ಪುಟಗಳು

ಶುಕ್ರವಾರ, ನವೆಂಬರ್ 26, 2021

ವಂಗ ಭಂಗ; ಹಿಂದೂವಿನ ಮರಣಮೃದಂಗ

ವಂಗ ಭಂಗ; ಹಿಂದೂವಿನ ಮರಣಮೃದಂಗ


ತಾವೇ ಏನಾದರೂ ಅನಾಚಾರ ಮಾಡಿ ತಮ್ಮವರನ್ನು ಎತ್ತಿಕಟ್ಟುವುದು. ಇದು ಜಿಹಾದಿನ ಒಂದು ಬಗೆ. ಬಾಂಗ್ಲಾದಲ್ಲಿ ಈಗ ಆಗುತ್ತಿರುವುದೂ ಅದೇ. ದುರ್ಗಾ ಪೆಂಡಾಲಿನಲ್ಲಿ ದೇವಿಯ ಮೂರ್ತಿಯ ಪಾದದ ಬಳಿ ಕುರಾನ್ ಪ್ರತಿ ಇಟ್ಟ ಜಮಾತ್-ಇ-ಇಸ್ಲಾಮ್ ಬಳಿಕ ಅದರ ಫೋಟೋ ತೆಗೆದು ಜಾಲತಾಣಗಳಲ್ಲಿ ಹಾಕಿ ಇಸ್ಲಾಂನ ನಿಂದನೆಯೆಂಬಂತೆ ಬಿಂಬಿಸಿ ತನ್ನವರನ್ನು ಎತ್ತಿಕಟ್ಟಿತು. ಇದನ್ನೇ ನೆಪವಾಗಿಟ್ಟುಕೊಂಡು ಬೀದಿಗಿಳಿದ ಮತಾಂಧರು ಹಲವು ದೇವಾಲಯಗಳನ್ನು ಧ್ವಂಸಗೊಳಿಸಿದರು. 150ಕ್ಕೂ ಹೆಚ್ಚು ಹಿಂದೂ ಪರಿವಾರಗಳ ಮೇಲೆ ದಾಳಿ ನಡೆಸಿದರು. ಮೂರು ಜನ ಹಿಂದೂಗಳನ್ನು ಕೊಂದರು. ಹಿಂದೂಗಳನ್ನು ಗುರಿಯಾಗಿಸಿಕೊಂಡ ಈ ದಾಳಿ 22 ಜಿಲ್ಲೆಗಳಲ್ಲಿ ವ್ಯಾಪಿಸಿತು. ಈ ಬೆಂಕಿ ಇನ್ನೂ ಆರಿಲ್ಲ. ಕೆಲವು ತಿಂಗಳುಗಳ ಹಿಂದಷ್ಟೇ ಗಡಿಯ ಈಚೆಗಿನ ಬಂಗಾಳೀ ಹಿಂದೂಗಳು ಅನುಭವಿಸಿದ ಹಿಂಸೆಯನ್ನು ಈಗ ಗಡಿಯಾಚೆಗಿನ ಬಂಗಾಳಿಗಳು ಅನುಭವಿಸುತ್ತಿದ್ದಾರೆ. ವಂಗಭಂಗ ಎಂದೋ ಆಗಿದೆ. ಆದರೆ ಅದರ ಕಿಡಿ ಇನ್ನೂ ಉರಿಯುತ್ತಲೇ ಇದೆ. ಜಿಹಾದ್ ರೂಪದಲ್ಲಿ!

