುಮಾನ ಹುಟ್ಟುವುದು ಸಹಜ. ಗೋಸಾಕಣೆ, ಗೋವಿನ ರಕ್ಷಣೆಗೆ ಈ ದೇಶ ನೀಡಿದ ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಗೋವಿಗಾಗಿ ಯುದ್ಧಗಳೇ ನಡೆದಿವೆ ಈ ದೇಶದಲ್ಲಿ. ಗೋವಿನ ಸೇವೆ ಮಾಡಿದ ಚಕ್ರವರ್ತಿಗಳೇ ಆಗಿ ಹೋಗಿದ್ದಾರೆ ಇಲ್ಲಿ. ಪರಮ ಪುರುಷನೇ ಸ್ವತಃ ಗೋಪಾಲಕನಾಗಿ ಅವತರಿಸಿದ ಪುಣ್ಯಭೂಮಿ ಇದು. ಗೋಸಂಪತ್ತಿನ ಮೇಲೆ ಶ್ರೀಮಂತಿಕೆಯನ್ನು ಅಳೆಯುತ್ತಿದ್ದ ನಾಡು ಇದು. ಕೌಟಿಲ್ಯನ ಅರ್ಥಶಾಸ್ತ್ರದ "ಗೋಧ್ಯಕ್ಷ" ಎಂಬ ಅಧ್ಯಾಯದಲ್ಲಿ ಆಡಳಿತ ಯಂತ್ರದಲ್ಲಿ ಗೋವು-ಹುಲ್ಲುಗಾವಲು-ಪಶು ಆಹಾರದ ನಿರ್ವಹಣೆಗೆ ‘ಗೋಧ್ಯಕ್ಷ’ ಎಂಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು ಎಂದಿದೆ. ಕಾಡತೂಸುಗಳಿಗೆ ಗೋವಿನ ಕೊಬ್ಬನ್ನು ಉಪಯೋಗಿಸಿದ್ದಾರೆನ್ನುವ ವಿಚಾರವೇ 1857ರಲ್ಲಿ ದೇಶೀಯರು ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವಾಯಿತು. ಮೈಸೂರು ಸಂಸ್ಥಾನ ಅಮೃತ ಮಹಲ್ ಗೋತಳಿ ಸಂವರ್ಧನೆಗಾಗಿ 4,13,539 ಎಕರೆ ವಿಸ್ತಾರದ 240 ಹುಲ್ಲುಗಾವಲುಗಳನ್ನು ಮೀಸಲಿರಿಸಿತ್ತು.
ಗೋಹತ್ಯಾ ನಿಷೇಧ ಕಾನೂನು ಮೊದಲ ಬಾರಿಗೆ ಗುಜರಾತ್ನಲ್ಲಿ 1944ರಲ್ಲೇ ಜಾರಿಯಾಗಿತ್ತು. ಭಾರತ ಸಂವಿಧಾನದ 48ನೇ ವಿಧಿಯಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂಬ ಉಲ್ಲೇಖವಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು ಹಿಂದೂಗಳು ಒತ್ತಾಯಿಸಿದರು. ಆದರೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಇದನ್ನು ತೀವ್ರವಾಗಿ ವಿರೋಧಿಸಿದರು. ಕೊನೆಗೆ ಸಂವಿಧಾನದ ರಾಜ್ಯ ಪಟ್ಟಿಯ 7ನೇ ಪರಿಚ್ಛೇದದಲ್ಲಿ “ರಾಜ್ಯ ಸರಕಾರಕ್ಕೆ ಜಾನುವಾರುಗಳ ಸಂರಕ್ಷಣೆ ಮತ್ತು ಹತ್ಯೆ ತಡೆಯಲು ಕಾನೂನು ರಚಿಸುವ ಸಂಪೂರ್ಣ ಅಧಿಕಾರ ನೀಡಲಾಯಿತು.” ರಾಜ್ಯ ನಿರ್ದೇಶಕ ತತ್ವಗಳ 48ನೇ ಪರಿಚ್ಛೇದದಲ್ಲಿ “ರಾಜ್ಯವು ಕೃಷಿಯನ್ನು ಮತ್ತು ಪಶು ಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಬೇಕು. ವಿಶೇಷವಾಗಿ ಜಾನುವಾರು ತಳಿ ಸಂರಕ್ಷಿಸಿ ಸುಧಾರಣೆಗೊಳಿಸುವ ಕ್ರಮ ಕೈಗೊಳ್ಳುವುದರ ಜತೆಗೆ ಹಸುಗಳು ಮತ್ತು ಎಮ್ಮೆಗಳು ಹಾಗೂ ಇತರ ಹಾಲು ಕೊಡುವ, ಭಾರ ಎಳೆಯುವ ಜಾನುವಾರುಗಳ ಹತ್ಯೆಯನ್ನು ನಿಷೇಧಿಸುವ ಕ್ರಮ ಕೈಗೊಳ್ಳಬೇಕು,” ಎಂದು ಸೇರಿಸಲಾಯಿತು.