ಪುಟಗಳು

ಮಂಗಳವಾರ, ಏಪ್ರಿಲ್ 25, 2017

ಕರ್ಣನಾರು?

ಕರ್ಣನಾರು?
              ಅನೇಕ ಜನರ ಕರುಣೆ, ಕೃಪಾಕಟಾಕ್ಷ ಹಾಗೆಯೇ ಹಲವರ ಭರ್ತ್ಸನೆಗೆ ಪಾತ್ರವಾದ ವ್ಯಕ್ತಿ ಮಹಾಭಾರತದ ಕರ್ಣ. ಆದರೆ ಪ್ರಸ್ತುತ ಕಾಲದಲ್ಲಿ ಕರ್ಣನ ತಪ್ಪುಗಳೆಲ್ಲವೂ ಆತನಿಗಾದ ಅನ್ಯಾಯ(?) ಎಂಬ ವಿಚಾರಾದಡಿಯಲ್ಲಿ ಮರೆಯಾದುದು ಕಾಣುತ್ತದೆ. ಇತಿಹಾಸ ಒಳ್ಳೆಯದನ್ನು ಸ್ವೀಕರಿಸು, ಕೆಟ್ಟದನ್ನು ತ್ಯಜಿಸು ಎನ್ನುವ ಪಾಠವನ್ನು ಕಲಿಸುತ್ತದೆ. ಅದೇ ದೃಷ್ಟಿಯಿಂದ ಇತಿಹಾಸವನ್ನು ನೋಡಬೇಕಲ್ಲದೆ ವ್ಯಕ್ತಿಗೆ ಅನ್ಯಾಯವಾಗಿದೆ ಎನ್ನುತ್ತಾ ಆತನ ತಪ್ಪನ್ನು ಮನ್ನಿಸುವುದರಲ್ಲಿ ಅಲ್ಲ. ಸಮಾಜದಿಂದ ಸ್ಥಾನ-ಮಾನಾದಿ ಸಹಿತ ಸರ್ವಸ್ವವನ್ನು ಪಡೆದವನ ಒಳ್ಳೆಯ ಅಂಶಗಳನ್ನು ಮಾತ್ರ ತೆಗೆದುಕೊಂಡು ಆತನ ಅನ್ಯಾಯ, ತಪ್ಪುಗಳನ್ನು ಖಂಡಿಸುವ ಧೈರ್ಯ ಇರುತ್ತದೋ ಅದೇ ರೀತಿ ಸಮಾಜದಿಂದ ತಿರಸ್ಕೃತಗೊಂಡ ವ್ಯಕ್ತಿಯ ಒಳ್ಳೆಯದನ್ನು ತೆಗೆದುಕೊಂಡು ಆತ ಮಾಡಿದ ತಪ್ಪುಗಳನ್ನು ತಪ್ಪೆಂದು ಸಾರುವ ಧೈರ್ಯವೂ ಮನುಷ್ಯನಲ್ಲಿ ಮೊಳೆಯಬೇಕು. ಮಾನವೀಯತೆ ಎನ್ನುವುದು ದೌರ್ಬಲ್ಯವಾಗಕೂಡದು. ಅದು ಧರ್ಮಾಧರ್ಮಗಳ ವಿವೇಚನೆಗೆ ತೆರೆದುಕೊಂಡು ಪ್ರತಿಫಲಿಸಬೇಕು.

