ಪುಟಗಳು

ಮಂಗಳವಾರ, ಏಪ್ರಿಲ್ 25, 2017

ಆರ್ಯ ಆಕ್ರಮಣ ವಾದವೆಂಬ ಕಳ್ಳು ಕುಡಿದ ಮಂಗನಾಟ

ಆರ್ಯ ಆಕ್ರಮಣ ವಾದವೆಂಬ ಕಳ್ಳು ಕುಡಿದ ಮಂಗನಾಟ

 ಮತ್ತೆ ಆರ್ಯ ಆಕ್ರಮಣ ವಾದ ಭುಗಿಲೆದ್ದಿದೆ. ಅದೊಂಥರಾ ಕಳ್ಳು ಕುಡಿದ ಮಂಗನಂತೆ! ಸಾಲಾ ಸಾಲು ಸಾಕ್ಷ್ಯಗಳು ಲಭ್ಯವಾಗಿದ್ದಾಗ್ಯೂ, ಆರ್ಯರು ಹೊರಗಿನಿಂದ ಬಂದು ಇಲ್ಲಿನ ದ್ರಾವಿಡ ನಾಗರೀಕತೆಯನ್ನು ಧ್ವಂಸಗೊಳಿಸಿದರು ಎಂಬುದು ಶುದ್ಧ ಸುಳ್ಳೆಂದೂ, ಹರಪ್ಪ-ಮೊಹಂಜೋದಾರೋಗಳಲ್ಲಿದ್ದುದು ಶುದ್ಧ ಸನಾತನ ವೈದಿಕ ಸಂಸ್ಕೃತಿಯೆಂದೂ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳು ಮುಕ್ತಕಂಠದಿಂದ ಸಾರಿದ್ದಾಗ್ಯೂ ಈ ವಾದ ಜಾತ್ರೆ ಗದ್ದೆಯ ತಟ್ಟೀರಾಯನಂತೆ ಕುಣಿಯುತ್ತಲೇ ಇದೆ. ನೈಜ ಇತಿಹಾಸವೆಂಬ ದೇವರ ಉತ್ಸವ ಮೂರ್ತಿಯನ್ನು ನೋಡುವ ಬದಲು ತಟ್ಟೀರಾಯನತ್ತಲೇ ಮೂಢರು ಆಕರ್ಷಿತರಾಗುತ್ತಲೇ ಇದ್ದಾರೆ. ಹಾಗೆ ಆಕರ್ಷಿತರಾಗುವವರಿಗೆ ಆರ್ಯ ಪದದ ಅರ್ಥವೂ ತಿಳಿದಿಲ್ಲ, ತಾವ್ಯಾರು ಎನ್ನುವುದೂ ತಿಳಿದಿಲ್ಲ! ಭಾರತವನ್ನು ವಿಭಜಿಸುವ ಪ್ರಯತ್ನ ಮಾಡುತ್ತಲೇ ಇರುವ ಶಕ್ತಿಗಳಿಗೆ, ತಮ್ಮ ರಾಜಕೀಯ ಬದುಕನ್ನು, ಬಿಟ್ಟಿ ಊಟವನ್ನು ರಕ್ಷಿಸಿಕೊಳ್ಳುವ ಸಲುವಾಗಿ ಒದ್ದಾಡುವವರಿಗೆ, ತಮ್ಮ ಮೇಲ್ಮೆಯನ್ನು ಪ್ರದರ್ಶಿಸಿಕೊಳ್ಳಬಯಸುವವರಿಗೆ ತಾವು ಆರ್ಯ ಜನಾಂಗದ ಪೀಳಿಗೆಗಳಲ್ಲ, ದ್ರಾವಿಡರಾದ ತಮ್ಮನ್ನು ಆರ್ಯರೆಂಬ ಆಕ್ರಮಣಕಾರಿ ವರ್ಗ ಹೊರಗಿಂದ ಬಂದು ಆಕ್ರಮಿಸಿ ಅಡಿಯಾಳಾಗಿಟ್ಟುಕೊಂಡಿತು ಎನ್ನುವ ವಾದ ವಿಜೃಂಭಿಸಬೇಕೆನ್ನುವ ಹಂಬಲ ಸಹಜವೇ. ತಾವೊಂದು ಶ್ರೇಷ್ಠ ನಾಗರಿಕತೆಯ ವಾರಸುದಾರರೆಂದು ದಾಖಲೆಗಳೇ ಹೇಳುತ್ತಿದ್ದರೂ ತಾವವರಲ್ಲ ಎಂದು ಸಮರ್ಥಿಸಿಕೊಳ್ಳಲು ಗಟ್ಟಿದನಿಯಲ್ಲಿ ಚೀರಾಡುವ ಈ "ದ್ರಾವಿಡ ಪ್ರಾಣಾಯಾಮ"ಕ್ಕೆ ಭಾರತದ ಇತಿಹಾಸವೇ ಬದಲಾಗಿ ಹೋದದ್ದು ಮಾತ್ರ ವಿಪರ್ಯಾಸ.

       ಆಫ್ರಿಕಾ, ರಷ್ಯಾ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸ್ಥಳೀಯ ಕರಿಯ ಜನರ ತಾವು ಅಧಿಕಾರ ಚಲಾಯಿಸಿದಂತೆ ಭಾರತದಲ್ಲೂ ಪ್ರಾಚೀನ ಕಾಲದಲ್ಲೂ ಅದೇ ರೀತಿ ನಡೆದಿತ್ತೆಂದು ಬ್ರಿಟಿಷರು ಊಹಿಸಿಕೊಂಡಿದ್ದಿರಬೇಕು. ಅದಕ್ಕಾಗಿಯೇ ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪಠ್ಯ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಇದರಿಂದ ಹಲವು ಬಗೆಯ ಲಾಭಗಳು ಅವರಿಗಾಗುತ್ತಿದ್ದವು. ಭಾರತೀಯರಲ್ಲೇ ಮೂಲ ಮತ್ತು ಆಕ್ರಮಣಕಾರರೆಂಬ ಜಗಳ ಉಂಟಾಗಿ ಉತ್ತರ ದಕ್ಷಿಣಗಳು ದೂರದೂರವಾಗುವ ಸಾಧ್ಯತೆ ಒಂದು. ಬ್ರಿಟಿಷರ ಈ ಇತಿಹಾಸವನ್ನೇ ನಂಬಿ ತಾವು ಶ್ರೇಷ್ಠರೆಂಬ ಭಾವನೆಯಿಂದ ದಕ್ಷಿಣದವರ ಮೇಲೆ ದ್ವೇಷ ಕಾರುತ್ತಾ ಬ್ರಿಟಿಷರಂತೆ ತಾವು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಅವರ ಸಂಸ್ಕಾರವನ್ನು ಅನುಕರಿಸುತ್ತಾ ಸ್ವಧರ್ಮವನ್ನು ಮರೆಯುವ ಉತ್ತರ ಭಾರತೀಯರು, ಇದರಿಂದ ಕೀಳರಿಮೆಗೊಳಗಾಗಿ ಅವರನ್ನು ವಿರೋಧಿಸುವ ಅಥವಾ ಅವರಂತೆ ತಾವಾಗಲು ಬಯಸಿ ಬ್ರಿಟಿಷರ ಅನುಕರಣೆ ಮಾಡತೊಡಗುವ ಅಥವಾ ಇಂದಿನ ತಮ್ಮ ಸಂಸ್ಕೃತಿಯನ್ನೇ ತೊರೆದು ರಾಕ್ಷಸ ಕುಲವೇ ತಮ್ಮ ಮೂಲವೆಂಬಂತೆ ಅನಾಗರಿಕರಾಗುವ ದಕ್ಷಿಣಾತ್ಯರು...ಇದರಿಂದ ದೇಶದೊಳಗಾಗುವ ಅಲ್ಲೋಲ ಕಲ್ಲೋಲ. ಈ ಪರಿಸ್ಥಿತಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯೂ ಆದರೂ ಕೂಡಾ. ಆದರೆ ಯಾವಾಗ ಹರಪ್ಪಾ, ಮೊಹಂಜೋದಾರೋಗಳಲ್ಲಿ ಉತ್ಖನನಗಳು ನಡೆದವೋ ಬಿಳಿಯರ ಬುದ್ಧಿಗೆ ಮಂಕು ಬಡಿಯತೊಡಗಿತು. ಆಂಗ್ಲರು ಕಲ್ಪಿಸಿಕೊಂಡ ಆರ್ಯರು ಭಾರತ ತಲುಪುವ ಸಾವಿರ ವರ್ಷಗಳ ಮೊದಲೇ ಇಲ್ಲಿ ವೈದಿಕ ಸಂಸ್ಕೃತಿಯೊಂದು ಅದ್ಭುತವಾದ ನಾಗರಿಕತೆಯೊಂದು ಅಭಿವೃದ್ಧಿಗೊಂಡಿತ್ತು ಎನ್ನುವ ಸಾಲು ಸಾಲು ದಾಖಲೆಗಳು ಈ ಉತ್ಖನನದಲ್ಲಿ ಲಭ್ಯವಾದವು. ತಮ್ಮದು ಕಟ್ಟುಕಥೆಯೆಂದು ಜಗತ್ತಿಗೆ ಅರಿವಾದೊಡನೆ ಸುಳ್ಳನ್ನು ಮುಚ್ಚಿಡಲು ಮತ್ತಷ್ಟು ಸುಳ್ಳನ್ನು ಹರಿಯಬಿಟ್ಟರು ಬಿಳಿಯರು. ಉತ್ಖನನದಲ್ಲಿ ಗೊತ್ತಾದ ನಾಗರಿಕತೆ ವೇದ ಸಂಸ್ಕೃತಿಯದ್ದಲ್ಲವೆಂದೂ, ಅನಾರ್ಯರಾದ ದ್ರಾವಿಡರದ್ದೆಂದೂ, ಅವರನ್ನು ಆಕ್ರಮಿಸಿದ ಆರ್ಯರು ಆ ನಾಗರಿಕತೆಯನ್ನು ಧ್ವಂಸ ಮಾಡಿ ಬಳಿಕ ವೇದಗಳನ್ನು ರಚಿಸಿದರೆಂದೂ ಚರಿತ್ರೆಯ ಪುಟಗಳಲ್ಲಿ ಬರೆಯಿಸಿಬಿಟ್ಟರು. ಹರಪ್ಪಾ ಉತ್ಖನನದಲ್ಲಿ ಭಾಗಿಯಾಗಿದ್ದ ವ್ಹೀಲರ್ ಅವಶೇಷಗಳನ್ನು ಆಕ್ರಮಣ ಮಾಡಿದವರದ್ದು ಈ ವಸ್ತುಗಳು, ಆಕ್ರಮಣಕ್ಕೊಳಗಾದವರದ್ದು ಉಳಿದವುಗಳೆಂದು ಘಂಟಾಘೋಷವಾಗಿ ನಿರ್ಣಯಿಸಿಬಿಟ್ಟ. ಚರಿತ್ರಕಾರರು ಕುರಿಗಳಂತೆ ಆತನ ವಾದವನ್ನು ಹಿಂಬಾಲಿಸಿದರು.