ಇವತ್ತು ಬಹು ಚರ್ಚೆಯಲ್ಲಿರುವ ಗೋಹತ್ಯೆ ನಿಷೇಧದ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದ್ದು 1964ರಲ್ಲಿ. 1966ರಲ್ಲಿ ಗೋಹತ್ಯಾ ನಿಷೇಧವನ್ನು ಆಗ್ರಹಿಸಿ ಲಕ್ಷಾಂತರ ಮಂದಿ ದೆಹಲಿಯ ಸಂಸತ್ ಭವನದ ಮೇಲೆ ಮುತ್ತಿಗೆ ಹಾಕಿದರು. 1979ರಲ್ಲಿ ವಿನೋಬಾ ಭಾವೆ ಆಮರಣಾಂತ ಉಪವಾಸ ಕೂತು, ‘ಗೋ ಹತ್ಯೆ ನಿಷೇಧಿಸಬೇಕು’ ಎಂದು ಪಟ್ಟು ಹಿಡಿದಾಗ, ಜನತಾ ಸರ್ಕಾರ ‘ಗೋ ಹತ್ಯೆ ನಿಷೇಧ ಮಸೂದೆ’ಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಭಾರತದ ಸಂಸತ್ತಿನಲ್ಲಿ ಗೋಹತ್ಯೆಯನ್ನು ನಿಷೇಧಿಸುವಂತೆ 1979, 1985, 1990, 1994, 1996, 1999, 2000ನೇ ಇಸವಿಗಳಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸಲಾಗಿತ್ತು. ಆದರೆ ಅವೆಲ್ಲವೂ ಬಿದ್ದು ಹೋಗಿವೆ. 1982ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ಸೂಚನೆ ನೀಡಿದ್ದರು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್ಗಡಗಳಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ. 2001ರಲ್ಲಿ ರಾಷ್ಟ್ರೀಯ ಗೋಸೇವಾ ಆಯೋಗದ ಸ್ಥಾಪನೆಯಾಗಿದೆ. ಗೋವುಗಳ ಕುರಿತಾಗಿ ವಿಶೇಷ ಅಧ್ಯಯನಕ್ಕಾಗಿ ನಾಗಪುರದಲ್ಲಿ ಗೋ ವಿಜ್ಞಾನ ಅನುಸಂಧಾನ ಕೇಂದ್ರವೂ ಸ್ಥಾಪನೆಯಾಗಿದೆ. ಹಲವು ಸಂತ,ಮಹಂತ,ಸ್ವಾಮೀಜಿ,ಸಹೃದಯರು ಗೋಪೋಷಣೆ ಮಾಡುತ್ತಲೇ ಇದ್ದಾರೆ. ಗೋವಿಗೆ ಸಂಬಂಧಿಸಿದಂತೆ 4 ಪೇಟೆಂಟ್ ಗಳು ಲಭಿಸಿವೆ. 2003ರಲ್ಲಿ ಎನ್ಡಿಎ ಸರಕಾರದ ಜಾರಿಗೆ ತರಲು ಹೊರಟಿದ್ದ, ಗೋಹತ್ಯೆ ನಿಷೇಧ ಮಸೂದೆ ಮಿತ್ರಪಕ್ಷಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದಿಂದಾಗಿ ಸಫಲವಾಗಲಿಲ್ಲ. 2008ರಲ್ಲಿ ಗೋಹತ್ಯೆ ನಿಷೇಧ ಮಾಡುವ ಮೂಲಕ ಗೋವಂಶದ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮರೇ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಕಲಕತ್ತಾ ಉಚ್ಛನ್ಯಾಯಾಲಯದಲ್ಲಿ ಮುಸ್ಲಿಮರು ಗೋಹತ್ಯೆಯನ್ನು ವಿರೋಧಿಸಿದ ವಿದ್ಯಮಾನ ಕಂಡು ಗೋಹಂತಕರು ಹಾವು ತುಳಿದವರಂತೆ ಬೆಚ್ಚಿಬಿದ್ದರು.