        ಕರ್ಣ ಶೂರ,ದಾನಶೂರ ಎಂದ ಮಾತ್ರಕ್ಕೆ ಆತ ಮಾಡಿದ ತಪ್ಪುಗಳು "ಸರಿ"ಯಾಗುವುದಿಲ್ಲ. ಅವನು ದುಷ್ಟ ಚತುಷ್ಟಯರಲ್ಲೊಬ್ಬ ಎಂದು ಮಹಾಭಾರತದ ಕರ್ತೃ ವ್ಯಾಸರೇ ಹೇಳಿದ ಮಾತನ್ನು ಒಪ್ಪದವರಿಗೆ ಏನೂ ಹೇಳಲಿಕ್ಕಾಗುವುದಿಲ್ಲ. ಗಂಧರ್ವನ ಬಳಿ ಸೋಲುವಾಗ ಕರ್ಣನ ಪರಾಕ್ರಮ ಎಲ್ಲಿ ಹೋಗಿತ್ತು? ದ್ರೌಪದಿಯ ಸೀರೆ ಸೆಳೆವಾಗ ಕರ್ಣ ಏನು ಕಣ್ಮುಚ್ಚಿ ಕೂತಿದ್ದನೇ? ಪಾಂಡವರನ್ನು ಕೊಲ್ಲಲು ನಾನಾ ತಂತ್ರ ಉಪಯೋಗಿಸುವಾಗ ಕರ್ಣ ತನ್ನ ಆಪ್ತ ಮಿತ್ರನನ್ನು ಯಾಕೆ ತಡೆಯಲಿಲ್ಲ? ಅರಗಿನ ಮನೆಯಲ್ಲಿ ಪಾಂಡವರು ಸುಟ್ಟು ಬೂದಿಯಾಗುತ್ತಾರೆಂದು ತಿಳಿದಿದ್ದರೂ ಯಾಕೆ ಸುಮ್ಮನಿದ್ದ? ಪಾಂಡವರ ಅರಣ್ಯವಾಸ, ಅಜ್ಞಾತವಾಸಕ್ಕೆ ಕರ್ಣನೂ ಕಾರಣನೇ ಅಲ್ಲವೇ? ವಿರಾಟನ ಗೋವುಗಳನ್ನು ಅಪಹರಿಸುವಾಗ ಕರ್ಣನ ಆರ್ಷ ಪ್ರಜ್ಞೆ ಎಲ್ಲಿ ಸತ್ತಿತ್ತು? ಹೀಗೆ ಧರ್ಮಾಧರ್ಮಗಳ ವಿವೇಚನೆಯಿಲ್ಲದೆ ವರ್ತಿಸಿದ ಕರ್ಣ ತನಗೆ ಅನ್ಯಾಯವಾಗಿದೆ ಎಂದೇ ಸದಾ ಬಡಬಡಿಸಿದ. ತನಗಾದ ಅನ್ಯಾಯದ ಮೇಲಿನ ಸೇಡು ತೀರಿಸಿಕೊಳ್ಳಲು ಆತನಿಗೆ ದೊರಕಿದ್ದು ಬಡಪಾಯಿ ಪಾಂಡವರು. ಅದಕ್ಕೆ ದುರ್ಯೋಧನನ ಕುಮ್ಮಕ್ಕು ಬೇರೆ.

          ಅರ್ಜುನನೊಡನೆ ಗೋಗ್ರಹಣದ ಪ್ರಕರಣದ ಯುದ್ಧದಲ್ಲಿ ಸೋತು ಓಡಿಹೋಗುವಾಗ ಅರ್ಜುನನ್ನು ಮೀರಿಸುವ ಶೌರ್ಯ ಎಲ್ಲಿ ಮರೆಯಾಗಿತ್ತು? ಕೊನೆಗೆ ಯುದ್ಧದ ಸಮಯದಲ್ಲಾದರೂ ತನ್ನ ತಪ್ಪನ್ನು ಮನಗಂಡನೇ? ಅಭಿಮನ್ಯುವನ್ನು ಹಿಂದಿನಿಂದ ಬಂದು ಕಡಿದಾಗ ಕರ್ಣನ ಕ್ಷಾತ್ರಧರ್ಮ ಎಲ್ಲಿ ಕೊಲೆಯಾಗಿತ್ತು?  ಸಪ್ತಮಹಾಪಾತಕಿಗಳಲ್ಲೊಬ್ಬ ಎಂದು ವ್ಯಾಸರಿಂದಲೇ ಕರೆಯಲ್ಪಟ್ಟವನು ಅವನು. ದುರ್ಯೋಧನನ ಎಲ್ಲಾ ಕ್ರಿಯೆಗೂ ಕರ್ಣ-ದುಶ್ಯಾಸನ-ಶಕುನಿಯರ ಬೆಂಬಲವಿತ್ತು. ಅದಕ್ಕೆಂದೇ ಅವರನ್ನು ವ್ಯಾಸರು ದುಷ್ಟಚತುಷ್ಟಯರು ಅಂದಿದ್ದು. ಕರ್ಣನಿಗೆ ಅನ್ಯಾಯವಾಗಿದೆಯೆಂದು ಅದರ ಸೇಡನ್ನು ಪಾಂಡವರ ಮೇಲೆ ತೀರಿಸೋದು ಎಷ್ಟು ಸರಿ? ಇದೊಂಥರಾ ಎಡಬಿಡಂಗಿಗಳ ರೀತಿ..."