ಪುಟಗಳು

ಗುರುವಾರ, ಮಾರ್ಚ್ 17, 2022

ಹಿಂದುತ್ವವನ್ನು ಹಿಂದೂಗಳಿಂದ ಬೇರ್ಪಡಿಸುವ ಕುತ್ಸಿತ ರಾಜಕಾರಣ

ಹಿಂದುತ್ವವನ್ನು ಹಿಂದೂಗಳಿಂದ ಬೇರ್ಪಡಿಸುವ ಕುತ್ಸಿತ ರಾಜಕಾರಣ


ಸ್ವಾತಂತ್ರ್ಯ ಸಂಗ್ರಾಮದಲ್ಲಿ ಖಡ್ಗಗಳು ತಾಡನಗೊಂಡಾಗ ಕೋರೈಸಿದ ಬೆಳಕಿನಲ್ಲಿ, ಕಾರಾಗೃಹದ ಕತ್ತಲ ಕೋಣೆಯಲ್ಲಿ ಆಧಾರಗಳ ಸಹಿತವಾಗಿ, ಅಧ್ಯಯನ ಪೂರ್ಣವಾಗಿ ರಚಿಸಲ್ಪಟ್ಟ ಕೃತಿ ಸಾವರ್ಕರರ ಹಿಂದುತ್ವ. ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ, ಪುಣ್ಯಭೂಮಿಯಾಗಿ ಯಾರು ಸ್ವೀಕರಿಸುತ್ತಾನೋ ಅವನನ್ನು ಹಿಂದೂ ಎಂದು ಎಂದೆಂದಿಗೂ ಅಪ್ಪಿಕೊಂಡಿದ್ದ ಈ ದೇಶದ ಜೀವನಪದ್ದತಿಯನ್ನು ಸಾಧಾರವಾಗಿ ನಿರೂಪಿಸಿದ ಕೃತಿ ಅದು. ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ, ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ, ಭಾರತವೇ ಅವರಿಗೆ ಮಾತೃಭೂಮಿ ಎಂದು ಸಾರಿ ಹೇಳಿದ ಕೃತಿ. ವೈದಿಕ - ಅವೈದಿಕರೆಲ್ಲರೂ ಒಂದೇ ರಾಷ್ಟ್ರವಾಗಿ, ಒಂದೇ ಸಂಸ್ಕೃತಿಯ ಉಸಿರಾಗಿ, ಒಂದೇ ರಕ್ತದವರಾಗಿ ಒಂದೇ ರಾಷ್ಟ್ರೀಯ ಧ್ವಜದ ನೆರಳಿನಲ್ಲಿ ಬದುಕಿದ್ದರು ಎಂದುಸುರಿದ ಮಹತ್ವದ ಗ್ರಂಥ ಹಿಂದುತ್ವ.

ಹಿಂದುತ್ವ ಕೇವಲ ಒಂದು ಪದವಲ್ಲ; ಅದು ಜೀವನ ಪದ್ದತಿ; ಹಿಂದೂವಿನ ಚೈತನ್ಯದ ಸೆಲೆ; ಮನುಕುಲದ ಸ್ಫೂರ್ತಿ. ಹಿಂದುತ್ವದಿಂದಲೇ ಹಿಂದುಸ್ಥಾನ ಉಳಿದಿದೆ. ಇಸ್ಲಾಂನ ಕತ್ತಿಯ ಅಲುಗಿಗೆ ಸಿಲುಕಿ ರಾಷ್ಟ್ರ, ಸಂಸ್ಕೃತಿಗಳೇ ನಾಶವಾಗಿ ಹೋದಾಗ ಇಲ್ಲಿ ಅದಕ್ಕೆ ತಕ್ಕ ಉತ್ತರ ಕೊಟ್ಟು ರಾಷ್ಟ್ರವನ್ನೂ, ಸಂಸ್ಕೃತಿಯನ್ನೂ ಉಳಿಸಿದ ಶೌರ್ಯ, ಪ್ರತಾಪವೇ ಹಿಂದುತ್ವ. ಹಿಂದುತ್ವವೇ ಈ ದೇಶದ ಆತ್ಮವಾದ ಕಾರಣದಿಂದಲೇ ಕನ್ನಡಿಗರು ಕಾಶ್ಮೀರಿಗಳಿಗೊದಗಿದ ದುಃಖಕ್ಕೆ ಕಣ್ಣೀರು ಸುರಿಸುವಂತಾಯಿತು. ಈ ಬಂಧವನ್ನು ಗುರುತಿಸಲು ಒಪ್ಪದ ವೈಚಾರಿಕ ಲೋಕದ ವಿಕೃತಿಗಳಿಗೆ ಇಂದಿಗೂ ಸಾವರ್ಕರ್‌ ಅರ್ಥವಾಗಿಲ್ಲ. ಹಿಂದೂ ಎಂಬ ಕಾರಣಕ್ಕಾಗಿಯೇ ನಮ್ಮನ್ನು ಶತ್ರುಗಳು ದ್ವೇಷಿಸಿದ್ದು; ಈ ಜೀವನ ಪದ್ದತಿಯ ಉಳಿವಿಗಾಗಿಯೇ ಶಾಲಿವಾಹನನಿಂದ ಶಿವಾಜಿಯವರೆಗೆ ನಮ್ಮ ಸಾವಿರಾರು ವೀರರು ಸಂಘರ್ಷ ನಡೆಸಿದ್ದು! ಗಾಂಧಿಯ ಹಿಂದ್ ಸ್ವರಾಜ್‌ ಕೃತಿಯ ಚರ್ಚೆಗಳಿಗೆ ಸಿಕ್ಕಿದ ವ್ಯಾಪ್ತಿಯ ಒಂದಂಶವಾದರೂ ಈ ಕೃತಿಗೆ ಸಿಕ್ಕಿದೆಯೇ? ಈ ಕೃತಿಯನ್ನು ಓದದೆಯೇ ಪುಟಗಟ್ಟಲೆ ಬರೆದ, ಬೊಬ್ಬಿರಿದು ವಿರೋಧಿಸಿದವರಿಗೇನೂ ಕಡಿಮೆಯಿಲ್ಲ. ಈ ದೇಶವನ್ನು ರಾಷ್ಟ್ರವಾಗಿ, ಪಿತೃಭೂಮಿಯಾಗಿ, ಪುಣ್ಯಗರ್ಭೆಯಾಗಿ ಒಪ್ಪುವ ಎಲ್ಲರನ್ನೂ ಏಕತ್ರಗೊಳಿಸಿದ ಸೂತ್ರವೇ ಹಿಂದುತ್ವ ಎಂದು ಸಾವರ್ಕರ್ ಪ್ರತಿಪಾದಿಸಿದ ತತ್ತ್ವ, ಭಾರತೀಯರ ಸಾಂಸ್ಕೃತಿಕ ಅಸ್ಮಿತೆಯನ್ನು ಭಗ್ನಗೊಳಿಸಲು, ಈ ದೇಶವನ್ನು ಒಡೆದು ಚೂರಾಗಿಸಲು  ಹೊಂಚು ಹಾಕಿದ್ದ ಪ್ರಭೃತಿಗಳು ತತ್ತರಿಸುವಂತೆ ಮಾಡಿತು. ಹಿಂದೂಗಳನ್ನು ಏಕಸೂತ್ರದಲ್ಲಿ ಬಂಧಿಸಿದ ಅದೇ ಹಿಂದುತ್ವವನ್ನು ಇಂದು ಸಾಮಾನ್ಯ ಹಿಂದೂವಿನಿಂದ ದೂರೀಕರಿಸಲು ಭಾರತವನ್ನು ಛಿದ್ರಗೊಳಿಸಲು ಮುಂದಾಗಿರುವ ಶಕ್ತಿಗಳು ಪ್ರಯತ್ನಿಸುತ್ತಿದ್ದಾರೆ. 

ರಾಜಕಾರಣದಲ್ಲಿ ಬಲಪಂಥೀಯ ಪಕ್ಷ ಪ್ರಬಲವಾಗುತ್ತಿದ್ದಂತೆ ತಮ್ಮ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ತನ್ನಂತೆಯೇ ಅಧಿಕಾರದಾಹಿಗಳಾದ ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಿತು. ಅದೂ ಸಾಲದಾದಾಗ ಹಿಂದೂಗಳನ್ನು ಜಾತಿಯ ಆಧಾರದಲ್ಲಿ ಒಡೆಯುವ ಪ್ರಯತ್ನಕ್ಕೆ ಶುರುವಿಟ್ಟಿತು. ಆದರೆ ಈ ತಂತ್ರಗಳೆಲ್ಲಾ ವಿಫಲವಾಗಿ ಬಹು ಸಂಖ್ಯೆಯಲ್ಲಿ ಇವರ ಬಲಿಪಶುಗಳಾಗಿದ್ದ ದಲಿತ ಮತ್ತಿತರ ಹಿಂದುಳಿದ ವರ್ಗಗಳ ಪ್ರೀತಿ ಬಿಜೆಪಿಯ ಕಡೆಗೆ ವಾಲಿದಾಗ ಕಾಂಗ್ರೆಸ್ ಪಾಳಯಕ್ಕೆ ನಿಂತ ನೆಲ ಕುಸಿದ ಅನುಭವವಾಯಿತು. ಅಂತಹಾ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಎಲ್ಲಾ ಪಕ್ಷಗಳು ಆರಂಭಿಸಿದ ಪರಿಪಾಠ ಭಾಜಪಾ ನೇತೃತ್ವದ ಕೇಂದ್ರ ಸರಕಾರ ತರುವ ಎಲ್ಲಾ ಯೋಜನೆಗಳನ್ನು ಶತಾಯಗತಾಯ ವಿರೋಧಿಸುವುದು. ಸಿಎಎ, ಎನ್ ಆರ್ ಸಿ, ರಾಮಮಂದಿರ ಸಹಿತ ದೇವಾಲಯಗಳ ಪುನರುತ್ಥಾನ, 370ನೇ ವಿಧಿಯ ರದ್ದು, ಗಡಿರಸ್ತೆ ಕಾಮಗಾರಿ, ಶಸ್ತ್ರಾಸ್ತ್ರ ಖರೀದಿ ಮುಂತಾದ ಎಲ್ಲವನ್ನೂ ವಿರೋಧಿಸಲು ಹಣ ಕೊಟ್ಟು ಜನರನ್ನು ಒಟ್ಟು ಸೇರಿಸಿ ದೇಶದ ಅಭಿವೃದ್ಧಿಗೇ ಈ ಪಡೆಗಳು ಅಡ್ಡಗಾಲಾದವು. ರೈತರ ಹೆಸರಿನಲ್ಲಿ ಗೂಂಡಾಗಳನ್ನು, ದೇಶವಿರೋಧಿಗಳನ್ನು ಕರೆತಂದು ವರ್ಷಕ್ಕೂ ಮಿಗಿಲು ವ್ಯವಸ್ಥೆಯನ್ನು ಹದಗೆಡಿಸಲು, ದೇಶವನ್ನು ದಳ್ಳುರಿಗೆ ತಳ್ಳಲು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಯಿತು. ಇವೆಲ್ಲದರ ಹಿಂದೆ ಕೇವಲ ದೇಶವನ್ನು ಅಸ್ಥಿರಗೊಳಿಸುವ ಉದ್ದೇಶ ಮಾತ್ರವಿದ್ದುದಲ್ಲ; ಈ ರೀತಿಯ ನಕಲಿ ದಂಗೆಗಳ ಮೂಲಕ ರೈತರನ್ನು, ಕಾರ್ಮಿಕರನ್ನು, ದಲಿತರನ್ನು, ಮುಸ್ಲಿಮರನ್ನು, ರಾಜ್ಯವಾರು ಬಲಿಷ್ಟವಾಗಿದ್ದ ಸಮುದಾಯಗಳನ್ನು ತಮ್ಮ ಮತಬ್ಯಾಂಕ್ ಆಗಿ ಉಳಿಸಿಕೊಳ್ಳುವ ಉದ್ದೇಶವೂ ಈ ಪಕ್ಷಗಳಿಗಿತ್ತು. ಅಂದರೆ ಅಧಿಕಾರವನ್ನು ಹಿಡಿಯಲು ದೇಶದ್ರೋಹದ ಮಾರ್ಗಕ್ಕಿಳಿಯಲೂ ಈ ಪಕ್ಷಗಳು ಹಿಂದೆಮುಂದೆ ನೋಡಲಿಲ್ಲ. ಆದರೆ ಪ್ರಧಾನಿ ಮೋದಿಯವರ ಚಾಣಾಕ್ಷ ರಾಜನೀತಿಯ ಫಲದಿಂದ ಅವರ ಆಟಗಳಾವುವೂ ನಡೆಯಲಿಲ್ಲ. ಕೆಲವು ರಾಜ್ಯಗಳಲ್ಲಿ ಗೂಂಡಾಗಿರಿ, ಮುಸ್ಲಿಂ ಮತಾಂಧತೆಯ ಬಲದಿಂದ ಆ ಪಂಗಡ ಅಧಿಕಾರ ಹಿಡಿದಿರಬಹುದು. ಆದರೆ ಅವ್ಯಾವುವೂ ಬಹುಕಾಲ ಬಾಳುವಂತಹುದ್ದಲ್ಲ.

ತಮ್ಮ ಬೇಳೆ ಬೇಯಿಸಿಕೊಳ್ಳಲು ಯಾವ ಮಾರ್ಗವೂ ತೋಚದಿದ್ದಾಗ ಈ ಪಕ್ಷಗಳಿಗೆ ಸಿಕ್ಕಿದ ಅಸ್ತ್ರವೇ ಹಿಂದುತ್ವ. ತೀರಾ ಇತ್ತೀಚೆಗೆ ಅವರೇ ಸಾಕಿಕೊಂಡ ಎಡಚಿಂತಕರು ಹಿಂದುತ್ವವನ್ನು ಟೀಕಿಸುತ್ತಾ ಬಂದದ್ದು, ಇಡೀ ಪಟಾಲಂ ವೀರ ಸಾವರ್ಕರರನ್ನು ಟೀಕಿಸುತ್ತಾ ಬಂದದ್ದು, ಮುಂಬೈ ದಾಳಿಯನ್ನು ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ಮಾಡಿದ್ದು ಮುಂತಾದುವನ್ನು ಬಿಟ್ಟರೆ ಹಿಂದುತ್ವದ ಸುದ್ದಿಗೆ ಈ ಪಕ್ಷಗಳು ಇಳಿದಿರಲಿಲ್ಲ. ಸಾವರ್ಕರ್ ಬಗ್ಗೆ ಮಾತಾಡಿದಾಗಲಂತೂ ತಾವೇ ಬೆತ್ತಲಾಗಿ ಬಿಟ್ಟವು ಈ ಪಕ್ಷಗಳು. ಡಿಜಿಟಲ್ ಯುಗದ ಪರಿಣಾಮವಾಗಿ ಸಾಮಾನ್ಯ ನಾಗರಿಕನೂ ಇತಿಹಾಸದಲ್ಲಿ ಆಸಕ್ತಿ ಹೊಂದಿ, ಸಾಕ್ಷಿಗಳನ್ನು ಆಗಿಂದಾಗಲೇ ಮುಖಕ್ಕೆ ಹಿಡಿದ ಕಾರಣ ಈ ಕುತಂತ್ರವೂ ಹೆಚ್ಚು ದಿನ ಬಾಳಲಿಲ್ಲ. ಜೊತೆಗೇ ಗಾಂಧಿ, ನೆಹರು ಹಾಗೂ ಕಾಂಗ್ರೆಸ್ ಪಕ್ಷದ ನಿಲುವುಗಳು, ಕುತಂತ್ರಗಳು, ಶತ್ರುವಿನೊಂದಿಗಿನ ಒಳ-ಒಪ್ಪಂದಗಳು ಎಲ್ಲಾ‌ ಬಯಲಾಗತೊಡಗಿದಂತೆ ಇಡೀ‌ ಎಡ, ನಗರ ನಕ್ಸಲರು,‌ ನಕಲಿ ಗಾಂಧೀಗಳ ಬುಡ ಅಲ್ಲಾಡತೊಡಗಿತು! ಈಗ ನೇರ ಹಿಂದುತ್ವದ ಮೇಲೆ ಆಕ್ರಮಣ ಈ ಗುಂಪಿಗೆ ಅನಿವಾರ್ಯವಾಯಿತು. ಡಿಜಿಟಲ್ ಕ್ರಾಂತಿಯಿಂದಾಗಿ ವಿಚಾರವಿನಿಮಯ ಮುಕ್ತವಾಗಿ ನಡೆಯಲು ಶುರುವಾಗಿ ಇತಿಹಾಸದ ಘಟನೆ, ಟೀಕೆ-ಟಿಪ್ಪಣಿಗಳು ಸಾಮಾನ್ಯನಿಗೂ ಅಂಗೈಯಲ್ಲಿ ನಿಲುಕುವಂತಾಗಿ ನಮಗಾದ ಅನ್ಯಾಯ, ನಮ್ಮ ಮೇಲಾದ ‌ದೌರ್ಜನ್ಯಗಳ ಕತೆ ಆಚೆ ಬರಲು ಆರಂಭವಾಯಿತೋ ಆಗ ಯಾವುದಾರೂ ಒಂದು ವಿಧಾನದಿಂದ ನಮ್ಮನ್ನು ಒಡೆಯುವ ಕೆಲಸ ಆಗಬೇಕಿತ್ತು! ಅದಕ್ಕೆ ಈಗ ಬಳಸಲ್ಪಡುತ್ತಿರುವುದು ಅದೇ ನಮ್ಮ ಒಳ್ಳೆಯತನ! ನಮ್ಮ ಒಳಗೆ ಮೂಡುವ ಕರುಣೆ, ನ್ಯಾಯದ ಗುಣಗಳು!

ಆ ಪ್ರಯೋಗವೇ ಹಿಂದುತ್ವದ ಮೇಲೆ ಆರೋಪ! ಹಿಂದೂಗಳಲ್ಲಿ ಒಂದು ಬಲಹೀನತೆ ಇದೆ. ಅದು ಒಳ್ಳೆಯತನ; ಸಹಿಷ್ಣುತೆ! ನಮ್ಮ ರಕ್ತಗುಣ ಅದು. ಧರ್ಮ-ಕರ್ಮ, ನ್ಯಾಯ-ನೀತಿ, ಎಲ್ಲವೂ ಸೇರಿಕೊಂಡ ಪರಿಣಾಮ ನಾವು ಕೆಲವು‌ ಕಡೆ ನಮ್ಮ ಧರ್ಮದ ರಕ್ಷಣೆಯ ಕೆಲಸಕ್ಕೆ ರಿಯಾಯಿತಿ ಕೊಟ್ಟು ಬಿಡುತ್ತೇವೆ! ನಾವೇ ಏನೇ‌ ಮಾಡಿದರೂ ನಮ್ಮಲ್ಲಿ ಮೂಲಭೂತವಾದಿ ಬುದ್ಧಿ ಎದ್ದೇಳುವುದಿಲ್ಲ. ಅದೇನಿದ್ದರೂ ಕೆಲವರಲ್ಲಿ; ಅದೂ ತಮ್ಮ- ತಮ್ಮ ಆಚರಣೆಯಲ್ಲಿ ಅಥವಾ ತಮ್ಮ- ತಮ್ಮ ಜಾತಿಯ ಪ್ರಶ್ನೆ ಬಂದಾಗ ಮಾತ್ರ! ಇಂತಹುದಕ್ಕೆಲ್ಲಾ ನಮ್ಮಲ್ಲಿರುವ ಹಠ ನಮ್ಮ‌ ಧರ್ಮದ ಕುರಿತು ಇದ್ದಿದ್ದರೆ‌ ನಮ್ಮ ಧರ್ಮ ಎಲ್ಲಾ ಗುಣಗಳನ್ನು ಹೊಂದಿದ್ದೂ ಈ ರೀತಿಯಲ್ಲಿ ಅಳಿವುಉಳಿವಿನ ಹೋರಾಟಕ್ಕೆ ನಿಲ್ಲಬೇಕಿರಲಿಲ್ಲ! ನಾವು ಮೊದಲಿನಿಂದಲೂ ಅಲ್ಪ ತೃಪ್ತರು, ಸತ್ಯಸಂಧರು, ಸಹಿಷ್ಣುಗಳು! ಸಾವಿರಾರು