               ಯಾವುದೇ ಸಾಕ್ಷ್ಯಗಳಿಲ್ಲದೇ ಇತಿಹಾಸಕಾರರು ಆರ್ಯ ಆಕ್ರಮಣವಾದವನ್ನು ಎತ್ತಿ ಹಿಡಿಯಲು ಸಾಧ್ಯವಾದದ್ದು ಹೇಗೆ? ಇದಕ್ಕೆ ಉತ್ತರ ಹುಡುಕ ಹೊರಟರೆ ಅದು ವೇದಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ಮ್ಯಾಕ್ಸ್ ಮುಲ್ಲರ್ ಕಡೆಗೆ ಬೊಟ್ಟು ಮಾಡುತ್ತದೆ. ವೇದ ಸಾಹಿತ್ಯವನ್ನು ಐವತ್ತು ಸಂಪುಟಗಳಷ್ಟು ಬೃಹತ್ ಪ್ರಮಾಣದಲ್ಲಿ ಅನುವಾದ ಮಾಡಿದ ವ್ಯಕ್ತಿ ಮ್ಯಾಕ್ಸ್ ಮುಲ್ಲರ್. ಆದರೆ ಆತನೇನು ವೇದಗಳ ಮೇಲಿನ ಗೌರವ ಅಥವಾ ಪ್ರೇಮದಿಂದ ಈ ಅನುವಾದಗಳನ್ನು ಮಾದಿದ್ದಲ್ಲ. ಆತನದ್ದು ಕೂಲಿ ಕೆಲಸ. ಆಕ್ಸ್ ಫರ್ಡಿನಲ್ಲಿ ಕರ್ನಲ್ ಬೋಡೆನ್ ಎಂಬ ಶ್ರೀಮಂತ ತನ್ನ ಆಸ್ತಿಯನ್ನೆಲ್ಲಾ ಸಂಸ್ಕೃತದ ಅಧ್ಯಯನಕ್ಕಾಗಿ ಮೀಸಲಿಟ್ಟ. "ಸಂಸ್ಕೃತ, ವೇದಗಳನ್ನು ಅಧ್ಯಯನ ಮಾಡಿ ಅವನ್ನು ಕ್ರೈಸ್ತ ಮತದ ಪ್ರಕಾರವಾಗಿ ತಿರುಚಿ, ಅವು ಕ್ರೈಸ್ತ ಮತಕ್ಕಿಂತ ಕಳಪೆ ಎಂದು ತೋರಿಸಬೇಕು" ಎನ್ನುವುದೇ ಅವನ ಉದ್ದೇಶವಾಗಿತ್ತು. ಅದನ್ನು ಮೋನಿಯರ್ ವಿಲಿಯಮ್ಸ್ ಸಂಸ್ಕೃತ-ಆಂಗ್ಲ ಶಬ್ಧಕೋಶದ ಪ್ರಥಮ ಸಂಪುಟದ ಪೀಠಿಕೆಯಲ್ಲಿ ನೋಡಬಹುದು. ಆ ಪೀಠಕ್ಕೆ ಮ್ಯಾಕ್ಸ್ ಮುಲ್ಲರ್ ಸಮರ್ಥನಿದ್ದರೂ ಅವನು ಜರ್ಮನಿಯವ ಎನ್ನುವ ಕಾರಣಕ್ಕೆ ಮೋನಿಯರ್ ವಿಲಿಯಮ್ಸನನ್ನು ನೇಮಿಸಿದರು. ಇದರಿಂದ ಇರುಸುಮುರುಸುಗೊಂಡ ಮ್ಯಾಕ್ಸ್ ಮುಲ್ಲರ್ ಅವನಿಗಿಂತಲೂ ಹೆಚ್ಚು ಮತಾಂತರಕ್ಕೆ ಅನುಕೂಲವಾಗುವ ಕೆಲಸ ಮಾಡುವ ಹುಮ್ಮಸ್ಸಿನಿಂದ ಹೊಸ ಕೆಲಸ ಶುರುವಿಟ್ಟುಕೊಂಡ. ಹೀಗೆ ಕ್ರೈಸ್ತ ಮತ ಪ್ರಚಾರಕರು ಭಾರತದಲ್ಲಿ ಮತಾಂತರದ ಅನುಕೂಲಕ್ಕಾಗಿ ವೇದಗಳನ್ನು ತಮಗೆ ಬೇಕಾದಂತೆ ಅನುವಾದಿಸಲು ವ್ಯಕ್ತಿಯೊಬ್ಬನ ಹುಡುಕಾಟದಲ್ಲಿದ್ದಾಗ ಅವರಿಗೆ ಸಿಕ್ಕ ಸೂಕ್ತ ವ್ಯಕ್ತಿಯೇ ಸರಿಯಾಗಿ ಕೆಲಸವಿಲ್ಲದೆ ಅಂಡಲೆಯುತ್ತಿದ್ದ ಜರ್ಮನಿಯ ಮ್ಯಾಕ್ಸ್ ಮುಲ್ಲರ್. ಪುಟಕ್ಕೆ ನಾಲ್ಕು ಪೌಂಡ್ ಕೂಲಿಯಂತೆ ತರ್ಜುಮೆ ಮಾಡಲು ಒಡಂಬಡಿಕೆ ಮಾಡಿಕೊಂಡ ಮ್ಯಾಕ್ಸ್ ಮುಲ್ಲರ್, ತನ್ನ ತಾಯಿಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾನೆ. ಹನ್ನೆರಡು ವರ್ಷ ಘನಪಾಠ ಹೇಳಿಸಿಕೊಂಡು ಜೀವನ ಪರ್ಯಂತ ಕಲಿತರೂ ವೇದಾರ್ಥವನ್ನು ಪೂರ್ತಿ ಅರಿತುಕೊಳ್ಳುವುದು ಕಷ್ಟವೆಂದು ಭಾರತದ ಮಹಾಮಹಾ ಸಂಸ್ಕೃತ, ವೇದ ಪಂಡಿತರೇ ಅಲವತ್ತುಕೊಳ್ಳುತ್ತಿದ್ದ ಸಮಯದಲ್ಲಿ ಜರ್ಮನಿಯಲ್ಲಿ ಸಂಸ್ಕೃತ ಕಲಿತು, ಆರು ವರ್ಷಗಳಲ್ಲೇ ವೇದಗಳನ್ನು ಕಲಿತ(!) ಈ 24 ವರ್ಷ ಪ್ರಾಯದ ತರುಣ ಅನುವಾದಿಸಿದ ವೇದ ಸಾಹಿತ್ಯ ಹೇಗಿದ್ದೀತು? ತನ್ನ ಹೆಂಡತಿಗೆ ಬರೆದ ಪತ್ರದಲ್ಲಿ "ವೇದಗಳು ಹಿಂದೂಗಳ ತಾಯಿಬೇರು. ಅದನ್ನು ಕಿತ್ತರೆ ಸಾಕು ಮುಂದೆ ನಾವಂದುಕೊಂಡಂತೆ ಆಗುತ್ತದೆ. ನಾನು ಈಗ ಮಾಡುತ್ತಿರುವ ವೇದಗಳ ಅನುವಾದ ಮುಂದೆ ಇಂಡಿಯಾದ ಹಣೆಬರಹದ ಮೇಲೆ ಪ್ರಭಾವ ಬೀರುತ್ತದೆ" ಎನ್ನುತ್ತಾನೆ. ಸಾವಿರಾರು ವರ್ಷಗಳಿಂದ ಈ ದೇಶವನ್ನು ಬೆಳಗಿದ ವೇದ ಸಂಸ್ಕೃತಿಯನ್ನು ಮೂಲೋತ್ಪಾಟನೆ ಮಾಡುವುದೇ ಅವನ ಉದ್ದೇಶವಾಗಿತ್ತಲ್ಲವೇ? 1868 ಡಿಸೆಂಬರ್ 16ರಂದು ಭಾರತದ ಸೆಕ್ರೆಟರಿ ಆಫ್ ಸ್ಟೇಟ್ ಆರ್ಗಿಲ್ ಡ್ಯೂಕ್'ಗೆ "ಇಂಡಿಯಾದಲ್ಲಿನ ಪುರಾತನ ವೃಕ್ಷ ವಿನಾಶಕ್ಕೆ ಸಿದ್ಧವಾಗಿ ನಿಂತಿದೆ. ಕ್ರೈಸ್ತ ಮತ ಅಲ್ಲಿ ಹೆಜ್ಜೆ ಇರಿಸದಿದ್ದರೆ ತಪ್ಪು ಯಾರದ್ದು?" ಎಂದು ಪತ್ರ ಬರೆದ ಧೂರ್ತ ಈತ. ಅನುವಾದ ಕೆಲಸಕ್ಕೆ ಒಪ್ಪಿಕೊಂಡ ನಲವತ್ತು ವರ್ಷಗಳ ಬಳಿಕ ಇಂಗ್ಲೆಂಡಿನ ಸೈಂಟ್ ಜೋನ್ಸ್ ಕಾಲೇಜಿನಲ್ಲಿ ಮಾಡಿದ ಉಪನ್ಯಾಸದಲ್ಲಿ "ಯೂನಿವರ್ಸಿಟಿ ಪ್ರೆಸ್ಸಿಗಾಗಿ ಈ ಪವಿತ್ರ ಗ್ರಂಥಗಳ ಅನುವಾದಕ್ಕೆ ನಾನು ಒಪ್ಪಿಕೊಂಡ ಒಡಂಬಡಿಕೆಯಲ್ಲಿ ಮಿಷನರಿಗಳಿಗೆ ಸಹಾಯ ಮಾಡುವುದೂ ಸೇರಿತ್ತು" ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಒದರಿದ. ಇಂತಹ ಮ್ಯಾಕ್ಸ್ ಮುಲ್ಲರನೇ ವೇದಗಳ ರಚನೆಯಾದದ್ದು ಕ್ರಿ.ಪೂ 1200ರಲ್ಲಿ ಎಂದು ಯಾವುದೇ ಸಂಶೋಧನೆ, ಸಾಕ್ಷ್ಯಾಧಾರಗಳಿಲ್ಲದೆ ಹೇಳಿದ್ದು. ತಮಗೆ ಅನುಕೂಲವಾಗಿದ್ದ ಅಂತಹ ಮಹಾನ್ ವಿದ್ವಾಂಸನ ಮಾತುಗಳನ್ನು ಇತಿಹಾಸಕಾರರು ಮರುಮಾತಿಲ್ಲದೆ ಸ್ವೀಕರಿಸಿದರು.

                  ಆದರೆ ಮುಂದಿನ ದಿನಗಳಲ್ಲಿ ಪುರಾತತ್ವ ಶೋಧಕರು ಆಧುನಿಕ ಉಪಕರಣ-ಜ್ಞಾನ-ನಿಯಮಗಳನ್ನು ಬಳಸಿಕೊಂಡು ಮಾಡಿದ ಸಂಶೋಧನೆ ಈ ಸುಳ್ಳುಗಳನ್ನೆಲ್ಲಾ ಬಯಲಿಗೆಳೆಯಿತು. ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ ಆತ ಹೆಸರಿಸಿದ ಎರಡು ಸಂಸ್ಕೃತಿಗಳು ಒಂದೇ ಕಾಲದ್ದಲ್ಲವೆಂದು ಸ್ಪಷ್ಟವಾಯಿತು. ಮೊದಲ ಗುಂಪಿನವರನ್ನು ಆಕ್ರಮಣಕಾರರನ್ನಾಗಿಯೂ ಎರಡನೆಯವರನ್ನು ಆಕ್ರಮಣಕ್ಕೊಳಗಾದವರಂತೆ ವ್ಹೀಲರ್ ಪರಿಗಣಿಸಿದ್ದ. ಆದರೆ ಆಕ್ರಮಣಕಾರರು ಬರುವ ಸಮಯಕ್ಕೆ ಆಕ್ರಮಣಕ್ಕೊಳಗಾದವರು ಅಲ್ಲಿ ಇರಲೇ ಇಲ್ಲ ಎಂದು ಸ್ಟ್ರಾಟಿಗ್ರಫಿ ನಿಚ್ಚಳವಾಗಿ ಸಾರಿತು. ಇಬ್ಬರು ಬೇರೆ ಬೇರೆ ಕಾಲದವರಾಗಿದ್ದರೆ ನರಸಂಹಾರ ಹೇಗೆ ಸಾಧ್ಯ? ಹೀಗಾಗಿ ಆರ್ಯರು ದ್ರಾವಿಡರ ಸಂಹಾರ ಮಾಡಿದರು ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ನಿಚ್ಚಳವಾಯಿತು. ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆಯಿಂದ ಆರ್ಯ ಆಕ್ರಮಣ ಸುಳ್ಳೆಂದು ನಿರೂಪಿತವಾಯಿತು. ಅಲ್ಲದೆ ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲೂ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಎರಡೂ ಸಿಕ್ಕಿದ್ದವು. ಹೀಗಾಗಿ ಆ ನಾಗರೀಕತೆ ಆರ್ಯರದ್ದೇ ಎನ್ನುವುದು ಸೂರ್ಯ ಸ್ಪಷ್ಟ. ಅಲ್ಲದೆ ಮಾರ್ಷಲ್, ಫಿಗ್ಗಟ್ ರು ತಮ್ಮ ಉತ್ಖನನಗಳಲ್ಲಿ ಲಿಂಗಗಳೆಂದು ತೋರಿಸಿದ ವಸ್ತುಗಳು ಶಂಖಾಕಾರದ ತೂಕದ ಕಲ್ಲುಗಳ ಚೂರುಗಳು ಎಂದು ಎಸ್. ಆರ್. ರಾವ್ ಸಾಬೀತುಪಡಿಸಿದರು.(ಆರ್ಯನ್ ಇನ್ವ್ಯಾಷನ್ ಥಿಯರಿ-ಶ್ರೀಕಾಂತ್ ತಲಗೇರಿ)

                 ಲಿಂಗಾಕಾರದ ಕಲ್ಲುಗಳನ್ನು ನೋಡಿ ಅವುಗಳನ್ನು ಲಿಂಗಗಳೆಂದು ಕಲ್ಪಿಸಿ ಅಲ್ಲಿದ್ದವರು ದ್ರಾವಿಡರೇ ಎಂದು ಮೊಂಡು ವಾದ ಮಾಡಿದ ಇತಿಹಾಸಕಾರರಿಗೆ ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು ಎನ್ನುವುದೇ ಮರೆತು ಹೋಯಿತು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ.  ಅಲ್ಲದೆ ಶಿವಾರಾಧನೆ ಆರ್ಯಸಂಸ್ಕೃತಿಯ, ಸನಾತನ ವೇದ ಸಂಸ್ಕೃತಿಯ ಭಾಗವೆಂದೂ ಅರಿಯದೆ ಹೋದರು. ಕೊಂಬುಗಳಿದ್ದ ಪಶುಪತಿಯನ್ನು ಕ್ರೈಸ್ತರ ಕಾಲಕ್ಕೆ ಮೊದಲೇ ಯೂರೋಪಿನಲ್ಲಿಯೂ ಆರಾಧಿಸುತ್ತಿದ್ದರು. ಆ ಚಿತ್ರವನ್ನು ಚಿತ್ರಿಸಲಾಗಿದ್ದ ದೊಡ್ಡ ಬೆಳ್ಳಿಯ ಬಟ್ಟಲು ಜರ್ಮನಿಯಲ್ಲಿ ಕಂಡು ಬಂತು. ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ(ಸ್ಫಟಿಕ ಶುಭ್ರ ಬಣ್ಣದವ) ಎಂದಿದೆ ವೇದ. ಹಾಗೆಯೇ ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ಹಾಗೆಯೇ ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ದೇವಾಸುರ ಕದನದಲ್ಲಿ ಸೋಲುಂಡ ಬಳಿಕ ದಾನವರು ಆರ್ಯಾವರ್ತವನ್ನು ಬಿಟ್ಟು ಬೇರೆ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಹೋದರು ಎಂದು ವೇದಗಳಲ್ಲೇ ಇದೆ. ಅಂದರೆ ವಲಸೆ ಇಲ್ಲಿಂದಲೇ ಆಗಿರಬೇಕು.  ಹಾಗೆ ನೋಡಿದರೆ ಭಾರತದಲ್ಲಿ ಸರ್ವಕಾಲಕ್ಕೂ ದಲಿತರ ಅಥವಾ ಕೆಳವರ್ಗದವರ ಸಂಖ್ಯೆಯೇ ಮೇಲ್ವರ್ಗಕ್ಕಿಂತ ಹೆಚ್ಚು ಇದ್ದಿದ್ದು, ಬ್ರಾಹ್ಮಣರಂದರೆ ಆರ್ಯರು, ಅಹಿಂದರೆಂದರೆ ದ್ರಾವಿಡರು ಎನ್ನುವ ಬುಡವಿಲ್ಲದ ವಾದವೂ ಅರ್ಥ ಹೀನವೆನಿಸುತ್ತದೆ. ಕೆಲವೇ ಕೆಲವು ಪ್ರತಿಶತ ಸಂಖ್ಯೆಯ ಆರ್ಯರು ಅಗಾಧ ಸಂಖ್ಯೆಯ ದ್ರಾವಿಡರನ್ನು ಸೋಲಿಸಿದ್ದು ಹೇಗೆ?  ಹರಪ್ಪ ಸಂಸ್ಕೃತಿ ಆರ್ಯರದ್ದಾಗದೇ ಇದ್ದಿದ್ದಲ್ಲಿ ವೇದಗಳಲ್ಲಿ ಹೇಳಲಾದ ಯಜ್ಞಶಾಲೆಗಳು ಹರಪ್ಪದಲ್ಲಿ ಕಂಡುಬಂದದ್ದು ಹೇಗೆ? ಇಲ್ಲಿನ ಮೂಲ ಸಂಸ್ಕೃತಿಗೆ ವೈದಿಕತೆಯ ಗಂಧಗಾಳಿ ಇಲ್ಲದಿದ್ದರೆ ಯಜ್ಞಶಾಲೆಗಳು ನಿರ್ಮಿತವಾದದ್ದೇಕೆ? ಅದು ದ್ರಾವಿಡರದ್ದಾಗಿದ್ದಾರೆ ಯಜ್ಞಶಾಲೆ, ಯಜ್ಞಕುಂಡದ ಆಕಾರ, ಯಜ್ಞವಿಧಾನದಲ್ಲೂ ವೈದಿಕ ಸಂಸ್ಕೃತಿಯ ಕುರುಹು ಕಂಡುಬಂದದ್ದಾದರೂ ಹೇಗೆ? ಉತ್ಖನನದಲ್ಲಿ ಯಜ್ಞಕುಂಡದಲ್ಲಿ ದೊರೆತ ಹವಿಸ್ಸು, ಬಲಿ ನೀಡಲಾದ ಪ್ರಾಣಿಗಳ ಅಸ್ಥಿಗಳನ್ನು ನೋಡಿದ ಮೇಲೂ ಅದು ವೈದಿಕ ಆರ್ಯ ನಾಗರಿಕತೆಯಲ್ಲ ಎಂದು ವಾದಿಸುವವರ ಮಸಲತ್ತಾದರೂ ಏನು? ಯಜ್ಞ ಶಾಲೆಗಳ ರಚನೆಯ ಬಗೆಗೆ ನಿರ್ದೇಶನ ಕೊಟ್ಟದ್ದು ವೇದಗಳ ಬಳಿಕ ರಚನೆಯಾದ ಶುಲ್ಬಸೂತ್ರಗಳು. ಶುಲ್ಬಸೂತ್ರಗಳಲ್ಲಿ ಉಲ್ಲೇಖಿಸಿದಂತೆಯೇ ಹರಪ್ಪಾದಲ್ಲಿ ದೊರೆತ ಯಜ್ಞಶಾಲೆಗಳು ರಚಿತವಾಗಿವೆ. ಆ ಸಂಸ್ಕೃತಿಗೆ ವೇದಗಳು ಗೊತ್ತೇ ಇಲ್ಲದಿದ್ದಲ್ಲಿ ಅದು ಸಾಧ್ಯವಾದದ್ದಾದರೂ ಹೇಗೆ?

