ಪುಟಗಳು

ಮಂಗಳವಾರ, ಏಪ್ರಿಲ್ 25, 2017

ಯೋಗಿ ತಂದ ಯೋಗ ಬದಲಾಗುತ್ತಿದೆ ಉತ್ತರಾಪಥ

ಯೋಗಿ ತಂದ ಯೋಗ 
ಬದಲಾಗುತ್ತಿದೆ ಉತ್ತರಾಪಥ


                   ಯೋಗಿಯೊಬ್ಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಪಟ್ಟದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಆ ರಾಜ್ಯದ ದೆಸೆಯೇ ಬದಲಾಗಿದೆ. ಗೊಬ್ಬರದ ಗುಂಡಿಯಂತೆ ನಾರುತ್ತಿದ್ದ ಉತ್ತರ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಬದಲಾವಣೆಯ ಕಸ್ತೂರಿ ಪರಿಮಳಿಸುತ್ತಿದೆ. ಸೋಂಬೇರಿ ಅಧಿಕಾರಿಗಳು ಧಿಗ್ಗನೆದ್ದು ಪಟ್ಟಾಗಿ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಲೊಚಕ್ ಎಂದು ಉಗುಳುತ್ತಿದ್ದ ಬಾಯಿಗಳಿಗೆಲ್ಲಾ ನಿರ್ಮಲ ಮನಸ್ಸಿನ ಖಡಕ್ ಯೋಗಿಯ ಬಿಸಿ ತಟ್ಟಿದೆ. ಗೋವಿನ ಕೊರಳ ಕೊಯ್ಯುತ್ತಿದ್ದ ಅಕ್ರಮ ದಂಧೆ ಸ್ತಬ್ಧವಾಗಿದೆ. ತರುಣಿಯರ ಸೆರಗೆಳೆಯುತ್ತಿದ್ದ ಪುಂಡರಿಗೆ ಅಂಕುಶ ಬಿದ್ದಿದೆ. ಅಂಗಡಿಗಳ ಮಾಲಕರಿಂದ ಹಣ ಪೀಕುತ್ತಿದ್ದ ಪುಡಿ ರೌಡಿಗಳೆಲ್ಲಾ ಮಾಯವಾಗಿದ್ದಾರೆ. ಪೊಲೀಸರಿಗೂ ಖಾಕಿಯ ಧರ್ಮ, ನಿಯತ್ತು ನೆನಪಾಗಿದೆ. ಗಂಗೆಯ ಮೊಗದಲ್ಲಿ ನಗುವರಳಿದೆ.

                      ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ರಾಜ್ಯದಲ್ಲಿ ಭೃಷ್ಟಾಚಾರ, ಆಡಳಿತ ವೈಫಲ್ಯದಿಂದ ಆ ಪಕ್ಷ ಮಕಾಡೆ ಮಲಗಿದಾಗ ಜಾತಿಯಾಧಾರಿತ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಂಡು ಅಧಿಕಾರ ಸುಖ ಅನುಭವಿಸಿದವು. ಆದರೆ ದಶಕಗಳಿಂದ ಆಳುತ್ತಿದ್ದ ಈ ಪಕ್ಷಗಳ ಕುತಂತ್ರ, ಅರಾಜಕತೆ, ಭೃಷ್ಟಾಚಾರ, ತುಷ್ಟೀಕರಣ, ಗೂಂಡಾಗಿರಿಯನ್ನು ನೋಡಿ ಹೇಸಿಕೊಂಡ ಜನತೆಯ ದೃಷ್ಟಿ ಅಭಿವೃದ್ಧಿಯ ಆಡಳಿತ ಕೊಡಬಲ್ಲ ಏಕೈಕ ಪಕ್ಷದತ್ತ ನೆಟ್ಟಿತು. ಈ ಚುನಾವಣೆಯೇ ಜಾತಿ ರಾಜಕಾರಣಕ್ಕೆ ಇತಿಶ್ರೀ ಹಾಡಿದೆ ಎಂದರೆ ತಪ್ಪಾಗಲಾರದು. ಜಾತಿಯ ಆಧಾರದಲ್ಲಿ ಮತದ ಓಲೈಕೆಯಲ್ಲಿ ತುಷ್ಟೀಕರಣದ ಆಟ ಆಡಿ ಓಟು ಗಿಟ್ಟಿಸಿ ಗಂಟು ಕಟ್ಟಿಕೊಳ್ಳುತ್ತಿದ್ದವರಿಗೆಲ್ಲಾ ತಕ್ಕ ಪಾಠ ಕಲಿಸಿದ ಉತ್ತರ ಪ್ರದೇಶದ ಮತದಾರ "ಅಚ್ಛೇ ದಿನದತ್ತ" ಎದುರು ನೋಡುತ್ತಿದ್ದಾನೆ ಎಂದರೆ ಸುಳ್ಳಲ್ಲ. ಅದಕ್ಕೆ ತಕ್ಕಂತೆ ಯೋಗಿ ಆದಿತ್ಯನಾಥರ ಸರಕಾರ ಶರವೇಗದಿಂದ ಅಭಿವೃದ್ಧಿಯ ಆಡಳಿತ ನೀಡುವತ್ತ ಗಮನಹರಿಸಿದೆ. ಅಕ್ರಮ ಕಸಾಯಿಖಾನೆಗಳಿಗೆ ಬೀಗ ಬಿದ್ದಿದೆ. ಗೂಂಡಾಗಳ ಆಟ ಅಂತ್ಯವಾಗಿದೆ. ಪ್ರತಿಮೆ ನಿರ್ಮಾಣದಂತಹ ಮೂರ್ಖ ನಿರ್ಧಾರಗಳಿಗೆ ಅಂತ್ಯ ಹಾಡಲಾಗಿದೆ. ಇಷ್ಟರವರೆಗೆ ಗೋರಖ್ ಪುರದ ಅಂಗಡಿ ಮಾಲಿಕರು ಮಾತ್ರ ಗೂಂಡಾಗಳಿಗೆ ಸುಂಕ ಕೊಡದೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈಗ ಸಂಪೂರ್ಣ ಉತ್ತರಪ್ರದೇಶಕ್ಕೆ ಆ ಭಾಗ್ಯ ಸಿಗಲಾರಂಭಿಸಿದೆ! ಈಗಾಗಲೇ ಶೇ.100 ರಷ್ಟು ಗೋದಿಯನ್ನು ಖರೀದಿ ಮಾಡಲಾಗಿದೆ. ರೈತರಿಗೆ ನೀಡುವ ಬೆಂಬಲ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾವಣೆ ಮಾಡಲಾಗುತ್ತದೆ.