50ವರ್ಷಗಳ ಹಿಂದೆಯೂ ಇದೇ ರೀತಿ ಆಗಿತ್ತು. ಹಿಂದೂಗಳು ಪ್ರಾಣ, ಮಾನ ರಕ್ಷಣೆಗಾಗಿ ಭಾರತಕ್ಕೆ ಓಡಿ ಬಂದಿದ್ದರು. ಈಗದರ ಸುವರ್ಣ ಸಂಭ್ರಮಕ್ಕೆ ಆ ರಕ್ಕಸರು ಹೊರಟಂತಿದೆ. ಕಳೆದ ಜೂನ್ ನಿಂದಲೇ ಈ ಜಿಹಾದ್ ಶುರುವಾಗಿದೆ. ಖಿಲಾಫತ್ ಹುಚ್ಚಿನಲ್ಲಿ ಶತಮಾನಗಳ ಹಿಂದೆಯೂ ಇಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಸುಹ್ರಾವರ್ಧಿ ಎಂಬ ಗಾಂಧಿಯ ಮಾನಸಪುತ್ರನ ನೇತೃತ್ವದಲ್ಲಿ ನರಕ ಸೃಷ್ಟಿಯಾಗಿತ್ತು. ನಿತ್ಯದ ಕಿರುಕುಳ, ದಾಳಿಯಂತೂ ಇದ್ದೇ ಇದೆ. ಎಂದಿನಂತೆ ಮಾನವ ಹಕ್ಕುಗಳ ಹೋರಾಟಗಾರರು, ಹಿಂದೂಗಳ, ಹಿಂದೂ ಸಂಸ್ಕೃತಿಯ ವಿರುದ್ಧ ಸದಾ ಊಳಿಡುವ ಜಾತ್ಯಾತೀತವಾದಿಗಳು, ಸತ್ಯವನ್ನು ಮಾರಿಕೊಂಡು ಬೆತ್ತಲಾಗಿರುವ ಬುದ್ಧಿಗೇಡಿ ಪತ್ರಿಕೆಗಳು ತಮ್ಮ ತುಟಿಗಳನ್ನು ಹೊಲಿದುಕೊಂಡಿವೆ. ಹಿಂದೂಗಳೆಂದರೆ ಎಲ್ಲರಿಗೂ ಅಸಡ್ಡೆ, ಹಿಂದೂಗಳಿಗೂ! 200ಕ್ಕೂ ಹೆಚ್ಚು ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಾಧ್ಯಮಗಳು ಈ ಸುದ್ದಿಯನ್ನು ಮುಚ್ಚಿಟ್ಟಿವೆ. ಹಿಂದೂ ಪರವಾದ ದನಿಗಳನ್ನು ದಮನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಹಿಂದೂ ಹತ್ಯಾಕಾಂಡದ ವಿವರ ಹಾಕುವ ಅಕೌಂಟುಗಳನ್ನು ಕಿತ್ತೆಸೆಯುತ್ತಿವೆ. ಹಿಂದೂವಿನ ಮೇಲಿನ ದೌರ್ಜನ್ಯದ ವಿಷಯ ಬಂದಾಗ ಎಲ್ಲರದ್ದೂ ನೀರವ ಮೌನದ, ಹಿಂದೂವಿನ ದನಿಯನ್ನು ನಿಲ್ಲಿಸುವ ಒಗ್ಗಟ್ಟು. ಹಿಂದೂ ಪ್ರತಿರೋಧಿಸಿದನೆಂದರೆ ಲಿಂಚಿಂಗ್, ಕೇಸರಿ ಭಯೋತ್ಪಾದನೆ ಎಂದು ಬೊಬ್ಬಿರಿದು ಬಿಂಬಿಸುವ ಒಗ್ಗಟ್ಟು!

1946ರಲ್ಲಿ ಬಂಗಾಳದಲ್ಲಿದ್ದ ಸುಹ್ರಾವರ್ದಿ ಸರಕಾರದ ಸುಪರ್ದಿಯಲ್ಲೇ ಹಿಂದೂಗಳ ನರಮೇಧ ನಡೆಯಿತು. ಕಲ್ಕತ್ತಾದಲ್ಲಂತೂ ಮೂರು ದಿನಗಳ ಕಾಲ ಹಿಂದೂಗಳ ಸಾಮೂಹಿಕ ಹತ್ಯೆ ಅಬಾಧಿತವಾಗಿ ನಡೆಯಿತು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಅಸಂಖ್ಯ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು. ಹಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು.  ಲೆಖ್ಖವಿಲ್ಲದಷ್ಟು ಮತಾಂತರ ನಡೆಯಿತು. ಕಲ್ಕತ್ತಾ ಪೊಲೀಸರು ಕೈಕಟ್ಟಿ ಕುಳಿತುಕೊಂಡಿದ್ದರು. ಕಾನೂನು ಪಾಲನೆ ಹೊಣೆಹೊತ್ತವರ ಕಣ್ಣೆದುರಲ್ಲೇ ಈ ಭೀಭತ್ಸ ಘಟನೆಗಳು ನಡೆದವು. ಎರಡು ತಿಂಗಳಲ್ಲಿ ಮೂವತ್ತು ಸಾವಿರ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಮೂರು ಲಕ್ಷಕ್ಕೂ ಹಿಂದೂಗಳ ಕಗ್ಗೊಲೆಯಾಯಿತು. ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಯಿತು. ಅದೇ ನವಖಾಲಿ, ಅದೇ ವಂಗ ಇಂದು ಮತ್ತೆ ಮತ್ತೆ ಹೊತ್ತಿ ಉರಿಯುತ್ತಿದೆ.