ಕೆಳವರ್ಗಕ್ಕೆ ಹಿಂದೆ ಅನ್ಯಾಯವಾಗಿದೆ. ಅದಕ್ಕೆ ಈಗಿನ ಮೇಲ್ವರ್ಗದವರ ಮೇಲೆ ದಾಳಿ ಮಾಡಿ" ಎನ್ನುವ ಹಾಗೆ! ಕರ್ಣನಿಗೆ ಅನ್ಯಾಯವಾಯಿತು ಎನ್ನುವವರು ಆ ಕಾಲಘಟ್ಟವನ್ನು ನೋಡುವುದಿಲ್ಲ. ಮದುವೆಯಾಗದೆ ಹಡೆದ ಕುಂತಿ ಮಗುವನ್ನು ಏನು ಮಾಡಬಹುದಿತ್ತು?(ಇದಕ್ಕೆ ಈಗಲಾದರೂ ನಮ್ಮ ಸಮಾಜ ಅನುಮತಿ ಕೊಡುತ್ತದೆಯೇ?) ಇದೆಲ್ಲವನ್ನೂ ಆಯಾ ಪಾತ್ರಗಳಲ್ಲಿ ನಿಂತು ನೋಡಿದಾಗಷ್ಟೇ ಅರಿವಾಗುತ್ತದೆ. ವ್ಯಾಸ ಭಾರತವನ್ನು ಬಿಟ್ಟು ಯಕ್ಷಗಾನದಲ್ಲಿ ವೈಭವೀಕರಿಸಿದ ಕರ್ಣನನ್ನೋ, ಅಥವಾ ಭಾರತವನ್ನು ಬಳಸಿಕೊಂಡು ಮಾಡಿದ ಸಾಹಿತ್ಯದಲ್ಲಿ ನಾಯಕನನ್ನಾಗಿಸಿದ ಕರ್ಣನನ್ನು ನೋಡಿ ಕರ್ಣ ದೇವರಿಗೆ ಸಮ ಅಂತ ಅಂದುಕೊಂಡರೆ ಅಂತಹ ಮೂರ್ಖರು ಯಾರೂ ಇಲ್ಲ. ಮಹಾಭಾರತ ಕೇವಲ ಕಾವ್ಯ ಅಥವಾ ಐತಿಹಾಸಿಕ ಘಟನೆ ಮಾತ್ರವಲ್ಲ. ಅದು ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಾದುದನ್ನು ಸೂಚಿಸುತ್ತದೆ. ದುರ್ಯೋಧನನ ರೀತಿ ಆಗಬೇಡಿ, ಧರ್ಮಜನ ರೀತಿ ಯಾಗದ ಸಮಯದಲ್ಲಿ ಮೈಮರೆತು "ಇನ್ನು ಮುಂದೆ ಯಾರು ಏನು ಹೇಳಿದರೂ ನಾನು ವಿರೋಧಿಸುವುದಿಲ್ಲ, ಏನನ್ನೂ ನಿರಾಕರಿಸುವುದಿಲ್ಲ" ಎಂದು ಪ್ರತಿಜ್ಞೆ ಮಾಡಿ ದುರ್ಯೋಧನ ಜೂಜಿಗೆ ಕರೆದಾಗಲೂ, ಹೆಂಡತಿಯನ್ನು ಸಭೆಗೆ ಎಳಸು ಎಂದಾಗಲೂ ಅಸ್ತು ಅನ್ನಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ... ಕರ್ಣನಿಗೆ ಆದ ಅನ್ಯಾಯ ಮುಂದೆ ಯಾರಿಗೂ ಆಗಬಾರದು ಎನ್ನುವುದೂ ಅದರಲ್ಲೊಂದು. ಚರಿತ್ರೆಯಿಂದ ಪಾಠ ಕಲಿಯುವುದಂದರೆ ಅದೇ.