                  ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಲು ಪೊಲೀಸರು ಮುಂದಾದಾಗ ಮಾಂಸದ ವ್ಯಾಪಾರಿಗಳು ಪ್ರತಿಭಟನೆಗೆ ತೊಡಗಿದರು. ಮುಖ್ಯಮಂತ್ರಿ ಆದಿತ್ಯನಾಥರನ್ನು ಭೇಟಿಯಾದ ಬಳಿಕ ಎಲ್ಲರೂ ತೆಪ್ಪಗಾಗಿದ್ದಾರೆ. ಸ್ವತಃ ಆಲ್ ಇಂಡಿಯಾ ಮೀಟ್ ಅಸೋಸಿಯೇಷನ್ನಿನ ಪ್ರತಿನಿಧಿ ಹಾಜಿ ಶಕೀಲ್ ಖುರೇಶಿ "ಬಿಎಸ್ಪಿ, ಎಸ್ಪಿ ಸರಕಾರಗಳು ಮಾಂಸೋದ್ಯಮಿಗಳಿಗೆ ಮೋಸ ಮಾಡಿವೆ. ನೂತನ ಮುಖ್ಯಮಂತ್ರಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಉದ್ಯಮಗಳನ್ನಷ್ಟೇ ಮುಚ್ಚಿಸುವ ಮೂಲಕ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ. ಉತ್ತರಪ್ರದೇಶದ ವ್ಯವಸ್ಥೆಯನ್ನು ಸರಿಯಾದ ಹಾದಿಗೆ ಮರಳಿಸಲು ಯತ್ನಿಸುತ್ತಿರುವ ಅವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು" ಎಂದಿರುವುದು ತುಷ್ಟೀಕರಣ ಮಾಡುವ ಬದಲು ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ನಿಜವಾದ ಜಾತ್ಯಾತೀತತೆ ತಾನಾಗಿ ಪ್ರಕಟವಾಗುತ್ತದೆ ಎನ್ನುವುದರ ಸೂಚನೆ.

                       ತಮ್ಮ ನಿವೃತ್ತಿಯನ್ನು ಮುಂದಕ್ಕೆ ಹಾಕಿಕೊಂಡು ಸರಕಾರದ ವಿವಿಧ ಹುದ್ದೆಗಳಲ್ಲಿ ಮಜಾಮಾಡುತ್ತಿದ್ದವರಿಗೆ ಬಾಗಿಲು ತೋರಿಸಲಾಗಿದೆ. ಸರಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅನುಸ್ಥಾಪಿಸಿ 9.30AMನಿಂದ 5PMವರೆಗಿನ ಕೆಲಸದ ಅವಧಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶ ಹೊರಡಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾತಿ ಮಾಡಲು ಮೀನಮೇಷ ಎಣಿಸುವುದನ್ನು ತಪ್ಪಿಸಲು ಪ್ರತೀ ಠಾಣೆಗಳಲ್ಲಿ ತಲಾ ಓರ್ವ ಮಹಿಳಾ ಹಾಗೂ ಪುರುಷ ಅಧಿಕಾರಿಗಳು ರಿಸೆಪ್ಷನಿನಲ್ಲಿರುವಂತೆ ಕಡ್ಡಾಯಗೊಳಿಸಲಾಗಿದೆ. ರಾಜಕಾರಣಿಗಳಿಗಿರುವ ಅನವಶ್ಯಕ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ.

                        ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಜೂನ್ ಹದಿನೈದರ ಒಳಗೆ ರಾಜ್ಯದ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಯೋಜನೆ ರೂಪಿಸಲಾಗಿದೆ. ಭೃಷ್ಟಾಚಾರವನ್ನು ಹತ್ತಿಕ್ಕಲು ಇ-ಟೆಂಡರಿಂಗ್ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮಂತ್ರಿಗಳ ಕಾರಿನಲ್ಲಿ ಸೈರನ್ ಬಳಸದಂತೆ ಆದೇಶವೂ ಬಂದಿದೆ. ಆಹಾರ ಧಾನ್ಯ ಹಾಗೂ ರೇಶನ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮುಚ್ಚಲ್ಪಟ್ಟಿರುವ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಸರಕಾರ ಮುಂದಾಗಿದೆ. ಹಿಂದೂ ಹಬ್ಬಗಳಂದು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಲಲು ಸರಕಾರ ಆದೇಶಿಸುವ ಮೂಲಕ ಹಬ್ಬಗಳ ದಿನದಂದು ಬೆಳಕಿಲ್ಲದೆ ಪರಿತಪಿಸುತ್ತಿದ್ದ ತುಷ್ಟೀಕರಣದ ಸಂತ್ರಸ್ಥ ಪ್ರಜೆಗಳ ಮುಖದಲ್ಲಿ ಬೆಳಕು ಮೂಡಿಸಿದೆ.