                 ಸಾಹಿತ್ಯ ಹೊಂದಿರುವ ಜನಾಂಗಕ್ಕೆ ಸಂಸ್ಕೃತಿ ಇರುವುದು ಅಥವಾ ಸಂಸ್ಕೃತಿ ಇರುವ ಜನಾಂಗ ಸಾಹಿತ್ಯ ಸೃಷ್ಟಿ ಮಾಡಿರುವುದು ಇತಿಹಾಸ ಕಂಡ ಸತ್ಯ. ಹರಪ್ಪಾದಲ್ಲಿ ಕಂಡುಬಂದ ನಾಗರಿಕತೆ ದ್ರಾವಿಡರದ್ದು ಎಂದು ನಖಶಿಖಾಂತ ವಾದಿಸಿದವರಿಗೆ ಎಷ್ಟೇ ಪ್ರಯತ್ನಿಸಿದರೂ ಹರಪ್ಪಾ ಲಿಪಿಯ ಜಾಡೇ ಸಿಗಲಿಲ್ಲ. ಅದು ಆರ್ಯರದ್ದೆಂದು, ಹಾಗಾಗಿ ಲಿಪಿಯೂ ಆರ್ಯ ಸಂಸ್ಕೃತಿಯದ್ದಿರಬಹುದೆಂದು ಭಾವಿಸಿದವರಿಗೆ ಉತ್ಖನನದಲ್ಲಿ ಸಿಕ್ಕ ಮೊಹರು, ಕಲಾಕೃತಿಗಳಲ್ಲಿದ್ದ ಲಿಪಿಯ ಗೂಢತೆಯೂ ಅರ್ಥವಾಯಿತು. ಹರಪ್ಪಾ ಭಾಷೆ ಸಂಸ್ಕೃತದೊಂದಿಗೆ ಹೊಂದಿರುವ ಹತ್ತಿರದ ಸಂಬಂಧವೂ ಗೋಚರಿಸಿತು. ಲಿಪಿ, ಭಾಷೆ ಇದ್ದ ಮೇಲೆ ಸಾಹಿತ್ಯವೂ ಇರಬೇಕಲ್ಲಾ? ದ್ರಾವಿಡರೆನ್ನುವ ಜನಾಂಗವನ್ನು ಕಲ್ಪಿಸಿಕೊಂಡವರಿಗೆ ಆ ಜನಾಂಗದ್ದೆನ್ನಲಾದ ಯಾವ ಸಾಹಿತ್ಯವೂ ಸಿಕ್ಕದಿದ್ದ ಮೇಲೆ ಹರಪ್ಪಾದಲ್ಲಿ ಸಿಕ್ಕಿದ ಸಾಹಿತ್ಯ ಆರ್ಯ ಜನಾಂಗದ್ದಲ್ಲದೆ ಇನ್ಯಾರದ್ದು? ಆಧುನಿಕತೆಯೂ ಆಶ್ಚರ್ಯಗೊಳ್ಳುವಂತೆ ಬೃಹತ್ ಕಟ್ಟಡಗಳನ್ನು, ಸ್ನಾನ ಘಟ್ಟಗಳು, ರಮಣೀಯ ವಿಹಾರ ಸ್ಥಳಗಳು, ಇಂದಿನವರೂ ನಿಬ್ಬೆರಗಾಗುವಂತಹ ಅತ್ಯುತ್ತಮ ಪೌರ ಸೌಕರ್ಯಗಳು, ಅದ್ಭುತ ಕಲಾಕೃತಿಗಳನ್ನು ನಿರ್ಮಿಸಿದ, ಯಜ್ಞಗಳನ್ನು ಮಾಡಿ, ದೇವತೆಗಳನ್ನು ಆರಾಧಿಸಿದ ಈ ನಾಗರಿಕತೆ ಆರ್ಯರಲ್ಲದಿದ್ದರೆ ಮತ್ಯಾರದ್ದು? ಈ ಕಾಲದಲ್ಲಿ ವೇದಗಳು ಹುಟ್ಟಿರದಿದ್ದರೆ ಅವರ ಸಾಹಿತ್ಯವಾದರೂ ಯಾವುದು? ಭಾಷೆ, ಲಿಪಿ ಇದ್ದ ಮೇಲೆ ಸಾಹಿತ್ಯ ಇಲ್ಲವೆಂದರೆ ನಂಬುವುದು ಹೇಗೆ? ಪೈಥಾಗೋರಸ್ಸಿಗೂ ಸಾವಿರಾರು ವರ್ಷಗಳಿಗೂ ಮುನ್ನವೇ ಯಾವ ಕಟ್ಟಡ ಹೇಗಿರಬೇಕು, ಹೇಗೆ ಕಟ್ಟಬೇಕು, ಬಗೆಬಗೆಯ ಆಕಾರ, ಆಕೃತಿ, ವಿನ್ಯಾಸಗಳ ಯಜ್ಞ ಕುಂಡಗಳನ್ನು ನಿರ್ಮಿಸುವ ವಿವರಗಳನ್ನು ವೇದ ಸೂತ್ರಗಳಲ್ಲಿ ನಿರ್ದೇಶಿಸಿದ ಆರ್ಯರು ಸ್ವಯಂ ಅಂತಹ ಕಟ್ಟಡಗಳನ್ನು ಕಟ್ಟಲಿಲ್ಲವೇ? ಎಡಬಿಡಂಗಿ ಚರಿತ್ರಕಾರರು ಹೇಳುವಂತೆ ಅನಾರ್ಯ ಹರಪ್ಪರ ನಾಗರಿಕತೆಯನ್ನು ಧ್ವಂಸ ಮಾಡಿ ತಮ್ಮದೇ ನಾಗರಿಕತೆಯನ್ನು ಸೃಷ್ಟಿ ಮಾಡಿದ ಆರ್ಯರದ್ದೇ ಎನ್ನಲಾದ ಹರಪ್ಪಾಗಿಂತಲೂ ಭಿನ್ನವಾದ ನಾಗರಿಕತೆಯ ಕಿಂಚಿತ್ತೂ ಅವಶೇಷಗಳು ಯಾಕೆ ಕಂಡು ಬರಲಿಲ್ಲ? ಹರಪ್ಪಾ ನಾಗರಿಕತೆ ಅನಾರ್ಯರದ್ದು ಎನ್ನುವವರ ವಾದದ ಮಥಿತಾರ್ಥ ಏನಾಗುತ್ತದೆಯೆಂದರೆ ಹರಪ್ಪನ್ನರಿಗೆ ನಾಗರಿಕತೆ ಇದ್ದು ಸಾಹಿತ್ಯವಿರಲಿಲ್ಲ, ಆರ್ಯರ ಬಳಿ ವೇದಗಳಂತ ಉತ್ಕೃಷ್ಟ ಸಾಹಿತ್ಯವಿದ್ದೂ ನಾಗರಿಕತೆಯಿರಲಿಲ್ಲ!

                 ಆರ್ಯರೆಂದರೆ ಅಲೆಮಾರಿಗಳು, ದನಗಾಹಿಗಳು, ಯುದ್ಧಪ್ರಿಯರು ಎನ್ನುವ ಇತಿಹಾಸಕಾರರು ಋಗ್ವೇದದ ರಚನೆಯಾದದ್ದೂ ಅವರಿಂದಲೇ ಎನ್ನುತ್ತಾರೆ. ಋಗ್ವೇದದ ಭಾಷೆಯ ಕುರಿತಂತೆ ಅಮೆರಿಕಾದ ವ್ಯಾಸ ಹ್ಯೂಸ್ಟನ್ "ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇತಿಹಾಸಕಾರರಿಂದ ಬಿಂಬಿಸಲ್ಪಡುವ ಹೊರಗಿನಿಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆಧುನಿಕ ಭಾಷೆಗಳಿಗಿಂತ ಸುಂದರ, ಸಶಕ್ತ ಭಾಷೆ ಬಂದುದಾದರೂ ಎಲ್ಲಿಂದ?" ಎಂದು ಪ್ರಶ್ನಿಸುತ್ತಾರೆ. ವಾಮದೇವ ಶಾಸ್ತ್ರಿ(ಡೇವಿಡ್ ಫ್ರಾಲಿ)ಯವರಂತೂ ಈ ಐತಿಹಾಸಿಕ ದ್ವಂದ್ವವನ್ನು ಸಾಹಿತ್ಯವಿಲ್ಲದ ಇತಿಹಾಸ, ಇತಿಹಾಸವೇ ಇಲ್ಲದ ಸಾಹಿತ್ಯ ಎಂದು ಲೇವಡಿ ಮಾಡುತ್ತಾರೆ. ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು, ಆದರೆ ಅವರಿಗೆ  ನಾಗರಿಕತೆಯಿರಲಿಲ್ಲ. ಆಕ್ರಮಣಕ್ಕೊಳಗಾದವರು ಅದ್ಭುತ ನಾಗರಿಕತೆಯನ್ನು ಬಿಟ್ಟು ಓಡಿದರು. ಅವರಿಗೆ ಅವರದ್ದೆನ್ನಲಾದ ಸಾಹಿತ್ಯವೇ ಇರಲಿಲ್ಲ! ಸುಳ್ಳನ್ನಾದರೂ ಜನ ನಂಬುವಂತೆ ಹೇಳಲೂ ಸಾಮರ್ಥ್ಯವಿಲ್ಲದ ಈ ಮಹಾಪಂಡಿತರು ಇತಿಹಾಸಕಾರರಂತೆ ಯಾವ ಕೋನದಿಂದ ಕಾಣುತ್ತಾರೆ?

