ಪುಟಗಳು

ಶುಕ್ರವಾರ, ನವೆಂಬರ್ 26, 2021

ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ

 ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ


ಇದ್ದಕ್ಕಿದ್ದಂತೆ ಸುಲ್ತಾನ ತಾನು "ಹಿಂದೂ" ಎಂದು ಉದ್ಘೋಷಿಸಿಕೊಂಡ. ತನ್ನ ಶ್ರದ್ಧೆ ಇನ್ನು ಹಿಂದೂ ಧರ್ಮದಲ್ಲಿ ಎಂದು ಘೋಷಿಸಿ ಅದನ್ನು ಕಾರ್ಯಗತಗೊಳಿಸಿದ. ಹಿಂದೂಗಳ ಮುಖಕ್ಕೆ ಉಗುಳುತ್ತಿದ್ದ ಮುಸಲರು ಬಗ್ಗಿ ನಮಸ್ಕಾರ ಮಾಡಲು ಆರಂಭಿಸಿದರು.  ಅರಮನೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡವು. ವೇದ ಮಂತ್ರ ಘೋಷ ಉಚ್ಚಕಂಠದಲ್ಲಿ ಮೊಳಗಿತು. ಭಾಂಗಿನ ಬದಲು ಘಂಟಾನಾದ, ಶಂಖಾನಾದ ಕೇಳಲಾರಂಭಿಸಿತು. ಮಹೋನ್ನತ ಆರತಿಗಳ ದಿವ್ಯ ಬೆಳಕಿನಲ್ಲಿ ದೇವತೆಗಳ ವಿಗ್ರಹಗಳ ಭವ್ಯ ಸ್ವರೂಪ ಕಣ್ಣುಕೋರೈಸಲಾರಂಭಿಸಿತು. ಕುರಾನಿನ ಅಯಾತ್'ಗಳ ಜಾಗದಲ್ಲಿ ಪೂಜೆ, ಭಜನೆಗಳು ನಡೆಯತೊಡಗಿದವು. ಜಿಜಿಯಾ ತಲೆಗಂದಾಯದ ಹೊರೆ ಇಳಿಯಿತು. ತೀರ್ಥಸ್ನಾನಗಳ ನಿಷೇಧವೂ ಅಳಿಯಿತು. ಹಲವು ವರ್ಷಗಳ ಬಳಿಕ ಸ್ವಾತಂತ್ರ್ಯದ, ಸಮಾನತೆಯ ಸವಿಯನ್ನುಂಡ ಹಿಂದೂಗಳ ಸಂಭ್ರಮ ಮೇರೆ ಮೀರಿತು. 



ಇದೇನು ಮುಸಲ್ಮಾನ ರಾಜನೊಬ್ಬ ಸ್ವ ಇಚ್ಛೆಯಿಂದ ಹಿಂದೂವಾಗುವುದು? ಸಾಧ್ಯವೇ ಇಲ್ಲ;  ಕಾಗಕ್ಕ-ಗುಬ್ಬಕ್ಕ ಕಥೆ ಇರಬೇಕು ಎಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಭಾರತದ ಇತಿಹಾಸದಲ್ಲಿ ಇಂತಹಾ ಒಂದು ಘಟನೆ ಮುಸಲರು ಪ್ರಬಲರಾಗಿದ್ದ ಕಾಲದಲ್ಲೇ ನಡೆದಿತ್ತು. ಆದರೆ ಹಿಂದೂ ಪ್ರಜ್ಞೆ ಉದ್ದೀಪನಗೊಂಡು ಪ್ರಜ್ವಲಿಸಿದ್ದನ್ನು ನಮ್ಮ ಇತಿಹಾಸಕಾರರು ಎಂದಾದರೂ ಬರೆದದ್ದಿದೆಯೇ? ಅಲ್ಲಾವುದ್ದೀನ್ ಖಿಲ್ಜಿ 1298ರಲ್ಲಿ ಗುಜರಾತಿಗೆ ದಾಳಿ ಮಾಡಿದಾಗ ಸೆರೆ ಸಿಕ್ಕಿದ ಓರ್ವ ಸುಂದರ ಬಾಲಕನನ್ನು ತನ್ನ ಸೇವಕನನ್ನಾಗಿಸಿಕೊಂಡ. ಮಲಿಕ್-ಕಾಫರನ ವೃತ್ತಾಂತದಂತೆಯೇ ಈತನ ಕಥೆಯೂ ಇದೆ. ಮಲಿಕ್-ಕಾಫರ್ ಹಿಂದೂಧರ್ಮಕ್ಕೆ ಕಂಟಕನಾಗಿ ಬಳಿಕ ಖಿಲ್ಜಿಯನ್ನೇ ಕೊಂದು ಸಿಂಹಾಸನವೇರಿ ಒಂದೇ ತಿಂಗಳಲ್ಲಿ ಕೊಲೆಯಾಗಿ ಹೋದರೆ ಈ ಚಾಣಾಕ್ಷ ಸಮಯ ಕಾದು ಕೆಲಸ ಸಾಧಿಸಿ ಹಿಂದುತ್ವವನ್ನು ಎತ್ತಿ ಹಿಡಿದ. ಈ ಹುಡುಗನನ್ನು ಮತಾಂತರಿಸಿ ಹಸನ್ ಎಂದು ಹೆಸರಿಟ್ಟು ಸುಲ್ತಾನ ಹಾಗೂ ಅವನ ಆಸ್ಥಾನಿಕರು ತಮ್ಮ ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳಲಾರಂಭಿಸಿದರು. ಶೀಘ್ರದಲ್ಲೇ ಯುದ್ಧ ವಿದ್ಯೆ ಕಲಿತ, ಅಪಾರ ಚಾಣಾಕ್ಷಮತಿಯೂ ಆಗಿದ್ದ ಇವನ ಹೆಸರನ್ನು ಖುಸ್ರುಖಾನ್ ಎಂದು ಬದಲಾಯಿಸಿ ಸೇನಾನಾಯಕನನ್ನಾಗಿಸಿ ಯುದ್ಧಕ್ಕೆ ಕಳುಹಿಸಲಾರಂಭಿಸಿದ ಅಲ್ಲಾವುದ್ದೀನ. ಮಲಿಕ್-ಕಾಫರನ ಬಳಿಕ ಅಲ್ಲಾವುದ್ದೀನನ ಮಗ ಮುಬಾರಿಕ್'ಗೆ ದೆಹಲಿಯ ಪಟ್ಟ ಸಿಕ್ಕಿತು. ಮುಬಾರಿಕ್ ನೊಡನೆ ವಿಶೇಷ ಸ್ನೇಹದಿಂದ ಇದ್ದ ಖುಸ್ರುಖಾನ್ ಮುಬಾರಿಕ್ ಪಟ್ಟ ಏರಲು ವಿಶೇಷ ಸಹಾಯವನ್ನೂ ಮಾಡಿದ. ಮಾತ್ರವಲ್ಲ ಆಡಳಿತ ಸೂತ್ರಗಳೆಲ್ಲವೂ ಬುದ್ಧಿವಂತನಾದ ಈತನ ಕೈಗೇ ಬಂತು. ಜೊತೆಗೆ ಮುಬಾರಿಕ್ನ ಅಂತಃಪುರದ ಲೈಂಗಿಕ ವ್ಯವಹಾರಗಳ ಮೇಲ್ವಿಚಾರಣೆಯೂ! ಅಲ್ಲಿ...ಅಲ್ಲಿ ಅವನಿಗೆ ಆಕೆಯ ಪರಿಚಯವಾಯಿತು.


ದೇವಲ ದೇವಿ. ಆಕೆಯದ್ದು ಆ ಕಾಲದ ಬಹುತೇಕ ಹಿಂದೂ ರಾಣಿಯರಂತೆ ದುರಂತ ಅಧ್ಯಾಯ. ಅಲ್ಲಾವುದ್ದೀನ್ ಗುಜರಾತನ್ನು ಆಕ್ರಮಿಸಿ ಅಲ್ಲಿನ ರಾಜನನ್ನು ಸೋಲಿಸಿ ಆತನ ರಾಣಿ ಕಮಲಾದೇವಿಯನ್ನು ಹೊತ್ತು ತಂದ. ತನ್ನ ಮಗಳು ದೇವಲದೇವಿಯೊಂದಿಗೆ ಮುಸಲ್ಮಾನ ರಕ್ಕಸರ ಕಣ್ಣುತಪ್ಪಿಸಿ ಕಾಡುಮೇಡು ಅಲೆದ ರಾಜ. ರಕ್ಷಣೆಗಾಗಿ ದೇವಗಿರಿಯ ಶಂಕರದೇವನೊಂದಿಗೆ ಆಕೆಯ ವಿವಾಹವೇನೋ ಆಯಿತು. ಆದರೆ ಅಲ್ಲಾವುದ್ದೀನ್ ಎಂಬ ರಕ್ಕಸನ ಜನಾನಾ ಸೇರಿದ್ದ ಆಕೆಯ ತಾಯಿ ಕಮಲಾದೇವಿ ಮಗಳನ್ನು ಹುಡುಕಿಸಿ ತಂದು ಇಸ್ಲಾಮಿಗೆ ಸೇರಿಸಬೇಕೆಂಬ ಆಸೆ ವ್ಯಕ್ತಪಡಿಸಿದಳಂತೆ! ಆ ಸಮಯದಲ್ಲೇ ದೇವಗಿರಿಯನ್ನು ಮತ್ತೆ  ಮುತ್ತಿದ ಮಲಿಕ್-ಕಾಫರ್ ದೇವಲ ದೇವಿಯನ್ನು ಸೆರೆ ಹಿಡಿದು ದೆಹಲಿಗೆ ರವಾನಿಸಿದ. ಅಲ್ಲಿ ಅಲ್ಲಾವುದ್ದೀನನ ಹಿರಿ ಮಗ ಖಿಜ್ರಾಖಾನ್ ಜೊತೆ ಆಕೆಗೆ ಮದುವೆ ಮಾಡಿಸಲಾಯಿತು. ಅಲ್ಲಾವುದ್ದೀನ ಸತ್ತಾಗ ಖಿಜ್ರಾಖಾನನನ್ನು ಬಂಧಿಸಿ ಆತನ ಕಣ್ಣುಕಿತ್ತು ಸಾಯಿಸಿದ ಮುಬಾರಿಕ್ ದೇವಲ ದೇವಿಯನ್ನು ತಾನು ವಿವಾಹವಾದ. ಹೀಗೆ ನರಕಮಯವಾದ ಜೀವನವನ್ನು ಆಕೆ ಸವೆಯುವಂತಾದರೂ ಆಕೆ ಹಿಂದೂವಾಗಿಯೇ ಉಳಿದಿದ್ದಳು. ಅಲ್ಲಿಯವರೆಗೆ ಮಡುಗಟ್ಟಿದ್ದ ಆಕ್ರೋಶಕ್ಕೆ ತಂಪೆರೆಯುವಂತೆ ತನ್ನಂತೆಯೇ ದೌರ್ಜನ್ಯಕ್ಕೆ ಗುರಿಯಾಗಿ ಎದೆಯಲ್ಲಿ ಅಪಾರ ಸೇಡು-ವಿದ್ವೇಷಗಳನ್ನು ಹೊತ್ತಿದ್ದ ಖುಸ್ರುಖಾನ್'ನ ಸಂಪರ್ಕವಾಯಿತು. ಆ ಕ್ಷೀಣ ಅವಕಾಶದ ಬೆಳಕೇ ಸತತ ಅತ್ಯಾಚಾರಕ್ಕೀಡಾಗುತ್ತಿದ್ದರೂ ಆಕೆಯ ಮನಸ್ಸನ್ನು ಪ್ರಫುಲ್ಲಗೊಳಿಸಿ ರಾಣಿಯಾಗಿ ತನ್ನ ಅಧಿಕಾರವನ್ನು ಚಲಾಯಿಸುವ ಹುಮ್ಮಸ್ಸನ್ನೂ ಆಕೆಯಲ್ಲಿ ಹುಟ್ಟಿಸಿತು. 