                      ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಠಿಣ ನಿರ್ಧಾರಗಳಿಂದ ಇಡೀ ದೇಶಾದ್ಯಂತ ಸುದ್ದಿಯಾಗಿರುವ ಯೋಗಿ ಆದಿತ್ಯನಾಥ, 20 ವರ್ಷಗಳಲ್ಲಿ ಈ ಹಿಂದಿನ ಸರ್ಕಾರಗಳಿಗೆ ಪರಿಹರಿಸಲು ಸಾಧ್ಯವಾಗದೇ ಇದ್ದ ವಿವಾದಗಳನ್ನು ಕೇವಲ ಒಂದೇ ವಾರದಲ್ಲಿ ಬಗೆಹರಿಸಿ ಸೈ ಅನಿಸಿಕೊಂಡಿದ್ದಾರೆ. ಲಕ್ನೋದಲ್ಲಿ ಹಿಂದೂವೊಬ್ಬನಿಗೆ ಸೇರಿದ ಏಳು ಅಂಗಡಿಗಳನ್ನು ಮುಸ್ಲಿಮರು ಆಕ್ರಮಿಸಿಕೊಂಡು ಬಾಡಿಗೆಯನ್ನೂ ನೀಡದೇ ಸ್ವಂತ ಸ್ವತ್ತಿನಂತೆ ಬಳಸಿ ಪ್ರಶ್ನಿಸಿದಾಗ ದೌರ್ಜನ್ಯವೆಸಗಿದ್ದರು. ನ್ಯಾಯಾಲಯ ಬಡಪಾಯಿ ಹಿಂದು ವ್ಯಕ್ತಿಯ ಪರವಾಗಿ ತೀರ್ಪು ನೀಡಿದ್ದರೂ, ಮುಸಲರು ಆ ಆದೇಶ ಉಲ್ಲಂಘಿಸಿ ಅಲ್ಲೇ ಭದ್ರವಾಗಿ ಥಿಕಾಣಿ ಹೂಡಿದ್ದರು. ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರವಾಗಲಿ ಮುಲಾಯಂಸಿಂಗ್ ಮತ್ತು ಅಖಿಲೇಶ್ ಯಾದವ್‍ರ ಸಮಾಜವಾದಿ ಸರಕಾರವಾಗಲಿ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದವು. ಆದರೆ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗುತ್ತಿದ್ದಂತೆ ಆಕ್ರಮಣಕ್ಕೊಳಗಾದ ಜಾಗ ಮರಳಿ ನಿಜವಾದ ಮಾಲಕನಿಗೆ ದೊರಕಿದೆ. ಇಂಥ ಹಲವಾರು ಪ್ರಕರಣಗಳು ಒಂದೇ ವಾರದಲ್ಲಿ ಬಗೆಹರಿದಿದೆ.

                  ಎಲ್ಲಾ ಪೊಲೀಸ್ ಠಾಣೆ ಹಾಗೂ ಸರಕಾರೀ ಕಛೇರಿಗಳನ್ನು ರಾಜಕೀಯ ಮುಕ್ತ, ಭೃಷ್ಟಾಚಾರ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ಹಾಗೂ ಆಯಕಟ್ಟಿನ ಸ್ಥಾನಗಳಲ್ಲಿ ಸೂಕ್ಷ್ಮ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ನೇಮಕಕ್ಕೆ ಚಾಲನೆ ಸಿಕ್ಕಿದೆ. ಪ್ರತೀ ವಿಭಾಗವೂ ಪ್ರಜೆಗಳ ಚಾರ್ಟರ್ ಹೊಂದಿರುವಂತೆಯೂ, ಕಾಲಮಿತಿಯೊಳಗೆ ಜನರಿಗೆ ಸರ್ಕಾರೀ ಸೇವೆಗಳನ್ನು ಒದಗಿಸುವಂತೆ ತಾಕೀತು ಮಾಡಲಾಗಿದೆ. ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡುವವರು ನನಗೆ ಬೇಕು ಅಂದಿದ್ದಂತೂ ಜಡ್ಡುಗಟ್ಟಿದ ವ್ಯವಸ್ಥೆಯ ಬುಡಕ್ಕೆ ಬಿಸಿನೀರು ಬಿಟ್ಟಂತಾಗಿ ಅದು ಎದ್ದು ಕೂತಿದೆ. ಉತ್ತರ ಪ್ರದೇಶ ರಾಜ್ಯ ಸೇವಾ ಆಯೋಗದಲ್ಲಿನ ಅವ್ಯವಹಾರಗಳ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಆಯೋಗ ಮಾಡಿರುವ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿದೆ. ತನ್ನ ಮುಂದಿನ ಆದೇಶ ಬರುವವರೆಗೂ ಎಲ್ಲ ರೀತಿಯ ನೇಮಕಾತಿಗೂ ತಡೆ ನೀಡಲು ನಿರ್ದೇಶನ ನೀಡಿದೆ. ಪಾರದರ್ಶಕವಾಗಿ ಅರ್ಹತೆ ಆಧಾರದ ಮೇಲೆ ಆಡಳಿತಾತ್ಮಕವಾಗಿ ನೇಮಕಾತಿ ಮಾಡುವ ಮೊದಲ ಹೆಜ್ಜೆ ಇದಾಗಿದ್ದು ಉತ್ತರ ಪ್ರದೇಶ ವಿಕಾಸದ ಪಥದಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

                   ಅಸಂಖ್ಯ ತೀರ್ಥಧಾಮಗಳನ್ನು, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೂ ಸ್ವಚ್ಛತೆಗೂ ಎಣ್ಣೆ-ಸೀಗೆಯ ಸಂಬಂಧ. ಪ್ರಧಾನ ಮಂತ್ರಿಗಳ ಸ್ವಚ್ಛತಾ ಅಭಿಯಾನದಲ್ಲಿ ಅತ್ಯಂತ ಕಳಪೆ ರ್ಯಾಂಕ್ ಹೊಂದಿರುವ ರಾಜ್ಯಗಳಲ್ಲಿ ಉತ್ತರಪ್ರದೇಶವೂ ಒಂದು. ನಗರ ಹಾಗೂ ಗ್ರಾಮೀಣ ಭಾಗಗಳೆರಡರಲ್ಲೂ ಸ್ವಚ್ಛತಾ ಕಾರ್ಮಿಕರನ್ನು ಹೊಂದಿದ್ದೂ ತಿಪ್ಪೆಗುಂಡಿಯಂತಾಗಿರುವ ಉತ್ತರಪ್ರದೇಶ ಹಿಂದೆ ಅದನ್ನಾಳಿದ ಪಕ್ಷಗಳ, ನೇತಾರರ ಬಳುವಳಿಯೂ ಹೌದು. ಇದಕ್ಕೆಲ್ಲಾ ಮಂಗಳ ಹಾಡಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಸ್ವಚ್ಛ ಭಾರತ ಅಭಿಯಾನವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಮುಂದಿನ ಡಿಸೆಂಬರ್ ಒಳಗೆ ರಾಜ್ಯದ ಮೂವತ್ತು ಜಿಲ್ಲೆಗಳನ್ನು ಬಯಲು ಮಲವಿಸರ್ಜನೆ ಮುಕ್ತವನ್ನಾಗಿ ಮಾಡಲು ನೀತಿ-ನಿಯಮ ರೂಪಿಸಲಾಗಿದೆ. ಮೊರಾದಾಬಾದಿನ ಪೊಲೀಸರು ಸ್ವತಃ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಅಣಿಯಾಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಶೂನ್ಯವಾಗಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ, ತಕ್ಷಣಕ್ಕೆ ಜಾರಿಗೆ ಬರುವಂತೆ ಕಚೇರಿಗಳಲ್ಲಿ ಅಡಕೆ- ಪಾನ್ ಮಸಾಲಾ ಜಗಿಯುವುದನ್ನು ನಿಷೇಧಿಸಿದ್ದಾರೆ.

                   ಸಾರ್ವಜನಿಕ ಸ್ಥಳದಲ್ಲಿ ಬೀದಿ ಕಾಮಣ್ಣರ ನಿಗ್ರಹಕ್ಕೆ ಆಂಟಿ ರೋಮಿಯೋ ದಳ ರಚನೆ, ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ, ಗೋವು ಕಳ್ಳಸಾಗಣೆ ನಿಷೇಧ, ಸರ್ಕಾರಿ ಕಛೇರಿಗಳಲ್ಲಿ ಪಾನ್ ಮಸಾಲ ಮತ್ತು ಪಾಲಿಥಿನ್ ನಿಷೇಧ, ಅಲಹಾಬಾದ್, ಮೀರತ್, ಆಗ್ರಾ, ಗೋರಖ್‍ಪುರ್‍ನಲ್ಲಿ ಮೆಟ್ರೋ ರೈಲು ಯೋಜನೆ, ಕೈಲಾಸ್ ಮಾನಸ ಸರೋವರ್ ಅಭಿವೃದ್ದಿ ಯೋಜನೆ, ಭದ್ರತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಜೂನ್ ವೇಳೆ ರಾಜ್ಯದ ಎಲ್ಲ ರಸ್ತೆಗಳನ್ನು ಹೊಂಡ ಮುಕ್ತಗೊಳಿಸುವ ಯೋಜನೆ ಹೀಗೆ ಹತ್ತು ಹಲವು ಕಾರ್ಯಗಳು ಉತ್ತರಪ್ರದೇಶದ ಜನತೆಯ ಕಲ್ಯಾಣದ ದಿನದತ್ತ ಸಾಗುತ್ತಿರುವುದನ್ನು ಖಚಿತಪಡಿಸಿದೆ. ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಯೋಗಿ ಕಟ್ಟಪ್ಪಣೆ ಮಾಡಿದ್ದಾರೆ. ಹೋಳಿ ಹಬ್ಬದ ಸಮಯದಲ್ಲಿ ತನ್ನ ಹೆಂಡತಿ ಚುಡಾಯಿಸುವಿಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗಿದ್ದಾಳೆಂದು ವ್ಯಕ್ತಿಯೊಬ್ಬ ದಾಖಲಿಸಿದ್ದ ದೂರನ್ನು ಪೊಲೀಸರು ನಿರ್ಲಕ್ಷಿಸಿದ್ದರು. ಈ ವ್ಯಕ್ತಿ ಮುಖ್ಯಮಂತ್ರಿ ಆದಿತ್ಯನಾಥರಿಗೆ ಈ ಬಗ್ಗೆ ಟ್ವೀಟ್ ಮಾಡುತ್ತಲೇ ಪೊಲೀಸರಿಗೆ ಬಿಸಿಮುಟ್ಟಿ, ವಿಶೇಷ ಗುಂಪೊಂದನ್ನು ರಚಿಸಿ ಕಾಮುಕರನ್ನು ಹಿಡಿಯಲು ಕಾರ್ಯಪ್ರವೃತ್ತರಾದದ್ದು ಉತ್ತರ ಪ್ರದೇಶದಲ್ಲಿ ಜೀವಂತ ಸರಕಾರವೊಂದು ಅಸ್ತಿತ್ವಕ್ಕೆ ಬಂದಿರುವ ದ್ಯೋತಕ.