1970ರ ಚುನಾವಣೆಯಲ್ಲಿ(ಪಾಕಿಸ್ತಾನ ರಚನೆಯಾದ ಬಳಿಕದ ಮೊದಲ ಚುನಾವಣೆ) ಬಂಗಾಳಿ ಶೇಕ್ ಮುಜೀಬುರ್ ರಹಮಾನನ ಪಕ್ಷ ಪೂರ್ವ ಪಾಕಿಸ್ತಾನದಲ್ಲಿ ಬಹುಮತ ಗಳಿಸಿದ್ದು ಪಶ್ಚಿಮ ಪಾಕಿಸ್ತಾನಿಗಳ ಕಣ್ಣು ಕೆಂಪಗಾಗಿಸಿತ್ತು. ಪಾಕ್ ಅಧ್ಯಕ್ಷ ಯಾಹ್ಯಾಖಾನ್ ಸರಕಾರ ರಚಿಸಲು ಬಿಡದೆ ಸೈನ್ಯಾಡಳಿತವನ್ನು ನಿರ್ದೇಶಿಸಿದ. ಜನರಲ್ ಟಿಕ್ಕಾ ಖಾನ್ ರಜಾಕಾರರನ್ನು ಸೈನ್ಯದಲ್ಲಿ ಸೇರ್ಪಡೆಗೊಳಿಸಿದ. "ಶಾಂತಿ ಸಮಿತಿ" ಎಂಬ ಹೆಸರಿನ ಈ ಅರೆಸೈನ್ಯಕ್ಕೆ ಮತಾಂಧ ಮುಸ್ಲಿಮರನ್ನೇ ಸೇರ್ಪಡೆಗೊಳಿಸಲಾಯಿತು. ಅಲ್ ಬದ್ರ್ ಮತ್ತು ಅಲ್ ಶಮ್ಸ್ ಬ್ರಿಗೇಡ್ ಹೆಸರಿನಲ್ಲಿ ರಜಾಕಾರರ ಎರಡು ಪಡೆಗಳು ತಯಾರಾದವು. ಪಾಕಿಸ್ತಾನಿ ಸೈನ್ಯ ರಮಣ ಕಾಳಿ ಮಂದಿರವನ್ನು ನಾಶ ಮಾಡಿ 85 ಹಿಂದೂಗಳನ್ನು ಕೊಂದು ಹಾಕಿತು.  1971ರ ಫೆಬ್ರವರಿ 22ರಂದು ಯಾಹ್ಯಾಖಾನ್  "ಮೂವತ್ತು ಲಕ್ಷ ಜನರನ್ನು ಕೊಂದು ಹಾಕಿ" ಎಂದು ಬಹಿರಂಗವಾಗಿ ನಿರ್ದೇಶನ ಕೊಟ್ಟ. ಪಾಕಿಸ್ತಾನದ ಸೈನ್ಯದ ಆಪರೇಷನ್ ಸರ್ಚ್ ಲೈಟ್ ಜೊತೆಜೊತೆಗೆ ಈ ರಜಾಕಾರರ ಅನಧಿಕೃತ ಸೈನಿಕಪಡೆಯ ಭಯಾನಕ ಹಿಂಸಾಚಾರ ಯಾವುದೇ ಎಗ್ಗಿಲ್ಲದೆ ನಡೆಯಿತು.