ಮುಬಾರಿಕ್ ಲಂಪಟನಾಗಿದ್ದ. ಹೆಂಗಸರಂತೆ ವೇಶ ಹಾಕಿ ತನ್ನ ಹುಡುಗಿಯರ ದಂಡಿನೊಡನೆ ಕುಣಿಯುತ್ತಿದ್ದ. ಆಡಳಿತದಲ್ಲಂತೂ ತನ್ನ ಗುಲಾಮ ಖುಸ್ರುಖಾನನ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದ. ಆ ಸಮಯದಲ್ಲಿ ಖುಸ್ರುಖಾನನಿಗೆ ತನ್ನ ಪೂರ್ವದ ಅಸ್ಮಿತೆಯ ಅರಿವು ತಾನಾಗಿ ಮೇಲೆದ್ದಿತು. ದೇವಲದೇವಿಯ ಸಂಪರ್ಕ ಸಿಕ್ಕಿದ ನಂತರವಂತೂ ಈ ಇಬ್ಬರೂ ಗುಜರಾತಿಗರೂ ಒಂದಾಗಿ ಕತ್ತಿ ಮಸೆಯಲು ಶುರುವಿಟ್ಟರು. ಹಿಂದೂಗಳ ಗೌರವವನ್ನು ಪುನರ್ ಸ್ಥಾಪಿಸಲು ಈರ್ವರೂ ಜೊತೆಯಾಗಿ ತಂತ್ರಗಳನ್ನು ಹೆಣೆಯತೊಡಗಿದರು. ಖುಸ್ರು ತನ್ನ ಅಣ್ಣನನ್ನು ಗುಜರಾತಿನ ರಾಜ್ಯವ್ಯಾಪಾರಿಯನ್ನಾಗಿಸಿದ. ತನ್ನ ಅಂಗರಕ್ಷಕರನ್ನಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಸೇನಾವೀರರನ್ನು ನಿಯುಕ್ತಿಗೊಳಿಸಿದ. ಅವನೇ ಸೇನಾಧಿಪತಿಯೂ ರಾಜನ ಆಪ್ತನಾಗಿ ರಾಜ್ಯವ್ಯವಹಾರಗಳನ್ನು ನೋಡಿಕೊಳ್ಳುವವನೂ ಆಗಿದ್ದ ಕಾರಣ ಪ್ರಶ್ನಿಸಲು ಯಾರಿಗೂ ಹಕ್ಕಿರಲಿಲ್ಲ. ತನ್ನ ನಡೆಗಳನ್ನು ಕಂಡು ರಾಜನಿಗೆ ದೂರು ನೀಡುತ್ತಿದ್ದ ಸುಲ್ತಾನನ ಒಡ್ಡೊಲಗದ ಹಿರಿತಲೆಗಳನ್ನು ಮುಗುಮ್ಮಾಗುಳಿಸಲು ಅರಸನನ್ನೇ ಪ್ರೇರೇಪಿಸಿ ಅವನನ್ನೇ ಮುಂದಿಟ್ಟುಕೊಂಡು ದಕ್ಷಿಣದ ಕಡೆ ದಂಡಯಾತ್ರೆ ನಡೆಸಿ ಹಿಂದೂರಾಜರನ್ನು ಸೋಲಿಸಿ ಖಜಾನೆಯನ್ನು ತುಂಬಿಸಿದ. ಸ್ವಲ್ಪಕಾಲದ ಬಳಿಕ ತಾನೊಬ್ಬನೇ ದಕ್ಷಿಣಕ್ಕೆ ದಂಡಯಾತ್ರೆ ನಡೆಸಿ ಮಲಬಾರಿನ ರಾಜನನ್ನು ಸೋಲಿಸಿದ. ಆದರೆ ಈ ಅವಧಿಯಲ್ಲಿ ದಕ್ಷಿಣದಲ್ಲಿ ಅಲ್ಲಲ್ಲಿ ಹಿಂದೂ ರಾಜರು ಸುಲ್ತಾನನ ವಿರುದ್ಧ ದಂಗೆಯೆದ್ದರು. ಇದರ ಸೂತ್ರಧಾರ ಖುಸ್ರುಖಾನ್ ಎಂದು ಅವನ ಶತ್ರುಗಳು ಸುಲ್ತಾನನಿಗೆ ದೂರುಕೊಟ್ಟರು. ದೆಹಲಿಯಲ್ಲಂತೂ "ಹಿಂದೂ ಅರಸರು, ಸರದಾರರು, ಸೇನೆಗಳು ಸುಲ್ತಾನನ ಮೇಲೆ ಯೋಜಿಸುತ್ತಿರುವ ಕ್ರಾಂತಿಗೆ ರೂಪುರೇಷೆ ಹಾಕಿದವ ಖುಸ್ರುಖಾನನೇ. ಗುಜರಾತಲ್ಲಿ ಖುಸ್ರುಖಾನನ ಸೋದರನೇ ಆಡಳಿತ ಸೂತ್ರ ಹಿಡಿದು, ರಜಪೂತರೆಲ್ಲಾ ರಾಣಾ ಹಮ್ಮೀರನ ನೇತೃತ್ವದಲ್ಲಿ ದೆಹಲಿಯಿಂದ ಮುಸಲರನ್ನು ಕಿತ್ತೆಸೆಯುತ್ತಾರೆ. ರಾಣಿ ದೇವಲದೇವಿಯ ಆದೇಶದ ಮೇರೆಗೆ ಖುಸ್ರುಖಾನ್ ಕಾರ್ಯಾಚರಿಸುತ್ತಿದ್ದಾನೆ" ಎಂದು ಮುಂತಾದ ಗುಲ್ಲೆಬ್ಬಿತು. ಆದರೆ ಸುಲ್ತಾನನಿಗೆ ಯಾವುದೇ ಗುಮಾನಿ ಬರದಂತೆ ಯುದ್ಧದಲ್ಲಿ ಗೆದ್ದ ಸಂಪತ್ತನ್ನೆಲ್ಲಾ ಅವನ ಪದತಲಕ್ಕೆ ಅರ್ಪಿಸಿ ಖುಸ್ರುಖಾನನೂ, ತನ್ನ ಹೃದಯದ ಭಾವನೆ ಹೊರಗೆ ಬಾರದಂತೆ ವರ್ತಿಸುತ್ತಿದ್ದ ದೇವಲದೇವಿಯೂ ತಮ್ಮಂಥ ಇಸ್ಲಾಮ್ ನಿಷ್ಠರು ಇನ್ನೊಬ್ಬರಿಲ್ಲ ಎಂಬ ಭಾವನೆ ಬಿತ್ತುತ್ತಿದ್ದುದರಿಂದ ಹಿಂದೂ ವಿರೋಧಿಗಳಿಗೆ ಕೈಕೈ ಹಿಸುಕಿಕೊಳ್ಳುವುದಲ್ಲದೆ ಬೇರೆ ದಾರಿಯಿರಲಿಲ್ಲ. ಖುಸ್ರುಖಾನ್ ತಂದ ಸಂಪತ್ತಿನ ರಾಶಿಯನ್ನು ಕಂಡು ಮುಬಾರಿಕ್ ಆತನನ್ನು ಬಂಧಿಸುವ ಬದಲು ಉಳಿದೆಲ್ಲಾ ಆಡಳಿತ ವಲಯಗಳನ್ನೂ ಅವನ ಸುಪರ್ದಿಗೆ ಒಪ್ಪಿಸಿಬಿಟ್ಟ! 


ಆಡಳಿತಾಧಿಕಾರಿಯಾದದ್ದೇ ತಡ, ಖುಸ್ರು ಖಾನ್ ಹಿಂದಕ್ಕೆ ಅಲ್ಲಾವುದ್ದೀನ ಹಿಂದೂಗಳ ಮೇಲೆ ವಿಧಿಸಿದ್ದ ಅತಿಯಾದ ನಿಷೇಧಗಳನ್ನೆಲ್ಲಾ ಒಂದೊಂದಾಗಿ ತೆರವುಗೊಳಿಸುತ್ತಾ ಬಂದ. ಹಿಂದೂಗಳಿಗೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿದ. ಮುಸಲ್ಮಾನರ ಉಗ್ರದಂಡನೆಗಳಿಂದ ಹೈರಾಣಾಗಿದ್ದ ಹಿಂದೂಗಳಲ್ಲಿ ಸಂತೋಷ ಸಮಾಧಾನಗಳು ತುಂಬಿ ಖುಸ್ರುಖಾನ ತಮ್ಮ ರಕ್ಷಕನೆಂದೇ ಅವರು ಭಾವಿಸತೊಡಗಿದರು. ಹಿಂದೂಗಳು ಮಾತ್ರವಲ್ಲದೆ ಮುಸಲ್ಮಾನ ರೈತರ ಮೇಲೆ ಹಾಕಿದ ಕರಭಾರವನ್ನು ಇಳಿಸಿದ. ರಣರಂಗದಲ್ಲಿ ಅವನ ಶೌರ್ಯ, ಸಮಾನ ದೃಷ್ಟಿ, ಆಡಳಿತ ನೈಪುಣ್ಯ ಹಾಗೂ ಕಟ್ಟುನಿಟ್ಟನ್ನು ಕಂಡ ಪ್ರತಿಷ್ಠಿತ ಮುಸಲ್ಮಾನರಲ್ಲಿ ಹಲವರು ದುರ್ನಡತೆಯ ಮುಬಾರಕನಿಗಿಂತ ಇವನೇ ಉತ್ತಮ ಎಂಬ ಭಾವನೆ ಉದಿಸಿ ಅವನ ಪರ ವಾಲಿದರು. ಇಂತಹಾ ಪೂರಕ ವಾತಾವರಣವನ್ನು ಸೃಷ್ಟಿಸಿದ ಬಳಿಕ ಖುಸ್ರುಖಾನ ಹಾಗೂ ದೇವಲದೇವಿ ಜೋಡಿ ತಮ್ಮ ಮಹತ್ವಾಕಾಂಕ್ಷೆಯ ಕ್ರಾಂತಿಯನ್ನು ಉದ್ಘೋಷಿಸಲು ಕಾಲ ಪಕ್ವವಾಗಿದೆಯೆಂದು ತಿಳಿದು ಅದಕ್ಕೆ ಸನ್ನದ್ಧರಾದರು.