ವಾಣಿಜ್ಯ ನಗರಿ ಮುಂಬೈವೊಂದರಲ್ಲೇ ಪ್ರತಿನಿತ್ಯ 1 ಲಕ್ಷ ಕೆ.ಜಿ. ಗೋಮಾಂಸ ಮಾರಾಟವಾಗುತ್ತಿತ್ತು. 1995ರಲ್ಲಿ ಬಿಜೆಪಿ-ಶಿವಸೇನೆ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲಿ ಪ್ರಾಣಿಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿತ್ತು. ಆದರೆ ಪರ-ವಿರೋಧ ಚರ್ಚೆಯಲ್ಲೇ ಮುಗಿದು ಹೋದ ವಿಧೇಯಕ ಕಾಯಿದೆಯಾಗಲೇ ಇಲ್ಲ. ಬಳಿಕ ಬಂದ ಕಾಂಗ್ರೆಸ್ ಸರಕಾರಗಳಿಗೂ ಈ ವಿಚಾರಕ್ಕೂ ಅಜಗಜಾಂತರ ಬಿಡಿ. ಹಾಗೆ ಗೋಹತ್ಯೆ ನಿಷೇಧ ಜಾರಿಯಾಗಲು ದೇವೇಂದ್ರ ಫಡ್ನವೀಸರಂತಹ ಖಡಕ್ ವ್ಯಕ್ತಿಯೇ ಮುಖ್ಯಮಂತ್ರಿಯಾಗಿ ಬರಬೇಕಾಯಿತು. ಈಗ ಗೋಹಂತಕರಿಗೆ ಹಂತಕರಿಗೆ 5 ವರ್ಷ ಜೈಲು ಶಿಕ್ಷೆ ಕಾದಿದೆ. ಮಾರ್ಚ್ 3, 2015 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಮಹತ್ವದ ಕಾಯ್ದೆಗೆ ಅಂಕಿತ ಹಾಕುತ್ತಿದ್ದಂತೆ ಮಹಾರಾಷ್ಟ್ರದ ಗೋ ಸಂತತಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಬಿಜೆಪಿ ಆಡಳಿತವಿರುವ ಇನ್ನೊಂದು ರಾಜ್ಯ ಹರಿಯಾಣದಲ್ಲೂ ಗೋಮಾಂಸ ಮಾರಾಟಗಾರರಿಗೆ 3-5 ವರ್ಷಗಳ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಆದೇಶ ಜಾರಿಗೊಳಿಸಲಾಗಿದೆ.