ವರ್ಷದ ಹಿಂದೆಯೇ ‌ಅಲ್ಪ ಸಂಖ್ಯಾತರು ಬಂದು ಇಲ್ಲಿ‌ ನೆಲೆಸಿದ್ದರು ಹಾಗೂ ಈಗಲೂ ಅವರ ಆಚರಣೆಗಳನ್ನು ಉಳಿಸಿಕೊಂಡಿದ್ದಾರೆ, ಅವರ ಪ್ರಾರ್ಥನಾ ಸ್ಥಳಗಳನ್ನು, ಸಂಖ್ಯಾಬಲವನ್ನು ಬೆಳೆಸಿಕೊಂಡಿದ್ದಾರೆ ಎಂದರೆ ಅದಕ್ಕೆ ನಮ್ಮ ಗುಣಗಳೇ ‌ಕಾರಣ! 

ಆ ಕಾರಣದಿಂದಲೇ ಕುತಂತ್ರಿಗಳೆಲ್ಲಾ ಒಟ್ಟಾಗಿ ‌ಈಗ ಎಲ್ಲಾ ಕಡೆಯಿಂದ ಹಿಂದು ಧರ್ಮ ಹಾಗೂ ಹಿಂದುತ್ವವನ್ನು‌ ಬೇರ್ಪಡಿಸುವ ತಂತ್ರ ಅಳವಡಿಸಿಕೊಂಡಿದ್ದಾರೆ! ಒಂದು ಕಡೆಯಲ್ಲಿ ಹಿಂದು ಧರ್ಮವನ್ನು ಹೊಗಳುತ್ತಾ ಇನ್ನೊಂದು ಕಡೆ ಹಿಂದುತ್ವ ಹಾಗೂ ಹಿಂದುತ್ವವಾದಿಗಳನ್ನು, ಕ್ರೂರ, ಹಿಂಸಾತ್ಮಕ, ಗಲಭೆಕೋರರು ಎಂದು ಬಿಂಬಿಸುವ ಆಟ ನಡೆಯುತ್ತಿದೆ!  ಯಾಕೆ? ಯಾಕೆಂದರೆ ಹಿಂಸೆ, ಅನ್ಯಾಯ ಬೇಡದ ಸಾಕಷ್ಟು ಜನ ಹಿಂದುಗಳು ಈ ಕಾರಣದಿಂದ ಗೊಂದಲಕ್ಕೊಳಗಾಗುತ್ತಾರೆ! ಆ ಗೊಂದಲದ ಸೃಷ್ಟಿಯಿಂದ ಹಿಂದುಗಳ ಮತ ಒಡೆದರೆ ಅಷ್ಟೇ ಸಾಕು! ಒಮ್ಮೆ ಇವರ ಕೈಗೆ ಅಧಿಕಾರ ಸಿಗಲಿ ಇಡೀ ಹತ್ತು ವರ್ಷ ಆಗಿರುವ ಕೆಲಸಗಳನೆಲ್ಲಾ ಒಂದೇ ವರ್ಷದಲ್ಲಿ ನಾಶ ಮಾಡಿಬಿಡುತ್ತಾರೆ! ಇವರಿಗೆ ಬೇಕಿರುವುದು ಅಷ್ಟೇ, ಒಂದೇ ಒಂದು ಅವಕಾಶ! ಈಗ ಇವರಿಗೆ ಭಾಜಪಾದ ರಾಜಕೀಯ ಅರ್ಥವಾಗುತ್ತಿದೆ! ಅದರ ತಂತ್ರಗಾರಿಕೆಗೆ ಇವರ ಬಳಿ ಹಿಂದುಗಳನ್ನು ಒಡೆಯುವುದನ್ನು‌ ಬಿಟ್ಟು ಬೇರೆ ಯಾವುದೇ ಉತ್ತರವಿಲ್ಲ. ಹಾಗಾಗಿ ಉಳಿದಿರುವುದೊಂದೇ ದಾರಿ! ಹಿಂದುತ್ವವನ್ನು‌ ಬಯ್ಯುವುದು ಅದನ್ನು ಹಿಂಸೆಯ ಮಾರ್ಗವೆಂಬಂತೆ ಬಿಂಬಿಸಿ‌ ಸಾಮಾನ್ಯ ಹಿಂದುಗಳನನ್ನು ಗೊಂದಕ್ಕೊಳಪಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು! 