                  ಆರ್ಯರು ದ್ರಾವಿಡರು ಪರಮ ವೈರಿಗಳಾಗಿದ್ದಲ್ಲಿ ಆ ವೈರ ಭಾರತೀಯ ಚರಿತ್ರೆಯಲ್ಲಿ ಕಾಣುವುದಿಲ್ಲವೇಕೆ? ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿಯನ್ನು ದಕ್ಷಿಣದವರು ಆರಾಧಿಸಿದ್ದೇಕೆ? ಉತ್ತರದ ರಾಮನನ್ನು ದಕ್ಷಿಣಾತ್ಯರೂ ದೇವರೆಂದು ಸ್ವೀಕರಿಸಿದ್ದೇಕೆ? ದ್ರಾವಿಡರದ್ದೆಂದೇ ಹೇಳಲಾದ ಪಶುಪತಿ ಉತ್ತರಭಾರತೀಯರ ಪರಮ ಆರಾಧ್ಯ ದೈವವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಅಷ್ಟೊಂದು ಹತ್ತಿರದ ಸಂಬಂಧ ಇರುವುದಾದರೂ ಹೇಗೆ? ಶಂಕರರನ್ನು ಸರ್ವಜ್ಞ ಪೀಠಕ್ಕೇರಿಸಿದ್ದು ಕಾಶ್ಮೀರದ ಶಾರದಾ ಪೀಠದಲ್ಲಲ್ಲವೇ? ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠ, ಅನೇಕ ದೇವಾಲಯಗಳನ್ನು ಸ್ಥಾಪಿಸಿದ ದಕ್ಷಿಣ ಮೂಲದ ಶಂಕರರನ್ನು ಇಡೀ ಭಾರತ ಜಗದ್ಗುರುವೆಂದು ಒಪ್ಪಿಕೊಂಡಿದುದಾದರೂ ಹೇಗೆ? ವೈದಿಕ ಸೂತ್ರಕಾರರಾದ ಬೋಧಾಯನ, ಆಪಸ್ತಂಭ,... ಸರ್ವತ್ರ ಪ್ರಾತಃಸ್ಮರಣೀಯರಾದ ಶಂಕರ, ಮಧ್ವ, ರಾಮಾನುಜರು ದಕ್ಷಿಣದವರೇ ಅಲ್ಲವೇ? ಧರ್ಮ-ಸಂಸ್ಕೃತಿ, ಮತ-ತತ್ವ, ನ್ಯಾಯ-ನೀತಿ, ಸಾಮಾಜಿಕ-ಕೌಟುಂಬಿಕ ಪದ್ದತಿಗಳಲ್ಲಿ ಉತ್ತರ-ದಕ್ಷಿಣವಾಸಿಗಳಲ್ಲಿ ಚಾರಿತ್ರಿಕ ವೈರುಧ್ಯವೇ ಕಾಣದಿರುವಾಗ ಈ ಆರ್ಯ ಆಕ್ರಮಣವಾದ ಹಸಿ ಹಸಿ ಸುಳ್ಳೆಂದು ಮೇಲ್ನೋಟಕ್ಕೇ ಅನಿಸುವುದಿಲ್ಲವೇ?

                     ಅಂದ ಹಾಗೆ ಈ ಆರ್ಯ ಆಕ್ರಮಣವಾದ ಇಂದು ಜೀವಂತವಿರುವುದು ಭಾರತದಲ್ಲಿ ಮಾತ್ರ! ಅಮೆರಿಕಾದ ವಿವಿಗಳಲ್ಲಿ ಹಿಂದೂ ಜನಾಂಗದ ಅಧ್ಯಯನಕ್ಕೆ ಪ್ರಮುಖ ಪಠ್ಯ ಪುಸ್ತಕವಾದ "Survey of Hinduism" ನಲ್ಲಿ ಕ್ಲಾಸ್ ಕ್ಲೋಸ್ಟರ್ ಮೈರ್ "ಇತ್ತೀಚಿನ ದಿನಗಳಲ್ಲಿ ಹೊರಬಿದ್ದಿರುವ ವೈಜ್ಞಾನಿಕ-ಶಾಸ್ತ್ರೀಯ ಅನ್ವೇಷಣೆಗಳ ಪ್ರಕಾರ "ಭಾರತದ ಮೇಲಿನ ಆರ್ಯ ಆಕ್ರಮಣ" ವಾದ ಒಪ್ಪಲು ಅಸಾಧ್ಯವಾದದ್ದೆಂದು ಖಡಾಖಂಡಿತವಾಗಿ ಹೇಳಿದ್ದಾನೆ. ಪರಮ ಪವಿತ್ರ ಸರಸ್ವತಿ ನದಿಯನ್ನು ಋಗ್ವೇದ ಐವತ್ತಕ್ಕೂ ಹೆಚ್ಚು ಬಾರಿ ಸ್ಮರಿಸುತ್ತದೆ. ತಾಯಂದಿರಲ್ಲಿ, ನದಿಗಳಲ್ಲಿ, ದೇವತೆಗಳಲ್ಲಿ ನೀನು ಶ್ರೇಷ್ಠಳಾದವಳು ಎಂದು ಸ್ತುತಿಸಿದೆ. ಸರಾಸರಿ ಆರೇಳು ಕಿ.ಮೀ, ಕೆಲವೆಡೆ ಹದಿನಾಲ್ಕು ಕಿ.ಮೀಗೂ ಅಧಿಕ ಅಗಲವಾಗಿದ್ದ ಈ ಮಹಾನದಿ ಹರ್ಯಾಣ, ಪಂಜಾಬ್, ರಾಜಸ್ಥಾನಗಳ ಮೂಲಕ ಪ್ರವಹಿಸಿ ಭೃಗುಕುಚ್ಛದ ಬಳಿ ರತ್ನಾಕರ(ಅರಬ್ಬಿ ಸಮುದ್ರ)ವನ್ನು ಸೇರುತ್ತಿತ್ತು. ಹಲವು ಬಾರಿ ತನ್ನ ಪಥವನ್ನು ಬದಲಿಸಿ, ಪ್ರಾಕೃತಿಕ ಏರುಪೇರುಗಳಿಗೆ ಒಳಗಾಗಿ ಕ್ರಮೇಣ ಕ್ಷೀಣಗೊಂಡು ಕ್ರಿ.ಪೂ 2000ದ ವೇಳೆಗೆ ಶಾಶ್ವತವಾಗಿ ಒಣಗಿ ಹೋಯಿತು. ಅಮೆರಿಕಾದ Landsat, ಫ್ರೆಂಚರ SPOT ಉಪಗ್ರಹಗಳು ತೆಗೆದ ಛಾಯಚಿತ್ರಗಳಿಂದ ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೆ ಆ ಬಳಿಕ ನಡೆದ ವೈಜ್ಞಾನಿಕ ಸಂಶೋಧನೆಗಳಲ್ಲೂ ಈ ನದಿ ಹರಿದ ಕುರುಹುಗಳು ಕಾಣಸಿಕ್ಕಿವೆ. ಇಂದಿನ ರಾಜಸ್ಥಾನದಲ್ಲಿ ಅಲ್ಲಲ್ಲಿ ಕಂಡುಬಂದ ಸಿಹಿ ನೀರ ಪಾತ್ರಗಳು ಈ ನದಿ ಹರಿವಿನದ್ದೇ. ಇದನ್ನು ಬಳಸಿಕೊಂಡು ಕೆಲವು ಕಡೆ ನದಿಯನ್ನು ಪುನರುಜ್ಜೀವಿಸುವ ಪ್ರಯತ್ನಗಳೂ ನಡೆದಿದೆ. ಹಿಮಾಲಯದಿಂದ ಹರಿದು ಬರುತ್ತಿರುವ ಸರಸ್ವತಿಯ ಉಗಮ ಬಿಂದುವಿನ ದರ್ಶನವಂತೂ ಬದರಿಯ ಸಮೀಪದ ವ್ಯಾಸ ಗುಹೆಯ ಬಳಿ ಈಗ ಎಲ್ಲರಿಗೂ ಲಭ್ಯ. ಬಳಿಕ  ಅಂಬಾಲದ ಆದಿ ಬದರಿಯ ಬಳಿಯೂ ಅದು ಕಾಣಿಸಿಕೊಂಡು ವಿಸ್ತಾರವಾಗಿದೆ.  ಸರಸ್ವತಿ ಗುಪ್ತಗಾಮಿನಿಯಾಗಿ ಪ್ರಯಾಗದಲ್ಲಿ ಗಂಗೆ, ಯಮುನೆಯರೊಂದಿಗೆ ಸಂಗಮಿಸುತ್ತಿದೆ ಎನ್ನುವ ನಂಬಿಕೆ ಇದೆಯಷ್ಟೇ. ಒಂದು ಕಾಲದಲ್ಲಿ ಸರಸ್ವತಿಗೆ ಉಪನದಿಯಾಗಿದ್ದ ಯಮುನಾ ಭೂಗರ್ಭದ ಹಾಳೆಗಳ ವ್ಯತ್ಯಾಸದಿಂದಾಗಿ ಸರಸ್ವತಿಯ ಪಾತಳಿಯ ಮೇಲ್ಮುಖಕ್ಕೆ ಹರಿಯಲಾಗದೆ ಪಶ್ಚಿಮದಿಂದ ಪೂರ್ವದತ್ತ ತಿರುಗಿ ಗಂಗೆಯೊಡನೆ ಸೇರಿಕೊಂಡಿತು. ಸರಸ್ವತಿಯ ಉಪನದಿ ಯಮುನೆಯಲ್ಲಿ ಸರಸ್ವತಿಯ ಲೇಪವಿರುವದರಿಂದ ತ್ರಿವೇಣಿ ಸಂಗಮದಲ್ಲಿ ಸರಸ್ವತಿಯೂ ಇರುವುದೆಂಬ ನಂಬಿಕೆ ಹುಟ್ಟಿಕೊಂಡಿತು. ನದಿ ಬತ್ತಿ ಹೋದ ಬಳಿಕ ಅದು ಹರಿದ ಜಾಗಗಳಲ್ಲಿ ಜನ ವಸತಿ ಆರಂಭವಾಯಿತು. ಅವು ಕ್ರಿ.ಪೂ 2000ದ್ದೆಂದು ಖ್ಯಾತ ಪುರಾತತ್ವ ಶಾಸ್ತ್ರಜ್ಞ ವಾಕಂಕರ್ ಸಂಶೋಧನೆಯಲ್ಲಿ ಹೊರಬಿತ್ತು. ಕ್ರಿ.ಪೂ 2000ಕ್ಕೆ ಮೊದಲೇ ಬತ್ತಿ ಹೋದ ನದಿಯನ್ನು ಮ್ಯಾಕ್ಸ್ ಮುಲ್ಲರ್ ಹೇಳಿದಂತೆ ಕ್ರಿ.ಪೂ 1200ರಲ್ಲಿ ರಚಿತವಾದ ಋಗ್ವೇದದಲ್ಲಿ ವರ್ಣಿಸಲು ಹೇಗೆ ಸಾಧ್ಯ? ಅಂದರೆ ಆರ್ಯರು ಒಮ್ಮೆ ಇಲ್ಲಿಗೆ(ಕ್ರಿ.ಪೂ 2000ಕ್ಕೆ ಮುನ್ನ) ಬಂದು ಆಕ್ರಮಣ ಮಾಡಿ ಹಿಂದಿರುಗಿ ಹೋಗಿ ಕ್ರಿ.ಪೂ 1500ರಲ್ಲಿ ಮತ್ತೆ ಬಂದು ಬಿಟ್ಟರೆ? ಎಂತಹಾ ಎಡಬಿಡಂಗಿತನ! ಆರ್ಯರು ಸರಸ್ವತಿ ನದಿ ಬತ್ತಿ ಹೋದ ಬಳಿಕ ಭಾರತದ ಮೇಲೆ ದಂಡೆತ್ತಿ ಬಂದುದಾದರೆ(ಕ್ರಿ.ಪೂ.1500) ಸರಸ್ವತಿಯ ಬಗ್ಗೆ ಅವರಿಗೆ ತಿಳಿದದ್ದಾದರೂ ಹೇಗೆ? ಅವರು ಸರಸ್ವತಿಯನ್ನು ತಾಯಿಯೆಂದು ಸ್ತುತಿಸಲಾದರೂ ಹೇಗೆ ಸಾಧ್ಯ? ಇವೆಲ್ಲವೂ ಆರ್ಯರನ್ನು ಕ್ರಿ.ಪೂ 2000ಕ್ಕೂ ಮೊದಲಿಗೆ ಕೊಂಡೊಯ್ಯಿತು. ಅಂದರೆ ಹರಪ್ಪಾ ನಾಗರಿಕತೆಗೂ ಮುನ್ನವೇ ಭಾರತದಲ್ಲಿ ಆರ್ಯರಿದ್ದರೆಂದಾಯಿತು. ಅಂದರೆ ಹರಪ್ಪಾದಲ್ಲಿದ್ದುದು ಆರ್ಯರೇ, ಹೊರಗಿನಿಂದ ದಂಡೆತ್ತಿ ಬಂದವರಲ್ಲಾ ಎಂದೂ ಸಾಬೀತಾಯಿತಲ್ಲವೇ?