ಮಾರ್ಚ್ 25, 1971ರಂದು ಪಾಕಿಸ್ತಾನ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಂಗಾಳೀ ಅಸ್ಮಿತೆಯನ್ನು ನಾಶಗೈಯ್ಯುವ ಹತ್ತು ತಿಂಗಳ ಅವಧಿಯ ಕುಕೃತ್ಯಕ್ಕೆ ಮುನ್ನುಡಿ ಬರೆಯಿತು. ಇಲ್ಲಿ ಬಂಗಾಳೀ ಅಸ್ಮಿತೆ ಅಂದರೆ ಏನು? ಅದು ಶತಪ್ರತಿಶತ ಹಿಂದೂ ಅಸ್ಮಿತೆಯೇ. ಯಾವುದೇ ಸೆಮೆಟಿಕ್ ಮತಗಳಿಂದ ಒಂದು ಪ್ರಾಂತ್ಯದ ಅಸ್ಮಿತೆ ಸೃಷ್ಟಿಯಾಗಲು, ಬೆಳೆಯಲು, ಉಳಿಯಲು ಸಾಧ್ಯವೇ? ಇದು ಮುಂದೆ ಭಾರತದ ಪಾದದಡಿಯಲ್ಲಿ ಪಾಕಿಸ್ತಾನ ಮಂಡಿಯೂರುವುದರೊಂದಿಗೆ ಪರ್ಯಾವಸಾನವಾಯಿತಾದರೂ ಆ ಅವಧಿಯಲ್ಲಿ ಹಿಂದೂಗಳಿಗಾದ ನಷ್ಟ ಅಗಾಧ. ಏಳೇ ದಿವಸದಲ್ಲಿ ಹದಿನೈದು ಲಕ್ಷದಷ್ಟು ಬಂಗಾಳಿಗಳು ತಮ್ಮ ನೆಲೆ ಬಿಟ್ಟು ಓಡಿ ಹೋಗಬೇಕಾಯಿತು. ನವೆಂಬರ್ ಅಂತ್ಯದ ವೇಳೆಗೆ ಒಂದು ಕೋಟಿಯಷ್ಟು ಹಿಂದೂಗಳು ಭಾರತಕ್ಕೆ ಓಡಿ ಬಂದರು. ಭಾರತದ ವಿದೇಶಾಂಗ ಇಲಾಖೆ ಹೊರಗೆಡಹಿದ ಮಾಹಿತಿಯ ಪ್ರಕಾರವೇ 1971ರ ಮಾರ್ಚ್ ಹಾಗೂ ಆಗಸ್ಟ್ ನಡುವೆ ನಿರಾಶ್ರಿತರೆಂದು ನೋಂದಾಯಿಸಿಕೊಂಡ ಬಾಂಗ್ಲಾ ಹಿಂದೂಗಳ ಸಂಖ್ಯೆ 69,71,000 ! ಇದು ಈ ಶತಮಾನದ ಉತ್ತರಾರ್ಧದ ಅತೀ ದೊಡ್ಡ ವಲಸೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿತು. ಹತ್ತಿರ ಹತ್ತಿರ ಮೂರು ಮಿಲಿಯನ್ ಜನರ ಕಗ್ಗೊಲೆ ನಡೆಯಿತು. ಎರಡು ಲಕ್ಷದಷ್ಟು ಮಾನಿನಿಯರ ಮೇಲೆ ಅತ್ಯಾಚಾರ ನಡೆಯಿತು. ಅಂದಿನ ಬಾಂಗ್ಲಾದ ಒಟ್ಟು ಜನಸಂಖ್ಯೆಯ ಶೇ. ನಾಲ್ಕರಷ್ಟು ಜನರ ಹತ್ಯೆಯಾಯಿತು. ಬಾಂಗ್ಲಾದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಅಲ್ಲಿನ ಪಾಕಿಸ್ತಾನೀ ಬೆಂಬಲಿತ ಮುಸ್ಲಿಂ ಮೌಲ್ವಿಗಳು ಬಹಿರಂಗವಾಗಿಯೇ ಬೆಂಬಲಿಸಿ, "ಅವರನ್ನು ನಾವು ಯುದ್ಧದಲ್ಲಿ ಗೆದ್ದುಕೊಂಡಿದ್ದೇವೆ. ಬಂಗಾಳೀ ಮಹಿಳೆಯರೆಲ್ಲಾ ಹಿಂದೂಗಳು. ಕುರಾನಿನ ಪ್ರಕಾರ ಆ ಮಹಿಳೆಯರನ್ನು ಹೇಗೆ ಬೇಕಾದರೂ ಉಪಯೋಗಿಸುವ ಹಕ್ಕು ಯುದ್ಧದಲ್ಲಿ ಗೆದ್ದವರಿಗೆ ಇದೆ " ಎನ್ನುತ್ತಾ  ಇನ್ನಷ್ಟು ಅತ್ಯಾಚಾರವೆಸಗುವಂತೆ ಕರೆಕೊಟ್ಟರು. ಕೆಲವು ವರದಿಗಳ ಪ್ರಕಾರ ನಾಲ್ಕು ಲಕ್ಷದಷ್ಟು ಮಾನಿನಿಯರು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಶಿಬಿರಗಳಲ್ಲಿ ಬಂಧಿಗಳಾಗಿ ಸತತ ಅತ್ಯಾಚಾರಕ್ಕೂ ಬಲಿಯಾದರು ಎಂಬುದಾಗಿ ಬಾಂಗ್ಲಾದೇಶೀ ಪತ್ರಕರ್ತ ಅನುಶಯ್ ಹುಸೈನ್ ವಿಷಾದ ವ್ಯಕ್ತಪಡಿಸಿದ್ದಾನೆ. "ಪಾಕಿಸ್ತಾನದ ಸೈನ್ಯ ಮಾರ್ಚ್ 25ರ ರಾತ್ರಿ ಆರಂಭಿಸಿದ ನರಮೇಧದ ಪರಿಣಾಮ ಲೆಕ್ಖವಿಲ್ಲದಷ್ಟು ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆಗೈಯ್ಯಲಾಯಿತು. ಹಿಂದೂಗಳ ಭೂಮಿ, ಅಂಗಡಿಗಳನ್ನು ಲೂಟಿ ಮಾಡಲಾಯಿತು. ಇದೊಂದು ವ್ಯವಸ್ಥಿತ ಹತ್ಯಾಕಾಂಡ" ಎಂದು ಸೆನೆಟರ್ ಎಡ್ವರ್ಡ್ ಎಂ ಕೆನಡಿ ನವೆಂಬರಿನಲ್ಲಿ ಹೇಳುತ್ತಾನೆ. ಬಂಧಿಸಲ್ಪಟ್ಟ ಪುರುಷರು ಸುನ್ನತ್ ಮಾಡಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಪುರುಷರ ಮೇಲೂ ಪಾಕ್ ಸೈನಿಕರು ಅತ್ಯಾಚಾರ ಎಸಗಿದ್ದನ್ನು ನೆದರ್ಲ್ಯಾಂಡಿನ ಜೆನ್ನೆಕೆರ್ ಆರೆನ್ಸ್ ದಾಖಲಿಸಿದ್ದಾರೆ. ಜಗತ್ತಿನ ಅತ್ಯಂತ ಭಯಾನಕ ನರಮೇಧ ಪ್ರಕರಣಗಳಲ್ಲಿ ಇದಕ್ಕೆ ಹನ್ನೆರಡನೆಯ ಸ್ಥಾನ.