ಕರ್ನಾಟಕದಲ್ಲಂತೂ ಸರಕಾರಗಳ ತುಷ್ಟೀಕರಣ ನೀತಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನಿರಂತರವಾಗಿ ಎಗ್ಗಿಲ್ಲದೆ, ರಾಜಾರೋಷವಾಗಿ ಹಗಲಲ್ಲೇ ದನಗಳನ್ನು ವಧಿಸಲಾಗುತ್ತಿದೆ. ರಾತ್ರೋರಾತ್ರಿ ದನಗಳ್ಳರ ತಂಡ ತಲವಾರು ತೋರಿಸಿ ಬೆದರಿಸಿ ಸಾಕಲು ಕಟ್ಟಿಹಾಕಿದ ದನಗಳನ್ನೇ ಎಳೆದೊಯ್ಯುತ್ತಿವೆ. ರೈತರಿಗಷ್ಟೇ ಸೀಮಿತವಾಗಿರಬೇಕಾಗಿದ್ದ ದನಗಳ ಜಾತ್ರೆಗಳಲ್ಲಿ ತರಕಾರಿ ವಿಕ್ರಯದಂತೆ ದನಗಳ ಬೆಲೆಯನ್ನು ಚೌಕಾಶಿ ಮಾಡಿ, ಓರ್ವ ವ್ಯಕ್ತಿ 20, 30 ದನಗಳನ್ನು ಖರೀದಿಸಿ, ಕಾಡಿನಂಚಿನವರೆಗೆ ನಡೆಸಿ ಕೊಂಡೊಯ್ದು ರಾತ್ರೋರಾತ್ರಿ ಲಾರಿ ಟ್ರಕ್ಕುಗಳಿಗೆ ಬಲವಂತವಾಗಿ ತುಂಬಿಸಿ ನೇರವಾಗಿ ಕಸಾಯಿಖಾನೆಗೆ ರವಾನಿಸುವ ಜಾಲ ಇಡೀ ರಾಜ್ಯಾದ್ಯಂತ ಹರಡಿಕೊಂಡಿದೆ. ಪೊಲೀಸು ಇಲಾಖೆ ಮೌನವಾಗಿ ಕುಳಿತಿದೆ. ಕರ್ನಾಟಕದಲ್ಲಿದ್ದ The Karnataka Prevention of Cow Slaughter and Cattle Preservation Act, 1964 ಕಾಯ್ದೆಯ ಪ್ರಕಾರ ಹಸು, ಕರು, ಎಮ್ಮೆಗಳ ಹತ್ಯೆಗೆ ನಿಷೇಧವಿತ್ತು. ಎತ್ತು, ಹೋರಿ, ಕೋಣಗಳನ್ನು ಕೊಲ್ಲಬಹುದಾದರೂ ಅವುಗಳು 12ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗು ಪಶು ಸಂಗೋಪನಾ ಅಧಿಕಾರಿಯಿಂದ ಕೊಲ್ಲಬಹುದೆಂಬ ಪ್ರಮಾಣಪತ್ರ ಪಡೆಯಬೇಕಾಗಿತ್ತು. 2010ರಲ್ಲಿ ಈ ಕಾನೂನಿಗೆ ಮತ್ತಷ್ಟು ತಿದ್ದುಪಡಿಗಳನ್ನು ತಂದು ಜಾನುವಾರುಗಳ ಮಾರಾಟ, ಮಾಂಸ ಮಾರಾಟ, ಮಾಂಸ ಶೇಖರಣೆ ಹೀಗೆ ಎಲ್ಲದರ ಮೇಲೂ ನಿಷೇಧ ವಿಧಿಸಿ ಗೋವು ಸಂರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಲಾಗಿತ್ತು. ಈ ಕಾನೂನು ಮುರಿದವರಿಗೆ ದಂಡದ ಜೊತೆಗೆ 7ವರ್ಷಗಳ ಜೈಲು ಶಿಕ್ಷೆಯೂ ಇತ್ತು. ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದದ್ದೇ ತಡ ಈ ಕಾನೂನನ್ನು ಹಿಂಪಡೆದುಕೊಂಡು ಋಣ ಸಂದಾಯ ಮಾಡಿತು! ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಮಾತ್ರ ಗೋಹತ್ಯೆ ನಿಷೇಧ ಹೇರಿದ್ದು, ನಿಷೇಧವಿರುವ ರಾಜ್ಯಗಳಿಂದ ಇತರ ರಾಜ್ಯಗಳಿಗೆ ಅಕ್ರಮವಾಗಿ ಗೋ ಸಾಗಾಣಿಕೆ ಮಾಡಲಾಗುತ್ತಿದ್ದು, ಇದನ್ನು ತಡೆಯಲು ಎಲ್ಲಾ ರಾಜ್ಯಗಳಲ್ಲಿ ಗೋಹತ್ಯೆಗೆ ನಿಷೇಧ ಹೇರಬೇಕೆಂದು ಕೋರಿ ಕಳೆದ ಜನವರಿಯಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಇದು ನ್ಯಾಯಾಲಯಗಳ ಎಡಬಿಡಂಗಿತನಕ್ಕೊಂದು ಉದಾಹರಣೆ. ಕ್ರಿಕೆಟ್'ನಂತಹ ಕ್ಷುಲ್ಲಕ ವಿಚಾರಗಳಲ್ಲಿ ಮೂಗು ತೂರಿಸುವ ಸುಪ್ರಿಂಕೋರ್ಟಿಗೆ ಗೋವು ಮಹತ್ವದ್ದಾಗಿ ಕಾಣದಿರುವುದು ಮಾತ್ರ ವಿಪರ್ಯಾಸ.
ಮೊನ್ನೆ ಮೊನ್ನೆ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾದ ಮರುಘಳಿಗೆಯಲ್ಲೇ ರಾಷ್ಟ್ರೀಯ ಹಸಿರು ಪೀಠದ ಗೋಹತ್ಯಾ ನಿಷೇಧದ ಆಜ್ಞೆಯನ್ನೇ ಬಳಸಿಕೊಂಡ ಯೋಗಿ ಆದಿತ್ಯನಾಥ್ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಆಜ್ಞಾಪಿಸುವುದರೊಂದಿಗೆ ದೇಶದೆಲ್ಲೆಡೆ ಸಂಚಲನವೇ ಸೃಷ್ಟಿಯಾಯಿತು.. 250ಕ್ಕೂ ಅಧಿಕ ಅಕ್ರಮ ಕಸಾಯಿಖಾನೆಗಳಿರುವ ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಪೊಲೀಸರು ಮುಂದಾದಾಗ ಮಾಂಸದ ವ್ಯಾಪಾರಿಗಳು ಪ್ರತಿಭಟನೆಗೆ ತೊಡಗಿದರು. ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾದ ಬಳಿಕ ಎಲ್ಲರೂ ತೆಪ್ಪಗಾದರು. ಸ್ವತಃ ಆಲ್ ಇಂಡಿಯಾ ಮೀಟ್ ಅಸೋಸಿಯೇಷನ್ನಿನ ಪ್ರತಿನಿಧಿ ಹಾಜಿ ಶಕೀಲ್ ಖುರೇಶಿ "ಬಿಎಸ್ಪಿ, ಎಸ್ಪಿ ಸರಕಾರಗಳು ಮಾಂಸೋದ್ಯಮಿಗಳಿಗೆ ಮೋಸ ಮಾಡಿವೆ. ನೂತನ ಮುಖ್ಯಮಂತ್ರಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಉದ್ಯಮಗಳನ್ನಷ್ಟೇ ಮುಚ್ಚಿಸುವ ಮೂಲಕ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ. ಉತ್ತರಪ್ರದೇಶದ ವ್ಯವಸ್ಥೆಯನ್ನು ಸರಿಯಾದ ಹಾದಿಗೆ ಮರಳಿಸಲು