                  ಬಹುತೇಕ ಹೆಣ್ಣುಮಕ್ಕಳು ಚುಡಾಯಿಸುವ ಪುಂಡರ ಕಾಟದಿಂದಾಗಿ ಶಾಲೆ, ಕಾಲೇಜುಗಳಿಗೆ ಹೋಗಲು ಹೆದರುತ್ತಿದ್ದರು. ಉತ್ತರ ಪ್ರದೇಶದಲ್ಲಿ ಭಾಜಪಾ ಸರಕಾರ ಬಂದ ಕೂಡಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಹಲವಾರು ಹೆಣ್ಣುಮಕ್ಕಳು ಕರೆ ಮಾಡಿ ಗೋಳು ತೋಡಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಯೋಗಿ ಮಹಿಳೆಯರ ಸುರಕ್ಷತೆ ಮತ್ತು ರೋಡ್ ರೋಮಿಯೋಗಳ ಹಾವಳಿಯನ್ನು ತಪ್ಪಿಸಲು ಆ್ಯಂಟಿ ರೋಮಿಯೋ ದಳವನ್ನು ನಿಯೋಜನೆ ಮಾಡಿದ್ದಾರೆ. ಈ ತಂಡವನ್ನು ದಬಾಂಗ್‌ ಎಂದೇ  ಖ್ಯಾತಿ ಪಡೆದಿರುವ 2014ರ ಬ್ಯಾಚ್‌ನ ಮಹಿಳಾ ಐಪಿಎಸ್‌ ಅಧಿಕಾರಿ ರವೀನಾ ತ್ಯಾಗಿ ನಿರ್ವಹಿಸುತ್ತಿದ್ದಾರೆ. ಈ ನೇಮಕಾತಿಗೆ ಸಾರ್ವಜನಿಕರಿಂದ ಪ್ರಶಂಸೆಯ ಮಹಾಪೂರವೇ ಹರಿದಿದೆ. ಈ ತಂಡ ಈಗಾಗಲೇ ಉತ್ತರಪ್ರದೇಶಾದ್ಯಂತ ಕಾರ್ಯಪ್ರವೃತ್ತವಾಗಿದ್ದು ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡಿದೆ. ರೊಮಿಯೋ ನಿಗ್ರಹ ಪಡೆಯ ರಚನೆ ಹಾಗೂ ಕ್ಷಿಪ್ರ ಕಾರ್ಯದಿಂದ ಹರ್ಷಿತರಾಗಿರುವ ಹಲವು ಯುವತಿಯರು ಇದು  ತಮ್ಮ ಜೀವನದಲ್ಲಿ ಸುರಕ್ಷತೆಯ ಭಾವನೆ ತಂದಿದೆ ಎಂಬುದಾಗಿ ಪ್ರಶಂಸಿಸಿದ್ದಾರೆ. ಗೋರಕ್ಪುರದಿಂದ ಘಾಜಿಯಾಬಾದ್ ವರೆಗೂ, ಲಖನೌನಿಂದ ಲಲಿತ್ಪುರದವರೆಗೂ ಇರುವ ಎಲ್ಲ ಮಾರುಕಟ್ಟೆ, ಮಾಲ್ ಗಳು, ತರಬೇತಿ ಕೇಂದ್ರಗಳು, ಶಾಲಾ ಕಾಲೇಜುಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ನೀಡುವುದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳನ್ನು ಚುಡಾಯಿಸಿದವರನ್ನೂ ಕಾನೂನಿನ ರೀತಿಯಲ್ಲಿ ಶಿಕ್ಷಿಸಲಾಗುವುದು. ಇದರ ಭಾಗವಾಗಿ ಇತ್ತೀಚೆಗೆ ಇಬ್ಬರು ಯುವಕರು ಬಾಲಕಿಯರ ಹಾಸ್ಟೆಲ್ ಮುಂದೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಪರೀಕ್ಷೆಗೋಸ್ಕರ ಮಫ್ತಿಯಲ್ಲಿಲ್ಲದೆ ಸಾಮಾನ್ಯ ಹುಡುಗಿಯರಂತೆ ಬಟ್ಟೆ ಧರಿಸಿದ್ದ ಆ್ಯಂಟಿ ರೋಮಿಯೋ ದಳದ ಮುಖ್ಯಸ್ಥೆ ರವೀನಾ ತ್ಯಾಗಿ ಬಳಿಯೇ ಅಸಭ್ಯವಾಗಿ ನಡೆದುಕೊಂಡ ಘಟನೆಯೇ ಉತ್ತರಪ್ರದೇಶದಲ್ಲಿ ಬೀದಿಕಾಮಣ್ಣರ ಉಪದ್ರವದ ಗಂಭೀರತೆಗೆ ಸಾಕ್ಷಿ. ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವ್ಯಾಪಕವಾಗಿದ್ದು ಮುಲ್ಲಾ, ಉಲೇಮಾಗಳ ಬೆಂಬಲವೂ ಇದಕ್ಕಿತ್ತು. 2006ರಲ್ಲೇ ಅಲ್ಲಿನ ಹೈಕೋರ್ಟ್ "ರಾಜ್ಯದಲ್ಲಿ ತೀವ್ರಗತಿಯಲ್ಲಿ ಹಿಂದೂ ಹುಡುಗಿಯರೇ ಏಕೆ ಅಪಹರಣಕ್ಕೊಳಗಾಗುತ್ತಿದ್ದಾರೆ?" ಎಂದು ಪ್ರಶ್ನಿಸಿತ್ತು.  ಲವ್ ಜಿಹಾದ್ ಬಗೆಗೇಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ರಾಜ್ಯ ಸರಕಾರವನ್ನು ನ್ಯಾಯಾಲಯವೇ ಖುದ್ದಾಗಿ ಎಚ್ಚರಿಸಿದ ಮೂರನೇ ರಾಜ್ಯ ಉತ್ತರ ಪ್ರದೇಶ. ಕರ್ನಾಟಕ, ಕೇರಳ ಉಳಿದೆರಡು ರಾಜ್ಯಗಳು!

               ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಸಿಯಂ ನಿರ್ಮಿಸಲು ಕೇಂದ್ರ ಸರಕಾರ ಭೂಮಿ ಮಂಜೂರು ಮಾಡುವಂತೆ ಅಖಿಲೇಶ್ ನೇತೃತ್ವದ ಉತ್ತರಪ್ರದೇಶ ಸರಕಾರವನ್ನು ಕೇಳಿತ್ತು. ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆ ಕಡತವನ್ನು ವಿಲೇವಾರಿಯೇ ಮಾಡಿರಲಿಲ್ಲ. ಕೊನೆಗೂ ರಾಮಾಯಣ ಮ್ಯೂಸಿಯಂಗೆ ಜಾಗ ಕೊಡಲು ಯೋಗಿಯೇ ಬರಬೇಕಾಯಿತು. ಈಗಾಗಲೇ ಇಪ್ಪತ್ತು ಎಕರೆ ಭೂಮಿ ಮಂಜೂರು ಮಾಡಿ, ಮ್ಯೂಸಿಯಂ ನಿರ್ಮಾಣವನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರತವೆಂಬ ಜಾತ್ಯಾತೀತ ರಾಷ್ಟ್ರದಲ್ಲಿ ಹಜ್ ಯಾತ್ರೆ ಕೈಗೊಳ್ಳುವವರಿಗೆ ಸಬ್ಸಿಡಿಯಿದೆ. ಆದರೆ ಹಿಂದೂಗಳ ತೀರ್ಥಯಾತ್ರೆಗೆ ಯಾವ ಸರಕಾರವೂ ಇಷ್ಟರವರೆಗೆ ನೆರವು ನೀಡಿಲ್ಲ. ಉತ್ತರ ಪ್ರದೇಶ ಸರಕಾರ ಕೈಲಾಸ – ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ₹1 ಲಕ್ಷ ನೆರವು ಘೋಷಿಸಿದೆ. ಯಾತ್ರಿಕರ ಅನುಕೂಲಕ್ಕಾಗಿ ಕೈಲಾಸ ಭವನ ನಿರ್ಮಿಸಲಾಗುತ್ತಿದೆ.