ಒಂದು ದಿನ ಸುಲ್ತಾನ ಮುಬಾರಿಕ್ ಬಳಿ ಖುಸ್ರು "ನನ್ನ ಮಾತಿಗೆ ಓಗೊಟ್ಟು ಸಾವಿರಾರು ಮಂದಿ ಹಿಂದೂಗಳು ಇಸ್ಲಾಂ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಆದರೆ ಸರ್ವರ ಸಮ್ಮುಖದಲ್ಲಿ ಮತಾಂತರಗೊಳ್ಲಲು ಅವರಿಗೆ ಸಂಕೋಚವಿದೆ. ಅದಕ್ಕಾಗಿ ನಾನು ಕೆಲವು ಆಯ್ದ ಪ್ರಮುಖರನ್ನು ಅರಮನೆಗೆ ಕರೆತರುತ್ತೇನೆ. ಅವರಿಗೆ ಇಸ್ಲಾಂ ದೀಕ್ಷೆ ನೀಡಬೇಕು" ಎಂದು ಭಿನ್ನವಿಸಿಕೊಂಡ. ಅರಸನ ಒಪ್ಪಿಗೆಯನ್ನು ಗಿಟ್ಟಿಸಿಕೊಂಡು ಈ ನೆಪದಲ್ಲಿ ತನ್ನ ನಂಬುಗೆಯವರನ್ನು ಅರಮನೆಯೊಳಗೆ ಕರೆಸಿಕೊಂಡು ಆಯಕಟ್ಟಿನ ಸ್ಥಾನಗಳಲ್ಲಿ ನೇಮಿಸಿದ. ಆತನ ಸೋದರ ಗುಜರಾತಿನಲ್ಲಿ ಮುಸ್ಲಿಮರ ಆಳ್ವಿಕೆಯನ್ನು ಕೊನೆಗಾಣಿಸಲು ದಂಗೆಯನ್ನು ಆರಂಭಿಸಿ 25ಸಾವಿರ ಹಿಂದೂ ಸೈನಿಕರನ್ನು ಖುಸ್ರುಖಾನನ ಸಹಾಯಕ್ಕೆ ಕಳುಹಿಸಿದ. ಕೆಲವೇ ದಿನಗಳಲ್ಲಿ ರಾತ್ರೋರಾತ್ರಿ ಸುಲ್ತಾನ್ ಮುಬಾರಿಕ್ ನ ಕೊಲೆಯಾಗಿ ಹೋಯಿತು. ಮುಸ್ಲಿಮರ ಆಳ್ವಿಕೆಯಲ್ಲಿ ದೆಹಲಿಯ ಅರಮನೆಗಳಲ್ಲಿ ಸುಲ್ತಾನನ ಕೊಲೆ, ರಕ್ತಪಾತಗಳೇನು ಹೊಸವಿಷಯಗಳಲ್ಲ. ಅಲ್ಲಾವುದ್ದೀನನನ್ನು ಮಲಿಕ್-ಕಾಫರ್ ಕೊಂದಿದ್ದ; ಆತನನ್ನು ಮುಬಾರಿಕ್ ಕೊಂದಿದ್ದ. ಇದಾದ ಕೆಲವೇ ದಿನಗಳಲ್ಲಿ ಖುಸ್ರುಖಾನನ ಕಡೆಯವರೇ ಮುಬಾರಿಕನನ್ನು ಮಸಣಕ್ಕಟ್ಟಿದರೆಂದೂ ಸುದ್ದಿಯೂ, ಖುಸ್ರುಖಾನನೇ ಇನ್ನು ಮುಂದೆ ಸುಲ್ತಾನನೆಂದು ರಾಜಾದೇಶವೂ ಒಟ್ಟೊಟ್ಟಿಗೆ ಜನರ ಕಿವಿಗೆ ಬಿದ್ದು ಮುಸ್ಲಿಮರ ಜಂಘಾಬಲವೇ ಉಡುಗಿ ಹೋಯಿತು. ಜೊತೆಗೆ ಖುಸ್ರುಖಾನ್ ದೇವಲದೇವಿಯನ್ನು ವಿವಾಹವೂ ಆದ. ಇದಿಷ್ಟೇ ಆಗಿದ್ದರೆ ಬರೇ ಎಂದಿನ ರಾಜಕೀಯ ಕ್ರಾಂತಿಯೆಂದು ಜನ ಸುಮ್ಮನಾಗುತ್ತಿದ್ದರು. ಖುಸ್ರುಖಾನ ದೇವಲದೇವಿಯರು ಜೊತೆಗೂಡಿ ಮಾಡಿದ ಘೋಷಣೆಯೊಂದು ಮುಸ್ಲಿಮರ ಪಾದದಡಿಯ ಭೂಮಿ ಕಂಪಿಸುವಂತೆ ಮಾಡಿತು. ಅವರಿಬ್ಬರೂ ಜೊತೆಗೂಡಿ ಧಾರ್ಮಿಕ ಕ್ರಾಂತಿಗೂ ನಾಂದಿ ಹಾಡಿದ್ದರು. 1320ರ ಏಪ್ರಿಲ್ 15ರಂದು "ಹಿಂದೂವಾಗಿದ್ದ ನನ್ನನ್ನು ಇಸ್ಲಾಂಗೆ ಪರಿವರ್ತಿಸಿ ನನ್ನ ಜೀವನವನ್ನು ನರಕಮಯಗೊಳಿಸಲಾಗಿತ್ತು. ಇವತ್ತು ಈ ಹೇಯ ಮುಸಲ ಬದುಕನ್ನು ಕೊನೆಗೊಳಿಸಿ ಮತ್ತೆ ಹಿಂದೂಧರ್ಮವನ್ನು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ನರನಾಡಿಗಳಲ್ಲಿ ಹಿಂದೂ ರಕ್ತವೇ ಹರಿಯುತ್ತಿದೆ. ಹಿಂದೂಧರ್ಮವೇ ನನ್ನ ಜೀವಾಳ. ನಾನೊಬ್ಬ ಹಿಂದೂ ಎಂದು ಘಂಟಾಘೋಷವಾಗಿ ಸಾರುತ್ತಿದ್ದೇನೆ. ನಾನೀಗ ಅಖಂಡ ಭಾರತದ ಹಿಂದೂ ಚಕ್ರವರ್ತಿ. ಅಸಹಾಯಕಳಾಗಿ ಇಷ್ಟವಿಲ್ಲದ ಮದುವೆಗಳಿಂದ ಬೇಸತ್ತು ಇಸ್ಲಾಂನಡಿ ಬದುಕಿ ಈಗ ನನ್ನ ಧರ್ಮಪತ್ನಿಯಾಗಿರುವ ದೇವಲದೇವಿಯೂ ಇಸ್ಲಾಂನ್ನು ಧಿಕ್ಕರಿಸಿ ಹಿಂದೂ ಸಾಮ್ರಾಜ್ಞಿಯಾಗಿ ಬದುಕುತ್ತಾಳೆ. ಇಸ್ಲಾಂ ಮತೀಯರಾಗಿದ್ದರಿಂದ ತಟ್ಟಿದ್ದ ಪಾಪವನ್ನು ನಮ್ಮ ಈ ಪವಿತ್ರ ಪ್ರಜ್ಞೆ ತೊಡೆದು ಹಾಕಲಿ" ಎಂದು ಖುಸ್ರುಖಾನ್ ಘೋಷಣೆ ಮಾಡಿದ.