                ಕರ್ಣನಿಗೆ ಅನ್ಯಾಯವಾದದ್ದು ನಿಜ. ಆದರೆ ಅವನು ಅಮಾಯಕನಲ್ಲ. ಅವನನ್ನು ಸೂತಪುತ್ರನೆಂದು ಉಳಿದವರು ಹೀಯಾಳಿಸಿದರೂ ಅವನಿಗೆ ರಾಜಾಶ್ರಯ ಅದರಲ್ಲೂ ರಾಜನ ಆಪ್ತಮಿತ್ರತ್ವದಂತಹ ಸ್ಥಾನವೂ ದೊರಕಿತ್ತು. ಹಾಗೆಯೇ ಮಿತ್ರನ ಕೃಪಾಕಟಾಕ್ಷದಿಂದ ಅಂಗರಾಜ್ಯವೂ ದೊರೆತಿತ್ತು. ಇಂತಹ ಅಧಿಕಾರವನ್ನು ಅವನು ಕೇವಲ ಮಿತ್ರನಿಗೆ ಸಹಾಯ ಮಾಡುವ ಉದ್ದೇಶದಿಂದ ದುರುಪಯೋಗ ಪಡಿಸಿಕೊಂಡು ಪಾಂಡವರ ಮೇಲೆ ದ್ವೇಷ ಸಾಧಿಸಲು ಪ್ರಯತ್ನಿಸಿದ್ದು ಎಷ್ಟು ಸರಿ? ಕೇವಲ ವಿದ್ಯೆ ಮಾತ್ರವಲ್ಲ; ವಿಚಾರ ಮಾಡುವ ಶಕ್ತಿಯೂ ಇರಬೇಕು! ವಿದ್ಯೆ ಇದ್ದ ಕರ್ಣನಿಗೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಸಾಮರ್ಥ್ಯ ಇರಲಿಲ್ಲವೇ? ಸಮಾಜದ ಮೇಲಿನ ದ್ವೇಷವನ್ನು ಪಾಂಡವರ ಮೇಲೇಕೆ ಕಾರಿದ? ಕರ್ಣನಿಗೆ ಅನ್ಯಾಯವಾಗಿದೆ ಎನ್ನುವ ಯಾರೂ ವಿದುರನಿಗಾಗಿ ಮರುಕಪಡುವುದಿಲ್ಲ. ಹುಟ್ಟಿದಾರಭ್ಯ ಅವನನ್ನು ದಾಸಿಪುತ್ರನೆಂದು ಹೀಯಾಳಿಸಿದರು. ಕ್ಷಾತ್ರ, ರಾಜನೀತಿಯಲ್ಲಿ ಪಾಂಡು, ದೃತರಾಷ್ಟ್ರರಿಗಿಂತ ಸಮರ್ಥನಾಗಿದ್ದರೂ ಅವನಿಗೆ ಪಟ್ಟ ಸಿಗಲಿಲ್ಲ. ತಮಗೆ ಪ್ರೀತಿಪಾತ್ರರಾದವರನ್ನು ಬಿಟ್ಟು ಈ ರೀತಿ ಅರ್ಹತೆಯುಳ್ಳವರಿಗೆ ಪಟ್ಟ ಕಟ್ಟಿದಾಗ ಅದರಿಂದ ದೇಶಕ್ಕೆ ಒಳ್ಳೆಯದಾಗಿದೆ ಎನ್ನುವುದನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅಷ್ಟೆಲ್ಲಾ ಅನ್ಯಾಯವಾಗಿದ್ದರೂ ಅವನು ಕರ್ಣನ ಹಾಗೆ ಅಧರ್ಮಿಯಾಗಲಿಲ್ಲ. ಅವನಿಂದ "ವಿದುರ ನೀತಿ" ಯೇ ಸೃಷ್ಟಿಯಾಗಿ ಜಗತ್ತಿಗೇ ಉಪಯೋಗವಾಯಿತು. ಒಬ್ಬ ವ್ಯಕ್ತಿ ತನಗೆ ಬಂದ ಅಡೆತಡೆಗಳಲ್ಲೂ ಹೇಗೆ ನೀತಿವಂತನಾಗಿ ಸಚ್ಚಾರಿತ್ರ್ಯದಿಂದ ಬಾಳುತ್ತಾನೆಂಬುದು ಮುಖ್ಯ!