               ಯೋಗಿ ಪ್ರಬಲರಾಗಿರುವ ಪ್ರದೇಶಗಳಲ್ಲಿ ಕೋಮುಗಲಭೆಗಳು ಕಡಿಮೆ. ಅವರನ್ನು ಗೌರವಿಸುವ, ಆರಾಧಿಸುವ ಹಲವಾರು ಮುಸಲ್ಮಾನ ಪರಿವಾರಗಳು ಉತ್ತರ ಪ್ರದೇಶದಲ್ಲಿವೆ. ಅವರು ಮುಖ್ಯಮಂತ್ರಿಯಾದಾಗ ಮುಸಲ್ಮಾನರಿಂದ ಅಭೂತಪೂರ್ವ ಸ್ವಾಗತ ಲಭಿಸಿತ್ತು. ಗೋರಖನಾಥ್ ದೇವಳದ ಮೊದಲ ಇಂಜಿನಿಯರ್ ನಿಸಾರ್ ಅಹಮ್ಮದ್. ಸಾಧನಾ ಭವನ್, ಯಾತ್ರಿ ನಿವಾಸ್ಶಿಂದೂ ಸೇವಾಶ್ರಮ್, ದೇವಾಲಯದ ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ಸಂಸ್ಕೃತಿ ವಿದ್ಯಾಲಯ, ರಾಧಾಕೃಷ್ಣ ಮಂದಿರ, ಶಿವ, ವಿಷ್ಣು ಹಾಗೂ ಹನುಮಾನ್ ಮಂದಿರಗಳ ವಿನ್ಯಾಸಕಾರ ಇವರೇ.  ಮೂವತ್ತೈದು ವರುಷಗಳಿಂದ ಗೋರಖನಾಥನ ಸೇವೆ ಮಾಡುತ್ತಿರುವ ಯಾಸಿನ್ ಅನ್ಸಾರಿ ಮಠದ ಮೇಲ್ವಿಚಾರಕನೂ ಹೌದು. ದೇವಾಲಯದ ಖರ್ಚು-ವೆಚ್ಚಗಳನ್ನು ನಿರ್ವಹಿಸುವ ಅಕೌಂಟೆಂಟ್ ಕೂಡಾ ಆತನೇ. ಅಡುಗೆ ಕೋಣೆಯಿಂದ "ಛೋಟೆ ಮಹಾರಾಜ್"ರ(ಯೋಗಿ) ಶಯನ ಗೃಹದವರೆಗೂ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ ನನಗಿದೆ. ಅವರೊಂದಿಗೆ ಭೋಜನವನ್ನೂ ಸ್ವೀಕರಿಸುತ್ತೇನೆ ಎನ್ನುತ್ತಾರೆ ಅನ್ಸಾರಿ. ಮಠದ ಸುತ್ತಮುತ್ತಲೂ ಮುಸ್ಲಿಮರ ಅನೇಕ ಅಂಗಡಿಗಳಿವೆ. "ಕಳೆದ ಮೂವತ್ತೈದು ವರ್ಷಗಳಿಂದ ಮಠದ ಆವರಣದಲ್ಲಿ ಅಂಗಡಿಯನ್ನು ನಡೆಸುತ್ತಿದ್ದೇನೆ. ಒಂದು ಸಲವೂ ಅವರು ಅಗೌರವದಿಂದ ಅಥವಾ ಭೇದಭಾವದಿಂದ ನಡೆದುಕೊಂಡಿದ್ದನ್ನು ನಾನು ನೋಡಿಲ್ಲ. ಅಸಹಾಯಕರು, ಬಡಬಗ್ಗರು ಯಾರೇ ಇರಲಿ ಅವರ ಜಾತಿ-ಮತ ನೋಡದೆ ಯೋಗಿ ಜೀ ಸಹಾಯ ಮಾಡುತ್ತಾರೆ. ಅವರು ನಿಜವಾದ ಸಂನ್ಯಾಸಿ" ಎನ್ನುತ್ತಾರೆ ಅಝೀಜುನ್ನೀಸಾ. ಹಲವಾರು ಮುಸ್ಲಿಮ್ ಪರಿವಾರಗಳು ಯಾವುದೇ ಭಯವಿಲ್ಲದೆ ಇಲ್ಲಿ ಜೀವನ ನಡೆಸುತ್ತಿವೆ ಎನ್ನುವ ಬಳೆ ವ್ಯಾಪಾರಿ ಮಹಮ್ಮದ್ ಮತಾಕಿಮ್ ಮುಂತಾದವರ ಮಾತುಗಳು ನಿಜವಾದ ಜಾತ್ಯಾತೀತತೆ ಆದಿತ್ಯನಾಥರದ್ದು ಎಂದು ಸಾರಿ ಹೇಳುತ್ತವೆ. ಮಠದ ನಾಲ್ನೂರಕ್ಕೂ ಹೆಚ್ಚು ಗೋವುಗಳನ್ನು ನೋಡಿಕೊಳ್ಳುವ ಮಹಮ್ಮದ್ ತಮ್ಮೆಲ್ಲರನ್ನೂ ಸಲಹುವ ಯೋಗಿಯವರ ಸರಳ ಜೀವನದ ಬಗ್ಗೆ ಮತ್ತೆ ಮತ್ತೆ ಹೇಳುತ್ತಾನೆ.