ಯತ್ನಿಸುತ್ತಿರುವ ಅವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು" ಎಂದಿರುವುದು ತುಷ್ಟೀಕರಣ ಮಾಡುವ ಬದಲು ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ನಿಜವಾದ ಜಾತ್ಯಾತೀತತೆ ತಾನಾಗಿ ಪ್ರಕಟವಾಗುತ್ತದೆ ಎನ್ನುವುದರ ಸೂಚನೆ. ಆದಿತ್ಯನಾಥರನ್ನು ಪರವಹಿಸಿಕೊಂಡು ಗೋಹತ್ಯಾ ನಿಷೇಧವನ್ನು ಬೆಂಬಲಿಸಿದ ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಅಬೇದಿನ್'ರನ್ನು ಅವರ ಸಹೋದರೆನೇ ವಜಾಗೊಳಿಸಿದ. ಅದರ ಬೆನ್ನಿಗೇ ಅಖಿಲ ಭಾರತ ಶಿಯಾ ವೈಯುಕ್ತಿಕ ಕಾನೂನು ಮಂದಳಿಯೂ ಗೋಹತ್ಯಾ ನಿಷೇಧವನ್ನು ಬೆಂಬಲಿಸಿತು. ಇದರ ಬೆನ್ನಲ್ಲೇ ಗುಜರಾತ್ ಸರಕಾರ ತನ್ನಲ್ಲಿದ್ದ ಗೋಹತ್ಯಾ ನಿಷೇಧ ಕಾಯಿದೆಯನ್ನು ಮತ್ತಷ್ಟು ಕಠಿಣಗೊಳಿಸಿ ಗೋಹತ್ಯೆ, ಗೋವುಗಳ ಅಕ್ರಮ ಸಾಗಾಟ ಮಾಡುವವರಿಗೆ ಹದಿನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿಗಳವರೆಗಿನ ದಂಡವನ್ನು ವಿಧಿಸುವ ಕಾನೂನು ರೂಪಿಸಿದೆ. ಹೌದು ರಾಜ ದಕ್ಷನೂ, ನ್ಯಾಯಪರನೂ ಆಗಿದ್ದರೆ ಪ್ರಜೆಗಳು ತನ್ನಿಂತಾನೇ ಸರಿದಾರಿಗೆ ಬರುತ್ತಾರೆ ಎನ್ನುವುದಕ್ಕೆ ಉದಾಹರಣೆಯಲ್ಲವೇ ಇದು. ಇಷ್ಟರವರೆಗೆ ಸುಮ್ಮನಿದ್ದ ಮುಸ್ಲಿಮರೂ ಗೋರಕ್ಷಣೆಯ ಮಾತಾಡುತ್ತಾರೆಂದರೆ ಹಿಂದಿನ ಸರಕಾರಗಳ ಕ್ಸುತಿತ ರಾಜಕಾರಣಕ್ಕೆ ಏನು ಹೇಳಬೇಕು?
ಉತ್ತರಪ್ರದೇಶ, ಹಿಮಾಚಲಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಬಹುದಾದರೆ ಉಳಿದ ಕಡೆಗಳಲ್ಲಿ ಯಾಕಾಗದು? ಸಂವಿಧಾನದ ನಲವತ್ತೆಂಟನೆಯ ವಿಧಿಯನ್ನು ಪಾಲಿಸದಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಲ್ಲವೇ? ರಾಷ್ಟ್ರೀಯ ಹಸಿರು ಪೀಠದ ಆಜ್ಞೆಯನ್ನಾದರೂ ಪಾಲಿಸಲು ಸರಕಾರಗಳಿಗೇನು ಮಂಕು ಕವಿದಿದೆಯೇ? ಆಹಾರ ಸಂಸ್ಕೃತಿ ಎಂದು ಬೊಬ್ಬಿರಿಯುತ್ತಾ ಇರುವವರೇನು ತಿನ್ನಲಿಕ್ಕಾಗಿಯೇ ಹುಟ್ಟಿದವರೇ?