               ಪರಶುರಾಮರು ಕ್ಷತ್ರಿಯರಿಗೆ ಯುದ್ಧ ವಿದ್ಯೆ ಕಲಿಸುವುದಿಲ್ಲವೆಂದು ಮೊದಲೇ ನಿಶ್ಚಯ ಮಾಡಿದ್ದರು. ಕರ್ಣ ಸುಳ್ಳು ಹೇಳಿ ವಿದ್ಯಾರ್ಥಿಯಾದ. ಸತ್ಯ ತಿಳಿದಾಗ ಕೋಪಗೊಂಡು (ಭಾರ್ಗವ ವಂಶಜದವರಾದ ಪರಶುರಾಮರಿಗೆ ಕೋಪ ಬರುವುದು ಅಸಹಜವೂ ಅಲ್ಲ) ಶಪಿಸಿದ್ದು. ಇಲ್ಲಿ ತಪ್ಪು ಯಾರದ್ದು? ಒಬ್ಬಾಕೆ ತಾಯಿ ತನ್ನ ಸ್ವಂತ ಮಗನ ಸಾವು ನಿಶ್ಚಯ ಎಂದು ತಿಳಿದಿದ್ದರೂ ಭಾವನೆಯನ್ನೆಲ್ಲಾ ಅದುಮಿಟ್ಟುಕೊಂಡು ಧರ್ಮ ಗೆಲ್ಲಬೇಕೆಂದು ಸ್ಥಿರವಾಗಿ ನಿಂತಳಲ್ಲಾ...ಅದು ವೀರನಾರಿಯ ಲಕ್ಷಣ! ಒಂದು ವೇಳೆ ಕುಂತಿ ಕರ್ಣನಲ್ಲಿ ಆ ರೀತಿ ವರ ಕೇಳದಿದ್ದರೆ ಏನಾಗುತ್ತಿತ್ತು? ಕರ್ಣನ ಸರ್ಪಾಸ್ತ್ರದಿಂದ ಅರ್ಜುನನ ತಲೆ ಹೋಗುತ್ತಿತ್ತು. ಧರ್ಮ ಸೋಲುತ್ತಿತ್ತು! ಅಪಾತ್ರರ ಕೈಗೆ ಸಿಕ್ಕಿದರೆ ಸರ್ವನಾಶ ಖಂಡಿತ. ಭಯೋತ್ಪಾದಕರ ಕೈಗೆ ಅಣ್ವಸ್ತ್ರ ಸಿಕ್ಕಿದರೆ ಏನಾಗಬಹುದು? ಅದು ಕೃಷ್ಣ ನೀತಿ, ಅಂತಹುದನ್ನು ಪಾಲನೆ ಮಾಡದ್ದರಿಂದಲೇ ಭಾರತ ಮುಸಲರ ವಶವಾಯಿತು, ಬ್ರಿಟಿಷರ ದಾಸ್ಯಕ್ಕೀಡಾಯಿತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