ನಮಗೇನು? ಒಬ್ಬಳು ಬೀದಿಯಲ್ಲಿ ನಿಂತು ಹನುಮಾನ್ ಚಾಲಿಸ ಹೇಳಿದರೆ ಸಾಕು ಅವಳನ್ನು ಹಿಂದು ಅನ್ನುತ್ತೇವೆ! ಒಬ್ಬ ಮಾನವ ಹಕ್ಕು ಹೋರಾಟಗಾರ ಮಾತನಾಡಿದರೆ ನಾವು ನಮಗಾದ ಅನ್ಯಾಯವನ್ನೂ ಮರೆತು ಅವರಿಗೆ ಬೆಂಬಲ ನೀಡುತ್ತೇವೆ! ಹಾಗಾಗಿಯೇ ಶಬರಿಮಲೆ, ರಾಮ ಮಂದಿರ, ಕಾಶಿ ,ಮಥುರಾ ಇತ್ಯಾದಿ ವಿಷಯಗಳಲ್ಲಿ ನಾವು ಒಡೆದು ನೂರಾಗುವುದು! ನಮಗೆ ಬೇರೆಯವರು ಶತ್ರುಗಳಲ್ಲ! ನಮ್ಮ ಒಳ್ಳೆಯತನ ಹಾಗೂ ಸ್ವಂತವಾಗಿ ‌ಯೋಚಿಸುವ ಶಕ್ತಿಯಿದೆಯಲ್ಲ ಅವೇ ನಮ್ಮ ಶತ್ರುಗಳು! ಜೊತೆಗೆ ಹಿಂದಿನದರ ಮರೆವು ಹಾಗಾಗಿ ಭವಿಷ್ಯದ ಬಗ್ಗೆ ಆಗದ ಅರಿವು! ಇದೇ‌ ಕಾರಣಕ್ಕಾಗಿ ಈಗ ಹಿಂದುತ್ವದ ಬಗ್ಗೆ ಆಕ್ರಮಣವಾಗುತ್ತಿದೆ! ಯಾವಾಗ ಸಾವರ್ಕರ್ ಅವರು ಹೇಳುವ ಮೊದಲೇ ಹಿಂದುತ್ವದ ಬಗ್ಗೆ ಹಲವರು ಮಾತನಾಡಿದ್ದರು ಎಂಬ ಸುದ್ದಿ ಹೊರಗೆ ಬರುತ್ತಿದೆಯೋ , ಯಾವಾಗ ಇನ್ನು ಮುಂದೆ ಸಾವರ್ಕರ್ ಅವರನ್ನು ಹಿಂದುತ್ವಕ್ಕೆ, ಗಾಂಧಿ ಹತ್ಯೆಗೆ ಕಾರಣಕರ್ತರನ್ನಾಗಿ ಬಿಂಬಿಸಲು ಸಾಧ್ಯವಿಲ್ಲವೆಂದಾಯಿತೋ, ಇವರ ತಂತ್ರಗಾರಿಕೆ ಬದಲಾಗಿದೆ, ಇನ್ನು ಮುಂದೆ ಎಲ್ಲವನ್ನೂ ಹಿಂದುತ್ವಕ್ಕೆ ಹೋಲಿಸಿ,ಅದರಲ್ಲಿ ಇಲ್ಲದ ಹಿಂಸಾಚಾರಕ್ಕೆ ಹೋಲಿಸಲಾಗುತ್ತದೆ! ಎಷ್ಟಾಗುತ್ತದೋ ‌ಅಷ್ಟು ಜನರಿಗೆ ಇದರ ಬಗ್ಗೆ ಹೇಸಿಗೆ ಹುಟ್ಟಿ ಇದನ್ನು ಪ್ರತಿಪಾದಿಸುವವರನ್ನು ಕ್ರೂರಿಗಳು, ಹಿಂಸಾಚಾರದ ಒಲವುಳ್ಳವರು ಎಂದು ಹಿಂದುತ್ವದಿಂದ, ಸಂಘದಿಂದ, ಭಾಜಪಾದಿಂದ ದೂರ ಸರಿಯುವಂತೆ ಮಾಡುವುದೇ ಇದರ ಗುರಿ! ಹಿಂದು ಧರ್ಮವನ್ನು ಹೊಗಳಿ ಹಾಡುವುದರಿಂದ ಇವರಿಗೆ ಅವರ ಬಗ್ಗೆ ಯಾವ ಅನುಮಾನವೂ ಬರುವುದಿಲ್ಲ! ಹಾಗೆಯೇ ಅವರು ಎಲ್ಲಾ ಜನರಿಗೆ ಮನಮುಟ್ಟುವ ವಿಚಾರಗಳನ್ನು ಇದರಲ್ಲಿ ಸೇರಿಸುತ್ತಾರೆ! ಏಳು ಜನ ಸಾವಿರಾರು ಕಿಮೀ ನಡೆದು ಹೋದ ಕತೆಯನ್ನು ಹೃದಯವಿದ್ರಾವಕವಾಗಿ ವಿವರಿಸುವ ಇವರುಗಳು, ಅವರನ್ನು ನಿಮ್ಮನಿಮ್ಮ ಜಾಗದಲ್ಲೇ ಇರಿ, ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದ ಸರ್ಕಾರದ ಬಗ್ಗೆ ಮಾತನಾಡುವುದಿಲ್ಲ! ಅವರನ್ನು ತಮ್ಮ ಜಾಗದಿಂದ ಹೊರಡುವಂತೆ ಸುಳ್ಳು ಹೇಳಿ ಮನೆ ಬಿಡುವಂತೆ ಮಾಡಿದವರ ಬಗ್ಗೆಯೂ ಮಾತನಾಡುವುದಿಲ್ಲ! ರೈತರ ಮುಷ್ಕರದ ಬಗ್ಗೆ ಮಾತನಾಡುವ ಇವರು ಖಲಿಸ್ಥಾನದ ಉಗ್ರರು ಬಲಾತ್ಕಾರ ಮಾಡಿ ಸಾಯಿಸಿದ್ದನ್ನು ಹೇಳುವುದೇ ಇಲ್ಲ! ಹೀಗಾಗಿ ಯಾವುದೋ ಒಂದು ಪತ್ರಿಕೆ ಓದುವವರಿಗೆ, ಒಂದು ಚಾನೆಲ್ ನೋಡುವವರಿಗೆ ಸಂಪೂರ್ಣ ಚಿತ್ರಣ ಸಿಗದೆ ಹಿಂದುತ್ವದ ಬಗ್ಗೆ ತಿರಸ್ಕಾರ ಬರುವ ಎಲ್ಲಾ ಕೆಲಸವನ್ನೂ ಮಾಡುತ್ತಾರೆ! ಒಬ್ಬ ಪುಸ್ತಕ ಬರೆದ, ಕೂಡಲೇ ರಾಹುಲ್ ಗಾಂಧಿ ಹೇಳಿಕೆ ಕೊಟ್ಟ, ಇಂದು ತರೂರ್ ಹಿಂದುತ್ವವನ್ನು ಫುಟ್ಬಾಲ್ ಆಟದಲ್ಲಿನ ರೌಡಿಗಳಿಗೆ‌ ಹೋಲಿಸಿದ್ದಾನೆ! ಆದರೆ ಇಸ್ಲಾಮ್ ಹೇಳುವುದು ಮಾತ್ರ ಶಾಂತಿ ಮಂತ್ರವೇ! ಇದೇ ಆಟ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