                      1950ರಲ್ಲಿ ದೆಹಲಿಯ ಮಾರುಕಟ್ಟೆಯಲ್ಲಿ ತ್ಯಾಜ್ಯವಸ್ತುವೆಂದು ಕರಗಿಸುತ್ತಿದ್ದ ಕಂಚಿನ ಪ್ರತಿಮೆಯನ್ನು ಕಂಡು ಅಮೆರಿಕಾದ ಸಂಶೋಧಕ ಹ್ಯಾರಿ ಫಿಕ್ಸ್ ಬೆಚ್ಚಿಬಿದ್ದ. ಅದು ಋಗ್ವೇದದ ಏಳನೇ ಮಂಡಲದಲ್ಲಿ ವರ್ಣಿಸಿರುವ ವಸಿಷ್ಠನ ಪ್ರತಿಮೆ. ಪ್ರಾಚ್ಯ ಸಂಶೋಧಕ ರಾಕ್ ಆಂಡರ್ಸನ್ ಅದನ್ನು ಕ್ಯಾಲಿಫೋರ್ನಿಯಾ, ಸ್ವಿಜರ್ ಲೆಂಡಿನ ಅತ್ಯಾಧುನಿಕ ಪ್ರಯೋಗ ಶಾಲೆಗಳಲ್ಲಿ ರೇಡಿಯೋ ಕಾರ್ಬನ್ ಹಾಗೂ ಮೆಟಾಲರ್ಜಿ ಪರೀಕ್ಷೆಗೊಳಪಡಿಸಿದಾಗ ಅವು ಈ ಪ್ರತಿಮೆಯ ಕಾಲವನ್ನು ಕ್ರಿ.ಪೂ. 3700ಕ್ಕೆ ಒಯ್ದವು. ವಸಿಷ್ಠನ ಮೂರ್ತಿಯನ್ನು ಅನಾರ್ಯರು ನಿರ್ಮಿಸಲು ಹೇಗೆ ಸಾಧ್ಯ? ಹೀಗೆ ಕ್ರಿ.ಪೂ. 3700ಕ್ಕೂ ಮೊದಲಿನ ಆರ್ಯರನ್ನು ಭಾರತದಿಂದ ಹೊರಗಟ್ಟಿ, ಭಾರತದ ಮೇಲೆ ದಂಡೆತ್ತಿ ಬಂದವರಂತೆ, ಕ್ರಿ.ಪೂ 1500ರಂತೆ ಚಿತ್ರಿಸಿದ ನಮ್ಮ ಮಹಾನ್ ಇತಿಹಾಸಕಾರರನ್ನು ಏನೆಂದು ಕರೆಯಬೇಕು?

                    ಅರುಣ್ ಶೌರಿಯವರ ಎಮಿನೆಂಟ್ ಹಿಸ್ಟೋರಿಯನ್ಸ್ ಸುಳ್ಳು ಸುಳ್ಳೇ ಆರ್ಯ ಆಕ್ರಮಣವಾದದಂತಹ ಸಿದ್ಧಾಂತಗಳನ್ನು ಪ್ರತಿಪಾದಿಸಿದವರ  ಇತಿಹಾಸ ರಚನೆಯ ಕಾರ್ಯದಲ್ಲಿನ ಭೃಷ್ಟಾಚಾರ, ಇತಿಹಾಸ ತಿರುಚುವಿಕೆಯನ್ನು ಎತ್ತಿ ತೋರಿಸಿದೆ. ಇಂದಿನವರೆಗೂ ಅದನ್ನು ಸುಳ್ಳೆಂದು ಯಾವ ಆರ್ಯ ಆಕ್ರಮಣ ಸಿದ್ಧಾಂತವಾದಿಯೂ ಖಂಡಿಸಿಲ್ಲ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ(ನಂಬರ್ ಸಿಸ್ಟಮ್) ವಲಸೆಯನ್ನು ಅಧ್ಯಯನ ಮಾಡಿದರು. ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು. ಸರಸ್ವತಿ ಬತ್ತಿ ಹೋದ ಸಮಯದಲ್ಲೇ ಪ್ರಾಚೀನ ಈಜಿಪ್ಟ್, ಬ್ಯಾಬಿಲೋನಿಯಾ, ಅಸ್ಸೀರಿಯಾಗಳೂ ಭೀಕರ ಬರಗಾಲಕ್ಕೆ ತುತ್ತಾಗಿ ಮರುಭೂಮಿಯಾಗಿ ಬದಲಾದವು. 1970ರ ದಶಕದಲ್ಲಿ ಡಾ. ವಿಷ್ಣು ಶ್ರೀಧರ್ ವಾಕಣ್ಕರ್ ಎಂಬ ಪುರಾತತ್ವ ಶಾಸ್ತ್ರಜ್ಞ, ಇತಿಹಾಸ ಶಾಸ್ತ್ರಜ್ಞ, ಗುಹಾಚಿತ್ರ ಅಧ್ಯಯನಕಾರ ತಜ್ಞರ ತಂಡವೊಂದನ್ನು ಕಟ್ಟಿಕೊಂಡು ಸರಸ್ವತಿಯ ಹರಿವಿನ ಪಾತ್ರದ ಸಂಶೋಧನೆಗೆ ಇಳಿದರು. ಅವರ ಸಂಶೋಧನಾ ವರದಿ ಕ್ರಿ.ಪೂ 3000ಕ್ಕೆ ಮುನ್ನವೇ ಸರಸ್ವತಿ ಬತ್ತಲು ಶುರುವಾಗಿತ್ತು. ಮಹಾಭಾರತದ ಸಮಯದಲ್ಲಿ ಹರಿಯುತ್ತಿತ್ತು. ಈಗ ಮಳೆಗಾಲದಲ್ಲಿ ಮಾತ್ರ ಗಗ್ಗರ್ ಎನ್ನುವ ನದಿಯಾಗಿ ಹರಿಯುತ್ತಿದೆ ಎನ್ನುವ ಅಂಶವನ್ನು ಬಯಲು ಮಾಡಿತು.  ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಭಾರತದ ಹತ್ತಿ ಸಿಕ್ಕಿದೆ. ಅದೇ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ. ಭುಜ್, ಕ್ಯಾಂಬೆಗಳಲ್ಲಿ ಇತ್ತೀಚಿಗೆ ನಡೆದ ಸಂಶೋಧನೆಗಳು ವೇದಗಳ ರಚನೆಯ ಕಾಲವನ್ನು ಕ್ರಿ.ಪೂ 6000ಕ್ಕೂ ಹಿಂದಕ್ಕೆ ದೂಡುತ್ತವೆ. ಇನ್ನು ಕುದುರೆಗಳ ವಿಷಯಕ್ಕೆ ಬಂದರೆ ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36.  ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ.

                     ‘ಆರ್ಯ' ಎಂದರೆ ‘ಸುಸಂಸ್ಕೃತ', ‘ಶ್ರೇಷ್ಠ', ‘ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಮಹಾಕುಲ ಕುಲೀನಾರ್ಯ ಸಭ್ಯ ಸಜ್ಜನ ಸಾಧವಃ (ಉತ್ತಮ ವಂಶದಲ್ಲಿ ಹುಟ್ಟಿದ ಸಭ್ಯ, ಸಜ್ಜನ, ಸಾಧು) ಎಂದು ಆರ್ಯ ಪದವನ್ನು ಅರ್ಥೈಸಿದೆ ಅಮರಕೋಶ. ಆರ್ಯ ಅನ್ನುವುದು "ಶ್ರೇಷ್ಠತೆ"ಯನ್ನು ಬಿಂಬಿಸುವ ಶಬ್ಧ. ಆರ್ಯ ಶಬ್ಧ "ಅರಿಯ" ಶಬ್ಧದಿಂದ ಬಂತು. ಅದು ವೈಶ್ಯ ವೃತ್ತಿಗೆ ಸಂಕೇತ. "ಅರ್ಯ ಸ್ವಾಮಿ ವೈಶ್ಯಯೋಹೋ", ಈಗ ನಾವು ಎಂಟರ್ ಪ್ರೀನರ್ ಶಿಪ್ (Entrepreneurship) ಎಂದು ಯಾವುದನ್ನು ಕರೆಯುತ್ತೇವೆಯೋ ಅದು. ಕೃಷಿ, ಗೋರಕ್ಷ, ವಾಣಿಜ್ಯ ಇವೆಲ್ಲವನ್ನು ಮಾಡುವವನು. ಅಲೆದಾಡುತ್ತಿದ್ದವ ನೆಲೆ ನಿಂತದ್ದು ಕೃಷಿಯಿಂದಾಗಿ. ಅದು ಹಳೆಯದಾದ ಸಂಸ್ಕೃತಿ. ಹೀಗೆ ಆರ್ಯ ಸಂಸ್ಕೃತಿಯೊಂದಿಗೆ ಜೋಡಿಸಿಕೊಂಡಿತು. ಅರಿಯ ಎನ್ನುವ ಶಬ್ಧದ ಮೂಲ 'ಋ'ಕರ್ಷಣೆ ಎನ್ನುವ ಧಾತು ಅಂದರೆ ಉಳುಮೆ ಎಂದರ್ಥ. ಸರಸ್ವತಿ-ದೃಷದ್ವತಿ ನದಿಗಳ ಮಧ್ಯೆ ಇರುವುದು ಬ್ರಹ್ಮಾವರ್ತ. ಬ್ರಹ್ಮ ಅಂದರೆ ವೇದ ಎಂದರ್ಥ. ಅಂದರೆ ಇದು ವೇದ ಭೂಮಿ. ಕುರುಕ್ಷೇತ್ರವೇ ಈ ಬ್ರಹ್ಮಾವರ್ತ. ಹಿಮಾಲಯ-ವಿಂಧ್ಯಗಳ ನಡುವಿನ ಸಿಂಧೂ-ಗಂಗಾ ನದಿಗಳ ಬಯಲು ಪ್ರದೇಶ ಆರ್ಯಾವರ್ತ. ಅಂದರೆ ಕೃಷಿಯೋಗ್ಯ ಭೂಮಿ ಎಂದರ್ಥ. ವೈಶ್ಯರಿಗೆ ಆರ್ಯವೈಶ್ಯ ಎನ್ನುವ ಪದ್ದತಿ ಈಗಲೂ ಇದೆ. ಕೇರಳದಲ್ಲಿ ಒಣಗಿಸಿಟ್ಟು ಸಂಸ್ಕರಿಸಿ ಹದಗೊಳಿಸಿದ ಅಕ್ಕಿಯನ್ನು ಅರಿಯನೆಲ್ಲ್ ಅನ್ನುತ್ತಾರೆ. ತುಳುವಿನಲ್ಲಿ ಅಕ್ಕಿಗೆ ಅರಿ ಎಂದೇ ಹೆಸರು. ಕೃಷಿಗೆ ಹೂಡುವಂತೆ ಪಳಗಿಸಲ್ಪಟ್ಟ ಕೋಣಗಳನ್ನು ಆರ್ಯಕೋಣಗಳು ಎನ್ನುತ್ತಾರೆ. ಅಂದರೆ ಆರ್ಯ ಎಂದರೆ ಪಶು ಸ್ವಭಾವದಿಂದ ಹೊರಬಂದು ಸೌಮ್ಯವಾಗಿ, ಸುಸಂಸ್ಕೃತನಾಗಿ ವರ್ತಿಸುವವನು ಎಂದರ್ಥ. ಮುಂದೆ ಇದು ಸಭ್ಯತೆ, ಸುಸಂಸ್ಕೃತತೆಗೆ ಗುಣವಾಚಕವೇ ಆಯಿತು. ದ್ರವಿಲ ಲಡಯೋರಭೇದಃ ಅಂದರೆ ಮರಗಳಿಂದ ಸಮೃದ್ಧವಾದ ಎನ್ನುವುದು ದ್ರಾವಿಡದ ಅರ್ಥ. ಅಂದರೆ ಅದೂ ಕೂಡ ಜನಾಂಗವಾಚಕವಲ್ಲ. ವಿಂಧ್ಯದ ಈಚಿನ ಭಾಗ ದಕ್ಷಿಣಾವರ್ತ. ಹಾಗೆಯೇ ವೇದಗಳಲ್ಲಿ ಬರುವ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ ಎಲ್ಲರೂ ಕಪ್ಪಗಿದ್ದವರು; ಅದರಲ್ಲೂ ಕಣ್ವ ತೊಳೆದ ಕೆಂಡದ ಹಾಗಿದ್ದ ಎನ್ನುವ ಉಲ್ಲೇಖವೂ ಬರುತ್ತದೆ. ಹಾಗಾಗಿ ಇದು ಬಣ್ಣಕ್ಕೆ ಸಂಬಂಧಿಸಿದ್ದೂ ಅಲ್ಲ. ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗದ ವಲಸೆ(Migration) ಆಗಿಲ್ಲ ಎಂದು ಮಾಲಿಕ್ಯುಲರ್ ಜೆನೆಟಿಕ್ಸ್ ಮೂಲಕ ತಿಳಿದು ಬರುತ್ತದೆ. ಹಾಗಾಗಿ ಜನಾಂಗದ ವಲಸೆಯೂ ಬಿದ್ದು ಹೋಯಿತು. ಇನ್ನು ಆಕ್ರಮಣವೆಲ್ಲಿ ಬಂತು?

                      ಆರ್ಯ ಜನಾಂಗವೆಂಬುದು ಭೌತಿಕವಾಗಿ ಪ್ರಪಂಚದಲ್ಲಾಗಲೀ, ವೇದ ಸಂಸ್ಕೃತಿಯಲ್ಲಾಗಲೀ, ಜನರ ರೂಢಿಯಲ್ಲಾಗಲೀ ಎಲ್ಲೂ ಇಲ್ಲವೆಂದು ತಿಳಿದಿದ್ದರೂ ಮ್ಯಾಕ್ಸ್ ಮುಲ್ಲರ್ ಅಂತಹುದೊಂದನ್ನು ಕಲ್ಪಿಸಿದ. ಕ್ರೈಸ್ತ ಮತಗ್ರಂಥಗಳಲ್ಲಿರುವುದೇ ಸತ್ಯವೆಂದು ನಂಬುವ ಪರಮ ಆಸ್ತಿಕ ಮ್ಯಾಕ್ಸ್ ಮುಲ್ಲರ್. ಬೈಬಲ್ ಪ್ರಕಾರ ಕ್ರಿ.ಪೂ 4004, ಅಕ್ಟೋಬರ್ 23 ಬೆಳಿಗ್ಗೆ 9ಗಂಟೆಗೆ ಆಯಿತು. ಅಲ್ಲಿಂದ ಲೆಕ್ಕ ಹಾಕಿದ ಮುಲ್ಲರ್ ಜಲಪ್ರಳಯವನ್ನು ಕ್ರಿ.ಪೂ 2448ಕ್ಕೆ ತಂದಿರಿಸಿದ. ಮುಂದೆ ಭೂಮಿ ಒಣಗಿ ಗಟ್ಟಿಯಾಗಿ ಆರ್ಯರು ದಂಡಯಾತ್ರೆ ಕೈಗೊಳ್ಳಲು ಕನಿಷ್ಟ ಒಂದು ಸಾವಿರ ವರ್ಷ ಕೊಟ್ಟು 1400-1500ರ ಸುಮಾರಿಗೆ ಆರ್ಯ ಆಕ್ರಮಣವನ್ನೂ, ತಾಳೆಗರಿ, ಉಕ್ಕಿನ ಲೇಖನಿಗಳ ಸಂಶೋಧನೆಗೆ ಇನ್ನೂರು ವರ್ಷಗಳನ್ನು ಕೊಟ್ಟು ಋಗ್ವೇದದ ರಚನೆಯ ಕಾಲವೆಂದು ನಿರ್ಧರಿಸಿದ. ಇದು ಮ್ಯಾಕ್ಸ್ ಮುಲ್ಲರನ ಆಲೋಚನಾ ವಿಧಾನವನ್ನು ಚೆನ್ನಾಗಿ ಅರಿತಿದ್ದ ಆತನ ಆಪ್ತ ಮಿತ್ರ ಗೋಲ್ಡ್ ಸ್ಟಕರ್ ಹೇಳಿರುವ ಸತ್ಯ ಸಂಗತಿ! ಮೊದಲ ಇಪ್ಪತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಜನಾಂಗವೆಂದು ಸಾಧಿಸಿದ ಮುಲ್ಲರ್ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಭಾಷಾ ಕುಟುಂಬವೇ ಹೊರತು ಪ್ರತ್ಯೇಕ ಜನಾಂಗವಲ್ಲವೆಂದು ಮಾತು ತಿರುಗಿಸಿದ. ಆದರೆ ಅಷ್ಟರಲ್ಲಾಗಲೇ ಅನರ್ಥವಾಗಿ ಹೋಗಿತ್ತು. ಭಾರತೀಯರ ಮೆದುಳೂ ಆರ್ಯ ಆಕ್ರಮಣವಾದಕ್ಕೆ ಪಕ್ಕಾಗಿತ್ತು. ಕೊನೆಗೊಮ್ಮೆಯಂತೂ "ವೇದ ಮಂತ್ರಗಳ ರಚನೆಯಾದದ್ದು ಯಾವಾಗ ಎಂದು ಭೂಮಿಯ ಮೇಲಿನ ಯಾವ ಶಕ್ತಿಯಿಂದಲೂ ನಿರ್ಧರಿಸಲೂ ಸಾಧ್ಯವಿಲ್ಲ ಎಂದು ಬಿಟ್ಟ.