1971ರಿಂದೀಚೆಗೆ ಅಲ್ಲಿ ಶತ್ರುವಿನ ಆಸ್ತಿ ಸ್ವಾಮ್ಯ ಕಾಯಿದೆ ಜಾರಿಯಲ್ಲಿದೆ. ಯಾರು ಶತ್ರು? ಅಲ್ಲೇ ವಾಸವಾಗಿದ್ದ ಹಿಂದೂಗಳು ಶತ್ರುಗಳು! ಯಾವ ಪುರುಷಾರ್ಥಕ್ಕೆ ಭಾರತ ಪ್ರತ್ಯೇಕ ದೇಶವನ್ನು ನಿರ್ಮಿಸಿತು? ಈ ಕಾಯಿದೆಯ ಪ್ರಕಾರ, ಹಿಂದೂವಿನ ಆಸ್ತಿಯನ್ನು ವಶಪಡಿಸಿಕೊಂಡ ಮುಸ್ಲಿಂನನ್ನು ಪ್ರಶ್ನಿಸುವಂತೆಯೇ ಇಲ್ಲ. ಹಿಂದೂಗಳ ಆಸ್ತಿಯನ್ನೆಲ್ಲ ಬಲಾತ್ಕಾರವಾಗಿ ಮುಸ್ಲಿಮರು ವಶಪಡಿಸಿಕೊಂಡರೆ ಅದನ್ನು ಮರಳಿ ಪಡೆಯಲು ಅವಕಾಶವೂ ಇಲ್ಲ. ಮುಸ್ಲಿಮರ ಸಂಖ್ಯೆ ಕಡಿಮೆ ಇರುವ ದೇಶಗಳಲ್ಲೇ ಅವರ ವಿರುದ್ಧ ತುಟಿಬಿಚ್ಚದ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದಲ್ಲಿ ಅಸ್ತಿತ್ವದಲ್ಲಿರುವುದೇ ಅನುಮಾನ. 1991ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಬಾಂಗ್ಲಾದಲ್ಲಿ ಹುಟ್ಟಿಕೊಂಡ ಪ್ರತೀಕಾರದ ಕಾಳ್ಗಿಚ್ಚಿನಲ್ಲಿ ಸುಮಾರು 200 ದೇವಾಲಯಗಳು ಧ್ವಂಸವಾದವು. ಹಿಂದೂಗಳನ್ನು ಕಂಡಲ್ಲಿ ಕತ್ತರಿಸಿ ಹಾಕಲಾಯಿತು. 2017ರಲ್ಲಿ 108 ಹಿಂದೂಗಳನ್ನು ಬಲಿಪಡೆಯಲಾಗಿದೆ; 235 ದೇವಾಲಯಗಳನ್ನು ಮತಾಂಧರು ಧ್ವಂಸ ಮಾಡಿದ್ದಾರೆ. ಆ ವರ್ಷ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಂಖ್ಯೆ 6474!

ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯಾಕಾಂಡ ನಡೆದಿದ್ದರೂ ಜನ ಸಂಘದ ನಾಯಕರ ಆಕ್ರೋಶವನ್ನು ತಪ್ಪಿಸಲು ಆಗಿನ ಕಾಂಗ್ರೆಸ್ ಸರಕಾರ ಈ ದಂಗೆ ಬಾಂಗ್ಲಾದೇಶದ ಬಂಗಾಳಿ ಸಮುದಾಯದ ವಿರುದ್ಧದ ನರಮೇಧ ಎಂದು ತೇಪೆ ಹಾಕಲು ಯತ್ನಿಸಿತು ಎಂದು ತನ್ನ 'ದಿ ಬ್ಲಡ್ ಟೆಲಿಗ್ರಾಮ್: ನಿಕ್ಸನ್, ಕಿಸ್ಸಿಂಜರ್ ಅಂಡ್ ಎ ಫಾರ್ಗಾಟನ್ ಜೆನೊಸೈಡ್' ಪುಸ್ತಕ(2013)ದಲ್ಲಿ ಗ್ಯಾರಿ ಜೆ ಬಾಸ್ ನಮೂದಿಸಿದ್ದಾನೆ. "ಹೌದು, ಅದು ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದೌರ್ಜನ್ಯ ಎನ್ನುವುದನ್ನು ಭಾರತದಲ್ಲಿ ಪ್ರಚುರವಾಗದಂತೆ ಮುಚ್ಚಿ ಹಾಕಲು ಪ್ರಯತ್ನಿಸಿದೆವು" ಎಂದು ಸ್ವರನ್ ಸಿಂಗ್ (ಅಂದಿನ ವಿದೇಶಾಂಗ ಸಚಿವ) ಲಂಡನ್‌ನಲ್ಲಿ ಭಾರತೀಯ ರಾಜತಾಂತ್ರಿಕರ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದ. ಭಾರತದಲ್ಲಿನ ಅಂದಿನ ಯುಎಸ್ ರಾಯಭಾರಿ, ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಮ್ಮ ಮಿತ್ರ 'ಪಾಕಿಸ್ತಾನ' ನರಮೇಧವನ್ನು ಮಾಡುತ್ತಿದೆ ಎಂದು ಹೇಳಿದಾಗ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮುಗುಮ್ಮಾಗಿ ಉಳಿದಿದ್ದ. ಅಂದರೆ ಹಿಂದೂಗಳ ರಕ್ಷಣೆಯ ವಿಷಯಕ್ಕೆ ಬಂದಾಗ ಬಂಗಾಳೀ ಮುಸಲ್ಮಾನನೂ ಮೌನವಾಗಿದ್ದ. ಜಗತ್ತಿನ ಅಂದಿನ ದೊಡ್ಡಣ್ಣ ಅಮೆರಿಕಾವೂ ಮೌನವಾಗಿತ್ತು. ಅಷ್ಟೇಕೆ, ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತವೇ ಮೌನವಾಗಿತ್ತು. ಮುಂದೆ ಭಾರತ ಯುದ್ಧ ಮಾಡಿ ಪಾಕಿಸ್ತಾನವನ್ನು ಸೋಲಿಸಿತು ಸರಿ. ಆದರೆ ಹಿಂದೂಗಳಿಗೆ ಶಾಶ್ವತವಾದ ಭದ್ರತೆಯನ್ನು ಗಿಟ್ಟಿಸಿಕೊಡುವಲ್ಲಿ ವಿಫಲವಾಯಿತು. ಭಾರತವೇ ಸೃಷ್ಟಿಸಿದ ಬಾಂಗ್ಲಾದೇಶ ಮೊದಲಿಗೆ ಸೆಕ್ಯುಲರ್ ಸಂವಿಧಾನವನ್ನು ಅಳವಡಿಸಿಕೊಂಡರೂ ಶೀಘ್ರವಾಗಿ "ಇಸ್ಲಾಮಿಕ್ ಒಗ್ಗಟ್ಟಿನ ಆಧಾರದ ಮೇಲೆ ಮುಸ್ಲಿಂ ರಾಷ್ಟ್ರಗಳ ನಡುವೆ ಸಹೋದರ ಸಂಬಂಧಗಳನ್ನು ಬಲಪಡಿಸಲು ಮತ್ತು  ಸಂರಕ್ಷಿಸಲು" ಎಂಬ ಹೊಸ ಷರತ್ತನ್ನು ಸೇರಿಸಿತು. ಜೂನ್ 9, 1988 ರಂದು ಇಸ್ಲಾಂ ಅನ್ನು ಬಾಂಗ್ಲಾದೇಶದ ಅಧಿಕೃತ ರಾಜ್ಯ ಧರ್ಮವನ್ನಾಗಿ ಮಾಡಲಾಯಿತು. ಇದಂತೂ ಮೊದಲೇ ಉನ್ಮತ್ತರಾದ ಮುಸ್ಲಿಮರಿಗೆ ಹಿಂದೂಗಳ ಮೇಲೆ ಸವಾರಿ ನಡೆಸಲು ಅವಕಾಶ ಕಲ್ಪಿಸಿತು. 

ಬಂಗಾಳದಲ್ಲಿ ಈ ಹತ್ಯಾಕಾಂಡ ಖಿಲಾಫತ್ ಸಮಯದಿಂದ ಶುರುವಾದದ್ದಲ್ಲ. ಖಿಲ್ಜಿಗಳು ಬಂಗಾಳವನ್ನು ಆಕ್ರಮಿಸಿದಾಗಲೇ ಅಲ್ಲಿಗೆ ಬೆಂಕಿ ಹಚ್ಚಿಟ್ಟಿದ್ದಾರೆ. ಖಿಲ್ಜಿಯೋ, ಖಿಲಾಫತ್ತೋ ಹೆಸರು ಮಾತ್ರ. ತನ್ನದಲ್ಲದ ಯಾವುದನ್ನೂ ಸಹಿಸದ, ಪುಸ್ತಕವೊಂದರಲ್ಲಿ ಕೊರೆದ ವಾಕ್ಯಗಳೇ ಪವಿತ್ರ ಎನ್ನುವ ಮೂರ್ಖರ ಮತಾಂಧತೆಯ ಫಲ ಇದು. ಅವರು ಹೊಕ್ಕ ತಾಣಗಳಲ್ಲಿ ಅವರಿಗಾಗದ ಸಂಸ್ಕೃತಿಗಳು ಈ ರೀತಿ ಬೆಂಕಿಗೆ ಆಹುತಿಯಾಗುತ್ತಲೇ ಇರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳದವರು ಸೋಲುತ್ತಿದ್ದಾರೆ, ಸಾಯುತ್ತಿದ್ದಾರೆ. ಎಂದಿಗೆ ಮೊಘಲರು, ಬ್ರಿಟಿಷರು ಹಿಂದೂಗಳನ್ನು ನಿಶ್ಶಸ್ತ್ರೀಕರಣಗೊಳಿಸಿದರೋ ಅಂದಿನಿಂದ ಹಿಂದೂವಿನ ಮೇಲಿನ ದೌರ್ಜನ್ಯಕ್ಕೆ ಪ್ರತಿರೋಧ ಕಡಿಮೆಯಾಯಿತು. ಅಪ್ರಾಯೋಗಿಕ, ಸರಿಯಾಗಿ ಅರ್ಥವಿಸಿಕೊಳ್ಳದ ಅಹಿಂಸೆಯ ಬೆನ್ನು ಬಿದ್ದು ಕ್ಷಾತ್ರತ್ವ ಹ್ರಾಸವಾಯಿತು. ತಮ್ಮ ಸಂಖ್ಯೆ ಹೆಚ್ಚಿರುವಾಗ ರಾಜಕಾರಣಿಗಳ ಸೆಕ್ಯುಲರ್ ಉನ್ಮಾದಕ್ಕೆ ಬಲಿಯಾಗಿ ಹಿಂದೂಗಳು ಪ್ರಾಣ ಕಳೆದುಕೊಂಡರೆ, ಸಂಖ್ಯೆ ಕಡಿಮೆಯಾದ ಕಡೆ ರಕ್ಷಣೆಗೆ ಯಾರೂ ಇಲ್ಲದೆ ಬಲಿಯಾಗುತ್ತಿದ್ದಾರೆ. ಅಂದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ಸಲುವಾಗಿ ಹಿಂದೂಗಳು ಸರ್ವತ್ರ ಸನ್ನದ್ಧರಾಗಬೇಕು. ಪಲಾಯನ ಮಾಡಿ ಸಾಯುವ ಬದಲು, ಎದುರಿಸಿ ಗೆಲ್ಲುವ ತಮ್ಮ ಹಿಂದಿನ ಕ್ಷಾತ್ರವನ್ನು ಮೈಗೂಡಿಸಿಕೊಳ್ಳಬೇಕು. ಯಾವ ಸರಕಾರವೂ, ಯಾವ ಆರಕ್ಷಕ ಪಡೆಯೂ, ಯಾವ ಅನ್ಯಶಕ್ತಿಯೂ ಹಿಂದೂಗಳನ್ನು ರಕ್ಷಿಸಲಾರದು. ತನ್ನ ರಕ್ಷಣೆಗೆ ತಾನೇ ಸನ್ನದ್ಧನಾಗಬೇಕು. ಅತಿಯಾದ ಸೆಕ್ಯುಲರ್ ಬುದ್ಧಿ ಪ್ರದರ್ಶಿಸುತ್ತಾ ಹಾವಿಗೆ ಹಾಲೆರೆಯುವುದನ್ನು, ತಮ್ಮೊಳಗೆ ಕಚ್ಚಾಡುವುದನ್ನು ಬಿಟ್ಟು ತಾವಿರುವ ದೇಶಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಪ್ರಬಲರಾಗಬೇಕು. ಕ್ಷಾತ್ರಬಲವನ್ನೂ ಹೆಚ್ಚಿಸಿಕೊಳ್ಳಬೇಕು. ಪೊಳ್ಳು ಅಹಿಂಸೆ, ಪೊಳ್ಳು ಜಾತ್ಯಾತೀತವಾದಕ್ಕೆ ಬಲಿಯಾಗದ ಭವಿಷ್ಯದ ಹಿಂದೂ ಜನಾಂಗವನ್ನು ಬೆಳೆಸಬೇಕು. ತಮ್ಮೊಳಗೆ ಬರಲು ಇಚ್ಛೆ ಉಳ್ಳವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಧರ್ಮದೀಕ್ಷೆ ನೀಡಬೇಕು. ಅದೇ ಅಸ್ತಿತ್ವ ಉಳಿಸಿ, ಬೆಳೆಸಲು ಇರುವ ದಾರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