ವಿಚಿತ್ರವೆಂದರೆ ಹಿಂದೂವಾದರೂ ಅರಸ ತನ್ನ ಹೆಸರನ್ನು ನಾಸಿರ್-ಉದ್-ದೀನ್ ಎಂದು ಇಟ್ಟುಕೊಂಡ. ಅಪಾರವಾದ ಇಸ್ಲಾಂನ ಹಿಂಸೆಯನ್ನುಂಡು ಅವನ ಮೂಲ ಹೆಸರೇ ಅವನಿಗೆ ಮರೆತು ಹೋಗಿರಬೇಕು. ಆದರೆ ಅವನ ಮುಂದಿನ ಕಾರ್ಯದಲ್ಲಿ ಮಾತ್ರ ಹಿಂದೂ ಶ್ರದ್ಧೆಯೇ ಅಡಗಿತ್ತು. ಅಸಲಿಗೆ ನಾಸಿರ್-ಉದ್-ದೀನ್ ಎನ್ನುವುದರ ಅರ್ಥ ಧರ್ಮಶ್ರದ್ಧೆಯನ್ನು ಉಳಿಸಿಕೊಳ್ಳುವಾತ ಎಂದೇ. ತನ್ನ ಶ್ರದ್ಧೆ ಇನ್ನು ಮುಂದೆ ಹಿಂದೂ ಧರ್ಮದಲ್ಲಿ ಎಂದು ಅವನ ಉದ್ಘೋಷ ಸ್ಪಷ್ಟಪಡಿಸಿತ್ತು. ಹೀಗೆ ಘೋಷಣೆಯಾದ ಮರುಕ್ಷಣವೇ ಹಿಂದೂರಾಜ್ಯಗಳನ್ನು ಲೂಟಿಗೈದು ಸಂಗ್ರಹಿಸಿದ್ದ ಅಪಾರ ಸಂಪತ್ತನ್ನು ಹಿಂದೂ ಸೇನಾನಿ, ಸಾಮಾನ್ಯ ಹಿಂದೂ ಸೈನಿಕರಿಗೆಲ್ಲಾ ಹಂಚಿದ. ಸೈನಿಕರ ವೇತನಗಳೂ ಹೆಚ್ಚಳಗೊಂಡವು. ರೈತಾಪಿ ವರ್ಗದ ಮೇಲಿನ ತೆರಿಗೆಗಳೂ ಕಡಿತಗೊಂಡವು. ಧರ್ಮದ ಕಾರಣಕ್ಕಾಗಿ ಸೆರೆಯಲ್ಲಿದ್ದ ಹಿಂದೂಗಳನ್ನು, ಸುಲ್ತಾನನಿಗೆ ವಿರೋಧ ವ್ಯಕ್ತಪಡಿಸಿದ ಸಣ್ಣಪುಟ್ಟ ಕಾರಣಗಳಿಗೆ ಸೆರೆಯಾಗಿದ್ದ ಮುಸ್ಲಿಮರನ್ನೂ ಬಂಧನದಿಂದ ಮುಕ್ತಗೊಳಿಸಿದ. ಆಡಳಿತದಲ್ಲಿ ಸಮಾನದೃಷ್ಟಿಯನ್ನು ಇಟ್ಟುಕೊಂಡ ಕಾರಣ ಅವನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. 



ಹಿಂದೂಗಳನ್ನು ಬಸವಳಿಯುವಂತೆ ಮಾಡಿದ್ದ ಜಿಜಿಯಾ ತಲೆಗಂದಾಯವನ್ನು ತೆಗೆದು ಹಾಕಿ ಹಿಂದೂಗಳ ನೆಮ್ಮದಿಗೆ ಕಾರಣನಾದ. ತೀರ್ಥಯಾತ್ರೆ, ತೀರ್ಥಸ್ನಾನಗಳ ಮೇಲಿದ್ದ ನಿಷೇಧವನ್ನು ತೊಡೆದುಹಾಕಿದ. ಹಿಂದೂಗಳನ್ನು ನಿಕೃಷ್ಟವಾಗಿ ನೋಡುತ್ತಿದ್ದ ಮುಸ್ಲಿಮರೂ, ಮುಸ್ಲಿಮ್ ಸೈನಿಕ, ಸೇನಾನಿಗಳೂ ಈಗ ಬಗ್ಗಿ ನಮಸ್ಕರಿಸಲು ಆರಂಭಿಸಿದರು. ಅರಮನೆಗಳಲ್ಲಿ ಈಗ ಹಿಂದೂ ದೇವರುಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡು ನಿತ್ಯಪೂಜೆ ನಡೆಯುವಂತಾಯಿತು. ಕುರಾನ್ ಅಯಾತ್ ಗಳ ಬದಲು ವೇದಘೋಷ ಅನುರಣನಿಸಿತು. ಬಾಂಗ್ ಕೇಳುವ ಜಾಗದಲ್ಲಿ ಘಂಟಾನಾದ, ಶಂಖನಾದ ಮೊಳಗಿತು. ಉಗುಳಿಕೊಡುವ ಹೀನ ಆಹಾರದ ಜಾಗದಲ್ಲಿ ಪ್ರಸಾದ ವಿತರಣೆ ಆರಂಭವಾಯಿತು. ಅರಸನೂ ಅರಮನೆಯಲ್ಲಿ ಬೀಡುಬಿಟ್ಟ ಹಿಂದೂಗಳು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಬಹು ಶ್ರದ್ಧೆ, ಆಸ್ಥೆಗಳಿಂದ ನಡೆಸಿದರು. ಹಿಂದೂ ಪ್ರಜೆಗಳ, ಹಿಂದೂ ಸೈನಿಕರ ಸಂತೋಷ, ಉತ್ಸಾಹ, ಸಂಭ್ರಮಾಚರಣೆಗಳು ಮೇರೆ ಮೀರಿದವು. ಮುಸ್ಲಿಮರು ಗೆದ್ದಾಗ ಹಿಂದೂ ದೇವಾಲಯಗಳನ್ನು ಕೆಡವಿ ಮೂರ್ತಿಗಳನ್ನು ಭಗ್ನಗೊಳಿಸಿ ಮಸೀದಿಯನ್ನಾಗಿ ಪರಿವರ್ತಿಸುತ್ತಿದ್ದರು. ಈಗ ಹಿಂದೂಗಳು ದೇವಾಲಯಗಳನ್ನು ಕೆಡವಿ ಕಟ್ಟಿದ್ದ ಮಸೀದಿಗಳನ್ನು ಉರುಳಿಸಿ ದೇವಾಲಯಗಳನ್ನು ಮರು ಸ್ಥಾಪಿಸಿ ಅಲ್ಲಿ ಹಿಂದೂ ಧಾರ್ಮಿಕ ದೀಪ ಬೆಳಗುವಂತೆ, ವೇದಘೋಷ ಮೊಳಗುವಂತೆ ಮಾಡಿದರು. ಅಷ್ಟಕ್ಕೇ ಸುಮ್ಮನಾಗದ ಹಿಂದೂ ಚಕ್ರವರ್ತಿ ಬಲಾತ್ಕಾರವಾಗಿ ಜನಾನಾಕ್ಕೆ ದೂಡಲ್ಪಟ್ಟವರನ್ನು ಅವರಿಚ್ಛೆಯಂತೆ ಮತ್ತೆ ಹಿಂದೂಗಳನ್ನಾಗಿಸಿ ಹಿಂದೂ ಸೈನಿಕರಿಗೆ, ಹಿಂದೂ ಅಧಿಕಾರಿಗಳಿಗೆ ಮದುವೆ ಮಾಡಿಸಿದ. ವ್ಯಾವಹಾರಿಕವಾಗಿಯೂ ಅರಸ ಜಾಣ್ಮೆಯಿಂದ ವರ್ತಿಸಿದ. ದೆಹಲಿಯಲ್ಲಿ ಒಮ್ಮೆಗೇ ಎಲ್ಲವನ್ನೂ ಬದಲಾಯಿಸಿದರೆ ಬಹು ಅಪಾಯವಾಗುವ ಸಾಧ್ಯೆತೆ ಹೆಚ್ಚಿತ್ತು. ಅದಕ್ಕಾಗಿ ಯಾವೆಲ್ಲಾ ಮುಸಲ್ಮಾನ ಅದಿಕಾರಿಗಳು, ಮುಲ್ಲಾ-ಮೌಲ್ವಿಗಳು ಹಿಂದೂ ಸಾಮ್ರಾಜ್ಯ ಉರುಳಿಸಲು ಪಿತೂರಿ ಮಾಡಬಹುದೆಂಬ ಗುಮಾನಿಯಿತ್ತೋ ಅಂಥವರ ಬಳಿ ನಯನಾಜೂಕಿನಿಂದ ಮಾತಾಡಿ, ಉಪಾಹಾರ - ಉಡುಗೊರೆಗಳನ್ನು ಕೊಟ್ಟು ತನ್ನ ದಾಕ್ಷಿಣ್ಯಕ್ಕೆ ಕಟ್ಟುಬೀಳುವಂತೆ ಮಾಡಿದ. ಮುಸ್ಲಿಂ ರೈತರಿಗೂ, ಮುಸ್ಲಿಂ ಯೋಧರಿಗೂ ಹಿಂದೂಗಳಿಗೆ ಸಮಾನವಾದ ನಾಗರಿಕ ಹಕ್ಕನ್ನು ನೀಡಿ ತೆರಿಗೆಯಿಂದ ವಿನಾಯಿತಿ ನೀಡಿದ್ದ. ತನ್ನ ಬಲ ಸೇನೆಯಲ್ಲಿ ಎಂದು ನಂಬಿದ್ದ ಆತ ಆಯಕಟ್ಟಿನ ಜಾಗದಲ್ಲಿ ತನ್ನ ನಂಬಿಕಸ್ಥರಾದ ಹಿಂದೂಗಳನ್ನೇ ನೇಮಿಸಿದ್ದ. ಅವನ ಸುವ್ಯವಸ್ಥಿತ ಆಳ್ವಿಕೆಯ ಫಲವಾಗಿ ತೆರಿಗೆ, ಕಪ್ಪಗಳೆಲ್ಲವೂ ಸರಿಯಾದ ಕಾಲಕ್ಕೆ ಸಂಗ್ರಹವಾಗಿ ಖಜಾನೆಯೂ ತುಂಬಿ ತುಳುಕಿತು; ದೇಶದಲ್ಲಿ ಸಮೃದ್ಧತೆ-ಸಮಾಧಾನವೂ ತುಂಬಿತು. ದೆಹಲಿಗೆ ಕಪ್ಪವನ್ನೊಪ್ಪಿಸುತ್ತಿದ್ದ ಹಿಂದೂ ರಾಜರನ್ನು ಸ್ವತಂತ್ರರಾಗಲೂ ಆತ ಅವಕಾಶ ಕೊಟ್ಟ.


ಇಂತಹಾ ಮಹಾ ಹಿಂದೂ ಕ್ರಾಂತಿಯಾಗಿ ಒಂದು ವರ್ಷ ತುಂಬುವಷ್ಟರಲ್ಲಿ ಕೆಲವು ಮುಸಲ್ಮಾನ್ ಅಧಿಕಾರಿಗಳು ಹಿಂದೂ ರಾಜನನ್ನು ಪದಚ್ಯುತಗೊಳಿಸಲು ಪಿತೂರಿ ನಡೆಸಿದರು. ಪಂಜಾಬ್  ಪ್ರಾಂತ್ಯದ ಆಡಳಿತಗಾರ ಘಿಯಾಸುದ್ದೀನ್ ಇದರ ನೇತೃತ್ವ ವಹಿಸಿ ಅರಸನ ಕೈಕೆಳಗಿನ ಮುಸ್ಲಿಂ ಅಧಿಕಾರಿಗಳಿಗೆಲ್ಲಾ ಪತ್ರ ರವಾನಿಸಿದ. ಅವರು ಇದನ್ನೆಲ್ಲಾ ಅರಸನ ಕೈಗೇ ಇತ್ತರು. ಕೂಡಲೇ ಕಾರ್ಯ ಪ್ರವೃತ್ತನಾದ ರಾಜ ಎಳವೆಯಲ್ಲೇ ಈ ಪಿತೂರಿಯನ್ನು ಮುರುಟಿಸಬೇಕೆಂದು ತಾನೇ ಯುದ್ಧಕ್ಕೆ ಮುಂದಾಗಿ ಘಿಯಾಸುದ್ದೀನನ ಮೇಲೆ ಏರಿ ಹೋದ. ಮೊದಲ ದಿನ ಜಯ ಲಭಿಸಿತು. ಅಷ್ಟರಲ್ಲಿ ಹಿಂದೂ ಸೇನೆಯಲ್ಲಿದ್ದ ಮುಸ್ಲಿಂ ಸೇನಾಧಿಕಾರಿಗಳು ಸೈನಿಕರು ಗುಟ್ಟಾಗಿ ಘಿಯಾಸುದ್ದೀನನಿಗೆ ಬೆಂಬಲ ಕೊಡುವ ಪ್ರಸ್ತಾಪವೊಡ್ಡಿ ಹಿಂದೂ ಸೇನೆ ಸೋಲುವಂತೆ ಮಾಡಿದರು. ಯಥಾಪ್ರಕಾರ ಹಿಂದೂ ಅರಸನ ಕತ್ತು ಕೊಯ್ಯಲಾಯಿತು. ವಿಪರ್ಯಾಸವೆಂದರೆ ಯಾವೆಲ್ಲಾ ಹಿಂದೂ ಅರಸರಿಗೆ ಈ ಹಿಂದೂ ಚಕ್ರವರ್ತಿ ಬೆಂಬಲ ಕೊಟ್ಟು ಅವರನ್ನು ಸ್ವತಂತ್ರಗೊಳಿಸಿದ್ದನೋ ಅವರೆಲ್ಲಾ ನಿರ್ಣಾಯಕವಾಗಿ ಕೇಂದ್ರದಲ್ಲಿ ಹಿಂದೂ ಅಧಿಕಾರ ಸ್ಥಾಪನೆಗೆ ಸಹಕಾರವನ್ನೇ ಕೊಡಲಿಲ್ಲ. ಹಾಗಾಗಿ ಮತ್ತೆ ಎದ್ದಿದ್ದ ಹಿಂದೂ ವೀರ ಅಸ್ಮಿತೆಯ ಪ್ರಜ್ಞೆಗೆ ಕೆಂದ್ರದ ಅಧಿಕಾರ ಒಂದೇ ವರ್ಷಕ್ಕೆ ಸೀಮಿತವಾಯಿತು. ಆದರೂ ಧೀರ ಪೃಥ್ವೀರಾಜನ ಬಳಿಕ ದೆಹಲಿಯ ಗದ್ದುಗೆಯನ್ನೇರಿದ ಚಕ್ರವರ್ತಿಯೆಂದು ಆ ಹಿಂದೂ ವೀರನ ಕೀರ್ತಿ ಚಿರಸ್ಥಾಯಿಯಾಯಿತು. ಈ ವೀರನ ಜೊತೆ ನಿಂತ ಅವನ ಸೋದರ ಹಾಗೂ ದೇವಲದೇವಿಗೂ ಹಿಂದೂಗಳಿಂದ ಗೌರವಾರ್ಪಣೆಯಾಗಬೇಕು. ನತದೃಷ್ಟ ಹಿಂದೂಗಳು ಅಪಾರವಾದ ಮುಸ್ಲಿಂ ದೌರ್ಜನ್ಯದ ನಡುವೆ ಕೆಲ ಸಮಯಕ್ಕಾದರೂ ಹಿಂದೂ ಚಕ್ರವರ್ತಿಯೊಬ್ಬನ ಸುಂದರ ಸಮಾನ ದೃಷ್ಟಿಯ ಆಳ್ವಿಕೆಯಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಅದಕ್ಕಿಂತಲೂ ಮುಖ್ಯವಾದುದು ಇನ್ನೊಂದು; ಕೆಳವರ್ಗದಲ್ಲಿ ಜನಿಸಿ ಮುಸಲ್ಮಾನನಾಗಿ, ಮುಸ್ಲಿಮರ ಲೈಂಗಿಕ ದಾಹಕ್ಕೆ ಆಹಾರವಾಗಿ ತನ್ನ ಕಾರ್ಯದಕ್ಷತೆ, ರಣಚಾತುರ್ಯ, ರಾಜಕೀಯ ತಂತ್ರಜ್ಞತೆ, ಧೈರ್ಯ-ಚಾಣಾಕ್ಷತೆಯಿಂದ ಬೆಳೆದು ತನ್ನ ಧ್ಯೇಯವನ್ನು ಸಮಯ ಬಂದಾಗ ಸಾಧಿಸಿ ಮತ್ತೆ ಹಿಂದೂವಾಗಿ, ಹಿಂದೂ ಚಕ್ರವರ್ತಿಯಾಗಿ ಕೆಲಕಾಲವಾದರೂ ಹಿಂದೂಗಳಿಗೊಂದು ನೆಮ್ಮದಿಯ ಬಾಳುಕೊಟ್ಟದ್ದು ಕಡಿಮೆ ಸಾಧನೆಯೇನಲ್ಲ; ಅದೂ ಮತಾಂಧ ಮುಸ್ಲಿಮರ ನಡುವೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