            ಜನಾಂಗಗಳ ವಲಸೆ ಪ್ರಾಚೀನ ಕಾಲದಲ್ಲಿ ಆದದ್ದು ಸತ್ಯವೇ ಹೌದು. ಆದರೆ ಈ ವಲಸೆ ಭಾರತದಿಂದ ಹೊರಕ್ಕೆ ಆಯಿತೇ ಹೊರತು ಹೊರಗಿನಿಂದ ಭಾರತಕ್ಕಲ್ಲ. ಪ್ರಾಕೃತಿಕ ವೈಪರೀತ್ಯದಿಂದ ನದಿಗಳು ಬತ್ತಿ ಹೋದ ಪರಿಣಾಮ ಕ್ರಿ.ಪೂ. 4000ಕ್ಕೂ ಮೊದಲೇ ಭಾರತದಿಂದ ಪಶ್ಚಿಮಕ್ಕೆ ವಲಸೆ ಪ್ರಾರಂಭವಾಯಿತು. ತನ್ನ ಪಥವನ್ನು ಕಾಲಾನುಕ್ರಮದಲ್ಲಿ ಬದಲಾಯಿಸುತ್ತಾ ಹರಿಯುತ್ತಿದ್ದ ಸರಸ್ವತಿಯ ಕಾರಣ ಉಂಟಾದ ಹಲವು ಪ್ರಾಕೃತಿಕ ವೈಪರೀತ್ಯಗಳಿಂದಾಗಿ ಕ್ರಿ.ಪೂ 2200ರ ಸುಮಾರಿಗೆ ಹಲವು ಕಾಲ ಪ್ರವಾಹ, ಭೂಕಂಪ, ಬರಗಾಲಗಳಿಂದ ತತ್ತರಿಸಿದ ಅಲ್ಲಿದ್ದ ವೈದಿಕ ಸಂಸ್ಕೃತಿಯ ಜನರು ಪಶ್ಚಿಮ ಹಾಗೂ ವಾಯುವ್ಯ ದಿಶೆಗಳತ್ತ ಹೆಜ್ಜೆ ಹಾಕಿದರು.   ಕ್ರಿ.ಪೂ. 1900ರ ಸುಮಾರಿಗೆ ಸರಸ್ವತಿ ನದಿ ಸಂಪೂರ್ಣವಾಗಿ ಬತ್ತಿ ಹೋದ ಕಾರಣ ಇರಾನ್, ಇರಾಕ್ ಸೇರಿದಂತೆ ಪಶ್ಚಿಮ ಏಷ್ಯಾದ ಮತ್ತಿತರ ಪ್ರದೇಶ, ಯೂರೋಪುಗಳಿಗೆ ಭಾರತೀಯರು ವಲಸೆ ಹೋಗಲಾರಂಭಿಸಿದರು. ಪ್ರಾಚೀನ ಇರಾನಿ ಕಥೆಗಳು, ಸಾಹಿತ್ಯಗಳು, ಪಶ್ಚಿಮ ಏಷ್ಯಾದಲ್ಲಿ ಸಿಕ್ಕ ಪುರಾತನ  ದಾಖಲೆಗಳು ಇದನ್ನು ದೃಢಪಡಿಸಿವೆ. ಪರ್ಶಿಯನ್ನರು ಅಗ್ನಿಪೂಜಕರು. ಝೆಂಡಾಅವೆಸ್ತಾ ವೇದದಂತಹ ಅವರ ಪೂಜನೀಯ ಗ್ರಂಥ. ಈ ಪರಿಸ್ಥಿತಿಯ ವೈಪರೀತ್ಯ ಮಾತ್ರವಲ್ಲದೇ ಕೃಣ್ವಂತೋ ವಿಶ್ವಮಾರ್ಯಮ್ ಎನ್ನುತ್ತಾ ವಿಶ್ವ ಸದ್ದರ್ಶನಕ್ಕಾಗಿ ಜ್ಞಾನದ ಗಣಿಗಳಾದ ವೇದಗಳನ್ನು ವಿಶ್ವದ ಮೂಲೆಮೂಲೆಗೂ ಹೊತ್ತೊಯ್ದರು ಆರ್ಯರು. ಅವರ ಜ್ಞಾನದಾಹದ ಆತ್ಮಾನುಸಂಧಾನದ ಮಾರುತವು ಭಾವಾವೇಶದ ಆವರ್ತಗಾಳಿಯಾಗಿ ಸುಳಿಗೊಂಡು ಆರ್ಯಾವರ್ತ ಪ್ರದೇಶದಲ್ಲಿ ಪ್ರಶಾಂತವಾಗಿ, ಗಂಭೀರ ಸಾಗರದಂತೆ ವೇದಗಳ ರೂಪದಲ್ಲಿ ಹರಡಿತು. ದಕ್ಷಿಣ ಏಷಿಯಾದಿಂದ ಸಿಂಧೂ-ಗಂಗಾಗಳ ಮೈದೊಳೆವ ನಾಡಲ್ಲಿ, ದಕ್ಷಿಣ - ಪೂರ್ವ ಯುರೋಪಿನಿಂದ, ದೆನ್ಯೂಬ್ ತಪ್ಪಲವರೆಗೆ, ಪಶ್ಚಿಮ ಏಶಿಯಾದಿಂದ ಟೈಗ್ರಿಸ್ ಹಾಗೂ ಯುಫ್ರೆಟಿಸ್ಗಳ ಅಂಚುಗಳಾದ್ಯಂತ, ಮಧ್ಯ ಏಷಿಯಾದಿಂದ ಆಕ್ಸಸ್ನ ದಂಡೆಗಳ ವಿಶಾಲ ಪ್ರದೇಶದಲ್ಲಿ ಮೂರೂವರೆ ಸಾವಿರ ಮೈಲು ಪೂರ್ವ - ಪಶ್ಚಿಮವಾಗಿ, ಒಂದು ಸಾವಿರ ಮೈಲು ದಕ್ಷಿಣೋತ್ತರವಾಗಿ ಈ ನಾಗರಿಕತೆ ಹರಡಿತು. ಆರ್ಯಾವರ್ತವೆಂಬ ಅಭಿದಾನದ ಸಿಂಧೂ-ಸರಸ್ವತಿ-ಗಂಗಾ ತೀರವನ್ನು ಮೂಲವಾಗಿಯೂ, ಕೇಂದ್ರವಾಗಿಯೂ ಹೊಂದಿದ್ದ ಈ ನಾಗರಿಕತೆ ಪಶ್ಚಿಮ ಸೀಮಾಂತದ ದೆನ್ಯೂಬ್ ನದಿಯವರೆಗೂ ಒಂದೇ ಬಗೆಯ ಆಚಾರ-ವಿಚಾರ, ರೀತಿ-ನೀತಿ, ಧರ್ಮ-ನ್ಯಾಯ, ಪೂಜೆ-ಪುನಸ್ಕಾರ, ಭಾಷೆ, ಸಾಮಾಜಿಕ ಪದ್ದತಿಗಳನ್ನು ಹೊಂದಿತ್ತು.

                    ಪಾಕಿಸ್ತಾನದ ಮೆಹರ್ ಗಢ್ ನಲ್ಲಿ ನಡೆದ ಉತ್ಖನನ ಅನೇಕ ಸತ್ಯ ಸಂಗತಿಗಳನ್ನು ಬಯಲು ಮಾಡಿ ವಿಶ್ವವನ್ನೇ ಅಚ್ಚರಿಯಲ್ಲಿ ಮುಳುಗಿಸಿತು. ಹರಪ್ಪ ನಾಗರಿಕತೆಗೂ ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ಈ ಉತ್ಖನನ ದೃಢೀಕರಿಸಿತು. ಪ್ರಾಚೀನ ಈಜಿಪ್ಟ್-ಮೆಸಪಟೋಮಿಯಾ ನಾಗರೀಕತೆಗಳೆರಡನ್ನು ಸೇರಿಸಿದರೂ ಪ್ರಮಾಣ ಹಾಗೂ ಶ್ರೇಷ್ಠತೆಯಲ್ಲಿ ಹದಿನೈದು ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಬೆಳೆದಿದ್ದ ಕ್ರಿ.ಪೂ 6500 ಕಾಲದ ಈ ನಾಗರಿಕತೆಗೆ ಸರಿಸಾಟಿಯಾಗಲಾರದೆಂದೂ ರುಜುವಾತಾಯಿತು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