              ಸುರನದಿಯನ್ನು ಸ್ವಚ್ಛಗೊಳಿಸಲು 1985ರಲ್ಲಿ ರಾಜೀವ್ ಗಾಂಧಿ "ಗಂಗಾ ಆ್ಯಕ್ಷನ್ ಪ್ಲಾನ್(ಜಿಎಪಿ) ಜಾರಿಗೆ ತಂದಿದ್ದರು. ಆದರೆ ಅದು ಕಾಗದದಲ್ಲಷ್ಟೇ ಉಳಿಯಿತು. ಆದಾದ 15 ವರ್ಷಗಳ ಬಳಿಕವೂ ಕೊಳಚೆ ಕಡಿಮೆಯಾಗಲಿಲ್ಲ. ಆದರೆ 901.71 ಕೋಟಿ ರುಪಾಯಿಗಳು ಖರ್ಚಾಗಿದ್ದವು. ಬೇರೆ ನದಿಯಿಂದ ಹೆಚ್ಚುವರಿ ನೀರನ್ನು ಹರಿಸಿ ಗಂಗೆಯ ನೀರನ್ನು ತೆಳುವಾಗಿಸಲು ಜಿಎಪಿ ಯಾವುದೇ ಕಠಿಣ ನಿಯಮಗಳನ್ನು ಜಾರಿಗೆ ತರಲೇ ಇಲ್ಲ. ಅಲ್ಲದೆ ಕಸ ವಿಲೇವಾರಿ ಪ್ರಕ್ರಿಯೆಯನ್ನೂ ಸರಿಯಾಗಿ ಕೈಗೊಂಡಿರಲಿಲ್ಲ. ಉದ್ಯಮಗಳು ರಾಸಾಯನಿಕಗಳನ್ನು ನದಿಯಲ್ಲಿ ವಿಸರ್ಜಿಸದಂತೆ ತಡೆಯಲೇ ಇಲ್ಲ. ಗಂಗೆಯ ದಡದಲ್ಲಿರುವ ಕಸಾಯಿಖಾನೆಗಳನ್ನೂ ನಿಷೇಧಿಸಲಿಲ್ಲ. ಗಂಗೆಯ ಮಾಲಿನ್ಯಕ್ಕೆ ಅವ್ಯವಸ್ಥಿತ ಘಾಟಿಗಳೇ ಮೂಲ ಕಾರಣ ಎಂಬ ನೆಪವೊಡ್ಡಿ ಘಾಟಿಗಳ ಆಧುನೀಕರಣ ಮಾಡಲಾಯಿತು. ಇದಕ್ಕೆಂದೇ ವಾರಣಾಸಿ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಗಂಗೆ ಮತ್ತಷ್ಟು ಕೊಳಕಾದಳು. ಒಳರಾಜಕೀಯದಲ್ಲಿ, ಅಧಿಕಾರದಾಟದಲ್ಲೇ ಮೂಳುಗಿ ಹೋಗಿದ್ದ ಗಂಗಾನದಿ ಜಲಾನಯನ ಪ್ರಾಧಿಕಾರ ಹಾಗೂ ಜಲ ಸಂಪನ್ಮೂಲ ಸಚಿವಾಲಯದ ಬೆಂಬಲವಿಲ್ಲದೆ ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯೆನ್ನುವುದು ಹಣ ದೋಚುವ ದಂಧೆಯಾಗಿ ಬದಲಾಯಿತು. ಮೋದಿ ಪ್ರಧಾನಿಯಾದ ಕೂಡಲೇ ನಮಾಮಿ ಗಂಗಾ ಯೋಜನೆಯಡಿ ನದಿಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕಾ ಘಟಕಗಳನ್ನು ಮುಚ್ಚಿಸಲು ಆದೇಶ ನೀಡಿದರು. ಗಂಗೆಗೆ ರಕ್ತದ ಹೊಳೆ ಹಾಗೂ ಮಾಂಸದ ತ್ಯಾಜ್ಯವನ್ನು ಹರಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ಕಂಪೆನಿಗಳಿಗೆ ಬೀಗ ಜಡಿಯಲಾಯಿತು. ಇಷ್ಟೆಲ್ಲಾ ಆದರೂ, ಗಂಗಾ ಶುದ್ಧೀಕರಣಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿದ್ದರೂ ಅದು ಉತ್ತರ ಪ್ರದೇಶದಲ್ಲಿ ಸಫಲತೆ ಕಾಣದಿರುವುದಕ್ಕೆ ಸಮಾಜವಾದಿ ಸರ್ಕಾರದ ಅಸಹಕಾರವೇ ಕಾರಣವಾಗಿತ್ತು. ಯೋಜನೆ ಸಫಲವಾದಲ್ಲಿ ಅದರ ಲಾಭ ಕೇಂದ್ರ ಸರ್ಕಾರಕ್ಕೆ ಸಿಗುತ್ತದೆಯೆನ್ನುವ ಭಯ ಅದನ್ನು ಕಾಡುತ್ತಿತ್ತು. ಈಗ ಯೋಗಿ ಬಂದದ್ದೇ ತಡ "ನಮಾಮಿ ಗಂಗಾ" ಭೋರ್ಗರೆದು ಹರಿಯುತ್ತಿದೆ!

                ಅತ್ತ ನೇಪಾಳದಲ್ಲಿ ಕಮ್ಯೂನಿಸ್ಟರು ನೇಪಾಳವನ್ನು ಭಾರತದಿಂದ, ಹಿಂದೂ ಧರ್ಮದಿಂದ ದೂರ ಸರಿಸಲು ನಡೆಸುತ್ತಿರುವ ಕಾರ್ಯ ಯೋಜನೆಯ ವಿರುದ್ಧವೂ ದನಿಯೆತ್ತಿದ್ದಾರೆ. ಮತಾಂತರವನ್ನು ಕಾನೂನುಬದ್ಧಗೊಳಿಸುವ ಕಮ್ಯೂನಿಸ್ಟರ ಹುನ್ನಾರವನ್ನು ವಿದೇಶೀ ಹಣ, ಶಕ್ತಿಗಳ ಷಡ್ಯಂತ್ರ ಎನ್ನುವ ಅವರು ನೇಪಾಳಿಗಳ ಅಸ್ಮಿತೆಗೆ ಕೊಳ್ಳಿ ಇಡಲಾಗುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ. ಗೋರಖನಾಥ ಪೀಠಕ್ಕೆ ನಡೆದುಕೊಳ್ಳುವ ಅನೇಕ ನೇಪಾಳಿಗಳು ತಮ್ಮ ಪೀಠಾಧಿಪತಿಯಿಂದ ಬೆಂಬಲದ ನುಡಿ ಕೇಳಿಬಂದದ್ದೇ ತಡ ಚೀನಾ-ಪಾಕಿಸ್ತಾನ-ಪಾಶ್ಚಿಮಾತ್ಯ ರಾಷ್ಟ್ರಗಳ ಈ ದುಷ್ಟಕೂಟದ ದುಷ್ಟ ಕಾರ್ಯಗಳ ವಿರುದ್ಧ ದನಿಯೆತ್ತಲಾರಂಭಿಸಿದ್ದಾರೆ. ಒಟ್ಟಾರೆ ಉತ್ತರಪ್ರದೇಶ ತನ್ನೊಂದಿಗೆ ಉತ್ತರಾಪಥವನ್ನೂ ಬೆಳಕಿನ ಪಥಕ್ಕೆ ಕೊಂಡೊಯ್ಯುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