ಕ್ಯೂಬಾ, ಇರಾನ್ ನಂತಹ ಹಿಂದೂವೇತರ ದೇಶಗಳಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಇಂಡೋನೇಷ್ಯಾದ ನೂಪಾನಿಸದ ದ್ವೀಪದಲ್ಲಿ ಗೋಮಾಂಸ ಭಕ್ಷಣೆಗೆ ಬಹಿಷ್ಕಾರ ಹೇರಲಾಗಿದೆ. ಭಾರತೀಯ ಗೋವಂಶದ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟು ಅಮೇರಿಕಾವು 1835ರಲ್ಲಿ ಇಂಗ್ಲೆಂಡಿನ ಮಾರ್ಗವಾಗಿ ಭಾರತದಿಂದ ಅಂಗೋಲ, ಗಿರ್, ಧಾರಪಾರಕರ, ಸಹಿವಾಲ, ಅಂಕೋಲಾ ವಾಟಸಿ ತಳಿಯ ಗೂಳಿಗಳನ್ನು ಕೊಂಡೊಯ್ದು ಗೋವಿನ ಉತ್ಕೃಷ್ಟ ಜಾತಿಯ ತಳಿಯನ್ನು ತಯಾರಿಸಿತು. ಸಹಿವಾಲ ತಳಿಯನ್ನು ಭಾರತದಿಂದ ಕೊಂಡೊಯ್ದು ಕೃಷಿ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸಿದ ಕ್ಯೂಬಾ ಜಗತ್ತಿನಲ್ಲಿ ಇಂದು ಸಂಪೂರ್ಣ ಜೈವಿಕ ಕೃಷಿ ಮಾಡುತ್ತಿರುವ ಏಕೈಕ ದೇಶ. ಬ್ರಾಝಿಲ್ನ ಶೇ. 90ರಷ್ಟು ಗೋಸಂಪತ್ತು ಭಾರತೀಯ ಗೋತಳಿಯನ್ನು ಆಧರಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಇಂದಿಗೂ 20 ಗೋವುಗಳನ್ನು ವಧುದಕ್ಷಿಣೆಯಾಗಿ ನೀಡುವ ಸಂಪ್ರದಾಯವಿದೆ. ಆದರೆ ಭಾರತದಲ್ಲಿ ಗೋವಿಗಿಂತಲೂ ಹೆಚ್ಚು ಕಸಾಯಿಖಾನೆಗಳು ಹುಟ್ಟುತ್ತಿವೆ. ಭೂಮಿಯನ್ನು ಫಲವತ್ತಾಗಿಸುವ, ಹೆಚ್ಚು ನೀರಿಂಗಿಸುವ ಸಾಮರ್ಥ್ಯವುಳ್ಳ ಗೊಬ್ಬರವನ್ನು ಕೊಡುವ; ತನ್ನ ಗೊಬ್ಬರ ಹಾಕಿ ಬೆಳೆದ ಬೆಳೆಯಲ್ಲಿ ಅಗತ್ಯ ಪ್ರಮಾಣದ ಮೆಗ್ನೇಶಿಯಮ್ ತತ್ವವನ್ನು ಸೇರಿಸಿ ಹೃದ್ರೋಗದ ಅಪಾಯವನ್ನು ತಪ್ಪಿಸುವ; ತನ್ನ ಗ್ರಂಥಿ ಸ್ರಾವದಿಂದ ವಾತಾವರಣ ಶುದ್ಧಿಗೊಳಿಸುವ; ತನ್ನ ಸೂರ್ಯನಾಡಿಯಿಂದ ಹಾಲಿನಲ್ಲಿ ವಿಟಮಿನ್ ಎ, ಸುವರ್ಣ ಕ್ಷಾರಗಳನ್ನು ಕರುಣಿಸುವ ಈ ಬಹು ಉಪಕಾರಿ ದೇವತೆಯನ್ನು ರಕ್ಷಿಸಲಾರೆವೇ?
ಈ ಕಟುಕರ ಸಂತೆಗೆ ಯಾಕೆ ಇಳಿದೆ ತಾಯೇ ನಂದಿನಿ
ನಡುಗುತಿಹುದು ನಿನ್ನ ಕಡಿವ ಕಂಡು ಮೇಧಿನಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